ನಿಮ್ಮನ್ನು ನೀವು ಪ್ರೀತಿಸಿ

ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ

ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ

ನೀವು ಇತರರನ್ನು ಪ್ರೀತಿಯಿಂದ ಕಾಣುವಿರಾ, ನಿಮ್ಮನ್ನೂ ಪ್ರೀತಿಯಿಂದಲೇ ಕಾಣುವಿರಾ ? ಅಥವಾ ನೀವು ನಿಮ್ಮನ್ನೇ ಟೀಕಿಸಿಕೊಂಡು, ಹೀಯಾಳಿಸಿಕೊಂಡು ಇರುವಿರಾ ? ಈ ಪ್ರಶ್ನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದು ಸಕಾರಾತ್ಮಕ ಮನಶ್ಶಾಸ್ತ್ರದ ವಲಯದಲ್ಲಿ ಸ್ವಯಂ ಅನುಕಂಪದ ನಡತೆಯನ್ನು ಕೇಂದ್ರೀಕರಿಸಿ ಚರ್ಚೆ ನಡೆಸಲಾಗುತ್ತಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬರೊಡನೆ ಕಾಳಜಿಯಿಂದ, ಕಳಕಳಿಯಿಂದ, ಪ್ರೀತಿಯಿಂದ ನಡೆದುಕೊಳ್ಳುವುದರ ಬಗ್ಗೆ ಅತಿ ಹೆಚ್ಚಿನ ವೈಜ್ಞಾನಿಕ ಸಂಶೋಧನೆಗಳು ನಡೆದಿವೆ. ಹಲವಾರು ಸಂಶೋಧನೆಗಳ ಪ್ರಕಾರ ಸ್ವಯಂ ಅನುಕಂಪ ಇದ್ದಲ್ಲಿ ಹೆಚ್ಚಿನ ಆತ್ಮತೃಪ್ತಿ , ಆಶಾವಾದ, ಒಪ್ಪಿಕೊಳ್ಳುವಿಕೆ ಮತ್ತು ವಿವೇಚನೆ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಇದರಿಮದ ಆತಂಕ ಕಡಿಮೆಯಾಗಿ, ಖಿನ್ನತೆಯೂ ನಿಯಂತ್ರಣದಲ್ಲಿರುತ್ತದೆ. ನಿತ್ಯ ಜೀವನದಲ್ಲಿ ಒತ್ತಡದ ಸನ್ನಿವೇಶಗಳು ಎದುರಾದಾಗ ಇದು ಸಹಾಯಕವಾಗುತ್ತದೆ ಎಂದೂ ಸಂಶೋಧನೆಯ ಮೂಲಕ ತಿಳಿದುಬಂದಿದೆ.

ಸ್ವಯಂ ಅನುಕಂಪವನ್ನು ಕುರಿತು ವಿಶ್ವದಲ್ಲಿ ಅತಿ ಹೆಚ್ಚಿನ ಅಧ್ಯಯನ ನಡೆಸಿರುವ ಆಸ್ಟಿನ್‍ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಡಾ ಕ್ರಿಸ್ಟಿನಾ ನೆಫ್ 1990ರಿಂದಲೇ ಈ ವಿಚಾರದಲ್ಲಿ ತೀವ್ರ ಆಸಕ್ತಿ ವಹಿಸಿದ್ದಾರೆ. 1990ರಲ್ಲಿ ಪದವಿ ವಿದ್ಯಾರ್ಥಿನಿಯಾಗಿ, ವಿವಾದಾಸ್ಪದ ವಿಚ್ಚೇದನ ಪ್ರಕರಣವೊಂದರ ಹಿನ್ನೆಲೆಯಲ್ಲಿ ಒಳನೋಟದ ಧ್ಯಾನವನ್ನು ಕುರಿತ ಪಾಠ ಪ್ರವಚನಗಳಲ್ಲಿ ಭಾಗವಹಿಸುವ ಮೂಲಕ ಡಾ ಕ್ರಿಸ್ಟಿನಾ ಈ ವಿಚಾರದಲ್ಲಿ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿದ್ದಾರೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ಡಾ ಕ್ರಿಸ್ಟಿನಾ “ ನಾನು ಜೀವನದಲ್ಲಿ ಅತಿಯಾದ ಒತ್ತಡ ಎದುರಿಸಿದ್ದೇನೆ. ನಾನು ತೀವ್ರ ಭಾವಾವೇಶಕ್ಕೊಳಗಾಗಿ ಗೊಂದಲದಲ್ಲಿ ಸಿಲುಕಿದ್ದಾಗ ನನಗೆ ಸ್ವಯಂ ಅನುಕಂಪದ ಅವಶ್ಯಕತೆ ಕಂಡುಬಂದಿತ್ತು ” ಎಂದು ಹೇಳುತ್ತಾರೆ. “ ನಾನು  ಒಂದು ಬೌದ್ಧರ ಗುಂಪಿನಲ್ಲಿದ್ದೆ. ಅವರು ಅನುಕಂಪ ಮತ್ತು ಗಮನವಿಟ್ಟು ಗ್ರಹಿಸುವ ಬಗ್ಗೆ ಮಾತನಾಡುತ್ತಿದ್ದರು.  ನನಗೆ ತಕ್ಷಣವೇ ಸ್ವಯಂ ಅನುಕಂಪದ ವಿಚಾರ ಮನ ತಟ್ಟಿತ್ತು. ಇತರ ಎಲ್ಲರಂತೆಯೇ ನನಗೂ ಅನುಕಂಪದ ಅವಶ್ಯಕತೆ ಇದೆ ಎಂದು ನನಗೆ ಮನದಟ್ಟಾಗಿತ್ತು ” ಎಂದು ಕ್ರಿಸ್ಟಿನಾ ಹೇಳುತ್ತಾರೆ. ಕೆಲವು ವರ್ಷಗಳ ನಂತರ ಕ್ರಿಸ್ಟಿನಾ ನೆಫ್ ಜೀವನದ ಮತ್ತೊಂದು ಆಘಾತವನ್ನು ಎದುರಿಸುತ್ತಾರೆ. ಆಕೆ ಮತ್ತು ಆಕೆಯ ಗಂಡ ತಮ್ಮ ಮಗುವಿಗೆ ಆಟಿಸಂ ಸಮಸ್ಯೆ ಇದೆ ಎನ್ನುವುದನ್ನು ಗುರುತಿಸುತ್ತಾರೆ. “ ಮತ್ತೊಮ್ಮೆ ಸ್ವಯಂ ಅನುಕಂಪದ ಚಿಂತನೆಯೇ ನನ್ನನ್ನು ಕಾಅಪಾಡಿತ್ತು. ನನ್ನ ದುಃಖವನ್ನು ಹೋಗಲಾಡಿಸಲು ಅದು ನನಗೆ ಸಾಕಷ್ಟು ಸಮಯ ಒದಗಿಸಿತ್ತು.  ನಾನು ನನಗೇ ತೀವ್ರವಾದ ಅನುಕಂಪನವನ್ನು ತೋರಲು ಆರಂಭಿಸಿದೆ. ಇದು ನನ್ನನ್ನು ರಕ್ಷಿಸಿತ್ತು. ಹಾಗಾಗಿ ಇದು ಸಫಲವಾಗುತ್ತದೆ ಎಂದೇ ಭಾವಿಸುತ್ತೇನೆ ” ಎಂದು ಡಾ ಕ್ರಿಸ್ಟಿನಾ ಹೇಳುತ್ತಾರೆ.

2003ರಿಂದಲೂ ಡಾ ನೆಫ್ ಮತ್ತು ಅವರ ಸಹೋದ್ಯೋಗಿಗಳು ವ್ಯಕ್ತಿತ್ವದ ನಡತೆಯಾಗಿ ಸ್ವಯಂ ಅನುಕಂಪದ ಮಹತ್ವವನ್ನು ನಿರೂಪಿಸುವ ನಿಟ್ಟಿನಲ್ಲಿ ಹನ್ನೆರಡಕ್ಕೂ ಹೆಚ್ಚು ಅಧ್ಯಯನಗಳನ್ನು ನಡೆಸಿ ತಮ್ಮ ನಿಲುವಿಗೆ ವೈಜ್ಞಾನಿಕ ಸಮರ್ಥನೆ ನೀಡಲು ಯತ್ನಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ ಸ್ವಯಂ ಅನುಕಂಪ ಎಂದರರೆ ಮೂರು ವಿಭಿನ್ನ ಆದರೆ ಪರಸ್ಪರ ಸಂಬಂದಿತ ವಿಚಾರಗಳನ್ನು ಒಳಗೊಂಡಿರುತ್ತದೆ. ಮೊದಲನೆಯದು ಸ್ವಯಂ ಪ್ರೀತಿ, ಎರಡನೆಯದು ಸಮಾನ ಮಾನವತ್ವದ ಕಲ್ಪನೆ ಮತ್ತು ಮೂರನೆಯದು ಭಾವನೆಗಳನ್ನು, ದುಃಖಕರ ಚಿಂತನೆಗಳನ್ನು ಯಾವುದೇ ರೀತಿಯ ಉತ್ಪ್ರೇಕ್ಷೆ ಇಲ್ಲದೆ, ನಾಟಕೀಯತೆ ಇಲ್ಲದೆ, ಸ್ವಯಂ ಕನಿಕರ ಇಲ್ಲದೆಯೇ ಎದುರಿಸುವ ಸಾಮಥ್ರ್ಯ ಅಥವಾ ಗಮನ.

