ತಾಯ್ತನ

ಯೋಗ ನನ್ನ ಆರೋಗ್ಯವನ್ನು ಉತ್ತಮಗೊಳಿಸಿದೆ

ಗರ್ಭಾವಸ್ಥೆಯ ಎಷ್ಟೋ ಸಮಸ್ಯೆಗಳಿಗೆ ಸರಳ ಯೋಗಾಸನಗಳು ಪರಿಹಾರ ನೀಡಬಹುದು. ತಜ್ಞರ ಸಲಹೆ ಪಡೆದು ನಿಯಮಿತ ಯೋಗಾಸನ ಮಾಡಿದರೆ ದೇಹಕ್ಕೂ ಮನಸಿಗೂ ಒಳ್ಳೆಯದು.

ನಯನಾ ಕಾಂತರಾಜ್

ಗರ್ಭಾವಸ್ಥೆಯು ಬಹಳ ಸಂತೋಷದ ಅವಧಿಯಾಗಿದ್ದು, ಸ್ವಲ್ಪಮಟ್ಟಿನ ಆತಂಕದಿಂದಲೂ ಕೂಡಿರುತ್ತದೆ. ಈ ಸಮಯದಲ್ಲಿ ತಾಯಿ ಮಗುವಿಗೆ ಸೂಕ್ತವೆನಿಸುವ ಎಲ್ಲಾ ಕಾರ್ಯವನ್ನು ಮಾಡಲು ಬಯಸುತ್ತಾಳೆ. ಮಗುವಿಗೆ ಯಾವುದು ಒಳ್ಳೆಯದು ಎಂಬ ಬಗ್ಗೆ ಆಕೆಯ ಕುಟುಂಬದವರು ಮತ್ತು ಸ್ನೇಹಿತರು ಸಲಹೆ ನೀಡಲು ಆರಂಭಿಸುತ್ತಾರೆ ಮತ್ತು ಅವಳ ಸುತ್ತಲಿರುವವರು ಅವಳಿಗೆ ಹೆಚ್ಚಿನ ಕಾಳಜಿಯನ್ನು ತೋರಿಸುತ್ತಾರೆ. ತಿಳಿದೋ ತಿಳಿಯದೆಯೋ ಆಕೆ ತನಗಿಂತ ತನ್ನ ಮಗುವಿನ ಕಡೆಗೆ ಹೆಚ್ಚಿನ ಗಮನ ನೀಡುತ್ತಾಳೆ.

ನನಗೂ ಕೂಡ ಇದೇ ತರಹದ ಅನುಭವವಾಗಿತ್ತು. ನಾನು ನನ್ನ ಮೊದಲ ಮಗುವಿನೊಂದಿಗೆ ಗರ್ಭಿಣಿಯಾಗಿದ್ದಾಗ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ ಹಾಗೂ ಯೋಗ ಶಿಕ್ಷಕಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದೆ. ಪ್ರಯಾಣ ಮಾಡಬೇಕಾದ ಕಾರಣದಿಂದ ಯೋಗ ಕಲಿಸುವುದನ್ನು ನಿಲ್ಲಿಸಿದೆ. ನನ್ನ ಜೀವನ ಶೈಲಿಯಲ್ಲಿ ಆದ ಹಠಾತ್ ಬದಲಾವಣೆಯಿಂದಾಗಿ ಮತ್ತು ಕಚೇರಿಯಲ್ಲಿ ಹೆಚ್ಚಿದ ಜವಾಬ್ಧಾರಿಯಿಂದಾಗಿ ನನಗೆ ಗರ್ಭಾವಸ್ಥೆಯ ಮೊದಲ ತಿಂಗಳಲ್ಲೇ ಹೈಪೋಥೈರಾಯಿಡ್ ಸಮಸ್ಯೆ ಉಂಟಾಯಿತು ಮತ್ತು ಅದಕ್ಕೆ ಔಷಧವನ್ನು ತೆಗೆದುಕೊಂಡೆ.

