ಬಾಲ್ಯ

ನಾನು ಇಂದು ಶಾಲೆಗೆ ಹೋಗಲಾರೆ!

ಮಕ್ಕಳಲ್ಲುಂಟಾಗುವ ಆತಂಕವನ್ನು ನಿರ್ವಹಿಸುವುದು

ವೈಟ್ ಸ್ವಾನ್ ಫೌಂಡೇಶನ್

ಒಂದು ಚಿಕ್ಕ ಮಗುವಿನ ಜೊತೆಗೆ ಕಣ್ಣಾ ಮುಚ್ಚಾಲೆ ಆಟವನ್ನು ನೀವು ಯಾವಾಗ ಆಡಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ಚಿಕ್ಕಮಕ್ಕಳು ನೀವು ಕಣ್ಣನ್ನು ಮುಚ್ಚಿ ಮತ್ತೆ ಒಮ್ಮೆಲೆ ತೆರೆದಾಗ ಏಕೆ ಅಷ್ಟೊಂದು ಆಶ್ಚರ್ಯಕ್ಕೆ ಒಳಗಾಗುತ್ತವೆ ಎಂದು ನೀವೆಂದಾದರೂ ಯೋಚಿಸಿದ್ದೀರಾ?

ಇದಕ್ಕೆ ಉತ್ತರ ಸ್ವಿಸ್ ಮನಃಶಾಸ್ತ್ರಜ್ಞರಾದ ಜಾನ್ ಪಿಯಾಝೆಯ್ ಅವರು ಸೃಷ್ಟಿಸಿದ  ಆಬ್ಜೆಕ್ಟ್ ಪರ್ಮನನ್ಸ್ ಎಂಬ ಪದದಲ್ಲಿದೆ. ಪಿಯಾಝೆಯ್ ಅವರ ಪ್ರಕಾರ, ಎಂಟು ತಿಂಗಳವರೆಗಿನ ಮಕ್ಕಳು ತಮ್ಮ ದೃಷ್ಟಿಯ ಹೊರಗಿನ ವಸ್ತುಗಳ ಇರುವಿಕೆಯನ್ನು ಗುರುತಿಸುವುದಿಲ್ಲ.  ಎಂಟರಿಂದ ಹನ್ನೆರಡು ತಿಂಗಳುಗಳ ನಡುವೆ ತಮಗೆ ಕಾಣಿಸದ ವಸ್ತುಗಳೂ ಅಸ್ತಿತ್ವದಲ್ಲಿವೆ ಎಂಬುದು ಅವರ ಅರಿವಿಗೆ ಬರಲು ಆರಂಭವಾಗುತ್ತದೆ. ಮಕ್ಕಳು ಪ್ರಾಥಮಿಕ ಬಾಂಧವ್ಯ ಹೊಂದಿರುವ ವ್ಯಕ್ತಿಗಳು (ಪಾಲಕರು ಅಥವಾ ಆರೈಕೆದಾರರು)  ಕಣ್ಣಿನಿಂದ ಮರೆಯಾದ ಕೂಡಲೇ ಗಟ್ಟಿಯಾಗಿ ಅಳಲು ಆರಂಭಿಸುತ್ತವೆ.

ಇದನ್ನು ಸೆಪರೇಶನ್ ಅಂಗ್ಸೈಟಿ (separation anxiety) ಎಂದು ಕರೆಯಲಾಗುತ್ತದೆ. ಸುಮಾರು 8 ತಿಂಗಳು ವಯಸ್ಸಿನ ಅವಧಿಯಲ್ಲಿ ಈ ಸಮಸ್ಯೆಯು ಆರಂಭವಾಗಿ ಮಕ್ಕಳು ತಮ್ಮ ಪಾಲಕರು ಮತ್ತು ಆರೈಕೆದಾರರೊಂದಿಗೆ ಗಾಢವಾದ ಬಾಂಧವ್ಯವನ್ನು ಹೊಂದತೊಡಗಿದಂತೆ ಇದು ಹೆಚ್ಚಾಗುತ್ತದೆ. ಮಗುವು ಶಾಲೆಗೆ ತೆರಳಲು ಆರಂಭಿಸುವ ಹೊತ್ತಿಗೆ ಹೆಚ್ಚು ಗಮನಕ್ಕೆ ಬರುತ್ತದೆ. ಸೆಪರೇಶನ್ ಅಂಗ್ಸೈಟಿ  ಈ ರೀತಿಯಲ್ಲಿ ಕಾಣಿಸಿಕೊಳ್ಳಬಹುದು:

