ಆತ್ಮಹತ್ಯೆ ಒಂದು ಸಂಕೀರ್ಣ ಪ್ರಕ್ರಿಯೆ. ಇದರ ಬಗ್ಗೆ ತಿಳಿದುಕೊಳ್ಳುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾದವರನ್ನು ಸಂತೈಸಲು ನಮಗೆ ಸಹಾಯವಾಗುತ್ತದೆ.
ಆತ್ಮಹತ್ಯೆಯ ಆಲೋಚನೆ ಮೂಡುವುದು ಸಹಜವೆ ?
ಆತ್ಮಹತ್ಯೆಯ ಬಗ್ಗೆ ಯೋಚಿಸುವುದು ಅಸಹಜ ವಿಷಯವಲ್ಲ. ಬಹಳಷ್ಟು ಮಂದಿ ತೀವ್ರ ಖಿನ್ನತೆಗೆ ಒಳಗಾದಾಗ, ಕಷ್ಟಗಳಿಂದ ಬೇಸತ್ತು ಜೀವನವನ್ನು ಕೊನೆಗೊಳಿಸಲು ಯೋಚಿಸುತ್ತಾರೆ. ಹೀಗಾಗಿ ಒಂದು ಕ್ಷಣ ಇಂತಹ ಚಿಂತನೆಗಳು ಮಾನಸಿಕ ಅಸ್ವಸ್ಥರಲ್ಲಿ ಮಾತ್ರವಲ್ಲ, ಸಾಮಾನ್ಯ ಮನುಷ್ಯರಲ್ಲಿ ಕೂಡಾ ನುಸುಳಬಹುದು. ಒಬ್ಬ ವ್ಯಕ್ತಿಯ ದೈನಂದಿನ ಜೀವನದಲ್ಲಿ ಈ ಚಿಂತನೆಯ ತೀವ್ರತೆ ಅಧಿಕಗೊಂಡರೆ, ಅದು ಆತ್ಮಹತ್ಯೆಗೆ ಪ್ರಚೋದನೆ ನಿಡುತ್ತದೆ.
ಆತ್ಮಹತ್ಯೆಯ ಯೋಚನೆ ಯಾರಲ್ಲಿ ಮೂಡುತ್ತದೆ ?
ಆತ್ಮಹತ್ಯೆಯ ಚಿಂತನೆಯು ಯಾವ ವ್ಯಕ್ತಿಯಲ್ಲಿ ಬೇಕಾದರೂ ಮೂಡಬಹುದು. ಅದಕ್ಕೇನು ವಯಸ್ಸಿನ ಮಿತಿ, ವ್ಯಕ್ತಿತ್ವ , ಸಾಧನೆ ಅಥವಾ ಸಾಮಾಜಿಕ ಸ್ಥಾನಮಾನದ ಚೌಕಟ್ಟಿರುವುದಿಲ್ಲ. ಮಾನಸಿಕ ಅಸ್ವಸ್ಥತೆ, ಸಾಮಾಜಿಕ - ಸಾಂಸ್ಕೃತಿಕ ಒತ್ತಡಗಳು ಮುಂತಾದ ಅಂಶಗಳು ವ್ಯಕ್ತಿಯ ಮೇಲೆ ತೀವ್ರ ಪರಿಣಾಮ ಬೀರಬಹುದು. ಭಾರತದಲ್ಲಿ, 15-29ರ ವಯೋಮಾನದವರಲ್ಲಿ ಆತ್ಮಹತ್ಯೆ ಅತಿಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಇದು ಹೆಚ್ಚು ಎಂದು ಸಂಶೋಧನೆಗಳು ತಿಳಿಸಿವೆ. ಸಂಶೋಧನೆಯ ಪ್ರಕಾರ ಇಂತಹ ಮನಸ್ಥಿತಿಗೆ ಯಾವುದೇ ನಿರ್ದಿಷ್ಟ ವಯೋಮಿತಿಯಿಲ್ಲ.
