ಸ್ತನ್ಯಪಾನದಿಂದ ಮಗುವಿಗೆ ಸೋಂಕುಗಳಿಂದ ರಕ್ಷಣೆ ದೊರೆಯುವುದಲ್ಲದೇ, ತಾಯಿ ಮತ್ತು ಮಗುವಿನ ಬಾಂಧವ್ಯ ವೃದ್ಧಿಸುತ್ತದೆ. ಲ್ಯಾಕ್ಟೆಶನ್ ಕನ್ಸಲ್ಟಂಟ್ ಡಾ. ಶೋಯ್ಬಾ ಸಲ್ಡಾನಾ ರವರು ಪವಿತ್ರಾ ಜಯರಾಮನ್ ಅವರ ಜೊತೆ ನಡೆಸಿದ ಮಾತುಕತೆಯಲ್ಲಿ ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಸ್ತನ್ಯಪಾನದ ಪಾತ್ರ ಹಾಗು ತಾಯಂದಿರು ಸ್ತನ್ಯಪಾನ ಮಾಡಿಸುವಾಗ ಎದುರಾಗುವ ಒತ್ತಡಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತಿಳಿಸಿದ್ದಾರೆ.
ಸ್ತನ್ಯಪಾನ ಮತ್ತು ಮಾನಸಿಕ ಆರೋಗ್ಯ ಹೇಗೆ ಪರಸ್ಪರ ಸಂಬಂಧಿಸಿದೆ?
ಮಗುವಿನ ಯೋಗಕ್ಷೇಮಕ್ಕೆ ಸ್ತನ್ಯಪಾನವು ಅತ್ಯಾವಶ್ಯಕ. ಆದರೆ ಗರ್ಭಾವಸ್ಥೆ ಮತ್ತು ಹೆರಿಗೆಯ ನಂತರದ ಪ್ರಮುಖ ಹಂತವೇ ಸ್ತನ್ಯಪಾನವಾಗಿದ್ದು, ಈ ಹಂತದಲ್ಲಿ ಚಿಂತೆ, ಆತಂಕ ಎದುರಾದರೆ ತಾಯಿಯು ಹತಾಶೆ, ಆಘಾತ ಅಥವಾ ಚಿಂತೆಗೆ ಒಳಗಾಗಬಹುದು.
ಸ್ತನ್ಯಪಾನದ ವಿಷಯದಲ್ಲಿ ನಗರದ ಮಹಿಳೆಯರು ಎದುರಿಸುವ ಕಷ್ಟಗಳೇನು?
ನಾವು ಹಲವು ಚಟುವಟಿಕೆಗಳನ್ನು ಕಾಲಾಂತರದಲ್ಲಿ ಕಲಿತವುಗಳೇ ಆಗಿವೆ. ಕೈಗಳನ್ನು ಬಳಸಿ ಊಟ ಮಾಡುವುದು ಅಥವಾ ಚಮಚ, ಫೋರ್ಕ್ ಬಳಸುವುದು, ಎಲ್ಲವೂ ಕಲಿತ ಅಭ್ಯಾಸಗಳೇ ಆಗಿವೆ. ಅವನ್ನು ನಾವು ಹುಟ್ಟಿನಿಂದಲೇ ತಿಳಿದಿರಲಿಲ್ಲ.
