ತಾಯ್ತನ

ಪ್ರಸವಾನಂತರದ ಖಿನ್ನತೆ ಬಗ್ಗೆ ನನಗೆ ತಿಳಿಸದೆ ಇರುವ ವಿಷಯಗಳು

ವೇದಶ್ರೀ ಕಾಂಬೆತೆ- ಶರ್ಮಾ
ನೀವು ಗರ್ಭಿಣಿಯಾಗಿರುವಾಗ ಅವರು ಬಹಳಷ್ಟು ವಿಷಯಗಳ ಬಗ್ಗೆ ತಿಳಿಸುತ್ತಾರೆ. ಇಲ್ಲಿ ಅವರೆಂದರೆ ಕುಟುಂಬದವರು, ಪುಸ್ತಕಗಳು, ವೆಬ್ ಸೈಟುಗಳು,  ಅಥವಾ ಆ ಅನುಭವವನ್ನು ದಾಟಿ, ಅದರ ಗುರುತನ್ನು ಉಳಿಸಿಕೊಂಡಿರುವ ಸ್ನೇಹಿತರು, ಅವರು ನಿಮಗೆ ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂದು ತಿಳಿಸುತ್ತಾರೆ. ಯಾವ ವ್ಯಯಾಮ ಮಾಡಬೇಕು, ಎಷ್ಟು ಮಾಡಬೇಕು ಎಂದು ತಿಳಿಸುತ್ತಾರೆ. ಏನನ್ನು ಧರಿಸಬೇಕು, ಏನನ್ನು ಮಾಡಬಾರದು, ಯಾವ ಔಷಧಗಳನ್ನು ತೆಗೆದುಕೊಳ್ಳಬೇಕು ಎಂಬಿತ್ಯಾದಿ ವಿಷಯಗಳನ್ನು ತಿಳಿಸುತ್ತಾರೆ. ಆದರೆ ಅವರು ಪ್ರಸವಾನಂತರದ ಖಿನ್ನತೆಯ ಬಗ್ಗೆ ಏನನ್ನೂ ಹೇಳುವುದಿಲ್ಲ.
ನನ್ನ ಹೆರಿಗೆಯ ಕೆಲವು ದಿನಗಳ ನಂತರ (ಸಹಜ ಹೆರಿಗೆ, ಎಪಿಸಿಯಾಟಮಿ) ನನ್ನಲ್ಲಿ ಎದೆಹಾಲು ಸಾಕಷ್ಟು ಉತ್ಪತ್ತಿಯಾಗುತ್ತಿಲ್ಲವೆಂದು ತಿಳಿಯಿತು. ಮಗುವಿಗೆ ಕೋಲಿಕ್ ಸಮಸ್ಯೆಯಿರುವುದು ಕೂಡ ಪತ್ತೆಯಾಯಿತು. ಕೆಲವೊಮ್ಮೆ ಇವೆರಡರ ನಡುವೆ ಸಂಬಂಧವಿದೆಯೆಂದು ಇನ್ನೊಮ್ಮೆ ಇಲ್ಲವೆಂದು ಹೇಳಲಾಗುತ್ತದೆ. ನಮ್ಮಿಬ್ಬರ ಪರಿಸ್ಥಿತಿಗೂ ಪರಿಹಾರವನ್ನು ಹುಡುಕಿದೆವು, ಪ್ರಯತ್ನಿಸಿದೆವು ಮತ್ತು ಪ್ರಯೋಜನವಿಲ್ಲವೆಂದು ನಿಲ್ಲಿಸಿದೆವು. ರಾತ್ರಿಯ ವೇಳೆ ನನ್ನ ಮಗುವು ನಿರಂತರವಾಗಿ ಏಳು ಗಂಟೆಗಳವರೆಗೆ ಅಳುತ್ತಿದ್ದರೂ ಅದನ್ನು ಹಾಗೆಯೇ ಒಪ್ಪಿಕೊಳ್ಳುವಂತೆಯೂ, ಈ ಸಮಸ್ಯೆಗೆ ಯಾವುದೇ ಪರಿಹಾರ ತಿಳಿದಿಲ್ಲವೆಂದೂ ಮತ್ತು ಅವಳಿಗೆ 3 ತಿಂಗಳಾದ ಬಳಿಕ ಇದು ತನ್ನಿಂದ ತಾನೇ ನಿಲ್ಲುವುದೆಂದೂ ತಿಳಿಸಲಾಯಿತು. ಸಾಕಷ್ಟು ಎದೆಹಾಲು ಇಲ್ಲದಿರುವುದು ನನ್ನ ತಪ್ಪಲ್ಲವೆಂದು ತಿಳಿಸಿದರು. ಬೇಬಿ ಫಾರ್ಮುಲಾಗಳು ಸಹ ತಾಯಿಯ ಹಾಲಿನಷ್ಟೇ ಉತ್ತಮವಾಗಿರುತ್ತವೆ ಎಂಬ ಸಲಹೆಯೂ ಬಂದಿತು. ನನ್ನಲ್ಲಿ ಸಾಕಷ್ಟು ಎದೆಹಾಲು ಇಲ್ಲದಿರುವುದಕ್ಕೆ ನಾನು ಅದನ್ನು ಸಾಕಷ್ಟು ಬಯಸಿರಲಿಲ್ಲವೆಂದು ಹೇಳಿದರು. ಎದೆಹಾಲಿನ ಕೊರತೆಯು ಸುಶಿಕ್ಷಿತ ಮಹಿಳೆಯರಲ್ಲಿ ಜಾಸ್ತಿ ಕಂಡುಬರಲು ಅವರು ಈ ಬಗ್ಗೆ ಅತಿಯಾಗಿ ಯೋಚಿಸುವುದೇ ಕಾರಣ ಎಂದೂ ಹೇಳಿದರು. ಈ ಕೊನೆಯ ಮಾತನ್ನು ಒಬ್ಬ ಅನುಭವೀ ಮಕ್ಕಳ ತಜ್ಞರು ಹೇಳಿದರು. ನೀವೆಣಿಸಿದಂತೆ ಅವರೊಬ್ಬ ಪುರುಷ!
ಈ ರೀತಿ ನನಗೆ ಹಲವಾರು ವಿಷಯಗಳನ್ನು ತಿಳಿಸಲಾಯಿತು. ಆದರೆ, ಇವೆಲ್ಲವುಗಳಿಂದ ನಾನು ಘಾಸಿಗೊಳ್ಳಬಹುದೆಂದು ಮಾತ್ರ ಹೇಳಲಿಲ್ಲ. ಜನನಾಂಗದ ಶಸ್ತ್ರಕ್ರಿಯೆ, ದೈಹಿಕ ಬಳಲಿಕೆ, ಕೋಲಿಕ್ ನ ಸಮಸ್ಯೆಯಿರುವ ಮಗು ಜೊತೆಗೆ ಯಾವುದೋ ಕೊರತೆಯ ಭಾವನೆ… ಈ ರೀತಿ ಒಂದರ ಹಿಂದೆ ಒಂದರಂತೆ ಬರುವ ಸಮಸ್ಯೆಗಳಿಂದ ನಾನು ಬಳಲುವುದು ಸಹಜವೆಂದು ಯಾರೂ ತಿಳಿಸಲಿಲ್ಲ. 
