ಬಸಿರಾಗುವ ಮುನ್ನ ಮತ್ತು ಬಸಿರಾದ ನಂತರ ಹೆಣ್ಣು ಮಕ್ಕಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿದ್ದರೆ ಹುಟ್ಟುವ ಮಕ್ಕಳ ತೂಕ ಕಡಿಮೆಯಾಗಿರುತ್ತದೆ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ಆರೋಗ್ಯ ಮನಶ್ಶಾಸ್ತ್ರದ ಪತ್ರಿಕೆಯೊಂದರಲ್ಲಿ ಪ್ರಕಟಿಸಲಾಗಿರುವ ಅಧ್ಯಯನದಲ್ಲಿ ತಾಯಂದಿರ ದೇಹದಲ್ಲಿರುವ ಕಾರ್ಟಿಸಾಲ್ ಪ್ರಮಾಣಕ್ಕೂ ಹುಟ್ಟುವ ಮಗುವಿನ ತೂಕಕ್ಕೂ ನೇರವಾದ ಸಂಬಂಧ ಇರುವುದನ್ನು ಗುರುತಿಸಲಾಗಿದೆ.
ವ್ಯಾಪಕವಾಗಿ ನಡೆಸಲಾಗಿರುವ ಅಧ್ಯಯನದ ಸಂದರ್ಭದಲ್ಲಿ 142 ಹೆಂಗಸರ ಮೇಲೆ ಪ್ರಯೋಗ ನಡೆಸಲಾಗಿದ್ದು ಬಸಿರಾದ ಮಹಿಳೆಯರು ಮತ್ತು ಅವರಿಗೆ ಹುಟ್ಟುವ ಮಕ್ಕಳು ಹೇಗೆ ಮಾನಸಿಕ ಒತ್ತಡದಿಂದ ಪ್ರಭಾವಕ್ಕೊಳಗಾಗುತ್ತಾರೆ ಎಂದು ಗುರುತಿಸಲಾಗಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (ಯುಸಿಎಲ್ಎ) ಮನಶ್ಶಾಸ್ತ್ರದ ಪ್ರೊಫೆಸರ್ ಕ್ರಿಸ್ ಡಂಕಲ್ ಸ್ಕೆಟರ್ ಅವರು ಹೇಳುವಂತೆ, ಒತ್ತಡ ಉಂಟುಮಾಡುವ ಹಾರ್ಮೋನ್ ಗಳಾದ ಕಾರ್ಟಿಸಾಲ್ ಪ್ರಮಾಣವು ಬಸಿರಿನ ಅವಧಿಯಲ್ಲಿ ಸಾಮಾನ್ಯವಾಗಿ ಎರಡರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಇದು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ.
ಆದರೆ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಾರ್ಟಿಸಾಲ್ ಹಾರ್ಮೋನ್ ಪ್ರಮಾಣ ಹೆಚ್ಚಾದಲ್ಲಿ ಗರ್ಭದಲ್ಲಿರುವ ಭ್ರೂಣಕ್ಕೆ ಸರಬರಾಜಾಗುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಭ್ರೂಣಕ್ಕೆ ಅಗತ್ಯವಾದ ಆಮ್ಲಜನಕ ಮತ್ತು ಪೌಷ್ಟಿಕಾಂಶಗಳು ಸಮರ್ಪಕವಾಗಿ ಪೂರೈಕೆಯಾಗುವುದಿಲ್ಲ. ಮಕ್ಕಳು ಹುಟ್ಟಿದ ನಂತರವೂ ಅವರ ಬೆಳವಣಿಗೆಯ ಹಂತದಲ್ಲಿ ಒತ್ತಡಗಳಿಗೆ ಸ್ಪಂದಿಸುವ ಸಾಮರ್ಥ್ಯದ ಮೇಲೆಯೂ ಇದು ಪರಿಣಾಮ ಬೀರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಹುಟ್ಟಿದ ಮಕ್ಕಳು ಕಡಿಮೆ ತೂಕ ಹೊಂದಿದ್ದರೆ ಬೆಳೆಯುತ್ತಾ ಹೋದಂತೆ ಹೃದಯ ರೋಗಗಳು ಮತ್ತು ಜೀವದ್ರವ್ಯದ ಕೊರತೆಗೂ ಕಾರಣವಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.