ತಾಯ್ತನ

ಪ್ರಸವಾನಂತರದ ಖಿನ್ನತೆ: ಕಲ್ಪನೆಗಳು ಮತ್ತು ವಾಸ್ತವಗಳು

ವೈಟ್ ಸ್ವಾನ್ ಫೌಂಡೇಶನ್

ಮಹಿಳೆಯರು ಅನೇಕ ರೀತಿಯ ಖಿನ್ನತೆಯನ್ನು ಅನುಭವಿಸುತ್ತಾರೆ. ಅಂತಹ ಖಿನ್ನತೆಗಳಲ್ಲಿ ಪ್ರಸವಾನಂತರದ ಖಿನ್ನತೆಯೂ ಒಂದು. ಪ್ರಸವಾನಂತರದ ಖಿನ್ನತೆಯ ಕುರಿತಾಗಿ ಅನೇಕ ಕಲ್ಪನೆಗಳಿವೆ. ಆದ್ದರಿಂದ ಖಿನ್ನತೆ ಯಕುರಿತಾದ ವಾಸ್ತವಾಂಶಗಳನ್ನು ತಿಳಿದುಕೊಳ್ಳುವುದು ಅತಿ ಅಗತ್ಯ. ಅದರ ಮಾಹಿತಿಗಾಗಿ ಲೇಖನವನ್ನು ಓದಿ..

ಕಲ್ಪನೆ: ದುಃಖದ ಭಾವನೆಗಳನ್ನು ನಿರ್ಲಕ್ಷಿಸಿದರೆ ಅಥವಾ ಸಕಾರಾತ್ಮಕ ಭಾವ ರೂಢಿಸಿಕೊಂಡರೆ ದುಃಖದ ಭಾವ ದೂರವಾಗುತ್ತದೆ.

ವಾಸ್ತವ: ಪ್ರಸವಾನಂತರದ ಖಿನ್ನತೆ ಕೇವಲ ದುಃಖದ ಭಾವನೆ ಮಾತ್ರವಲ್ಲ, ಬದಲಿಗೆ ಇದೊಂದು ದೊಡ್ಡ ಅನಾರೋಗ್ಯದ ಸಮಸ್ಯೆ. ಇದಕ್ಕೆ ಚಿಕಿತ್ಸೆ ಅಗತ್ಯ.

ಕಲ್ಪನೆ: ನಾನು ದುರ್ಬಲ ವ್ಯಕ್ತಿ, ಆದ್ದರಿಂದ ನನಗೆ ಹೆರಿಗೆಯ ನಂತರದ ಖಿನ್ನತೆಯ ತೊಂದರೆಯಿದೆ.

ವಾಸ್ತವ: ಪ್ರಬಲ ಮತ್ತು ಬುದ್ಧಿವಂತ ಸ್ತ್ರೀಯರು ಕೂಡ ಈ ರೀತಿಯ ಖಿನ್ನತೆಯಿಂದ ಬಳಲುತ್ತಾರೆ. ಇದಕ್ಕೆ ನಿಮ್ಮ ದೌರ್ಬಲ್ಯ ಅಥವಾ ಸೋಲು ಮಾತ್ರ ಕಾರಣವಲ್ಲ.

ಕಲ್ಪನೆ: ನಾನು ಹೆರಿಗೆಯ ನಂತರದ ಖಿನ್ನತೆಯ ಸಮಸ್ಯೆಗಾಗಿ ಔಷಧ ತೆಗೆದುಕೊಂಡರೆ ಮಗುವಿಗೆ ಹಾಲುಣಿಸಲು ಸಾಧ್ಯವಿಲ್ಲ.

ವಾಸ್ತವ: ಮಗುವಿಗೆ ಹಾಲುಣಿಸಲು ತೊಂದರೆಯಾಗದಂತಹ ಚಿಕಿತ್ಸೆ/ಔಷಧಗಳನ್ನು ನೀಡಲಾಗುತ್ತದೆ. ಇದರ ಬಗ್ಗೆ ಆರೋಗ್ಯ ಸಲಹೆಗಾರರು ಅಥವಾ ವೈದ್ಯರಿಂದ ಸಲಹೆ ಪಡೆಯಿರಿ..

ಕಲ್ಪನೆ: ಮಗು ಜನಿಸಿದ ಮೊದಲ ಕೆಲವು ತಿಂಗಳಿನಲ್ಲಿ ಮಾತ್ರ ಈ ಖಿನ್ನತೆಉಂಟಾಗಬಹುದು.

ವಾಸ್ತವ: ಈ ಖಿನ್ನತೆಯು ನೀವು ಗರ್ಭಿಣಿಯಾಗಿದ್ದಾಗ ಅಥವಾ ಮಗು ಜನಿಸಿದ ಒಂದು ವರ್ಷದ ಅವಧಿಯಲ್ಲಿ ಯಾವಾಗ ಬೇಕಾದರೂ ಉಂಟಾಗಬಹುದು.

ಕಲ್ಪನೆ: ಮೊದಲ ಮಗು ಜನಿಸಿದ ಸಮಯದಲ್ಲಿ ಖಿನ್ನತೆ ಇರಲಿಲ್ಲ. ಆದ್ದರಿಂದ ಇದು ಮುಂದಿನ ಮಗುವಿನ ಜನನದ ಸಮಯದಲ್ಲಿ ಉಂಟಾಗುವುದಿಲ್ಲ.

ವಾಸ್ತವ: ಪ್ರಸವಾನಂತರದ ಖಿನ್ನತೆಯು ಎರಡನೇ ಅಥವಾ ಮೂರನೆಯ ಮಗುವಿನ ಜನನದ ಸಮಯದಲ್ಲಿಯೂ ಉಂಟಾಗಬಹುದು.