ಮಧ್ಯಮ ವರ್ಗದ ಸಂಸ್ಕೃತಿಯಲ್ಲಿ ಸ್ತನ್ಯಪಾನವು ಖಾಸಗಿ ಸಂಗತಿಯಾಗಿದ್ದು, ಮನೆಯಲ್ಲಿ ಎಲ್ಲರೆದುರು ನಡೆಯುವ ಕ್ರಿಯೆಯಲ್ಲ. ನಗರದಲ್ಲಿ ಬೆಳೆದ ಮಹಿಳೆಯು ಸ್ತನ್ಯಪಾನದ ಕ್ರಿಯೆಯನ್ನು ನೋಡಿರುವುದಿಲ್ಲ. ಆದರೆ ಹಳ್ಳಿಯಲ್ಲಿ ಹುಡುಗಿಯರು ತಮ್ಮ ತಾಯಿ ಮೊಲೆಯುಣಿಸುವುದನ್ನೋ, ಅಕ್ಕ-ಅತ್ತಿಗೆಯರು ಮಕ್ಕಳಿಗೆ ಎದೆಹಾಲು ಕುಡಿಸುವುದನ್ನೋ ನೋಡುತ್ತಾ ಬೆಳೆದಿರುತ್ತಾರೆ. ಇದರಿಂದ ಆಕೆಗೆ ಸ್ತನ್ಯಪಾನದ ಬಗ್ಗೆ ತಿಳಿದಿರುತ್ತದೆ. ಮಗುವನ್ನು ಹೇಗೆ ಹಿಡಿಯಬೇಕು, ಹೇಗೆ ತೇಗಿಸಬೇಕು ಅಥವಾ ಹೇಗೆ ಸಮಾಧಾನ ಪಡಿಸಬೇಕು ಎಂಬುದು ಪ್ರಾಯೋಗಿಕವಾಗಿ ತಿಳಿಯದೆ ಇದ್ದರೂ, ಸ್ತನ್ಯಪಾನದ ಅರಿವಿರುತ್ತದೆ. ಆದರೆ ನಗರ ಪ್ರದೇಶದ ಮಹಿಳೆಯರಿಗೆ ಲ್ಯಾಕ್ಟೇಶನ್ ತಜ್ಞರ ಸಹಾಯದ ಅಗತ್ಯವಿರುತ್ತದೆ.
ಲ್ಯಾಕ್ಟೇಶನ್ ತಜ್ಞರು ಮಗುವನ್ನು ಹೇಗೆ ಹಿಡಿದುಕೊಳ್ಳಬೇಕು, ಹಾಲು ಯಾವ ರೀತಿಯಲ್ಲಿ ಉತ್ಪತ್ತಿಯಾಗುತ್ತದೆ ಎಂಬ ಬಗ್ಗೆ ತಿಳಿಸಿಕೊಡುತ್ತಾರೆ. ಉದಾಹರಣೆಗೆ, ಎಷ್ಟೋ ಮಹಿಳೆಯರಿಗೆ ಹೆರಿಗೆಯ ನಂತರ ಮೊದಲ 24 ಗಂಟೆಗಳವರೆಗೆ ಹಾಲು ಉತ್ಪತ್ತಿಯಾಗುವುದಿಲ್ಲ ಎಂದು ತಿಳಿದಿರುವುದೇ ಇಲ್ಲ. ಎರಡನೆಯ ದಿನ 20-30 ಮಿಲೀ ಹಾಲು ಉತ್ಪತ್ತಿಯಾಗುತ್ತದೆ. ಮೂರನೆಯ ದಿನ ಹಾಲು ಉತ್ಪತ್ತಿಯಾಗಲು ಆರಂಭವಾಗುತ್ತದೆ. ಇದು ಅವರಿಗೆ ತಿಳಿಯುವುದಿಲ್ಲ. ಆದ್ದರಿಂದ ಅವರು ಚಿಂತೆಗೆ ಒಳಗಾಗುತ್ತಾರೆ. ಈ ಕಾರಣದಿಂದ ಅವರು, “ಅಯ್ಯೋ ಮಗುವಿನ ತೂಕ ಕಡಿಮೆಯಾಗುತ್ತಿದೆ” ಎಂದು ಪೌಡರ್ ಹಾಲನ್ನು ಆರಂಭಿಸಿ ಸ್ತನ್ಯಪಾನವನ್ನು ನಿರ್ಲಕ್ಷಿಸುತ್ತಾರೆ.
ಸ್ತನ್ಯಪಾನಕ್ಕೆ ತಯಾರಿಯು ಯಾವಾಗಿನಿಂದ ಆರಂಭವಾಗುತ್ತದೆ?
ಸ್ತನ್ಯಪಾನದ ಬಗ್ಗೆ ಹೆರಿಗೆಗೆ ಮುಂಚೆಯೇ ತಾಯಿಗೆ ತಿಳಿಸಬೇಕು. ಹೆರಿಗೆಯ ನಂತರ ತಾಯಿಯ ಹೊಲಿಗೆಗಳು ನೋವನ್ನುಂಟು ಮಾಡುತ್ತವೆ ಮತ್ತು ಸ್ತನಗಳು ಊದಿಕೊಂಡಿರುತ್ತವೆ. ಅವಳಿಗೆ ಸರಿಯಾಗಿ ನಿದ್ರೆಯಾಗಿರುವುದಿಲ್ಲ.ಇದು ಸ್ತನ್ಯಪಾನದ ಬಗ್ಗೆ ತಿಳಿಸಲು ಸೂಕ್ತ ಸಮಯವಲ್ಲ.
