ಆರೋಗ್ಯವಂತರಾಗಿರುವುದು

ನಿರೂಪಣೆ: ಹಿಂದಿನ ಆಘಾತಕಾರಿ ಘಟನೆಗಳು ನಿಮ್ಮ ವರ್ತಮಾನ ಮತ್ತು ಭವಿಷ್ಯದ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು

ವೈಟ್ ಸ್ವಾನ್ ಫೌಂಡೇಶನ್

ಅಂಜನಾ ಮತ್ತು ಆಕೆಯ ಪತಿ ದಿನೇಶ್‌ ಮನೋವೈದ್ಯರೊಬ್ಬರನ್ನು ಭೇಟಿ ಮಾಡಿದ್ದರು. ಯಾರೇ ಆಗಲಿ ನಮ್ಮ ಸಮಸ್ಯೆಗಳಿಗೆ ಹೇಗೆ ಸಹಾಯ ಮಾಡಿ ಸ್ಪಂದಿಸುತ್ತಾರೆ ಎಂಬ ಅನುಮಾನ ಇದ್ದಿದ್ದರಿಂದಾಗಿ ತಮಗೆ ಮನೋವೈದ್ಯರನ್ನು ಭೇಟಿ ಮಾಡಲು ಮೊದಲು ಮುಜುಗರವಾಗಿತ್ತು ಎಂದು ದಿನೇಶ್‌  ಈ ಸಂದರ್ಭದಲ್ಲಿ ಹೇಳಿದರು. ಆದರೆ ಕೊನೆಗೂ ಅವರು ಈ ತೊಳಲಾಟದಿಂದ ಹೊರಬಂದು ಮನೋವೈದ್ಯರ ಬಳಿ ಆಗಮಿಸಿದ್ದರು.

ನಾಲ್ಕು ತಿಂಗಳ ಹಿಂದೆ ದರೋಡೆಕೋರರು ಅವರ ಮನೆಗೆ ಕನ್ನ ಹಾಕಿದ್ದ ನಂತರದಲ್ಲಿ ತಾನು  ಸರಿಯಾಗಿ ನಿದ್ರೆ ಮಾಡಲಿಲ್ಲ ಎಂಬುದಾಗಿ ಅಂಜನಾ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಆಕೆ ಕುಟುಂಬದಿಂದಲೇ ದೂರಾಗಿದ್ದಳು. ಮನೆಗೆ ಕಳ್ಳರು ನುಗ್ಗಿದ್ದ ಬಗ್ಗೆ ಇತರರ ಜತೆ ಮಾತನಾಡಬೇಕಾದೀತು ಎಂಬ ಭಯದಿಂದ ಕುಟುಂಬದ ಕಾರ್ಯಕ್ರಮಗಳಿಗೆ ಹೋಗುವುದನ್ನೇ ಆಕೆ ತಪ್ಪಿಸಿಕೊಳ್ಳುತ್ತಿದ್ದಳು.
ಆರಂಭದಲ್ಲಿ ಕನಸು ಬಿದ್ದಾಗ ಅಥವಾ ನಿದ್ರೆ ಬಾರದಿದ್ದಾಗ ಇದು ಕಳ್ಳರು ಮನೆ ಒಡೆದಿದ್ದರ ಪ್ರತಿಕ್ರಿಯೆಯಾಗಿರಬಹುದು ಎಂದು ಭಾವಿಸಿದ್ದಳು. 

ಆದರೆ ದಿನ ಕಳೆದಂತೆ ಈ ಸಮಸ್ಯೆ ಹೆಚ್ಚುತ್ತಾ ಸಾಗಿತು. ಕಳ್ಳರು ಮನೆಗೆ ನುಗ್ಗಿದ ಹಾಗೂ ಆಕೆಯನ್ನು ಹೊಡೆದ ಘಟನೆಗಳೇ ಮತ್ತೆ ಮತ್ತೆ ಆಕೆಯ ಮನಸಿನಲ್ಲಿ ಮೂಡುತ್ತಿತ್ತು. ಇಂಥ ಸನ್ನಿವೇಶಗಳು ಇರುವ ಸಿನಿಮಾಗಳನ್ನು ನೋಡಲೂ ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಮೈಯೆಲ್ಲಾ ಬೆವರಿ, ಹೆದರಿಕೊಂಡು ಟಿವಿಯನ್ನೇ ತಕ್ಷಣ ಸ್ವಿಚ್‌ ಆಫ್‌ ಮಾಡುತ್ತಿದ್ದಳು. ಈ ಹಿಂದೆ ಆಕೆ ಖುಷಿ ಪಡುತ್ತಿದ್ದ ಸಂಗತಿಗಳಲ್ಲಿ ಈಗ ಅವಳಿಗೆ ಆಸಕ್ತಿಯೇ ಇರಲಿಲ್ಲ. ಇದು ಆಕೆಯನ್ನು ತುಂಬಾ ಚಿಂತೆಗೀಡುಮಾಡಿತ್ತು. ಕುಟುಂಬದ ಸದಸ್ಯರಿಂದ ಆಕೆ ದೂರವಾಗುತ್ತಿರುವುದರ ಬಗ್ಗೆ ಪತಿಗೆ ಅತೀವ ಚಿಂತೆಯಾಗಿತ್ತು.