ಸ್ವಯಂ ಪ್ರೀತಿ ಎಂದರೆ ನಮ್ಮನ್ನು ನಾವೇ ಅರ್ಥಮಾಡಿಕೊಳ್ಳುವುದು, ನಮ್ಮ ಬಗ್ಗೆ ನಾವೇ ಕಾಳಜಿ ವಹಿಸುವುದು ಮತ್ತು ಸ್ವತಃ ನಮ್ಮನ್ನು ನಾವೇ ಹೀಯಾಳಿಸಿಕೊಳ್ಳುವುದರ ಬದಲು ಸಮಾಧಾನ ಮಾಡಿಕೊಳ್ಳುವುದು, ಸಾಂತ್ವನ ಹೇಳಿಕೊಳ್ಳುವುದು ಮತ್ತು ನಮ್ಮ ಬಗ್ಗೆ ನಾವೇ ಒರಟಾಗಿರದಂತೆ ಎಚ್ಚರ ವಹಿಸುವುದು. ಇದರ ಪರಿಣಾಮ ಎಂದರೆ, ಹೆಚ್ಚಿನ ಮನಃಶಾಂತಿಯನ್ನು ಪಡೆಯುವುದು. ಜೀವನದಲ್ಲಿ ಪ್ರತಿಯೊಬ್ಬರೂ ತಪ್ಪುಮಾಡುತ್ತಾರೆ, ನಾವೆಲ್ಲರೂ ವಿವೇಕಯುತರಾಗಲು ಜೀವನದಲ್ಲಿ ಪಾಠ ಕಲಿಯುತ್ತಲೇ ಇರುತ್ತೇವೆ ಎಂದು ಭಾವಿಸುವ ಮೂಲಕ ನಾವು ಮಾನವ ಸಮಾಜದೊಡನೆ ಹೊಂದಿಕೊಂಡು ಬಾಳುವುದನ್ನು ಕಲಿತರೆ, ಮಾನವನ ಜೀವನದ ಸನ್ನಿವೇಶಗಳಲ್ಲಿ ತಪ್ಪುಗಳು ಮತ್ತು ಕೊರತೆಗಳು ಸಹಜ ಎಂದು ಅರ್ಥವಾಗುವುದೇ ಅಲ್ಲದೆ ಕೇವಲ ನಮ್ಮನ್ನು ನಾವೇ ಒಪ್ಪಿಕೊಂಡು ನಡೆಯುವುದನ್ನು ಮರೆತು ಮುನ್ನಡೆ ಸಾಧಿಸಲು ನೆರವಾಗುತ್ತದೆ.  ಉದಾಹರಣೆಗೆ, ಈ ಮನಸ್ಥಿತಿ ಇದ್ದರೆ ನಮ್ಮ ಚಿಂತನೆಗಳು, ಭಾವನೆಗಳು ಮತ್ತು ಚಟುವಟಿಕೆಗಳ ಮೇಲೆ ನಮ್ಮ ತಂದೆ ತಾಯಿಯರ ಜೀವನ, ನಮ್ಮ ಸಂಸ್ಕøತಿ, ವಂಶವಾಹಿ ಲಕ್ಷಣಗಳು, ಪರಿಸರದ ಪರಿಣಾಮ ಇವೆಲ್ಲವೂ ಪ್ರಭಾವ ಬೀರುತ್ತವೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯ. ಈ ತಿಳುವಳಿಕೆಯಿಂದ ನಾವು ಇತರರೊಡನೆ ಸಂಬಂಧ ಬೆಳೆಸುವ ಶಕ್ತಿ ಪಡೆಯುವುದೇ ಅಲ್ಲದೆ ನಮ್ಮ ಒಂಟಿತನವನ್ನೂ ನಿವಾರಿಸಿಕೊಳ್ಳಲು ಸಾಧ್ಯ.