  • ಶಾಲೆಗೆ ತೆರಳಲು ನಿರಾಕರಿಸುವುದು.
  • ಒಬ್ಬ ಪಾಲಕರು ಅಥವಾ ಆರೈಕೆದಾರರಿಗೆ ಯಾವಾಗಲೂ ಅಂಟಿಕೊಂಡಿರುವುದು.
  • ರಂಪಾಟ ಮಾಡುವುದು ಅಥವಾ ಪಾಲಕರನ್ನು ಬಿಟ್ಟು ಇರಬೇಕಾದ ಸಂದರ್ಭ ಬಂದರೆ ಹುಶಾರಿಲ್ಲದಂತೆ (ತಲೆನೋವು, ಹೊಟ್ಟೆ ನೋವು, ಇತ್ಯಾದಿ ಬಂದಂತೆ) ನಟಿಸುವುದು.

ಸೆಪರೇಶನ್ ಅಂಗ್ಸೈಟಿ ಚಿಕ್ಕ ಮಕ್ಕಳ ಬೆಳವಣಿಗೆಯ ಹಂತದ ಒಂದು ಸಾಮಾನ್ಯ ಸಂಗತಿಯಾಗಿದೆ.  ಇದು ಮಗುವು ತನ್ನ ಪ್ರೀತಿಪಾತ್ರರರೊಂದಿಗೆ ಆರೋಗ್ಯಕರ ಸಂಬಂಧ ಹೊಂದಿದೆ ಎಂಬ ಅಂಶವನ್ನು ಸೂಚಿಸುತ್ತದೆ. ಆದರೆ ಪ್ರತಿದಿನ ಅಳುವ ಮಗುವನ್ನು ಬೀಳ್ಕೊಡಬೇಕು ಎಂದರೆ ಒಂದು ಬೇಜಾರಿನ ವಿಷಯವಾಗಿರುತ್ತದೆ. 

ಒಂದುವೇಳೆ ನೀವು ಶಾಲೆಯ ಗೇಟಿನ ಎದುರು ಪ್ರತಿದಿನ ಮಗುವಿನ ಕುರಿತು ಚಿಂತೆಯಿಂದ ನಿಲ್ಲುವ ಪಾಲಕರಾಗಿದ್ದರೆ, ಈ ಸಮಸ್ಯೆಯನ್ನು ನಿಭಾಯಿಸಲು ಸಹಾಯವಾಗುವ 6 ಸಲಹೆಗಳು ಇಲ್ಲಿವೆ:

