ಡ್ರಗ್ ಅಡಿಕ್ಷನ್ ಎಂದರೇನು?
ವ್ಯಕ್ತಿಯೊಬ್ಬ ಪ್ರತಿನಿತ್ಯ ಮಾದಕ ವಸ್ತುಗಳನ್ನು ಬಳಸುವ ಅನಾರೋಗ್ಯಕರ ಪ್ರವೃತ್ತಿಯನ್ನು ಮಾದಕದ್ರವ್ಯ ವ್ಯಸನ (ಡ್ರಗ್ ಅಡಿಕ್ಷನ್) ಅಥವಾ ಮಾದಕ ವಸ್ತುಗಳ ದುರುಪಯೋಗ ಎನ್ನಬಹುದು. ಇದನ್ನು ಸೇವಿಸಿದರೆ ಮಾತ್ರ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಈ ವ್ಯಸನಕ್ಕೆ ದಾಸರಾದವರು ಭಾವಿಸಿರುತ್ತಾರೆ. ವ್ಯಕ್ತಿಯೊಬ್ಬ ಪ್ರತಿದಿನ ನಿರಂತರವಾಗಿ ಮಾದಕ ವಸ್ತುಗಳನ್ನು ಬಳಸಲು ಹಂಬಲಿಸುತ್ತಿದ್ದರೆ, ಅದಕ್ಕಾಗಿ ಹಾತೊರೆಯುತ್ತಾರೆ ಮತ್ತು ಅದರ ಹೊರತಾಗಿ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಆ ಚಟಕ್ಕೆ ಅವಲಂಬಿತರಾಗಿರುತ್ತಾರೆ. ಮಾದಕ ವ್ಯಸನವು ಗಂಭೀರವಾದ ಭಾವನಾತ್ಮಕ, ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಅಂತಹ ಒಂದು ವ್ಯಸನದ ಸುಳಿಗೆ ಸಿಲುಕಿದಿರಿ ಅಂತಾದರೆ, ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ.
ಮಾದಕ ವಸ್ತುಗಳು ಮನಸ್ಥಿತಿಯನ್ನು ಹದಗೊಳಿಸುವ, ಮೂಡ್ ಕೊಡುವ ಇನ್ನಿತರ ಹವ್ಯಾಸಗಳಷ್ಟೇ ಬಲವಾದ ಸಾಧನ ಎಂದು ನಮ್ಮಲ್ಲಿ ಬಹುತೇಕರು ಆಲೋಚಿಸುತ್ತಾರೆ. ಮಾನವನ ಮಿದುಳಿನ ಕಾರ್ಯ ವಿಧಾನವನ್ನು ಬದಲಾಯಿಸುವ ರಾಸಾಯನಿಕಗಳಿಗೆ ಡ್ರಗ್ ಅಥವಾ ಮಾದಕದ್ರವ್ಯ ಎಂದು ಕರೆಯಲಾಗುತ್ತದೆ. ಡ್ರಗ್ ಮಿದುಳಿಗೆ ಪ್ರವೇಶಿಸಿ, ಮಿದುಳಿನಲ್ಲಿ ಉತ್ಪಾದನೆಯಾಗುವ ನೈಸರ್ಗಿಕವಾದ ರಾಸಾಯನಿಕಗಳ ಪ್ರಮಾಣವನ್ನು ಕುಗ್ಗಿಸುತ್ತದೆ. ಕಾಫಿ, ಮದ್ಯ, ತಂಬಾಕು, ದೀರ್ಘಕಾಲದ ಔಷಧ ಸೇವನೆ, ಮನೋಲ್ಲಾಸಕ್ಕಾಗಿ ಬಳಸುವ ಕೃತಕ ಸಾಧನಗಳು ಮುಂತಾದ ಎಲ್ಲವುಗಳನ್ನು ಡ್ರಗ್ಸ್ ಎಂದು ಕರೆಯಬಹುದು.
ಮಾದಕ ದ್ರವ್ಯ ವ್ಯಸನದ ಆರಂಭ ಹೇಗೆ?
