ತಾಯ್ತನ

ಗರ್ಭಾವಸ್ಥೆಯಲ್ಲಿ ನಿದ್ರೆಯ ಸಮಸ್ಯೆ

ವೈಟ್ ಸ್ವಾನ್ ಫೌಂಡೇಶನ್

ಗರ್ಭಧಾರಣೆಯ ಸಮಯದಲ್ಲಿ ಉಂಟಾಗುವ ಹಾರ್ಮೋನಿನ ಮತ್ತು ದೈಹಿಕ ಬದಲಾವಣೆಗಳಿಂದಾಗಿ ನಿದ್ರೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯು ಮುಂದುವರೆದಂತೆ ನಿದ್ರೆಯ ಸಮಸ್ಯೆಯಲ್ಲಿ ಏರುಪೇರುಂಟಾಗಬಹುದು.

ಗರ್ಭಾವಸ್ಥೆಯಲ್ಲಿ ಕಂಡುಬರುವ ಸಾಮಾನ್ಯ ನಿದ್ರೆಯ ಸಮಸ್ಯೆಗಳೆಂದರೆ:

  • ಗರ್ಭಧಾರಣೆಯ ಅವಧಿಯಲ್ಲಿ ಭಾವನಾತ್ಮಕ ಮತ್ತು ದೈಹಿಕ ಒತ್ತಡದಿಂದಾಗಿ ನಿದ್ರೆಯ ಸಮಸ್ಯೆ

  • ಪ್ರೊಜೆಸ್ಟರಾನ್ ಮಟ್ಟವು ಹೆಚ್ಚಾಗುವುದರಿಂದ ಮತ್ತೆ ಮತ್ತೆ ಮೂತ್ರ ವಿಸರ್ಜನೆ ಮಾಡುವ ಬಯಕೆ.

  • ಬೆಳೆಯುತ್ತಿರುವ ಭ್ರೂಣದಿಂದಾಗಿ ಸಾಮಾನ್ಯವೆನಿಸುವ ಕಿರಿಕಿರಿ, ನೋವು.

  • ರಾತ್ರಿಯ ವೇಳೆ ನಿದ್ರೆ ಬಾರದಿರುವುದರಿಂದ ಹಗಲಿನ ವೇಳೆಯಲ್ಲಿ ಜಾಸ್ತಿ ನಿದ್ರಿಸುವುದು.

  • ಸಹಜವಾದ ಬಳಲಿಕೆಯಿಂದ ಹಾಗೂ ಹೆಚ್ಚುವರಿ ಭಾರದ ಕಾರಣದಿಂದ ಕಾಲಿನಲ್ಲಿ ನೋವು.

  • ರಾತ್ರೆಯ ವೇಳೆ ಮಲಗಿರುವಾಗ ಎದೆಯುರಿ ಮತ್ತು ಆಮ್ಲತೆಯ ತೊಂದರೆ.

  • ಮೂಗಿನ ಪೊರೆಗಳೂ ಸೇರಿದಂತೆ ದೇಹದಲ್ಲಿ ರಕ್ತ ಸಂಚಾರದ ಮಟ್ಟವು ಹೆಚ್ಚುವುದರಿಂದ ಮೂಗು ಕಟ್ಟುವುದು.

  • ಕಾಲಿನಲ್ಲಿ ಕಾಣಿಸಿಕೊಳ್ಳುವ ನಿರಂತರ ತುರಿಕೆಯ ಪರಿಣಾಮವಾಗಿ ಕಾಲುಗಳನ್ನು ಚಲಿಸುತ್ತಲೇ ಇರಬೇಕೆನ್ನುವ ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್ (RLS).

  • ಮೂಗು ಕಟ್ಟುವುದರಿಂದ, ನಿದ್ರಿಸುವಾಗ ಉಸಿರು ಕಟ್ಟುವುದು ಮತ್ತು ಗೊರಕೆ.

  • ಹೆಚ್ಚಿದ ಆತಂಕದಿಂದಾಗಿ ನಿದ್ರಾಹೀನತೆ.

