ಬಾಲ್ಯ

ನಿಮ್ಮ ಮಗುವಿನ ಸ್ವ ಪರಿಕಲ್ಪನೆಯನ್ನು ಸುಧಾರಿಸಲು ನೀವು ಸಹಾಯ ಮಾಡುವಿರಾ?

ಡಾ. ಗರಿಮಾ ಶ್ರೀವಾಸ್ತವ

ಸರಳ ಪರಿಭಾಷೆಯಲ್ಲಿ ಸ್ವ-ಪರಿಕಲ್ಪನೆ ಎಂದರೆ ವ್ಯಕ್ತಿಯೊಬ್ಬ ತನ್ನ ಬಗ್ಗೆ ತಿಳಿದುಕೊಳ್ಳುವುದು. ಸ್ವಾಭಿಮಾನ ಎಂದರೆ ವ್ಯಕ್ತಿಗೆ ತನ್ನ ಸಾಮರ್ಥ್ಯ ಮತ್ತು ಪ್ರತಿಭೆಯ ಬಗ್ಗೆ ಇರುವ ಆತ್ಮಗೌರವ.

ಆದರೆ ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಸ್ವಾಭಿಮಾನವು ನಮ್ಮ ಇಷ್ಟ, ಸ್ವೀಕರಿಸುವ ಅಥವಾ ನಮ್ಮನ್ನು ಅನುಮೋದಿಸುವ ಮಟ್ಟಿಗೆ ಅಥವಾ ನಾವು ನಮ್ಮನ್ನು ಎಷ್ಟು  ಗೌರವಿಸುತ್ತೇವೆ ಎಂಬುದನ್ನು ಸೂಚಿಸುತ್ತದೆ. ನಾವು ಹೊಂದಿರುವ ಧನಾತ್ಮಕ ಅಥವಾ ಋಣಾತ್ಮಕ ದೃಷ್ಟಿಕೋನದ ಮೂಲಕ ಸ್ವಾಭಿಮಾನವನ್ನು ಮೌಲ್ಯಮಾಪನ ಮಾಡುವುದಕ್ಕೆ ಸಾಧ್ಯ. ಪರಿಸ್ಥಿತಿ ಮತ್ತು ಇತ್ತೀಚೆಗೆ ಏನು ನಡೆಯುತ್ತಿದೆ, ನಮ್ಮ ಪರಿಸರದಿಂದ ಮತ್ತು ನಮ್ಮ ಸುತ್ತಲಿರುವ ಜನರಿಂದ ಪಡೆದ ಪ್ರತಿಕ್ರಿಯೆಯ ಆಧಾರದ ಮೇಲೆ ಇದು ಬದಲಾಗಬಹುದು. 

ಧನಾತ್ಮಕ ಸ್ವಯಂ-ಪರಿಕಲ್ಪನೆಯನ್ನು ರೂಪಿಸಿಕೊಳ್ಳುವ ಪ್ರಕ್ರಿಯೆ ಜನನದಿಂದಲೇ ಆರಂಭವಾಗುತ್ತದೆ. ಪೋಷಕರು ಮತ್ತು ಕುಟುಂಬದವರು, ಮತ್ತು ಸಮುದಾಯದ ಇತರ ವ್ಯಕ್ತಿಗಳು ತಮ್ಮ ವರ್ತನೆ, ಮಾತುಗಳ ಮೂಲಕ ತಮ್ಮ ಮಕ್ಕಳಿಗೆ ಅಭಿಪ್ರಾಯ ನೀಡಲು ಪ್ರಾರಂಭಿಸುತ್ತಾರೆ. 

ಪೋಷಕರಾಗಿ ನಿಮ್ಮ ಮಗುವಿನ ಸ್ವ-ಪರಿಕಲ್ಪನೆ ಒಳ್ಳೆಯ ರೇತಿಯಲ್ಲಿ ಹೆಚ್ಚಿಸಲು ಸಾಧ್ಯ. ನಿಮ್ಮ ಮಗುವಿಗೆ ಬೇಷರತ್ತಾದ ಸ್ವೀಕಾರ ,ಪ್ರೀತಿ, ಮತ್ತು ಅವರನ್ನು ಸ್ವಂತ ಆಲೋಚನೆ ಮತ್ತು ತರ್ಕ ಮಾಡುವ ವ್ಯಕ್ತಿಯಂತೆ ಕಾಣುವುದು ಮುಖ್ಯ. ಇದು ಅವರಲ್ಲಿ ಹೆಚ್ಚು ವಿಶ್ವಾಸ ಮೂಡಿಸುತ್ತದೆ. ಹಾಗೆಯೇ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಇಡುತ್ತಾರೆಯೇ ಹೊರತು ರೂಪ, ಮೈ ಬಣ್ಣದ ಮೇಲೆ ಅವರ ವ್ಯಕ್ತಿತ್ವವನ್ನು ನಿರೂಪಿಸುವುದಿಲ್ಲ.