ಅಷ್ಟೊಂದು ಸಂಕೀರ್ಣತೆಯಿರದ ಹೆರಿಗೆ ಆಗಿದ್ದರೂ ನನಗೆ ಸಮಾಧಾನವಿರಲಿಲ್ಲ. ನನ್ನ ಮಗಳನ್ನು ತೋಳುಗಳಲ್ಲೆತ್ತಿ ಆಡಿಸುವಾಗಲೂ ಅಪರಿಮಿತ ಸಂತೋಷವಿರಲಿಲ್ಲ. ನನ್ನ ತಂದೆ-ತಾಯಿಗೆಳು ಏನೆಲ್ಲ ಸಹಾಯವನ್ನು ಮಾಡಿದ್ದರೂ ಅವರಿಗೆ ಕೃತಜ್ಞನಾಗಿಲ್ಲವಲ್ಲ ಎಂಬ ಭಾವ ಕಾಡುತ್ತಿತ್ತು. ಅಸಹಾಯಕ, ನಿರ್ಲಕ್ಷಿತ, ಬಳಲಿದ ಹಾಗೂ ಏಕಾಂಗಿಯಾಗಿ ಕಳೆದ ಪ್ರತಿ ದಿನಗಳ ಕುರಿತು ಉತ್ತರ ಸಿಗದ ಕೆಲವು ಸಂಗತಿಗಳು ನನ್ನನ್ನು ಬಾಧಿಸತೊಡಗಿದ್ದವು. ಇದೆಲ್ಲ ನಾನು ನನ್ನ ಕುಟುಂಬದವರ, ಸ್ನೇಹಿತರ, ಹಾಗೂ ಓದಿದ ಪುಸ್ತಕಗಳ ಪ್ರಭಾವದಿಂದಾಗಿದ್ದು. ಇದರಿಂದಾಗಿ ಮಗುವಾದ ನಂತರ ನಿಷ್ಕಲ್ಮಶವಾದ ಆನಂದವನ್ನು ನಾನು ಅನುಭವಿಸಬೇಕು ಎಂಬುದನ್ನು ಕಲ್ಪಿಸಿಕೊಳ್ಳುವಂತೆ ಮಾಡಿದ್ದವು.
ಆ ರಿತಿಯ ಆನಂದದ ಅನುಭವ ಆಗದೇ ಇದ್ದರೆ, ಅದು ದುಃಖವೇ ಅಥವಾ ಕೋಪವೇ?  ನನ್ನಲ್ಲೇ ಏನೋ ಸರಿಯಿಲ್ಲ ಎಂದು ಅನಿಸಿತ್ತು. ಈ ಎಲ್ಲವುಗಳಿಂದಾಗಿ ನಾನು ಪಶ್ಚಾತ್ತಾಪದಿಂದ ಕೂಡ ಬಳಲಿದೆ.
ಆದರೆ “ಏನೋ ಸರಿಯಿಲ್ಲವೆಂಬ ಆ ಭಾವನೆಯು ಪ್ರಸವಾ ನಂತರದ ಖಿನ್ನತೆಯ ಲಕ್ಷಣವಾಗಿರಬಹುದೆಂದು ನನಗೆ ಅನ್ನಿಸಲೇ ಇಲ್ಲ. ನಾನು ಇದರ ಬಗ್ಗೆ ಮಕ್ಕಳ ಪುಸ್ತಕಗಳಲ್ಲಿ ಓದಿದ್ದೆ. ಆದರೆ ನಾನು ಅದಕ್ಕೆ ಒಳಗಾಗಿಲ್ಲ ಎಂಬ ಭಾವನೆಯಲ್ಲಿಯೇ ಇದ್ದೆ.
ನಾನು ಎಲ್ಲವನ್ನೂ ಸರಿಯಾಗಿಯೇ ನಿರ್ವಹಿಸಿದ್ದೆ. ಸೂಕ್ತವಾದ ಆಹಾರವನ್ನು ಸೇವಿಸಿದ್ದೆ, ಪ್ರಸವಪೂರ್ವ ಯೋಗಾಭ್ಯಾಸ ಮಾಡಿದ್ದೆ, ಹೆರಿಗೆಯ ದಿನದವರೆಗೂ ಸಕ್ರಿಯ ಜೀವನವನ್ನು ನಡೆಸಿದ್ದೆ ಮತ್ತು ಬೇಡದ ಎಲ್ಲಾ ವಿಷಯಗಳಿಂದ ದೂರವಿದ್ದೆ. ನಿಜವಾಗಿಯೂ ನನ್ನಲ್ಲಿ ಖಿನ್ನತೆಯುಂಟಾಗಿತ್ತೇ? ಅಥವಾ ನಾನು ಸ್ವಲ್ಪ ಬೇಸರದಲ್ಲಿದ್ದೆನೇ? 
