ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಯಿಂದ ಸಂಭವಿಸುತ್ತಿರುವ ಸಾಕಷ್ಟು ಸಾವುಗಳು, ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾಮಾಜಿಕ ಹಾಗೂ ಆರ್ಥಿಕ ನಷ್ಟಗಳಿಂದಾಗಿ ಆತ್ಮಹತ್ಯೆ ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಲಾಗುತ್ತಿದೆ. ಆತ್ಮಹತ್ಯೆ, ಆತ್ಮಹತ್ಯೆ ಪ್ರಯತ್ನ ಮತ್ತು ಆತ್ಮಹತ್ಯೆ ಭಾವನೆಗಳು/ಲಕ್ಷಣಗಳು/ವರ್ತನೆಗಳು ಸಾಮಾನ್ಯವಾಗಿ ಭಾರತದ ಎಲ್ಲ ಪ್ರಾಂತ್ಯಗಳಲ್ಲಿ ಕಂಡುಬರುತ್ತದೆ ಮತ್ತು ಈ ಪ್ರಮಾಣ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ.
ಆತ್ಮಹತ್ಯೆಯಿಂದ ಸಾಯುವ ಪ್ರತಿಯೊಬ್ಬ ವ್ಯಕ್ತಿ ಸುಮಾರು 10-15 ಸಲ ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾರೆ ಹಾಗೂ ನೂರಾರು ಸಲ ಇದರ ಬಗ್ಗೆ ಯೋಚಿಸುತ್ತಾರೆ ಎಂದು ನಿಯಮಿತ ಅಧ್ಯಯನಗಳು ಹೇಳಿವೆ.
ಅಂಥ ಯೋಚನೆ ಮತ್ತು ವರ್ತನೆಗಳಿಗೆ ಸಾಮಾನ್ಯವಾಗಿ ನಾವು ಹೆಚ್ಚು ಮಹತ್ವ ನೀಡದಿರುವುದರಿಂದ ಬಹಳಷ್ಟು ಆತ್ಮಹತ್ಯೆ ಪ್ರಯತ್ನಗಳಿಗೆ ಮತ್ತು ಆತ್ಮಹತ್ಯೆಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾಗುತ್ತೇವೆ. ಆತ್ಮಹತ್ಯೆ ತಡೆಗಟ್ಟುವಿಕೆ ಕೇವಲ ವೈದ್ಯಕೀಯ ಕ್ಷೇತ್ರದ ಮತ್ತು ಸರ್ಕಾರದ ಕೆಲಸವಲ್ಲ. ಇದು ಸಮಾಜದ ಕರ್ತವ್ಯ ಕೂಡ.
ಆತ್ಮಹತ್ಯೆ ತಡೆಗಟ್ಟುವ ಈ ಸರಣಿಯಲ್ಲಿ ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ನೀವು ಹೇಗೆ ಆತ್ಮಹತ್ಯೆ ತಡೆಗೆ ಸಹಾಯ ಮಾಡಬಹುದು ಎಂಬುದನ್ನು ಹೇಳುತ್ತೇವೆ. ನಾವು ನಮ್ಮ ಸುತ್ತಲೂ ಆತ್ಮಹತ್ಯೆ ಕುರಿತು ಯೋಚಿಸುವ ವ್ಯಕ್ತಿಗಳನ್ನು ಗುರುತಿಸುವ ಕೌಶಲ್ಯವನ್ನು ಒದಗಿಸುತ್ತೇವೆ.
ಭಾರತ ಸರ್ಕಾರದ ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ಬ್ಯೂರೊದ [National Crime Records Bureau (NCRB)] ಅಧಿಕೃತ ವರದಿಯಂತೆ 1,34,799 ವ್ಯಕ್ತಿಗಳು 2013ರಲ್ಲಿ ಆತ್ಮಹತ್ಯೆಯಿಂದ ತಮ್ಮ ಜೀವ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಆತ್ಮಹತ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಈ ಪ್ರಮಾಣ 1980ರಲ್ಲಿ 40000 ಇತ್ತು. 2013ರಲ್ಲಿ 135000ಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ಆತ್ಮಹತ್ಯೆ ಪ್ರಮಾಣ ವರ್ಷಕ್ಕೆ 11/100000.
ಕಛೇರಿಗಳು ನೀಡುವ ಆತ್ಮಹತ್ಯೆ ಸಂಖ್ಯೆಗಳು ಸತ್ಯವಾಗಿರುವುದಿಲ್ಲ. ಅವು ಆತ್ಮಹತ್ಯೆಯನ್ನು ಕಡೆಗಣಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಇತರ ಅಂತಾರಾಷ್ಟ್ರೀಯ ಒಕ್ಕೂಟಗಳ ಸ್ವತಂತ್ರ ಸಂಶೋಧನೆ ಅಧ್ಯಯನಗಳು ಹೇಳುತ್ತವೆ.
