ತಾಯ್ತನ

ಗರ್ಭಪಾತದಿಂದ ಉಂಟಾಗುವ ಖಿನ್ನತೆಯನ್ನು ನಿಭಾಯಿಸುವುದು ಹೇಗೆ?

ಈ ಸಂದರ್ಭದಲ್ಲಿ ದುಃಖ – ಭಾವೋದ್ವೇಗಗಳು ಸ್ವಾಭಾವಿಕ ಪ್ರತಿಕ್ರಿಯೆಗಳಾಗಿದ್ದು, ನಿಮ್ಮ ಭಾವನೆಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ

ಶ್ರೀರಂಜಿತಾ ಜೇಯೂರ್ಕರ್

ಸುಮಾರು ಶೇಕಡಾ 30ರಷ್ಟು ಗರ್ಭಾವಸ್ಥೆಯು ಗರ್ಭಪಾತದಲ್ಲಿ ಅಂತ್ಯಗೊಳ್ಳುತ್ತದೆ ಎಂದು ಕೆಲವು ವರ್ಷಗಳ ಹಿಂದೆ ‘ಟೈಮ್ ಮ್ಯಾಗಜೀನ್’ ವರದಿ ಮಾಡಿತ್ತು. ಅಮೆರಿಕಾದಲ್ಲಿ ಕನಿಷ್ಟ ನಾಲ್ಕರಲ್ಲಿ ಒಬ್ಬ ಮಹಿಳೆ ಒಂದಲ್ಲ ಒಂದು ಹಂತದಲ್ಲಿ ಗರ್ಭಪಾತಕ್ಕೆ ಒಳಗಾಗುತ್ತಾರೆ ಎಂದು ಕೆಲವು ಸಮೀಕ್ಷೆಗಳು ಹೇಳಿದ್ದವು. ಭಾರತದಲ್ಲಿ 2400 ಮಹಿಳೆಯರನ್ನು ಆಯ್ದು ಅಧ್ಯಯನ ನಡೆಸಿದಾಗ, ಅವರಲ್ಲಿ ಶೇ.32ರಷ್ಟು ಮಹಿಳೆಯರು ಗರ್ಭಪಾತವನ್ನು ಅನುಭವಿಸಿರುವುದಾಗಿ ಹೇಳಿಕೊಂಡಿದ್ದರು.

ವಾಸ್ತವದಲ್ಲಿ ಗರ್ಭಪಾತದ ಪ್ರಮಾಣ ಅದು ಬೆಳಕಿಗೆ ಬರುವುದಕ್ಕಿಂತ ಹೆಚ್ಚಾಗಿದೆ. ಕೆಲವರು ತಮಗೆ ಗರ್ಭಪಾತವಾಗಿರುವುದನ್ನು ಹೆಳಿಕೊಳ್ಳುವುದೇ ಇಲ್ಲ. ಸಾಮಾನ್ಯವಾಗಿ ಮಹಿಳೆಯರು ಇದರಿಂದ ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಯಾತನೆಯನ್ನೂ ಅನುಭವಿಸಿರುತ್ತಾರೆ. ವೈಟ್ ಸ್ವಾನ್ ಫೌಂಡೇಶನ್, ಈ ಸಂದರ್ಭದಲ್ಲಿ  ಮಹಿಳೆಯರ ಮೇಲೆ ಉಂಟಾಗುವ ಭಾವನಾತ್ಮಕ ಪರಿಣಾಮಗಳನ್ನು ಅರಿಯುವ ಸಲುವಾಗಿ ಗರ್ಭಕೋಶ ತಜ್ಞರಾದ ಡಾ.ಶೈಬ್ಯಾ ಸಾಲ್ಡಾನ,ಡಾ.ಅರುಣ ಮುರಳೀಧರ್ ಮತ್ತು ಸೈಕ್ರಿಯಾಟ್ರಿಸ್ಟ್ ಡಾ.ಆಶ್ಲೇಷ ಬಗಾಡಿಯಾರೊಡನೆ ಸಂವಾದ ನಡೆಸಿತ್ತು. ಈ ಸಂವಾದದಿಂದ ಕಲೆ ಹಾಕಿದ ಅಂಶಗಳನ್ನು ಇಲ್ಲಿ ಲೇಖನ ರೂಪದಲ್ಲಿ ನೀಡಲಾಗಿದೆ.

