ಆತ್ಮಹತ್ಯೆ ತಪ್ಪಿಸುವುದು

ಜನರು ಏಕೆ ಆತ್ಮಹತ್ಯೆಗೆ ಶರಣಾಗುತ್ತಾರೆ?

ಆತ್ಮಹತ್ಯೆಗೆ ಹಲವು ಕಾರಣಗಳು ಅಥವಾ ಅಂಶಗಳು ಇರುವುದು

ಡಾ. ಮಂಜುಳಾ

ಆತ್ಮಹತ್ಯೆ ಸಾಮಾನ್ಯವಾಗಿ ವರದಿಯಾಗುವಂತೆ ಒಂದು ಘಟನೆಗೆ ಸಂಬಂಧಿಸಿದ್ದಾಗಿರದೆ ಹಲವು ಅಂಶಗಳ ಸಮೀಕರಣದಿಂದಾಗಿರುತ್ತದೆ. ಆತ್ಮಹತ್ಯೆ ಒಂದು ಕಾರಣದಿಂದ ತೆಗೆದುಕೊಳ್ಳುವ ನಿರ್ಧಾರವಲ್ಲ. 

35 ವರ್ಷದ ವಿವಾಹಿತ ಮಹಿಳೆ ಬೆಂಗಳೂರಿನಲ್ಲಿ ತನ್ನ 2 ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದರು. ಆರ್ಥಿಕ ಸಮಸ್ಯೆ, ಪತಿಯ ಜೊತೆ ಸದಾ ಜಗಳ ಮತ್ತು ವಿವಾಹಿತ ಬದುಕಿನ ಕಷ್ಟಗಳನ್ನು ಸಹಿಸಲಾಗದೆ ಹಿಂದೊಮ್ಮೆ ಈ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು.

ಆಕೆಯ ಕುಟುಂಬದವರನ್ನು ವಿಚಾರಿಸಿದಾಗ ಆಕೆ ಕುಟುಂಬ ಮತ್ತು ಸ್ನೇಹಿತರ ಜೊತೆ ಬೆರೆಯದೆ ಅಂತರ್ಮುಖಿಯಾಗಿದ್ದಳು ಎಂಬ ವಿಷಯ ಗೊತ್ತಾಯಿತು. ಆಕೆಯ ಸಹೋದರ ಕೂಡ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿಯಿತು. ಹೀಗಾಗಿ ಅವರ ಕುಟುಂಬದಲ್ಲಿ ಮಾನಸಿಕ ಸಮಸ್ಯೆ ಇರುವುದು ಎಂದು ಗೊತ್ತಾಯಿತು. ಮತ್ತು ಈಕೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಔಷಧಗಳು ಸುಲಭವಾಗಿ ಸಿಗುತ್ತಿತ್ತು. 

ಈ ಮೇಲಿನ ಉದಾಹರಣೆಯಿಂದ ಆತ್ಮಹತ್ಯೆಗೆ ಹಲವು ಕಾರಣಗಳು ಅಥವಾ ಅಂಶಗಳು ಇರುವುದು ಎಂದು ತಿಳಿಯುತ್ತದೆ. ಇವುಗಳಲ್ಲಿ ಕೆಲವು ಜೀವನ ಪರಿಸ್ಥಿತಿ, ಅವರ ವ್ಯಕ್ತಿತ್ವ, ಕುಟುಂಬ ಹಾಗು ಇತರರೊಂದಿಗಿರುವ ಸಂಬಂಧ, ಮತ್ತು ಹೊರಗಿನ ವಾತಾವರಣದ ಅಂಶಗಳು ಆತ್ಮಹತ್ಯೆಗೆ ಕಾರಣವಾಗಬಹುದು. 
ಇದು ಆತ್ಮಹತ್ಯೆಗಳು ಹೇಗೆ ವರದಿಯಾಗುತ್ತವೆ ಎಂಬುದಕ್ಕೆ ತದ್ವಿರುದ್ಧವಾಗಿದ್ದು, ಆತ್ಮಹತ್ಯೆಯಲ್ಲಿ ಹಲವು ಸಂಗತಿಗಳು ಅಡಕವಾಗಿರುತ್ತವೆ. ಒಂದೇ ವಿಷಯಕ್ಕೆ ಅಥವಾ ಒಂದೇ ಘಟನೆಯಿಂದ ಆತ್ಮಹತ್ಯೆಗಳು ಸಂಭವಿಸುವುದಿಲ್ಲ. 