ನಮ್ಮ ಮನಸ್ಸನ್ನು ಹದಗೆಡಿಸುವ ಚಿಂತೆಗಳು ಅಥವಾ ಅನುಭವಗಳನ್ನು ಸರಿದೂಗಿಸುವ ದೃಷ್ಟಿಕೋನವನ್ನು ಹೊಂದುವ ಮೂಲಕ ಮತ್ತು ಈ ಸಾಮಥ್ರ್ಯ ನಮ್ಮಲ್ಲಿದೆ ಎಂದು ಅರಿಯುವ ಮೂಲಕ ನಾವು ಭಾವನಾತ್ಮಕವಾಗಿ ಕುಗ್ಗಿಹೋಗುವುದನ್ನು, ಒಂದೇ ರೀತಿಯಾಗಿ ಯೋಚಿಸುವುದನ್ನು ತಪ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ನಕಾರಾತ್ಮಕ ಯೋಚನೆಗಳನ್ನು ಗಮನಿಸುವುದು, ಮುಕ್ತವಾಗಿ, ಸ್ಪಷ್ಟವಾಗಿ ಯೋಚಿಸುವುದು ಸಹಾಯಕವಾಗುತ್ತದೆ. ಆಗ ನಾವು ನಕಾರಾತ್ಮಕ ಯೋಚನೆಗಳನ್ನು ಗಮನವಿಟ್ಟು ನೋಡಬಹುದು. ಹಾಗೆಯೇ ಅವುಗಳ ಬಗ್ಗೆಯೇ ಅತಿ ಹೆಚ್ಚಿನ ಗಮನ ನೀಡುವುದನ್ನೂ ತಪ್ಪಿಸಬಹುದು. ಈ ಮೂರೂ ಅಂಶಗಳನ್ನು ಅನುಸರಿಸಿದಾಗ ನಾವು ವಾಸ್ತವವನ್ನು ಇದ್ದ ಹಾಗೆಯೇ ಅರಿಯಲು ಸಾಧ್ಯ, ಅರ್ಥ ಮಾಡಿಕೊಳ್ಳಲು ಸಾಧ್ಯ. ಇದರಿಂದ ಜೀವನದ ಹಲವು ಸಂದರ್ಭಗಳಿಗೆ ನಾವು ಪರಿಣಾಮಕಾರಿಯಾಗಿ ಪ್ರತಿಕ್ರಯಿಸಲೂ ಸಾಧ್ಯ.