ಆಗ ನನ್ನ ತೂಕ 50 ಕೆಜಿ ಇತ್ತು. ಮುಂದಿನ ಕೆಲವು ತಿಂಗಳಿನಲ್ಲಿ ಅದು 78 ಕೆಜಿಗೆ ತಲುಪಿತು. ರಕ್ತದೊತ್ತಡ ಕೂಡ ಸಾಮಾನ್ಯ ಮಟ್ಟಕ್ಕಿಂತ ಜಾಸ್ತಿಯೇ ಇತ್ತು. ಹೆರಿಗೆಯ ನಂತರ ಎಲ್ಲರೂ ನನ್ನ ತೂಕದ ಬಗ್ಗೆಯೇ ಮಾತನಾಡಲಾರಂಭಿಸಿದರು. ಇದರಿಂದ ನನ್ನ ಆತ್ಮವಿಶ್ವಾಸ ಕುಸಿಯಿತು.

ನನಗೆ ಸಿ–ಸೆಕ್ಷನ್ ಮಾಡಲಾಗಿದ್ದರೂ (9 ಗಂಟೆಗಳ ಹೆರಿಗೆ ನೋವಿನ ನಂತರ ಅನಿವಾರ್ಯ ಕಾರಣಗಳಿಂದ ಸಿಜೇರಿಯನ್ ಮಾಡಲಾಯಿತು) ನಾನು ಹೆರಿಗೆಯಾದ 8 ವಾರಗಳ ನಂತರ ಯೋಗಾಭ್ಯಾಸ ಆರಂಭಿಸಿದೆ. ದೃಢನಿಶ್ಚಯ ಮತ್ತು ಯೋಗಾಭ್ಯಾಸದ ಸಹಾಯದಿಂದ ಆರೋಗ್ಯಕರ ರೀತಿಯಲ್ಲಿ ನಾನು ಅಂದುಕೊಂಡಿರುವುದನ್ನು ಸಾಧಿಸಿ ತೋರಿಸಲು ಬಯಸಿದ್ದೆ. ಅಂದುಕೊಂಡಂತೆ ನನ್ನ ಮಗನಿಗೆ 1 ವರ್ಷದವನಾಗುವ ಹೊತ್ತಿಗೆ ನನ್ನ ಥೈರಾಯಿಡ್ ಮಟ್ಟ ಸಾಮಾನ್ಯ ಸ್ಥಿತಿಗೆ ಮರಳಿತು, ನಾನು ಔಷಧ ಸೇವನೆ ನಿಲ್ಲಿಸಿದೆ,  ಇದಲ್ಲದೇ ನನ್ನ ಗರ್ಭಾವಸ್ಥೆ ಸಮಯದ ಹೆಚ್ಚುವರಿ ತೂಕವನ್ನು ಕಳೆದುಕೊಂಡಿದ್ದೆ.

ನನ್ನ 2ನೆಯ ಮಗು ಗರ್ಭದಲ್ಲಿದ್ದಾಗ ನಾನು ಪೂರ್ಣಾವಧಿಯ ಯೋಗ ಶಿಕ್ಷಕಿಯಾಗಿದ್ದೆ. ಇದು ನಾನು ಆರೋಗ್ಯದಿಂದಿರಲು ಸಹಾಯಕವಾಯಿತು. ಈ ಬಾರಿ ಥೈರಾಯಿಡ್, ರಕ್ತದೊತ್ತಡ ಮತ್ತು ಅತಿಯಾದ ತೂಕದ ಸಮಸ್ಯೆಗಳು ನನ್ನನ್ನು ಬಾಧಿಸಲಿಲ್ಲ. ಈ ಸಮಯವು ಯಾವುದೇ ತೊಂದರೆಯಿಲ್ಲದೇ ಕಳೆಯಿತು ಮತ್ತು ಹೆರಿಗೆಯ ನಂತರ 8 ವಾರಗಳ ಬಳಿಕ ಮತ್ತೆ ಯೋಗ ತರಬೇತಿ ಆರಂಭಿಸಲು ಸಾಧ್ಯವಾಯಿತು.