ಮೊದಮೊದಲು ಮದ್ಯವನ್ನು ಕುತೂಹಲಕ್ಕಾಗಿ ಸೇವಿಸಲು ಆರಂಭಿಸುವಂತೆ, ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ ಅಥವಾ ಅವರಲ್ಲಿನ ಒತ್ತಡ ಹಾಗೂ ಸಮಸ್ಯೆಗಳನ್ನು ಮರೆಯಲೆಂದೋ ಮಾದಕದ್ರವ್ಯಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ.
ಕ್ರಮೇಣ ಡ್ರಗ್ಸ್ ಬಳಕೆಯಿಂದ, ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೆಚ್ಚುಹೆಚ್ಚು ಬಯಸುವಂತೆ ಮಾಡುತ್ತದೆ. ಅಂತವರು ಅದರ ಸೇವನೆಯನ್ನು ನಿಯಂತ್ರಣ ಮಾಡಲಾಗದೆ ಹೋಗುತ್ತಾರೆ. ವ್ಯಕ್ತಿಗಳು ಅವರ ಮನೋಸಾಮರ್ಥ್ಯ ಕಳೆದುಕೊಳ್ಳುತ್ತಾರೆ. ಆ ಹವ್ಯಾಸದಿಂದ ಹೊರಬರಬೇಕೆಂದು ನಿಜವಾಗಿ ಬಯಸಿದರೂ ಸಾಧ್ಯವಾಗದೇ, ಮತ್ತೆ ಮತ್ತೆ ಅದರೆಡೆಗೆ ಆಕರ್ಷಿತರಾಗುತ್ತಾರೆ.
ದುರ್ಬಲ ವ್ಯಕ್ತಿತ್ವ ಹಾಗೂ ಮನೋಸಾಮರ್ಥ್ಯ ಕಡಿಮೆ ಇದ್ದವರು ಮಾದಕದ್ರವ್ಯ ವ್ಯಸನಿಗಳಾಗುತ್ತಾರೆ; ವ್ಯಸನಿಗಳು ಸೋಮಾರಿಗಳಾಗಿರುವುದರಿಂದ ಅವರ ವರ್ತನೆಯಲ್ಲಿ ಬದಲಾವಣೆ ಸಾಧ್ಯವಿಲ್ಲ; ‘ಇನ್ನು ಮುಂದೆ ಡ್ರಗ್ ಸೇವನೆ ಮಾಡುವುದಿಲ್ಲ’ ಎಂದು ದೃಢನಿಶ್ಚಯ ಮಾಡಿದರೆ ಈ ಚಟದಿಂದ ಹೊರಬರಬಹುದು ಎಂಬ ಸಾಮಾನ್ಯವಾದ ಕಲ್ಪನೆಗಳು ಸಮಾಜದಲ್ಲಿದೆ.
ವಾಸ್ತವವೆಂದರೆ ವ್ಯಸನಿಗಳಾಗಲು ವಂಶವಾಹಿ ಮತ್ತು ಸುತ್ತಮುತ್ತಲಿನ ವಾತಾವರಣ ಹೆಚ್ಚಿನ ಕಾರಣವಾಗಿರಬಹುದು. ಜೊತೆಗೆ ಇದು ವ್ಯಕ್ತಿಗತ ಆಯ್ಕೆಯೂ ಆಗಿರಬಹುದು. ‘ಸೇವನೆ ಮಾಡುವುದಿಲ್ಲ’ ಎಂದು ನಿರ್ಧಾರ ಮಾಡುವುದು ಡ್ರಗ್ ತ್ಯಜಿಸುವ ಒಂದು ಸಣ್ಣ ಭಾಗ – ಆದರೆ, ಅವರು ಸಂಪೂರ್ಣವಾಗಿ ಅದರಿಂದ ಹೊರಬರಲು ಚಿಕಿತ್ಸೆ ಮತ್ತು ಹೆಚ್ಚಿನ ಸಹಕಾರ ಅಗತ್ಯ.
ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಮಾರಿಜುವಾನಾ, ಗಾಂಜಾ, ತಂಬಾಕು, ಮತ್ತು ವೈದ್ಯರ ಸಲಹೆ ಪಡೆಯದೇ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಮುಂತಾದವು ವ್ಯಸನಿಗಳು ಹೆಚ್ಚಾಗಿ ಬಳಸುವ ಮಾದಕ ದ್ರವ್ಯಗಳು.
ಮಾದಕ ದ್ರವ್ಯಗಳು ಮನುಷ್ಯನ ಮಿದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಡ್ರಗ್ ಸೇವನೆಯಿಂದ ಮನುಷ್ಯನ ಮಿದುಳಿನ ನರಗಳಲ್ಲಿ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ. ಯಾವಾಗ ನೀವು ಮಾದಕ ವಸ್ತುಗಳನ್ನು ಬಳಸುತ್ತೀರೊ ಇದು ಮಿದುಳಿನ ಸಂದೇಶದ ವ್ಯವಸ್ಥೆಯನ್ನು ಪುನರಾವರ್ತಿಸುತ್ತದೆ. ಹೀಗೆ ಡೋಪಮೈನ್ ಬಿಡುಗಡೆಯಾಗಿ, ಮಿದುಳಿನಲ್ಲಿ ಸಂತೋಷ ಉಂಟಾಗುತ್ತದೆ. ಮಿದುಳು ಮತ್ತೆಮತ್ತೆ ಸಂತೋಷ ಪಡಲು ಬಯಸಿ, ಮಾದಕದ್ರವ್ಯವನ್ನು ಹೆಚ್ಚು ಹೆಚ್ಚಾಗಿ ಬಳಸುವಂತೆ ಉತ್ತೇಜಿಸುತ್ತದೆ. ನೀವು ನಿರಂತರವಾಗಿ ಮಾದಕ ವಸ್ತುಗಳನ್ನು ಸೇವಿಸಿದರೆ, ಕ್ರಮೇಣವಾಗಿ ಮಿದುಳಿನ ಸೂಕ್ಷ್ಮತೆ ಕಡಿಮೆಯಾಗುತ್ತದೆ. ಮೊದಮೊದಲು ಯಾವ ಪ್ರಮಾಣದ ಮಾದಕದ್ರವ್ಯವನ್ನು ನೀವು ಸೇವಿಸುತ್ತಿದ್ದಿರೋ ಅದಕ್ಕಿಂತ ಹೆಚ್ಚಿನ ಪ್ರಮಾಣವನ್ನು ಸೇವಿಸುವುದರಿಂದ ಮಾತ್ರ ನಿಮಗೆ ಈ ಮೊದಲು ಉಂಟಾಗುತ್ತಿದ್ದ ಸಂತೋಷದ ಅನುಭವ ಸಿಗುತ್ತದೆ ಎಂಬ ಭ್ರಮೆಗೆ ಸಿಲುಕುತ್ತೀರಿ. ಮಾದಕದ್ರವ್ಯ ವ್ಯಸನದಿಂದ ಮಿದುಳಿನ ಆಲೋಚನಾ ಕ್ರಮದಲ್ಲಿ ಗೊಂದಲಗಳು ಉಂಟಾಗುತ್ತವೆ. ಇದು ವ್ಯಕ್ತಿಗಳಿಗೆ ಯಾವ ಪ್ರಯೋಜನವನ್ನೂ ನೀಡುವುದಿಲ್ಲ.
ದೀರ್ಘಕಾಲದ ಡ್ರಗ್ ಸೇವನೆಯು ಮಿದುಳಿನ ಅರಿವಿನ ಕಾರ್ಯಕ್ಷಮತೆಯನ್ನು ಹಾನಿಗೊಳಿಸಬಹುದು. ಅಧ್ಯಯನಗಳು ತಿಳಿಸುವಂತೆ, ದೀರ್ಘಕಾಲದ ಡ್ರಗ್ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ, ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗೆ ಒಳಗಾಗಬಹುದು.