ಆತ್ಮಹತ್ಯೆ ವ್ಯಕ್ತಿಯ ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುತ್ತದೆಯೇ?
ಆತ್ಮಹತ್ಯೆಯ ಬಗ್ಗೆ ಚಿಂತಿಸುವವರು, ಅಥವಾ ಆತ್ಮಹತ್ಯೆಮಾಡಿಕೊಳ್ಳುವವರೆಲ್ಲರೂ ಮಾನಸಿಕ ಅಸ್ವಸ್ಥರಾಗಿರುವುದಿಲ್ಲ, ಮತ್ತು ಮಾನಸಿಕ ಅಸ್ವಸ್ಥರೆಲ್ಲರೂ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆಂದಲ್ಲ. ಒಬ್ಬ ವ್ಯಕ್ತಿಯು ಇದರ ಬಗ್ಗೆ ಚಿಂತಿಸಲು ಹಲವಾರು ರೀತಿಯ ಜೈವಿಕ ಸಾಮಾಜಿಕ ಕಾರಣಗಳು ಇರುತ್ತವೆ. ಆತ್ಮಹತ್ಯೆಯು ವಿಭಿನ್ನ ಅಂಶಗಳ ಮಿಶ್ರಫಲವಾಗಿದ್ದು, ಒಂದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಅದರಲ್ಲಿ ಮಾನಸಿಕ ಅಸ್ವಸ್ಥತೆ ಒಂದು ಕಾರಣವಾಗಿರಬಹುದು ಅಥವಾ ಇಲ್ಲದೆಯೂ ಇರಬಹುದು. ಆತ್ಮಹತ್ಯೆಯು ತೀವ್ರ ಮಾನಸಿಕ ಖಿನ್ನತೆಯ ಸೂಚಕವಾಗಿದ್ದರೂ, ಆತ್ಮಹತ್ಯೆಗೆ ಅದೇ ಪ್ರಮುಖ ಕಾರಣವಾಗಬೇಕೆಂದಿಲ್ಲ.
ಆತ್ಮಹತ್ಯೆಯ ಪ್ರಯತ್ನವು ವ್ಯಕ್ತಿಯ ದೌರ್ಬಲ್ಯ ಅಥವಾ ಸಮಸ್ಯೆಯನ್ನು ಎದುರಿಸಲು ಅವನ ಅಸಮರ್ಥತೆಯನ್ನು ಸೂಚಿಸುತ್ತದೆಯೆ ?
ವ್ಯಕ್ತಿಯ ದೌರ್ಬಲ್ಯ ಅಥವಾ ತನ್ನ ಮುಂದಿರುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯದ ಕೊರತೆ ಆತ್ಮಹತ್ಯೆಯ ಪ್ರಯತ್ನಕ್ಕೆ ಕಾರಣವೆಂಬ ನಂಬಿಕೆ ಸಾಮಾನ್ಯ. ಒಬ್ಬ ವ್ಯಕ್ತಿ ವಿನಾಕಾರಣ ಆತ್ಮಹತ್ಯೆಯ ಬಗ್ಗೆ ಯೋಚಿಸುವುದಿಲ್ಲ. ಅವನಲ್ಲಿ ಆ ಯೋಚನೆ ಮೂಡಲು ಮಾನಸಿಕ ಖಿನ್ನತೆ, ಸಾಮಾಜಿಕ ಕಾರಣಗಳು ಅಥವಾ ಜೈವಿಕ ಕಾರಣಗಳಿರಬಹುದು. ಆತ್ಮಹತ್ಯೆಯ ಪ್ರಯತ್ನವು ಸಾಮಾನ್ಯವಾಗಿ ಖಿನ್ನತೆಯ ಸೂಚಕವಾಗಿರುತ್ತದೆ. ಕೆಲವೊಮ್ಮೆ ಸದೃಢ ಮನಸ್ಸಿನ ವ್ಯಕ್ತಿಗಳಲ್ಲೂ ಈ ಯೋಚನೆ ನುಸುಳುವುದುಂಟು.
