ಶಿಕ್ಷಣ

ಓದಿನಷ್ಟೇ ಆಹಾರವೂ ಮುಖ್ಯ

ವೈಟ್ ಸ್ವಾನ್ ಫೌಂಡೇಶನ್

ಮಕ್ಕಳು ಪರೀಕ್ಷೆಗೆ ತಯಾರಾಗುವಾಗ, ಆರೋಗ್ಯಕರ ಆಹಾರ ಸೇವಿಸುವುದು ಮುಖ್ಯ. ಜೊತೆಗೆ ವ್ಯಾಯಾಮ, ಆಟ, ಯೋಗದಂತಹ ದೈಹಿಕ ಚಟುವಟಿಕೆಗಳು ಮಕ್ಕಳಿಗೆ ಚೈತನ್ಯ ನೀಡುತ್ತದೆ. ವೈಟ್ ಸ್ವಾನ್ ಫೌಂಡೇಷನ್ನಿನ ಅಲಗಮ್ಮಾಯಿ ಮೇಯಪ್ಪನ್ ಅವರು ದೆಹಲಿ ಮೂಲದ ನ್ಯೂಟ್ರಿಷನಿಸ್ಟ್ ಮತ್ತು ಹೆಲ್ತ್ ರೈಟರ್ ಕವಿತಾ ದೇವಗನ್ ಅವರ ಜೊತೆ, ಪರೀಕ್ಷೆಯ ವೇಳೆ ಮಕ್ಕಳು ಯಾವ ರೀತಿ ಆಹಾರ ಸೇವಿಸಬೇಕು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಲ್ಲಿ ಪೋಷಕರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳನ್ನು ಕುರಿತು ಮಾತನಾಡಿದರು.

ನಾನು ಬಹಳ ಕಡಿಮೆ ಆಹಾರ ಸೇವಿಸುತ್ತೇನೆ. ವಿಟಮಿನ್ ಮಾತ್ರೆ ತೆಗೆದುಕೊಂಡರೆ ನನಗೆ ಪೌಷ್ಠಿಕತೆ ಸಿಗುವುದೇ?

ಪ್ರತಿ ದಿನ ತಾಜಾ ಆಹಾರ ಸೇವಿಸುವುದು ಒಳ್ಳೆಯದು. ಪೌಷ್ಠಿಕತೆಯ ಕೊರತೆ ತುಂಬಾ ಇದ್ದಾಗ ಮಾತ್ರ ಸಪ್ಲಿಮೆಂಟ್ಗಳನ್ನು ಬಳಸಬಹುದು.

ನೆನಪಿನ ಶಕ್ತಿ ಹೆಚ್ಚಿಸಲು ಯಾವ ಆಹಾರ ಸೇವಿಸಬೇಕು?

ನೆನಪಿನ ಶಕ್ತಿ ಹೆಚ್ಚಿಸುವ ಹಲವು ಆಹಾರಗಳಿವೆ.