ಮಾದಕದ್ರವ್ಯ ವ್ಯಸನದಿಂದ ಉಂಟಾಗುವ ಇತರ ಸಮಸ್ಯೆಗಳು:
ನಡುಗುವಿಕೆ
ಹಸಿವು ಮತ್ತು ನಿದ್ರೆಯಲ್ಲಿ ಏರುಪೇರು
ಮೂರ್ಛೆ ಹೋಗುವುದು
ತೂಕದಲ್ಲಿ ಏರಿಳಿತ
ಸಾಮಾಜಿಕವಾಗಿ ಕಡೆಗಣಿಸಲ್ಪಡುವುದು
ಅತಿಯಾದ ಅಥವಾ ಅತಿರೇಕದ ಚಟುವಟಿಕೆಗಳು
ಹೆದರಿಕೆ ಅಥವಾ ತಳಮಳ
ಆತಂಕ ಮತ್ತು ಮತಿವಿಕಲ್ಪ
ಮಾದಕದ್ರವ್ಯ ವ್ಯಸನವನ್ನು ಗುರುತಿಸುವುದು :
ಮಾದಕ ವಸ್ತು ಸೇವನೆಯ ಹವ್ಯಾಸವು ವ್ಯಸನಕ್ಕೆ ತಿರುಗಿರುವುದನ್ನು ಗುರುತಿಸಲು ಈ ಕೆಳಗಿನ ಕೆಲವು ಸೂಚನೆಗಳು ಸಹಾಯ ಮಾಡುತ್ತವೆ.
ನೀವು ಮೊದಲಿಗಿಂತಲೂ ಹೆಚ್ಚು ಮಾದಕ ವಸ್ತುಗಳನ್ನು ಬಳಸುತ್ತಿದ್ದೀರಾ ಎನ್ನುವುದನ್ನು ಗಮನಿಸಿ.
ನೀವು ಮೊದಲ ಡೋಸನ್ನು ತೆಗೆದುಕೊಳ್ಳುವಾಗ ನಡುಕ ಉಂಟಾಗುವ ಅಥವಾ ಕಿರಿಕಿರಿಯ ಲಕ್ಷಣಗಳನ್ನು ಅನುಭವಿಸುತ್ತಿದ್ದೀರಾ ಎಂಬುದನ್ನು ಗಮನಿಸಿ.
ಮಾದಕದ್ರವ್ಯ ಸೇವಿಸದೆ ದಿನವನ್ನು ಕಳೆಯುವುದು ಸಾಧ್ಯವೇ ಇಲ್ಲ ಎಂಬ ಕಲ್ಪನೆ ನಿಮ್ಮಲ್ಲಿ ಉಂಟಾಗುವುದು.
ನೀವು ಮುಂದಿನ ಅಥವಾ ಹೆಚ್ಚಿನ ಪ್ರಮಾಣದ ಮಾದಕ ವಸ್ತುವನ್ನು ಸೇವಿಸುವುದಕ್ಕೆ ನೆಪ ಹುಡುಕುತ್ತೀರಾ ಎಂದರೆ
ನಿಮ್ಮ ದಿನನಿತ್ಯದ ಕೆಲಸಗಳನ್ನು ಮಾಡುವುದಕ್ಕೆ ಮಾದಕ ವಸ್ತು ಸಹಾಯ ಮಾಡುತ್ತದೆ ಹಾಗೂ ಹೆಚ್ಚು ಆನಂದದಾಯಕವಾಗುತ್ತದೆ ಎಂದು ಅನಿಸಿದರೆ.
ನಿಮ್ಮ ಕುಟುಂಬ, ಸ್ನೇಹಿತರು ಅಥವಾ ಮನೆ ಹಾಗೂ ಹೊರಗಿನ ಕೆಲಸಗಳ ಜವಾಬ್ದಾರಿಯ ಕುರಿತು ಸರಿಯಾಗಿ ಗಮನ ನೀಡಲು ಸಾಧ್ಯವಾಗುವುದಿಲ್ಲ.