ತಾನು ಹುಚ್ಚಿಯಾಗುತ್ತಿದ್ದೇನೆಂಬ ಭಯ ಉಂಟಾಗುತ್ತಿದೆ ಎಂದು ಅಂಜನಾ ವೈದ್ಯರಲ್ಲಿ ಹೇಳಿಕೊಂಡಳು. ಯಾವುದೇ ಸಂಗತಿಯನ್ನೂ ಆಕೆ ಸರಿಯಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ; ಬೇಗ ಸಿಟ್ಟಾಗುತ್ತಿದ್ದಳು. ಸಣ್ಣ ಶಬ್ದವಾದರೂ ಸಾಕು ಅವಳ ಸಹನೆ ಮೀರುತ್ತಿತ್ತು. ವಾರಗಟ್ಟಲೆ ಆಕೆ ಸರಿಯಾಗಿ ನಿದ್ದೆ ಮಾಡಿಲ್ಲದ್ದರಿಂದ ಬೇಗ ಸುಸ್ತಾಗುತ್ತಿದ್ದಳು. ಇಡೀ ಜಗತ್ತೇ ಅಪಾಯಕಾರಿಯಾಗಿದೆ ಎಂಬ ಭಾವನೆಯಿಂದ ಆಕೆ ಮುಕ್ತವಾಗಲು ಸಾಧ್ಯವೇ ಆಗುತ್ತಿರಲಿಲ್ಲ.

ಇಡೀ ಕಥೆಯನ್ನು ಕೇಳಿ, ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿದ ವೈದ್ಯರು ಅಂಜನಾಳಿಗೆ ಪೋಸ್ಟ್‌ ಟ್ರೌಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ (ಪಿಟಿಎಸ್‌ಡಿ) ಇದೆ ಎಂದು ನಿರ್ಧರಿಸಿದರು. ರೋಗದ ಬಗ್ಗೆ ಮತ್ತು ಪಿಟಿಎಸ್‌ಡಿಗೆ ಇರುವ ಚಿಕಿತ್ಸೆಗಳ ಬಗ್ಗೆ ವೈದ್ಯರು ದಂಪತಿಗೆ ವಿವರಿಸಿದರು. ಅವರು ತಿಳಿದುಕೊಂಡಿದ್ದಕ್ಕಿಂತ ಅತಿ ಸಾಮಾನ್ಯವಾದ ಸಮಸ್ಯೆಯಾಗಿದೆ ಮತ್ತು ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ ವಿಚಾರ ಎಂದು ವೈದ್ಯರು ತಿಳಿಹೇಳಿ ಚಿಕಿತ್ಸೆಯನ್ನು ಆರಂಭಿಸಿದರು. ಥೆರಪಿಸ್ಟ್‌ರಿಂದ ಕೌನ್ಸೆಲಿಂಗ್‌ ಪಡೆಯಲು ಸಲಹೆ ಮಾಡಿದರು.

ನಂತರದಲ್ಲಿ ಒಂದು ವರ್ಷಗಳಕಾಲ ಚಿಕಿತ್ಸೆ ಪಡೆದ  ಅಂಜನಾಗೆ ಪರಿಸ್ಥಿತಿ ಸುಧಾರಿಸಿದ ಅನುಭವ ಮೂಡಿತ್ತು. ಕುಟುಂಬ ಸದಸ್ಯರ ಜತೆ ಒಡನಾಟ ಅರಂಭಿಸಿದ್ದಳು. ದಿನಗಳೆದಂತೆ ಆಕೆಯ ನಿದ್ರೆ ಸಮಸ್ಯೆ ಸುಧಾರಿಸಿದೆ. ಆಕೆ ಈಗ ಬೇಗನೆ ಸಹನೆ ಕಳೆದುಕೊಳ್ಳುವುದಿಲ್ಲ. ಈ ಮುಂಚಿಗಿಂತ ಪತ್ನಿ ಸುಧಾರಿಸಿಕೊಂಡಿದ್ದಾಳೆ ಎಂದು ದಿನೇಶ್‌ ಕೂಡ ಖುಷಿಯಾಗಿದ್ದಾರೆ. ಕಾಲಕ್ರಮೇಣ ಆಕೆಗೆ ಥೆರಪಿಯ ಅಗತ್ಯ ಕಂಡುಬರಲಿಲ್ಲ. ಆದರೂ ಔಷಧಸೇವನೆಯನ್ನು ಆಕೆ ಸ್ವಲ್ಪ ದಿನದವರೆಗೆ ಮುಂದುವರಿಸಿದಳು. ಕ್ರಮೇಣ ಸುಧಾರಿಸಿಕೊಳ್ಳತೊಡಗಿದ ಆಕೆ ವೈದ್ಯರ ನೆರವು ಪಡೆಯುವುದನ್ನೂ ನಿಲ್ಲಿಸಿದಳು.

ವಿವಿಧ ರೋಗಿಗಳನ್ನು ಮತ್ತು ಅವರ ರೋಗದ ಗುಣಲಕ್ಷಣಗಳನ್ನು ಪರಿಗಣಿಸಿ ಮಾನಸಿಕ ಆರೋಗ್ಯ ತಜ್ಞರ ಸಹಾಯದಿಂದ ಈ ನಿರೂಪಣೆಯನ್ನು ರೂಪಿಸಲಾಗಿದೆ. ಈ ಕಥೆಯು ಯಾವುದೇ ಒಂದು ವ್ಯಕ್ತಿಯದ್ದಲ್ಲ.. ಬದಲಿಗೆ ಪಿಟಿಎಸ್‌ಡಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆಲ್ಲರಿಗೂ ಇದು ಅನ್ವಯಿಸುತ್ತದೆ.