ನನ್ನ ಆರಂಭಿಕ ಲೇಖನದಲ್ಲಿ, ನಾನು ಮಕ್ಕಳ ಪಾಲನೆ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ಪರೊಶೋಧಿಸುವುದಾಗಿ ತಿಳಿಸಿದ್ದೆ. ಅದರ ಭಾಗವಾಗಿ ಪಾಲಕರ ಹತಾಶೆಯು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸುತ್ತಿದ್ದೇನೆ.
ಪಠ್ಯ ಚಟುವಟಿಕೆಗಳಲ್ಲಿ ಕಳಪೆ ಪ್ರದರ್ಶನದ ನೀಡುತ್ತಿರುವ ಕಾರಣಕ್ಕೆ ಹದಿಹರೆಯಕ್ಕೆ ಕಾಲಿಡುತ್ತಿರುವ ಓರ್ವ ಮಗುವನ್ನು (6ನೇ ತರಗತಿ) ಅವಳ ಶಿಕ್ಷಕರು ನನ್ನ ಬಳಿ ಕಳುಹಿಸಿದ್ದರು. ಮಗು ತುಂಬ ವಿಚಲಿತಗೊಂಡಿದ್ದು ಏಕಾಗ್ರತೆಯ ಸಮಸ್ಯೆಯಿರಬಹುದೆಂದು ಶಿಕ್ಷಕರು ಭಾವಿಸಿದ್ದರು. ಪೋಷಕರ ಜೊತೆ ಹಲವು ಬಾರಿ ಮಾತನಾಡಿದ ನಂತರ, ಮೇಲ್ನೋಟಕ್ಕೆ ತೋರುವುದಕ್ಕಿಂತಲೂ ಹೆಚ್ಚಾಗಿ ಮಗುವಿಗೆ ಬೇರೆ ಏನೋ ಸಮಸ್ಯೆ ಇರಬೇಕೆಂದು ಅವರು ಊಹಿಸಿದ್ದರು. ಹೀಗೆ ಆ ಮಗುವನ್ನು ನನ್ನ ಬಳಿ ಕರೆತಂದರು. ಅದೃಷ್ಟವಶಾತ್ ನಾವು ಬಹು ಬೇಗ ಮುಕ್ತವಾಗಿ ಮಾತನಾಡುವುದು ಸಾಧ್ಯವಾಯಿತು.
ಸಣ್ಣದೊಂದು ವಿಚಾರಣೆಯ ಬಳಿಕ, ಆ ಮಗುವು ತನ್ನ ಕಾಲುಗಳ ಮೇಲಿರುವ ಕಲೆಗಳನ್ನು ತೋರಿಸಿತು. ಅದು ಆಕೆಯ ತಾಯಿಯು ಬಿಸಿಯಾದ ಕಬ್ಬಿಣದ ಸಲಾಕೆಯಿಂದ ಹಾಕಿದ ಬರೆಯ ಗುರುತಾಗಿತ್ತು. ಆಪ್ತ ಸಮಾಲೋಚಕರಾಗಿ ನಿಮಗೆ ಏನೇ ಅನುಭವವಿದ್ದರೂ ಕೆಲವು ಸಂದರ್ಭಗಳು ನಿಮ್ಮನ್ನು ನಿಶ್ಚೇಷ್ಟಿತಗೊಳಿಸುತ್ತವೆ. ಇದೂ ಅಂತಹುದೇ ಒಂದು ಸಂದರ್ಭವಾಗಿತ್ತು. ಸುಮಾರು ಅದೇ ವಯಸ್ಸಿನ ಹೆಣ್ಣು ಮಗುವಿನ ತಾಯಿಯಾದ ನನಗೆ ಇದನ್ನು ಅರಗಿಸಿಕೊಳ್ಳುವುದು ಪ್ರಯಾಸವೆನಿಸಿತ್ತು.