  • ಬಾದಾಮಿಯಲ್ಲಿ ಜ಼ಿಂಕ್ ಅಂಶವಿದೆ. ಮೆದುಳಿನ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು.
  • ಕಡಲೇಕಾಯಿ, ಗೋಡಂಬಿ, ಸೂರ್ಯಕಾಂತಿ ಮತ್ತು ಕುಂಬಳಕಾಯಿ ಬೀಜಗಳು ಕೂಡ ಮೆದುಳಿಗೆ ಒಳ್ಳೆಯದು.
  • ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದು, ಮಿತವಾಗಿ ತುಪ್ಪವನ್ನು ಬಳಸುವುದು ಸೂಕ್ತ.
  • ರೋಗನಿರೋಧಕ ಶಕ್ತಿ ಹೆಚ್ಚಿಸುವ, ವಿಟಮಿನ್ ಸಿ ಇರುವ ದಾಳಿಂಬೆ ಮತ್ತು ಬೆರ್ರಿಗಳನ್ನು ಮಕ್ಕಳಿಗೆ ನೀಡಬಹುದು.
  • ಅರಿಶಿನ ಮತ್ತು ದಾಲ್ಚಿನ್ನಿ (ಚೆಕ್ಕೆ) ಸಹ ಮಿದುಳಿನ ಶಕ್ತಿ ಹೆಚ್ಚಿಸುತ್ತದೆ.
  • ನೀವು ಮಾಂಸಾಹಾರಿಯಾಗಿದ್ದರೆ ವಾರಕ್ಕೆ ಎರಡು ಬಾರಿ ಮೀನು ಸೇವಿಸಿ. ಮೀನಿನಲ್ಲಿ ಇರುವ ಕೋಲಿನ್ ಅನ್ನು ಬಳಸಿಕೊಂಡು ಮಿದುಳು ಆಸಿಟೈಲ್ ಕೋಲಿನ್ ಉತ್ಪಾದಿಸುತ್ತದೆ. ಇದು ಕಾಗ್ನಿಟಿವ್ ರೀಸನಿಂಗ್ (cognitive reasoning) ಮತ್ತು ಜ್ಞಾಪಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. 

ಪರೀಕ್ಷೆಯ ಸಮಯದಲ್ಲಿ ಯಾವ ಆಹಾರವನ್ನು ಸೇವಿಸಬಾರದು ?

ಪರೀಕ್ಷೆಯ ಸಮಯದಲ್ಲಿ ಟೀ, ಕಾಫಿ ಮತ್ತು ಎನರ್ಜಿ ಡ್ರಿಂಕ್ ಗಳನ್ನು ಮಿತವಾಗಿ ಸೇವಿಸಬೇಕು. ಹೆಚ್ಚು ಸೇವಿಸಿದರೆ ಆತಂಕ, ಭಯ, ಹೊಟ್ಟೆಯ ಸಮಸ್ಯೆ, ತಲೆನೋವು ಮತ್ತು ನಿದ್ರಾಹೀನತೆ ಉಂಟಾಗುತ್ತದೆ. ಕರಿದ ಮತ್ತು ಜಂಕ್ ಆಹಾರಗಳಲ್ಲಿ ಕ್ಯಾಲೋರಿ ಹೆಚ್ಚಿದ್ದು ಯಾವುದೇ ಪೌಷ್ಟಿಕಾಂಶ ಇರುವುದಿಲ್ಲ. ಅದನ್ನು ತಿನ್ನಬೇಡಿ. ಅತಿಯಾದ ಸಕ್ಕರೆ/ಸಿಹಿ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಿ ಆಲಸ್ಯ ತರಿಸುತ್ತದೆ. ಏಕಾಗ್ರತೆ, ನಿರ್ಧಾರ ಮಾಡುವ ಶಕ್ತಿ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಅತಿಯಾದ ಕೊಬ್ಬಿನಾಂಶ ಸೇವಿಸುವುದು, ಹೆಚ್ಚು ಪ್ರಮಾಣದಲ್ಲಿ ತಿನ್ನುವುದು ತಪ್ಪು. ಇದರಿಂದ ರಕ್ತವು ಮಿದುಳಿನ ಬದಲು ಜೀರ್ಣ ಕ್ರಿಯೆಯತ್ತ ಸಾಗಿ ಆಲಸ್ಯ ತರುತ್ತದೆ. ದಿನಕ್ಕೆ ನಾಲ್ಕರಿಂದ ಆರು ಬಾರಿ ಲಘುವಾಗಿ ಊಟ, ತಿಂಡಿ ಸೇವಿಸುವುದು ಒಳ್ಳೆಯ ಅಭ್ಯಾಸ.

ಓದುವಾಗ ನನಗೆ ಪ್ಯಾಕ್ಡ್ ತಿಂಡಿಗಳನ್ನು ತಿನ್ನುವ ಅಭ್ಯಾಸ ಇದೆ. ಅದರ ಬದಲಾಗಿ ಯಾವ ಆರೋಗ್ಯಕರ ತಿಂಡಿ ತಿನ್ನಬಹುದು?

