ತಾಯ್ತನ

ಬಾಣಂತನ: ತಪ್ಪು ಕಲ್ಪನೆಗಳಿಂದ ಹೊರಬನ್ನಿ..

ವೈಟ್ ಸ್ವಾನ್ ಫೌಂಡೇಶನ್

ಬಸಿರು ಮತ್ತು ಬಾಣಂತನಕ್ಕೆ ಸಂಬಂಧಿಸಿದ ಕೆಲವು ಪದ್ದತಿಗಳಿವೆ. ಇವುಗಳಲ್ಲಿ ಹೆಚ್ಚಿನವು ಅಪಾಯಕಾರಿಯಲ್ಲ. ಇವುಗಳನ್ನು ಸಂಪ್ರದಾಯವೆಂಬ ರೀತಿಯಲ್ಲಿ ಹೆಚ್ಚಿನ ಕುಟುಂಬಗಳು ಇವನ್ನು ಶ್ರದ್ಧೆಯಿಂದ ಪಾಲಿಸುತ್ತವೆ. ಉದಾಹರಣೆಗೆ, ತಾಯಿಗೆ ವಿಶ್ರಾಂತಿ ನೀಡುವುದು ಮತ್ತು ಮಗುವಿಗೆ ಮಸಾಜ್ ಮಾಡುವ ಕ್ರಿಯೆಗಳಿಗೆ ವೈಜ್ಞಾನಿಕ ತಳಹದಿಯಿದ್ದು ತಾಯಿ ಮತ್ತು ಮಗುವಿನ ಆರೋಗ್ಯವೃದ್ಧಿಗೆ ಸಹಯಾಕವಾಗಿದೆ. ಆದರೆ ಕೆಲವು ಪದ್ಧತಿಗಳು ಅತಿಯಾದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.

ಮಿಥ್ಯೆ: ಪ್ರಸವಾ ನಂತರ ನೀರನ್ನು ಹೆಚ್ಚಾಗಿ ಕುಡಿಯಬಾರದು
ಸರಿ:
ಪ್ರಸವಾ ನಂತರ ಮಲಬದ್ಧತೆ ಮತ್ತು ಮೂಲವ್ಯಾಧಿಯನ್ನು ತಡೆಯಲು ದೇಹಕ್ಕೆ ನೀರಿನ ಅವಶ್ಯಕತೆಯಿರುತ್ತದೆ. ನೀರನ್ನು ಹೆಚ್ಚಿಗೆ ಕುಡಿಯುವುದು ಹಾಲಿನ ಉತ್ಪತ್ತಿಗೂ ನೆರವಾಗುತ್ತದೆ. ನೀರಿನ ಕೊರತೆಯು ಗಂಭೀರವಾದ ನರಗಳ ಸಮಸ್ಯೆಗೆ ಕಾರಣವಾಗಬಹುದು. ಇದು ಸೈಕೊಸಿಸ್ ಅಥವಾ ಡೆಲಿರಿಯಮ್ ಮೂಲಕವೂ ವ್ಯಕ್ತವಾಗಬಹುದು.

ಮಿಥ್ಯೆ: ಮಹಿಳೆಯು ಎರಡು ಜನರಿಗೆ ಸಾಕಾಗುವಷ್ಟು ಆಹಾರವನ್ನು ಸೇವಿಸಬೇಕು.
ಸರಿ: ಇದು ಹೆಚ್ಚಿನ ಹಸಿವೆಯನ್ನು ಅನುಭವಿಸುವ ನೂತನ ತಾಯಿಯಂದಿರಿಗೆ ಅನ್ವಯಿಸುತ್ತದೆ. ಆದರೆ ತಜ್ಞರ ಪ್ರಕಾರ ತಾಯಿಯು ಸಮತೋಲಿತ ಆಹಾರವನ್ನು ಸೇವಿಸಬೇಕು ಮತ್ತು ತೂಕ ಹೆಚ್ಚಾಗುವುದನ್ನು ತಡೆಯಲು ಸಾಕಷ್ಟು ವ್ಯಾಯಾಮವನ್ನು ಮಾಡಬೇಕು. ಅತಿಯಾದ ತೂಕವು ಬೇರೆ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಮಿಥ್ಯೆ: ಗರ್ಭಿಣಿಯು ಕೇವಲ ಬಿಳಿಯ ಬಣ್ಣದ ಮತ್ತು ಸಪ್ಪೆಯಾದ ಆಹಾರವನ್ನು ಸೇವಿಸಬೇಕು. ಏಕೆಂದರೆ ಢಾಳವಾದ ಬಣ್ಣದ ಆಹಾರಗಳು ಮಗುವಿನ ಚರ್ಮದ ಬಣ್ಣದ ಮೇಲೆ ಪ್ರಭಾವ ಬೀರುತ್ತದೆ.
ಸರಿ:
 ಆಹಾರದ ಬಣ್ಣಕ್ಕೂ ಮತ್ತು ಮಗುವಿನ ಚರ್ಮದ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ. ಜೀನ್‌ಗಳ ಆಧಾರದಲ್ಲಿ  ಚರ್ಮದ ಬಣ್ಣ ನಿರ್ಧಾರವಾಗುತ್ತದೆ.  ಆದರೆ ತಜ್ಞರ ಪ್ರಕಾರ ಅತಿಯಾದ ಮಸಾಲೆಯುಕ್ತ ಪದಾರ್ಥಗಳಿಂದ ತಾಯಂದಿರಲ್ಲಿ ಆಮ್ಲತೆಯುಂಟಾಗಬಹುದು.