ಭಾರತದಲ್ಲಿ ಒಟ್ಟಾರೆ ಆತ್ಮಹತ್ಯೆ ಪ್ರಮಾಣದಲ್ಲಿ ಯುವಕರ(15-29) ಪಾಲು ಅಧಿಕ. ಕೌಟುಂಬಿಕ ಕಲಹ, ಶೈಕ್ಷಣಿಕ ಅಸಮಾಧಾನ, ಸಂಬಂಧಗಳ ವಿಫಲತೆ, ಹಿಂಸೆ, ಮಾನಸಿಕ ಅನಾರೋಗ್ಯ, ಚಟಗಳು ಮತ್ತು ನಿರಾಸೆಗಳು ಹಲವು ಆತ್ಮಹತ್ಯೆಗಳ ಹಿಂದಿರುವ ಅಂಶಗಳು ಎಂದು ನಿರಂತರ ಸಂಶೋಧನೆಗಳಿಂದ ಬೆಳಕಿಗೆ ಬರುತ್ತಿದೆ.

ಅಧ್ಯಯನಗಳು ಗುರುತಿಸಿರುವ ಇತರ ಹಾನಿಕಾರಕ ಅಂಶಗಳೆಂದರೆ ಕುಟುಂಬದಲ್ಲಿ ಆತ್ಮಹತ್ಯೆ ಇತಿಹಾಸ, ವ್ಯಕ್ತಿಯ ಹಿಂದಿನ ಆತ್ಮಹತ್ಯೆ ಪ್ರಯತ್ನಗಳು, ಡಿಪ್ರೆಷನ್‍ನಂಥ ಮಾನಸಿಕ ಅನಾರೋಗ್ಯ, ಭರವಸೆ ಇಲ್ಲದಿರುವುದು, ಅತ್ಯುತ್ಸಾಹದ ವರ್ತನೆ, ಭೌದ್ಧಿಕ, ದೈಹಿಕ ಅಥವಾ ಮಾನಸಿಕ ದೌರ್ಜನ್ಯಕ್ಕೆ ಒಳಗಾಗಿರುವುದು, ಸ್ನೇಹಿತರು ಮತ್ತು ಕುಟುಂಬದವರಿಂದ ಬೆಂಬಲದ ಕೊರತೆ, ಇತ್ಯಾದಿ.

2010ರಲ್ಲಿ ನಿಮ್ಹಾನ್ಸ್, ಬೆಂಗಳೂರಿನಲ್ಲಿ 18-25 ವರ್ಷದ 436 ಪದವಿಪೂರ್ವ ವಿದ್ಯಾರ್ಥಿಗಳ ಮೇಲೆ ಅಧ್ಯಯನವೊಂದನ್ನು ಕೈಗೆತ್ತಿಕೊಂಡಿತ್ತು. ಅದರಲ್ಲಿ ಶೇ.15ರಷ್ಟು ಜನ ಆತ್ಮಹತ್ಯೆ ಚಿಂತನೆ ಮಾಡಿದ್ದರು. ಶೇ.9ರಷ್ಟು ಜನ ಆತ್ಮಹತ್ಯೆ ಪ್ರಯತ್ನ ನಡೆಸಿದ್ದರು. ಶೇ.9ರಷ್ಟು ಜನ ಭರವಸೆ ಕಳೆದುಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂತು.

ದೌರ್ಜನ್ಯಗಳಲ್ಲಿ ದೈಹಿಕ ದೌರ್ಜನ್ಯ ಅತಿ ಹೆಚ್ಚಾಗಿ ವರದಿಯಾಗಿರುತ್ತದೆ. ಅದರಲ್ಲೂ ಪುರುಷರು ಅತಿ ಹೆಚ್ಚು ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. (ಶೇ.30ಕ್ಕಿಂತ ಅಧಿಕ). ಆತ್ಮಹತ್ಯೆಗೆ ಯತ್ನಿಸುವ ಜನರಲ್ಲಿ ಹೆಚ್ಚಿನವರು ವಿವಿಧ ದೌರ್ಜನ್ಯದ ಅನುಭವ ಹೊಂದಿರುವವರು. 

