ತಾಯ್ತನ

ತಾಯ್ತನವು ನನ್ನ ಗೆಳೆತನವನ್ನು ಹೊಸತಾಗಿ ನಿರೂಪಿಸಿತು

ರಶ್ಮಿ ವಾಸುದೇವ

ನಾನು ಮತ್ತು ನನ್ನ ಹಳೆಯ ಗೆಳತಿ ಫೇಸ್ ಬುಕ್’ನಲ್ಲಿ ಸಮಯ ಕಳೆಯಲಿಕ್ಕೆ, ಕ್ವಿಜ್’ಗಳಿಗೆ ಉತ್ತರಿಸುವ ಆಟ ಆಡುತ್ತಿದ್ದೆವು. ಅದರಲ್ಲೊಂದು ಪ್ರಶ್ನೆ, “ಇನ್ನು 10 ವರ್ಷಗಳ ನಂತರ ನೀವು ಏನೆಂದು ಗುರುತಿಸಲ್ಪಡುತ್ತೀರಿ?” ಎಂದಿತ್ತು. ಇದಕ್ಕೆ ಉತ್ತರವಾಗಿ ನನಗಿಂತ 5 ವರ್ಷ ಕಿರಿಯಳಾದ, ಹೊಸತಾಗಿ ಮದುವೆಯಾಗಿರುವ ಗೆಳತಿ, “ಅನಂತರದಲ್ಲಿ ನಾವು ಒಬ್ಬ ತಾಯಿ ಎಂದೇ ಗುರುತಿಸಲ್ಪಡುತ್ತೇವೆ. ಅಲ್ವೆ?” ಎಂದು ಮರುಪ್ರಶ್ನೆ ಹಾಕಿದಳು.

ಇದನ್ನು ನೋಡುತ್ತಲೇ ನನ್ನ ತಲೆಯಲ್ಲಿ ಮೂರು ಭಿನ್ನ ಚಿತ್ರಗಳು ಹಾದುಹೋದವು. ಮೊದಲನೆಯದು, ನಾನು ಮತ್ತು ಈ ನನ್ನ ಗೆಳತಿ ಲಂಡನ್ನಿನಲ್ಲಿ ನಮ್ಮ ನಮ್ಮ ಬದುಕನ್ನು ಎಂಜಾಯ್ ಮಾಡುತ್ತಾ ಪಾರ್ಟಿ ಮಾಡುತ್ತಿರುವುದು; ಎರಡನೆಯದು, ಬಚ್ಚಲುಮನೆಯಲ್ಲಿ ಮಗುವನ್ನು ಸಂಭಾಳಿಸುತ್ತಿರುವುದು, ಮೂರನೆಯದಾಗಿ ನಾನೂ ನನ್ನ ಮಗುವೂ ಸುಮ್ಮಸುಮ್ಮನೆ ಕಾರಣವಿಲ್ಲದೆ ಖುಷಿಯಿಂದ ಜೋರಾಗಿ ನಗುತ್ತಿರುವುದು. ಈ ಮೂರನೇ ಚಿತ್ರ ನನ್ನ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡು ನಿಂತುಬಿಟ್ಟಿತು. ಆದರೆ ಈ ಪ್ರಶ್ನೆಯಿಂದಾಗಿ ನನ್ನ ಗೆಳತಿಯಿಂದ ನಾನು ಒಂದು ಹೆಜ್ಜೆ ಹಿಂದೆ ಸರಿಯುವಂತಾಯ್ತು.

