ಆರೋಗ್ಯವಂತರಾಗಿರುವುದು

ಕೃತಜ್ಞತಾ ಮನೋಭಾವದಲ್ಲಿ ಸಂತೃಪ್ತಿಯು ಎದ್ದು ತೋರುವುದು

ಚಾರುಮತಿ ಸುಪ್ರಜಾ

ಆರೋಗ್ಯಕ್ಕೆ ಸಂಬಂಧಿಸಿದ ಸಂಶೋಧನೆಗಳು ಇದನ್ನು ಮ್ಯಾಜಿಕ್ ಪಿಲ್  ಎಂದು ಕರೆದಿವೆ. ಇದು ಮನೋಬಲವನ್ನು  ವೃದ್ಧಿಗೊಳಿಸುತ್ತದೆ, ಸ್ವಾಭಿಮಾನವನ್ನು ಮತ್ತು ಸಹಾನುಭೂತಿಯನ್ನು ಹೆಚ್ಚಿಸುತ್ತದೆ, ಕೋಪವನ್ನು ಶಮನ ಮಾಡುತ್ತದೆ, ಮನಸ್ಸಿಗೆ ಸಮಾಧಾನ ನೀಡುತ್ತದೆ, ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ, ಆಗಿಂದಾಗ್ಗೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು ಮತ್ತು ನೋವುಗಳನ್ನು ತಡೆಗಟ್ಟುತ್ತವೆ, ಮಿತ್ರತ್ವವನ್ನು ಬೆಳೆಸಿ ಉತ್ತಮ ಸಂಬಂಧವನ್ನು ಬೆಸೆಯಲು ನೆರವಾಗುತ್ತದೆ. ಈ ಮ್ಯಾಜಿಕ್ ಪಿಲ್ ಅಥವಾ ಮಾಂತ್ರಿಕ ಮಾತ್ರೆಯ ಹೆಸರು “ಕೃತಜ್ಞತಾ ಮನೋಭಾವ” ಎಂದು.  ಈ ಮಾತ್ರೆಯು ನಮ್ಮ ದೇಹದಲ್ಲಿ ಮೊದಲಿನಿಂದಲೂ ಇರುತ್ತದೆ. ಆದರೆ, ಅದನ್ನು ಪ್ರಕಟಗೊಳಿಸಿದರಷ್ಟೇ ಪರಿಣಾಮವನ್ನು ಹೊಂದಲು ಸಾಧ್ಯವಾಗುವುದು. ಕೃತಜ್ಞತಾ ಮನೋಭಾವ ಎಂಬ ಈ ಮಾತ್ರೆ, ನಮ್ಮದೇ ಮನಸ್ಸಿನ ಒಂದು ಸ್ಥಿತಿಯಾಗಿದೆ.

“ಒಬ್ಬ ವ್ಯಕ್ತಿಯು ತಾನು ಪಡೆದ ಸಹಾಯ ಅಥವಾ ಸಹಾನುಭೂತಿಗೆ ಪ್ರತಿಯಾಗಿ ವ್ಯಕ್ತಪಡಿಸುವ ಮೆಚ್ಚುಗೆಯಿಂದ ಕೂಡಿದ ಕೃತಜ್ಞತೆಯೇ ಕೃತಜ್ಞತಾ ಮನೋಭಾವ” ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ವ್ಯಾಖ್ಯಾನಿಸಿದೆ. ಒಬ್ಬವ್ಯಕ್ತಿಯ ಮೆದುಳಿನ ಮೇಲೆ ಮತ್ತು ಸಮಗ್ರ ಮಾನಸಿಕ ಸ್ವಾಸ್ಥ್ಯದ ಮೇಲೆ ಕೃತಜ್ಞತಾ ಮನೋಭಾವವು ಬೀರುವ ಪರಿಣಾಮಗಳ ವಿಷಯವಾಗಿ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ಹಾಗೂ ಪ್ರಾಯೋಗಿಕವಾಗಿ ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದಾರೆ.