ಅವರು ಏಕೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ ? ಯಾರ ನೆರವನ್ನೂ ಬಯಸುವುದಿಲ್ಲ ?
ಆತ್ಮಹತ್ಯೆಯ ಚಿಂತನೆಯನ್ನು ಹೊಂದಿರುವ ವ್ಯಕ್ತಿಯು ಒಂಟಿತನ, ಅಸಹಾಯಕತೆ ಮತ್ತು ಕೀಳರಿಮೆಯಂತಹ ಅನುಭವಗಳನ್ನು ತೀವ್ರವಾಗಿ ಅನುಭವಿಸಿರುತ್ತಾರೆ. ಆದ್ದರಿಂದ ಅವರಿಗೆ ಯಾರದಾದರು ನೆರವು ಪಡೆಯಲು ಅಥವಾ ಇತರರಲ್ಲಿ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರು ಇನ್ನೊಬ್ಬರ ತೀರ್ಮಾನಕ್ಕೆ ಹೆದರುತ್ತಾರೆ. ಅವರು ಆಗಾಗ್ಗೆ ತಮ್ಮ ಸಮಸ್ಯೆ ಯಾರಿಗೂ ತಿಳಿಯದ ರೀತಿಯಲ್ಲಿ ಏನಾದರೊಂದು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಭಾಯಿಸಿಕೊಳ್ಳುತ್ತಾರೆ.
ತಮ್ಮ ಹವ್ಯಾಸಗಳನ್ನು ಬಿಟ್ಟುಬಿಡುವುದು, ಕೆಲಸ-ಕುಟುಂಬ-ಮಿತ್ರರು ಎಲ್ಲರನ್ನೂ ಬಿಟ್ಟು ಮತ್ಯಾರದೋ ಬಳಿ ತಮ್ಮ ಸಮಸ್ಯೆ ಹೇಳಿಕೊಳ್ಳುವುದು – ಇತ್ಯಾದಿ ವರ್ತನೆ ತೋರುತ್ತಾರೆ. ಇನ್ನು ಕೆಲವರು ಯಾರ ಬಳಿಯಾದರೂ ಸಮಸ್ಯೆಯನ್ನು ಹೇಳಿಕೊಂಡರೆ ಅವರು ಏನೆಂದುಕೊಳ್ಳುತ್ತಾರೋ, ಯಾವ ರೀತಿಯಲ್ಲಿ ಸ್ಪಂದಿಸುತ್ತಾರೋ ಎಂಬ ಭಯದಿಂದ ದೂರ ಉಳಿದುಬಿಡುತ್ತಾರೆ.
ಆತ್ಮಹತ್ಯೆಯ ಮತ್ತು ಮಾನಸಿಕ ಅಸ್ವಸ್ಥತೆಯ ಸುತ್ತಲೂ ಸುತ್ತುತ್ತಿರುವ ಕೆಲವು ತಪ್ಪುಕಲ್ಪನೆಗಳು ಇಂತಹ ಮನಸ್ಥಿತಿಯವರನ್ನು ಯಾರೊಡನೆಯೂ ಸಂಪರ್ಕಿಸಿ, ಸಮಾಲೋಚನೆ ನಡೆಸದಂತೆ ಮಾಡಿಬಿಡುತ್ತದೆ.
ಮಾನಸಿಕ ಖಿನ್ನತೆಗ ಒಳಗಾದವರಲ್ಲಿ ಆತ್ಮಹತ್ಯೆಯ ಸಾಧ್ಯತೆ ಹೆಚ್ಚಿರುತ್ತದೆಯೇ ?
