ಹದಿಹರಯದಲ್ಲಿ ಖಿನ್ನತೆ

ಹದಿಹರಯ ಅತಿ ಹೆಚ್ಚು ದೈಹಿಕ ಬದಲಾವಣೆ, ಭಾವನಾತ್ಮಕ ವ್ಯತ್ಯಯಗಳು ಹಾಗೂ ಸಾಕಷ್ಟು ಒತ್ತಡಗಳನ್ನು ಒಳಗೊಂಡಿರುವ ಪರಿವರ್ತನೆಯ ಕಾಲ. ಈ ಹಂತದಲ್ಲಿ ಭಾವನೆ, ಚಿತ್ತದಲ್ಲಿ ಏರುಪೇರುಗಳು ಸಾಮಾನ್ಯ. ಆದರೆ ಈ ಬದಲಾವಣೆ ಮಕ್ಕಳ ಬದುಕನ್ನು ಏರುಪೇರು ಮಾಡುತ್ತಾ ಮಾರಕವಾಗಿರಲಾರದು. ಒಂದು ವೇಳೆ ಹದಿಹರಯದ ಮಕ್ಕಳು ಅವರ ಸಾಮಾನ್ಯವಾದ ವರ್ತನೆಯಿಂದ ಬಹಳವೇ ಭಿನ್ನವಾದಂತೆನಿಸುತ್ತಿದ್ದರೆ, ಜಡವಾಗಿದ್ದರೆ, ವ್ಯಾಕುಲಗೊಂಡಿದ್ದರೆ, ಚೈತನ್ಯ ಹೀನರಾಗಿದ್ದರೆ, ಅವರ ದಿನಚರಿಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ ಎನಿಸುತ್ತಿದ್ದರೆ ಮತ್ತು ಬಹಳ ದಿನಗಳವರೆಗೆ ಇದೇ ಸ್ಥಿತಿ ಮುಂದುವರೆದಿದ್ದರೆ ಗಮನ ಹರಿಸಬೇಕಾದ್ದು ಬಹಳ ಮುಖ್ಯ. ಅವರು ಖಿನ್ನತೆಯ ವಶವಾಗಿದ್ದಿರಬಹುದು!
ಮಗಳು ಖಿನ್ನಳಾಗಿರುವುದು ಗೊತ್ತೇ ಆಗಲಿಲ್ಲ: 
14ರ ಹರಯದ ರೋಶಿನಿಯ ಅಮ್ಮ ಹೇಳಿದ್ದಿಷ್ಟು: “ಅವಳು ಮೊದಲಿನಂತಿಲ್ಲ. ಯಾವುದರಲ್ಲೂ ಆಸಕ್ತಿಯಿಲ್ಲ. ಏನೋ ಕಳೆದುಕೊಂಡಂತೆ ಇರುತ್ತಾಳೆ. ಡ್ಯಾನ್ಸು, ಮ್ಯೂಸಿಕ್, ಆಟ ಎಲ್ಲಾ ಬಿಟ್ಟುಬಿಟ್ಟಿದ್ದಾಳೆ. ಕೇಳಿದರೆ ನನಗದರ ಅಗತ್ಯವಿಲ್ಲ ಎನ್ನುತ್ತಾಳೆ. ಓದುವುದರಲ್ಲೂ ಅಷ್ಟೇ ಬಹಳವೇ ಹಿಂದೆ ಬಿದ್ದುಬಿಟ್ಟಿದ್ದಾಳೆ. ಟೀಚರ್ಸೂ ಯಾಕೆ ಮಂಕಾಗಿದ್ದಾಳೆ ಎನ್ನುತ್ತಾರೆ. ವಿಪರೀತ ನಿದ್ರೆ, ಝಂಕ್‍ಫುಡ್ ತಿನ್ನುವುದು ಜಾಸ್ತಿಯಾಗಿದೆ. ಎರಡೇ ತಿಂಗಳಲ್ಲಿ ತೂಕವೂ ಹೆಚ್ಚಾಗಿದೆ. ಏನು ಕೇಳಿದರೂ ಕೋಪ. ವಿರೋಧಿಸೋದು. ಅವಳ ರೂಮು ಬಿಟ್ಟು