ಇದನ್ನು ನಿಭಾಯಿಸಲು ಬಹಳ ಶ್ರಮವಹಿಸಬೇಕಾದ ಅವಶ್ಯಕತೆಯಿತ್ತು. ಇದರಲ್ಲಿ ಬಹುದೂರ ಸಾಗಬೇಕಾಗಿದೆಯೆಂದು ನನ್ನನ್ನು ನಾನು ಅಣಿಗೊಳಿಸಿಕೊಂಡೆ. ನಾನು ಮಗುವಿನ ಪಾಲಕರನ್ನು ಭೇಟಿ ಮಾಡಿ ಸಂಪೂರ್ಣ ಚಿತ್ರಣವನ್ನು ಅಥವಾ ಅವರು ನನಗೆ ಹೇಳ ಬಯಸಿದಷ್ಟು ವಿವರಗಳನ್ನು ಪಡೆಯಲು ನಿರ್ಧರಿಸಿದೆ. ಒಬ್ಬ ತಾಯಿ ತನ್ನದೇ ಮಗುವಿಗೆ ಆ ರೀತಿಯ ನೋವನ್ನು ಉಂಟುಮಾಡುವ ಕಾರಣವಾದರೂ ಏನಿತ್ತು?
ಹಲವು ಬಾರಿ ಎಡೆಬಿಡದೇ ಕರೆಮಾಡಿದ ನಂತರದಲ್ಲಿ, ಕೊನೆಗೂ ಪಾಲಕರು ನನ್ನನ್ನು ಕಾಣಲು ಬಂದರು. ಇಬ್ಬರೂ ಪಾಲಕರು ಪೂರ್ಣಾವಧಿಯ ಕೆಲಸದಲ್ಲಿದ್ದರು ಎಂಬುದನ್ನು ತಿಳಿದುಕೊಂಡೆ. ಮಗುವಿನ ಪಠ್ಯ ಚಟುವಟಿಕೆಗಳಲ್ಲಿ ಉತ್ಸಾಹವು ಕುಂಠಿತಗೊಳ್ಳಲಾರಂಭಿಸಿದಾಗ, ಅವಳನ್ನು ಕಲಿಕೆಯ ಅಸಾಮರ್ಥ್ಯ ಮೌಲ್ಯಮಾಪನ ಪರೀಕ್ಷೆಗೆ ಒಳಪಡಿಸಲಾಯಿತು. ಶಾಲೆಗೆ ಪಾಲಕರನ್ನು ಕರೆಸಿ ಈ ಬಗ್ಗೆ ಮಾಹಿತಿಯನ್ನು ನೀಡಲಾಯಿತು ಮತ್ತು ಮಗುವಿಗೆ ವೈಯಕ್ತಿಕ ಗಮನದ ಅವಶ್ಯಕತೆಯಿರುವುದನ್ನು ಒತ್ತಿ ಹೇಳಲಾಯಿತು. ಶಾಲೆಯವರು ಮಗುವಿನ ಮೇಲೆ ಹೆಚ್ಚಿನ ಗಮನ ನೀಡುವಂತೆ ಒತ್ತಡ ಹೇರಲಾರಂಭಿಸಿದರು. ಹತಾಶಳಾದ ತಾಯಿ ಮಗುವಿನತ್ತ ಗಮನ ನೀಡಲು ತನ್ನ ವೃತ್ತಿಯನ್ನೇ ಬಿಟ್ಟಳು.