ಒತ್ತಡ ನಿಭಾಯಿಸುವುದು:
ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯ ಅವಧಿಯನ್ನು ಸವಿಯದೇ ಅದನ್ನೊಂದು ಖಾಯಿಲೆಯೆಂಬಂತೆ ನೋಡುತ್ತಾರೆ. ಒತ್ತಡವೇ ಅದಕ್ಕೆ ಮುಖ್ಯ ಕಾರಣ. ಈ ಕೆಳಗಿನ ಕೆಲವು ಸಾಮಾನ್ಯ ವಿಚಾರಗಳು ಮತ್ತು ದೈಹಿಕ ಕ್ರಿಯೆಗಳಿಂದ ಗರ್ಭಾವಸ್ಥೆಯ ಅವಧಿಯಲ್ಲಿ ಒತ್ತಡ ಉಂಟಾಗುತ್ತದೆ.

ಮೊದಲ ತ್ರೈಮಾಸಿಕ: ದೈಹಿಕ ಆರೋಗ್ಯ ಸಮಸ್ಯೆಗಳು (ತಲೆತಿರುಗುವುದು, ಬಳಲಿಕೆ, ಬೆಳಗಿನ ಸಿಕ್ ನೆಸ್, ತೂಕಡಿಕೆ.) ಕೆಲವರಿಗೆ ತಮ್ಮ ಗರ್ಭಾವಸ್ಥೆಯ ಪರಿಸ್ಥಿತಿಗೆ ಹೊಂದಿಕೊಂಡು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಹೆಚ್ಚಿನ ಸಮಯ ತಗಲುತ್ತದೆ. ಮೊದಲ ಬಾರಿ ತಾಯಿಯಾಗುತ್ತಿರುವವರು ಗರ್ಭಾವಸ್ಥೆ ಮತ್ತು ಹೆರಿಗೆಯ ಬಗ್ಗೆ ಆತಂಕಗೊಂಡಿರಬಹುದು.

ಎರಡನೆಯ ತ್ರೈಮಾಸಿಕ: ಬೆನ್ನುನೋವು ಮತ್ತು ಭ್ರೂಣದ ಅಸಹಜತೆಯ ಬಗ್ಗೆ ಆತಂಕ.

ಮೂರನೆಯ ತ್ರೈಮಾಸಿಕ: ಬೆನ್ನುನೋವು, ಕೈಕಾಲುಗಳಲ್ಲಿ ಊತ, ಹೃದಯ ಬಡಿತದಲ್ಲಿ ಏರುಪೇರು ಮತ್ತು ಹೆರಿಗೆಯ ಬಗ್ಗೆ ಆತಂಕ.

ಆರೋಗ್ಯಕರ ತಾಯಿ,  ಆರೋಗ್ಯವಂತ ಮಗು:
ಈ ಸಂದರ್ಭದಲ್ಲಿ ಮಹಿಳೆಗೆ ಆಕೆಯ ಕುಟುಂಬದವರ ದೈಹಿಕ ಮತ್ತು ಭಾವನಾತ್ಮಕ ಬೆಂಬಲದ ಅಗತ್ಯವಿರುತ್ತದೆ. ಕೆಲವು ಭಾವಿ ತಾಯಂದಿರು ಮೊದಲ ತ್ರೈಮಾಸಿಕದಲ್ಲಿ ತಲೆತಿರುಗುವುದು ಹಾಗೂ ಬಳಲಿಕೆಯಂತಹ ಸಮಸ್ಯೆಯಿಂದ ಬಳಲಿದರೆ ಮೂರನೆಯ ತ್ರೈಮಾಸಿಕದ ಹೊತ್ತಿಗೆ ಅತಿಯಾದ ತೂಕದಿಂದ ಊದಿರುತ್ತಾರೆ. ಎರಡನೆಯ ತ್ರೈಮಾಸಿಕದಲ್ಲಿ ಸ್ವಲ್ಪ ಲವಲವಿಕೆ ಹಾಗೂ ಆರಾಮವೆನಿಸುವುದರಿಂದ ಈ ಸಮಯದಲ್ಲಿ ಕೆಲವು ದೈಹಿಕ ವ್ಯಾಯಾಮ ಆರಂಭಿಸಬಹುದು. ಯೋಗಾಭ್ಯಾಸಕ್ಕಿಂತ ಉತ್ತಮ ಮತ್ತು ಸುರಕ್ಷಿತವಾದದ್ದು ಯಾವುದಿದೆ?

