ತಾಯ್ತನ

ಪ್ರಸವಾನಂತರದ ಮನೋವೈಕಲ್ಯ

ಪ್ರಸವಾನಂತರದ ಮನೋವೈಕಲ್ಯವು ಒಮ್ಮಿಂದೊಮ್ಮೆಲೆ ಉಂಟಾಗುವ ಅತ್ಯಂತ ಗಂಭೀರ ಸ್ವರೂಪದ ಮಾನಸಿಕ ಖಾಯಿಲೆ. ಇದು ಶಿಶು ಜನಿಸಿದ ಮೊದಲ ಕೆಲವು ದಿನಗಳು ಅಥವಾ ತಿಂಗಳುಗಳಲ್ಲಿ ಉಂಟಾಗಬಹುದು.

ವೈಟ್ ಸ್ವಾನ್ ಫೌಂಡೇಶನ್

ಪ್ರಸವಾನಂತರದ ಮನೋವೈಕಲ್ಯ ಎಂದರೇನು?
ಮೊದಲು ಯಾವುದೇ ಮನೋವೈಕಲ್ಯ  ಇಲ್ಲದ ಮಹಿಳೆಗೂ ಪ್ರಸವಾನಂತರದ ಮನೋವೈಕಲ್ಯ ಉಂಟಾಗಬಹುದು. ಇದು ತಾಯಿ, ಆಕೆಯ ಸಂಗಾತಿ ಮತ್ತು ಕುಟುಂಬದವರಿಗೆ ಭಯ ಹುಟ್ಟಿಸುತ್ತದೆ. ಇದು ಕೆಲವೇ ಅವಧಿ ಮಾತ್ರ ಕಾಡುವ ಸಮಸ್ಯೆ. ನಂತರ ಮಹಿಳೆಯರು ಸಂಪೂರ್ಣ ಗುಣಮುಖರಾಗುತ್ತಾರೆ.

 ಪ್ರಮುಖ ಸೂಚನೆ: ಪ್ರಸವಾನಂತರದ ಮನೋವೈಕಲ್ಯ ಮಾನಸಿಕ ತುರ್ತು ಪರಿಸ್ಥಿತಿಯಾಗಿದ್ದು, ಶೀಘ್ರವಾಗಿ ವೈದ್ಯಕೀಯ ನೆರವಿನ ಅವಶ್ಯಕತೆಯಿರುತ್ತದೆ. ಈ ಕಾಯಿಲೆಯ ಸ್ವರೂಪವು ಅತ್ಯಂತ ನಾಟಕೀಯವಾಗಿದ್ದು, ರೋಗಿಯು ಹೆಚ್ಚಿನ ಸಲ ಅಸ್ಥಿರ ಲಕ್ಷಣಗಳನ್ನು ತೋರಿಸಬಹುದು. ಈ ಕಾಯಿಲೆಯ ಬಗ್ಗೆ ತಿಳಿದಿರದ ಕುಟುಂಬದವರು ಕೆಲವೊಮ್ಮೆ ಮಹಿಳೆಗೆ ಯಾವುದೋ ಕೆಟ್ಟ ಶಕ್ತಿ ಆವರಿಸಿದೆ ಎಂದು ನಂಬಿ ಧಾರ್ಮಿಕ-ಮಾಂತ್ರಿಕ ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಇದರಿಂದ ಚಿಕತ್ಸೆಯು ವಿಳಂಬವಾಗಿ, ಮಹಿಳೆಯ ಮಾನಸಿಕ ಆರೋಗ್ಯಕ್ಕೆ ಹಾಗೂ ಮಗುವಿನ ಯೋಗಕ್ಷೇಮಕ್ಕೆ ಹೆಚ್ಚಿನ ಹಾನಿಯಾಗಬಹುದು.

ಪ್ರಸವಾನಂತರದ ಮನೋವೈಕಲ್ಯದ ಲಕ್ಷಣಗಳಾವವು?