ಆಕೆಯ ಅಸಮಾಧಾನಗಳೇನಿದ್ದವು? ಕೇವಲ ಮಗುವಿಗಾಗಿ ತನ್ನ ಉದ್ಯೋಗವನ್ನು ತ್ಯಜಿಸುವುದಷ್ಟೇ ಅಲ್ಲದೇ, ಇನ್ನೂ ಅನೇಕ ಅಸಮಾಧಾನಗಳು ಅವಳಲ್ಲಿ ಮೂಡಿದ್ದವು. ಆಕೆಯು ಲಿಂಗ ಸಮಾನತೆ (ಯಾಕೆ ಯಾವಾಗಲೂ ತಾಯಿಯೇ ತನ್ನ ವೃತ್ತಿಯನ್ನು ತ್ಯಾಗ ಮಾಡಬೇಕು, ತಂದೆ ಏಕಿಲ್ಲ?) ಮತ್ತು ಸ್ವ-ಗೌರವ (ಉದ್ಯೋಗವು ನೀಡುವ ಹೊರಜಗತ್ತಿನ ಮೆಚ್ಚುಗೆಯನ್ನು ಮಕ್ಕಳ ಲಾಲನೆ-ಪಾಲನೆಯು ನೀಡದಿರುವುದು), ವೈವಾಹಿಕ ಜೀವನದಲ್ಲಿ ಅಸಂತೃಪ್ತಿ (ಪತಿಯು ಯಾಕೆ ನನ್ನನ್ನೇ ಕೆಲಸ ಬಿಡಲು ಒತ್ತಯಿಸಬೇಕು? ತನಗೆ ಬೇಕಾದ ಗೌರವವನ್ನು ಪತಿಯು ಏಕೆ ನೀಡುವುದಿಲ್ಲ) ಮತ್ತು ತನ್ನ ಪಾಲಕರು ಮತ್ತು ಅತ್ತೆ-ಮಾವಂದಿರ ಮೇಲಿನ ಕೋಪ (ಅವರೇಕೆ ಬಂದು ಮಗುವನ್ನು ನೋಡಿಕೊಳ್ಳಬಾರದು) ಮುಂತಾಗಿ ಆಕೆಗೆ ಅನೇಕ ಅಸಮಾಧಾನಗಳಿದ್ದವು.
ಎಷ್ಟೆಲ್ಲಾ ಹೊರೆ! ಇನ್ನೂ ಇದ್ದವೋ ಎನೋ? ಆದರೆ ಆ ಅಲ್ಪಾವಧಿಯ ಭೇಟಿಯಲ್ಲಿ ಅಷ್ಟು ದೂರ ಕ್ರಮಿಸಲು ಮಾತ್ರ ಸಾಧ್ಯವಾಯಿತು. ಆ ಭೇಟಿಯ ನಂತರ ಆಕೆ ಮತ್ತೆ ಬರಲೇ ಇಲ್ಲ.
ಆದರೆ ಈ ಹೊರೆಯಿಂದ ಸಂಕಷ್ಟಗೊಳಗಾಗಿದ್ದು ಯಾರು? ತನ್ನ ಸ್ನೇಹಿತರ ತಾಯಂದಿರು ತಮ್ಮ ಮಕ್ಕಳನ್ನು ಅಷ್ಟೊಂದು ಇಷ್ಟ ಪಡುತ್ತಿರುವಾಗ ತನ್ನ ತಾಯಿ ತನ್ನನ್ನು ಯಾಕೆ ದ್ವೇಷಿಸುತ್ತಾಳೆಂದು ಅರಿಯದ 13 ವರ್ಷದ ಅಮಾಯಕ ಮಗುವದು. ತಾಯಿಯು ತನ್ನ ಬಗ್ಗೆ ಯಾವಾಗ ಗದರುತ್ತಾಳೆಂದು ತಿಳಿಯದೇ ಮಾನಸಿಕ ಮತ್ತು ದೈಹಿಕ ನೋವಿನಿಂದ ಭಯದಲ್ಲೇ ಬದುಕುತ್ತಿತ್ತು. ಮನೆಯ ಸಮಸ್ಯೆಯನ್ನು ಹೊರಗಡೆ ಬಹಿರಂಗಗೊಳಿಸದೇ, ಹೇಳಿಕೊಳ್ಳಲು ಯಾರೂ ಇಲ್ಲದೇ ಆ ಮಗು ಪರಿತಪಿಸುತ್ತಿತ್ತು. ತಾನು ತನ್ನ ಕುಟುಂಬಕ್ಕೆ ಅಂಟಿದ ಶಾಪವೆಂದೂ, ಬದುಕಲು ಅನರ್ಹವೆಂದೂ ಭಾವಿಸಿ ಸಂಕಟ ಪಡುತ್ತಿತ್ತು. ಆದ್ದರಿಂದ ಮಗುವು ಶಾಲೆಯ ಅಭ್ಯಾಸಕ್ಕೆ ಗಮನ ಕೊಡಲು ವಿಫಲವಾದುದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ.