ಪ್ರಸವಪೂರ್ವ ಯೋಗಾಭ್ಯಾಸದಿಂದ ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ರಕ್ತಪರಿಚಲನೆ ಸುಗಮಗೊಳ್ಳುತ್ತದೆ. ಇದರಿಂದ ಉಸಿರಾಟ ಸರಾಗವಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯಲ್ಲಿ ಅತ್ಯಧಿಕ ಪ್ರಮಾಣದ ಹಾರ್ಮೋನಿನ ಬದಲಾವಣೆಯಾಗುತ್ತದೆ. ಆದ್ದರಿಂದ ಕೆಲವು ಮಹಿಳೆಯರು ಥೈರಾಯಿಡ್ ಸಮಸ್ಯೆ, ಮಧುಮೇಹ, ಅಥವಾ ರಕ್ತದೊತ್ತಡದ ಸಮಸ್ಯೆಯಿಂದ ಬಳಲಬಹುದು. ಈ ಎಲ್ಲಾ ಸಮಸ್ಯೆಗಳು ಒತ್ತಡದೊಂದಿಗೆ ಸಂಬಂಧ ಹೊಂದಿದ್ದು, ಯೋಗಾಭ್ಯಾಸದಿಂದ ಕಡಿಮೆಯಾಗುತ್ತದೆ.

ಮನಃ ಪ್ರಸನ್ನಾ ಉಪಯಾ ಯೋಗಃ”:  ಯೋಗಾಭ್ಯಾಸ ಆರೋಗ್ಯವಂತ ಮನಸ್ಸಿಗೆ ಕಾರಣವಾಗುತ್ತದೆ. ಆಸನಗಳ ಸಹಾಯದಿಂದ ಯೋಚನೆಗಳ ಗತಿಯನ್ನು ನಿಯಂತ್ರಿಸಬಹುದು.  ಪ್ರಾಣಾಯಾಮ ಹಾಗೂ ಕ್ರಿಯಾತಂತ್ರಗಳಿಂದ ಆತಂಕವನ್ನು ಕಡಿಮೆ ಮಾಡಬಹುದು. ಧನಾತ್ಮಕ ವಿಚಾರದಿಂದ ಒತ್ತಡವನ್ನು ನಿಯಂತ್ರಿಸಿಕೊಂಡ ಮಹಿಳೆಯ ಆತ್ಮವಿಶ್ವಾಸ ಮತ್ತು ಸಾಮರ್ಥ್ಯ ಹೆಚ್ಚುತ್ತದೆ.

ಗರ್ಭಿಣಿ ಮಹಿಳೆಗೆ ಉಪಯುಕ್ತವಾದ ಕೆಲವು ಆಸನಗಳನ್ನು ಇಲ್ಲಿ ನೀಡಲಾಗಿದೆ:

(ಸೂಚನೆ: ಪ್ರಸವಪೂರ್ವ ಯೋಗಾಭ್ಯಾಸವನ್ನು ಅನುಸರಿಸಲು ಬಯಸುವ ಮಹಿಳೆಯರು ತಮ್ಮ ಪ್ರಸೂತಿ ತಜ್ಞರ ಬಳಿ ಚರ್ಚಿಸಿ. ನಿಮ್ಮ ಮಿತಿಯಲ್ಲಿ ಈ ಆಸನಗಳನ್ನು ಮಾಡಿ ಮತ್ತು ಅನುಭವೀ ತರಬೇತುದಾರರ ಮೇಲ್ವಚಾರಣೆಯಲ್ಲಿಯೇ ಅಭ್ಯಾಸವನ್ನು ಕೈಗೊಳ್ಳಿ.)