ಸ್ತನ್ಯಪಾನವು ಕುಟುಂಬದ ಜವಾಬ್ದಾರಿಯೂ ಆಗಿದೆ. ಆದ್ದರಿಂದ ಸಂಗಾತಿ, ಆಕೆಯ ತಾಯಿ, ಅತ್ತೆ ಅಥವಾ ನೂತನ ತಾಯಿಯ ಆರೈಕೆಯಲ್ಲಿ ತೊಡಗಿರುವ ವ್ಯಕ್ತಿಯು ಸ್ತನ್ಯಪಾನದಲ್ಲಿ ಎದುರಾಗುವ ಸಂಗತಿಗಳ ಬಗ್ಗೆ ತಿಳಿದಿರಬೇಕು. ಇನ್ನು ಕೆಲವು ತಪ್ಪು ಕಲ್ಪನೆಗಳನ್ನು ಹೊರದೂಡಿ ವೈಜ್ಞಾನಿಕವಾಗಿ ವಿಷಯ ಅರಿಯಬೇಕು. ಏಕೆಂದರೆ ಕೆಲವು ತಾಯಂದಿರು ಬೇರೆಯವರ ಅನುಭವಗಳನ್ನು ಕೇಳಿ ಚಿಂತಿತರಾಗುತ್ತಾರೆ. ಉದಾಹರಣೆಗೆ, “ನನ್ನ ಸ್ನೇಹಿತೆಗೆ ಹಾಲೇ ಆಗಿರಲಿಲ್ಲ,” “ಮಗುವು ಹಾಲು ಕುಡಿಯುತ್ತಿರಲಿಲ್ಲ,” “ಮಗುವು ರಾತ್ರೀ ಇಡೀ ಅಳುತ್ತಿತ್ತು” ಎಂಬ ಸಂಗತಿಗಳನ್ನು ಕೇಳಿರುತ್ತಾರೆ. ಇವು ಅವರಿಗೆ ಈಗಾಗಲೇ ಇರುವ ಒತ್ತಡ, ಚಿಂತೆಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಸ್ತನ್ಯಪಾನವು ಏಕೆ ಒತ್ತಡವನ್ನುಂಟು ಮಾಡುತ್ತದೆ?
ಗರ್ಭಿಣಿಯರಲ್ಲಿ ಒತ್ತಡ ಮತ್ತು ಆತಂಕವು ಸ್ವಲ್ಪ ಜಾಸ್ತಿಯೇ ಇರುತ್ತದೆ. ಕೆಲವೊಮ್ಮೆ ಅವರು ತಾಯ್ತನಕ್ಕೆ ಸಿದ್ಧವಿಲ್ಲದಿದ್ದರೂ ಕುಟುಂಬದವರ ಒತ್ತಡಕ್ಕೆ ಒಳಗಾಗಿರಬಹುದು. ಇದರಿಂದ ಅವರು ಇಷ್ಟವಿಲ್ಲದೆ ತಾಯಿಯಾಗುತ್ತಾರೆ. ಕೆಲವರಿಗೆ ಗಂಡುಮಗುವಿನ ಬದಲು ಹೆಣ್ಣು ಜನಿಸಿದ್ದರೆ, ಮಗುವಿನ ಬಣ್ಣ ಸರಿಯಿಲ್ಲದಿದ್ದರೆ ಅವರು ಮತ್ತಷ್ಟು ಹತಾಶೆಗೊಳಗಾಗುತ್ತಾರೆ.
