ಆರೈಕೆದಾರರು: ನಿಸ್ವಾರ್ಥ ಸೇವೆ

Caregivers often dedicate their lives to care for their loved ones, but their efforts are rarely acknowledged. This column will address the challenges faced by caregivers, and their significant contribution to our society.

ನಮ್ಮ ನಡುವೆ, ನಿಮ್ಮ ಬೀದಿಗಳಲ್ಲಿ, ನಿಮ್ಮ ಕೆಲಸದ ಜಾಗದಲ್ಲಿ, ಕಾಲೇಜು ಹಾಗೂ ನಿಮ್ಮ ಮನೆಗಳಲ್ಲಿ ಸಹ ಕೆಲವು ಜನ ಯಾವ ನಿರೀಕ್ಷೆಯಿಲ್ಲದೇ ತಮ್ಮಷ್ಟಕ್ಕೆ ತಾವು ಸೇವಾ ನಿಷ್ಠರಾಗಿರುವುದನ್ನು ಕಾಣುತ್ತೇವೆ. ಇವರು ಯಾವುದೇ ಆರ್ಥಿಕ ಲಾಭವಿಲ್ಲದಿದ್ದರೂ, ತಮ್ಮ ಆರೋಗ್ಯ, ಯೋಗಕ್ಷೇಮ ಮತ್ತು ಜೀವನೋಪಾಯವನ್ನೂ ಅಲಕ್ಷಿಸಿ ದೀರ್ಘಾವಧಿಗೆ ಕೆಲಸ ಮಾಡುತ್ತಾರೆ. ಹಾಗಾದರೆ ಯಾರು ಈ ಅದೃಶ್ಯ ನಾಯಕ, ನಾಯಕಿಯರು? ಎಂದು ಪ್ರಶ್ನಿಸಿಕೊಂಡರೆ ‘ರೋಗಿಗಳನ್ನು ಆಸ್ಥೆಯಿಂದ ನೋಡಿಕೊಳ್ಳುವ ಆರೈಕೆದಾರರು’ ಎಂಬುದು ನಿಚ್ಚಳವಾಗಿ ಅನಾವರಣಗೊಳ್ಳುತ್ತದೆ.