ಬದ್ದಕೋನಾಸನ ಅಥವಾ ಬಟರ್ ಫ್ಲೈ ಭಂಗಿ:
ಈ ಆಸನವನ್ನು ಗರ್ಭಾವಸ್ಥೆಯ ಎಲ್ಲಾ 9 ತಿಂಗಳುಗಳಲ್ಲಿಯೂ ಮಾಡಬಹುದು.

ವಿಧಾನ:

  • ನೆಲದ ಮೇಲೆ ನೇರವಾಗಿ ಕುಳಿತುಕೊಳ್ಳಿ.
  • ನಿಮ್ಮ ಮೊಣಕಾಲುಗಳನ್ನು ಬಾಗಿಸಿ ಮತ್ತು ನಿಮ್ಮ ಪಾದಗಳನ್ನು ಹತ್ತಿರ ತನ್ನಿ.
  • ನಿಮ್ಮ ತೊಡೆಗಳನ್ನು ಅಲುಗಾಡಿಸಿ  ಮತ್ತು ನಿಮ್ಮ ಉಸಿರಾಟವನ್ನು ಗಮನಿಸಿ.

ಉಪವಿಸ್ಟ ಕೋನಾಸನ ಅಥವಾ ಸ್ಟ್ರೆಚ್ಡ್ ಆಂಗಲ್:
ಈ ಆಸನವನ್ನು ಮೊದಲ ಮತ್ತು ಎರಡನೆಯ ತ್ರೈಮಾಸಿಕದಲ್ಲಿ ಮಾಡಬಹುದು. ಮೂರನೆಯ ತ್ರೈಮಾಸಿಕದಲ್ಲಿ ನೀವು ಈ ಆಸನವನ್ನು ಮಾಡುವಾಗ ಬೆನ್ನಿಗೆ ಆಧಾರವನ್ನು ನೀಡಬೇಕು (ಗೋಡೆಗೆ ಆತು ಕುಳಿತು)

ವಿಧಾನ:

  • ನೆಲದ ಮೇಲೆ ನೇರವಾಗಿ ಕುಳಿತುಕೊಳ್ಳಿ ಮತ್ತು ನಿಮ್ಮ ಕಾಲುಗಳನ್ನು ಎಷ್ಟು ಸಾಧ್ಯವೋ ಅಷ್ಟು ಅಗಲಿಸಿ.
  • ನಿಧಾನವಾಗಿ ನಿಮ್ಮ ಎರಡೂ ಕೈಗಳನ್ನು ತೊಡೆಗಳ ಮೇಲೆ ಇರಿಸಿ ಮತ್ತು ನಿಮ್ಮ ಸೊಂಟಕ್ಕೆ ಆಧಾರವನ್ನು ಒದಗಿಸಿ.
  • ನಿಮ್ಮ ಎಡಗೈಯನ್ನು ಮೇಲೆತ್ತಿ ನಿಧಾನವಾಗಿ ಬಲಗಡೆಗೆ ವಾಲಿ. 
  • ಇದೇ ರಿತಿ ಬಲಗೈಯನ್ನು ಮೇಲೆತ್ತಿ ಎಡಗಡೆಗೆ ವಾಲಿ.
  • ಇದರಿಂದ ಒಂದು ಸುತ್ತು ಪೂರ್ತಿಯಾಗುತ್ತದೆ. ನೀವು ದಿನಕ್ಕೆ ಅಂತಹ 5 ಸುತ್ತುಗಳನ್ನು ಮಾಡಬಹುದು.

ಬೆಕ್ಕಿನ ಅಥವಾ ಟೈಗರ್ ಬ್ರೀದಿಂಗ್

ಈ ಆಸನವನ್ನು ಗರ್ಭಧಾರಣೆಯ ಎಲ್ಲಾ ಅವಧಿಯಲ್ಲಿಯೂ ಅಭ್ಯಾಸ ಮಾಡಬಹುದು.