ನೀವು ತಾಯಿಯಾಗಿ ಜವಾಬ್ದಾರಿ ನಿಭಾಯಿಸುವ ಜೊತೆಗೆ ಗೆಳೆತನವನ್ನೂ ಹೇಗೆ ನಿಭಾಯಿಸಬೇಕೆಂದು ಯಾರೂ ಹೇಳಿ ಕೊಡುವುದಿಲ್ಲ. ಹಾಗೆಯೇ ತಾಯ್ತನದ ಪ್ರಯಾಣ ಅದೆಷ್ಟು ಒಬ್ಬಂಟಿ ಎನ್ನುವುದನ್ನೂ ಹೇಳುವುದಿಲ್ಲ. “ತಾಯಿಯಾಗುವುದು ಎಂದರೆ ಜೀವನದ ಬಹಳ ದೊಡ್ಡ ಬದಲಾವಣೆಗೆ ಒಳಗಾಗುವುದು. ಬೆನ್ನಲ್ಲಿ ನಡುಕ ಹುಟ್ಟಿಸಿದರೂ ಇದೊಂದು ಆತ್ಮಸಂತೃಪ್ತಿ ನೀಡುವ ಅನುಭವವೂ ಆಗಿರುವುದು” ಎಂದೇ ಬಹುತೇಕರ ಅಭಿಪ್ರಾಯ. ಆದರೆ ನನ್ನ ಅನುಭವ ಬೇರೆಯೇ ಇದೆ. ನಾನು ತಾಯಿಯಾದಾಗ ಒಬ್ಬಂಟಿಯಾಗಿರುವಂತೆ ಭಾಸವಾಗುತ್ತಿತ್ತು. ನನ್ನ ಸಹಪಾಠಿಯೂ, ಆಪ್ತಳೂ ಆಗಿದ್ದ ಗೆಳತಿಯೊಬ್ಬಳು ಎರಡು ಮಕ್ಕಳ ತಾಯಿಯಾಗಿದ್ದಳು. ಸಮಯ ಸಿಕ್ಕಾಗೆಲ್ಲ ಅವಳ ಜೊತೆ ಚಾಟ್ ಮಾಡುತ್ತಿದ್ದೆ. ಆಗ ಮಾತಾಡುತ್ತಿದ್ದುದೆಲ್ಲ ನನ್ನ ಮಗುವಿನ ಬಗ್ಗೆಯೇ. ಮಗುವಿನ ಕುರಿತು ನನ್ನ ಆತಂಕಗಳ ಕುರಿತಾಗಿಯೇ. ಅದನ್ನು ಕಂಡು ನನ್ನ ಗೆಳತಿ ‘ಫಸ್ಟ್ ಚೈಲ್ಡ್ ಸಿಂಡ್ರೋಮ್’ ಎಂದು ನಗುತ್ತಿದ್ದಳು.

ಮತ್ತೆ ಇದೂ ಕೂಡಾ ನೆನಪಿದೆ. ನಾನು ಆ ದಿನಗಳಲ್ಲಿ ಯಾರು ಸಿಕ್ಕರೂ ಮಾತಾಡುತ್ತಿದ್ದುದು ನನ್ನ ಮಗುವಿನ ಕುರಿತಾಗಿಯೇ. ಒಂದು ಮಧ್ಯಾಹ್ನ ಹಳೆಯ ಸಹೋದ್ಯೋಗಿಯೊಬ್ಬರು ನನ್ನ ಭೇಟಿಗೆಂದು ಬಂದಿದ್ದರು. ಅವರ ಜೊತೆ ಕಳೆದ ಅಷ್ಟೂ ಹೊತ್ತು ನಾನು ನನ್ನ ಮಗುವಿನ ಆಟಪಾಠಗಳ ಕುರಿತಾಗಿಯೇ ಮಾತನಾಡಿದ್ದೆ. ನನ್ನ ತಾಯ್ತನ ನನ್ನನ್ನು ಬೇರೇನೂ ಯೋಚಿಸದ ಸ್ಥಿತಿಗೆ ತಂದು ನಿಲ್ಲಿಸಿತ್ತು. ಮೊದಲೇ ಒಂಟಿಯಾಗಿದ್ದ ನಾನು ಮತ್ತಷ್ಟು ಮುಖ ತಿರುಗಿಸುತ್ತ ಹೋದೆ. ಸ್ವಲ್ಪ ಸಮಯ ಸಿಕ್ಕರೂ ಅದನ್ನು ಕೇವಲ ನನಗಾಗಿ ವಿನಿಯೋಗಿಸಬೇಕು ಅನ್ನಿಸುತ್ತಿತ್ತು. ಚೆನ್ನಾಗಿ ಮಲಗಿ ನಿದ್ರಿಸಬೇಕೆಂದು ಅದಕ್ಕಾಗಿ ಕಾದಿರುತ್ತಿದ್ದೆ.