ನಿಮ್ಮ ಮಗುವಿನಲ್ಲಿ ಧನಾತ್ಮಕ ಸ್ವಯಂ-ಪರಿಕಲ್ಪನೆಯನ್ನು ಹೆಚ್ಚಿಸಲು ನೀವು ಸಹಾಯ ಮಾಡುವ ಕೆಲವು ವಿಧಾನಗಳು ಇಲ್ಲಿವೆ:

ಪ್ರತಿಕ್ರಿಯೆ: ಮಕ್ಕಳು ಮಾಡಿದ ಅಥವಾ ಹೇಳಿದ ಅನೇಕ ವಿಚಾರಗಳಿಗೆ ಮತ್ತು ಅವರು ಹೇಗೆ ವರ್ತಿಸಬೇಕು ಎಂಬ ಬಗ್ಗೆ ಪಾಲಕರು ಪ್ರತಿಕ್ರಿಯೆ ನೀಡುತ್ತಾರೆ. ಈ ಪ್ರತಿಕ್ರಿಯೆ ಪಾಸಿಟಿವ್ಗಿಂತ ಹೆಚ್ಚಾಗಿ ನೆಗಟಿವ್ಆಗಿ ಇರುತ್ತದೆ. ಮತ್ತು ಬಹಳಷ್ಟು "ಪರಿಶೀಲನೆ" ಮತ್ತು "ತಿದ್ದುಪಡಿಗಳು" ಒಳಗೊಂಡಿರುತ್ತದೆ. ಪೋಷಕರಾಗಿ ನೀವು ಬಹುಶಃ "ನಾನು ಹೇಗೆ ಹೇಳಿಕೊಡಬೇಕು?" ಎಂದು ಕೇಳಬಹುದು. 

ಪ್ರತಿಯೊಂದು ಮಗುವೂ ವಿಶಿಷ್ಟವಾಗಿದ್ದು, ಈಗಾಗಲೇ ಸ್ವಯಂ-ಪರಿಕಲ್ಪನೆಯನ್ನು ಹೊಂದಿರುತ್ತವೆ. ಹಾಗಾಗಿ, ಮಗು ತಿದ್ದುಪಡಿಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ನಿಖರವಾಗಿ ಹೇಳಲಾಗದು.  ತಜ್ಞರ ಪ್ರಕಾರ, ಎಲ್ಲ ಪ್ರತಿಕ್ರಿಯೆಗಳೂ ಕನಿಷ್ಟ 75 ಪ್ರತಿಶತ ಪಾಸಿಟಿವ್ ಫೀಡ್‌ಬ್ಯಾಕ್ ಇರಬೇಕು.  ನೀವು ವಿಷಯಗಳನ್ನು ಸಮತೋಲನದಲ್ಲಿಟ್ಟುಕೊಂಡೇ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ.  50/50 ಪಾಸಿಟಿವ್  ಮತ್ತು ನೆಗಟಿವ್ ಫೀಡ್‌ಬ್ಯಾಕ್ ಇದ್ದರೆ ಸರಿಹೋಗುವುದಿಲ್ಲ. ಪೋಷಕರು 75/25 ಸಮತೋಲನವನ್ನು ಬಳಸಿದರೆ ಒಳ್ಳೆಯ ಪರಿಣಾಮ ದೊರೆಯುತ್ತದೆ.

ಉದಾಹರಣೆಗೆ, ರಜಾದಿನದ ಹೋಮ್‌ವರ್ಕ್‌ ಬಗ್ಗೆ [75/25] ಸಮತೋಲ ಬಳಸಿ. "ಈ ರಜೆಯ ಹೋಮ್ವರ್ಕ್ಅನ್ನು ರೆಕಾರ್ಡ್ ಪುಸ್ತಕದಲ್ಲಿ ನೀನು ಚೆನ್ನಾಗಿ ಮಾಡಿದ್ದೀಯ. ನಿನ್ನ ಕೈಬರಹ ಅಚ್ಚುಕಟ್ಟಾಗಿದೆ. ನಿನ್ನ ದಿನಚರಿಯ ವರದಿ ಬರೆದಿದ್ದೀಯ, ಮತ್ತು ಎಲ್ಲವನ್ನೂ ನಿರ್ವಹಿಸಿದ್ದೀಯ. ಆದಾಗ್ಯೂ, ನಿನ್ನ ರಜೆಯ ಬಗ್ಗೆ ಯಾವುದೇ ವಿವರಗಳನ್ನು ಇದರಲ್ಲಿ ಸೇರಿಸಿಲ್ಲ. ಅದನ್ನು ಬರೆದರೆ ಒಳ್ಳೆಯದು."

ಸ್ವೀಕಾರ ಮತ್ತು ತೀರ್ಪಲ್ಲದ ತೀರ್ಮಾನವನ್ನು ವ್ಯಕ್ತಪಡಿಸುವುದು: ವಿವಿಧ ಸಂದರ್ಭಗಳಲ್ಲಿ ಮಾತನಾಡುವಾಗ ನಿಮ್ಮ ಮಗುವಿನ  ಆತ್ಮವಿಶ್ವಾಸ ಹೆಚ್ಚಿಸಬಹುದು. ಮಗುವು ತನ್ನ ಅನುಭವ ಅಥವಾ ವಿಚಾರ /ಭಾವನೆ ಹಂಚಿಕೊಂಡಾಗ, ಯಾವುದೇ ನಿರ್ಧಾರಕ್ಕೆ ಬಾರದೆ ಕೇಳಿಸಿಕೊಳ್ಳಿ.  