ವಿಧಾನ:

  • ಎರಡೂ ಕೈಗಳು ಹಾಗೂ ತೊಡೆಗಳ ಸಹಾಯದಿಂದ ನಾಲ್ಕು ಕಾಲಿನ ಪ್ರಾಣಿಯ ಹಾಗೆ ಕುಳಿತುಕೊಳ್ಳಿ. ನಿಮ್ಮ ಹಿಮ್ಮಡಿಯು ಭುಜಗಳಿಗೆ ಸಮಾನಾಂತರವಾಗಿರಲಿ.
  • ನಿಶ್ವಾಸ ಮಾಡಿ, ನಿಮ್ಮ ಕುತ್ತಿಗೆಯನ್ನು ಬಗ್ಗಿಸಿ ಮತ್ತು ಬೆನ್ನನ್ನು ಬಾಗಿಸಿ.
  • ಉಚ್ವಾಸ ಮಾಡಿ ಮತ್ತು ಮೇಲಕ್ಕೆ ನೋಡಿ.
  • ಉಸಿರಾಟವನ್ನು ಸಂಯೋಜನೆಗೊಳಿಸಿ.
  • ಇದರಿಂದ 1 ಸುತ್ತು ಪೂರ್ತಿಯಾಗುತ್ತದೆ ಒಂದು ದಿನಕ್ಕೆ ನೀವು 5-7 ಸುತ್ತುಗಳನ್ನು ಮಾಡಬಹುದು.

ಹೆರಿಗೆಯ ನಂತರ:
9 ತಿಂಗಳ ನಿರೀಕ್ಷೆಯ ನಂತರ ಮಗುವಿನೊಂದಿಗೆ ನೀವು ಮನೆಗೆ ಬಂದಾಗ ನಿಮ್ಮ ಪ್ರಪಂಚವೇ ಬದಲಾದಂತೆ ಅನಿಸಬಹುದು. ನೀವು ಅಂದುಕೊಂಡಿರುವುದಕ್ಕಿಂತ ನೈಜತೆಯು ಬೇರೆಯೇ  ಇರುತ್ತದೆ. ಮತ್ತು ಇದು ನಿಮ್ಮ ಹಾಗೂ ಮಗುವಿನ ಆರೈಕೆಯ ವಿಷಯದಲ್ಲಿ ನಿಮ್ಮ ಅನುಭವಕ್ಕೆ ಬರುತ್ತದೆ.

ಈ ಹಂತದಲ್ಲಿ ತಾಯಿಗೆ ಎಲ್ಲರ ಬೆಂಬಲದ ಅವಶ್ಯಕತೆ ಇರುತ್ತದೆ. ಮುಂದಿನ ಕೆಲವು ವಾರಗಳವರೆಗೆ ತಾಯಿಯ ಜೀವನವು ಮಗುವಿನ ಆರೈಕೆಯಲ್ಲಿಯೇ ಕಳೆಯುತ್ತದೆ. ಆಕೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬಳಲುತ್ತಾಳೆ. ಮಗುವು ಹೊಸ ವಾತಾವರಣಕ್ಕೆ ಹೊಂದಿಕೊಂಡರೆ ತಾಯಿಯ ಶ್ರಮ ಸ್ವಲ್ಪ ಕಡಿಮೆಯಾಗುತ್ತದೆ ಇಲ್ಲದಿದ್ದರೆ ಮಗುವಿನ ಆರೈಕೆಯು ಬಹಳ ಶ್ರಮದಾಯಕವಾಗಿರುತ್ತದೆ.