ಆದರೆ ಇದೆಲ್ಲ ನನಗೆ ಅಷ್ಟೇನೂ ಹಿತವಾಗಿರಲಿಲ್ಲ. ನನ್ನ ಸಾಮಾಜಿಕ ಕೌಶಲ್ಯಗಳು ಮಿತವಾಗತೊಡಗಿದವು. ನನ್ನ ಸಂಭಾಷಣೆಯೆಲ್ಲವೂ ಮಗುವಿಗೆ ಹಕ್ಕಿ – ಚಂದ್ರರನ್ನು ತೋರಿಸಿ ಉಣಿಸುವುದಕ್ಕೆ ಸೀಮಿತವಾಗುತ್ತಿತ್ತು. ಅದರ ಸ್ನಾನ, ಉಣಿಸು, ನಿದ್ರೆಗಳಿಗೆ, ಅಳು ಮತ್ತು ನಗುವನ್ನು ಸಂಭಾಳಿಸಲಿಕ್ಕೆ ನನ್ನ ಜಾಣತನವೆಲ್ಲ ಖರ್ಚಾಗುತ್ತಿದ್ದವು.

ಈ ಮಾತುಗಳಿಗಾಗಿ ನನ್ನನ್ನು ತಪ್ಪಾಗಿ ಭಾವಿಸುವ ಅಗತ್ಯವಿಲ್ಲ. ನಾನು ಹೃದಯಪೂರ್ವಕವಾಗಿ ಬಯಸಿಯೇ ತಾಯಿಯಾಗಿದ್ದೆ. ಹಾಗಿದ್ದೂ ನನಗೆ ‘ಬೇರೇನೋ ಬೇಕಿತ್ತು’ ಅನ್ನುವ ಕೊರತೆ ಕಾಡುತ್ತಿತ್ತು. ಬೇರೇನನ್ನೂ ಅನುಭವಿಸಲು ನನಗೆ ಸಮಯವೇ ಸಿಗುತ್ತಿಲ್ಲ ಎಂದು ಬೇಸರವಾಗುತ್ತಿತ್ತು. ನನ್ನ ಮೆದುಳಿನ ತುಂಬ ಮಗುವಿನ ಯೋಚನೆಯೇ ತುಂಬಿ ಹೋಗಿತ್ತು. ಮಗುವನ್ನು ಸಂಭಾಳಿಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತಿದ್ದ ಗಂಡ ಮತ್ತು ಬೆಂಬಲವಾಗಿ ನಿಂತ ಕುಟುಂಬವಿದ್ದರೂ ನಾನು ಇದನ್ನು ಅನುಭವಿಸುತ್ತಿದ್ದೆ. ನಾನು ನನ್ನ ಗೆಳತಿಯರನ್ನು ವಿಪರೀತವಾಗಿ ಮಿಸ್ ಮಾಡಿಕೊಳ್ಳುತ್ತಿದ್ದೆ. ಯುಟ್ಯೂಬಿನಲ್ಲಿ ಸಿಂಗಿಂಗ್ ಸ್ಟಾರ್ಸ್ ವಿಡಿಯೋ ನೋಡುತ್ತಾ ನನ್ನ ನೋವನ್ನು ನುಂಗಿಕೊಳ್ಳುತ್ತಿದ್ದೆ.

ಈ ಸಂದರ್ಭದಲ್ಲಿ ನನ್ನ ಸಹಾಯಕ್ಕೆ ಒದಗಿದ್ದು ಇಂಟರ್ನೆಟ್. ಅಲ್ಲಿ ನನಗೆ ಎಲ್ಲ ಕಡೆಯಲ್ಲೂ ತಾಯಂದಿರ ಸಾಮಾನ್ಯ ಸಮಸ್ಯೆ ಇದು ಎನ್ನುವ ಅರಿವು ದಕ್ಕಿತು. ನಾವೆಲ್ಲರೂ ಒಂದೇ ದೋಣಿಯ ಸಹಪಯಣಿಗರಾಗಿದ್ದೇವೆ ಎಂದು ಗೊತ್ತಾಯಿತು. ನನ್ನದೇ ಅನುಭವದ ಒಂದು ಸಮುದಾಯವೇ ಇಲ್ಲಿದೆ ಎಂದು ತಿಳಿದು ಸಮಾಧಾನವಾಯಿತು. ನಾನು ಬಹಳ ದಿನಗಳಿಂದ ಅದಕ್ಕಾಗಿ ಹುಡುಕುತ್ತಿದ್ದೆ.