ನಿಮ್ಮ ಡ್ರಗ್ ಚಟವನ್ನು ಇತರರಿಂದ ಮರೆಮಾಚಲು ಬಯಸುತ್ತೀರಿ. ನಿಮಗೆ ಈ ಹವ್ಯಾಸ ಇರುವುದನ್ನು ಹೇಳಲು ನಿರಾಕರಿಸುತ್ತೀರಿ ಅಥವಾ ನೀವು ತೆಗೆದುಕೊಳ್ಳುವದಕ್ಕಿಂತಲೂ ಕಡಿಮೆ ಪ್ರಮಾಣವನ್ನು ಹೇಳುತ್ತೀರಿ.
ನಿಮ್ಮ ಹವ್ಯಾಸದ ಕುರಿತಾಗಿ ತಪ್ಪಿತಸ್ಥ ಭಾವನೆ ಅಥವಾ ನಾಚಿಕೆ ಉಂಟಾಗುತ್ತದೆ.
ಕೆಲವು ವೇಳೆ ಇದನ್ನು ಬಿಟ್ಟುಬಿಡಲು ಯೋಚಿಸುತ್ತೀರಿ, ಆದರೆ ನಿರ್ಧಾರ ಮುಂದೂಡುತ್ತಲೇ ಇರುತ್ತದೆ.
ಮಾದಕದ್ರವ್ಯ ವ್ಯಸನದಿಂದ ನಿಮ್ಮಲ್ಲಿ ಈ ಮೇಲಿನ ಎಲ್ಲಾ ಲಕ್ಷಣಗಳು ಅನುಭವಕ್ಕೆ ಬಂದಿದ್ದರೆ, ನೀವು ಪರಿಣಿತ ವೈದ್ಯರ ಸಹಾಯವನ್ನು ಪಡೆಯಬೇಕಾಗಬಹುದು.
ಕೇಜ್ (CAGE) ಎಂಬ ಪ್ರಶ್ಣಾವಳಿಯ ಮೂಲಕ ನೀವು ಮಾದಕ ವ್ಯಸನಿಯಾಗಿದ್ದೀರ ಎಂದು ಗುರುತಿಸಬಹುದು. ಈ ಕೆಳಗಿನ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರವನ್ನು ನೀಡಿ ಪರೀಕ್ಷಿಸಿಕೊಳ್ಳಿ.
ನಿಮ್ಮ ಕುಡಿತವನ್ನು ಅಥವಾ ಮಾದಕ ದ್ರವ್ಯ ಸೇವನೆಯನ್ನು ಕಡಿಮೆ ಮಾಡಬೇಕಾಗಬಹುದೆಂದು ಯಾವಾಗಲಾದರೂ ಅಂದುಕೊಂಡಿದ್ದೀರಾ?
ನಿಮ್ಮ ಕುಡಿತ ಅಥವಾ ಮಾದಕ ದ್ರವ್ಯ ಸೇವನೆಯ ಕುರಿತು ಜನ ಟೀಕಿಸಿ ನಿಮ್ಮನ್ನು ಮುಜುಗುರ ಪಡಿಸಿದ್ದಾರೆಯೇ?
ಕುಡಿತದಿಂದ ಅಥವಾ ಮಾದಕ ದ್ರವ್ಯ ಸೇವನೆಯಿಂದ ನೀವು ತಪ್ಪಿತಸ್ಥ ಭಾವನೆಗೆ ಒಳಗಾಗಿದ್ದೀರಾ?
ಕುಡಿತದಿಂದಾದ ಮಂಪರಿನಿಂದ/ಅಸ್ಥಿರತೆಯಿಂದ ಹೊರಬರಲು ಯಾವಾಗಲಾದರೂ ಬೆಳಿಗ್ಗೆ ಎದ್ದ ತಕ್ಷಣ ಕುಡಿದಿದ್ದೀರಾ?
ಈ ಮೇಲಿನ ಪ್ರಶ್ನೆಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ನಿಮ್ಮ ಉತ್ತರ "ಹೌದು" ಎಂದಾದಲ್ಲಿ ನೀವು ಮಾದಕ ದ್ರವ್ಯ ವ್ಯಸನಿ ಆಗಿದ್ದೀರಿ ಹಾಗೂ ಹೊರಬರಲು ನಿಮಗೆ ಸಹಕಾರ ಅಗತ್ಯ ಎಂದರ್ಥ.
