ತಾಯ್ತನ

ನಿರೂಪಣೆ: ಮಗು ಜನಿಸಿದ ನಂತರ, ಸುಧಾ ಅವರ ವರ್ತನೆಯಲ್ಲಿ ಗಣನೀಯ ಬದಲಾವಣೆ ಆಗಿದೆ.

ಪ್ರಸವಾನಂತರದ ಖಿನ್ನತೆ ಒಂದು ತಾತ್ಕಾಲಿಕ ಖಾಯಿಲೆ ಮತ್ತು ಇದನ್ನು ಗುಣಪಡಿಸಬಹುದಾಗಿದೆ

ಡಾ.ಪ್ರೀತಿ ಎಸ್

೩೨ ವರ್ಷದ ಸುಧಾ ಜೀವನದಲ್ಲಿ ಬಯಸಿದ್ದನ್ನೆಲ್ಲ ಪಡೆದಿದ್ದಾರೆ. ಒಂದು ಒಳ್ಳೆಯ ಕೆಲಸ, ಪ್ರೀತಿಸುವ, ಉತ್ತಮ ಮತ್ತು ಜವಾಬ್ದಾರಿಯುತ ಪತಿ, ಸುಂದರ ಮನೆ ಮತ್ತು ಉತ್ತಮ ಸ್ನೇಹಿತರನ್ನು ಸುಧಾ ಸಂಪಾದಿಸಿದ್ದಾರೆ. ಅವರು ಉತ್ಸಾಹಿಯಾಗಿದ್ದು, ಹೆಚ್ಚು ಮಾತನಾಡುವವರು. ಜೊತೆಗೆ ಇತರರ ಕುರಿತು ತುಂಬಾ ಸೂಕ್ಷ್ಮ. ಆದರೆ ಅವರಲ್ಲಿ ಆಳವಾಗಿದ್ದ ಮಗುವನ್ನು ಹೊಂದುವ ಬಯಕೆ ಸದಾ ಅವರನ್ನು ಕೊರಗುವಂತೆ ಮಾಡುತ್ತಿತ್ತು.

ಈ ದಂಪತಿ ಮಗುವನ್ನು ಪಡೆಯಲು ಸರ್ವ ರೀತಿಯಲ್ಲಿ ಪ್ರಯತ್ನಿಸಿದರೂ ಸುಧಾ ಮಾತ್ರ ಗರ್ಭಿಣಿ ಆಗಲಿಲ್ಲ.ಅನೇಕ ತಿಂಗಳು ಕಳೆದ ನಂತರ ಮತ್ತು ಕೆಲವು ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಿದ ಬಳಿಕ ಅಂತಿಮವಾಗಿ ಅವರು ಗರ್ಭಿಣಿ ಆದರು.

ಅವರ ಸಂತೋಷಕ್ಕೆ ಪಾರವಿರಲಿಲ್ಲ ಮತ್ತು ಪೋಷಕರಾಗಿ ಹೊಸ ಪಾತ್ರವನ್ನು ನಿರ್ವಹಿಸಲು ಅವರು ಸಿದ್ಧರಾದರು.

ಒಂದು ಸುಂದರವಾದ ಗಂಡು ಮಗು ಜನಿಸಿತು ಮತ್ತು ಇಡೀ ಕುಟುಂಬ ಸಂತೋಷಪಟ್ಟಿತು. ಕೆಲವು ದಿನಗಳ ನಂತರ ಸುಧಾ ಅವರ ವರ್ತನೆಯಲ್ಲಿ ಗಣನೀಯ ಬದಲಾವಣೆ ಕಂಡುಬಂದಿತ್ತು. ಅವರು ಒಮ್ಮೊಮ್ಮೆ ಅತಿಯಾಗಿ ಸಿಡುಕುತ್ತಿದ್ದರು, ಕಿರಿಕಿರಿಗೊಳ್ಳುತ್ತಿದ್ದರು ಮತ್ತು ಆಗಾಗ ಪತಿಯೊಂದಿಗೆ ಜಗಳ ಮಾಡುತ್ತಿದ್ದರು.