ಸ್ವಯಂ ಅನುಕಂಪ ಎನ್ನುವುದಕ್ಕೂ ಸ್ವಯಂ ಕನಿಕರ ಎನ್ನುವುದಕ್ಕೂ ಸಾಕಷ್ಟು ವ್ಯತ್ಯಾಸ ಇರುವುದನ್ನು ಗಮನಿಸಬೇಕು.  ಸ್ವಯಂ ಕನಿಕರ ಹೊಂದಿದ್ದರೆ ಒಂಟಿತನ ಮತ್ತು ವಿಷಾದದ ಛಾಯೆ ಇದ್ದರೂ ವ್ಯಕ್ತಿಯಲ್ಲಿ ಅಹಮಿಕೆಯ ಲಕ್ಷಣಗಳಿರುತ್ತವೆ.  ಸ್ವಯಂ ಕನಿಕರದ ವರ್ತನೆ ಇದ್ದರೆ ನಮ್ಮಂತೆಯೇ ಇತರರೂ ಒತ್ತಡದ ಸಮಸ್ಯೆಗಳು ಮತ್ತು ಸವಾಲುಗಳನ್ನು ಅನುಭವಿಸುತ್ತಿದ್ದಾರೆ ಎಂದಾಗಲೀ,  ಇನ್ನೂ ಹೆಚ್ಚಿನದಾಗಿ ಅನುಭವಿಸುತ್ತಿದ್ದಾರೆ ಎಂದಾಗಲೀ ಭಾವಿಸುವುದೇ ಇಲ್ಲ. ನಾವು ಇತರರೊಡನೆ ಪರಸ್ಪರ ಸಂಬಂಧ ಹೊಂದಿರುತ್ತೇವೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೆಯೇ ಸ್ವಯಂ ಕನಿಕರ ಎಂದರೆ ಸ್ವಯಂ ತೊಡಗುವಿಕೆ ಎಂದಾಗುವುದಿಲ್ಲ. ಸಾಕಷ್ಟು ಜನರು ತಾವು ಸ್ವಯಂ ಅನುಕಂಪ ಹೊಂದಲು ಸಿದ್ಧರಿಲ್ಲ ಎಂದು ಹೇಳುತ್ತಾರೆ ಏಕೆಂದರೆ ಅವರು ವ್ಯರ್ಥ ಅಥವಾ ಅಪಾಯಕಾರಿ ವರ್ತನೆಗೆ ಶರಣಾಗಲು ಭಯಪಡುತ್ತಾರೆ. ( ಉದಾಹರಣೆಗೆ “ ನಾನು ತೀವ್ರ ಒತ್ತಡದಲ್ಲಿದ್ದೇನೆ, ಸುಸ್ತಾಗಿದ್ದೇನೆ ಹಾಗಾಗಿ ಇಂದು ಮನೆಯಲ್ಲೇ ಕುಳಿತು ಟಿವಿ ನೋಡುತ್ತಾ, ಐಸ್ ಕ್ರೀಂ ತಿನ್ನುತ್ತಾ ಕಾಲ ಕಳೆಯುತ್ತೇನೆ ” ಎನ್ನುವ ಮನೋಭಾವ). ಇಂತಹ ವರ್ತನೆ ಸ್ವಯಂ ತೊಡಗುವಿಕೆಯಾಗುವುದೇ ಹೊರತು ಸ್ವಯಂ ಅನುಕಂಪವಾಗುವುದಿಲ್ಲ. ಏಕೆಂದರೆ ಇದು ದೌರ್ಬಲ್ಯ ಹೆಚ್ಚಿಸುತ್ತದೆ, ಶಕ್ತಿಯನ್ನು ಹೆಚ್ಚಿಸುವುದಿಲ್ಲ. ನಿಮ್ಮ ಗೆಳೆಯನ ಮನಸ್ಥಿತಿ ಸರಿಯಿಲ್ಲದ ಸಮಯದಲ್ಲಿ ಅವರಿಗೆ ಜಂಕ್ ಫುಡ್ ತಿನ್ನಲು ಸಲಹೆ ನೀಡುವುದು ಅನುಕಂಪದ ಮಾತು ಎನಿಸಿಕೊಳ್ಳುವುದಿಲ್ಲ. ಆದ್ದರಿಂದ ನಿಮ್ಮನ್ನು ನೀವೇ ಆತ್ಮೀಯ ಸ್ನೇಹಿತ ಎಂದು ಭಾವಿಸುವುದೇ ಸ್ವಯಂ ಅನುಕಂಪಕ್ಕೆ ಸಮಾನವಾಗುತ್ತದೆ. ಒಂದಷ್ಟು ದೂರ ವಾಕಿಂಗ್ ಮಾಡಲು ನಿಮಗೆ ನೀವೇ ಹೇಳಿಕೊಳ್ಳುತ್ತೀರಿ, ವ್ಯಾಯಾಮ ಮಾಡಲು ಹೇಳುತ್ತೀರಿ ಅಥವಾ ನಿಮ್ಮ ಕೆಟ್ಟ ಮನಸ್ಥಿತಿಯಿಂದ ಹೊರಬರಲು ಯಾವುದೋ ಒಂದು ಆಸಕ್ತಿದಾಯಕ ಕೆಲಸ ಮಾಡಲು ನಿಮಗೆ ನೀವೇ ಹೇಳಿಕೊಳ್ಳುತ್ತೀರಿ.

ಆಹಾರ ಸೇವನೆಯಲ್ಲಿ ಉಂಟಾಗುವ ಸಮಸ್ಯೆಗಳಿಗೆ ಸ್ವಯಂ ಅನುಕಂಪದ ಪ್ರಮಾಣ ಕಡಿಮೆ ಇರುವುದೇ ಕಾರಣ ಎಂದು ಹೇಳಿರುವುದು ಅಚ್ಚರಿಯೇನಲ್ಲ. ಯುನೈಟೆಡ್ ಕಿಂಗ್‍ಡಮ್‍ನ ಪೋಟ್ರ್ಸ್ ಮೌತ್ ವಿಶ್ವವಿದ್ಯಾಲಯದ ಡಾ ಮಿಚೆಲ್ ಮಂಜಿಯೋಸ್ ಮತ್ತು ಡಾ ಜಾನೆಟ್ ವಿಲ್ಸನ್ ಹೇಳುವಂತೆ,  ಬೊಜ್ಜು ದೇಹ ಹೊಂದಿರುವವರು ತಮ್ಮನ್ನು ತಾವೇ ಸಮಾಧಾನಪಡಿಸಿಕೊಳ್ಳುವ ಸಾಮಥ್ರ್ಯ ಹೊಂದಿರುವುದಿಲ್ಲ. ಹಾಗಾಗಿ ಹೊರಗಿನ ಆಹಾರದ ಮೂಲಕ ಸಮಾಧಾನಪಟ್ಟುಕೊಳ್ಳಲು ಯತ್ನಿಸುತ್ತಾರೆ.  ಬೊಜ್ಜು ಇರುವುದು ಕಳಂಕ ಎನಿಸುವುದರಿಂದ, ನಾಚಿಕೆಯ ವಿಚಾರವಾಗಿರುವುದರಿಂದ ಅಂತಹ ಜನರು ಇನ್ನೂ ಹೆಚ್ಚಿನ ಆಹಾರ ಸೇವಿಸುವ ಮೂಲಕ ತಮ್ಮ ಭಾವಾವೇಶದ ಒತ್ತಡವನ್ನು ಹೆಚ್ಚಿಸಿಕೊಳ್ಳುತ್ತಾರೆ. ತಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಾದಾಗ ಅದರಿಂದ ಹೊರಬರಲು ಇನ್ನೂ ಹೆಚ್ಚು ತಿನ್ನುತ್ತಾರೆ. ಹಾಗಾಗಿ ಈ ವಿಷ ವರ್ತುಲ ಹೆಚ್ಚಾಗುತ್ತಲೇ ಹೋಗುತ್ತದೆ.