ಗರ್ಭಾವಸ್ಥೆಯಲ್ಲಿರುವಾಗ ನಿಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತಿದ್ದ ಹಿತಕರವಾದ ಅನುಭವವನ್ನು ನೀಡುವ ಹಾರ್ಮೋನುಗಳು ಪ್ರಸವದ ನಂತರ ಮರೆಯಾಗುವುದರಿಂದ ಸ್ವಲ್ಪ ಮಟ್ಟಿಗೆ ಬೇಬಿ ಬ್ಲೂ ಉಂಟಾಗುವುದು ಸಹಜವೆಂದೇ ಎಲ್ಲಾ ಪುಸ್ತಕಗಳು ಮತ್ತು ಅಂತರ್ಜಾಲ ತಾಣಗಳು ತಿಳಿಸುತ್ತವೆ. ಆ ಪದಗುಚ್ಛ ಎಷ್ಟು ಅಸ್ಪಷ್ಟವಾಗಿದೆ ಎಂಬುದು ನನಗೆ ಗೊತ್ತು. “ ನಾನು ಇವತ್ತು ಶಾಪಿಂಗಿಗೆ ಹೋಗುವೆ ಎಂದು ನನಗೆ ಅನಿಸುವುದಿಲ್ಲ. ನಾನಿಲ್ಲೇ ಕುಳಿತುಕೊಳ್ಳುವೆ ಮತ್ತು ಕಪ್ ಕೇಕೊಂದನ್ನು ತಿನ್ನುವೆ ಎಂದುಕೊಳ್ಳುವೆ. ಯಾಕೆಂದರೆ ನನಗೆ ಬೇಬಿ ಬ್ಲೂದ ಅನುಭವವಾಗುತ್ತಿದೆ.” ಆ ಕತ್ತಲೆಯ ದಿನಗಳಲ್ಲಿ ನಾನೇನು ಅನುಭವಿಸಿದೆ ಎಂಬುದನ್ನು ವಿವರಿಸುವುದು ಎಂದರೆ, “ಓ ದೇವರೆ, ಇನ್ನು ನನ್ನಿಂದ ಸಾಧ್ಯವಿಲ್ಲ.
ನಾನೊಬ್ಬ ಭಯಂಕರ ತಾಯಿ ಮತ್ತು ಪಪ್ಪಾಯಿ ಹಣ್ಣುಗಳನ್ನು ಬಲವಂತವಾಗಿ ತಿನ್ನಲು ಸಾಧ್ಯವಾಗುತ್ತಿಲ್ಲ.” ಎಂದು ಹೇಳಿದಂತೆ ಆಗಬಹುದು! (ನನ್ನಲ್ಲಿ ಎದೆಹಾಲಿನ ಪ್ರಮಾಣ ಹೆಚ್ಚಾಗಬೇಕೆಂದು ಪಪ್ಪಾಯಿ ಹಣ್ಣುಗಳನ್ನೇ ಹೆಚ್ಚಾಗಿ ತಿನ್ನಲು ಸೂಚಿಸಿದ್ದರು. ನನಗೆ ಪಪ್ಪಾಯಿ ಹಣ್ಣೆಂದರೆ ಆಗದು. ಈಗಂತೂ ಎಂದಿಗಿಂತ ಹೆಚ್ಚು).  