  1. ಮಗುವಿಗೆ ಗೊತ್ತಾಗದಂತೆ, ಕದ್ದು ಮುಚ್ಚಿ ತೆರಳಬೇಡಿ: ಹೀಗೆ ಮಾಡುವುದರಿಂದ ನಿಮ್ಮ ಮಗುವಿಗೆ ತನ್ನನ್ನು ತೊರೆದು ಹೋದರೆಂಬ ಭಾವನೆ ಜಾಸ್ತಿಯಾಗುತ್ತದೆ. ಅವರನ್ನು ಬಿಟ್ಟುಬರುವ ಸ್ಪಷ್ಟವಾದ ಕ್ರಮವನ್ನು ಪಾಲಿಸಿ. ಮೊದಲ ಕೆಲವು ದಿನಗಳು ಹಠಾತ್ ಆಗಿ ಬಿಟ್ಟು ಬರುವ ಬದಲು, ಕೆಲ ಸಮಯ ಅಲ್ಲಿಯೇ ಕಾಲ ಕಳೆಯಿರಿ. ವಾರಗಳು ಕಳೆದಂತೆ ಸರಿಯಾದ ಕ್ರಮದಲ್ಲಿ ಮಗುವಿಗೆ ಹೇಳಿ ಹೋಗಿ ಮತ್ತು ನೀವು ಯಾವಾಗ ಮರಳಿ ಬರುತ್ತೀರಿ (ಉದಾಹರಣೆಗೆ, ತಿಂಡಿಯ ನಂತರ, ಆಟದ ನಂತರ) ಎಂಬುದನ್ನು ನಿಮ್ಮ ಮಗುವಿಗೆ ತಿಳಿಸಿ. ಇದರಿಂದ ಮಗುವಿಗೆ ತಾನು ಏನನ್ನು ನಿರೀಕ್ಷಿಸಬಹುದು ಎಂಬುದು ತಿಳಿಯುತ್ತದೆ.
  2. ಅವರನ್ನು ಚಟುವಟಿಕೆಗಳಲ್ಲಿ ತೊಡಗಿಸಿ: ನೀವು ತೆರಳುವ ಮೊದಲು ಅವರ ಗಮನವನ್ನು ಬೇರೆಡೆಗೆ ಸೆಳೆಯುವ ಚಟುವಟಿಕೆಗಳಲ್ಲಿ (ಚೌಕಗಳನ್ನು ಜೋಡಿಸುವುದು, ಚಿತ್ರಬಿಡಿಸಿ ಬಣ್ಣಹಾಕುವುದು ) ಅವರನ್ನು ತೊಡಗಿಸಿ. ಮಗುವಿನ ಗಮನವನ್ನು ಸೆಳೆಯುವ ಉತ್ತಮ ವಿಧಾನ ಯಾವುದು ಎಂಬ ಬಗ್ಗೆ ಶಿಕ್ಷಕರ ಜೊತೆ ಚರ್ಚಿಸಿ. ಉದಾಹರಣೆಗೆ ಕೆಲವು ಮಕ್ಕಳು ನಿರ್ದಿಷ್ಟವಾದ ಕಥೆ ಪುಸ್ತಕ ಅಥವಾ ಪದ್ಯದಿಂದ ಶಾಂತರಾಗುತ್ತಾರೆ. ನಿಮ್ಮ ಮಗುವಿಗೆ ಯಾವುದು ಸೂಕ್ತ ಎಂಬ ಬಗ್ಗೆ ಶಿಕ್ಷಕರ ಜೊತೆ ಚರ್ಚಿಸಿ.
  3. ಮನೆಯಲ್ಲಿಯೇ ಈ ಬಗ್ಗೆ ಮಾತನಾಡಿ: ಮಗುವನ್ನು ನಿಯಮಿತವಾಗಿ ಶಾಲೆಗೆ ಕಳುಹಿಸುವ ಮೊದಲು, ಒಮ್ಮೆ ಅವರನ್ನು ಅಲ್ಲಿಗೆ ಸುಮ್ಮನೆ ಕರೆದುಕೊಂಡು ಹೋಗಿ. ಅಲ್ಲಿನ ಚಟುವಟಿಕೆಗಳ ಬಗ್ಗೆ ಅವರಲ್ಲಿ ಆಸಕ್ತಿ ಮೂಡಿಸಿ. ಶಾಲೆಯು ಆರಂಭವಾದ ಮೇಲೆ ಶಿಕ್ಷಕರ ಹೆಸರನ್ನು ತಿಳಿದುಕೊಂಡು ನಿಮ್ಮ ದೈನಂದಿನ ಮಾತುಕತೆಯಲ್ಲಿ ಅವರ ವಿಷಯವನ್ನೂ ಸೇರಿಸಿಕೊಳ್ಳಿ. ಚಿಕ್ಕಮಕ್ಕಳು