ಬಾಲ್ಯ

ಮಗುವಿನ ಬೆಡ್ ವೆಟ್ಟಿಂಗ್ ಸಮಸ್ಯೆಗೆ ಪರಿಹಾರ

ವೈಟ್ ಸ್ವಾನ್ ಫೌಂಡೇಶನ್

‘ದಿ ಲೋನ್ಲಿಯಸ್ಟ್ ರನ್ನರ್’- ಸೆಮಿ ಆಟೋಬಯೋಗ್ರಫಿಕಲ್ ಸಿನಿಮಾದ ಬಗ್ಗೆ ಕೇಳಿದ್ದೀರಾ ? ಈ ಸಿನಿಮಾದಲ್ಲಿ ಮೈಕಲ್ ಲಾಂಗ್ಡನ್ ಎನ್ನುವ ಹುಡುಗ ತನ್ನ ಹದಿನಾಲ್ಕನೇ ವಯಸ್ಸಿನವರೆಗೂ ಬೆಡ್ ವೆಟ್ಟಿಂಗ್ ಸಮಸ್ಯೆಯ ಜೊತೆ ಹೋರಾಡಿದ ಚಿತ್ರಕಥೆಯಿದು. ಇವನ ಬೆಡ್ ವೆಟ್ಟಿಂಗ್ ಸಮಸ್ಯೆಯನ್ನು ನಿಲ್ಲಿಸಲು, ಈತನ ತಾಯಿ ಪೆಗ್ಗಿ, ಪ್ರತೀ ಸಲ ಮೂತ್ರದಿಂದ ಒದ್ದೆಯಾದ ಬೆಡ್ಶೀಟನ್ನು ಎಲ್ಲರಿಗೂ ಕಾಣುವಂತೆ ಕಿಟಿಯ ಬಳಿ ಒಣಗಲು ಹಾಕುತ್ತಾರೆ ಏಕೆಂದರೆ ಇದನ್ನು ಅವನ ಸ್ನೇಹಿತರು ನೋಡಿ ಅಪಹಾಸ್ಯ ಮಾಡಿದರೆ, ಆತ ಬೆಡ್ ವೆಟ್ಟಿಂಗ್ ಮಾಡುವುದನ್ನು ನಿಲ್ಲಿಸಬಹುದು ಎಂದು ಭಾವಿಸುತ್ತಾರೆ.

ಈ ಪೇಚಾಟಕ್ಕೆ ಸಿಲುಕುತ್ತಿದ್ದ ಮೈಕಲ್,  ಪ್ರತೀ ಸಂಜೆ, ಶಾಲೆ ಬಿಟ್ಟ ತಕ್ಷಣ ಮನೆಗೆ ಓಡಿಬಂದು ಬೆಡ್ಶೀಟ್ ತೆಗೆದು ಒಳಗೆ ಹಾಕುತ್ತಿದ್ದ. ಈ ಓಟದ ಅಭ್ಯಾಸದಿಂದ ಮುಂದೊಂದು ದಿನ ಅಥ್ಲೀಟ್ ಆಗಿ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಸ್ಕಾಲರ್ ಶಿಪ್ ಪಡೆಯುವಂತಾಗುತ್ತದೆ. ಆದರೆ ಅವನು ಓಲಪಿಂಕ್ ಅಥ್ಲೀಟ್ ಆಗುವ ಕನಸು ನೇರವೇರುವುದಿಲ್ಲ. ಮುಂದೊಮ್ಮೆ ಸಿನಿಮಾರಂಗದ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾನೆ.ಈಗ ಮೈಕಲ್ ಪ್ರಖ್ಯಾತ ಟಿವಿ ಕಲಾವಿದ, ನಿರ್ದೇಶಕ ಮತ್ತು ನಿರ್ಮಾಪಕ. ಇದುವರೆಗೂ ಯಾರಿಗೂ ತಿಳಿಯದ ವಿಷಯವೇನೆಂದರೆ, ಮೈಕಲ್ನ ತಾಯಿಯ ಕಠಿಣ ವರ್ತನೆಯಿಂದ ಆತನ ಮನೋಸ್ಥೈರ್ಯಕ್ಕೆ ಧಕ್ಕೆಯುಂಟಾಗಿರುತ್ತದೆ ಮತ್ತು ಈ ಕಹಿ ನೆನಪಿನಿಂದ  ಹೊರಗೆ ಬಂದು ಸಹಜಸ್ಥಿತಿಗೆ ಮರಳಲು ಅವನಿಗೆ  ವರ್ಷಗಳೇ ಬೇಕಾಯಿತು.

