ಲಿಂಗಬೇಧ ಮತ್ತು ಲೈಂಗಿಕ ತಾರತಮ್ಯ ಕೆಲವು ಪ್ರಮುಖ ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತದೆ: ಒಬ್ಬವ್ಯಕ್ತಿ ಇತರರೆದುರು ತನ್ನನ್ನು ತಾನು ಹೇಗೆ ಪ್ರಸ್ತುತಪಡಿಸುತ್ತಾನೆ? ಯಾರ ಎದುರು, ಎಷ್ಟರ ಮಟ್ಟಿಗೆ ನಾವು ನಮ್ಮನ್ನು ತೋರ್ಪಡಿಸಿಕೊಳ್ಳಬೇಕು? ಬಾಂಧವ್ಯಗಳ್ನು ಹೇಗೆ ನಿಭಾಯಿಸಬೇಕು? ಒಬ್ಬ ವ್ಯಕ್ತಿ ಸಮಾನ ಮನಸ್ಕ ವ್ಯಕ್ತಿಯನ್ನು ಎಲ್ಲಿ ಭೇಟಿಯಾಗಬಹುದು? ಆರೋಗ್ಯ,ಶಿಕ್ಷಣ, ಉದ್ಯೋಗವನ್ನು ಹೇಗೆ ಪಡೆದುಕೊಳ್ಳಬೇಕು? ಋಣ ಅಥವಾ ಮುಲಾಜಿಗೆ ಬೀಳದೆ ಒಬ್ಬ ವ್ಯಕ್ತಿ ಯಾವ ರೀತಿಯಾಗಿ ಸಹಾಯವನ್ನು ಪಡೆಯಬೇಕು?
ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು, ಪಕ್ಷಪಾತಿಯಾಗಿರುವ ಈ ಪ್ರಪಂಚದಲ್ಲಿ ಬದುಕುವುದು ತುಂಬಾ ಕಷ್ಟ. ಇದು ಮುಸುಕಿನಡಿಯಲ್ಲಿ ಜೀವನ ನಡೆಸಿದ ಹಾಗೆ. ಭಾರತದಲ್ಲಿರುವ “ಎಲ್ ಜಿ ಬಿ ಟಿ” (ಕ್ಯೂ ಐ ಎ+) ಸಮುದಾಯಕ್ಕೆ (ಎಲ್ ಜಿ ಬಿ ಟಿ-ಲೆಸ್ಬಿಯನ್, ಗೇ, ಬೈಸೆಕ್ಸುವಲ್, ಟ್ರಾನ್ಸ್,ಕ್ವೀರ್,ಇಂಟರ್ಸೆಕ್ಸ್ಡ್,ಅಸೆಕ್ಸುವಲ್ ಇತ್ಯಾದಿ), ಸಾಮಾಜಿಕ ಹಾಗೂ ಕೌಟುಂಬಿಕ ಅಭಿಪ್ರಾಯಗಳ ಜೊತೆಜೊತೆಗೆ ಕಾನೂನಾತ್ಮಕ ಭದ್ರತೆ ಹಾಗೂ ಸುರಕ್ಷತೆಯ ಅಗತ್ಯವಿದೆ. ತಮಗಾಗಿ ತಾವೇ ನಿರ್ಮಿಸಿಕೊಂಡಂತಹ ಸಮುದಾಯಕ್ಕೆ ಇದರ ಅಗತ್ಯವಿದೆ.
ಒಬ್ಬ ವ್ಯಕ್ತಿಯ ಆಂತರಿಕ ಭಾವನೆಗಳ ಮತ್ತು ಸಮಾಜದ ನಡುವಿನ ಘರ್ಷಣೆ ತೀವ್ರ ಮಾನಸಿಕ ಖಿನ್ನತೆಗೆ ಮೂಲ ಕಾರಣವಾಗಬಹುದು. ಸಹಜವಾಗಿ ಹದಿಹರೆಯದಲ್ಲಿ ಭಾವನೆಗಳು ಚಿಗುರೊಡೆಯುತ್ತವೆ ಮತ್ತು ಬದಲಾವಣೆಗಳು ಕಂಡುಬರುತ್ತವೆ. ಅಥವಾ ಬೇರೆಯವರು ಅಂತಹ ಬದಲಾವಣೆಗಳನ್ನು ಗುರುತಿಸುತ್ತಾರೆ. ಅದರಲ್ಲೂ ಬಹಳಷ್ಟು ಮಂದಿ ಸ್ವಲ್ಪ ಕೆಟ್ಟದಾಗಿಯೇ ಪ್ರತಿಕ್ರಿಯಿಸುತ್ತಾರೆ.