  • ಮನಸ್ಥಿತಿಯಲ್ಲಿ ಶೀಘ್ರ ಬದಲಾವಣೆ: ಅತ್ಯಂತ ಖುಷಿ ಅಥವಾ ಉನ್ಮಾದ ಸ್ಥಿತಿ, ದೊಡ್ಡ ಧ್ವನಿಯಲ್ಲಿ ಹಾಡುವುದು ಅಥವಾ ಕುಣಿಯುವುದು.
  • ಅವಿಶ್ರಾಂತ ಭಾವ, ಕೋಪಗೊಳ್ಳುವುದು, ಶಾಂತರೀತಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿರುವುದು.
  • ಕಿರಿಕಿರಿಗೊಳ್ಳುವುದು, ಉಳಿದವರಿಗೆ ಬೈಯುವುದು ಅಥವಾ ಕೂಗಾಡುವುದು.
  •  ವೇಗವಾಗಿ ಮಾತನಾಡುವುದು ಮತ್ತು ಗೊಂದಲದ ಮನಸ್ಥಿತಿಯ ಮೂಲಕ ವ್ಯಕ್ತವಾಗುವ ಅತಿಯಾದ ಯೋಚನೆಗಳು.
  • ಮಿತಿಮೀರಿ ವರ್ತಿಸುವುದು ಮತ್ತು ಅಸಹಜ ನಡವಳಿಕೆ. ಉದಾಹರಣೆಗೆ, ತಮಗೆ ಪರಿಚಯವಿಲ್ಲದ ವ್ಯಕ್ತಿಗಳ ಜೊತೆ ಮಾತನಾಡುವುದು ಅಥವಾ ಸ್ನೇಹಿತರೊಂದಿಗೆ ಅತಿಯಾದ ಸಲುಗೆಯಿಂದ ವರ್ತಿಸುವುದು.
  • ಏಕಾಂಗಿಯಾಗಿರುವುದು, ಯಾವುದೋ ಯೋಚನೆಯಲ್ಲಿ ಮಗ್ನರಾಗಿರುವುದು ಮತ್ತು ಜನರು ಅವರೊಡನೆ ಮಾತನಾಡುತ್ತಿರುವಾಗ ಪ್ರತಿಕ್ರಿಯಿಸದಿರುವುದು.
  • ನಿದ್ರಿಸಲು ಆಗದಿರುವುದು, ಆಥವಾ ಬಳಲಿರುವಾಗಲೂ ನಿದ್ರಿಸಲು ಇಚ್ಛಿಸದಿರುವುದು.
  • ಮತಿಭ್ರಮಣೆಯ ಲಕ್ಷಣಗಳು, ಸಂಶಯ ಪ್ರವೃತ್ತಿ, ಭಯಭೀತರಾಗುವುದು ಅಥವಾ ತಾವು ಅಪಾಯದಲ್ಲಿರುವೆವೆಂಬ ಕಲ್ಪನೆ.
  • ಭ್ರಮೆ: ತಪ್ಪು ಕಲ್ಪನೆಗಳನ್ನು ನಿಜವೆಂದು ಬಲವಾಗಿ ನಂಬುವುದು. ಉದಾಹರಣೆಗೆ, ತಾಯಿಯು ತನಗೆ ಅತ್ಯಂತ ದೊಡ್ಡ ಮೊತ್ತದ ಹಣ ಲಭಿಸಿದೆ ಎಂದು ಭಾವಿಸುವುದು ಅಥವಾ ಮಗುವು ತನ್ನದಲ್ಲವೆಂದು ನಂಬುವುದು.
  • ಭ್ರಾಂತಿ: ನೈಜವಲ್ಲದ ಧ್ವನಿ ಕೇಳಿಸುವುದು ಅಥವಾ ಬೇರೆಯವರಿಗೆ ಕಾಣಿಸದ, ಅಸ್ತಿತ್ವದಲ್ಲಿರದ ವಸ್ತುಗಳು ಕಾಣಿಸುವುದು.