ನಿಮ್ಮ ಪ್ರೀತಿಪಾತ್ರರು ಯಾರಾದರೂ ಮಾದಕ ದ್ರವ್ಯ ವ್ಯಸನಕ್ಕೆ ತುತ್ತಾಗಿದ್ದಾರೆ ಎಂದು ನಿಮಗೆ ಅನಿಸಿದರೆ, ಅಂತವರ ದೈಹಿಕ ಲಕ್ಷಣಗಳು ಮತ್ತು ಅವರ ವರ್ತನೆಯಲ್ಲಿನ ವ್ಯತ್ಯಾಸಗಳನ್ನು ಮೇಲೆ ಹೇಳಲಾದ ಪಟ್ಟಿಯಲ್ಲಿ ಪರಿಶೀಲಿಸಿ ನೋಡಿ.
ಮಾದಕದ್ರವ್ಯ ವ್ಯಸನ: ರೋಗನಿರ್ಣಯ
ವೈದ್ಯಕೀಯ ಲೋಕದಲ್ಲಿ ವ್ಯಸನದ ರೋಗ ನಿರ್ಣಯ ಮಾಡಲು ಅನೇಕ ಪರೀಕ್ಷಾ ವಿಧಾನಗಳಿವೆ. ನಿಮಗೆ ಅಥವಾ ನಿಮ್ಮ ಪ್ರೀತಿಪಾತ್ರರಲ್ಲೊಬ್ಬರಿಗೆ ತೊಂದರೆಯಿದ್ದರೆ ಮನೋವೈದ್ಯರ ಅಥವಾ ಆಪ್ತ ಸಲಹೆಗಾರರ ಸಹಾಯ ಪಡೆಯಬೇಕು. ಅವರು ನಿಮ್ಮ ಸಮಸ್ಯೆಗಳನ್ನು ಪರಿಶೀಲಿಸಿ ತಜ್ಞರಿಗೆ ಶಿಫಾರಸ್ಸು ಮಾಡಬಹುದು. ತಜ್ಞರು ಸೂಕ್ತವಾದ ವೈದ್ಯಕೀಯ ಮತ್ತು ದೈಹಿಕ ಪರೀಕ್ಷೆಗಳನ್ನು ಮಾಡಿ, ಸಮಸ್ಯೆಯ ತೀವ್ರತೆ ಎಷ್ಟಿದೆ, ಯಾವ ರೀತಿಯ ತೊಂದರೆಯಿದೆ ಎಂದು ಪರಿಶೀಲಿಸುತ್ತಾರೆ.
ಮಾದಕದ್ರವ್ಯ ವ್ಯಸನದಿಂದ ಹೊರಬರಲು ಚಿಕಿತ್ಸೆ:
ಮಾದಕದ್ರವ್ಯ ವ್ಯಸನದಿಂದ ಹೊರಬರಲು ಚಿಕಿತ್ಸೆಯ ಅವಶ್ಯಕತೆಯಿರುತ್ತದೆ. ಚಿಕಿತ್ಸೆಯು ಪ್ರಮುಖವಾಗಿ ನಾಲ್ಕು ಗುರಿಗಳನ್ನು ಹೊಂದಿದೆ.
ವ್ಯಕ್ತಿಯ ದೇಹದಿಂದ ಮಾದಕ ವಸ್ತುವಿನಿಂದಾದ ವಿಷಕಾರಕ ಪರಿಣಾಮಗಳನ್ನು ನಿವಾರಿಸುವುದು.
ಅತಿಯಾದ ಬಯಕೆ ಮತ್ತು ವ್ಯಸನ ತ್ಯಜಿಸಬೇಕೆಂಬ ಭಾವನೆಗಳನ್ನು ನಿಭಾಯಿಸಲು ವ್ಯಕ್ತಿಗೆ ಸಹಾಯ ಮಾಡುವುದು.