ದೈಹಿಕ, ಮಾನಸಿಕ ಅನಾರೋಗ್ಯ, ಅಸಾಮರ್ಥ್ಯ, ವೃದ್ದಾಪ್ಯ, ಮಾದಕದ್ರವ್ಯ ವ್ಯಸನ ಅಥವಾ ಇನ್ನಿತರ ಕಾರಣಗಳಿಂದ ಬಳಲುತ್ತಿರುವ ಸಂಬಂಧಿ, ಸ್ನೇಹಿತ ಅಥವಾ ಸಂಗಾತಿಯನ್ನು ಆರೈಕೆ ಅಥವಾ ಶುಶ್ರೂಷೆ ಮಾಡುತ್ತಿರುವ ವ್ಯಕ್ತಿಯನ್ನು ಆರೈಕೆದಾರ ಅಥವಾ ರೋಗಿಯನ್ನು ನೋಡಿಕೊಳ್ಳುವವ ಎನ್ನಬಹುದು. ಸಾಮಾನ್ಯವಾಗಿ ಅವರು ಖಾಯಂ ಆಗಿ ಈ ಕಾರ್ಯಕ್ಕೆ ನಿಯುಕ್ತರಾಗಿಲ್ಲದಿರಬಹುದು. ಈ ರೀತಿಯ ಸೇವಾಕಾರ್ಯಕ್ಕೆ ನಿಧಾನವಾಗಿ ಅವರು ಒಗ್ಗಿಕೊಂಡಿರಬಹುದು ಅಥವಾ ಒಮ್ಮೆಗೇ ಅವರಿಗೆ ಈ ಜವಾಬ್ದಾರಿ ಎದುರಾಗಿರಬಹುದು.  ಈ ಕಾರ್ಯಕ್ಕಾಗಿ ಅವರು ಯಾವುದೇ ತರಬೇತಿ ಪಡೆದಿರುವುದಿಲ್ಲ ಅಥವಾ ಸಂಬಳವನ್ನು ಪಡೆಯುವುದಿಲ್ಲ. ಆದರೆ ಇದು ಅವರ ಜೀವನದಲ್ಲಿ ಮಾಡತೊಡಗುವ ಬಹು ಮಹತ್ವದ ಕೆಲಸಗಳಲ್ಲಿ ಒಂದು. ದೈಹಿಕವಾಗಿ, ವೈದ್ಯಕೀಯವಾಗಿ, ಭಾವನಾತ್ಮಕವಾಗಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಹೀಗೆ ಅನೇಕ ವಿಧದಲ್ಲಿ ಇವರ ಮೇಲೆ ಅವಲಂಭಿತವಾಗಿರುವ ಇನ್ನೊಂದು ಮಾನವ ಜೀವಿಗೆ ನಾನಾ ತರಹದಲ್ಲಿ ಇವರು ಕಾಳಜಿ ಮಾಡುತ್ತಿರುತ್ತಾರೆ. ಸ್ವಯಂಸೇವಾ ಸಂಘಟನೆಗಳಿಂದಾಗಲೀ ಅಥವಾ ಸರ್ಕಾರದಿಂದಾಗಲೀ ಇಷ್ಟು ಸಮಗ್ರವಾದ ಬೆಂಬಲ ಯಾವುದೇ ವ್ಯಕ್ತಿಗೆ ದೊರೆಯುವುದು ಅಸಾಧ್ಯದ ಮಾತು. ಅಂತೆಯೇ, ಆರೈಕೆಯ ಜವಾಬ್ದಾರಿ ಹೊತ್ತವರಿಗಂತೂ ಯಾವ ನಿರ್ದಿಷ್ಟ ಬೆಂಬಲವೂ ದೊರೆಯುವುದಿಲ್ಲ. ದುರದೃಷ್ಟವಶಾತ್, ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿರುವ ಬಹುತೇಕ ವೃತ್ತಿಪರರು ಕೂಡ ಆರೈಕೆದಾರರ ಈ ಅದ್ಭುತ ಕೊಡುಗೆಯ ಮಹತ್ವನ್ನು ಅರಿತುಕೊಳ್ಳುವಲ್ಲಿ ಸಫಲರಾಗಿಲ್ಲವೆಂದೇ ಹೇಳಬಹುದು. ಬದಲಾಗಿ ಆರೈಕೆದಾರರ ಮೇಲೆಯೆ ಹೆಚ್ಚಿನ ಹೊರೆ ಬೀಳುತ್ತದೆ.

ಇನ್ನೊಬ್ಬರನ್ನು ಆರೈಕೆ ಮಾಡುವುದು ಬಹಳ ಗೌರವದ ವಿಷಯ ಮತ್ತು ಹೆಚ್ಚಿನ ಆರೈಕೆದಾರರು ಅವರ ಈ ಕಾರ್ಯದ ಬಗ್ಗೆ ಹೆಮ್ಮೆ ಪಡುತ್ತಾರೆ. ಆದರೆ ಈ ರೀತಿಯ ಪಾಲನೆ ಮಾಡುವುದು ಆರೈಕೆದಾರರ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ಹಲವು ಬಾರಿ ಅವರು ತಮ್ಮ ಸಂಪೂರ್ಣ ಜೀವನವನ್ನು ತಾವು ಆರೈಕೆ ಮಾಡುತ್ತಿರುವ ವ್ಯಕ್ತಿಗಾಗಿ ಮೀಸಲಿಡಬೇಕಾಗುತ್ತದೆ. ಅವರ ಸ್ವಂತದ ಕಾರ್ಯಗಳಿಗೆ ದೊರೆಯುವ ಸಮಯ ಅತ್ಯಲ್ಪವಾಗಿರುತ್ತದೆ. ಪರಿಣಾಮವಾಗಿ, ಆರೈಕೆ ಮಾಡುವವರೇ ಹಲವು ಬಾರಿ ಅನಾರೋಗ್ಯಕ್ಕೆ, ಒಂಟಿತನಕ್ಕೆ, ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಾರೆ. ಹಲವರು ಆರೈಕೆಯ ಕಾರಣದಿಂದ ವಿದ್ಯಾಭ್ಯಾಸವನ್ನೋ, ಕೆಲಸವನ್ನೋ ಬಿಡಬೇಕಾಗಿ ಬರುವುದರಿಂದ ತಮ್ಮ ಜೀವನದ ಉತ್ತಮ ಅವಕಾಶವನ್ನೇ ಕೈಚೆಲ್ಲಿರುತ್ತಾರೆ. ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿರುವವರು ಅಥವಾ ಕೆಲಸ ಮಾಡುತ್ತಿರುವವರು ಎರಡೂ ಕಡೆ ಗಮನ ನೀಡಬೇಕಾಗಿರುವುದರಿಂದ ತಾರತಮ್ಯದ ಭಾವನೆಗೆ ಒಳಗಾಗಬಹುದು. ಭಾರತದಲ್ಲಿಯೂ ಸಾಂಪ್ರದಾಯಿಕ ಕೂಡು ಕುಟುಂಬಗಳು ಕಣ್ಮರೆಯಾಗಿ ಚಿಕ್ಕ ಸಂಸಾರಗಳು ಅಧಿಕವಾಗುತ್ತಿರುವುದರಿಂದ ಈ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತಿದೆ.