ಉದಾಹರಣೆ 1: ಮಗು ತಾನು ಕಷ್ಟಪಟ್ಟು ಸಿದ್ಧತೆ ಮಾಡಿಕೊಂಡಿದ್ದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲ ಎಂದರೆ,  "ನೀನು  ಕಷ್ಟಪಟ್ಟದ್ದು ಸಾಕಾಗಲಿಲ್ಲ" ಅಥವಾ  " ನೀನು ಈ ಪರೀಕ್ಷೆಯಲ್ಲಿ ತೇರ್ಡಡೆಯಾಗುವಷ್ಟು ಯೋಗ್ಯತೆ ಹೊಂದಿಲ್ಲ ಎಂಬುದು ನನಗೆ ಗೊತ್ತಿದೆ" ಅಂತೆಲ್ಲ ಹೇಳಿ ನೋವುಂಟು ಮಾಡಬೇಡಿ. ಬದಲಿಗೆ ನೀವು "ಕೆಲವೊಮ್ಮೆ ವಿಫಲವಾಗುವುದು ಸಹಜ, ಮತ್ತೊಮ್ಮೆ  ಪ್ರಯತ್ನ ಮಾಡಿದರಾಯಿತು" , "ನಾನು ನಿನ್ನ ನಿರಾಶೆಯನ್ನು ಅರ್ಥಮಾಡಿಕೊಳ್ಳಬಲ್ಲೆ. ಎರಡನೇ ಅವಕಾಶ ಇದೆ, ಮತ್ತೆ ಪ್ರಯತ್ನಿಸು" ಎಂದು ಹೇಳಬಹುದು.

ಉದಾಹರಣೆ 2: ಮಗು ಬಸ್ ಮಿಸ್ ಮಾಡಿ ಮನೆಗೆ ತಡವಾಗಿ ಬಂದರೆ , "ನೀನು ಸುಳ್ಳುಹೇಳ್ತಿದ್ದೀ, ನಿನ್ನ ಸ್ನೇಹಿತರೊಂದಿಗೆ ಊರು ಸುತ್ತಲು ಹೋಗಿ ಮನೆಗೆ ಲೇಟ್ ಆಗಿ ಬಂದಿದ್ದೀಯಾ" ಬದಲಿಗೆ, ಹೀಗೆ ಹೇಳಿ: "ಸರಿ, ಮುಂದೆ ಬಸ್‌ ತಪ್ಪಿ ಹೋಗದಂತೆ  ಎಚ್ಚರಿಕೆಯಿಂದಿದ್ದರೆ, ಸಮಯಕ್ಕೆ ಸರಿಯಾಗಿ ಮನೆಗೆ ಬರಲು ಸಾಧ್ಯ" ಎಂದು ಹೇಳಬಹುದು.

ಕೇಳಿಸಿಕೊಳ್ಳಿ: ನಿಮ್ಮ ಮಕ್ಕಳಿಗೆ ಮಾತನಾಡಲು ಅವಕಾಶ ನೀಡಿ. ಹಾಗೆಯೇ ಅದನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ನೀವು ವಯಸ್ಕರ ಜತೆ ಮಾತನಾಡುವಂತೆಯೇ ನಿಮ್ಮ ಮಕ್ಕಳೊಂದಿಗೆ ಮಾತನಾಡಿ. ಕೇವಲ ಕೇಳುವುದಷ್ಟೇ ಅಲ್ಲ, ಆದರೆ ಸಕ್ರಿಯವಾಗಿ ನಿಮ್ಮ ಮಗುವನ್ನು ಆಲಿಸಿ (ಇದು ಬಾಡೀ ಲ್ಯಾಂಗ್ವೇಜ್: ಕಣ್ಣಿನ ಸಂಪರ್ಕ, ತಲೆ ಆಡಿಸುವುದು, ಇತ್ಯಾದಿ) ಕೇಳುವ ಮತ್ತು ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದರಿಂದ ಮಕ್ಕಳಲ್ಲಿ ಆತ್ಮ-ಗೌರವ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.  ಇದು ಸ್ವಯಂ ಪರಿಕಲ್ಪನೆಯ ಮಟ್ಟವನ್ನು ಹೆಚ್ಚಿಸುತ್ತದೆ.

ಡಾ. ಗರೀಮಾ ಶ್ರೀವಾಸ್ತವ ಅವರು ದೆಹಲಿ ಮೂಲದ ಕ್ಲಿನಿಕಲ್ ಮನಶ್ಶಾಸ್ತ್ರಜ್ಞರಾಗಿದ್ದಾರೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಪಿಎಚ್ಡಿ ಪಡೆದಿದ್ದಾರೆ.