ಹೊರಗೆ ಬರೋಲ್ಲ. ಫ್ರೆಂಡ್ಸ್‍ಗಳ ಬಳಿಯೂ ಮಾತು ಅಷ್ಟಕ್ಕಷ್ಟೇ. ಒಬ್ಬಳೇ ಮನೆಯಲ್ಲಿ ಇರೋದು. ನನಗೆ ಅವಳನ್ನ ನೋಡಿದರೇ ದುಃಖವಾಗಿಬಿಡತ್ತೆ. ನಾವೂ ದಿನೇದಿನೇ ಸೋಮಾರಿಯಾಗ್ತಿದ್ದಾಳೆ, ಬೈದು ಬುದ್ಧಿ ಹೇಳಿದರೆ ಸರಿಯಾಗಬಹುದು ಅಂತ ಸಾಕಷ್ಟು ಪ್ರಯತ್ನಿಸಿದೆವು. ಒಂದು ಮಾತು ಹೆಚ್ಚಾದರೂ ವಿಪರೀತ ಅಳು. ಜೊತೆಗೆ ಸಣ್ಣಸಣ್ಣದಕ್ಕೂ ಅಳುವುದು ಬೇರೆ. ತನ್ನ ಬಗ್ಗೆ ತಾನು ನೆಗಟೀವ್ ಆಗಿ ಮಾತಾಡೋದು ಜಾಸ್ತಿ. ಕೀಳರಿಮೆ ಹೆಚ್ಚಿದೆ ಅನ್ಸತ್ತೆ. ಮೊದಮೊದಲು ಇದೆಲ್ಲಾ ಈ ವಯಸ್ಸಿನಲ್ಲಿ ಸಾಮಾನ್ಯ ಎಂದು ಸುಮ್ಮನಿದ್ದೆವು. ಎರಡು ತಿಂಗಳಾದರೂ ಯಾಕೋ ಸರಿಯಾಗುತ್ತಿಲ್ಲ ಎಂದಾಗ ತಜ್ಞರ ಬಳಿ ತೋರಿಸಿದ್ದಾಯಿತು. ಇಷ್ಟು ದಿನ ಅವಳು ಸೋಮಾರಿ, ಜಂಭ ಮಾಡುತ್ತಾಳೆ ಅಂತೆಲ್ಲಾ ಎಂದುಕೊಂಡಿದ್ದೆ. ಅವಳು ಖಿನ್ನವಾಗಿರಬಹುದು ಎಂದು ಗೊತ್ತೇ ಆಗಲಿಲ್ಲ.” 
ಖಿನ್ನತೆ ಸಹಜವಲ್ಲ:
ರೋಶಿನಿಯಂತೆ ಅದೆಷ್ಟೋ ಹದಿಹರೆಯದ ಮಕ್ಕಳು ಖಿನ್ನತೆಯಿಂದ ನರಳುತ್ತಿರುವುದು ಪೋಷಕರು, ಸಂಬಂಧಪಟ್ಟವರಿಗೆ ಗೊತ್ತೇ ಆಗುವುದಿಲ್ಲ. ದುರದೃಷ್ಟಕರ ಸಂದರ್ಭದಲ್ಲಿ ಮಕ್ಕಳು ಆತ್ಮಹತ್ಯೆಯ ಪ್ರಯತ್ನವನ್ನೋ ಅಥವಾ ಆತ್ಮಹತ್ಯೆಯನ್ನೇ ಮಾಡಿಕೊಂಡಾಗಲಷ್ಟೇ ಅವರು ಖಿನ್ನರಿದ್ದಿರಬಹುದು ಎಂದು ತಿಳಿಯುವುದು. ಸಣ್ಣಪುಟ್ಟ ವಿಷಯಗಳಿಗೆ ಆತ್ಮಹತ್ಯೆಗೆ ಪ್ರಯತ್ನಿಸುವ ಅಥವಾ ಆತ್ಮಹತ್ಯೆಗೀಡಾಗುವ ಅದೆಷ್ಟೋ ಮಕ್ಕಳಲ್ಲಿ ಖಿನ್ನತೆಯ ಲಕ್ಷಣವನ್ನು ಸಣ್ಣಪುಟ್ಟದ್ದು ಎಂದು ನಿರ್ಲಕ್ಷಿಸಿರುವುದೇ ಆ ಘಟನೆಗೆ ಕಾರಣವಾಗಿದ್ದಿರಬಹುದು ಎಂಬುದು ದುರಂತ. 