ಆದರೆ ಇದು ನಾನು ‘ಮಮ್ಮಿ ಫ್ರೆಂಡ್ಸ್’ – ಅಂದರೆ ತಾಯಂದಿರನ್ನೇ ಗೆಳತಿಯರನ್ನಾಗಿ ಮಾಡಿಕೊಳ್ಳುವಂತೆ ಪರೋಕ್ಷವಾಗಿ ಸೂಚಿಸಿತ್ತು. ಆದರೆ ಅದೂ ಕೂಡ ಸುಲಭವಾಗಿರಲಿಲ್ಲ. ಕೆಲವು ವೆಬ್’ಸೈಟುಗಳು ಪ್ರಿಸ್ಕೂಲ್ ಗೆಟ್ ಬಳಿ ಕಾದು ನಿಂತು ಹೊಸ ಗೆಳತಿಯರನ್ನು ಮಾಡಿಕೊಳ್ಳುವಂತೆ ಸೂಚಿಸಿತು. ಮಕ್ಕಳನ್ನು ಬಿಡಲು, ಕರೆದೊಯ್ಯಲು ಬರುವ ತಾಯಂದಿರೊಡನೆ ಗೆಳೆತನ ಬೆಳೆಸುವ ಸಲಹೆ ಅದಾಗಿತ್ತು. ನನ್ನ ಮಗುವನ್ನು ಪ್ರಿಸ್ಕೂಲ್’ಗೆ ಬಿಡಲು ಹೋದಾಗ ನಾನು ಅದನ್ನೂ ಪ್ರಯತ್ನಿಸಿದೆ. ಆದರೆ ಗೇಟ್ ಬಳಿ ಮಕ್ಕಳ ಬ್ಯಾಗ್’ಗಳನ್ನು ಹೊತ್ತ ತಾಯಂದಿರ ಕೇಕೆ ನನ್ನನ್ನು ತಡೆದು ನಿಲ್ಲಿಸಿತು. ಹಾಗೆ ಗೆಳೆತನ ಬೆಳೆಸುವುದು ನನ್ನಂಥ ನಾಚಿಕೆ ಸ್ವಭಾವದವರಿಗೆ ಸಾಧ್ಯವಿಲ್ಲದ ಮಾತಾಗಿತ್ತು.

ವಾಸ್ತವದ ವಿಷಯವೆಂದರೆ, ತಾಯ್ತನದ ಹಂತದಲ್ಲಿ ನೀವು ಕೂಡಾ ನನ್ನಂತೆಯೇ ಸಾಕಷ್ಟು ಗೆಳೆಯರನ್ನು ಕಳೆದುಕೊಳ್ಳುತ್ತೀರಿ ಮತ್ತು ಹೊಸ ಸ್ನೇಹ ಸಾಧ್ಯವಾಗದೆ ಹೋಗುತ್ತದೆ. ಈ ಹಂತದಲ್ಲಿ ಸಾಕಷ್ಟು ಗೆಳೆತನಗಳು ದುರ್ಬಲವಾಗುತ್ತವೆ ಮತ್ತು ನೀವು ಅದೃಷ್ಟವಂತರಾಗಿದ್ದರೆ, ಕೆಲವು, ಕೆಲವೇ ಕೆಲವು ಸಂಬಂಧಗಳು ಮಾತ್ರ ಮತ್ತಷ್ಟು ಗಟ್ಟಿಗೊಳ್ಳುತ್ತವೆ.

ಆದರೆ ಒಂದಂತೂ ನಿಜ. ಈ ಸಂದರ್ಭದಲ್ಲಿ ಅಂತರ್ಜಾಲದಲ್ಲಿ ದೊರೆತ ಸಲಹೆಗಳು ನನಗೆ ಸಾಕಷ್ಟು ಸಹಕಾರಿಯಾದವು. ನನಗೆ ಮಗುವಿನ ಸ್ಕೂಲ್ ಗೇಟಿನ ಬಳಿ ಅಲ್ಲದೆ ಹೋದರೂ ಒಬ್ಬ ‘ಮಮ್ಮಿ ಫ್ರೆಂಡ್’ ದೊರೆತರು. ಆಕೆಗೂ ನನ್ನ ಮಗುವಿನ ವಯಸ್ಸಿನದೇ ಮಗುವಿತ್ತು. ಅವರು ಕೆನ್ಯಾದವರು. ನಮ್ಮ ಆಚಾರ, ವಿಚಾರ, ಆಹಾರ, ಸಂಸ್ಕೃತಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದ್ದರೂ ನಾವು ಒಳ್ಳೆಯ ‘ವರ್ಚುವಲ್’ ಗೆಳತಿಯರಾದೆವು. ಊಹೆಯಲ್ಲೇ ಜೊತೆಯಲ್ಲಿ ಕುಳಿತು ಚಹಾ ಕುಡಿಯುತ್ತಾ ಹರಟಿದೆವು. ನಮ್ಮ ಮಕ್ಕಳ ಬೆಳವಣಿಗೆ, ನಮ್ಮ ಆತಂಕ, ಭವಿಷ್ಯದ ಯೋಚನೆ ಇತ್ಯಾದಿ ಚರ್ಚೆ ಮಾಡಿದೆವು.