ಎಲ್ಲಾ ಪೋಷಕರು ಮೈಕಲ್ ನ ತಾಯಿಯಂತೆ ವರ್ತಿಸುವುದಿಲ್ಲ. ಆದರೆ ಇತ್ತೀಚಿಗಿನ ಸಂಶೋಧನೆಗಳ ಪ್ರಕಾರ, ಬೆಡ್ ವೆಟ್ಟಿಂಗ್ ಸಮಸ್ಯೆಯಿರುವ ಮಗುವಿನ ಪೋಷಕರ ಅಥವ ಆರೈಕೆದಾರರ ಪ್ರತಿಕ್ರಿಯೆ/ವರ್ತನೆ, ಮಗುವಿನ ಮನಸ್ಸಿನ ಆತ್ಮಗೌರವದ  ಮೇಲೆ ಪರಿಣಾಮ ಬೀರುತ್ತದೆ.

ಬೆಡ್ ವೆಟ್ಟಿಂಗ್ ಎಂದರೆ ಏನು ? 

ವೈದ್ಯಕೀಯ ಭಾಷೆಯಲ್ಲಿ ಇದನ್ನು ಎನ್ಯುರಿಸಿಸ್ (enuresis) ಎನ್ನುವರು. ಅಂದರೆ ಮಲಗಿದ್ದಾಗ ಅರಿವಿಲ್ಲದೇ ಮೂತ್ರ ಮಾಡುವುದು. ಈ ಸಮಸ್ಯೆ ಹಗಲಿನಲ್ಲಿ (ಡಯಾರ್ನಲ್) ಮತ್ತು ರಾತ್ರಿಯ ಹೊತ್ತು (ನಾಕ್ಟರ್ನಲ್), ಯಾವಾಗ ಬೇಕಾದರೂ ಉಂಟಾಗುತ್ತದೆ. ಆದರೆ ರಾತ್ರಿಯ ಹೊತ್ತು  ಸರ್ವೇ ಸಾಮಾನ್ಯ. ಇದು ಎರಡು ರೀತಿ ಕಾಣಿಸಿಕೊಳ್ಳುತ್ತದೆ: ಪ್ರೈಮರಿ ಎನ್ಯುರಿಸಿಸ್ ಮತ್ತು ಸೆಕಂಡರಿ ಎನ್ಯುರಿಸಿಸ್.

ಪ್ರೈಮರಿ ಎನ್ಯುರಿಸಿಸ್ ಎಂದರೆ ಮಗುವಾಗಿದ್ದಾಗ ಬೆಡ್ ವೆಟ್ಟಿಂಗ್ ಸಮಸ್ಯೆ ಶುರುವಾಗಿ ಬೆಳದ ನಂತರವೂ ನಿಯಂತ್ರಣಕ್ಕೆ ಬರದೇ ಇರುವುದು.  

ಸೆಕೆಂಡರಿ ಎನ್ಯುರಿಸಿಸ್ ಎಂದರೆ, ಮಕ್ಕಳು ಅಥವ ತರುಣಾವಸ್ಥೆ ತಲುಪಿದ ನಂತರವೂ ಬೆಡ್ ವೆಟ್ಟಿಂಗ್ ಸಮಸ್ಯೆ ಇರುವುದು. ಹಲವಾರು ತಿಂಗಳು/ ವರ್ಷಗಳು ಸ್ವಯಂ ನಿಯಂತ್ರಣದ ಬಗ್ಗೆ ತಿಳುವಳಿಕೆ ನೀಡಿದರೂ ನಿಲ್ಲದೇ ಇರುವುದು.