ಆತ್ಮಹತ್ಯೆಯನ್ನು ಈಗಲೂ ವೈದ್ಯ-ಕಾನೂನು ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಪೊಲೀಸ್, ನ್ಯಾಯಾಲಯ ಮತ್ತು ಇತರ ಕಾರ್ಯಕರ್ತರ ಭಯದಿಂದ ಆತ್ಮಹತ್ಯೆಯನ್ನು ಮುಚ್ಚಿಡಲಾಗುತ್ತದೆ.
ಆತ್ಮಹತ್ಯೆಯ ಪ್ರಯತ್ನಗಳು ಪರಿಶೀಲನೆ ಮಾಡುವಂತಹ ಇನ್ನೊಂದು ಮುಖ್ಯ ವಿಷಯವಾಗಿದೆ. ಭಾರತ ಮತ್ತು ಇತರ ದೇಶಗಳ ಅಧ್ಯಯನಗಳ ಪ್ರಕಾರ ಪ್ರತಿ ಪೂರ್ಣಗೊಂಡ ಆತ್ಮಹತ್ಯೆಯ ಮೊದಲು 10-15 ಆತ್ಮಹತ್ಯೆ ಪ್ರಯತ್ನಗಳು ನಡೆದಿರುತ್ತವೆ. ಆ ಸಂದರ್ಭಗಳಲ್ಲಿ ಸೂಕ್ತ ಆರೋಗ್ಯ ಆರೈಕೆ ಸಿಗಬಹುದು ಅಥವಾ ಸಿಗದೆ ಇರಬಹುದು. ಹೀಗಾಗಿ ಪ್ರತಿವರ್ಷ ಭಾರತದಲ್ಲಿ ಸುಮಾರು 1,500,000-2,000,000 ಆತ್ಮಹತ್ಯೆ ಪ್ರಯತ್ನಗಳು ನಡೆಯುತ್ತವೆ.
ಆತ್ಮಹತ್ಯೆ ಲಕ್ಷಣಗಳನ್ನು ತೋರಿಸುವ ವ್ಯಕ್ತಿಗಳ ಸಂಖ್ಯೆ ಕುರಿತು ಯಾವುದೇ ದೊಡ್ಡ ಮಟ್ಟದ ಅಧ್ಯಯನ ನಡೆದಿಲ್ಲ. ಹೀಗಾಗಿ ಈ ಸಮಸ್ಯೆಯ ಗಂಭೀರತೆ ತಿಳಿಯುತ್ತಿಲ್ಲ. ಪ್ರಮುಖ ಪ್ರಶ್ನೆಯೆಂದರೆ ‘ಯಾಕೆ ವ್ಯಕ್ತಿಗಳು ಆತ್ಮಹತ್ಯೆಗೆ ಶರಣಾಗುತ್ತಾರೆ?’ ಇದು ಸಂಕೀರ್ಣವಾದ ಪ್ರಶ್ನೆ ಕೂಡ. ಅಧಿಕೃತ ವರದಿಗಳಂತೆ ಶೇ.15.6ರಷ್ಟು ಆತ್ಮಹತ್ಯೆಗಳಿಗೆ ಕಾರಣ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಕೌಟಂಬಿಕ ಸಮಸ್ಯೆಗಳು, ಅನಾರೋಗ್ಯ, ಆರ್ಥಿಕ ಅಂಶಗಳು, ವರದಕ್ಷಿಣೆ ಸಾವು ಆತ್ಮಹತ್ಯೆಗೆ ಮೂಲ ಕಾರಣವೆಂದು ಪರಿಗಣಿಸಲಾಗುವುದಿಲ್ಲ.