ಫೆಬ್ರವೆರಿಯ ಕೊನೆಯಲ್ಲಿ ನಾನು ಗ್ರಾಟಿಟ್ಯೂಡ್ ಜರ್ನಲ್ ಅನ್ನು (ಕೃತಜ್ಞತಾ ಮನೋಭಾವದ ಕುರಿತು ಅನ್ನಿಸಿಕೆಗಳನ್ನು ಹಂಚಿಕೋಳ್ಳುವ ಜರ್ನಲ್) ನಿರ್ವಹಿಸಲು ಆರಂಭಿಸುವಾಗ ನನಗೆ ಪಾಂಡಿತ್ಯಪೂರ್ಣ ಅಧ್ಯಯನದ ಕುತೂಹಲಗಳಿರಲಿಲ್ಲ. ಕೇವಲ ಜನರು ತಮ್ಮ ಕೃತಜ್ಞತೆಯನ್ನು ದಾಖಲಿಸಲು ಒಂದು ವೇದಿಕೆಯನ್ನು ಕಲ್ಪಿಸುವುದಷ್ಟೆ ನನ್ನ ಉದ್ದೇಶವಾಗಿತ್ತು. ಯಾವುದೇ ಒತ್ತಡಗಳಿಲ್ಲದೆ, ನಮ್ಮ ಕೃತಜ್ಞತೆಯನ್ನು ತೋರಿಕೊಳ್ಳುವ ಅವಕಾಶ ನಿರ್ಮಿಸುವುದು ನನ್ನ ಬಯಕೆಯಾಗಿತ್ತು. ಏಕೆಂದರೆ ನಾನು ನನ್ನ ಬದುಕಿನ ಅಂತಹ ಕೆಲವು ಸಂದರ್ಭಗಳನ್ನು ಕಾಯ್ದಿಟ್ಟುಕೊಳ್ಳಲು ಬಯಸಿದ್ದೆ. ಅದರಿಂದ ದೊರೆಯುವ ಸಕಾರಾತ್ಮಕ ಪರಿಣಾಮಗಳ ಅರಿವು ನನಗಿತ್ತು.

ಈ ಗ್ರಾಟಿಟ್ಯೂಡ್ ಚಾಲೆಂಜ್ ಅನ್ನು ಸ್ವೀಕರಿಸುವ ಅಗತ್ಯ ಬಹಳವಿದೆಯೆಂದು ನನಗೆ ಅನ್ನಿಸಿತು. ಏಕೆಂದರೆ, ವರ್ಷಗಳ ಕೆಳಗೆ ನಾನು ವಿಪರೀತ ಗೊಂದಲಗಳ ಸ್ಥಿತಿಯನ್ನು ಅನುಭವಿಸುತ್ತಿದ್ದೆ. ನನ್ನ ಜೀವನದಲ್ಲಿ ಎಲ್ಲಾ ಸವಲತ್ತುಗಳಿದ್ದರೂ, ಎಲ್ಲರೊಡನೆ ಉತ್ತಮ ಬಾಂಧವ್ಯವಿದ್ದರೂ, ಸಕಲ ಸುಖ - ಸಂತೋಷಗಳಿದ್ದರೂ ನಾನು ಅನುಮಾನ, ಉದ್ವೇಗ, ಹತಾಶೆ, ದುಃಖ ಮುಂತಾದ ಭಾವನೆಗಳಿಂದ ನರಳುತ್ತಿದ್ದೆ. ಯಾವುದೋ ಅಭದ್ರತೆ ನನ್ನನ್ನು ಸದಾ ಕಾಲ ಕಾಡುತ್ತಲೇ ಇರುತ್ತಿತ್ತು. ಪ್ರತಿಬಾರಿಯೂ ಒಂದು ಮುಖ್ಯ ತಿರುವಿನಲ್ಲಿ ಪುಟ ಮುಗಿದುಹೋದ ಹಾಗೆ ಭಾಸವಾಗುತ್ತಿತ್ತು.