ಮೊದಲ ಕೆಲವು ಸಮಾಲೋಚನೆಯ ನಂತರ ನಾನು ಆಕೆಯನ್ನು ಎಂದೂ ಭೇಟಿಯಾಗಲಿಲ್ಲ. ಆಕೆಯ ಪಾಲಕರು ಕೂಡಾ ಆಕೆಯ ಶಾಲೆಯನ್ನು ಬದಲಾಯಿಸಿದ್ದರು. ನಾನು ಅವರಿಗೆ ಸೂಚಿಸಿದಂತೆ ವೈಯಕ್ತಿಕ ಸೆಷನ್ನಿಗಾಗಲೀ ಅಥವಾ ಕೌಟುಂಬಿಕ ಸೆಷನ್ನಿಗಾಗಲೀ ಅವರು ಹಾಜರಾಗಲಿಲ್ಲ. ಅವರ ಪ್ರಕಾರ ಶಾಲೆಯಲ್ಲಿಯೇ ಸಮಸ್ಯೆಯಿತ್ತೇ ಹೊರತು, ಅವರಲ್ಲಲ್ಲ!
ಹಲವು ಪ್ರಶ್ನೆಗಳು ನನ್ನಲ್ಲೇ ಉಳಿದ ಹೋದವು, ಅದರಲ್ಲಿ ಕೆಲವನ್ನು ನಾನಿಲ್ಲಿ ಪ್ರಸ್ತಾಪಿಸಬಯಸುತ್ತೇನೆ.
ಒಂದುವೇಳೆ ತಾಯಿಯು ತನ್ನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಸರಿಪಡಿಸಿಕೊಳ್ಳಲು ಮತ್ತು ಎದುರಿಸಲು ಪ್ರಯತ್ನಿಸಿದ್ದರೆ ಸಂದರ್ಭವು ಹೇಗೆ ಬೇರೇಯಾಗಿರುತ್ತಿತ್ತು? ಆಕೆಯ ತಾಯಿಯ ಹತಾಶೆಗಳನ್ನು ನಾನು ಪೂರ್ತಿ ತಳ್ಳಿಹಾಕುತ್ತಿಲ್ಲ. ಅವು ಸರಿಯೇ. ಆದರೆ ಆಕೆಯು ಅವುಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿದ್ದಲ್ಲಿ, ತನ್ನ ಅಸಮಾಧಾನವನ್ನು ಮಗುವಿನ ಮೇಲೆ ಹೇರುವ ಅವಶ್ಯಕತೆಯುಂಟಾಗುತ್ತಿರಲಿಲ್ಲ. ಅವನ್ನು ನಿಭಾಯಿಸುವ ಮೊದಲ ಹಂತವೆಂದರೆ, ಅದನ್ನು ಗುರುತಿಸುವುದು, ಒಪ್ಪಿಕೊಳ್ಳುವುದು ಮತ್ತು ಏನಾಗುತ್ತಿದೆಯೆಂದು ತಿಳಿದುಕೊಳ್ಳುವುದು.
ಈ ರೀತಿ ತಮ್ಮ ವೈಯಕ್ತಿಕ ಹತಾಶೆಯನ್ನು ಮಗುವಿನ ಮೇಲೆ ತೋರಿಸುವುದರಿಂದ ಆ ಮಗುವಿನ ಮಾನಸಿಕ ಆರೋಗ್ಯ ಮತ್ತು ಬೆಳವಣಿಗೆಯ ಮೇಲಾಗುವ ದೀರ್ಘಕಾಲೀನ ಪರಿಣಾಮವೇನು? ನನ್ನ ಬಳಿ ದಾಖಲೆಯಿಲ್ಲದಿದ್ದರೂ, ನಾನು ಊಹಿಸಿ ಹೇಳಬಲ್ಲೆ. ಆಕೆಯು ಅತ್ಯಂತ ಕಡಿಮೆ ಆತ್ಮವಿಶ್ವಾಸವಿರುವ ವಯಸ್ಕಳಾಗಿ ಬೆಳೆಯಬಹುದು ಮತ್ತು ಇದರಿಂದ ಆಕೆಯ ವೈಯಕ್ತಿಕ ಮತ್ತು ಔದ್ಯೋಗಿಕ ಸಂಬಂಧಗಳ ಮೇಲೂ ವ್ಯತಿರಿಕ್ತ ಪರಿಣಾಮವಾಗಬಹುದು. ಬದುಕಿನ ಉಳಿದ ಸಂಬಂಧಗಳ ಕುರಿತು ಆಕೆ ನಂಬಿಕೆ ಕಳೆದುಕೊಳ್ಳಬಹುದು. ಒಬ್ಬರ ರಕ್ಷಣಾತ್ಮಕ ಕವಚವಿಲ್ಲದೇ ಆಕೆ ತನ್ನ ಸುರಕ್ಷಾ ವಲಯದಿಂದ ಹೊರಬೀಳಲಾರಳು. ಇದರಿಂದ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲಾರಳು. ಆಕೆ ಕೂಡಾ ತನ್ನ ಮಕ್ಕಳ ಮೇಲೆ ತನ್ನ ಅಸಮಾಧಾನವನ್ನು ಹೊರಹಾಕಬಹುದು-ಏಕೆಂದರೆ ಆಕೆ ಕೂಡಾ ಬೇರೆ ರೀತಿಯ ಪಾಲನೆಯನ್ನು ನೋಡಿರುವುದಿಲ್ಲ.