ವ್ಯಸನಕ್ಕೆ ಸಂಬಂಧಿಸಿದಂತೆ ಯಾವುದೇ ಮಾನಸಿಕ ಮತ್ತು ಭಾವನಾತ್ಮಕ ವಿಷಯಗಳನ್ನು ನಿರ್ವಹಿಸಲು ವ್ಯಕ್ತಿಗೆ ಸಹಾಯ ಮಾಡುವುದು.
ವ್ಯಕ್ತಿಯು ಅವರ ಮಾದಕದ್ರವ್ಯ ವ್ಯಸನದ ಬಗ್ಗೆ ಗಮನ ನೀಡದಂತೆ, ಹೊಸ ಜೀವನಶೈಲಿ ರೂಪಿಸಿಕೊಳ್ಳಲು ಸಹಾಯ ಮಾಡುವುದು ಹಾಗು ಪ್ರೇರಣೆ ನೀಡುವುದು.
ಮಾದಕದ್ರವ್ಯ ವ್ಯಸನದ ಚಿಕಿತ್ಸೆಯು ಕೂಡ ಉಳಿದ ವ್ಯಸನಗಳ ಚಿಕಿತ್ಸೆಯಂತೆಯೆ ಇರುತ್ತದೆ. ಔಷಧೋಪಚಾರ, ವ್ಯಕ್ತಿಗತ ಆರೈಕೆ ಮತ್ತು ಗುಂಪು ಚಿಕಿತ್ಸೆಗಳ ಸಂಯೋಜನೆಗಳನ್ನು ಇದು ಒಳಗೊಂಡಿರುತ್ತದೆ. ಚಿಕಿತ್ಸೆಯ ಪ್ರತಿಯೊಂದು ಅಂಶವು ರೋಗಿಗಳ ವೈದ್ಯಕೀಯ ಇತಿಹಾಸ, ತೆಗೆದುಕೊಂಡ ಮಾದಕ ದ್ರವ್ಯ, ಅದರಿಂದಾದ ಪರಿಣಾಮಗಳನ್ನು ಅವಲಂಬಿಸಿ ನಿರ್ಧರಿಸಲ್ಪಡುತ್ತದೆ.
ಆ ಮಾದಕ ವಸ್ತುಗಳಿಂದ ವ್ಯಕ್ತಿಗಳು ದೂರ ಉಳಿಯುವಂತೆ ಮಾಡುವುದು, ವ್ಯಸನ ಮತ್ತೆ ಮತ್ತೆ ಮರುಕಳಿಸದಂತೆ ತಡೆಗಟ್ಟುವುದು ಹಾಗು ಅವುಗಳನ್ನು ನಿಭಾಯಿಸುವ ಕೌಶಲಗಳನ್ನು ವ್ಯಕ್ತಿಗಳಲ್ಲಿ ತುಂಬುವ ಗುರಿಯನ್ನು ಚಿಕಿತ್ಸೆ ಹೊಂದಿದೆ. ಹೆಚ್ಚಿನ ರೋಗಿಗಳಿಗೆ ಕಡಿಮೆ ಅವಧಿಯ ಆಸ್ಪತ್ರೆ ವಾಸದ ಚಿಕಿತ್ಸೆಯ ಅಗತ್ಯವಿರುತ್ತದೆ. ಆನಂತರದ ಪುನಶ್ಚೇತನದ ಮತ್ತು ಮುಂದಿನ ಹಂತಗಳ ಫಾಲೊ ಅಪ್ ಅವಧಿಗಳು ವ್ಯಸನಮುಕ್ತ ಜೀವನವನ್ನು ನಿಭಾಯಿಸಲು ಸಹಾಯ ಮಾಡುತ್ತವೆ.