ತೀವ್ರ ಖಿನ್ನತೆಗೊಳಗಾಗಿದ್ದ 14ರ ಹರಯದ ಸತ್ಯನನ್ನು ನಾವು ಬೇಟಿಯಾಗಿದ್ದೆವು. ಅವನು ತನ್ನನ್ನುತಾನು ದೂಷಿಸಿಕೊಳ್ಳುತ್ತಿದ್ದ. ಅವನೊಡನೆ ಮಾತನಾಡಿದಾಗ ನಮಗೆ ಕಂಡುಬಂದ ಅಂಶವೆಂದರೆ ಅವನಿಗೆ ಲೈಂಗಿಕತೆಯ ಬಗ್ಗೆ ಅಥವಾ ತನ್ನ ಲಿಂಗತ್ವದ ಬಗ್ಗೆ ಸ್ಪಷ್ಟತೆಯಿರಲಿಲ್ಲ. ಈ ಮನೋಭಾವವು ಇನ್ನೂ ಹಲವಾರು ಹದಿಹರೆಯದವರಲ್ಲಿ ಕಂಡುಬರುತ್ತದೆ. ಪ್ರಾರಂಭದಲ್ಲಿ ಈ ಭಾವನೆಯು ಗೊಂದಲಮಯವಾಗಿರುತ್ತದೆ ಹಾಗೂ ಮನಸ್ಸಿಗೆ ನೋವಂಟುಮಾಡುತ್ತದೆ. ಸತ್ಯ ತನ್ನ ತಾಯಿಯ ಜೊತೆ ಇದರ ಬಗ್ಗೆ ಮಾತನಾಡಿದಾಗ ಅವರ ಪ್ರತಿರೋಧ ಹಾಗೂ ನೇರವಾದ ನಿರಾಕರಣೆ ಅವನಲ್ಲಿ ಆಘಾತ ಮೂಡಿಸಿತ್ತು. ಸತ್ಯ ತೀವ್ರ ಒತ್ತಡಕ್ಕೊಳಗಾಗಿದ್ದ. ನಾವು ಅವರ ಕುಟುಂಬದವರೊಡನೆ ಮಾತನಾಡಿ ಅವನಿಗೆ ಸೂಕ್ತ ನೆರವು ನೀಡಲು, ಅವನಲ್ಲಿ ಸುರಕ್ಷಿತ ಮನೋಭಾವ ಮೂಡಿಸಲು ಪ್ರಯತ್ನಿಸಿದೆವು. ತನ್ನನ್ನು ತಾನು ಗುರುತಿಸಿಕೊಳ್ಳಲು ಮತ್ತು ತನ್ನಲ್ಲಿ ಮೂಡುತ್ತಿರುವ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಅವನಿಗೆ ನೆರವಾದೆವು. ಇದರಿಂದಾಗಿ ಸತ್ಯ ಮತ್ತು ಅವನ ಕುಟುಂಬ ಗೊಂದಲದಿಂದ ಹೊರಬಂದಿತು. ಆದರೆ ಎಲ್ಲಾ ಪ್ರಕರಣಗಳಲ್ಲೂ ಈ ರೀತಿಯ ಸುಖಾಂತ್ಯವಿರುವುದಿಲ್ಲ. ಬಹಳಷ್ಟು ಎಲ್ ಜಿ ಬಿ ಟಿ ಸಮುದಾಯದ ಯುವಕರು ಇಂತಹ ಸಮಸ್ಯೆಗಳನ್ನು ಎದುರಿಸಲು ಹೆಣಗಾಡುತ್ತಿರುತ್ತಾರೆ. ಇದರಲ್ಲಿಯೇ ಉಳಿದುಕೊಳ್ಳಬೇಕೆ? ಅಥವಾ ಸಮಸ್ಯೆಯನ್ನು ಎದುರಿಸಿ ಹೊರಬರಬೇಕೆ? ಎಂಬ ಗೊಂದಲದಲ್ಲಿರುತ್ತಾರೆ ಮತ್ತು ಕೆಲವರು ಹೊರಬರುವುದೇ ಇಲ್ಲ. ಇವೆಲ್ಲದರ ನಡುವೆ ಕೆಲವರಲ್ಲಿ ಭಯ/ಆತಂಕ ಅಧಿಕಗೊಳ್ಳುತ್ತದೆ ಮತ್ತು ಕೆಲವರು ಹೀನಾಯವಾಗಿ ಸಮಾಜದಿಂದ ತಿರಸ್ಕಾರಕ್ಕೊಳಗಾಗುತ್ತಾರೆ.