ಅಧ್ಯಯನದ ಪ್ರಕಾರ ಪ್ರತಿ 10 ರಲ್ಲಿ ಒಬ್ಬ ಮಹಿಳೆಯು ಪ್ರಸವಾನಂತರದ ಖಿನ್ನತೆಯಿಂದ ಬಳಲುತ್ತಾಳೆ. ಇದು ಮೊದಲ ವಾರದಿಂದ ನಂತರದ 6 ತಿಂಗಳಲ್ಲಿ ಯಾವಾಗ ಬೇಕಾದರೂ ಉಂಟಾಗಬಹುದು ಮತ್ತು ಹೆಚ್ಚಿನ ಬಾರಿ ಪತ್ತೆಯಾಗುವುದೇ ಇಲ್ಲ. ಸಾಮಾಜಿಕ ರಿವಾಜುಗಳಿಂದಾಗಿ ತಾಯಿಯು ಸೂಕ್ತ ಸಮಯದಲ್ಲಿ ಸಹಾಯ ಪಡೆಯುವುದು ಸಾಧ್ಯವಾಗುವುದಿಲ್ಲ.

ತನ್ನಿಂದ ಮಗುವಿನ ಆರೈಕೆ ಸಾಧ್ಯವಾಗುತ್ತಿಲ್ಲ ಎಂದು ತಿಳಿದರೆ ಸಮಾಜ ಯಾವರೀತಿ ಯೋಚಿಸಬಹುದು ಎಂಬ ಆತಂಕ ಆಕೆಯನ್ನು ಕಾಡುತ್ತದೆ. ತನ್ನನ್ನು ಸಮಾಜವು ಸ್ವೀಕರಿಸದಿದ್ದರೆ ಎಂಬ ಚಿಂತೆಯಿಂದ ಆಕೆಯು ಸಹಾಯ ಪಡೆಯಲು ಹಿಂಜರಿಯುತ್ತಾಳೆ. ಚಿಕಿತ್ಸೆ ದೊರೆಯದಿದ್ದರೆ ಆಕೆಯು ಭಾವನಾತ್ಮಕವಾಗಿ ಮಗುವಿನಿಂದ ದೂರವಾಗಬಹುದು ಮತ್ತು ಮಗುವಿನ ಆರೈಕೆ ಮಾಡಲು ಇಷ್ಟಪಡದಿರಬಹುದು. ಕೆಲವು ತಾಯಂದಿರು ತಮ್ಮದೇ ಮಗುವನ್ನು ಕೊಲ್ಲುವ ಅಥವಾ ಹಾನಿಮಾಡುವ ಯೋಚನೆಯನ್ನು ಮಾಡುತ್ತಾರೆ.

ಅವರು ಗಟ್ಟಿಯಾಗಿ ಕಿರುಚಲು ಬಯಸಬಹುದು ಅಥವಾ  ಅಕಾರಣವಾಗಿ ಅಳಬಹುದು. ಪ್ರಸವಪೂರ್ವ ಯೋಗಾಭ್ಯಾಸವು ಮಹಿಳೆಯರಿಗೆ ಶಾಂತವಾಗಿರುವುದನ್ನು ಕಲಿಸುವ ಮೂಲಕ ಈ ಸಂದರ್ಭವನ್ನು ನಿಭಾಯಿಸುವ ಸಾಮರ್ಥ್ಯ ನೀಡುತ್ತದೆ.

ನೀವು ಒಬ್ಬ ನೂತನ ತಾಯಿಯಾಗಿದ್ದಲ್ಲಿ ಹೆರಿಗೆಯಾದ 6-8 ವಾರಗಳ ನಂತರ ಯೋಗಾಭ್ಯಾಸವನ್ನು ಆರಂಭಿಸಬಹುದು. ಇದರಿಂದ ನೀವು ಪ್ರಶಾಂತವಾಗಿರಲು ಹಾಗೂ ಮೊದಲಿನ ಆಕೃತಿಗೆ ಮರಳಲು ಸಾಧ್ಯವಾಗುತ್ತದೆ ಹಾಗೂ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಕೆಲವು ಆಸನಗಳು ಗರ್ಭಾಶಯವು ಸಂಕುಚಿತಗೊಳ್ಳಲು ನೆರವಾಗಿ ಗರ್ಭಧಾರಣೆಯ ಬೊಜ್ಜನ್ನು ಕರಗಿಸುತ್ತದೆ. ಯೋಗಾಭ್ಯಾಸವು ನಿಮ್ಮ ಚಯಾಪಚಯ ಕ್ರಿಯರಯನ್ನು ಉತ್ತಮಗೊಳಿಸಿ ಹಾರ್ಮೋನಿನ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