ರೋಗಲಕ್ಷಣ ಮರುಕಳಿಸದಂತೆ ತಡೆಯುವುದು ಚಿಕಿತ್ಸೆಯ ಪ್ರಮುಖ ಅಂಶವಾಗಿದೆ. ಯಾವಾಗ ವ್ಯಕ್ತಿಯು ಮೊದಲ ಸಲ ಡ್ರಗ್ ವ್ಯಸನಿಗಳಾಗುತ್ತಾರೊ ಅಂತಹ ಸ್ಥಿತಿಯನ್ನು ಲ್ಯಾಪ್ಸ್ (lapse) ಎನ್ನಲಾಗುತ್ತದೆ. ವ್ಯಕ್ತಿ ವ್ಯಸನ ಮುಕ್ತರಾಗಲು ಒಂದು ಸಲ ಚಿಕಿತ್ಸೆ ಪಡೆದ ನಂತರ ಡ್ರಗ್ನಿಂದ ಕೆಲ ಸಮಯ ದೂರ ಇದ್ದು ಮತ್ತೆ ವ್ಯಸನ ಮರುಕಳಿಸಿದರೆ ಇದನ್ನು ರಿಲ್ಯಾಪ್ಸ್ (relapse) ಎನ್ನುತ್ತಾರೆ. ಮೊದಲ ಹಂತದಲ್ಲಿಯೇ ಸೂಕ್ತವಾದ ಚಿಕಿತ್ಸೆ ನೀಡುವುದು ವ್ಯಸನ ಮರುಕಳಿಸದಂತೆ ತಡೆಯಲು ಇರುವ ಉತ್ತಮ ವಿಧಾನ. ಇದರಿಂದ ರೋಗಿಗಳು ತಿರುಗಿ ವ್ಯಸನಿಗಳಾಗುವುದನ್ನು ತಪ್ಪಿಸಬಹುದು.
ಸೂಚನೆ: ಹೆಚ್ಚಿನ ಜನರಲ್ಲಿ ಮಾದಕ ದ್ರವ್ಯಗಳನ್ನು 'ಇನ್ನು ಸೇವಿಸುವುದಿಲ್ಲ’ ಎಂದು ಪ್ರಮಾಣಿಸಿ ಹೇಳುವುದರ ಮೂಲಕ ವ್ಯಸನದಿಂದ ಹೊರಬರಬಹುದು ಎಂಬ ನಂಬಿಕೆಯಿದೆ. ವ್ಯಸನವು ಕೇವಲ ವ್ಯಕ್ತಿಗಳ ಇಚ್ಛಾಶಕ್ತಿಗೆ ಸಂಬಂಧಿಸಿದ್ದಲ್ಲ. ವ್ಯಕ್ತಿಗಳು ವ್ಯಸನಿಗಳಾದಾಗ, ಮಾದಕ ವಸ್ತು ಮಿದುಳಿನ ನಿರ್ಧಾರ ತೆಗೆದುಕೊಳ್ಳುವ ಭಾಗದಲ್ಲಿ ಬದಲಾವಣೆ ಉಂಟುಮಾಡಿರುತ್ತದೆ.
‘ಇನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಹೇಳುವ ಮೂಲಕ ಮಾದಕದ್ರವ್ಯ ವ್ಯಸನವನ್ನು ತ್ಯಜಿಸಲು ಮುಂದಾದರೂ ಡ್ರಗ್ ಸೇವನೆಯ ಸೆಳೆತ ಮತ್ತು ಅದರ ಮೇಲಿನ ದೈಹಿಕ ಹಾಗೂ ಮಾನಸಿಕ ಅವಲಂಬನೆ ಮತ್ತು ಸೇವಿಸದಿರುವಾಗ ದೇಹದಲ್ಲಿ ಉಂಟಾಗುವ ತೊಡರೆ ಅದನ್ನು ಮತ್ತೆ ಬಳಸುವಂತೆ ಮಾಡುತ್ತದೆ . ಅಂತಹ ವ್ಯಕ್ತಿಗಳು ಚಟವನ್ನು ತ್ಯಜಿಸಲು ತಜ್ಞರಿಂದ ಹೆಚ್ಚಿನ ಸಹಾಯ ಪಡೆಯಬೇಕು. ಔಷಧೋಪಚಾರ ಮತ್ತು ಚಿಕಿತ್ಸೆಗಳ ಸಂಯೋಜಿತ ಕ್ರಮ ಮಾತ್ರ ಇಂತಹ ವ್ಯಸನದಿಂದ ಗುಣಮುಖರಾಗಿಸಲು ಇರುವ ಪರಿಣಾಮಕಾರಿ ವಿಧಾನ.