ಈ ಅಭಿಪ್ರಾಯವನ್ನು ಸಮರ್ಥಿಸುವ ಪ್ರಯೋಗಗಳು ಸಾಕಷ್ಟಿವೆ. ಲೂಸಿಯಾನಾ ಸ್ಟೇಟ್ ವಿಶ್ವವಿದ್ಯಾಲಯದ ಡಾ ಕ್ಲೇರ್ ಅಡಮ್ಸ್ ಅವರು ನಡೆಸಿದ ಪ್ರಾಯೋಗಿಕ ಸಂಶೋಧನೆಯಲ್ಲಿ,  ಅನಾರೋಗ್ಯಕರ ಆಹಾರವನ್ನು ಸೇವಿಸದೆ ಇರುವ ಕಾಲೇಜು ಯುವತಿಯರಲ್ಲಿ ಒತ್ತಡದ ಪ್ರಮಾಣ ಕಡಿಮೆ ಇರುವುದನ್ನು ಗುರುತಿಸಲಾಗಿದೆ. ಇವರು ಸ್ವಯಂ ಅನುಕಂಪದ ಚಿಂತನೆ ಮಾಡಲಾರಂಭಿಸಿದ ನಂತರ, ನಿಯಂತ್ರಿತ ಗುಂಪುಗಳಿಗೆ ಹೋಲಿಸಿದರೆ, ಆಹಾರ ಸೇವನೆಯ ಪ್ರಮಾಣ ಕಡಿಮೆಯಾಗಿದೆ. ಈ ಫಲಿತಾಂಶವನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಸಂಶೋಧಕರು “ ಸಾಮಾನ್ಯವಾಗಿ ಹೆಚ್ಚಿನ ಆಹಾರ ಸೇವಿಸುವ ಜನರು ತಮ್ಮನ್ನು ತಾವೇ ಅನುಕಂಪದಿಂದ ಕಾಣಲಾರಂಭಿಸಿದರೆ ಅಂಥವರು ತಮ್ಮ ಆಹಾರ ಸೇವನೆಯನ್ನು ನಿಯಂತ್ರಿಸಲು ಸಫಲರಾಗುತ್ತಾರೆ, ಎಕೆಂದರೆ ತಮ್ಮೊಳಗಿನ ನಕಾರಾತ್ಮಕ ಭಾವನೆಗಳೊಡನೆ ಜೀವನ ನಡೆಸಲು ಇವರು ಹೆಚ್ಚು ಆಹಾರ ಸೇವಿಸಲು ಬಯಸುವುದಿಲ್ಲ. ನಿರ್ಬಂಧಿತವಾಗಿ ಆಹಾರ ಸೇವಿಸುವವರಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು ” ಎಂದು ಹೇಳುತ್ತಾರೆ.