ಅವರು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡು ಹೆಚ್ಚಿನ ಸಮಯ ಅಳುತ್ತಿದ್ದರು. ಸುಧಾ ಅವರಿಗೆ ಸಹಾಯಬೇಕಿದೆ ಎಂದು ಅವರ ಪತಿಗೆ ಮನವರಿಕೆಯಾಯಿತು ಮತ್ತು ಸುಧಾ ಅವರನ್ನು ಸ್ಥಳಿಯ ಮನೋವೈದ್ಯರ ಹತ್ತಿರ ಕರೆದುಕೊಂಡು ಹೋದರು. ವೈದ್ಯರು ಸುಧಾ ಅವರ ಪರಿಸ್ಥಿತಿಯನ್ನು ವಿವರವಾಗಿ ಮೌಲ್ಯಮಾಪನ ಮಾಡಿದಾಗ ವೈದ್ಯರಿಗೆ ಮಗು ಜನಿಸಿದ ನಂತರ ಆಕೆ ಮೊದಲಿನಂತಿಲ್ಲ ಎಂಬುದು ಸ್ಪಷ್ಟವಾಯಿತು. ಅವರು ತುಂಬಾ ದುಃಖ, ದಣಿವು ಹತಾಶೆಗೆ ಒಳಗಾಗಿದ್ದರು. ಮತ್ತು ಮಗು ಜನಿಸಿದ ನಂತರ ಅವರು ಸಂತೋಷವನ್ನು ನೋಡಲೇ ಇಲ್ಲ. ವಾಸ್ತವವಾಗಿ ಅವರು ಮಗುವಿನ ಜೊತೆ ಬಾಂಧವ್ಯ ಹೊಂದಿರಲೇ ಇಲ್ಲ. ಅವರಿಗೆ ಜೀವನದ ಅರ್ಥ ಗೊತ್ತಾಗಲಿಲ್ಲ. ಸುಧಾ ಅವರು ಹಸಿವಿನ ಕೊರತೆಯಿಂದ ತೂಕವನ್ನು ಕಳೆದುಕೊಂಡರು. ಎಲ್ಲ ಲಕ್ಷಣಗಳನ್ನು ಮೌಲ್ಯಮಾಪನ ಮಾಡಿದ ನಂತರ ವೈದ್ಯರು ಪ್ರಸವಾನಂತರದ ಖಿನ್ನತೆಯ ಪ್ರಾಥಮಿಕ ತಪಾಸಣೆ ನಡೆಸಿದರು.

ಪ್ರಸವಾನಂತರದ ಖಿನ್ನತೆ ಮಗು ಜನಿಸಿದ ನಂತರ ತಾಯಿಗೆ ಪರಿಣಾಮ ಬೀರುವ ಖಿನ್ನತೆ ಮತ್ತು ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಹಾರ್ಮೋನಿನ ಏರಿಳಿತ, ನಿದ್ದೆಯ ಕೊರತೆ, ತಾಯಿಯಾಗುವಿಕೆ ಕುರಿತು ಭಯ, ಅನುವಂಶಿಯ ಅಂಶಗಳು ಅಥವಾ ಮೊದಲ ಗರ್ಭಧಾರಣೆ ಈ ಖಿನ್ನತೆಗೆ ಕಾರಣವಾಗಬಹುದು.

ಆ ಸಮಯದಲ್ಲಿ ಸೂಕ್ತ ಮಧ್ಯಸ್ತಿಕೆ ಅಗತ್ಯವಾಗಿದ್ದು ಪತಿ ಅಥವಾ ಕುಟುಂಬದ ಇತರೆ ಸದಸ್ಯರು ಹೊಸತಾಗಿ ತಾಯಿಯಾದವರಲ್ಲಿ ಇಂಥ ಲಕ್ಷಣಗಳನ್ನು ಗಮನಿಸುತ್ತಿರಬೇಕು. ಮೊದಲ ಸಲ ತಾಯಿಯಾದವರಿಗೆ ಅವರ ಪತಿಯಿಂದ ಹೆಚ್ಚಿನ ಭಾವನಾತ್ಮಕ ಬೆಂಬಲ ಅಗತ್ಯ. ಅವಳ ಭಾವನೆಗಳನ್ನು, ಅವಳ ನಕಾರಾತ್ಮಕ ಭಾವನೆಗಳನ್ನು ಅರ್ಥಮಾಡಿಕೊಂಡು ಅವಳ ಜೊತೆಯಲ್ಲಿದ್ದು ಆಕೆಯ ತಾಯ್ತನದ ಅವಧಿಯಲ್ಲಿ ತ್ವರಿತವಾಗಿ ಚೇತರಿಸಿಕೊಂಡು ತಾಯ್ತನದ ಸವಿಯನ್ನು ಅನುಭವಿಸುವಂತೆ ಸಹಾಯ ಮಾಡಬೇಕು. ಈ ಲಕ್ಷಣಗಳು ಹದಗೆಟ್ಟರೆ ಆಕೆಗೆ ಆಪ್ತ ಸಮಾಲೋಚನೆ ಮತ್ತು ಔಷಧಿಗಳ ನೆರವು ಅಗತ್ಯ.

ಈ ಕಾಲ್ಪನಿಕ ನಿರೂಪಣೆಯನ್ನು ಬೆಂಗಳೂರಿನ ಸ್ಪಂದನ ನರ ವಿಜ್ಞಾನ ಮತ್ತು ಮಾನಸಿಕ ಆರೋಗ್ಯದ ಕೇಂದ್ರದಲ್ಲಿ(ಸಿಮ್ಹಾನ್ಸ್‌) ವೈದ್ಯಕೀಯ ಅಭ್ಯಾಸ ಮಾಡುತ್ತಿರುವ ಮನೋವೈದ್ಯೆ ಡಾ.ಪ್ರೀತಿ ಎಸ್ ಬರೆದಿದ್ದಾರೆ.