ದೌರ್ಬಲ್ಯಗಳು

ಸ್ಕಿಜ಼ೋಫ್ರೇನಿಯಾ: ಕಲ್ಪನೆ ಮತ್ತು ವಾಸ್ತವ

ವೈಟ್ ಸ್ವಾನ್ ಫೌಂಡೇಶನ್

ಕಲ್ಪನೆ: ಸ್ಕಿಜ಼ೋಫ್ರೇನಿಯಾ ಹೊಂದಿರುವವರು ಹಲವು ವ್ಯಕ್ತಿತ್ವಗಳನ್ನು ಹೊಂದಿರುತ್ತಾರೆ.

ಅಥವಾ ಮಲ್ಟಿಪಲ್‌ ಪರ್ಸನಾಲಿಟಿ ಡಿಸಾರ್ಡರ್‌ ಮತ್ತು ಸ್ಕಿಜ಼ೋಫ್ರೇನಿಯಾ ಒಂದೇ.

ವಾಸ್ತವ: ವಿಭಿನ್ನ ಹಾಗೂ ನಿರ್ದಿಷ್ಟ ತಾತ್ಕಾಲಿಕ ವ್ಯಕ್ತಿತ್ವಗಳನ್ನು ಹೊಂದಿರುವ ಸ್ಥಿತಿಯನ್ನು ಮಲ್ಟಿಪಲ್‌ ಪರ್ಸನಾಲಿಟಿ ಡಿಸಾರ್ಡರ್‌ ಎಂದು ಕರೆಯಲಾಗುತ್ತದೆ. ಮಲ್ಟಿಪಲ್‌ ಪರ್ಸನಾಲಿಟಿ ಡಿಸಾರ್ಡರ್‌ ಹೊಂದಿರುವ ವ್ಯಕ್ತಿಗಳು ವಿಭಿನ್ನ ಸನ್ನಿವೇಶದಲ್ಲಿ ವಿಭಿನ್ನ ವ್ಯಕ್ತಿಗಳಂತೆ ವರ್ತಿಸುತ್ತಾರೆ.

ಸ್ಕಿಜ಼ೋಫ್ರೇನಿಯಾ ಮೆದುಳಿಗೆ ಸಂಬಂಧಿಸಿದ ಖಾಯಿಲೆಯಾಗಿದ್ದು ಇದನ್ನು ಹೊಂದಿರುವ ವ್ಯಕ್ತಿಗಳು ಭ್ರಮೆ,ಭ್ರಾಂತಿ, ಮತ್ತು ಕಾಲ್ಪನಿಕ ನಂಬಿಕೆಗಳನ್ನು ಹೊಂದಿರುತ್ತಾರೆ. ಸ್ಕಿಜ಼ೋಫ್ರೇನಿಯಾ ಹೊಂದಿರುವ ವ್ಯಕ್ತಿ ಒಂದೇ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. 'ಒಡಕು' ಇಲ್ಲಿ ವ್ಯಕ್ತಿಯ ಯೋಚನೆ, ಭಾವನೆಗಳಿಗೆ ಸಂಬಂಧಿಸಿರುತ್ತದೆ. (ಉದಾ:ದುಃಖದ ಕಥೆ ನೆನಪಿಸಿಕೊಂಡು ನಗುವುದು)

ಕಲ್ಪನೆ: ಸ್ಕಿಜ಼ೋಫ್ರೇನಿಯಾ ಇರುವ ಎಲ್ಲಾ ವ್ಯಕ್ತಿಗಳು ಒಂದೇ ರೀತಿಯ ಅಸ್ವಸ್ಥತೆಯನ್ನು ಹೊಂದಿರುತ್ತಾರೆ.

ವಾಸ್ತವ: ಸ್ಕಿಜ಼ೋಫ್ರೇನಿಯಾ ಹೊಂದಿರುವ ಎಲ್ಲ ವ್ಯಕ್ತಿಗಳೂ ಒಂದೇ ರೀತಿಯ ಅಸ್ವಸ್ಥತೆಯನ್ನು ಹೊಂದಿರುವುದಿಲ್ಲ. ಸ್ಕಿಜ಼ೋಫ್ರೇನಿಯಾದಲ್ಲಿ ಬೇರೆ ಬೇರೆ ಲಕ್ಷಣಗಳಿಂದ ಕೂಡಿದ, ಹಲವು ಬಗೆಗಳಲ್ಲಿ ಬೆಳವಣಿಗೆ ಹೊಂದುವ ವಿವಿಧ ಪ್ರಕಾರಗಳಿವೆ.