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲೂ ಸಹ ಸ್ವಯಂ ಅನುಕಂಪ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಹಲವಾರು ಸಂಶೋಧನೆಗಳ ಮೂಲಕ ಸಾಬೀತುಪಡಿಸಲಾಗಿದೆ. ಕೆನಡಾದಲ್ಲಿರುವ ಬಿಷಪ್ಸ್ ವಿಶ್ವವಿದ್ಯಾಲಯದ ಡಾ ಫುಷಿಯಾ ಸಿರೋಯಿಸ್ ಅವರ ಸಂಶೋಧನೆಯ ಅನುಸಾರ “ಉತ್ತಮ ಆರೋಗ್ಯವನ್ನು  ಕಾಪಾಡಿಕೊಳ್ಳಲು ಅಗತ್ಯವಾದ ಜಂಕ್ ಫುಡ್ ತಿನ್ನದಿರುವುದು, ನಿತ್ಯ ವ್ಯಾಯಾಮ, ಅಗತ್ಯವಿದ್ದಷ್ಟು ನಿದ್ರೆ ಮಾಡುವುದು, ಒತ್ತಡವನ್ನು ನಿರ್ವಹಿಸುವುದು ಇವೆಲ್ಲವೂ ಸ್ವಯಂ ಅನುಕಂಪಕ್ಕೆ ಸಂಬಂಧಿಸಿರುತ್ತದೆ ” ಆಸ್ಟ್ರೇಲಿಯಾದಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ಡಾ ವೆಂಡಿ ಫಿಲಿಪ್ಸ್ ಮತ್ತು ಸೂಸನ್ ಫರ್ಗುಸನ್ ಅವರು ಹೇಳಿರುವಂತೆ, 65 ವರ್ಷಕ್ಕೂ ಮೇಲ್ಪಟ್ಟ ಗಂಡಸರು ಮತ್ತು ಹೆಂಗಸರಲ್ಲಿ ಸ್ವಯಂ ಅನುಕಂಪದ ಧೋರಣೆ ಇದ್ದರೆ ಅವರು ಸಕಾರಾತ್ಮಕ ಭಾವನೆಗಳನ್ನು ಹೊಂದಿರುವುದೇ ಅಲ್ಲದೆ, ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡು, ಜೀವನದ ಅರ್ಥವನ್ನು ತಿಳಿದುಕೊಂಡು ಸಂತೋಷದಿಂದ ಬಾಳುತ್ತಾರೆ. ಕೋಪ ಮತ್ತು ವಿಷಾದದಿಂದ ಹೊರತಾಗಿರುತ್ತಾರೆ.

ಪರಿಪೂರ್ಣತೆಯ ಮನೋಭಾವವನ್ನು ಮೀರಿ ನಿಲ್ಲುವುದು

ಸ್ವಯಂ ಅನುಕಂಪದ ಧೋರಣೆಗೆ ಪ್ರಮುಖವಾಗಿ ಅಡ್ಡಿಯಾಗುವುದು ಪರಿಪೂರ್ಣತೆಯನ್ನು ಸಾಧಿಸುವ ಮನೋಭಾವ. ಯಾವುದೇ ಮನುಷ್ಯ ಪರಿಪೂರ್ಣವನ್ನು ಸಾಧಿಸಲಾಗುವುದಿಲ್ಲ. ಯಾವುದೇ ರೀತಿಯಲ್ಲೂ ಇದು ಸಾಧ್ಯವಿಲ್ಲ. ನಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ನಾವು ಶ್ರಮಿಸಬೇಕು ಮತ್ತು ನಮ್ಮ ಸಾಮಥ್ರ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಅತಿ ಹೆಚ್ಚಿನ ಸಾಧನೆಯನ್ನು ಮಾಡಲು ತಮ್ಮದೇ ಆದ ಅಧ್ಯಯನದ ಮೂಲಕ ಮಾದರಿಯನ್ನು ಒದಗಿಸಿರುವ ಅಬ್ರಾಹಂ ಮಾಸ್ಲೋ ಅವರು ಹೇಳುವಂತೆ ಹೆಚ್ಚಿನ ಆತ್ಮ ತೃಪ್ತಿಯನ್ನು ಸಾಧಿಸಿರುವ ಗಂಡಾಗಲೀ, ಹೆಣ್ಣಾಗಲೀ, ಪರಿಪೂರ್ಣತೆಯನ್ನು ಸಾಧಿಸಿರುವುದಿಲ್ಲ. ಪರಿಪೂರ್ಣತೆಯನ್ನು ಸಾಧಿಸಲು ಅನಗತ್ಯವಾಗಿ ಶ್ರಮಿಸುವುದು ಸರಿಯಲ್ಲ ಎಂದು ಮಾಸ್ಲೋ ಎಚ್ಚರಿಕೆ ನೀಡುತ್ತಾರೆ. ಏಕೆಂದರೆ ಇತ್ತೀಚಿನ ಹಲವು ಸಂಶೋóಧನೆಗಳ ಪ್ರಕಾರ ಪರಿಪೂರ್ಣತೆಗಾಗಿ ಹಂಬಲಿಸುವವರು ಹೆಚ್ಚು ಖುಷಿಯಿಂದ ಜೀವನ ನಡೆಸಲು ಸಾಧ್ಯವಾಗುವುದಿಲ್ಲ.