ಈ ಲಕ್ಷಣಗಳಿಂದಾಗಿ ತಾಯಿ ತನ್ನ ಮಗುವನ್ನು ನೋಡಿಕೊಳ್ಳಲು ಅಸಮರ್ಥಳಾಗಬಹುದು. ಅವಳಿಗೆ ತನ್ನ ಖಾಯಿಲೆಯ ಪರಿವೆಯೇ ಇಲ್ಲದಿರಬಹುದು. ಆಕೆಯಲ್ಲಿ ಏನೋ ಸಮಸ್ಯೆಯಿರುವುದು ತಿಳಿದರೂ, ಆಕೆಯ ಪತಿ, ಮನೆಯವರು ಮತ್ತು ಸ್ನೇಹಿತರಿಗೆ ನಿಜವಾಗಿ ಆಕೆಯ ಸಮಸ್ಯೆಯೇನು ಎಂಬುದನ್ನು ತಿಳಿಯಲು ಸಾಧ್ಯವಾಗದಿರಬಹುದು. ಆದ್ದರಿಂದ, ಅಂತಹ ಸಂದರ್ಭದಲ್ಲಿ ತುರ್ತಾಗಿ ವೈದ್ಯಕೀಯ ಸಹಾಯ ಪಡೆಯಬೇಕು.

ಸೂಚನೆ: ಪ್ರಸವಾನಂತರದ ಮನೋವೈಕಲ್ಯದ ಲಕ್ಷಣಗಳು ಪ್ರತಿ ಗಂಟೆಗೂ ಅಥವಾ ಪ್ರತಿ ದಿನವೂ ಬದಲಾಗಬಹುದು.

ಪ್ರಸವಾನಂತರದ ಮನೋವೈಕಲ್ಯಕ್ಕೆ ಕಾರಣಗಳೇನು?
ಪ್ರಸವಾನಂತರದ ಮನೋವೈಕಲ್ಯಕ್ಕೆ ತಾಯಿಯನ್ನು ದೂಷಿಸುವುದು ಸರಿಯಲ್ಲ. ಇದು ಸಂಬಂಧಗಳಲ್ಲಿನ ಸಮಸ್ಯೆ ಅಥವಾ ಒತ್ತಡಿಂದಲೂ ಉಂಟಾಗುವುದಿಲ್ಲ. ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರಲು ಹಲವಾರು ಕಾರಣಗಳಿದ್ದು, ವಂಶವಾಹಿಗಳೂ ಅವುಗಳಲ್ಲಿ ಒಂದು ಪ್ರಮುಖ ಕಾರಣವಾಗಿದೆ. ತಾಯಿ ಅಥವಾ ಸಹೋದರಿಯಂತಹ ಹತ್ತಿರದ ಸಂಬಂಧಿಗಳು ಪ್ರಸವಾನಂತರದ ಮನೋವೈಕಲ್ಯಕ್ಕೆ ಒಳಗಾಗಿದ್ದಲ್ಲಿ, ಅಂತಹ ತಾಯಂದಿರು ಈ ಖಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹಾರ್ಮೋನಿನ ಮಟ್ಟದಲ್ಲಾಗುವ ಬದಲಾವಣೆಯೂ ಇದಕ್ಕೆ ಕಾರಣ. ಜೊತೆಗೆ ದೀರ್ಘಕಾಲೀನವಾದ, ಗಂಭೀರವಾದ ನಿದ್ರೆಯ ಸಮಸ್ಯೆಯು ಈ ಖಾಯಿಲೆಗೆ ಪೂರಕವಾಗಬಲ್ಲದು.