ನಂತರದ ದಿನಗಳಲ್ಲಿ ನಾನು ನನ್ನ ಆಲೋಚನಾಕ್ರಮವನ್ನು ಬದಲಿಸಿಕೊಂಡೆ. ಬದುಕನ್ನು ಯಾವ ದೃಷ್ಟಿಕೋನದಿಂದ ನೋಡಬೇಕು ಎಂದು ಕಂಡುಕೊಂಡೆ. ನನ್ನ ಬಳಿ ಏನಿದೆಯೋ ಅದಕ್ಕೆ ನಾನು ಆಭಾರಿಯಾಗಿದ್ದರೆ, ನಾವು ಯಾವುದಕ್ಕಾಗಿ ಚಿಂತಿಸುತ್ತೇವೋ ಅವು ಎಷ್ಟು ಕ್ಷುಲ್ಲಕ ಎಂಬ ಅರಿವು ಮೂಡುತ್ತದೆ. ನನ್ನ ವಿಷಯದಲ್ಲಿಯೂ ಹಾಗೆಯೇ ಆಯಿತು. ನನ್ನ ಬಳಿ ಏನಿದೆಯೋ ಅವುಗಳೆಡೆ ಕೃತಜ್ಞತಾ ಮನೋಭಾವವನ್ನು ಬೆಳೆಸಿಕೊಂಡ ದಿನದಿಂದ ನನ್ನ ಬದುಕೂ ಬದಲಾಗತೊಡಗಿತು. ನಾನು ಬದುಕಿನ ಪ್ರತಿ ಕ್ಷಣವನ್ನೂ ಆನಂದಿಸತೊಡಗಿದೆ.

ಈ ಕೃತಜ್ಞತಾ ಮನೋಭಾವ ವಾಸ್ತವದಲ್ಲಿ ಹೇಗಿರುತ್ತದೆ? ನೀವು ದಟ್ಟ ಟ್ರಾಫಿಕ್’ನಲ್ಲಿ ಸಿಲುಕಿಕೊಂಡು ಚಡಪಡಿಸುತ್ತಿರುವಾಗ ಅನಿರೀಕ್ಷಿತವಾಗಿ ಸೂರ್ಯಾಸ್ತಮಾನದ ಮನೋಹರ ದೃಶ್ಯ ಕಣ್ಣಿಗೆ ಬಿದ್ದರೆ ಹೇಗಿರುತ್ತದೆಯೋ ಹಾಗಿರುತ್ತದೆ!.  ಶರೀರದ ಯಾವ ಭಾಗದಲ್ಲಿ ಇದು ಅನುಭವಕ್ಕೆ ಬರುತ್ತದೆ?  ನಾನು ಕೆಲವೊಮ್ಮೆ ನನ್ನ ಕಣ್ಣಂಚಿನಲ್ಲಿ ಮತ್ತು ಗಂಟಲಿನಲ್ಲಿ (ಹೇಗೆ ಕಣ್ಣೀರು ಕೊನೆಗೆ ಗಂಟಲಿನಲ್ಲಿ ಇಳಿಯುತ್ತದೆಯೋ ಹಾಗೆ); ಕೆಲವೊಮ್ಮೆ ನನ್ನ ಹೃದಯದಲ್ಲಿ ಇದನ್ನು ಅನುಭವಿಸಿದ್ದೇನೆ. ಈ ಅನುಭವವು ನಮ್ಮೊಳಗಿನಲ್ಲಿ ಪ್ರವಾಹದಂತೆ ಹರಿದು, ನಮ್ಮನ್ನು ನಾವೇ ತಬ್ಬಿಕೊಂಡಂತೆ ಭಾಸವಾಗುತ್ತದೆ.