ನಿಮಗೆ ತಿಳಿದಿರುವಂತೆ, ತಾಯಿಯು ತನ್ನ ಬಾಲ್ಯದ ಬೆಳವಣಿಗೆಯ ಹಂತದಲ್ಲಿ ಉಂಟಾದ ಅನುಭವವನ್ನೇ ಇಲ್ಲಿಯೂ ನೆನಪಿಸಿಕೊಳ್ಳುತ್ತಾಳೆ. ಈ ಸಂಗತಿಯನ್ನು ನಾವು ಬೇಗ ಗುರುತಿಸಿದಷ್ಟೂ ನಮ್ಮ ಮಕ್ಕಳ ಒಳಿತನ್ನು ಕಾಪಾಡಬಹುದು. ನಮ್ಮ ಮಕ್ಕಳ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ನಮ್ಮ ಅಸಮಾಧಾನಗಳನ್ನು ನಿಯಂತ್ರಿಸಿಕೊಳ್ಳುವ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳೋಣ. ನಮಗಲ್ಲದಿದ್ದರೂ, ನಮ್ಮ ಮಕ್ಕಳಿಗಾಗಿಯಾದರೂ ಹೀಗೆ ಮಾಡೋಣ. ನಾವು ನಿರಾಸೆಯನ್ನನುಭವಿಸಬಾರದೆಂದು ಅಥವಾ ಅದು ತಪ್ಪೆಂದು ಅರ್ಥವಲ್ಲ. ಹಲವು ಕಾರಣಗಳಿಂದ ನಾವು ಹತಾಶರಾಗುವುದು ಸಾಮಾನ್ಯವೂ, ಸಹಜವೂ ಆಗಿದೆ. ಆದರೆ ಅದರಿಂದ ಯಾವ ರೀತಿಯ ಪರಿಣಾಮಗಳಾಗುತ್ತವೆ ಎಂದು ತಿಳಿದುಕೊಳ್ಳುವುದರಿಂದ ನಾವು ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ.