ಇದನ್ನು ತಡೆಗಟ್ಟಲು ಏನು ಮಾಡಬಹುದು?
ಬೈಪೋಲಾರ್ ಡಿಸಾರ್ಡರ್, ಸ್ಕಿಜೋಫ್ರೀನಿಯ ಅಥವಾ ಇನ್ನಿತರ ಮಾನಸಿಕ ಖಾಯಿಲೆಗೆ ಒಳಗಾಗಿದ್ದ ಮಹಿಳೆಯರು ಹೆರಿಗೆಯ ನಂತರ ಮತ್ತೆ ಈ ಸಮಸ್ಯೆಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಈ ಮುಂಚೆ ಗಂಭೀರವಾದ ಮಾನಸಿಕ ಖಾಯಿಲೆಗೆ ಒಳಗಾಗಿದ್ದ ಮಹಿಳೆಯರು ಮಗುವನ್ನು ಹೊಂದಲು ಬಯಸಿದಲ್ಲಿ, ಆ ಬಗ್ಗೆ ತಮ್ಮ ಪ್ರಸೂತಿ ತಜ್ಞರು ಮತ್ತು ಮಾಸಿಕ ತಜ್ಞರಿಗೆ ತಿಳಿಸಬೇಕು ಮತ್ತು ಯಾವುದೇ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ಆ ಕುರಿತ ಮಾಹಿತಿಯನ್ನು ಒದಗಿಸಬೇಕು. ಇದರಿಂದ ಗರ್ಭದಾರಣೆಗೆ ಮುದಲು ಆಕೆಯು ಆರೋಗ್ಯವಾಗಿದ್ದಾಳೆಯೇ ಎಂದು ದೃಢಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಒಂದುವೇಳೆ ನೀವು ಗರ್ಭಿಣಿಯಾಗಿದ್ದು, ನೀವು ಪ್ರಸವಾನಂತರದ ಮನೋವೈಕಲ್ಯಕ್ಕೆ ಒಳಗಾಗುವ ಸಂಭವನೀಯತೆಯಿರುವುದು ನಿಮಗೆ ತಿಳಿದಿದ್ದಲ್ಲಿ, ತಪ್ಪದೇ ನಿಮ್ಮ ಪ್ರಸೂತಿ ತಜ್ಞರು ಅಥವಾ ವೈದ್ಯರಿಗೆ ಮಾಹಿತಿ ನೀಡಬೇಕು. ಅಗತ್ಯವಿದ್ದರೆ ಅವರು ನಿಮಗೆ ಒಳ್ಳೆಯ ಮನಶಾಸ್ತ್ರಜ್ಞರನ್ನು ಸೂಚಿಸುತ್ತಾರೆ. ಇದರಿಂದ ಅವರಿಗೆ ನಿಮ್ಮ ಮಾನಸಿಕ ಆರೋಗ್ಯದ ಕಾಳಜಿಯನ್ನೂ ಗಮನದಲ್ಲಿರಿಸಿಕೊಂಡು ನಿಮ್ಮ ಆರೈಕೆಯ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ.

ಸೂಚನೆ: ನೀವು ಬೈಪೋಲಾರ್ ಡಿಸಾರ್ಡರ್ ಮತ್ತು ಸ್ಕಿಜೋಫ್ರೆನಿಯಾದಂತಹ ಗಂಭೀರ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಲ್ಲಿ, ಗರ್ಭದಾರಣೆಗೆ ಮೊದಲು ನಿಮ್ಮ ಮನೋವೈದ್ಯರ ಸಲಹೆ ಪಡೆದುಕೊಳ್ಳಿ. ನಿಮ್ಮ ಆರೋಗ್ಯಕ್ಕಾಗಿ ಗರ್ಭದಾರಣೆಯ ಅವಧಿಯಲ್ಲೂ ಔಷಧಗಳನ್ನು ಸೇವಿಸುವಂತೆ ಅವರು ಸೂಚಿಸಬಹುದು.