ಕೆಲವು ವರ್ಷಗಳ ಹಿಂದೆ ನಾನು ಸಾಮಾಜಿಕ ಜಾಲತಾಣದಲ್ಲಿ “ಗ್ರಾಟಿಟ್ಯೂಡ್ ಚಾಲೆಂಜ್” ಅನ್ನು ಸ್ವೀಕರಿಸಿದ್ದೆ. ಆ ಸಂದರ್ಭದಲ್ಲಿ ನನಗೆ ಮೂತ್ರದ ಒತ್ತಡ ಉಂಟಾದಾಗ ವಿಸರ್ಜನೆಗೆ ಜಾಗ ಸಿಕ್ಕಿದ್ದು, ಬಾಲ್ಯಕಾಲದ ಮಾವಿನ ಮರ, ನನ್ನ ತಾಯಿ, ನನ್ನ ಉಸಿರಾಟ, ನನ್ನ ಜೀವ ಉಳಿಸಿದ ಸಂಭಾಷಣೆಗಳು, ಬದುಕಿನಲ್ಲಿ ಬಂದು ಹೋದ ಗೆಳೆಯರು ಮೊದಲಾದ ಬಹಳಷ್ಟು ಜನರು ಹಾಗೂ ಸಂಗತಿಗಳನ್ನು ನೆನೆಸಿಕೊಂಡಿದ್ದೆ. ಮತ್ತು ನನಗೆ ನೆನಪಾದ ಪ್ರತಿಯೊಂದಕ್ಕೂ ಕೃತಜ್ಞತೆ ಸಲ್ಲಿಸಿದ್ದೆ. ಆ ಪೋಸ್ಟ್’ಗೆ ಹರಿದು ಬಂದ ಪ್ರತಿಕ್ರಿಯೆಗಳು ನನ್ನನ್ನು ಮತ್ತಷ್ಟು ಜನರೊಡನೆ ಬೆಸೆದವು. ಮತ್ತು ನನ್ನಲ್ಲಿ ಮತ್ತಷ್ಟು ಕೃತಜ್ಞತಾ ಭಾವವನ್ನು ಉದ್ದೀಪಿಸಿದವು.

ಹೀಗೆ ನಾನು ಗ್ರಾಟಿಟ್ಯೂಡ್ ಜರ್ನಲಿಂಗ್ ಅನ್ನು ಆರಂಭಿಸಿದೆ. ಈ ಬಾರಿ ನಾನು ಕೃತಜ್ಞತೆ ಸಲ್ಲಿಸುವ ಅವಕಾಶದ ಜೊತೆಗೇ ಸಂಪರ್ಕ ಕಲ್ಪಿಸುವ ಅವಕಾಶವನ್ನೂ ಸೃಷ್ಟಿಸಬೇಕೆಂದು ಯೋಚಿಸಿದ್ದೇನೆ. ಆದರೆ ಕೃತಜ್ಞತಾ ಮನೋಭಾವ ಹೆಚ್ಚಿನದಾಗಿ ಒಳಮುಖ ಪ್ರಯಾಣ. ನಮ್ಮೊಳಗನ್ನು ನಾವು ನೋಡಿಕೊಳ್ಳುವ ಪ್ರತಿಕ್ರಿಯೆ. ಆದ್ದರಿಂದ ಸದ್ಯಕ್ಕೆ ನಾನು ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಾ, ಈ ನಿಟ್ಟಿನಲ್ಲಿ ದೈನಂದಿನ ಶಿಸ್ತನ್ನು ಅಳವಡಿಸಿಕೊಳ್ಳುವ ಕುರಿತು ಪ್ರಯತ್ನ ನಡೆಸಿದ್ದೇನೆ.

ಈಬಾರಿ ಗ್ರಾಟಿಟ್ಯೂಡ್ ಚಾಲೆಂಜ್’ನಲ್ಲಿ ನಾನು ಮಾಡಬೇಕಿರುವುದು ಬಹಳಷ್ಟಿದೆ. ಆಂತರಿಕ ಅಭಿಪ್ರಾಯಗಳನ್ನು ಬಲಪಡಿಸಿಕೊಳ್ಳುವುದು, ನನ್ನನ್ನು ನಾನು ಸಮರ್ಪಕವಾಗಿ ತೊಡಗಿಸಿಕೊಳ್ಳುವುದು, ಅಂತರಂಗ - ಬಹಿರಂಗ ಘರ್ಷಣೆಯನ್ನು ಸ್ವೀಕರಿಸುವುದು, ಮನದಾಳದಲ್ಲಿ ಹುದುಗಿರುವ ನಿರುಪಯುಕ್ತ ವಿಷಯಗಳನ್ನು ಅಳಿಸಿಹಾಕುವುದು, ನನ್ನಲ್ಲಿರುವ ಭಯ , ಕಷ್ಟಗಳ ಜೊತೆ ಕೈಮಿಲಾಯಿಸುವುದು, ನಕಾರಾತ್ಮಕತೆಯ ಸುಳಿಗೆ ತಳ್ಳುತ್ತಿರುವ - ಈಗಲೂ ಹೃದಯ ಬಿರಿಯುವಂತೆ ನನ್ನೊಳಗೆ ತಳವೂರಿರುವ ಸಂಗತಿಗಳನ್ನು ತೊಡೆದುಹಾಕುವುದು – ಇತ್ಯಾದಿಗಳು ನನ್ನ ಮೂಂದಿರುವ ಸವಾಲುಗಳು.