ಒಂದು ವೇಳೆ ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದರೆ, ಬೇಕೆಂದೇ ಹೀಗೆ ಮಾಡುತ್ತಿದೆ ಎಂದು ತಿಳಿಯಬೇಡಿ. ಮಗುವಿಗೆ  ಐದು ವರ್ಷ ಆಗುವವರೆಗೂ ಈ ಸಮಸ್ಯೆ ಸಹಜ ಮತ್ತು  ಕ್ರಮೇಣ  ನಿಯಂತ್ರಣಕ್ಕೆ ಬರುತ್ತದೆ. ಕೆಲವೊಮ್ಮೆ ಮೂತ್ರಕೋಶದ ಪಕ್ವತೆ/ ಬೆಳವಣಿಗೆ  ನಿಧಾನವಾದಾಗ ಎನ್ಯುರಿಸಿಸ್ ಸಮಸ್ಯೆ ಆಗಬಹುದು.  

ಹಲವಾರು ಸಂದರ್ಭಗಳಲ್ಲಿ  ಬೆಡ್ ವೆಟ್ಟಿಂಗ್ ಸಮಸ್ಯೆಯಾಗಬಹುದು: ಕೆಲವೊಮ್ಮೆ ಮಗುವಿನ ಶಾಲೆ ಬದಲಾಯಿಸಿದಾಗ, ಅಥವ ಮನೆಯಲ್ಲಿ ಮತ್ತೊಂದು ಮಗು ಜನಿಸಿದಾಗ(ತಮ್ಮ/ತಂಗಿ) ಮನೆ ಅಥವ ಶಾಲೆಯಲ್ಲಿ ಕಿರುಕುಳವಾದಾಗ, ಮಗುವಿನ ಕಡೆ ಗಮನ ಹರಿಸದಿದ್ದಾಗ, ತಂದೆ ತಾಯಿಯಲ್ಲಿ ಬಿರುಕು ಕಾಣಿಸಿದಾಗ, ಶಾಲೆಯಲ್ಲಿ ಬೆದರಿಕೆಗೆ/ಬುಲ್ಲಿಯಿಂಗ್ಗೆ  ಒಳಗಾದಾಗ, ಟೀಚರ್  ಶಿಕ್ಷೆ ಕೊಟ್ಟಾಗ,ಯಾವುದಾದರೂ ಹಾರರ್ ಸಿನಿಮಾ ನೋಡಿ ಹೆದರಿದ ಘಟನೆ ಮನಸ್ಸಿನಲ್ಲಿ ಉಳಿದಿದ್ದರೆ, ಇತ್ಯಾದಿ .

ಮಗುವಿಗೆ ಪೋಷಕರು ಈ ರೀತಿ ಸಹಾಯ ಮಾಡಬಹುದು: ಮಗುವಿನ ಬೆಳವಣಿಗೆಯ ಹಂತದಲ್ಲಿ ಬೆಡ್ ವೆಟ್ಟಿಂಗ್ ಸಮಸ್ಯೆ  ಸಾಮಾನ್ಯ. ಈ ಒಂದು ಕಾರಣಕ್ಕೆ  ಮಗುವಿನೊಂದಿಗೆ ನಿಮ್ಮ ವರ್ತನೆ  ಕಠಿಣವಾಗದಿರಲಿ.