ಸಂಶೋಧನೆಗಳ ಪ್ರಕಾರ, ಆತ್ಮಹತ್ಯೆಯ ಚಿಂತನೆಯು ಸಾಮಾನ್ಯ ವ್ಯಕ್ತಿಗಳಿಗಿಂತ ಖಿನ್ನತೆಗೊಳಗಾದವರಲ್ಲಿ ಹೆಚ್ಚಾಗಿರುತ್ತದೆ. ಆದಾಗ್ಯೂ,ಕೆಲವು ಸಾಮಾಜಿಕ ಸನ್ನಿವೇಶಗಳು ಮಹತ್ವದ ಪಾತ್ರ ವಹಿಸುತ್ತವೆ. ಖಿನ್ನತೆಯಿರುವ ಒಬ್ಬ ವ್ಯಕ್ತಿಗೆ ಸಮಾಜದಿಂದ ಅಥವಾ ಕುಟುಂಬದವರಿಂದ ಬೆಂಬಲ ಮತ್ತು ಪ್ರೀತಿ ದೊರೆತರೆ ಮತ್ತು ತಾನು ಕೆಲಸ ಮಾಡುವ ಸ್ಥಳಗಳಲ್ಲಿ ಅಥವಾ ಸಮುದಾಯದಿಂದ ಸೂಕ್ತ ಸಮಯದಲ್ಲಿ ನೈತಿಕ ಬೆಂಬಲ ದೊರೆತರೆ ಅವನ ಮಾನಸಿಕ ಒತ್ತಡಗಳು ತಹಬದಿಗೆ ಬರಬಹುದು. ಯಾವುದೇ ವ್ಯಕ್ತಿಯ ಇಂತಹ ಪರಿಸ್ಥಿತಿಗೆ ಮಾನಸಿಕ ಅಸ್ವಸ್ಥತೆಯೊಂದೇ ಕಾರಣವಲ್ಲ.
ವ್ಯಕ್ತಿಯು ತನಗೆ ತಾನೇ ಹಾನಿ ಮಾಡಿಸಿಕೊಂಡರೆ, ಅವನು ಆತ್ಮಹತ್ಯೆಯ ಪ್ರಯತ್ನದಲ್ಲಿದ್ದಾನೆಂದು ಅರ್ಥವೇ?
ಆತ್ಮಹತ್ಯೆಯ ಚಿಂತನೆಯಲ್ಲಿರುವ ಕೆಲವು ವ್ಯಕ್ತಿಗಳು ತಮಗೆ ತಾವು ಹಾನಿ ಮಾಡಿಕೊಳ್ಳುತ್ತಿದ್ದರೆ ಅದರ ಉದ್ದೇಶ ಜೀವನವನ್ನು ಅಂತ್ಯಗೊಳಿಸುವುದೇ ಆಗಿರುತ್ತದೆ. ಇದನ್ನು ಡಿ ಎಸ್ ಎಮ್-5ನ ಹೊಸವಿಧವಾದ “ನಾನ್ ಸ್ಯೂಸೈಡಲ್ ಸೆಲ್ಫ್ ಇಂಜುರಿ ಡಿಸಾರ್ಡರ್”(ಎನ್ ಎಸ್ ಎಸ್ ಐ) ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಸಂಪೂರ್ಣವಾಗಿ ಜೀವ ತೆಗೆದುಕೊಳ್ಳುವುದರ ಬದಲು ಕೆಲವರು ಇಂತಹ ಮಾರ್ಗವನ್ನು ಅನುಸರಿಸುತ್ತಾರೆ. ಸ್ವಯಂ ಹಾನಿಮಾಡಿಕೊಳ್ಳುತ್ತಿರುವ ವ್ಯಕ್ತಿಗಳು ಅವರ ಈ ವರ್ತನೆಯನ್ನು ತಿಂಗಳುಗಳ ಕಾಲ ಅಥವಾ ವರ್ಷಗಳ ಕಾಲ ಮುಂದುವರೆಸುವ ಸಾಧ್ಯತೆಗಳಿವೆ. ಆದ್ದರಿಂದ ಸ್ವಯಂ ಪ್ರಾಣಹಾನಿ ಪ್ರಯತ್ನಗಳನ್ನು ಗಂಭೀರವಾಗಿ ಗಮನಿಸುತ್ತಿರಬೇಕು; ಮತ್ತು ಸಕಾಲದಲ್ಲಿ ಸಮಾಲೋಚನೆ ನಡೆಸಿ ಅವರನ್ನು ಅದರಿಂದ ಹೊರತರಬೇಕು.