ಗ್ರಾಟಿಟ್ಯೂಡ್ ಜರ್ನಲಿಂಗ್ ಆರಂಭಿಸಿದ ದಿನಗಳಲ್ಲಿ ನಾನು ಕೆಲಸದ ಹುಡುಕಾಟದಲ್ಲಿದ್ದೆ. ಸವಾಲನ್ನು ಸ್ವೀಕರಿಸಿದ ಹತ್ತು ದಿನಗಳವರೆಗೂ ಕೆಲಸದ ಹುಡುಕಾಟವು ಮಂದಗತಿಯಲ್ಲಿತ್ತು. ಹದಿನೈದನೆಯ ದಿನದಿಂದ ಅವಕಾಶಗಳು ಹರಿದು ಬರತೊಡಗಿದವು. ನನ್ನೊಳಗೂ ಒಂದಷ್ಟು ಬದಲಾವಣೆಗಳು ಕಂಡುಬಂದವು. ಇದೆಲ್ಲದರ ನಡುವೆ ಕೆಲವು ಅನಿರೀಕ್ಷಿತವಾದ ಕುತೂಹಲಕಾರಿ ಸಂಗತಿಗಳು ಜರುಗಿದವು. ಒಂದು ದಿನ ಬಾಲ್ಕನಿಯ ಎದುರಿನ ಮರಗಳ ನಡುವೆ ಮನಮೋಹಕವಾದ ಸೂರ್ಯೋದಯದ ದೃಶ್ಯ ಕಂಡಿತು. ನಾನು ನನ್ನ ಸಹೋದ್ಯೋಗಿಯೊಡನೆ ಸಂಘರ್ಷ ನಡೆಸುತ್ತಿದ್ದಾಗಲೇ “ಹೌ ಟು ಫೈಟ್” ಎಂಬ ಬೌದ್ಧಧರ್ಮದ ಪುಸ್ತಕ ದೊರೆಯಿತು. ಇವೆಲ್ಲವೂ ನನ್ನಲ್ಲಿ ಬದುಕನ್ನು ನೋಡುವ ದೃಷ್ಟಿಕೋನ ಬದಲಾಯಿಸಿದವು.

ಸಂಪಾದಕಿಯಾಗಿರುವ ಎಮ್ ನೇಹಾ, “ಗ್ರಾಟಿಟ್ಯೂಡ್ ಜರ್ನಲಿಂಗ್, ಸದಾ ಜಾಗೃತವಾಗಿರುವ ಅಭ್ಯಾಸ ಮಾಡಿಸಿದ್ದು, ಅದು ನನಗೆ ಖುಷಿ ಕೊಟ್ಟಿದೆ” ಅನ್ನುತ್ತಾರೆ. ನಾನು ಸ್ವತಃ ನನಗೂ ಕೃತಜ್ಞತೆ ಸಲ್ಲಿಸಿಕೊಳ್ಳುತ್ತೇನೆ ಅನ್ನುವ ನೇಹಾ, “ನನ್ನನ್ನು ನಾನು ಇಂದು ಕಾಳಜಿಯಿಂದ ನೋಡಿಕೊಂಡೆ. ಇದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ’ ಎಂಬ ಟಿಪ್ಪಣಿಯ ಮೂಲಕ ಅದನ್ನು ವ್ಯಕ್ತಪಡಿಸುತ್ತಾರಂತೆ.