ಪ್ರಸವಾನಂತರದ ಮನೋವೈಕಲ್ಯಕ್ಕೆ ಚಿಕಿತ್ಸೆ
ಪ್ರಸವಾನಂತರದ ಮನೋವೈಕಲ್ಯಕ್ಕೆ ಒಳಗಾದ ಮಹಿಳೆಗೆ ತುರ್ತಾಗಿ ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಕೆಲವು ಭಾಗಗಳಲ್ಲಿ ಗಂಭೀರ ಮಾನಸಿಕ ಖಾಯಿಲೆಗೆ ಒಳಗಾದ ಮಹಿಳೆಯರನ್ನು ಮಗುವಿನ ಜೊತೆಗೇ ದಾಖಲಿಸಿಕೊಳ್ಳುವ ಸೈಕಿಯಾಟ್ರಿಕ್ ಕೇಂದ್ರಗಳು ಇರುತ್ತವೆ. ತಾಯಿಯ ಜೊತೆಗೆ ಒಬ್ಬ ಮಹಿಳಾ ಆರೈಕೆದಾರರು ಇದ್ದು (ಆಕೆಯ ತಾಯಿ ಅಥವಾ ಅತ್ತೆ) ಮಗುವಿನ ಆರೈಕೆಯಲ್ಲಿ ನೆರವಾಗಬಹುದು.

ಪ್ರಸವಾನಂತರದ ಮನೋವೈಕಲ್ಯದಿಂದ ಪೂರ್ಣವಾಗಿ ಚೇತರಿಸಿಕೊಳ್ಳಲು ಎರಡರಿಂದ 12 ವಾರಗಳವರೆಗೆ ಬೇಕಾಗಬಹುದು. ಪ್ರಸವಾನಂತರದ ಮನೋವೈಕಲ್ಯಕ್ಕೆ ಒಳಗಾದ ಬಹುತೇಕ ಮಹಿಳೆಯರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ಆದರೆ ಕೆಲವರಲ್ಲಿ ಸಮಸ್ಯೆಯು ಕೆಲವು ಸಮಯದ ನಂತರ ಮತ್ತೆ ಮರುಕಳಿಸಬಹುದು. ವಿಶೇಷವಾಗಿ, ಮತ್ತೆ ಗರ್ಭಿಣಿಯಾದಾಗ ಸಮಸ್ಯೆಯು ಕಂಡುಬರಬಹುದು.

ಚಿಕಿತ್ಸೆಯ ಸಮಯದಲ್ಲಿ ಸ್ತನ್ಯಪಾನ
ನಿಮ್ಮ ಮಾನಸಿಕ ಆರೋಗ್ಯ ತಜ್ಞರ ಬಳಿ ಸ್ತನ್ಯಪಾನದ ಕುರಿತು ಸಲಹೆ ಪಡೆಯಿರಿ. ಕೆಲವು ಔಷಧಗಳು ಎದೆಹಾಲನ್ನು ಸೇರಿಕೊಳ್ಳುತ್ತವೆ. ಆದರೆ ಹೆಚ್ಚಿನ ಔಷಧಗಳು ಸುರಕ್ಷಿತವಾಗಿವೆ. ನಿಮ್ಮ ಔಷಧಗಳ ವೇಳಾಪಟ್ಟಿಯನ್ನು ಗಮನಿಸಿ ನೀವು ಎದೆಹಾಲು ನೀಡುವ ಸಮಯವನ್ನು ನಿರ್ಧರಿಸಬಹುದು.

ಮಗುವಿನ ಆರೋಗ್ಯ ಹಾಗೂ ತಾಯಿ ಮತ್ತು ಮಗುವಿನ ಬಾಂಧವ್ಯದ ಒಳಿತಿಗಾಗಿ ಆದಷ್ಟು ಬೇಗ ಸ್ತನ್ಯಪಾನ ಆರಂಭಿಸಬೇಕು.  ತಾಯಿಯ ಅನಾರೋಗ್ಯವು ಮಗುವಿಗೆ ಹರಡುವುದಿಲ್ಲ. ತಾಯಿಯು ವಿಚಲಿತಳಾಗಿದ್ದರೆ, ಆಕೆಯು ಶಾಂತಳಾಗುವವರೆಗೆ ಮಗುವನ್ನು ಆಕೆಯಿಂದ ದೂರವಿರಿಸಿ. ಆಕೆಯ ಬಳಿ ಮಗುವು ಇರುವಾಗ, ಯಾರಾದರೂ ಗಮನಿಸುತ್ತಿರಿ.