ಉದಾಹರಣೆಗೆ, ಭಾರತದಲ್ಲಿನ ಪ್ರೀಮಿಯರ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅರವಿಂದ್ ಇಂತಹ ಸಮಸ್ಯೆಯನ್ನು ಎದುರಿಸಿದ್ದ. ತನ್ನನ್ನು ಎಲ್ಲರೂ ಗೌರವದಿಂದ ಕಾಣಬೇಕೆಂದು ಅವನು ಬಯಸಿದ್ದ. ಆದರೆ ಸಹಪಾಠಿಗಳು ಆತನ ಗೌರವಕ್ಕೆ/ವ್ಯಕ್ತಿತ್ವಕ್ಕೆ ಧಕ್ಕೆತರುವಂತಹ ಟೀಕೆಗಳನ್ನು ಮಾಡುತ್ತಿದ್ದರು.ತಮ್ಮ ವಿಕೃತಿಯಿಂದ ಅವನನ್ನು ಅಪಹಾಸ್ಯ ಮಾಡುತ್ತಿದ್ದರು. ದುಷ್ಟ ಸಹಪಾಠಿಗಳು ಪುರುಷ-ಪುರುಷರ ನಡುವಿನ ಕೆಲವೊಂದು ಅಸಭ್ಯವಾದ ಲೈಂಗಿಕ ಚಟುವಟಿಕೆಯ ದೃಶ್ಯಗಳನ್ನು ‘ಕಾಲೇಜ್ ಗ್ರೂಪ್’ ನಲ್ಲಿ ಹರಿಬಿಡುತ್ತಿದ್ದರು ಮತ್ತು ಅವನ ಬೆನ್ನಹಿಂದೆ ಕೆಲವೊಂದು ಕೆಟ್ಟ ಅರ್ಥಬರುವ ಸಂಭಾಷಣೆಗಳನ್ನು ಬರೆಯುತ್ತಿದ್ದರು. ಅರವಿಂದ್ ದ್ವೇಷಪೂರಿತ ವಾತಾವರಣದಲ್ಲಿ ಬದುಕುತ್ತಿದ್ದ ಹಾಗೂ ಸಹಪಾಠಿಗಳ ದ್ವೇಷ ಅವನ ಮನಸ್ಸನ್ನು ಘಾಸಿಗೊಳಿಸಿತ್ತು. ಈ ಸಮಸ್ಯೆಯಿಂದ ಹೊರಬರಲು ಅವನಿಗೆ ಸ್ವಪರಿಶ್ರಮ ಹಾಗೂ ನೈತಿಕ ಬೆಂಬಲದ ಅಗತ್ಯವಿತ್ತು.