ಗರ್ಭಪಾತವು ಮಹಿಳೆಯ ಜೀವನದಲ್ಲಿ ಭರಿಸಲಾಗದ ನಷ್ಟವನ್ನು ಉಂಟುಮಾಡಬಹುದು

ಗರ್ಭಪಾತವೆಂದರೆ ಬಹುತೇಕ ಶಿಶುವನ್ನೇ ಕಳೆದುಕೊಂಡಂತೆ. ಇದರಿಂದ ತಾಯಿಯು ತೀವ್ರತರವಾದ ದುಃಖವನ್ನು ಅನುಭವಿಸುತ್ತಾಳೆ; ಮತ್ತು ಈ ದುಃಖದಿಂದ ಹೊರಬರಲು ಅವಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಗರ್ಭಪಾತದಿಂದ ಒಂದು ಹೆಣ್ಣಿಗೆ ತಾಯ್ತನವನ್ನು ಅನುಭವಿಸುವ ಅವಕಾಶ ಕೈಗೂಡುವ ಮೊದಲೇ ತಪ್ಪಿಹೋಗುತ್ತದೆ. ಈ ದುಃಖವನ್ನು ತೋಡಿಕೊಳ್ಳುವ ಅವಕಾಶಗಳೂ ಆಕೆಗೆ ಅಷ್ಟಾಗಿ ಇರುವುದಿಲ್ಲ.

ಗರ್ಭಪಾತ ಎಷ್ಟು ತಡವಾಗಿ ಆಗುತ್ತದೆಯೋ, ದುಃಖ ಅಷ್ಟು ಹೆಚ್ಚಾಗುತ್ತಾ ಹೋಗುತ್ತದೆ

ಗರ್ಭವು ಬೆಳೆಯುತ್ತಾ ಹೋದಂತೆಲ್ಲಾ ತಾಯಿಯು ವಿವಿಧ ರೀತಿಯ ಸ್ಕ್ಯಾನಿಂಗ್ ಗಳಿಗೆ ಒಳಗಾಗುತ್ತಾಳೆ. ಅದರಲ್ಲಿ ಅವಳು ಶಿಶುವಿನ ಚಿತ್ರವನ್ನು ಮತ್ತು ಅದರ ಬೆಳವಣಿಗೆಯನ್ನು ಗಮನಿಸುತ್ತಾ ಅದರೊಡನೆ ಭಾವನಾತ್ಮಕವಾಗಿ ಬೆಸೆದುಕೊಳ್ಳುತ್ತಾ ಹೋಗುತ್ತಾಳೆ. ಆದ್ದರಿಂದ ಎರಡನೆ ಅಥವಾ ಮೂರನೆ ಹಂತದಲ್ಲಿ ಆಗುವ ಗರ್ಭಪಾತವು ತಾಯಿಯ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಬಹಳಷ್ಟು ಮಹಿಳೆಯರು ತಮ್ಮಿಂದಲೇ ತಪ್ಪಾಗಿದೆಯೆಂದು ಭಾವಿಸುತ್ತಾರೆ; ಆದರೆ ಅದು ಸರಿಯಲ್ಲ

ಗರ್ಭಪಾತವಾದ ಮಹಿಳೆ ತನ್ನಿಂದಲೇ ಏನೋ ಅಪರಾಧವಾಗಿದೆ ಎಂದು ವಿಷಾದಿಸುತ್ತಾಳೆ. ಮತ್ತು ತಾನು ಸೋತುಹೋದೆನೆಂದು ಭಾವಿಸುತ್ತಾಳೆ. ಈ ಭಾವನೆಯು ಅವಳು ತನ್ನನ್ನು ತಾನೇ ದೂಷಿಸಿಕೊಳ್ಳಲು ಆರಂಭಿಸುತ್ತಾಳೆ. ವಿಪರೀತ ಕೆಲಸ ಮಾಡುವುದರಿಂದ, ಪ್ರಯಾಣ ಮಾಡುವುದರಿಂದ ಅಥವಾ ಪಪ್ಪಾಯ ತಿನ್ನುವುದರಿಂದ ಗರ್ಭಪಾತವಾಗುತ್ತದೆ ಎಂಬ ವದಂತಿಗಳು ಬಹಳಷ್ಟಿವೆ. ಯೋಜಿತವಲ್ಲದ ಗರ್ಭಧಾರಣೆಯ ಸಂದರ್ಭದಲ್ಲಿ ಗರ್ಭಪಾತವಾದಾಗ, ಹೆಣ್ಣಿನಲ್ಲಿ ತಾನು ಮಗುವನ್ನು ಬಯಸುತ್ತಿರಲಿಲ್ಲವಾಗಿ ಅದು ಸತ್ತುಹೋಯಿತು ಎಂಬ ಪಾಪಪ್ರಜ್ಞೆ ಬೆಳೆಯುವುದೂ ಇದೆ. ಇದು ಸರಿಯಾದ ಆಲೋಚನಾಕ್ರಮವಲ್ಲ. ಆರಂಭಿಕ ಹಂತಗಳಲ್ಲಿ ಕ್ರೋಮೋಸೋಮ್ ವೈಕಲ್ಯಗಳ ಕಾರಣದಿಂದ ಗರ್ಭಪಾತ ಉಂಟಾಗುತ್ತದೆ.