ಹದಿಹರಯ ಪರಿವರ್ತನೆಯ ಹಂತವಾದ್ದರಿಂದ ಮಕ್ಕಳ ವ್ಯಕ್ತಿತ್ವ, ವರ್ತನೆಯಲ್ಲಿ ಬದಲಾವಣೆ ಸಹಜವಾಗೇ ಕಾಣುತ್ತದೆ. ಇದು ಸಹಜವಾದುದೋ ಅಥವಾ ಖಿನ್ನತೆಯನ್ನು ಸೂಚಿಸುತ್ತಿರುವುದೋ ಅರಿಯುವುದು ಕಷ್ಟ. ಹಾಗಾಗಿ ಹದಿಹರಯದ ಮಕ್ಕಳಲ್ಲಿ ಈ ಬದಲಾವಣೆ ಎಷ್ಟು ತೀವ್ರವಾಗಿದೆ ಮತ್ತು ಈ ತೀವ್ರತೆ ಎಷ್ಟು ಸಮಯದಿಂದ ಇದೆ ಎನ್ನುವುದು ಮುಖ್ಯ. ಸಾಮಾನ್ಯವಾಗಿ 2-3 ವಾರಗಳ ನಂತರವೂ ಈ ಸ್ಥಿತಿ ಮುಂದುವರೆದಿದ್ದರೆ ತಜ್ಞರ ಸಹಾಯ ಅತ್ಯಗತ್ಯ.
ಹದಿಹರಯದ ಖಿನ್ನತೆಯ ಲಕ್ಷಣಗಳು:
ಹದಿಹರೆಯದಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯ ಲಕ್ಷಣಗಳು ವಯಸ್ಕರಲ್ಲಿ ಕಂಡುಬರುವ ಖಿನ್ನತೆಯ ಲಕ್ಷಣಗಳಂತೇ ಇರುತ್ತದೆ. 
  • ಸುಸ್ತಾದಂತಿರುವುದು, ಜಡತ್ವ ಮತ್ತು ಚೈತನ್ಯಹೀನತೆ
  • ತೀವ್ರವಾದ ದುಃಖ ಮತ್ತು ಹತಾಶೆಯಲ್ಲಿರುವುದು.
  • ಆಹ್ಲಾದಕರವಾದ ಚಟುಟಿಕೆಗಳನ್ನು ಆನಂದಿಸಲು ಆಸಕ್ತಿ ತೋರದಿರುವುದು
  • ನಿದ್ರಾಹೀನತೆ ಅಥವಾ ಅತಿಯಾದ ನಿದ್ರೆ
  • ಹಸಿವಿನಲ್ಲಿ ಬದಲಾವಣೆ: ಅತಿಯಾದ ಹಸಿವು, ತೂಕದಲ್ಲಿ ಹೆಚ್ಚಳ ಅಥವಾ ಹಸಿವಾಗದಿರುವುದು ಮತ್ತು ತೂಕ ಕಳೆದುಕೊಳ್ಳುವುದು
  • ವಿದ್ಯಾಭಾಸದಲ್ಲಿ ಹಿನ್ನಡೆ, ಶೈಕ್ಷಣಿಕ ಸೋಲುಗಳು. ಶಾಲೆಯ ಬಗ್ಗೆ ನಿರಾಸಕ್ತಿ
  • ಸಾಮಾಜಿಕ ಪ್ರತ್ಯೇಕತೆ: ಸ್ನೇಹ-ಸಂಬಂಧಗಳು, ಚಟುವಟಿಕೆಗಳಿಂದ ದೂರ ಉಳಿಯುವುದು, ಒಬ್ಬಂಟಿಯಾಗಿರುವುದು
  • ಅತಿಯಾದ ಕೋಪ, ಆಕ್ರಮಣಶೀಲತೆ, ಚಡಪಡಿಕೆ ಮತ್ತು ಕಿರಿಕಿರಿ
  • ಏಕಾಗ್ರತೆ, ಉತ್ಸಾಹಗಳ ಕೊರತೆ
  • ಸಾವಿನ ಇಚ್ಚೆ ವ್ಯಕ್ತ ಪಡಿಸುವುದು, ಸಾವಿನ ಕುರಿತು ಮಾತುಗಳನ್ನಾಡುವುದು, ಆತ್ಮಹತ್ಯೆಗೆ ಪ್ರಯತ್ನಿಸುವುದು.