ಮಿಥ್ಯೆ: ಕೆಲವು ಸಂಸ್ಕೃತಿಗಳಲ್ಲಿ ಮಹಿಳೆಗೆ ಪ್ರಸವದ ನಂತರ ವೀಳ್ಯದೆಲೆ ಮತ್ತು ಸುಣ್ಣವನ್ನು ನೀಡುತ್ತಾರೆ.
ಸರಿ:
ಸುಣ್ಣದಲ್ಲಿ ಕ್ಯಾಲ್ಶಿಯಂ ಇರುವುದರಿಂದ ಇದು ತಾಯಿಯ ಆರೋಗ್ಯಕ್ಕೆ ಒಳ್ಳೆಯದು. ತಜ್ಞರ ಪ್ರಕಾರ ಒಂದು ಮಿತಿಯಲ್ಲಿ ನೀಡಿದರೆ ಇದು ಆರೋಗ್ಯಕರ.

ಮಿಥ್ಯೆ: ಗರ್ಭಿಣಿ ಮಹಿಳೆಯರು ಸಂಜೆ 6 ಗಂಟೆಯ ನಂತರ ಹೊರಗಡೆ ಹೋದರೆ  ಆಕೆಯನ್ನು ಮತ್ತು ಮಗುವನ್ನು ಕೆಟ್ಟಶಕ್ತಿಗಳು ಆವರಿಸಬಹುದು.
ಸರಿ:
 ಈ ನಂಬಿಕೆಗೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ.

ಮಿಥ್ಯೆ:  7 ನೆಯ ತಿಂಗಳಿನಲ್ಲಿ ಗರ್ಬಿಣಿಗೆ ಸೀಮಂತ/ ಮಡಿಲು ತುಂಬುವುದು ಮಾಡುವುದರಿಂದ ಮಗುವಿನ ಶ್ರವಣಶಕ್ತಿಯು ಹೆಚ್ಚುತ್ತದೆ.  

ಅಥವಾ

ಮಿಥ್ಯೆ: ಸೀಮಂತದಲ್ಲಿ ತಾಯಿಗೆ ಗಾಜಿನ ಬಳೆಗಳನ್ನು ತೊಡಿಸುವುದರಿಂದ ಮಗುವಿನ ಚುರುಕುತನ ಹೆಚ್ಚಾಗುತ್ತದೆ.

ಸರಿ:  ಸೀಮಂತ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧವಿರುವ ಬಗ್ಗೆ ಯಾವುದೇ ವೈಜ್ಞಾನಿಕ ಸಾಕ್ಷಿಯಿಲ್ಲ. ಈ ಪದ್ಧತಿಯಿಂದ ತಾಯಿಗೆ ಸಂತೋಷವಾಗುತ್ತದೆ ಮತ್ತು ಆಕೆಯ ಯೋಗಕ್ಷೇಮಕ್ಕೆ ಇದು ಪೂರಕವಾಗಿ ಸಹಾಯಕಾರಿಯಾಗಿದೆ.

ಮಿಥ್ಯೆ: ತಲೆಯ ಸುತ್ತಲೂ ಬಟ್ಟೆಯನ್ನು ಸುತ್ತಿಕೊಳ್ಳುವುದರಿಂದ ಸೋಂಕು ತಗಲುವುದಿಲ್ಲ. ಮತ್ತು ಸೊಂಟಕ್ಕೆ ಬಟ್ಟೆಯನ್ನು ಸುತ್ತಿಕೊಳ್ಳುವುದರಿಂದ ಹೊಟ್ಟೆಯ ಭಾಗದ ಚರ್ಮವು ಜೋತುಬೀಳುವುದಿಲ್ಲ.
ಸರಿ:
ತಲೆಯ ಸುತ್ತ ಗಟ್ಟಿಯಾಗಿ ಬಟ್ಟೆಯನ್ನು ಸುತ್ತಿಕೊಳ್ಳುವುದರಿಂದ ಕುತ್ತಿಗೆಯ ಸುತ್ತ ರಕ್ತ ಪರಿಚಲನೆಗೆ ಸಮಸ್ಯೆಯಾಗಬಹುದು. ಅದೇ ರಿತಿ ಹೊಟ್ಟೆಯ ಸುತ್ತ ಬೆಲ್ಟ್ ಕಟ್ಟಿದರೆ ಹೊಟ್ಟೆಯ ಸ್ನಾಯುಗಳು ಬಿಗಿಯಾಗುವುದಿಲ್ಲ. ಇದಕ್ಕಾಗಿ ಪೆಲ್ವಿಕ್ ಭಾಗದ ವ್ಯಾಯಾಮಗಳನ್ನು ಮತ್ತು ಕೆಗೆಲ್ ವ್ಯಾಯಾಮಗಳನ್ನು (http://www.mayoclinic.org/healthy-lifestyle/womens-health/in-depth/kegel-exercises/art-20045283) ಮಾಡಬೇಕು.

ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಿರುವ ಯಾವುದೇ ಪದ್ಧತಿಗಳನ್ನು ಅನುಸರಿಸುವ ಮೊದಲು ನಿಮ್ಮ ಪ್ರಸೂತಿ ತಜ್ಞರ ಸಲಹೆ ಪಡೆಯಿರಿ.