ಮತ್ತೊಂದು ಅಧ್ಯಯನ ಹದಿಹರೆಯದವರಲ್ಲಿ (13-18) ಖಿನ್ನತೆ ಪ್ರಮಾಣ, ಆತ್ಮಹತ್ಯೆ ಪ್ರಯತ್ನ ಮತ್ತು ಒತ್ತಡದ ಮೂಲವನ್ನು ಪರೀಕ್ಷಿಸಿದ್ದು, ಶಾಲೆ (200) ಮತ್ತು ಕಾಲೇಜಿನ (257) ಹದಿಹರೆಯದವರಲ್ಲಿ ಕಂಡುಬಂದ ಅಂಶಗಳು ಹೀಗಿವೆ:

  • ಶೇ.30ರಷ್ಟು ಸಾಧಾರಣರಿಂದ ತೀವ್ರ ಖಿನ್ನತೆ ಹೊಂದಿದ್ದಾರೆ. 
  • ಶೇ.11ರಷ್ಟು ಕಾಲೇಜು ವಿದ್ಯಾರ್ಥಿಗಳು ಮತ್ತು ಶೇ.7.5ರಷ್ಟು ಶಾಲೆಗೆ ಹೋಗುವ ಹದಿಹರೆಯದವರು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಇವುಗಳಿಗೆ ಶೈಕ್ಷಣಿಕ ಒತ್ತಡ ಹೆಚ್ಚು ಕಾರಣ (ಶೇ.62.7), ಕೌಟುಂಬಿಕ ಸಮಸ್ಯೆಗಳು (ಶೇ.25.4) ಮತ್ತು ಸ್ನೇಹಿತರೊಂದಿಗೆ ಸಮಸ್ಯೆ (ಶೇ.11.8).

ಎಲ್ಲಾ ವಯೋಮಾನದವರನ್ನು ಪರಿಗಣಿಸಿದರೂ, ಕುಟುಂಬ ಸಮಸ್ಯೆ, ಅನಾರೋಗ್ಯ, ವಿಫಲತೆ,  ವರದಕ್ಷಿಣೆ ಕಿರುಕುಳ, ಬಡತನ ಮತ್ತು ಡ್ರಗ್ ವ್ಯಸನಗಳು ಪ್ರಧಾನವಾಗಿ ಕಂಡುಬರುತ್ತವೆ.

ಆದಾಗಿಯೂ ಯಾವಾಗಲೂ ಒಂದೇ ಅಂಶ ವ್ಯಕ್ತಿಯನ್ನು ಆತ್ಮಹತ್ಯೆಗೆ ತಳ್ಳುವುದಿಲ್ಲ. ಹೀಗಾಗಿ ಆತ್ಮಹತ್ಯೆಗಳಿಗೆ ಹಲವಾರು ಅಂಶಗಳಿಂದಾಗುವ ದುರ್ಬಲ ಪರಿಸ್ಥಿತಿ ಕಾರಣವಾಗುತ್ತದೆ. ತಜ್ಞರ ಪ್ರಕಾರ ಈ ಅಂಶಗಳನ್ನು ಕಂಡು ಹಿಡಿದು ದುರ್ಬಲ ಪರಿಸ್ಥಿತಿಗಳಲ್ಲಿ ಸಹಾಯ ಮತ್ತು ಅನುಭೂತಿ ನೀಡುವಂಥ ಸಮಾಜ ತಯಾರಾದರೆ ಬಹಳಷ್ಟು ಆತ್ಮಹತ್ಯೆಗಳನ್ನು ತಡೆಗಟ್ಟಬಹುದು.

ಡಾ.ಮಂಜುಳಾ, ಸಹಾಯಕ ಪ್ರಾಧ್ಯಾಪಕಿ, ಕ್ಲಿನಿಕಲ್ ಸೈಕೊಲಜಿ ವಿಭಾಗ, ನಿಮ್ಹಾನ್ಸ್