ಈ ಚಟುವಟಿಕೆಯಲ್ಲಿ, ಪರಿಪೂರ್ಣತೆಯನ್ನು ಸಾಧಿಸುವ ಮನೋಭಾವ ಇರುವವರು ತಮ್ಮ ಜೀವನದಲ್ಲಿ ಸದಾ ಗಂಭೀರವಾಗಿ ತೊಡಗುವ ವಿಚಾರಗಳನ್ನು ಗುರುತಿಸಿಕೊಳ್ಳುವುದು ಒಳಿತು. ಇದು ಅವರ ನೌಕರಿಯಾಗಿರಬಹುದು, ವಿರಾಮದ ವೇಳೆಯ ಚಟುವಟಿಕೆಗಳಿರಬಹುದು, ಕುಟುಂಬ ಅಥವಾ ಸ್ನೇಹಿತರ ವಲಯದ ಸಂಬಂಧಗಳಿರಬಹುದು, ಈ ವಿಚಾರಗಳಲ್ಲಿ ನಿಮ್ಮ ಮೇಲೆ ನೀವೇ ಒತ್ತಡ ಹೇರಿಕೊಂಡು ವಿಶ್ರಾಂತಿಯೂ ಇಲ್ಲದೆ, ವಿರಾಮವೂ ಇಲ್ಲದೆ ತಪ್ಪು ಮಾಡುವ ಸಾಧ್ಯತೆಗಳಿರುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಳೆದ ತಿಂಗಳು ನಿಮ್ಮ ಪರಿಪೂರ್ಣತೆಯ ಮನೋಭಾವ ನಿಮ್ಮ ಮನಸ್ಥಿತಿಯನ್ನು ಬಾಧಿಸಿದ ಅಥವಾ ಮತ್ತೊಬ್ಬರೊಡನೆ ಸಂವಹನವನ್ನು ಬಾಧಿಸಿದ ಸನ್ನಿವೇಶವನ್ನು ವಿವರಿಸಿ. ಆ ಕ್ರಿಯೆ ಅಥವಾ ಚಟುವಟಿಕೆ ಯಾವುದು ? ಸಂದರ್ಭ ಯಾವುದು ? ನಿಮ್ಮೊಡನೆ              ಯಾರಿದ್ದರು ? ಎಂದು ವಿವರಿಸಿ. ಈಗ ಹಿಂದಿರುಗಿ ನೋಡಿ ಪರಿಪೂರ್ಣತೆಯನ್ನು ಬದಿಗೊತ್ತಿ ನಿಮ್ಮ ಕ್ರಿಯೆಯಲ್ಲಿ ತೊಡಗಿದ್ದ ಪಕ್ಷದಲ್ಲಿ ನೀವೇನು ಮಾಡಬಹುದಿತ್ತು , ನಿಮ್ಮ ಬಗ್ಗೆ ನೀವೇ ಪ್ರೀತಿಯಿಂದ ವರ್ತಿಸಬಹುದಾಗಿತ್ತೇ ಎಂದು ಯೋಚಿಸಿ.

ಡಾ ಎಡ್ವರ್ಡ್ ಹಾಫ್‍ಮನ್ ನ್ಯೂಯಾರ್ಕ್‍ನಲ್ಲಿರುವ ಯಶಿವಾ ವಿಶ್ವವಿದ್ಯಾಲಯದಲ್ಲಿ ಮನಶ್ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಖಾಸಗಿಯಾಗಿ ನೈತಿಕ ಮನಶ್ಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಹಾಫ್‍ಮನ್ ಮನಶ್ಶಾಸ್ತ್ರ ಮತ್ತು ಸಂಬಂಧಿತ ವಿಚಾರಗಳ ಬಗ್ಗೆ 25ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸಕಾರಾತ್ಮಕ ಮನಶ್ಶಾಸ್ತ್ರ ; ಹರ್ಷ ಮತ್ತು ಜೀವನ ನಿರ್ವಹಣೆಯ ವೈಜ್ಞಾನಿಕ ಭೂಮಿಕೆ (Positive Psychology: The Science of Happiness and Flourishing) ಎಂಬ ಕೃತಿಯನ್ನು ಡಾ ವಿಲಿಯಂ ಕಾಂಪ್ಟನ್ ಅವರೊಡನೆ ಸೇರಿ ಬರೆದಿದ್ದಾರೆ. ಡಾ ಹಾಫ್‍ಮನ್ ಸಕಾರಾತ್ಮಕ ಮನಶ್ಶಾಸ್ತ್ರ ಭಾರತೀಯ ಪತ್ರಿಕೆ ಮತ್ತು ಮಾನವೀಯ ಮನಶ್ಶಾಸ್ತ್ರದ ಪತ್ರಿಕೆಯ(Indian Journal of Positive Psychology and the Journal of Humanistic Psychology ) ಸಂಪಾದಕೀಯ ಮಂಡಲಿಯಲ್ಲಿದ್ದಾರೆ. ಅವರನ್ನು ಸಂಪರ್ಕಿಸಲು ಇಲ್ಲಿಗೆ ಭೇಟಿ ಕೊಡಿ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org