  • ಎನ್ಯುರಿಸಿಸ್ ಸಮಸ್ಯೆ ಮಗುವಿಗೆ ಅರಿವಿಲ್ಲದೇ ಆಗುವಂತದ್ದು. ಈ ಕಾರಣಕ್ಕಾಗಿ ಮಗುವಿಗೆ ಶಿಕ್ಷಿಸಿ ಅಥವ ಮಗುವನ್ನು ಬೇರೆ ಜಾಗಕ್ಕೆ ಕಳಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ.
  • ನೀವು ಆಡುವ ಮಾತುಗಳ ಬಗ್ಗೆ ಎಚ್ಚರಿಕೆಯಿರಲಿ. ತಿರಸ್ಕಾರ ಮನೋಭಾವದಿಂದ ನೋಡಬೇಡಿ. ಟೀಕೆ/ಕೊಂಕು ಮಾತಿನಿಂದ ಮಗುವಿನ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ ಮತ್ತು ಅದರ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮಗುವಿಗೆ ಬೆಡ್ ವೆಟ್ಟಿಂಗ್ ಸಮಸ್ಯೆ ಬಗ್ಗೆ ತಿಳುವಳಿಕೆ ನೀಡಿ. ಇದು ಆ ವಯಸ್ಸಿನಲ್ಲಿ ಸಹಜ ಮತ್ತು ಇದು ಹಲವಾರು ಮಕ್ಕಳಿಗೆ ಇರುತ್ತದೆ ಎಂದು ಸಾಂತ್ವನ ನೀಡಿ. ಒದ್ದೆಯಾದ ಹಾಸಿಗೆಯನ್ನು ಸ್ವಚ್ಛಗೊಳಿಸಲು ಮಗುವಿನ ಸಹಾಯ ಪಡೆಯಿರಿ. ಆದರೆ ಇದು ಶಿಕ್ಷೆಯಾಗದಿರಲಿ.
  • ಬೇರೆಯವರು ಟೀಕಿಸುವುದಿಲ್ಲ ಎಂಬ ಭರವಸೆಯನ್ನು ಮಗುವಿಗೆ ನೀಡಿ. ಈ ವಿಷಯದ ಬಗ್ಗೆ ಹಾಸ್ಯ ಮಾಡಬೇಡಿ ಮತ್ತು ಕುಟುಂಬದವರೊಂದಿಗೆ ಅಥವ ಮಗುವಿನ ಸ್ನೇಹಿತರೊಂದಿಗೆ ಇದನ್ನು ಚರ್ಚಿಸಬೇಡಿ. ಆಗ ಯರೂ ಆ ಮಗುವನ್ನು ಟೀಕಿಸುವುದಿಲ್ಲ. ನೀವು ಈ ರೀತಿ ಮಾಡಿದರೆ, ಮಗುವಿಗೆ ನಿಮ್ಮ ಮೇಲೆ ನಂಬಿಕೆ ಮೂಡುತ್ತದೆ. ಈ ಸಮಸ್ಯೆಯಿಂದ ಹೊರಗೆ ಬರಲು ಸಾಧ್ಯ  ಎಂಬ ವಿಶ್ವಾಸ ಮೂಡಿಸಿ ಮತ್ತು ನೀವು ಸಹಾಯ ಮಾಡಿ. ರಾತ್ರಿ ಊಟದ ನಂತರ ಹೆಚ್ಚು ನೀರು ಕುಡಿಯದಂತೆ ನೋಡಿಕೊಳ್ಳಿ. ಮಲಗುವ ಮುನ್ನ  ಮೂತ್ರ ಮಾಡಲು ಹೇಳಿ. ಮಧ್ಯರಾತ್ರಿಯಲ್ಲಿ ಎಚ್ಚರಿಸಿ ಮೂತ್ರ ಮಾಡಿಸಿ.

 ಬೆಡ್ ವೆಟ್ಟಿಂಗ್ ಬಗ್ಗೆ  ಮಗುವಿಗೆ ವಿವರಿಸುವುದು:

  • ಕಿಡ್ನಿಯಲ್ಲಿ ಮೂತ್ರ ಉತ್ಪತ್ತಿಯಾಗಿ, ಮೂತ್ರಕೋಶಕ್ಕೆ ಕಳುಹಿಸುತ್ತದೆ
  • ಮೂತ್ರಕೋಶದಲ್ಲಿ ಮೂತ್ರ ತುಂಬಿದ ನಂತರ ಮೆದುಳಿಗೆ ಸಂದೇಶ ಹೋಗುತ್ತದೆ.  
  • ಮೆದುಳು ಮೂತ್ರಕೋಶಕ್ಕೆ ಮರುಸಂದೇಶ ಕಳಿಸಿದಾಗ, ಟಾಯ್ಲೆಟ್ ಗೆ ಹೋಗಬೇಕು ಎಂದು ಅನ್ನಿಸುತ್ತದೆ
  • ಹೀಗೆ ಮೆದುಳು ಮತ್ತು ಮೂತ್ರಕೋಶದ ನಡುವೆ ಸರಿಯಾದ ಸಂಪರ್ಕ ಇದ್ದಾಗ ನಾವು ಹಾಸಿಗೆ ಮೇಲೆ ಮೂತ್ರ ಮಾಡಿಕೊಳ್ಳುವುದಿಲ್ಲ ಎಂದು ವಿವರಿಸಿ.

ಮಾಹಿತಿ ಕೊಡುಗೆ : ಡಾ. ನಿತ್ಯ ಪೂರ್ಣಿಮಾ, ಕ್ಲಿನಿಕಲ್ ಸೈಕಾಲಜಿಸ್ಟ್, ನಿಮ್ಹಾನ್ಸ್