  • ಮಕ್ಕಳು ತೋರುವ ಲಕ್ಷಣಗಳನ್ನು ಸಾಮಾನ್ಯ ಎಂದು ತಳ್ಳಿಹಾಕದೇ ಗಮನ ಕೊಡುವುದು ಮುಖ್ಯ! ಈ ಲಕ್ಷಣಗಳು ಅಲ್ಪ ಪ್ರಮಾಣದಲ್ಲಿದ್ದರೆ ಜೀವನ ಶೈಲಿಯ ಬದಲಾವಣೆಗಳು, ಪೋಷಕರ ಬೆಂಬಲ, ಪೂರಕ ವಾತಾರಣ ಮತ್ತು ಮಾನಸಿಕ ಸಧೃಡತೆ ನೀಡುವ ಆಪ್ತಸಮಾಲೋಚನೆ, ಮಾನಸಿಕ ಚಿಕಿತ್ಸೆ (ಸೈಕೋಥೆರಪಿ)ಗಳಿಂದ ಗುಣಕಾಣಬಹುದು. ಅದೇ ತೀವ್ರಪ್ರಮಾಣದ ಲಕ್ಷಣಗಳಿದ್ದರೆ ವೈದ್ಯಕೀಯ ಸಹಾಯದೊಂದಿಗೆ ಮಾನಸಿಕ ಚಿಕಿತ್ಸೆಗಳನ್ನು ನೀಡುವುದು ಮತ್ತು ಪೂರಕ ವಾತಾವರಣ ಕಲ್ಪಿಸುವುದು ಗುಣಕಾರಿಯಾಗಿರುತ್ತದೆ. ಖಿನ್ನತೆಯೊಂದಿಗೆ ಆತಂಕ ಮನೋರೋಗ ಮೊದಲಾದ ಇತರೆ ಮಾನಸಿಕ ಸಮಸ್ಯೆಗಳ ಲಕ್ಷಣವೂ ತಲೆದೋರಬಹುದು. 
ಆತ್ಮಹತ್ಯೆಯ ಆಲೋಚನೆಗಳು ಕ್ಷುಲ್ಲಕವಲ್ಲ!
ಹದಿಹರೆಯದವರ ಆತ್ಮಹತ್ಯೆಯ ಕುರಿತ ಯಾವುದೇ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆತ್ಮಹತ್ಯೆಯ ಕುರಿತು ಹಾಸ್ಯ, ಸಾವಿನ ಬಗ್ಗೆ ಧನಾತ್ಮಕ ಮಾತುಗಳು, ಸಾವಿನ ಕುರಿತು ಬರಹ/ಪದ್ಯ/ಕಥೆಗಳು, ಕಡೆಯ ಸಂದೇಶದಂತಹ ಮಾತುಗಳು, ಸಾಯುವುದರ ಬಗ್ಗೆ ಮಾಹಿತಿ ಸಂಗ್ರಹ ಇಂತಹವು ಯಾವುದನ್ನೂ ಕ್ಷುಲ್ಲಕವಾಗಿ ಕಾಣಬಾರದು. ಮಕ್ಕಳ ಆತ್ಮಹತ್ಯಾ ಯತ್ನವನ್ನು ಬರೀ ಗಮನ ಸೆಳೆಯುವ ತಂತ್ರ ಎಂದು ಅಲಕ್ಷಿಸದಿರಿ. ಮುಖ್ಯವಾಗಿ, ಆತ್ಮಹತ್ಯೆ ಆಲೋಚನೆಗಳಿರುವವರನ್ನು ಒಬ್ಬಂಟಿಯಾಗಿ ಬಿಡದಿರಿ.