ನಟ್ಸ್, ಹಣ್ಣುಗಳು, ಮೊಳಕೆ ಬರಿಸಿದ ಕಾಳುಗಳು, ಜೋಳ ಇವೆಲ್ಲವೂ ಉತ್ತಮ ತಿಂಡಿಗಳು. ಎಳನೀರು ಮತ್ತು ಕಾಬುಲ್ ಕಡಲೆಯ ಸೂಪನ್ನು ಸೇವಿಸಬಹುದು (ಕಾಬುಲ್ ಕಡಲೆಯನ್ನು ನೀರಿನಲ್ಲಿ ಕುದಿಸಿ, ಕರಿ ಉಪ್ಪು ಮತ್ತು ನಿಂಬೆ ರಸ ಸೇರಿಸಿ ಕುಡಿಯಿರಿ).

ಪರೀಕ್ಷೆಯ ವೇಳೆಯಲ್ಲಿ ಸೇವಿಸಬೇಕಾದ ಆಹಾರದ ಬಗ್ಗೆ ಸಲಹೆ ನೀಡಿ.

ಹೆಚ್ಚು ನೀರನ್ನು ಕುಡಿಯಿರಿ: ನಮ್ಮ ಮಿದುಳಿನಲ್ಲಿ 90% ಭಾಗದಷ್ಟು ನೀರು ಇದೆ. ನಿಮಗೆ ಬಾಯಾರಿಕೆ ಆಗದಿದ್ದರೂ ಅಥವಾ ಓದುವಾಗ ಮರೆತರೂ, ದಿನದಲ್ಲಿ ಸಾಕಷ್ಟು ನೀರನ್ನು ಕುಡಿಯಿರಿ. ಓದುವಾಗ ಒಂದು ಲೀಟರ್ ನೀರನ್ನು ಪಕ್ಕದಲ್ಲಿ ಇಟ್ಟುಕೊಂಡು ದಿನದಲ್ಲಿ ಕನಿಷ್ಟ ಎರಡು ಲೀಟರ್ ನೀರನ್ನಾದರೂ ಕುಡಿಯುವ ರೂಢಿ ಮಾಡಿಕೊಳ್ಳಿ.

ಡಯಟ್ ಮಾಡಬೇಡಿ ಮತ್ತು ಬೆಳಗಿನ ತಿಂಡಿ ತ್ಯಜಿಸಬೇಡಿಮಕ್ಕಳಿಗೆ ಮತ್ತು ಯುವಕರಿಗೆ ಕಡಿಮೆ ಕ್ಯಾಲೊರಿ ಡಯಟ್ ಒಳ್ಳೆಯದಲ್ಲ. ಈ ಡಯಟ್ ನಿಂದ ನೆನಪಿನ ಶಕ್ತಿ, ಏಕಾಗ್ರತೆ ಕಡಿಮೆಯಾಗಿ ಬೇಗ ಸುಸ್ತಾಗುವುದು. ಮಿದುಳು ರಾತ್ರಿಯ ವೇಳೆಯಲ್ಲಿ ಸಹ ಕೆಲಸ ಮಾಡುತ್ತದೆ. ಆದ್ದರಿಂದ ಬೆಳಗ್ಗಿನ ತಿಂಡಿ ನಿಮ್ಮ ದೇಹಕ್ಕೆ ಬೇಕಾದ ಶಕ್ತಿ ನೀಡಿ ಮಿದುಳು ಮಂಕಾಗುವುದನ್ನು ತಪ್ಪಿಸುತ್ತದೆ. ನಿಮ್ಮ ದಿನವನ್ನು ಒಳ್ಳೆಯ ಆಹಾರದೊಂದಿಗೆ ಆರಂಭಿಸಿ.