ಒಬ್ಬ ನಪುಂಸಕ ವ್ಯಕ್ತಿಗೆ ಅಥವಾ ಲಿಂಗ ಸ್ಥಿತ್ಯಂತರ ಹೊಂದಿರುವವರಿಗೆ ಇಂತಹ ಸನ್ನಿವೇಶಗಳನ್ನು ಎದುರಿಸುವುದು ಕಷ್ಟವಾಗಿರುತ್ತದೆ. ನಪುಂಸಕನಾಗಿದ್ದ ಸುರೇಶ್, ಎಂ ಎನ್ ಸಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಸಂದರ್ಭದಲ್ಲಿ ಇತರೆ ವ್ಯಕ್ತಿಗಳು ನಪುಂಸಕ ವ್ಯಕ್ತಿಗಳ ಬಗ್ಗೆ ಯಾವ ರೀತಿಯ ಭಾವನೆಗಳನ್ನು ಹೊಂದಿರುತ್ತಾರೆ, ಅವರು ನಮ್ಮನ್ನು ಸ್ವೀಕರಿಸುತ್ತಾರೆಯೇ? ತಾರತಮ್ಯ ಮಾಡುತ್ತಾರೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದ. ಪ್ರಾರಂಭದಲ್ಲಿ ಎಲ್ಲವೂ ಸರಿಯಿತ್ತು. ಅವನನ್ನು ಆತ್ಮೀಯವಾಗಿ ಬರಮಾಡಿಕೊಳ್ಳದಿದ್ದರೂ ಯಾರೂ ಅವನ ಬಗ್ಗೆ ಕೆಟ್ಟದಾಗಿ ವರ್ತಿಸಿರಲಿಲ್ಲ. ಆದರೆ ಒಮ್ಮೆ ಅವನ ಹುಟ್ಟುಹಬ್ಬದ ದಿವಸ ಸಿಬ್ಬಂದಿಗಳು ಒಂದಿಷ್ಟು ಬಳೆಗಳನ್ನು ಹಾಗೂ ಸ್ತ್ರೀಯರು ಬಳಸುವಂತಹ ವಸ್ತುಗಳನ್ನು ಅವನಿಗೆ ಉಡುಗೊರೆ ನೀಡಿದರು. ಈ ಪ್ರಕರಣ ತುಂಬಾ ಕ್ರೂರವಾಗಿತ್ತು ಮತ್ತು ಸುರೇಶನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತು.
ಸಮಾಜದಲ್ಲಿ ಎಲ್ ಜಿ ಬಿ ಟಿ ಸಮುದಾಯವು ಬಹಳಷ್ಟು ಸೂಕ್ಷ್ಮ ಒತ್ತಡಗಳನ್ನು, ಪೂರ್ವಾಗ್ರಹಪೀಡಿತರ ಟೀಕೆಗಳನ್ನು, ತಾರತಮ್ಯವನ್ನು ಅನುಭವಿಸುತ್ತಲೇ ಇದೆ. ಅವುಗಳಲ್ಲಿ ಕೆಲವು ಹೀಗಿವೆ :
ಇಂತಹ ಹಲವಾರು ಕೆಟ್ಟ ಅನುಭವಗಳು ಈ ಸಮುದಾಯದ ಮೇಲೆ ಪರಿಣಾಮ ಬೀರುತ್ತವೆ. ಅವರ ಆತ್ಮವಿಶ್ವಾಸ ಕುಗ್ಗುತ್ತದೆ. ಈ ಸಮುದಾಯದ ವ್ಯಕ್ತಿಗಳಲ್ಲಿ ಕೆಲವರು ಭಯ, ಆತಂಕ, ಅನಾರೋಗ್ಯ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಕೆಲವರು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.
ಪಾಶ್ಚಿಮಾತ್ಯರ ಕೆಲವು ವರದಿಗಳು, ಅಲ್ಲಿನ ಎಲ್ ಜಿ ಬಿ ಟಿ ಸಮುದಾಯದ ವ್ಯಕ್ತಿಗಳು, ಸಾಮಾನ್ಯರಿಗಿಂತ ಮೂರು ಪಟ್ಟು ಹೆಚ್ಚಿನ ಮಾನಸಿಕ ಖಿನ್ನತೆ - ಉದ್ವೇಗವನ್ನು ಹೊಂದಿರುತ್ತಾರೆ ಎಂದು ತಿಳಿಸಿದೆ. ಅದರಲ್ಲೂ ಈ ಸಮುದಾಯದ ಯುವಕರು ಸಾಮಾನ್ಯರಿಗಿಂತ ನಾಲ್ಕುಪಟ್ಟು ಹೆಚ್ಚು ಆತ್ಮಹತ್ಯೆಯ ಮನೋಭಾವ ಹೊಂದಿರುತ್ತಾರೆ ಅಥವಾ ಪ್ರಯತ್ನದಲ್ಲಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಾಮಾಜಿಕ ತುಳಿತಕ್ಕೊಳಗಾಗುವುದು ಮತ್ತು ಇನ್ನಿತರ ವಿಷಯಗಳಲ್ಲಿ ಎಲ್ ಜಿ ಬಿ ಟಿ ಸಮುದಾಯದ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿರುತ್ತಾರೆ. ಭಾರತೀಯರ ವಿಷಯದಲ್ಲಿ, ಅಂಕಿಅಂಶಗಳ ದಾಖಲೆಯನ್ನು ಗಮನಿಸಿದರೆ ಎಲ್ ಜಿ ಬಿ ಟಿ ಸಮುದಾಯದವರ ಮಾನಸಿಕ ಅಸ್ವಸ್ಥತೆಯ ಪ್ರಮಾಣ ಕಡಿಮೆಯಿದೆ, ಏಕೆಂದರೆ ಇಲ್ಲಿನ ರಾಜಕೀಯ - ಕಾನೂನು ವ್ಯವಸ್ಥೆಗಳು ಈ ಕುರಿತ ದಾಖಲಾತಿಯಲ್ಲಾಗಲೀ ಬಹಿರಂಗ ವಿಚಾರ ಮಾಡುವುದರಲ್ಲಾಗಲೀ ಆಸಕ್ತಿ ಹೊಂದಿಲ್ಲ.