ಆತ್ಮಹತ್ಯೆಯ ಆಲೋಚನೆಗಳು ಕಂಡ ಸನ್ನಿವೇಶದಲ್ಲಿ ತುರ್ತು ತಜ್ಞರ ಸಂಪರ್ಕ, ಆತ್ಮಹತ್ಯೆ ಸಹಯವಾಣಿಯನ್ನು ಸಂಪರ್ಕಿಸುವುದು ಅತ್ಯವಶ್ಯಕ
ಖಿನ್ನತೆ ಆವರಿಸಿಕೊಳ್ಳಲು ಪ್ರಮುಖ ಕಾರಣಗಳು :
ಶೈಕ್ಷಣಿಕ ಸಾಧನೆ, ಸಹವರ್ತಿಗಳ ಒತ್ತಡ, ಕೌಟುಂಬಿಕ- ಸಾಮಾಜಿಕ ಬದುಕಿನಲ್ಲಿ ಉಂಟಾದ ಬದಲಾವಣೆಗಳು ಕೆಲವು ಸವಾಲುಗಳನ್ನು ತಂದೊಡ್ಡುತ್ತವೆ. ಇಂತಹ ಸಂದರ್ಭಗಳನ್ನು ಎದುರಿಸಲು ಮಕ್ಕಳು ಅಸಮರ್ಥರಾದಾಗ ಹಾಗೂ ಮಕ್ಕಳಲ್ಲಿ ಆದ ಬದಲಾವಣೆಯನ್ನು ಮೊದಲೇ ಗುರುತಿಸಿ ಹೊರತರುವ ಯತ್ನವನ್ನು ಪೋಷಕರಾÀಗಲೀ, ಸಂಬಂಧಿಸಿದವರಾಗಲೀ ನಡೆಸಲಾಗದಿದ್ದಾಗಲೂ ಖಿನ್ನತೆ ಕಾಣಿಸಬಹುದು. 
ಸಾಮಾನ್ಯವಾಗಿ ಈ ಅಂಶಗಳಿಂದ ಖಿನ್ನತೆ ಕಾಣಿಸಿಕೊಳ್ಳಬಹುದು:
  • ಬಾಲ್ಯದಲ್ಲಾದ ಆಘಾತಗಳು: ದೈಹಿಕ-ಭಾವನಾತ್ಮಕ ಶೋಷಣೆ, ಪೋಷಕರ ಸಾವು ಮೊದಲಾದವು
  • ದೈಹಿಕ ನ್ಯೂನತೆ, ದೀರ್ಘಕಾಲದ ಕಾಯಿಲೆಗಳು, ಇತರೆ ಮಾನಸಿಕ ಸಮಸ್ಯೆಗಳು.
  • ಪ್ರಕ್ಷುಬ್ಧ ಕೌಟುಂಬಿಕ ವಾತವರಣ: ದೀರ್ಘಕಾಲದ ಪೋಷಕರ ಕಲಹ, ವಿಚ್ಚೇದನ, ಮದ್ಯವ್ಯಸನಿ ಪೋಷಕರು.