ನನ್ನಲ್ಲಿಗೆ ಬಂದಿದ್ದ ಒಬ್ಬಳಿಗೆ ಹೆಣ್ಣು ಮಗುವಾಗಿತ್ತು. ಆಕೆ ಮತ್ತು ಆಕೆಯ ಪತಿ, ಮತ್ತು ಕುಟುಂಬದವರು ಸಂತೋಷವಾಗಿಯೇ ಇದ್ದರು. ಹೆರಿಗೆಯ ನಂತರ ಆಕೆ ಸ್ತನ್ಯಪಾನವನ್ನು ಆರಂಭಿಸಿದ್ದಳು. ಆದರೆ ಎರಡನೆಯ ದಿನ ನಾನು ಅವರ ರೂಮಿಗೆ ತೆರಳಿದಾಗ ಆಕೆ ಅಳುತ್ತಿದ್ದಳು. ಆಕೆಯು, ಮಗುವು ರಾತ್ರಿಯೆಲ್ಲಾ ಅಳುತ್ತಿತ್ತು ಮತ್ತು ಹಾಲನ್ನೇ ಕುಡಿಯಲಿಲ್ಲ ಎಂದು ತಿಳಿಸಿದಳು. ಬಹುಶಃ ಹೊಲಿಗೆ ಹಾಕಿದ ಸ್ಥಳ ನೋವುತ್ತಿರಬಹುದು ಎಂದು ಊಹಿಸಿ ವಿಚಾರಿಸಿದೆ. ಆಕೆಯನ್ನು ಇನ್ನೂಸ್ವಲ್ಪ ವಿಚಾರಿಸಿದಾಗ ಆಕೆಯ ತಾಯಿ ಬಾಯಿಬಿಟ್ಟಳು. ಅದೇನೆಂದರೆ ಮಗುವನ್ನು ನೋಡಲು ಬಂದ ಒಬ್ಬ ಸಂಬಂಧಿ, ‘ಎಂಥಾ ಕಪ್ಪು ಮಗು, ಅದರಲ್ಲೂ ಹೆಣ್ಣು,” ಎಂದು ಹೇಳಿದ್ದರು. ಆ ಮಾತು ಬಾಣಂತಿಯನ್ನು ಬೇಸರಕ್ಕೀಡುಮಾಡಿತ್ತು. ಅಲ್ಲಿಯವರೆಗೂ ಖುಷಿಯಿಂದ ಸ್ತನ್ಯಪಾನ ಮಾಡಿಸುತ್ತಿದ್ದ ಆಕೆ ಸಂಬಂಧಿಯ ಅನರ್ಥಕಾರಿ ಮಾತಿನಿಂದ ಬೇಸರಗೊಂಡಿದ್ದಕ್ಕಾಗಿ ಮಗುವಿಗೆ ಹಾಲೂಡಲು ವಿಫಲಳಾಗಿದ್ದಳು.
ಸ್ತನ್ಯಪಾನದಿಂದ ತಾಯಿ ಮಗುವಿನ ಬಾಂಧವ್ಯಕ್ಕೆ ಹೇಗೆ ಸಹಾಯವಾಗುತ್ತದೆ?
ಸ್ತನ್ಯಪಾನದ ಸಮಯದಲ್ಲಿ ಆಕ್ಸಿಟೋಸಿನ್ ಹಾರ್‌ಮೋನ್ ಬಿಡುಗಡೆಯಾಗುತ್ತದೆ. ಇದನ್ನು ವಾತ್ಸಲ್ಯದ ಹಾರ್‌ಮೋನ್ ಎಂದೂ ಹೇಳುತ್ತಾರೆ. ಇದು ತಾಯಿ ಮತ್ತು ಮಗುವಿನ ಬಾಂಧವ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಸ್ತನ್ಯಪಾನದ ವೇಳೆ ತಾಯಿಗೆ ಆರಾಮವೆನಿಸುವುದರಿಂದ ಮಗುವಿಗೂ ಆರಾಮ ದೊರೆಯುತ್ತದೆ. ಒಂಭತ್ತು ತಿಂಗಳವರೆಗೆ ಮಗುವಿಗೆ ತಾಯಿಯ ಗರ್ಭವು ನೈಸರ್ಗಿಕ ವಾತಾವರಣವಾಗಿರುತ್ತದೆ. ಈಗ ಅದು ಹೊರಬಂದಿರುತ್ತದೆ. ಎದೆಹಾಲು ಕುಡಿಯುವಾಗ ಅದಕ್ಕೆ ತಾಯಿಯ ಎದೆಬಡಿತ ಕೇಳಿಸುತ್ತದೆ. ಇದರಿಂದ ಮಗುವಿಗೂ ಹಿತವೆನಿಸುತ್ತದೆ.