ಆತ್ಮಹತ್ಯೆಗೆ ಶರಣಾಗುವಂತಹ ನಿರ್ಧಾರ ತೆಗೆದುಕೊಳ್ಳದಿದ್ದರೂ, ಭಾರತದಲ್ಲಿನ ಕೆಲವು ಎಲ್ ಜಿ ಬಿ ಟಿ ಸಮುದಾಯದ ವ್ಯಕ್ತಿಗಳು ಸಾಮಾಜಿಕ – ಸಾಂಸ್ಕೃತಿಕ ಸಮಸ್ಯೆಗಳಿಂದಾಗಿ ಬಹಳಷ್ಟು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ :
ಎಲ್ ಜಿ ಬಿ ಟಿ ಸಮುದಾಯದ ವ್ಯಕ್ತಿಗಳ ಮಾನಸಿಕ ಅಸ್ವಸ್ಥತೆಗೆ ಹಾಗು ಅವರ ಸಮಸ್ಯೆಗಳಿಗೆ ಲಿಂಗತಾರತಮ್ಯ ಅಥವಾ ಲೈಂಗಿಕತೆ ಮಾತ್ರ ಕಾರಣವಲ್ಲ. ಕೇವಲ ಒಬ್ಬ ವ್ಯಕ್ತಿಯ ಲಿಂಗ ಪ್ರಬೇಧದ ಮೇಲೆ ಮಾನಸಿಕ ಅಸ್ವಸ್ಥತೆಯು ಅವಲಂಬಿತವಾಗಿರುವುದಿಲ್ಲ. ಲಿಂಗತಾರತಮ್ಯವನ್ನು ತೊಡೆದು ಹಾಕದಿರುವುದು ಹಾಗು ಅಂತಹ ಸಮುದಾಯವನ್ನು ದೂಷಿಸುವುದರಿಂದ ಅಂತಹ ಸಮುದಾಯದಲ್ಲಿ ಮಾನಸಿಕ ಅಸ್ವಸ್ಥತೆಯ ಪ್ರಮಾಣ ಅಧಿಕಗೊಳ್ಳುತ್ತದೆ. ಇವು ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶಗಳು.
ನೆರವು ನೀಡುವುದು ಹೇಗೆ ?
ಸಮರ್ಪಕವಾದ ಕೌನ್ಸಲಿಂಗ್ ನಡೆಸುವುದರ ಮೂಲಕ ಅಥವಾ ಸಮುದಾಯವನ್ನು ಪುನರ್ನಿಮಾಣ ಮಾಡುವುದರ ಮೂಲಕ ಮಾನಸಿಕ ಅಸ್ವಸ್ಥತೆ ಹೊಂದಿರುವ ಎಲ್ ಜಿ ಬಿ ಟಿ+ ಸಮುದಾಯಕ್ಕೆ ನೆರವಾಗಬಹುದು.