ಕೆಲವೊಮ್ಮೆ ಗರ್ಭಪಾತವನ್ನು ಖಾತ್ರಿಪಡಿಸಿಕೊಳ್ಳುವುದು ಕಠಿಣವಾಗಿರುತ್ತದೆ

ಬಹುತೇಕವಾಗಿ ತೀವ್ರ ರಕ್ತಸ್ರಾವ, ಕಿಬ್ಬೊಟ್ಟೆ ನೋವು, ಬೆನ್ನು ಹುರಿ ನೋವು ಮೊದಲಾದವುಗಳ ಮೂಲಕ ಗರ್ಭಪಾತದ ಸೂಚನೆ ದೊರೆತುಬಿಡುತ್ತದೆ. ಆದರೆ ಕೆಲವರಿಗೆ ಅಂತಹಾ ಯಾವ ಸೂಚನೆಯೂ ದೊರೆಯುವುದಿಲ್ಲ. ಆಗ ಸ್ಕ್ಯಾನಿಂಗ್ ಅಥವಾ ಭ್ರೂಣದ ಎದೆ ಬಡಿತ ಪರೀಕ್ಷಿಸುವ ವಿಧಾನಗಳ ಮೂಲಕ ಗರ್ಭಪಾತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಆರಂಭಿಕ ಹಂತದ ಗರ್ಭಪಾತದಲ್ಲಿ ಹೆಣ್ಣು ಹೆಚ್ಚು ಏಕಾಂಗಿತನ ಅನುಭವಿಸುತ್ತಾಳೆ

ಮೊದಲ ಮೂರು ತಿಂಗಳೊಳಗೆ ಗರ್ಭಪಾತವುಂಟಾದ ಸಂದರ್ಭದಲ್ಲಿ, ಹೆಣ್ಣು ಎಲ್ಲರಿಗೂ ಆ ವಿಷಯವನ್ನು ಹೇಳಬೇಕಾಗಿ ಬರುವುದಿಲ್ಲ. ಈ ಹಂತದಲ್ಲಿ ಕೇವಲ ಆಪ್ತೇಷ್ಟರಿಗೆ ಮಾತ್ರ ವಿಷಯ ಗೊತ್ತಿರುತ್ತದೆಯಾದ್ದರಿಂದ, ಆಕೆ ಈ ‘ಕೆಟ್ಟ ಸುದ್ದಿ’ಯನ್ನು ಮತ್ತೆ ಮತ್ತೆ ಹೇಳುವ ಸಂಕಟದಿಂದ ಪಾರಾಗುತ್ತಾಳೆ.

ಆದರೆ, ಇದರಿಂದ ಒಂದು ಸಮಸ್ಯೆಯೂ ಇದೆ. ಹೆಚ್ಚು ಜನರೊಡನೆ ವಿಷಯ ಹೇಳಿಕೊಳ್ಳದೆ ಇರುವುದರಿಂದ, ಹೆಣ್ಣಿಗೆ ತನ್ನ ದುಃಖವನ್ನು ಹೊರಹಾಕುವ ಅವಕಾಶಗಳ ಪ್ರಮಾಣವೂ ಕಡಿಮೆ ಇರುತ್ತದೆ. ಆದ್ದರಿಂದ ಆಕೆ ತಾನೊಬ್ಬಳೇ, ಒಂಟಿಯಾಗಿ ಅದನ್ನು ಅನುಭವಿಸಬೇಕಾಗುತ್ತದೆ.