ಹಲವು ಬಾರಿ ಉಳಿದ ವಯಸ್ಕರೊಂದಿಗೆ ಸಂಬಂಧವನ್ನು ವೃದ್ಧಿಸಿಕೊಳ್ಳಲು ಪಾಲಕರೇ ಸೇತುವೆಯಾಗಿರುತ್ತಾರೆ. ಶಿಕ್ಷಕರೊಂದಿಗೆ ಮೊದಲು ನೀವೇ ಹೊಂದಿಕೊಳ್ಳುವುದರಿಂದ ಮಕ್ಕಳು ಅವರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಬಹುದು. ಶಾಲೆಗೆ ತಯಾರಾಗುವ ಪ್ರಕ್ರಿಯೆಯಲ್ಲಿ ಮಕ್ಕಳನ್ನೂ ತೊಡಗಿಸಿಕೊಳ್ಳಿ. ಅತೀ ಚಿಕ್ಕ ಮಕ್ಕಳೂ ಕೂಡಾ ತಿಂಡಿ ಡಬ್ಬ ಮತ್ತು ಬಟ್ಟೆಯನ್ನು ಜೋಡಿಸಲು ಸಹಾಯ ಮಾಡಬಲ್ಲರು.
  4. ಆತಂಕವನ್ನು ತೋರ್ಪಡಿಸಬೇಡಿ: ಮಕ್ಕಳು ತಮ್ಮ ಪಾಲಕರ ಸಂಜ್ಞೆಗಳನ್ನು ಪತ್ತೆ ಹಚ್ಚುವಲ್ಲಿ ನಿಪುಣರಾಗಿರುತ್ತಾರೆ. ಪಾಲಕರಾಗಿ ನೀವು ಆತಂಕಗೊಂಡರೆ ಅದು ನಿಮ್ಮ ಮಗುವಿನಲ್ಲಿಯೂ ವ್ಯಕ್ತವಾಗಬಹುದು. ಆದ್ದರಿಂದ ನಿಮ್ಮ ಮಗುವಿನ ಜೋರಾದ ಅಳುವನ್ನು ಸಮಾಧಾನದಿಂದ ನಿಭಾಯಿಸಿದರೆ ಅರ್ಧ ಸಮಸ್ಯೆ ಪರಿಹಾರವಾದಂತೆ.
  5. ಇಷ್ಟವಾದ ವಸ್ತುಗಳು: ಮಕ್ಕಳಿಗೆ ಕೆಲವು ವಸ್ತುಗಳು ಸಮಾಧಾನ ಒದಗಿಸುತ್ತವೆ, ಉದಾಹರಣೆಗೆ ಮೆತ್ತನೆಯ ಗೊಂಬೆ. ಇಂತಹ ವಸ್ತುಗಳು ಮಕ್ಕಳಿಗೆ ಮನೆಯ ಸುರಕ್ಷತಾ ಭಾವ ಮತ್ತು ಪ್ರೀತಿಯನ್ನು ನೆನಪಿಸುತ್ತವೆ. ಆದ್ದರಿಂದ ಆತಂಕಗೊಂಡ ಮಕ್ಕಳಿಗೆ ಅವನ್ನು ತೆಗೆದುಕೊಂಡು ಹೋಗಲು ಬಿಡಿ. ಮಕ್ಕಳು ಶಾಲೆಗೆ ಹೊಂದಿಕೊಂಡಂತೆ ಸ್ನೇಹಿತರ ವಲಯಕ್ಕೆ ಆಕರ್ಷಿತರಾಗಿ ಇಂತಹ ವಸ್ತುಗಳ ಮೇಲಿನ ಅವಲಂಬನೆಯು ಕಡಿಮೆಯಾಗುತ್ತದೆ.
  6. ಅಲ್ಪಾವಧಿಯ ಪ್ರತ್ಯೇಕತೆಯನ್ನು ಅಭ್ಯಾಸ ಮಾಡಿಸಿ: ನಿಮ್ಮ ಮಗುವು ಆರಾಮವಾಗಿ ಇರಬಲ್ಲಂತಹ ಇನ್ನೊಬ್ಬ ವಿಶ್ವಾಸಪಾತ್ರ ವಯಸ್ಕರ ಜೊತೆಗೆ ಮಗುವನ್ನು ಕೆಲಕಾಲ ಬಿಡಿ. ಉದಾಹರಣೆಗೆ, ಅಜ್ಜಿ-ತಾತ. ಮಗುವು ಹೊಂದಿಕೊಂಡಂತೆಲ್ಲಾ ಪ್ರತ್ಯೇಕತೆಯ ಸಮಯವನ್ನು ಹೆಚ್ಚಿಸಿ.