ಒಬ್ಬ ಸಮಾಲೋಚಕರಾಗಿ ನಾವು ಪ್ರತಿಯೊಬ್ಬ ಜೀವಿಗೂ ಮಹತ್ವ ನೀಡಬೇಕು ಮತ್ತು ಅಸ್ವಸ್ಥತೆ ಹೊಂದಿರುವವರು ತಮ್ಮನ್ನು ತಾವು ಅರಿತುಕೊಳ್ಳಲು ನೆರವಾಗಬೇಕು. ಅವರನ್ನೂ ಎಲ್ಲರಂತೆಯೇ ಸರಿಸಮಾನವಾಗಿ ಕಾಣಬೇಕು. ಅವರ ವ್ಯಕ್ತಿತ್ವನಿರ್ಮಾಣದಲ್ಲಿ ನಾವೂ ಸಹಕಾರಿಯಾಗಿರಬೇಕು. ಅವರ ಆಯ್ಕೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಅವರ ಆತ್ಮವಿಶ್ವಾಸವನ್ನು ಬೇರುಮಟ್ಟದಿಂದಲೇ ಸಧೃಢಗೊಳಿಸಿ, ಸೂಕ್ತ ಸಹಾಯ ಮತ್ತು ಸಾಮಾಜಿಕ ಬೆಂಬಲವನ್ನು ನೀಡುವುದರ ಮೂಲಕ ಜೀವನದ ನಿಜಾರ್ಥವನ್ನು ತಿಳಿಸಬೇಕು. ಕೇವಲ ಲಿಂಗತಾರತಮ್ಯವೊಂದೇ ಮಾನಸಿಕ ಅಸ್ವಸ್ಥತೆಗೆ ಕಾರಣವೆಂಬ ಅಭಿಪ್ರಾಯವನ್ನು ನಾವು ಖಂಡಿಸಬೇಕು ಮತ್ತು ಅವರ ಅಸ್ವಸ್ಥತೆಗೆ ಕಾರಣವಾಗಿರಬಹುದಾದ ಸಾಮಾಜಿಕ ಅಸಮಾನತೆಯನ್ನು ಗುರುತಿಸಬೇಕು. ನಮ್ಮ ಸಂಸ್ಕೃತಿಯಲ್ಲಿ ಪ್ರಭುತ್ವ ಸಾಧಿಸಿರುವಂತಹ ಹಗೆ, ವೈಮನಸ್ಯ ಹಾಗೂ ಒತ್ತಡಗಳನ್ನು ಅವರಮೇಲೆ ಹೇರದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಈ ಅಂಶಗಳು ಅವರ ಖಿನ್ನತೆಯನ್ನು ಹೆಚ್ಚಿಸುತ್ತವೆ.
ಅಂತಹ ಸಮುದಾಯದ ಸದಸ್ಯರು ತಾವಾಗಿಯೇ ಅಥವಾ ಇತರೆ ಸೇವಾಸಂಸ್ಥೆಗಳ ನೆರವು ಪಡೆದುಕೊಂಡು ತಮ್ಮ ಸಮುದಾಯವನ್ನು ಕಟ್ಟಿಕೊಳ್ಳಬೇಕು. ಇದರಿಂದ ಎಲ್ ಜಿ ಬಿ ಟಿ+ ವ್ಯಕ್ತಿಗಳ ಮಾನಸಿಕ ಅಸ್ವಸ್ಥತೆ ಸುಧಾರಿಸಬಹುದು. ಇದರಿಂದ ಅವರು ಸುರಕ್ಷಿತರಾಗಿರಬಹುದು. ತಮ್ಮ ಸ್ವಾಸ್ಥ್ಯದ ಬಗ್ಗೆ ಮತ್ತು ಸ್ವಸ್ಥ ಜೀವನ ನಡೆಸುವುದರ ಬಗ್ಗೆ ಅರಿವು ಮೂಡಿಸಿಕೊಳ್ಳಬಹುದು. ಅಗತ್ಯ ಬಿದ್ದಾಗ ಕಾನೂನು ನೆರವು ಪಡೆಯಬಹುದು. ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬಹುದು. ಅಡ್ಡಿ-ಆತಂಕಗಳನ್ನು ನಿವಾರಿಸಿಕೊಳ್ಳಬಹುದು ಹಾಗೂ ಸದೃಢರಾಗುವ ಮೂಲಕ ಚೇತರಿಸಿಕೊಂಡು ಮುಂದೆ ಸಾಗಬಹುದು.
(ಈ ಲೇಖನದಲ್ಲಿ ಸಮುದಾಯದವ್ಯಕ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಹೆಸರುಗಳನ್ನು ಬದಲಾಯಿಸಲಾಗಿದೆ)
References:
ಮಹೇಶ್ ನಟರಾಜನ್, InnerSight counselling and training center LLP (www.innersight.in)ಯಲ್ಲಿ ಕೌನ್ಸೆಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.