ಆದರೆ ಸ್ತನ್ಯಪಾನವನ್ನು ಆರಾಮದಾಯಕವಾಗಿಸುವುದು ಮುಂದಿನ ಹಂತವಾಗಿದೆ. ಮಗುವನ್ನು ಬಯಸಿದ ಮತ್ತು ಮಗುವಿನ ಬಗ್ಗೆ ಖುಷಿಯಿಂದಿರುವ ಮಹಿಳೆಯರು ಸ್ತನ್ಯಪಾನದ ಆರಂಭಿಕ ಅಡೆತಡೆಗಳನ್ನು ನಿಭಾಯಿಸಬಲ್ಲರು.
ಮಾನವರಿಗೆ ಮಗುವಿನ ಸ್ತನ್ಯಪಾನ ಮಾಡಿಸುವುದನ್ನು ಕಲಿಸಬೇಕು. ನಾಯಿ, ಬೆಕ್ಕುಗಳಿಗೆ ಅದರ ಅಗತ್ಯವೇ ಇಲ್ಲ.
ತಾಯಿಯು ಕೆಲಸಕ್ಕೆ ಮರಳಿದ ಮೇಲೆ ಸ್ತನ್ಯಪಾನ ಸಾಧ್ಯವೇ?
ಉದ್ಯೋಗಿಕರಣದಿಂದ ಸ್ತನ್ಯಪಾನದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗಿದೆ. ಉದ್ದಿಮೆಗಳಿಗೆ ನೌಕರವರ್ಗ ಬೇಕೆಂಬ ಕಾರಣದಿಂದ ಪೌಡರ್ ಹಾಲಿನ ಬಳಕೆ ಪ್ರಾರಂಭವಾಯಿತು. ಆದರೆ ಇದು ಮಗುವಿನ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಗುವಿಗೆ ಒಂದು ವರ್ಷದವರೆಗೆ ಎದೆಹಾಲು ಕುಡಿಸಿದರೆ ಮಗುವಿನ ಆರೋಗ್ಯ ವೃದ್ಧಿಸುತ್ತದೆ.
ಆದರೆ ಸಂಸ್ಥೆಗಳು ಕೇವಲ 84 ದಿನಗಳ ಹೆರಿಗೆ ರಜೆ ನೀಡುವುದರಿಮದ ಮಗುವಿನ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಆದರೂ ಕೆಲಸಕ್ಕೆ ತೆರಳುವ ಮಹಿಳೆಯರು ಸಹ ಎದೆಹಾಲುಣಿಸಬಹುದು. ರಾತ್ರಿಯ ಸಮಯ ಅವರು 500-600 ಮಿಲೀ ಹಾಲು ನೀಡಬಹುದು. ದಿನದ ಸಮಯದಲ್ಲಿ ಅವರು ಹಾಲನ್ನು ತೆಗೆದು ಸಂಗ್ರಹಿಸಿ ನೀಡಬಹುದು. ಪೌಡರ್ ಹಾಲು ಮತ್ತು ಬಾಟಲಿಗಳನ್ನು ಬಳಸುವುದರ ಬದಲು ಮನೆಯ ಆಹಾರದ ಅಭ್ಯಾಸವನ್ನು ಮಾಡಿಸಬಹುದು.
ಮಾನಸಿಕ ಕಾಯಿಲೆಯಿರುವ ತಾಯಂದಿರು ಸ್ತನ್ಯಪಾನ ಮಾಡಿಸಬಹುದೇ?
ಇಲ್ಲಿ ಮೊದಲ ಪ್ರಶ್ನೆಯೆಂದರೆ, ಮಾನಸಿಕ ಕಾಯಿಲೆಯಿರುವ ಮಹಿಳೆಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಗರ್ಭಿಣಿಯಾಗಲು ಶಕ್ತಳೇ ಮತ್ತು ಮಗುವಿನ ಆರೈಕೆ ಮಾಡಲು ಸಮರ್ಥಳೇ ಎಂಬುದು. ಭಾರತದಂತಹ ಸಮಾಜದಲ್ಲಿ ಮಾನಸಿಕ ಕಾಯಿಲೆಯಿರುವ ಮಹಿಳೆಗೆ ಮದುವೆಯಾಗಿ, ಮಕ್ಕಳಾದರೆ ಎಲ್ಲವೂ ಸರಿಯಾಗುತ್ತದೆ ಎಂಬ ಭಾವನೆಯಿದೆ. ಆದರೆ ಇದು ತಾಯಿ ಮತ್ತು ಮಗುವಿಗೆ ಮಾರಕವಾಗಿದೆ.