ನಿಮ್ಮ ನಿದ್ರೆಯನ್ನು ಉತ್ತಮಪಡಿಸಿಕೊಳ್ಳುವುದು ಹೇಗೆ?

ನೀವು ಅತಿಯಾದ ನಿದ್ರೆಯ ಕೊರತೆ ಅಥವಾ ಇನ್ಯಾವುದೇ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ನಿದ್ರೆಯನ್ನು ಸುಧಾರಿಸಲು ಸಹಾಯಕವಾಗುವ ಕೆಲವು ತಂತ್ರಗಳೆಂದರೆ:

  • ವ್ಯಾಯಾಮದಿಂದ ನಿಮ್ಮ ನಿದ್ರೆಯ ಸಮಸ್ಯೆಯು ಕಡಿಮೆಯಾಗುತ್ತದೆ. ಆದರೆ, ಮಲಗುವ ಸಮಯದಲ್ಲಿ ವ್ಯಾಯಾಮ ಮಾಡಬೇಡಿ.

  • ಕೇಫಿನ್ ಯುಕ್ತ ಪದಾರ್ಥಗಳು ನಿದ್ರೆಯ ಸಮಸ್ಯೆಯನ್ನುಂಟುಮಾಡುವುದರಿಂದ ಅಂತವುಗಳನ್ನು ವರ್ಜಿಸಿ.

  • ಸಕ್ಕರೆಯ ಪ್ರಮಾಣವು ನಿಮ್ಮ ಎನರ್ಜಿಯನ್ನು ಹೆಚ್ಚಿಸುವುದರಿಂದ ರಾತ್ರಿಯ ವೇಳೆ ಸಿಹಿ ತಿನ್ನಬೇಡಿ.

  • ನಿದ್ರಿಸುವ ಮುನ್ನ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಹದವಾದ ಬೆಚ್ಚನೆಯ ನೀರಿನಲ್ಲಿ ಸ್ನಾನ, ಹಿತವಾದ ಸಂಗೀತ ಆಲಿಸುವುದು ಅಥವಾ ನಿಮ್ಮನ್ನು ಶಾಂತಗೊಳಿಸುವ ಯಾವುದಾದರೂ ಚಟುವಟಿಕೆಯನ್ನು ಅನುಸರಿಸಿ.

  • ಹಗಲಿನಲ್ಲಿ ದ್ರವ ಪದಾರ್ಥಗಳನ್ನು ಜಾಸ್ತಿ ಸೇವಿಸಿ. ಮಲಗುವ ಸಮಯದಲ್ಲಿ ಕಡಿಮೆ ಮಾಡಿ.

  • ಹಗಲಿನಲ್ಲಿ ನಿದ್ರಿಸುವ ಅಭ್ಯಾವಿದ್ದರೆ, ಮಲಗುವ ಸಮಯದ ಸನಿಹ ನಿದ್ರಿಸಬೇಡಿ.

  • ಮಲಗುವ ಮೊದಲು ಸ್ವಲ್ಪ ಹಗುರವಾಗಿ ಏನನ್ನಾದರೂ ತಿನ್ನುವುದರಿಂದ ರಾತ್ರಿ ಹಸಿವೆಯಿಂದ ಎದ್ದೇಳುವ ಸಮಸ್ಯೆಯಿರುವುದಿಲ್ಲ.

  • ನಿಮ್ಮ ಬೆನ್ನು ಮತ್ತು ಹೊಟ್ಟೆಯ ಭಾಗಕ್ಕೆ ಒತ್ತಡವನ್ನು ತಪ್ಪಿಸಲು ಹೆಚ್ಚುವರಿ ದಿಂಬುಗಳನ್ನು ಬಳಸಿ.

ನಿಮಗೆ ತೊಂದರೆಗಳೇನಾದರೂ ಇದ್ದರೆ ವೈದ್ಯರಿಗೆ ಮಾಹಿತಿ ನೀಡಿ. ಅವರ ಅನುಮತಿಯಿಲ್ಲದೇ ಯಾವುದೇ ಔಷಧಗಳನ್ನು ಸೇವಿಸಬೇಡಿ.