ನಾನು ನೀಡಿದ ಉದಾಹರಣೆಯು ಅತಿರೇಕವೆನಿಸಬಹುದು ಅಥವಾ ಇದು ನಮ್ಮ ಪರಿಸ್ಥಿತಿಗೆ ಸಂಬಂಧಿಸಿದ್ದಲ್ಲ ಆದ್ದರಿಂದ ನಾವೇನೂ ಯೋಚನೆ ಮಾಡುವ ಅಗತ್ಯವಿಲ್ಲ ಎಂದೆನಿಸಬಹುದು. ಈ ಘಟನೆಯು ಅತೀರೇಕವಾದದ್ದರಿಂದಲೇ ನನ್ನ ನೆನಪಿನಲ್ಲಿ ಇನ್ನೂ ಉಳಿದಿದೆ. ಕೆಲವೊಮ್ಮ ನಾವು ಜಾಗೃತರಾಗಲೂ ಇಂತಹ ಅತಿರೇಕಗಳೇ ಕಾರಣವಾಗುತ್ತದೆ. ಹತಾಶೆಯು ಕೆಲವೊಮ್ಮ ಕಡಿಮೆ ಪ್ರಮಾಣದಲ್ಲಿಯೂ ಇರಬಹುದು-ಗಂಡನನ್ನು ಕಳೆದುಕೊಂಡ ತಾಯಿಯ ಹೆಣಗಾಟ, ಎರಡು ಜನ ಹದಿಹರೆಯದ ಮಕ್ಕಳನ್ನು ಬೆಳೆಸುವ ಮತ್ತು ತನ್ನನ್ನು ತಾನು ಸಂತೈಸಿಕೊಳ್ಳುವ ಮಹಿಳೇಯ ಸಂಕಟ, ಗಂಡ ಬೇರೆ ದೇಶದಲ್ಲಿರುವುದರಿಂದ ತನ್ನ ಐವರು ಮಕ್ಕಳನ್ನು ನೋಡಿಕೊಳ್ಳಬೇಕಾದ ಮಹಿಳೆ, ಮಲಮಗು ಶಾಲೆಯಲ್ಲಿ ಒಳ್ಳೆಯ ಪ್ರದರ್ಶನ ನೀಡುವಂತೆ ಪ್ರೇರೇಪಿಸುವ ಮೂಲಕ ತನ್ನನ್ನು ತಾನು ನಿರೂಪಿಸಿಕೊಳ್ಳಬೇಕಿರುವ ಮಲತಾಯಿ, ಮಕ್ಕಳು ಬೇರೆಯಾಗುತ್ತಿರುವ ಕಾರಣಕ್ಕೆ ಜೀವನದ ಉದ್ದೇಶವನ್ನೇ ಕಳೆದುಕೊಳ್ಳುವ ಭೀತಿಯಲ್ಲಿರುವ ತಾಯಿ- ಇಂತಹ ಅನೇಕ ಸಂದರ್ಭಗಳಲ್ಲಿ ಹತಾಶೆಯುಂಟಾಗಬಹುದು.
ಹತಾಶೆಯು ಯಾವುದೇ ರೂಪದಲ್ಲಿ ಕಾಣಿಸಿಕೊಳ್ಳಬಹುದು-ಅವನ್ನು ನಾವು ಗುರುತಿಸಿ, ಒಪ್ಪಿಕೊಳ್ಳಬೇಕು, ಅವನ್ನು ನಮ್ಮದೆಂದು ತಿಳಿದು ಅದರಿಂದ ನಮ್ಮ ಮಕ್ಕಳನ್ನು ದೂರವಿರಿಸಬೇಕು.
ಮೌಲಿಕಾ ಶರ್ಮಾರವರು ಬೆಂಗಳೂರು ಮೂಲದ ಆಪ್ತ ಸಲಹೆಗಾರ್ತಿಯಾಗಿದ್ದು, ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಕಾರ್ಪೋರೇಟ್ ಕಂಪನಿಯ ತಮ್ಮ ಉದ್ಯೋಗವನ್ನು ತ್ಯಜಿಸಿದ್ದಾರೆ. ಪ್ರಸ್ತುತ, ಜಾಗತಿಕ ಕಾರ್ಮಿಕ ಕಲ್ಯಾಣ ಕಂಪೆನಿ ‘ವರ್ಕಪ್ಲೇಸ್ ಆಪ್ಷನ್ಸ್’ ಜೊತೆ ಜೆಲಸ ಮಾಡುತ್ತಿರುವ ಇವರು ಬೆಂಗಳೂರಿನ ರೀಚ್ ಕ್ಲಿನಿಕ್ಕಿನಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ನಿಮಗೆ ಈ ಲೇಖನದ ಕುರಿತು ಯಾವುದೇ ವಿವರಣೆ ಬೇಕಿದ್ದಲ್ಲಿ, columns@whiteswanfoundation.org ವಿಳಾಸಕ್ಕೆ ಈ-ಮೇಲ್ ಮಾಡಿ. ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುವ ಈ ಅಂಕಣ ಸರಣಿಯಲ್ಲಿ ನೀವು ಕೇಳುವ ಪ್ರಶ್ನೆಗಳನ್ನು ಉತ್ತರಿಸಲಾಗುವುದು.
ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲ್ಪಟ್ಟಿದ್ದು ಇಲ್ಲಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ.