ಬಾಲ್ಯ

ಶಿಕ್ಷಿಸದೆ ಮಗುವಿನಲ್ಲಿ ಶಿಸ್ತು ತರಬಲ್ಲಿರಾ?

ವೈಟ್ ಸ್ವಾನ್ ಫೌಂಡೇಶನ್

ಓದುಗರೊಬ್ಬರು  ಒಮ್ಮೆ ಈ ಬಗ್ಗೆ ಕೇಳಿದರು. "ಮಕ್ಕಳು ತುಂಟರಾಗಿದ್ದರೆ, ಓದಿನಲ್ಲಿ ಗಮನ ಕೊಡದೆ ಇದ್ದರೆ ಅಥವಾ ಹೇಳಿದ ಮಾತು ಕೇಳದಿದ್ದರೆ ಹೊಡೆದು ಅವರಿಗೆ ಶಿಕ್ಷೆ ನೀಡಬೇಕೆ ಅಥವಾ ಅವರ ಭವಿಷ್ಯದ ಬಗ್ಗೆ ಹೆದರಿಸಬೇಕೆ? ಮಕ್ಕಳನ್ನು ತಿದ್ದಲು ಇನ್ಯಾವುದೇ ಸಲಹೆ  ಇದ್ದರೆ ದಯವಿಟ್ಟು ತಿಳಿಸಿ."

ಮೊದಲಿಗೆ, ಶಿಸ್ತು ಮತ್ತು ಶಿಕ್ಷೆ ನಡುವೆ ಇರುವ ವ್ಯತ್ಯಾಸ  ಮತ್ತು ತಪ್ಪು ಕಲ್ಪನೆ ಕುರಿತು ಹೇಳುತ್ತೇನೆ. ಬಹಳ ಸಲ ಪೋಷಕರು ಈ ಎರಡೂ ಪದಗಳು ಒಂದೇ ಎಂದು ತಿಳಿದಿದ್ದಾರೆ .
  • ಶಿಕ್ಷೆಯ ಗುರಿಯೇನೆಂದರೆ ತಪ್ಪಾದ ವರ್ತನೆಗೆ ದಂಡಿಸುವುದು.
  • ಶಿಸ್ತಿನ ಗುರಿಯು ವರ್ತನೆಯನ್ನು ರೂಪಿಸುವುದಾಗಿದೆ.   

ಈ ವ್ಯತ್ಯಾಸವನ್ನು ಮರೆತು ಮಕ್ಕಳಿಗೆ ನೋವುಂಟಾಗುವಂತೆ ದಂಡಿಸಿ ಅವರ ವರ್ತನೆಯನ್ನು ಸರಿಪಡಿಸುತ್ತಿದ್ದೇವೆ ಎಂದು ಎಂದು ಪೋಷಕಾರು/ ಶಿಕ್ಷಕರು ಭಾವಿಸುತ್ತಾರೆ. ಆದರೆ ಶಿಕ್ಷೆಯು ಮನಸ್ಸಿಗೆ ಹಾಗೂ ದೇಹಕ್ಕೆ ನೋವುಂಟು ಮಾಡುತ್ತದೆ ಎಂದು ನಾವು ತಿಳಿಯಬೇಕು.

ಶಿಸ್ತಿನಿಂದ ವರ್ತನೆಯಲ್ಲಿ ಬದಲಾವಣೆ ತರಲು ಸಾಧ್ಯ .  ಆದ್ದರಿಂದ ಯಾವ ವರ್ತನೆಯನ್ನು ಬದಲಿಸಬೇಕು ಅಥವಾ ರೂಪಿಸಬೇಕೆಂದು ಸ್ಪಷ್ಟ ತಿಳಿವಳಿಕೆ ಹೊಂದಿರಬೇಕು.

ಮಗುವಿಗೆ ಯಾವುದರಿಂದ ಪ್ರಭಾವ ಉಂಟಾಗುತ್ತದೆ ಎಂದು ತಿಳಿದು ಅದರಂತೆಯೇ ನಾವು ಮುಂದುವರೆಯಬೇಕು. ಇದು ಎಲ್ಲ ಸಂದರ್ಭದಲ್ಲಿ ಒಂದೇ ರೀತಿ ಇರುವುದಿಲ್ಲ. ಒಬ್ಬ ಮಗುವಿನ ಮೇಲೆ ಒಳ್ಳೆಯ ಪ್ರಭಾವ ಬೀರುವ ಶಿಸ್ತು ಇನ್ನೊಬ್ಬ ಮಗುವಿನ ಮೇಲೆ ಪರಿಣಾಮ ಬೀರದೆ ಇರಬಹುದು. ಒಂದು ಮಗು ಟಿವಿ ನೋಡಲು ಇಷ್ಟಪಟ್ಟರೆ , ಟಿವಿ ನೋಡುವ ಸಮಯವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಇನ್ನೊಂದು ಮಗು ಟಿವಿ ನೋಡದೆ ಇದ್ದರೆ ಇದು ಯಾವ ಪರಿಣಾಮವನ್ನೂ ಬೀರುವುದಿಲ್ಲ.

ದೇಹಕ್ಕೆ ನೋವು ಉಂಟಾಗುವ ಶಿಕ್ಷೆ ಪ್ರಯೋಜನವಿಲ್ಲ. ಮಕ್ಕಳು ಪಾಲಿಸಬೇಕಾದ ನಿಯಮಗಳು ಮತ್ತು ಪಾಲಿಸದಿದ್ದರೆ ಎದುರಿಸಬೇಕಾದ  ಪರಿಣಾಮ ಗೊತ್ತಿದ್ದರೆ ಅವರ ವರ್ತನೆ ಬದಲಾಗುವುದು. ಇದು ಸರಳ ವಿಷಯ ಎನ್ನುವಂತೆ ಕಾಣುತ್ತದೆ. ಆದರೆ ಬಹಳಷ್ಟು ಪೋಷಕರಿಗೆ ಇದರ ಬಗ್ಗೆ ಗೊತ್ತಿಲ್ಲ. 

ಮಕ್ಕಳ ಸ್ವಭಾವವು ಹೇಗೆಂದರೆ ಎಷ್ಟು ತಪ್ಪಿಸಿಕೊಳ್ಳಬಹುದೋ ಅಷ್ಟು ಪ್ರಯತ್ನ ಮಾಡುತ್ತಾರೆ. ವಯಸ್ಕರಾದ ನಾವು ಹತ್ತರಲ್ಲಿ ಒಂಬತ್ತು ಸಲ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಎಷ್ಟು ಸಲ ಟ್ರಾಫಿಕ್ ನಿಯಮ ಪಾಲಿಸದೆ ಗಾಡಿ ಓಡಿಸಿಲ್ಲ?  ರೆಡ್ ಸಿಗ್ನಲ್ ಬಂದಾಗ ಗಾಡಿ ಓಡಿಸಿದರೆ ಖಂಡಿತ ದಂಡ ಹಾಕುತ್ತಾರೆ ಎಂದು ಖಚಿತವಾದರೆ ನಾವು ಒಮ್ಮೆ ಕೂಡ ಚಾನ್ಸ್ ತೆಗೆಕೊಳ್ಳುವುದಿಲ್ಲ. ಆದರೆ ನಮ್ಮ ಮಕ್ಕಳು ನಿಯಮಗಳನ್ನು ಪಾಲಿಸಬೇಕು ಎಂದು ನಿರೀಕ್ಷಿಸುತ್ತೇವೆ.
ಆಟವಾಡಿ ಸಂಜೆ 7 ಗಂಟೆಗೆ ವಾಪಸ್ಸಾಗಬೇಕು ಇಲ್ಲದಿದ್ದರೆ ಆ ಸಂಜೆ ಟಿವಿ ನೋಡಲು ಬಿಡುವುದಿಲ್ಲ , (ಪರಿಣಾಮದ ಉದಾಹರಣೆ) ಇದು ನೂರಕ್ಕೆ ನೂರ ಸಲವೂ ಖಂಡಿತ ಎಂದು ನಿಮ್ಮ ಮಗುವಿಗೆ ತಿಳಿದರೆ, 5 ನಿಮಿಷ ಹೆಚ್ಚು ಆಡಿದರೂ ತೊಂದರೆಯೇ ಎಂದು ಗೊತ್ತಾದರೆ 7 ಗಂಟೆಗಿಂತ ಮುಂಚೆ ಮನೆಗೆ ಬರುತ್ತಾರೆ. ಆದರೆ, ಯಾವುದೇ ಪರಿಣಾಮವಿಲ್ಲದೆ ನೂರಕ್ಕೆ 75 ಸಲ ತಪ್ಪಿಸಿಕೊಳ್ಳುವ ಅವಕಾಶವಿದೆಯೆಂದು ಗೊತ್ತಾದರೆ ಆಗ ಅವರು ನಿಮ್ಮನ್ನು ಪರೀಕ್ಷಿಸುತ್ತಾರೆ, ನಿಮ್ಮ ಮಿತಿಗಳನ್ನೂ ಕೂಡ.

ನೆನಪಿಡಿ, ನಿರ್ದಿಷ್ಟ ಪರಿಣಾಮ ಎಷ್ಟು ಖಂಡಿತ ಎಂದು ಮಕ್ಕಳಿಗೆ ಗೊತ್ತಾದರೆ ಅವರು ಬೇಗ ಅರ್ಥಮಾಡಿಕೊಂಡು ಕಲಿಯುತ್ತಾರೆ. ಮೇಲಿನ ಉದಾಹರಣೆಯಲ್ಲಿ,  ಮುಂದಿನ ವಾರ ಟಿವಿ ನೋಡಲು ಅನುಮತಿ ನೀಡುವುದಿಲ್ಲ ಎಂದು ಹೇಳಿ, ಕೆಲವು ದಿನ ಟಿ.ವಿ ನೋಡಲು ಬಿಟ್ಟರೆ ಶಿಸ್ತು ಪಾಲಿಸಲು ಸಾಧ್ಯವಿಲ್ಲ ಏಕೆಂದರೆ ಮಗುವಿಗೆ ಇಡಿ ವಾರದಲ್ಲಿ ಒಂದೇ ಸಲ ಕಲಿಯುವ ಅವಕಾಶ ಸಿಗುತ್ತದೆ. ಕೆಲವೊಮ್ಮೆ ಒಂದು ವಾರ ಶಿಸ್ತು ಪಾಲಿಸಲು ನಿಮಗೂ ಸಾಕಾಗುತ್ತದೆ. ಆಗ ನೀವೇ ಎರಡನೆಯ/ ಮೂರನೆಯ ದಿನ ಮಗು ತನ್ನಷ್ಟಕ್ಕೆ ತಾನು ಆಡಲು ಬಿಡುತ್ತೀರಿ.

ಹೀಗಾಗಿ ಶಿಸ್ತು ಕಲಿಸಲು ಪೋಷಕರು ಕೆಲವು ಮುಖ್ಯ ವಿಷಯಗಳನ್ನು ತಿಳಿಯಬೇಕು. ಮೊದಲಿಗೆ ಶಿಸ್ತು ಎಂದರೆ ಶಿಕ್ಷಿಸುವುದಲ್ಲ ಎಂಬುದನ್ನು ನೆನಪಿಡಿ.

ನೀವು ಮಗುವಿಗೆ ಏನು ಹೇಳಿ ಕೊಡಲು ಬಯಸುತ್ತೀರಾ ಎಂದು ನಿರ್ಧರಿಸಿ. ಮಗುವಿನ ಎಲ್ಲ ವರ್ತನೆಗಳನ್ನು ಸರಿಪಡಿಸಬೇಕು ಎಂದು ನಿಮಗೆ ಎನಿಸುತ್ತದೆ. ಆದರೆ ಮನೆ ಮತ್ತು ಬದುಕು ರಣರಂಗವಾಗುವುದು ಬೇಡ. ಹೀಗಾಗಿ ಬದಲಾವಣೆಯಾಗಬೇಕಾದ ಐದು ವರ್ತನೆಗಳನ್ನು ತೆಗೆದುಕೊಳ್ಳಿ. ಅದನ್ನು ನಿರ್ಧಿಷ್ಟ ರೂಪದಲ್ಲಿ ಬದಲಾಯಿಸಲು ಪ್ರಯತ್ನಿಸಿ. 

ಎರಡನೆಯದಾಗಿ, ನೀವು ಒಪ್ಪುವ ಮತ್ತು ಒಪ್ಪದಿರುವ ವರ್ತನೆಗಳ ಬಗ್ಗೆ ಸ್ಪಷ್ಟಗೊಳಿಸಿ. ನೀವು ಆರಿಸುವ ಪರಿಣಾಮವನ್ನು ಎಲ್ಲ ಸಮಯದಲ್ಲೂ ಅನ್ವಯಿಸಲು ಸಾಧ್ಯವಾದರೆ ಒಳ್ಳೆಯದು. ಆದರೆ ಇದು ಬಹಳ ಕಷ್ಟದ ಕೆಲಸ.

ಮೂರನೆಯದಾಗಿ, ನೀವು ಹಾಕುವ ಮಿತಿ ಮಗುವಿನ ವಯಸ್ಸು ಮತ್ತು ಸಂದರ್ಭಕ್ಕೆ ತಕ್ಕಂತೆ ಇರಬೇಕು. ಮಕ್ಕಳು ಬೆಳೆದಂತೆ ಈ ಮಿತಿಗಳನ್ನು ಪರಿಶೀಲನೆ ಮಾಡಿ ಹೊಸ ಮಿತಿಗಳನ್ನು ರೂಪಿಸಿ. ಶಿಸ್ತು ಕಡ್ಡಾಯವಾಗಿರಬಾರದು. ಬದಲಾಗಿ ಮಕ್ಕಳ ಜೊತೆ ಮನ ಬಿಚ್ಚಿ ಮಾತನಾಡಿ. ಅವರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಉತ್ತೇಜಿಸಿ.  ಇಬ್ಬರಿಗೂ ಒಮ್ಮತವಿರುವ ಹಾಗೆ ಒಂದು ನಿರ್ಧಾರ ತೆಗೆದುಕೊಳ್ಳಿ.  

ಕೊನೆಯದಾಗಿ,  ಪ್ರಶ್ನೆ ಕೇಳಿದ ಪೋಷಕರಿಗೆ ನಾನು ಹೇಳುವುದೇನೆಂದರೆ,  ‘ತೊಂದರೆ ಮಾಡುವ ಮಕ್ಕಳು’ ಇಲ್ಲವೇ ಇಲ್ಲ. ನಾವು ಕಾಣುವುದು ‘ತೊಂದರೆಯ ವರ್ತನೆಗಳು’. ಈ ತರದ ವರ್ತನೆಯನ್ನು ಶಿಸ್ತಿನ ಮೂಲಕ ಪರಿಹರಿಸಬಹುದು, ನೋವುಂಟು ಮಾಡುವ ಶಿಕ್ಷೆಯಿಂದಲ್ಲ.