ಚೇತರಿಸಿಕೊಂಡ ನಂತರ
ಪ್ರಸವಾನಂತರದ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕವೂ ಕೆಲವೊಮ್ಮೆ ಖಿನ್ನತೆ, ಆತಂಕ ಮತ್ತು ಸಾಮಾಜಿಕ ಸ್ಥೈರ್ಯ ಕಡಿಮೆಯಾದಂತಹ ಲಕ್ಷಣಗಳು ಕಂಡುಬರಬಹುದು. ನಡೆದುಹೋದದ್ದನ್ನು ಒಪ್ಪಿಕೊಳ್ಳಲು ಕೆಲವು ಸಮಯ ತೆಗೆದುಕೊಳ್ಳುವುದು ಸಾಮಾನ್ಯ. ಪ್ರಾರಂಭದ ತಾಯ್ತನದ ಅನುಭವ ತಪ್ಪಿಹೋದದ್ದಕ್ಕೂ ವ್ಯಥೆ ಪಡಬಹುದು. ಸಂಬಂಧಗಳಲ್ಲಿ ಮುಂಚಿನ ವಿಶ್ವಾಸ ಮರಳುವುದಕ್ಕೂ ಸಮಯ ತಗಲುತ್ತದೆ. ಆದರೆ ಹೆಚ್ಚಿನ ಮಹಿಳೆಯರು ಚಿಕಿತ್ಸೆಯ ನಂತರ ಮೊದಲಿನ ಸ್ಥಿತಿಗೆ ಮರಳುತ್ತಾರೆ.

ಕುಟುಂಬದ ಸದಸ್ಯರು ಮತ್ತು ಸ್ನೇಹಿತರಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಸ್ವಲ್ಪ ಸಹಾಯವಾಗುತ್ತದೆ. ಆದರೆ ನಡೆದಿರುವುದನ್ನು ಒಪ್ಪಿಕೊಳ್ಳುವುದು ಅವರಿಗೂ ಕೂಡ ಕಷ್ಟಕರವಾಗಿರುತ್ತದೆ. ಆದ್ದರಿಂದ, ಮನಶಾಸ್ತ್ರಜ್ಞರು, ಮನೋಚಿಕಿತ್ಸಕರು ಅಥವಾ ಆಪ್ತಸಮಾಲೋಚಕರ ಸಹಾಯವನ್ನು ಪಡೆದುಕೊಳ್ಳಬಹುದು.

ಪ್ರಸವಾನಂತರದ ಮನೋವೈಕಲ್ಯವನ್ನು ನಿಭಾಯಿಸುವುದು

  • ತಾಯಿಗೆ

ಪ್ರಸವಾನಂತರದ ಮನೋವೈಕಲ್ಯದಿಂದ ಚೇತರಿಸಿಕೊಂಡ ನಂತರ ತಾಯ್ತನದ ಸಾಮರ್ಥ್ಯದ ಕುರಿತು ಅನುಮಾನವುಂಟಾಗುವುದು ಸಹಜ. ಕೆಲವೊಮ್ಮೆ ಯಾವುದೇ ಮಾನಸಿಕ ಅನಾರೋಗ್ಯವಿರದ ತಾಯಂದಿರು ಕೂಡಾ ಇದೇ ರೀತಿ ಯೋಚಿಸುತ್ತಾರೆ.