ನಾನು ಆಗ ಪ್ರಸವಾ ನಂತರದ ಖಿನ್ನತೆಯಿಂದ ಬಳಲಿದ್ದೆನೆಯೇ ಎಂದು ಈಗಲೂ ನನಗೆ ಸರಿಯಾಗಿ ತಿಳಿದಿಲ್ಲ. ಪ್ರಸವದ ಮೊದಲ ಕೆಲವು ತಿಂಗಳುಗಳು ನನ್ನನ್ನು ನಿಭಾಯಿಸುವುದು ಸುಲಭವಾಗಿರಲಿಲ್ಲವೆಂದು ನನ್ನ ಪತಿ ಹೇಳುತ್ತಾರೆ. ನಾನು ಅವರು ಹೇಳುವುದನ್ನು ನಂಬುತ್ತೇನೆ. ನನಗೆ ಒಂದುವೇಳೆ ಪ್ರಸವಾನಂತರದ ಖಿನ್ನತೆಯು ಉಂಟಾಗಿದ್ದರೂ ಸಹ ನಾನದನ್ನು ಸುಲಭವಾಗಿ ಕಳೆದೆ. ನನ್ನ ಮಗಳ ಬಗ್ಗೆ ಒಮ್ಮೆಯೂ ಬೇಸರಿಸಿಕೊಳ್ಳಲಿಲ್ಲ.
ನಾನು ಅವಳಿಗೆ ಯಾವುದೇ ಕೆಟ್ಟದನ್ನು ಬಯಸಲಿಲ್ಲ. ಪ್ರಸವಾ ನಂತರದ ಖಿನ್ನತೆಯಿಂದ ಬಳಲುವವರಲ್ಲಿ ಇಂತಹ ಯೋಚನೆಗಳು ಸಾಮಾನ್ಯವಾಗಿದ್ದಾಗಲೂ ಸಹ ನಾನು ಹಾಗೆ ಮಾಡಲಿಲ್ಲ. ಈ ಸಂದರ್ಭವು ತಾಯಿಯ ಮಟ್ಟಿಗೆ ಭಯಂಕರವಾಗಿರುತ್ತದೆ.  ಇದರ ಜೊತೆಗೆ ಗರ್ಭಾವಸ್ಥೆಗೆ ಮುಂಚಿನ ಆಕೃತಿಗೆ ಮರಳಲು ಇರುವ ಸಾಮಾಜಿಕ ಒತ್ತಡ, ಸಂಬಳವಿಲ್ಲದ ಹೆರಿಗೆ ರಜೆ ಮತ್ತು ಕಿಂಚಿತ್ತೂ ಯೋಚಿಸದೇ ಜನರು ಮುಂದಿನ ಮಗುವಿನ ಬಗ್ಗೆ ಕೇಳುವ ಪ್ರಶ್ನೆಗಳು.
ನಾನು ಮುಂದುವರೆಯಬೇಕೇ?
ಪ್ರಸವಾ ನಂತರದ ಖಿನ್ನತೆಯ ಸಮಸ್ಯೆಯನ್ನು ಹತ್ತಿರದಿಂದ ಅನುಭವಿಸಿದ ನಾನು, ಭಾವೀ ಪಾಲಕರು ಕಡ್ಡಾಯವಾಗಿ ಪ್ರಸವಪೂರ್ವ ಆಪ್ತಸಮಾಲೋಚನೆಗೆ ಒಳಗಾಗಬೇಕು ಎಂದು ಸೂಚಿಸುತ್ತೇನೆ. ತಂದೆಯನ್ನು ಕೂಡ ಈ ಸಂದರ್ಭವನ್ನು ನಿಭಾಯಿಸಲು ತಯಾರು ಮಾಡಬೇಕು. ತಾಯಂದಿರಲ್ಲಿ ಖಿನ್ನತೆ ಉಂಟಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲದಿದ್ದರೂ ಇದರಿಂದ ಅವರಿಗೆ ಹಾನಿಯಾಗುವುದನ್ನು ತಪ್ಪಿಸಬಹುದು. 
ವೇದಶ್ರೀ ಕಾಂಬೆಟೆ-ಶರ್ಮಾ ಅವರು ‘There May Be An Asterisk Involved’ ಎಂಬ ಪುಸ್ತಕದ ಲೇಖಕರಾಗಿದ್ದು, ಮುಂಬೈ ಮೂಲದ ಜಾಹಿರಾತು ಕಂಪನಿಯಲ್ಲಿ ಕ್ರಿಯೆಟಿವ್ ಡೈರೆಕ್ಟರ್ ಆಗಿದ್ದಾರೆ.