ಭಾರತ ಹಾಗೂ ನೆರೆಹೊರೆಯ ದೇಶಗಳನ್ನೂ ಸೇರಿದಂತೆ ಏಶಿಯಾ ಹಾಗೂ ಆಫ್ರಿಕಾದ ಬಹು ಭಾಗಗಳಲ್ಲಿ ಕಂಡುಬರುವ, ಉಚಿತವಾಗಿ ಶುಶ್ರೂಷೆ ಮಾಡುವ ರೋಗಿಯ ಕುಟುಂಬಸ್ಥ ಆರೈಕೆದಾರರ ಸಂಖ್ಯೆಯ ಬಗ್ಗೆ ಅಧಿಕೃತ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲ. ಇಂಗ್ಲೆಂಡಿನಲ್ಲಿ ಪ್ರತಿ ಎಂಟು ವಯಸ್ಕರಲ್ಲಿ ಒಬ್ಬರು ಆರೈಕೆದಾರರಾಗಿದ್ದಾರೆ (ಸುಮಾರು 6 ಮಿಲಿಯನ್ ಜನರು) ಎಂದು ಅಂದಾಜಿಸಲಾಗಿದೆ. ಈ ಅಂಕಿ ಅಂಶವನ್ನು ಆಧಾರವಾಗಿಟ್ಟುಕೊಂಡರೆ ಭಾರತದಲ್ಲಿ ಇವರ ಸಂಖ್ಯೆಯು ಸುಮಾರು 150 ಮಿಲಿಯನ್ ನಷ್ಟಾಗುತ್ತದೆ. ಅಂದರೆ, 150 ಮಿಲಿಯನ್ ಜನ ವಯಸ್ಕರು ಅಥವಾ ಮಕ್ಕಳು ಯಾವುದೇ ಪುರಸ್ಕಾರ ಅಥವಾ ಪ್ರತಿಫಲವಿಲ್ಲದೇ ಅನಾಮಿಕರಾಗಿಯೇ ಜೀವನ ಕಳೆಯುತ್ತಿದ್ದು, ಅವರ ಆರೊಗ್ಯ, ಯೋಗಕ್ಷೇಮ ಮತ್ತು ಭವಿಷ್ಯವು, ಇನ್ನೊಬ್ಬರ ಜೀವನಕ್ಕೆ ಆಸರೆಯಾಗುವ ಭರದಲ್ಲಿ ಅನಿಶ್ಚಿತಗೊಂಡಿದೆ.

ಕರ್ನಾಟಕದ ಹೊಸಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನಸಿಕ ತಜ್ಞರಾದ ಡಾ. ಅಜಯ್ ಕುಮಾರ್ ಅವರ ಮಾತುಗಳಲ್ಲಿ ಹೇಳುವುದಾದರೆ, “ಆರೈಕೆದಾರರದ್ದೊಂದು ಅದೃಶ್ಯ ಸಮುದಾಯ. ಕೆಲವೊಮ್ಮೆ ಸ್ವತಃ ಅವರಿಗೇ ಅವರು ಕಾಣಿಸುವುದಿಲ್ಲ. ಈ ನಿಟ್ಟಿನಲ್ಲಿ ಮೊದಲು ಬದಲಾವಣೆ ಸಾಧ್ಯವಾಗಬೇಕಾದರೆ ಎಲೆಮರೆಯ ಕಾಯಿಯಂತೆ ಅದೃಶ್ಯವಾಗಿ ಸೇವೆ ಸಲ್ಲಿಸುತ್ತಿರುವವರ ಕುರಿತು ಗಮನ ಹರಿಸಬೇಕಾದದ್ದು ತುಂಬ ಮಹತ್ವದ ಸಂಗತಿ.”

ಆದ್ದರಿಂದ, ನಿಮ್ಮ ಸಂಬಂಧಿಕರು, ನೆರೆಯವರು, ಸ್ನೇಹಿತರು ಮತ್ತು ಸಹೋದ್ಯೋಗಿಗಳು… ಹೀಗೆ ನಿಮಗೆ ಗೊತ್ತಿರುವ ಜನರ ಬಗ್ಗೆ ಯೋಚಿಸಿ. ಅವರಲ್ಲಿ ಯಾರಾದರೂ ಒಬ್ಬರು ಆರೈಕೆದಾರರಾಗಿರಬಹುದಲ್ಲವೇ? ನಿಮ್ಮ ಪರಿಚಯದವರಲ್ಲಿ ಕನಿಷ್ಟ ಪಕ್ಷ ಒಬ್ಬರಾದರೂ ಇಂತಹ ಜನ ಸಿಗುವ ಸಾಧ್ಯತೆಯಿದೆ. ಅವರು ತಮ್ಮನ್ನು ತಾವು ಆರೈಕೆದಾರರೆಂದು ಪರಿಚಯಿಸಿಕೊಂಡಿರದೇ ಇರಬಹುದು ಅಥವಾ ಅವರ ಜವಾಬ್ದಾರಿಯ ಕುರಿತು  ನಿಮಗೇ ಅರಿವಿಲ್ಲದಿರಬಹುದು. ಆದರೆ ಅವರು ನಮ್ಮ ಸುತ್ತ ಮುತ್ತಲೂ, ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಇದ್ದೇ ಇರುತ್ತಾರೆ. ಅಂತಹ ಜನರು ಅದೃಶ್ಯರಾಗಿಯೇ ಗುರುತಿಸಲ್ಪಡದೇ ಉಳಿಯಬೇಕಾಗಿಲ್ಲ. ಸ್ಕಿಜೋಫ್ರೀನಿಯಾದಿಂದ ಬಳಲುತ್ತಿರುವ ಪತಿಯ ಆರೈಕೆಯ ಜವಾಬ್ದಾರಿ ಹೊತ್ತಿರುವ ಆಶಾದೇವಿಯವರ ಪ್ರಕಾರ, “ಕೇವಲ ‘ಹೆಲೋ’, ಇವತ್ತು ಹೇಗಿದ್ದೀರಾ? ಪರವಾಗಿಲ್ವಾ? ಎಂಬ ಕುಶಲೋಪರಿಯ ಮಾತುಗಳಿಂದ ನನಗೆ ಬಹಳ ಹಿತವೆನಿಸುತ್ತದೆ.” ಈ ರೀತಿಯಾಗಿ ಆರೈಕೆಯಲ್ಲಿ ತೊಡಗಿರುವವರ ಹಾಗೂ ಅವರು ಆರೈಕೆ ಮಾಡುತ್ತಿರುವ ಅನಾರೋಗ್ಯ ಪೀಡಿತರ ಕುರಿತ ಸಾಂತ್ವನದ ಮಾತುಗಳು ಅವರನ್ನು ಗುರುತಿಸುವ ಗೌರವಿಸುವ ಮತ್ತು ಬೆಂಬಲಿಸುವ ಮೊದಲ ಹೆಜ್ಜೆಯಾಗಿದೆ. ಇಂತಹ ಸರಳ ಸಂಗತಿಗಳು ಏಕತಾನತೆಯಿಂದ ಸೇವೆಯಲ್ಲಿ ತೊಡಗಿರುವ ಆರೈಕೆದಾರರ ದಿನಚರಿಯಲ್ಲಿ ಅಪಾರ ಬದಲಾವಣೆಯನ್ನು ಉಂಟುಮಾಡಿ ಅವರ ದಿನವನ್ನು ಉತ್ತಮಗೊಳಿಸಬಹುದು. ಈ ದಿಸೆಯಲ್ಲಿ ನಾವೆಲ್ಲರೂ ಮೊದಲ ಹೆಜ್ಜೆಯನ್ನು ಇರಿಸಲು ನಮ್ಮ ಕೆಲ ಸಮಯವನ್ನು ಮೀಸಲಿಟ್ಟಲ್ಲಿ ಖಂಡಿತವಾಗಿಯೂ ಅಲ್ಲೊಂದು ಸುಂದರ ಬದುಕು ತೆರೆದುಕೊಳ್ಳುತ್ತದೆ. 

ಆರೈಕೆಯಿಂದಾಗುವ ಹಲವು ರೀತಿಯ ಧನಾತ್ಮಕ ಪರಿಣಾಮಗಳು, ಆರೈಕೆದಾರರ ನಿರ್ದಿಷ್ಟ ಗುಂಪುಗಳು ಮತ್ತು ಈ ಕುರಿತು ಕಾನೂನಿನಲ್ಲಿ ಆಗಬೇಕಿರುವ ಬದಲಾವಣೆಗಳು, ಜನಸಂಖ್ಯೆಯಲ್ಲಾಗುತ್ತಿರುವ ಗಮನಾರ್ಹ ಬದಲಾವಣೆಗಳಿಂದಾಗಿ ಶುಶ್ರೂಷೆ ಕ್ಷೇತ್ರದಲ್ಲಿ ಎದುರಾಗುವ ಬಿಕ್ಕಟ್ಟುಗಳ ಬಗ್ಗೆ ಈ ಸರಣಿಯ ಮುಂಬರುವ ಲೇಖನಗಳು ಬೆಳಕು ಚೆಲ್ಲಲಿವೆ.

ಡಾ. ಅನಿಲ್ ಪಾಟೀಲ್ ಅವರು ‘ಕೇರರ್ಸ್ ವರ್ಲ್ಡ್ ವೈಡ್’ ಸಂಸ್ಥೆಯ ಸಂಸ್ಥಾಪಕರು ಮತ್ತು ಕಾರ್ಯಕಾರಿ ನಿರ್ದೇಶಕರು. ಕೇರರ್ಸ್ ವರ್ಲ್ಡ್ ವೈಡ್ ಸಂಸ್ಥೆಯು ಕೌಟುಂಬಿಕ ಆರೈಕೆದಾರರು ಎದುರಿಸುವ ಸಮಸ್ಯೆಗಳನ್ನು ಗುರುತಿಸಿ, ಅವರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರ ಹುಡುಕಲು ಹಾಗೂ ನೆರವು ನೀಡಲು ಕಾರ್ಯನಿರ್ವಹಿಸುತ್ತದೆ. 2012 ರಲ್ಲಿ ಆರಂಭವಾಗಿರುವ ಸಂಸ್ಥೆಯು ಇಂಗ್ಲೆಂಡಿನಲ್ಲಿ ನೋಂದಣಿಯಾಗಿದ್ದು ಅಭಿವೃದ್ಧಿಶೀಲ ದೇಶಗಳಲ್ಲಿರುವ ಆರೈಕೆದಾರರ ಜೊತೆ ಕಾರ್ಯನಿರ್ವಹಿಸುತ್ತದೆ. ಕೇರರ್ಸ್ ವರ್ಲ್ಡ್ ವೈಡ್ ಸಂಸ್ಥೆಯಲ್ಲಿ ಸ್ವಯಂಸೇವಕರಾಗಿರುವ ರುತ್ ಪಾಟೀಲ್ ಅವರು ಡಾ ಪಾಟೀಲ್ ಅವರೊಂದಿಗೆ ಈ ಲೇಖನದ ಸಹ ಲೇಖಕರಾಗಿದ್ದಾರೆ.  ಹೆಚ್ಚಿನ ಮಾಹಿತಿಗೆ ಕೇರರ್ಸ್ ವರ್ಲ್ಡ್ ವೈಡ್ ಜಾಲತಾಣವನ್ನು ನೋಡಬಹುದು. ಲೇಖಕರನ್ನು ಸಂಪರ್ಕಿಸಲು columns@whiteswanfoundation.org ವಿಳಾಸಕ್ಕೆ ಬರೆಯಿರಿ. ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರದಾಗಿದ್ದು, ವೈಟ್ ಸ್ವಾನ್ ಫೌಂಡೇಶನ್ನಿನ ವಿಚಾರಧಾರೆಗಳನ್ನು ಪ್ರತಿನಿಧಿಸಬೇಕೆಂದೇನೂ ಇರುವುದಿಲ್ಲ.

ಈ ಲೇಖನ ಮೂಲತಃ ಇಂಗ್ಲೀಷಿನಲ್ಲಿ ಬರೆಯಲ್ಪಟ್ಟಿದ್ದು ಇಲ್ಲಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org