ಗರ್ಭಪಾತವಾದಾಗ ಕೇಳಿಬರುವ ಪ್ರತಿಕ್ರಿಯೆಗಳು ತಾಯಿಯ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ

ಗರ್ಭಪಾತವಾದಾಗ ತನ್ನ ಕುಟುಂಬವರ್ಗದಿಂದ ಕೇಳಿಬರುವ ಮಾತುಗಳು, ಅವರ ಪ್ರತಿಕ್ರಿಯೆಗಳು ತಾಯಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಒಂದು ವೇಳೆ ಕುಟುಂಬದವರು ಇದಕ್ಕೆಲ್ಲಾ ಆಕೆಯೇ ಕಾರಣವೆಂದು ದೂರಿದರೆ, ಅಥವಾ ಉದ್ದೇಶಪೂರ್ವಕವಾಗಿ ಅವಳು ಇದನ್ನು ಮಾಡಿದ್ದಾಳೆ ಎಂದು ಅನುಮಾನ ಪಟ್ಟರೆ, ಗರ್ಭಪಾತಗೊಂಡ ತಾಯಿಯು ದುಃಖದಿಂದ ಹೊರಬರಲು ವಿಪರೀತ ಕಷ್ಟವಾಗುತ್ತದೆ. ಅದರ ಬದಲು, ಆಕೆಗೆ ಸೂಕ್ತ ಬೆಂಬಲ ನೀಡಿ ಪ್ರೀತಿಯಿಂದ ವರ್ತಿಸಿದರೆ, ಆಕೆ ಬಹಳ ಬೇಗ ಚೇತರಿಸಿಕೊಳ್ಳುತ್ತಾಳೆ.  

ಗರ್ಭಪಾತದ ನೋವನ್ನು ನಿಭಾಯಿಸುವುದು : ನಾನೇನು ಮಾಡಬಹುದು?

ನೀವೇನಾದರೂ ಗರ್ಭಪಾತವನ್ನು ಅನುಭವಿಸಿದ್ದರೆ, ನಿಮ್ಮ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಈ ನಿಟ್ಟಿನಲ್ಲಿ ನೀವು ಮಾಡಬಹುದಾದ ಕೆಲವು ಸಂಗತಿಗಳು ಹೀಗಿವೆ:

  • ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಿ. ನೀವು ದೈಹಿಕವಾಗಿ ನಿತ್ರಾಣಗೊಂಡಿರುತ್ತೀರಿ. ಆದ್ದರಿಂದ, ಒಂದೆರಡು ವಾರಗಳ ಕಾಲ ವಿಶ್ರಾಂತಿ ಪಡೆದರೆ, ನಂತರದಲ್ಲಿ ನಿಮ್ಮ ದೇಹದ ಶಕ್ತಿಯನ್ನು ಮರಳಿ ಗಳಿಸಬಹುದು.
  • ನಿಮ್ಮ ನೋವನ್ನು ಯಾರೊಂದಿಗೆ ಹಂಚಿಕೊಳ್ಳಬಹುದೆಂದು ನೀವೇ ಆಯ್ಕೆ ಮಾಡಿಕೊಳ್ಳಿ. ಯಾರೊಂದಿಗೆ ಈ ವಿಷಯವನ್ನು ಚರ್ಚಿಸಲು ನಿಮಗೆ ಇಷ್ಟವಾಗುವುದಿಲ್ಲವೋ, ಕಿರಿಕಿರಿಯಾಗುವುದೋ; ಅವರಿಗೆ ಈ ವಿಷಯದ ಬಗ್ಗೆ ಚರ್ಚೆ ಬೇಡವೆಂದು ನೇರವಾಗಿ, ವಿಧೇಯತೆಯಿಂದ ಹೇಳಿಬಿಡಿ.
  • ನಿಮಗೆ ಯಾರ ಮೇಲೆ ಹೆಚ್ಚಿನ ನಂಬಿಕೆ ಇದೆಯೋ ಅವರೊಡನೆ ಮಾತಾಡಿ. ಅವರು ನಿಮ್ಮ ಸಂಗಾತಿಯಿರಬಹುದು, ಕುಟುಂಬದ ಯಾವುದೇ ಸದಸ್ಯರಿರಬಹುದು ಅಥವಾ ನಿಮ್ಮ ಗೆಳಯರಾಗಿರಬಹುದು; ಯಾರೊಂದಿಗೆ ಸಮಾಲೋಚನೆ ನಡೆಸಿದರೂ ನಿಮ್ಮ ಸಂಗಾತಿ ನಿಮ್ಮ ಜೊತೆಗಿರಲಿ. ಏಕೆಂದರೆ ನಿಮ್ಮ ನೋವಿನಲ್ಲಿ ಅವರೂ ಪಾಲುದಾರರಾಗಿರುತ್ತಾರೆ.
  • ನಿಮ್ಮ ಭಾವನೆಗಳನ್ನು ನಿಮಗೆ ಸೂಕ್ತವೆನ್ನಿಸುವ ರೀತಿಯಲ್ಲಿ ವ್ಯಕ್ತಪಡಿಸಿ. ಬರವಣಿಗೆಯ ರೂಪದಲ್ಲಿ ಅಥವಾ ಯಾವುದೇ ರೀತಿಯ ರಚನಾತ್ಮಕ ಚಟುವಟಿಕೆಗಳ ಮೂಲಕ ಅದನ್ನು ಹೊರಹಾಕಿ.
  • ನಿಮ್ಮ ನೋವನ್ನು ಮರೆಯಲು ಮತ್ತು ದುಃಖದಿಂದ ಹೊರಬರಲು ಯಾವುದಾದರೂ ಧಾರ್ಮಿಕ ಆಚರಣೆಗಳನ್ನು (ಪೂಜೆ, ಯಾತ್ರೆ ಇತ್ಯಾದಿ) ನೆರವೇರಿಸಿ.