ಈ ಸಮಸ್ಯೆಗೆ ಒಳಗಾದ ನಂತರ ಕೆಲವು ತಾಯಂದಿರು ಮಗುವಿನ ಜೊತೆಗೆ ಬಾಂಧವ್ಯ ಬೆಳೆಸಿಕೊಳ್ಳಲು ಕಷ್ಟಪಡಬಹುದು. ಅವರಿಗೆ ಹತಾಶೆಯೆನಿಸಿದರೂ ಕೂಡಾ ಈ ಅವಧಿ ಬೇಗ ಕಳೆದುಹೋಗುತ್ತದೆ. ಪ್ರಸವಾನಂತರದ ಮನೋವೈಕಲ್ಯಕ್ಕೆ ಒಳಗಾದ ಹೆಚ್ಚಿನ ಮಹಿಳೆಯರು ಚೇತರಿಸಿಕೊಂಡ ಬಳಿಕ ಮಗುವಿನ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಆಕೆಯು ಮಗುವಿನ ಜೊತೆ ಬೆರೆಯಲು ಮತ್ತು ಅದರ ಅವಶ್ಯಕತೆಗೆ ಪ್ರತಿಸ್ಪಂದಿಸಲು ಪ್ರಸೂತಿ ತಜ್ಞರ/ ಮಾನಸಿಕ ಆರೋಗ್ಯ ತಜ್ಞರ ಸಹಾಯವನ್ನು ಪಡೆಯಬಹುದು. ಚೇತರಿಸಿಕೊಂಡು ಮತ್ತೆ ಮಗುವಿನ ಆರೈಕೆಯಲ್ಲಿ ತೊಡಗುವಂತಾಗಲು  ಕುಟುಂಬದ ಸದಸ್ಯರ ಪಾತ್ರ ಮಹತ್ವದ್ದಾಗಿರುತ್ತದೆ.

  • ತಂದೆ

ಪತ್ನಿಯ ಮನೋವೈಕಲ್ಯದಿಂದಾಗಿ ನೀವು ಅತೀವ ಯಾತನೆ ಮತ್ತು ಆಘಾತಕ್ಕೆ ಒಳಗಾಗಿರಬಹುದು. ನಿಮ್ಮ ಪತ್ನಿಗೆ ತಾನು ಖಾಯಿಲೆಗೆ ಒಳಗಾಗಿರುವ ವಿಷಯ ತಿಳಿಯದೇ ಹೋಗಬಹುದು. ಆದ್ದರಿಂದ ನೀವು ಸಮಸ್ಯೆಯನ್ನು ಗುರುತಿಸಿ ತಜ್ಞರ ಸಹಾಯ ಪಡೆಯಬೇಕಾಗುತ್ತದೆ. ನಿಮ್ಮ ಪತ್ನಿಯು, ಮಗುವಿನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರೆ ನೀವು ಒಂಟಿತನದ ಭಾವ ಮತ್ತು ಹತಾಶೆಯಿಂದ ಕಂಗೆಡಬಹುದು. ಒಂದುವೇಳೆ ಆಕೆ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರೆ ನಿಮ್ಮ ಜವಾಬ್ದಾರಿಯು ದುಪ್ಪಟ್ಟಾಗುತ್ತದೆ. ಆದ್ದರಿಂದ ನಿಮ್ಮ ಪತ್ನಿಗೆ ಚಿಕಿತ್ಸೆ ನೀಡುತ್ತಿರುವ ಮನೋವೈದ್ಯರು ಅಥವಾ ಆಪ್ತ ಸಮಾಲೋಚಕರ ನೆರವು ಪಡೆಯಿರಿ.

ನಿಮ್ಮ ಪತ್ನಿ ಹಾಗೂ ಮಗುವು ಮನೆಗೆ ಮರಳಿದ ಮೇಲೆ ಈ ರೀತಿ ನಡೆದುಕೊಳ್ಳಿ:

  • ಶಾಂತವಾಗಿದ್ದು, ಅಗತ್ಯ ಬೆಂಬಲ ನೀಡಿ.
  • ನಿಮ್ಮ ಸಂಗಾತಿಯ ಅನಿಸಿಕೆಗಳನ್ನು ಆಲಿಸಿ.
  • ಮನೆಕೆಲಸ ಮತ್ತು ಅಡಿಗೆಯಲ್ಲಿ ಸಹಾಯ ಮಾಡಿ.
  • ಮಗುವನ್ನು ನೋಡಿಕೊಳ್ಳಲು ನೆರವು ನೀಡಿ ಅಥವಾ ಮಗುವಿನ ಆರೈಕೆಗಾಗಿ ದಾದಿಯನ್ನು ನೇಮಿಸಿ.
  • ನಿಮ್ಮ ಪತ್ನಿ ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳುತ್ತಿರಬಹುದು. ಔಷಧಗಳನ್ನು ಮುಂದುವರೆಸಲು ನೆರವಾಗಿ ಮತ್ತು ವೈದ್ಯರಿಗೆ ತಿಳಿಸದೇ ಯಾವುದೇ ಔಷಧಗಳನ್ನು ಬದಲಾಯಿಸಬೇಡಿ ಅಥವಾ ನಿಲ್ಲಿಸಬೇಡಿ.
  • ರಾತ್ರಿಯ ಸಮಯ ಮಗುವಿಗೆ ಆಹಾರ ನೀಡಲು ಸಹಾಯಮಾಡಿ. ನಿಮ್ಮ ಪತ್ನಿಯು ತೆಗೆದುಕೊಳ್ಳುತ್ತಿರುವ ಔಷಧಗಳಿಂದಾಗಿ ಆಕೆಗೆ ಬಳಲಿಕೆಯೆನಿಸುತ್ತಿರಬಹುದು. ಆದ್ದರಿಂದ ಆಕೆಗೆ ಅಗತ್ಯವಿರುವಷ್ಟು ವಿಶ್ರಾಂತಿ ಹಾಗೂ ನಿದ್ದೆ ದೊರೆಯುವಂತೆ ನೋಡಿಕೊಳ್ಳಿ.
  • ಮನೆಯ ಜವಾಬ್ದಾರಿಯನ್ನು ನಿಭಾಯಿಸಲು ಕುಟುಂಬದ ಉಳಿದ ಸದಸ್ಯರ ಮತ್ತು ಸ್ನೇಹಿತರ ಸಹಾಯ ಪಡೆದುಕೊಳ್ಳಿ. ಇದರಿಂದ ನಿಮಗೆ ನಿಮ್ಮ ಪತ್ನಿ ಮತ್ತು ಮಗುವಿನ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತದೆ.
  • ಸಂಬಂಧಿಗಳು ಮತ್ತು ಸ್ನೇಹಿತರು ಮನೆಗೆ ಭೇಟಿ ನೀಡುವುದನ್ನು ಆದಷ್ಟು ಕಡಿಮೆಗೊಳಿಸಿ.
  • ಮನೆಯನ್ನು ಆದಷ್ಟು ಶಾಂತವಾಗಿರಿಸಿ. ಗದ್ದಲವಾಗದಂತೆ ನೋಡಕೊಳ್ಳಿ.
  • ಸಹನೆಯಿಂದಿರಿ. ಪ್ರಸವಾನಂತರದ ಮನೋವೈಕಲ್ಯದಿಂದ ಚೇತರಿಸಿಕೊಳ್ಳಲು ಸಮಯ ತಗಲುತ್ತದೆ.
  • ನೀವೂ ಕೂಡಾ ವ್ಯಾಯಾಮ ಮಾಡಿ, ಚೆನ್ನಾಗಿ ಆಹಾರ ಸೇವಿಸಿ, ವಿಶ್ರಾಂತಿ ತೆಗೆದುಕೊಂಡು ಆರೋಗ್ಯದಿಂದಿರಿ. ಸಂದರ್ಭವನ್ನು ಎದುರಿಸಲು ಕುಡಿತ ಮತ್ತು ಮಾದಕ ವಸ್ತುಗಳನ್ನು ಬಳಸಬೇಡಿ.
  • ನಿಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಳ್ಳುವುದರಿಂದಲೂ ಚೇತರಿಸಿಕೊಳ್ಳಲು ನೆರವಾಗುತ್ತದೆ.
  • ಆಪ್ತ ಸಮಾಲೋಚನೆ ಅಥವಾ ದಂಪತಿಗಳ ಜೊತೆಗೆ ಆಪ್ತ ಸಮಾಲೋಚನೆ ನಿಮ್ಮಿಬ್ಬರಿಗೂ ನೆರವಾಗಬಹುದು.