ಕುಡಿತ, ಸಂಸಾರದಲ್ಲಿ ಅನುಭವಿಸುವ ಹಿಂಸೆ, ಸಂಕಷ್ಟದ ಸ್ಥಿತಿ ಮತ್ತು ಮಾನಸಿಕ ಖಾಯಿಲೆಯಾದ ಡಿಪ್ರೆಷನ್ ಕೂಡ ಆತ್ಮಹತ್ಯೆಗೆ ಕಾರಣದ ಅಂಶಗಳ ಪಟ್ಟಿಯಲ್ಲಿವೆ. ಪ್ರಪಂಚದಾದ್ಯಂತ ನಡೆಯುವ ಸಂಶೋಧನೆಯ ಪ್ರಕಾರ, ಆತ್ಮಹತ್ಯೆಗೆ ಹಲವು ಕಾರಣಗಳಿವೆ ಎಂದು ತಿಳಿದಿರುತ್ತೇವೆ. ಕೌಟುಂಬಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ತೆಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ ಮತ್ತು ಇವೆಲ್ಲರ ದುಷ್ಪರಿಣಾಮದಿಂದ ವ್ಯಕ್ತಿಯು ಆತ್ಮಹತ್ಯೆ ಪ್ರಯತ್ನ ಮಾಡಬಹುದು ಎಂದು ಸಂಶೋಧನೆ ಹೇಳುತ್ತದೆ. ಕುಟುಂಬ, ಸ್ನೇಹಿತರು ಮತ್ತು ಸಮಾಜದಲ್ಲಿನ ಬೆಂಬಲದ ಕೊರತೆಯಿಂದ ಈ ಸಮಸ್ಯೆಗಳು ಹೆಚ್ಚಾಗುತ್ತವೆ.
ಈ ಒಂದು ಪರಿಸ್ಥಿತಿ ವ್ಯಕ್ತಿಯಲ್ಲಿ ನಿರಾಶೆ, ಹತಾಶೆ, ಅಪಮಾನ, ಅಸಹಾಯಕ ಮನೋಭಾವವನ್ನು ನಿರ್ಮಿಸಿ ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ.
ಆತ್ಮಹತ್ಯೆಗೆ ಕಾರಣವೇನು ಎಂಬ ಈಗಿನ ಚರ್ಚೆಗಳ ನಡುವೆಯೂ, ಆತ್ಮಹತ್ಯೆಯನ್ನು ಗುರುತಿಸಬಹುದು ಮತ್ತು ತಡೆಗಟ್ಟಬಹುದು ಎಂಬುದು ದಿಟ.
ಕೆಲವು ಮುಖ್ಯವಾದ ಮುಂಜಾಗೃತ ಕ್ರಮಗಳು ಆತ್ಮಹತ್ಯೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೀಟನಾಶಕಗಳು ಮತ್ತು ಕೆಲ ಔಷಧಗಳನ್ನು ಸುಲಭವಾಗಿ ಕೈಗೆಟಕುದಂತೆ ಮಾಡುವುದು ಮತ್ತು ಆತ್ಮಹತ್ಯೆ ಪ್ರಯತ್ನಿಸಿದವರಿಗೆ ಸಮಯಕ್ಕೆ ಸರಿಯಾದ ಸೂಕ್ತ ವೈದ್ಯಕೀಯ ಆರೈಕೆ, ವೃತ್ತಿಪರರ ಸಲಹೆ ಮತ್ತು ಆತ್ಮಹತ್ಯೆ ವರ್ತನೆಯನ್ನು ಗುರುತಿಸಲು ಮುಂಚಿತವಾಗಿ ಸಹಾಯವಾಣಿಗಳ ಮೊರೆ ಹೋಗುವುದು ಮುಖ್ಯ.
ಶಿಕ್ಷಣ ಸಂಸ್ಥೆಗಳಲ್ಲಿ, ಕೆಲಸದ ಸ್ಥಳದಲ್ಲಿ, ಸಮುದಾಯಗಳಲ್ಲಿ ಇಂತ ಮುಖ್ಯವಾದ ಮಾಹಿತಿಯನ್ನು ಜಾಗೃತಿ ಕಾರ್ಯಕ್ರಮಗಳ ಮೂಲಕ ನೀಡಿ ಆತ್ಮಹತ್ಯೆ ಕುರಿತಾದ ಭಯಗಳನ್ನು ಹೋಗಲಾಡಿಸಬೇಕು.
ಕ್ಲಿಷ್ಟಕರ ಸ್ಥಿತಿಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸಿದರೆ ಜನರಿಗೆ ಉಪಯೋಗವಾಗುತ್ತದೆ. ಆತ್ಮಹತ್ಯೆ ತಡೆಗಟ್ಟುವಿಕೆಗೆ ಪರಿಣಾಮಕಾರವಾದ ಕಾರ್ಯನೀತಿ ಮತ್ತು ಕಾರ್ಯಕ್ರಮಗಳನ್ನು ಅಳವಡಿಸಿದರೆ ಬಹಳಷ್ಟು ಆತ್ಮಹತ್ಯೆಗಳನ್ನು ತಡೆಯಬಹುದು. ಇದರಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ವ್ಯಕ್ತಿಯ ಜೀವ ಉಳಿಸಲು ಸಹಕಾರಿಯಾಗುತ್ತದೆ.
ಡಾ.ಜಿ. ಗುರುರಾಜ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಎಪಿಡಿಯೊಮೊಲಜಿ ವಿಭಾಗ, ನಿಮ್ಹಾನ್ಸ್