ನೀವು ಯಾವಾಗ ಎಚ್ಚರಿಕೆ ವಹಿಸಬೇಕು?

ಮಗುವಿಗೆ 3 ವರ್ಷವಾಗುವ ಹೊತ್ತಿಗೆ ಅಂಗ್ಸೈಟಿ ಕಡಿಮೆಯಾಗುತ್ತದೆ. ಒಂದು ವೇಳೆ 4-5 ವರ್ಷದ ಮಗುವಿನಲ್ಲಿಯೂ ಈ ಸಮಸ್ಯೆಯಿದ್ದು, ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಈ ಸಮಸ್ಯೆ ಮುಂದುವರೆದರೆ, ಅದು ಸಮಸ್ಯೆಯ ಲಕ್ಷಣವಾಗಿರಬಹುದು. 

ನಿಮ್ಹಾನ್ಸಿನಲ್ಲಿ ಮಕ್ಕಳ ಮನಃಶಾಸ್ತ್ರಜ್ಷರಾಗಿರುವ ಡಾ. ಜಾನ್ ವಿಜಯ್ ಸಾಗರ್ ಅವರ ಪ್ರಕಾರ, “ನಿರಂತರವಾಗಿ ಶಾಲೆಗೆ ಹೋಗಲು ನಿರಾಕರಿಸುವುದು ,ಮತ್ತು ಆ ಬಗ್ಗೆ ಚಿಂತಿತರಾಗುವುದು ಸೆಪರೇಶನ್ ಅಂಗ್ಸೈಟಿ ಸಮಸ್ಯೆಯಿರುವ ಮಕ್ಕಳಲ್ಲಿ ಸಾಮಾನ್ಯ. ಇದು ಒಮ್ಮೊಮ್ಮೆ ಮಕ್ಕಳ ದೈನಂದಿನ ಚಟುವಟಿಕೆಯನ್ನೂ ಬಾಧಿಸುವ ಹಂತಕ್ಕೆ ತಲುಪುತ್ತದೆ.”  “ಅತಿ ಚಿಕ್ಕ ಮಕ್ಕಳಲ್ಲಿ ಪರೋಕ್ಷ ಚಿಕಿತ್ಸೆಗಳಾದ ಪ್ಲೇ ಥೆರಪಿ ಅಥವಾ ಕಲಾ ಚಿಕಿತ್ಸೆಯು ಪರಿಣಾಮಕಾರಿಯಾಗಿರುತ್ತದೆ. ಸ್ವಲ್ಪ ದೊಡ್ಡ ಮಕ್ಕಳಲ್ಲಿ ಕಾಗ್ನಿಟಿವ್ ಬಿಹೇವಿಯರ್ ಥೆರಪಿ, ರಿಲ್ಯಾಕ್ಸೇಶನ್ ಥೆರಪಿ ಮುಂತಾದವು ಸಹಾಯಕವಾಗಿರುತ್ತವೆ” ಎಂದು  ಡಾ. ಸಾಗರ್ ವಿವರಿಸುತ್ತಾರೆ.