ಅದು ಕೇವಲ ದುಃಖವಷ್ಟೇ ಆಗಿರದಿದ್ದರೆ?

ಗರ್ಭಪಾತದಿಂದ ಮಗುವನ್ನು ಕಳೆದುಕೊಂಡ ಹೆಣ್ಣು ಅತಿಹೆಚ್ಚಿನ ಸಂಕಟವನ್ನು ಅನುಭವಿಸುತ್ತಾಳೆ. ಕ್ರಮೇಣ ಆಕೆಯ ದುಃಖದ ತೀವ್ರತೆ ಕಡಿಮೆಯಾಗುತ್ತದೆ. ಮತ್ತು ಆಕೆ ದೈಹಿಕ ಮತ್ತು ಮಾನಸಿಕವಾಗಿಯೂ ಚೇತರಿಸಿಕೊಳ್ಳುತ್ತಾಳೆ. ಆದರೆ ಕೆಲವು ಮಹಿಳೆಯರಲ್ಲಿ ಹಾಗೆ ಆಗುವುದಿಲ್ಲ. ಅವರ ದುಃಖದ ತೀವ್ರತೆ ತಗ್ಗುವ ಬದಲು ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅಂಥವರಿಗೆ ಸೂಕ್ತ ಚಿಕಿತ್ಸೆ ಮತ್ತು ನೆರವಿನ ಅಗತ್ಯ ಬೀಳುತ್ತದೆ.

ಅಂತಹ ಕೆಲವು ಲಕ್ಷಣಗಳು ಹೀಗಿವೆ:

  • ನಿದ್ರೆಯಲ್ಲಿ ವ್ಯತ್ಯಯ : ಸರಿಯಾಗಿ ನಿದ್ರೆ ಬಾರದಿರುವುದು ಅಥವಾ ಅತಿ ಹೆಚ್ಚು ನಿದ್ರಿಸುವುದು
  • ನಿರಂತರವಾದ ಪಾಪಪ್ರಜ್ಞೆ (“ನಾನೇನೋ ತಪ್ಪುಮಾಡಿದ್ದೇನೆ” ಅಥವಾ “ನಾನು ಸರಿ ಇಲ್ಲ” ಇತ್ಯಾದಿ ಭಾವನೆಗಳು)
  • ಚಿಂತೆಯ ಮರುಕಳಿಸುವಿಕೆ (ಪದೇ ಪದೇ ಇನ್ನುಮುಂದೆ ನನಗೆ ಮಕ್ಕಳಾಗುವುದಿಲ್ಲ ಎಂದು ಚಿಂತಿಸುವುದು)
  • ಯಾರೊಂದಿಗೂ ತನ್ನ ನೋವಿನ ಬಗ್ಗೆ ಹೇಳಿಕೊಳ್ಳಲಾಗದೆ ಇರುವುದು.
  • ಸದಾ ದುಃಖತಪ್ತಳಾಗಿರುವುದು, ಹತಾಶೆ, ಖಿನ್ನತೆ, ನಿರಾಶಾವಾದ ಮೊದಲಾದ ಮಾನಸಿಕ ಸಮಸ್ಯೆಗಳು ಬಾಧಿಸುವುದು; ಮತ್ತು ವಿವರಿಸಲಾಗದಂಥ ದೈಹಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು
  • ಸಾವಿನ ಅಥವಾ ಸಾಯುವ ಬಗ್ಗೆ ಯೋಚನೆ

ಸತತ ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಇಂತಹ ಯಾವುದೇ ಲಕ್ಷಣಗಳು ನಿಮ್ಮ ಗಮನಕ್ಕೆ ಬಂದರೆ, ಸಹಾಯವಾಣಿಗೆ ಕರೆ ಮಾಡಿ; ಅಥವಾ ಆಪ್ತಸಮಾಲೋಚಕರನ್ನು ಸಂಪರ್ಕಿಸಿ.