  • ಹೊರಗಿನ ಒತ್ತಡಗಳು ಮತ್ತು ಋಣಾತ್ಮಕ ಆಲೋಚನಾ ಕ್ರಮ: ನಿರಾಶಾಭಾವ, ಬಹಳ ಬೇಗ ಅಸಹಾಯಕರಾಗುವುದು

ಖಿನ್ನರಾಗಿರುವ ಹದಿಹರೆಯದವರಿಗೆ:

  • ನೆನಪಿಡಿ, ನೀವು ನರಳಬೇಕಿಲ್ಲ. ಖಿನ್ನತೆಗೆ ಪರಿಹಾರವಿದೆ. ಸಹಾಯ ಪಡೆದುಕೊಳ್ಳಿ. ಹಿಂಜರಿಕೆ ಬೇಡ
  • ನಿಮ್ಮ ಪೋಷಕರೊಂದಿಗೆ, ಸ್ನೇಹಿತರು-ಆಪ್ತರೊಂದಿಗೆ ನಿಮ್ಮ ಸಮಸ್ಯೆ ಹಂಚಿಕೊಳ್ಳಿ. ಸಹಾಯ ಕೇಳುವುದು ಅವಮಾನವಲ್ಲ.
  • ಪರಿಸ್ಥಿತಿ ಹೀಗೇ ಇರುವುದಿಲ್ಲ. ನಿಮ್ಮ ನೋವು, ಯಾತನೆಗಳು ಕಡಿಮೆಯಾಗುತ್ತವೆ
  • ನಿಮಗೆ ಕೆಟ್ಟ ಆಲೋಚನೆಗಳು ಬಂದ ಮಾತ್ರಕ್ಕೆ ನೀವು ಕೆಟ್ಟವರಲ್ಲ. ಈ ಕ್ಷಣ ಕಷ್ಟಕರವಾಗಿದೆಯಷ್ಟೆ.
ಹದಿಹರೆಯದ ಖಿನ್ನತೆ- ಪೋಷಕರ ಪಾತ್ರ:
ಹದಿಹರೆಯದ ಮಕ್ಕಳಲ್ಲಾದ ಋಣಾತ್ಮಕ ಬದಲಾವಣೆಗಳು ಖಿನ್ನತೆಯ ಲಕ್ಷಣವೇ ಎಂದು ಗುರುತಿಸುವಲ್ಲಿ ಮತ್ತು ಖಿನ್ನತೆಯ ಸ್ಥಿತಿಯಿಂದ ಅವರನ್ನು ಹೊರತರಲು ಬೆಂಬಲಿಸುವಲ್ಲಿ ಪೋಷಕರ, ಸಂಬಂಧಿಸಿದವರ ಪಾತ್ರ ಬಹಳ ದೊಡ್ಡದು. ನೀವು ಪೋಷಕರಾಗಿದ್ದರೆ, ಏಕೆ ಹೀಗಾಯಿತು ಎಂದು ಕೊರಗದಿರಿ. ಈ ಪರಿಸ್ಥಿತಿಯಿಂದ ನಿಮ್ಮ ಮಗುವನ್ನು ಹೊರತರಲು ನೀವು ಮಾಡಬಹುದಾದದ್ದೂ ಸಾಕಷ್ಟಿದೆ. ಆ ಅಂಶಗಳ ಬಗ್ಗೆ ಗಮನವಿರಲಿ.
ನಿಮ್ಮ ಮಕ್ಕಳು, ಸ್ನೇಹಿತರು ಖಿನ್ನತೆಯಿಂದ ಬಳಲುತ್ತಿದ್ದರೆ ಅವರಿಗೆ ಸೂಕ್ತ ತಜ್ಞರ ಸಹಾಯ ದೊರಕಿಸುವುದರ ಜೊತೆಗೆ ಹೀಗೆ ಮಾಡಿ:
  • ಸಂವಹಿಸಿ: ಕಡಿಮೆ ಹೇಳಿ, ಹೆಚ್ಚು ಕೇಳಿ! ಅವರ ಮಾನಸಿಕ ತಲ್ಲಣಗಳಿಗೆ ಕಿವಿಕೊಡಿ. ಸಲಹೆ-ಸೂಚನೆಗಳನ್ನು ನೀಡದೆ, ಪೂರ್ವಾಗ್ರಹವನ್ನಿಟ್ಟುಕೊಳ್ಳದೇ ಆಲಿಸಿ. ಅವರ ಸಮಸ್ಯೆ ಏನು ಅರಿಯಿರಿ. ನೆನಪಿರಲಿ, ಅವರು ಹೇಳುತ್ತಿರುವ ವಿಚಾರಗಳು ನಿಮಗೆ ಕ್ಷುಲ್ಲಕವೆನಿಸಬಹುದು. ಆದರೆ ಅವರ ಪಾಲಿಗೆ ಅದು ಬಹಳ ವೇದನೆಯದ್ದಾಗಿರುತ್ತದೆ. ಯಾವುದೇ  ನಿಬಂಧನೆಗಳಿಲ್ಲದೇ ಅವರನ್ನು ಪ್ರೀತಿಸುತ್ತೀರೆಂದು ಸಂವಹಿಸಿ. 