“ಕಮಿಟೆಡ್ ಸ್ಯೂಸೈಡ್” – ಪದಬಳಕೆ ಸರಿಯೇ ?
ಇಂಗ್ಲಿಷಿನಲ್ಲಿ “ಕಮಿಟ್” ಎಂಬಪದವನ್ನು ‘ಕಾನೂನಿಗೆ ವಿರುದ್ಧವಾಗಿ ನಡೆಸುವ ಕ್ರಿಯೆ’ ಅಥವಾ ನೈತಿಕತೆಯ ಚಿಂತನೆ ಎಂದು ಅರ್ಥೈಸುತ್ತಾರೆ. ಆದರೆ ಆತ್ಮಹತ್ಯೆಯ ವಿಷಯಕ್ಕೆ ಬಂದರೆ “ಕಮಿಟೆಡ್ ಸ್ಯೂಸೈಡ್” ಎಂಬ ಪದಬಳಕೆ ಸೂಕ್ತವಾಗಿರುವುದಿಲ್ಲ ಮತ್ತು ಈಪದವು ಆತ್ಮಹತ್ಯೆಯ ಪ್ರಕ್ರಿಯೆಯನ್ನೇ ಅನರ್ಥಗೊಳಿಸುತ್ತದೆ. ಇದರಿಂದ ಸೂಕ್ತ ಸಹಾಯವನ್ನು ಬಯಸುತ್ತಿರುವವರೂ ಆತ್ಮಹತ್ಯೆಯ ಬಗ್ಗೆ ಚಿಂತಿಸುವಂತಾಗಬಹುದು. ಯಾವುದೇ ತಪ್ಪು ಅಭಿಪ್ರಾಯ ಮೂಡದಿರುವಂತೆ ಇದರ ಬಗ್ಗೆ ಮಾತನಾಡುವುದರಿಂದ ಮತ್ತು ಮುಕ್ತವಾಗಿ ಚರ್ಚಿಸುವುದರಿಂದ ಆತ್ಮಹತ್ಯೆಯ ಯೋಚನೆಯನ್ನು ಕಡಿಮೆ ಮಾಡಬಹುದು.
ಆತ್ಮಹತ್ಯೆ ಘಟನೆಯನ್ನು ವಿವರಿಸುವಾಗ “ತಮ್ಮ ಜೀವನವನ್ನು ಕೊನೆಗಾಣಿಸಲು ಪ್ರಯತ್ನಿಸಿದರು”, “ತಮ್ಮಜೀವವನ್ನು ತಾವೇ ತೆಗೆದುಕೊಂಡರು” ಮತ್ತು “ಆತ್ಮಹತ್ಯೆಯಿಂದ ಸತ್ತರು” ಇಂತಹ ಪದಗಳನ್ನು ಬಳಸುವುದು ಸೂಕ್ತ.
( ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ದಿವ್ಯಾ ಕಣ್ಣನ್, ಕೌನ್ಸೆಲಿಂಗ್ ತಜ್ಞರಾದ ಪಾರಸ್ ಶರ್ಮ ಹಾಗೂ ಸೈಕಾಲಜಿ ಥೆರಪಿಸ್ಟ್ ಶೀರ್’ಜಾದೆ ಸಂಚಿತಾ ಅವರು ಒದಗಿಸಿದ ಅಂಶಗಳನ್ನು ಬಳಸಿಕೊಂಡು ಈ ಲೇಖನ ರಚಿಸಲಾಗಿದೆ. )