ಮಹಿಳೆ ಮತ್ತು ಸಂಗಾತಿಯ ಸಹಾಯದಿಂದ ಮಾನಸಿಕ ಕಾಯಿಲೆಯನ್ನು ನಿಯಂತ್ರಣಕ್ಕೆ ತಂದ ಮೇಲೆಯೇ ಗರ್ಭಾವಸ್ಥೆಯ ಬಗ್ಗೆ ಯೋಚಿಸಬೇಕು. ಹೆಚ್ಚಿನ ಬೆಂಬಲ, ಆರೈಕೆಯನ್ನು ಒದಗಿಸಬೇಕು ಮತ್ತು ಹೆರಿಗೆಯ ನಂತರವೂ ಯಾವ ಔಷಧಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು. ಮಾನಸಿಕ ಖಾಯಿಲೆಯಿರುವ ತಾಯಿ ಔಷಧವನ್ನು ತೆಗೆದುಕೊಳ್ಳುತ್ತಿರುವಾಗಲೂ ಯಾವ ಸಮಸ್ಯೆಯಿಲ್ಲದೇ ಹಾಲುಣಿಸಬಹುದು.
ನೂತನ ತಾಯಿಗೆ ಕುಟುಂಬವು ಹೇಗೆ ಬೆಂಬಲ ನೀಡಬಹುದು?
ಹೆರಿಗೆಯ ನಂತರ ತಾಯಿ ಮಗುವಿಗೆ ಹಾಲುಣಿಸಲು, ಆರೈಕೆ ಮಾಡಲು ಕುಟುಂಬದ ಸಂಪೂರ್ಣ ಸಹಕಾರ ದೊರೆತರೆ ಸ್ತನ್ಯಪಾನವು ಸುಲುಭವಾಗುತ್ತೆ.
ತಾಯಿಯು ಆತ್ಮವಿಶ್ವಾಸದಿಂದ ಹಾಲುಣಿಸಿದಾಗ ಆಕೆಯು ಆ ಕ್ರಿಯೆಯನ್ನು, ಮಗುವನ್ನು ಹಾಗೂ ತಾಯ್ತನವನ್ನು ಆನಂದಿಸುತ್ತಾಳೆ. ಇದು ಆಕೆಯು ಹಿಂದೆಂದೂ ಅನುಭವಿಸದ ಭಾವನಾತ್ಮಕ ಅನುಭವವನ್ನು ನೀಡುತ್ತದೆ. ಹಾಗೂ ಮಗುವಿಗೆ ಉತ್ತಮ ಆರೋಗ್ಯ ದೊರೆಯುತ್ತದೆ.
ಸ್ತನ್ಯಪಾನವನ್ನು ನಾವು ಮಗುವಿನ ಮೊದಲ ಲಸಿಕೆ ಎಂದೇ ಭಾವಿಸುತ್ತೇವೆ. ಸ್ತನ್ಯಪಾನದಿಂದ ಮಗುವಿನ ಸೋಂಕಿನಿಂದ ರಕ್ಷಣೆ ಮತ್ತು ಬಾಂಧವ್ಯ ಹೆಚ್ಚುತ್ತದೆ. ನೂತನ ತಾಯಿಗೆ ಆಕೆಯ ತಾಯಿ, ಅತ್ತೆ, ಅಜ್ಜಿಯರ ಬೆಂಬಲ ದೊರೆಯಬೇಕು. ಸಂಗಾತಿಯು ಇದರಲ್ಲಿ ಪ್ರಮುಖ ಪಾತ್ರವಹಿಸಬೇಕು. ಏಕೆಂದರೆ ಸಂಗಾತಿ ನೀಡುವ ಭಾವನಾತ್ಮಕ ಬೆಂಬಲವು ಮಹಿಳೆಯ (ನೂತನ ತಾಯಿ) ಮೇಲೆ ಬಹಳ ಒಳ್ಳೆಯ ಪರಿಣಾಮ ಬೀರುತ್ತದೆ.