ಕಲ್ಪನೆ: ಸ್ಕಿಜ಼ೋಫ್ರೇನಿಯಾ ಹೊಂದಿರುವ ವ್ಯಕ್ತಿಗಳು ಅಪಾಯಕಾರಿ; ಅವರು ತಮಗೆ ಹಾಗು ಸುತ್ತಲಿನ ಜನರಿಗೆ ಹಿಂಸೆ ಉಂಟುಮಾಡುತ್ತ್ತಾರೆ.

ವಾಸ್ತವ: ಸ್ಕಿಜ಼ೋಫ್ರೇನಿಯಾ ಇರುವ ಎಲ್ಲರೂ ಅಪಾಯಕಾರಿ ಅಲ್ಲ. ಖಾಯಿಲೆ ತೀವ್ರವಾದಗ ಕೆಲ ವ್ಯಕ್ತಿಗಳು ಹಿಂಸಾತ್ಮಕವಾಗಿ ವರ್ತಿಸಬಹುದು. ವ್ಯಕ್ತಿಯನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸಿದರೆ ಸಾಮಾನ್ಯ ವ್ಯಕ್ತಿಯಂತಾಗುತ್ತಾರೆ.

ಕಲ್ಪನೆ: ಬಾಲ್ಯದಲ್ಲಿ ಪೋಷಕರ ಅಸಮರ್ಪಕ ಪಾಲನೆಯಿಂದ ಮತ್ತು ಅವರು ಹಲ್ಲೆ ಮಾಡಿರುವುದರಿಂದಾಗಿ ಸ್ಕಿಜ಼ೋಫ್ರೇನಿಯಾಕಾಣಿಸಿಕೊಳ್ಳುತ್ತದೆ.

ವಾಸ್ತವ: ಸ್ಕಿಜ಼ೋಫ್ರೇನಿಯಾಗೆ ಕಾರಣ ಪೋಷಕರ ದೌರ್ಜನ್ಯ ಅಥವಾ ಹಲ್ಲೆ ಅಲ್ಲ. ಮಿದುಳಿನ ರಚನೆ, ವಂಶವಾಹಿ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಕಾರಣಗಳಿಂದ ಸ್ಕಿಜ಼ೋಫ್ರೇನಿಯಾ ಕಾಣಿಸಿಕೊಳ್ಳಬಹುದಾಗಿದೆ. ಮಿದುಳಿನಲ್ಲಿ ರಚನಾತ್ಮಕ ಬದಲಾವಣೆ ಸಾಮಾನ್ಯವಾಗಿ ಹದಿಹರೆಯದ ವಯಸ್ಸಿನಲ್ಲಿ ಉಂಟಾಗುತ್ತದೆ. ಮಿದುಳಿನ ಅಸಹಜ ಬದಲಾವಣೆ ಜೊತೆಗೆ ಇತರ ಕಾರಣಗಳೂ ಕೂಡಿಕೊಂಡಾಗ ಯುವಕರಲ್ಲಿ ಸ್ಕಿಜ಼ೋಫ್ರೇನಿಯಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಕಲ್ಪನೆ: ಸ್ಕಿಜ಼ೋಫ್ರೇನಿಯಾದಿಂದ ಬಳಲುತ್ತಿರುವವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಅವಶ್ಯವಿದೆ.

ವಾಸ್ತವ: ಸ್ಕಿಜ಼ೋಫ್ರೇನಿಯಾದಿಂದ ಬಳಲುತ್ತಿರುವ ಎಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಿಲ್ಲ. ವೈದ್ಯರ ಸಲಹೆ ಪಡೆದು ರೋಗವನ್ನು ಅರ್ಥ ಮಾಡಿಕೊಂಡು ಮನೆಯಲ್ಲೇ ಸೂಕ್ತ ಆರೈಕೆ ನೀಡಬಹುದು.

(ಈ ವಿಭಾಗದಲ್ಲಿ ನೀಡಲಾಗಿರುವ ಮಾಹಿತಿಯನ್ನು ನಿಮ್ಹಾನ್ಸ್ ನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಜಗದೀಶ ತೀರ್ಥಹಳ್ಳಿ ಹಾಗೂ ಪುಣೆಯ ಶ್ರೀಮತಿ ಕಾಶಿಬಾಯಿ ನವಲೆ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅವಿನಾಶ್ ವಿ.ವಾಘ್ಮೋರೆ ಅವರಿಂದ ಸಂಗ್ರಹಿಸಲಾಗಿದೆ.)