  • ಸಮಯ ನೀಡಿ, ಪಾಸಿಟಿವ್ ಮಾತುಗಳನ್ನಾಡಿ: ದಿನದ ಸ್ವಲ್ಪ ಸಮಯ ಅವರೊಂದಿಗೆ ಕಳೆಯಿರಿ. ಪುಟ್ಟ ವಾಕ್, ಮಾತು ಬಹಳ ಪರಿಣಾಮಕಾರಿ. ಅವರಲ್ಲಿರುವ ಪಾಸಿಟಿವ್ ಅಂಶಗಳನ್ನು ಗುರುತಿಸಿ.
  • ಚಟುವಟಿಗೆಗಳಲ್ಲಿ ತೊಡಗಿಸಿ: ದೂರವಾಗಿರುವ ಸ್ನೇಹಿತರು, ಆಟ, ನೃತ್ಯ-ಸಂಗೀತ ಮೊದಲಾದ ಚಟುವಟಿಕೆಗಳಿಗೆ ಮತ್ತೆ ಸೇರುವಂತೆ ಹಂತಹಂತವಾಗಿ ಪ್ರೋತ್ಸಾಹಿಸಿ, ಬೆಂಬಲಿಸಿ.
  • ದೇಹಾರೋಗ್ಯಕ್ಕೂ ಒತ್ತುಕೊಡಿ: ಸ್ಕಿಪ್ಪಿಂಗ್, ಸೈಕ್ಲಿಂಗ್, ವಾಕ್, ರನ್ನಿಂಗ್, ನೃತ್ಯ, ಆಟ ಹೀಗೇ ಅವರಿಗಿಷ್ಟವಾದ ದೈಹಿಕ ವ್ಯಾಯಾಮವಿರಲಿ. ಪೋಷಕಾಂಶವುಳ್ಳ ಆಹಾರ, ಸಾಕಷ್ಟು ನಿದ್ರೆಯನ್ನು ದಿನಚರಿಯಲ್ಲಿ ಅಳವಡಿಸಿ.
  • ಹದಿಹರೆಯದಲ್ಲಿನ ಖಿನ್ನತೆ ಅತ್ಯಂತ ಯಾತನಾಮಯವಾದದ್ದು. ಈ ವಯಸ್ಸಿನಲ್ಲಿದು ಸಾಮಾನ್ಯ, ಖಿನ್ನತೆಯ ಲಕ್ಷಣಗಳು ತಾವಾಗೇ ಸರಿಹೋಗುತ್ತವೆ ಎಂದು ನಿರ್ಲಕ್ಷಿಸಬಾರದು. ಅಲಕ್ಷ್ಯ ಮಾಡಿದಷ್ಟೂ ದುರಂತಕ್ಕೆ ಆಹ್ವಾನವಾದೀತು. ಖಿನ್ನತೆಗೆ ಚಿಕಿತ್ಸೆ, ಸೂಕ್ತ ಸ್ಪಂದನೆ ಸಿಕ್ಕಲ್ಲಿ ಹದಿರೆಯದ ಚೈತನ್ಯವನ್ನು ಮಕ್ಕಳು ಮರಳಿ ಪಡೆಯಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org