ನಮ್ಮಿಬ್ಬರಿಗೂ ಇದರಿಂದ ಸಾಕಷ್ಟು ಪ್ರಯೋಜನವಾಯಿತು. ನಾವು ಪರಸ್ಪರ ಮಾತುಕತೆಯಿಂದ ಹಗುರಾದೆವು. ಹೊಸ ಗೆಳತಿಯನ್ನು ಪಡೆದ ಲವಲವಿಕೆ ನಮ್ಮನ್ನು ಆವರಿಸಿಕೊಂಡಿತು.

ನಾವಿಬ್ಬರೂ ಯಾವುದೇ ಅಡೆತಡೆಯಿಲ್ಲದೆ ನಮ್ಮ ಅನ್ನಿಸಿಕೆಗಳನ್ನು ಹೆಳಿಕೊಳ್ಳುತ್ತಿದ್ದೆವು. (ಈಗಲೂ ಕೂಡಾ ಹಾಗೆ ಮಾಡುತ್ತೇವೆ). ನಾನು ನನ್ನ ಮಗುವಿನ ಅಸಾಧ್ಯ ದುಷ್ಟತನದ ಬಗ್ಗೆ ಹೇಳಿಕೊಂಡರೆ, ಆಕೆ ನನಗೆ ಎಲ್ಲವನ್ನೂ ಬಿಟ್ಟು ಒಬ್ಬಳೇ ಸುದೀರ್ಘ ರಜೆಗೆ ಹೋಗಬೇಕೆನ್ನಿಸುತ್ತದೆ ಅನ್ನುತ್ತಿದ್ದಳು. ನಾವು ಹೆಚ್ಚು ವಾಸ್ತವದಲ್ಲಿ ಮಾತನಾಡುತ್ತಿದ್ದೆವು ಮತ್ತು ನಾವಿಬ್ಬರೂ ಪರಸ್ಪರ ಜಡ್ಜ್ ಮಾಡಲು ಹೋಗುತ್ತಿರಲಿಲ್ಲ.

ಹೀಗೆ ನಾವು ನಮ್ಮ ತಾಯ್ತನದ ನಿದ್ರಾಹೀನ, ಗಲೀಜಾದ ಬಟ್ಟೆಗಳ, ಸೂಪರ್ ಮಾರ್ಕೆಟ್ ಶಾಪಿಂಗಿನ, ಹೊಟ್ಟೆ ಕೆಟ್ಟ ದಿನಗಳನ್ನು ಯಶಸ್ವಿಯಾಗಿ ಕಳೆದೆವು. ನಾವು ಒಟ್ಟಾಗಿ ನಗುತ್ತಾ, ಅಳುತ್ತಾ, ಅವಲೋಕಿಸುತ್ತಾ ನಮ್ಮನ್ನು ಸಂಭಾಳಿಸಿಕೊಂಡೆವು.

ಈ ಗೆಳೆತನವು ನನ್ನನ್ನು ಗಟ್ಟಿಗೊಳಿಸಿದ್ದು ಮಾತ್ರವಲ್ಲದೆ, ತಾಯ್ತನವನ್ನು ಸಹ್ಯವಾಗಿಸಿ ನಾನು ಶಾಂತವಾಗಿರಲು ಸಹಾಯ ಮಾಡಿತು. ಈಗಲೂ ಈ ಗೆಳೆತನದ ಪ್ರಭಾವದಿಂದ ನಾನು ನನ್ನನ್ನು ಸಾಕಷ್ಟು ಹಂತದಲ್ಲಿ ನಿಭಾಯಿಸಿಕೊಳ್ಳಬಲ್ಲವಳಾಗಿದ್ದೇನೆ.

ಅಂದಹಾಗೆ, ನಾವೀಗ ಸಿಂಗಿಂಗ್ ಸ್ಟಾರ್ಸ್ ಬಗ್ಗೆಯೂ ಚಾಟ್ ಮಾಡುತ್ತೇವೆ!