ಹೆಚ್ಚಿನ ಬಾರಿ ವೈದ್ಯರು ತಾಯಿಯ ದೈಹಿಕ ಅವಶ್ಯೆಕತೆಗಳಿಗೆ ಮಾತ್ರವೇ ಗಮನ ನೀಡುತ್ತಾರೆ. ಇದರಿಂದ ಆಕೆಯ ಭಾವನಾತ್ಮಕ ಅವಶ್ಯಕತೆಗಳ ಬಗ್ಗೆ ಚರ್ಚೆಯಾಗುವುದೇ ಇಲ್ಲ. ಹೆರಿಗೆಯ ಮೊದಲು ಅಥವಾ ನಂತರ ಆಕೆಗೆ ಬೆಂಬಲದ ಅವಶ್ಯಕತೆಯಿದ್ದಲ್ಲಿ ಸರಿಯಾದ ವ್ಯಕ್ತಿಯನ್ನು ಸಂಪರ್ಕಿಸಬೇಕು. ಒಂದು ವೇಳೆ ಆಕೆಯ ಯೋಚನೆ ಅಥವಾ ನಡವಳಿಕೆಯಲ್ಲಿ ಅಸಹಜತೆ ಕಂಡುಬಂದರೆ ವೈದ್ಯರಿಗೆ ತಿಳಿಸಬೇಕು.

ಅವರು ಆಕೆಗೆ ಆಪ್ತಸಮಾಲೋಚಕರು ಅಥವಾ ಅನುಭವೀ ಯೋಗಾ ತರಬೇತುದಾರರನ್ನು ಸಂಪರ್ಕಿಸಲು ತಿಳಿಸಬಹುದು. ಇದು ತಾಯಿ ಮತ್ತು ಮಗುವಿನ ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ. ಯೋಗಾಭ್ಯಾಸವನ್ನು ಆರಂಭಿಸಲು ನೀವು ಸಮಯಕ್ಕಾಗಿ ಕಾಯಬೇಕಾದ ಅವಶ್ಯಕತೆಯಿಲ್ಲ; ಎಲ್ಲಾ ಸಮಯವೂ ಒಳ್ಳೆಯ ಸಮಯವೇ! ನೀವು ಹೆರಿಗೆಯ ಮೊದಲು ಯೋಗಾಭ್ಯಾಸ ಮಾಡಲು ಬಯಸಿದಲ್ಲಿ ಅನುಭವೀ ಚಿಕಿತ್ಸಕರನ್ನು ಬೇಟಿ ಮಾಡಿ.

ಪ್ರಸವಪೂರ್ವ ಯೋಗಾಭ್ಯಾಸವನ್ನು ಮಾಡಲು ಬಯಸುವ ಮಹಿಳೆಯರು ಮೊದಲು ಪ್ರಸೂತಿ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು. ಈ ಆಸನಗಳನ್ನು ಅನುಭವೀ ತರಬೇತುದಾರರ ಮೇಲ್ವಚಾರಣೆಯಲ್ಲಿ ನಿಮ್ಮ ಮಿತಿಗೆ ಅನುಸಾರವಾಗಿ ಮಾಡಿ.

ನಯನಾ ಕಂತರಾಜ್ ಅವರು ‘ಬಿಂಬಯೋಗ’ ದ ಸ್ಥಾಪಕರಾಗಿದ್ದು ಬೆಂಗಳೂರಿನಲ್ಲಿ ಪ್ರಸವಪೂರ್ವ ಯೋಗಾಭ್ಯಾಸದ ತರಗತಿಗಳನ್ನು ನಡೆಸುತ್ತಾರೆ. ಅವರು ಕಳೆದ 10 ವರ್ಷಗಳಿಂದ ಯೋಗ ಶಿಕ್ಷಕಿಯಾಗಿದ್ದಾರೆ.