ಮೈಸೂರಿನ ಫ್ರೀಲ್ಯಾನ್ಸ್ ಬರಹಗಾರ್ತಿ ಮತ್ತು ಯೋಗ ತರಬೇತುದಾರರಾದ ಪೂರ್ಣಿಮಾ, ಈ ಜರ್ನಲಿಂಗ್ ತಮಗೆ ತಮ್ಮ ಸುತ್ತ ಯಾವುದು ಹೇಗೆ ನಡೆಯುತ್ತಿದೆ ಅನ್ನುವುದನ್ನು ಗಮನವಿಟ್ಟು ಗ್ರಹಿಸಲು ಪ್ರೇರಣೆ ನೀಡಿದೆ ಅನ್ನುತ್ತಾರೆ. “ನಮ್ಮ ಬದುಕಿನ ಎಲ್ಲ ಒಳಿತನ್ನೂ ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದರಲ್ಲೂ ನಾವು ಹತಾಶರಾಗಿರುವಾಗ ನಮಗೆ ಸಹಾಯ ಮಾಡಿದ ಪ್ರತಿಯೊಂದನ್ನೂ ಸ್ಮರಿಸಬೇಕು. ಆದ್ದರಿಂದ ನಾನು ಈ ಚಾಲೆಂಜ್ ಅನ್ನು ಸ್ವೀಕರಿಸಿದೆ” ಅನ್ನುತ್ತಾರೆ ಪೂರ್ಣಿಮಾ.

ಮಕ್ಕಳು ಮತ್ತು ಪೋಷಕರ ಆಪ್ತಸಮಾಲೋಚಕರಾಗಿರುವ ಶುಭಾ ಪಾರ್ಥಸಾರಥಿ, ಕೃತಜ್ಞತೆ ಸಲ್ಲಿಸುವಂತಹ ಸದವಕಾಶವನ್ನು ಯಾರೂ ಕಳೆದುಕೊಳ್ಳಬಾರದು ಎಂದು ಹೇಳುತ್ತಾರೆ. “ಬಾಲ್ಯದಲ್ಲಿ ನನ್ನ ತಂದೆ ಕೃತಜ್ಞತೆ ಸಲ್ಲಿಸುವ ಪರಿಪಾಠವನ್ನು ಆರಂಬಿಸಿದ್ದರು. ನಾವು ಪ್ರತಿದಿನವೂ ನಾವು ಪಡೆದ ಪ್ರತಿಯೊಂದಕ್ಕೂ ಕೃತಜ್ಞತೆ ಸಲ್ಲಿಸತೊಡಗಿದೆವು. ಕ್ರಮೇಣ ಅದೊಂದು ಸಂಪ್ರದಾಯವೇ ಆಗಿಹೋಯಿತು” ಎಂದು ಅವರು ನೆನೆಯುತ್ತಾರೆ. “ಕೆಲವರು ಕೃತಜ್ಞತಾಭಾವನೆಯನ್ನು ಬರೆದಿಡುವ ಬಗ್ಗೆ ಆಕ್ಷೇಪ ತೋರುತ್ತಾರೆ. ಹಾಗೆ ಮಾಡುವುದರಿಂದ ತಮ್ಮೊಳಗೆ ಸಹಾಯ ಪಡೆದ ಅಪರಾಧಿ ಪ್ರಜ್ಞೆ ಉಂಟಾಗುತ್ತದೆ ಎಂದು ಅವರು ಹೇಳುತ್ತಾಋಎ. ವಾಸ್ತವ ಹಾಗಿಲ್ಲ. ಮೊದಲಿಗೆ ಹಾಗನ್ನಿಸಿದರೂ ಕ್ರಮೇಣ ಅದು ಸರಿಯಾಗುತ್ತದೆ. ಯಾವ ಅನುಭವ ಹೇಗಿರಬೇಕೋ ಅದು ಹಾಗೆಯೇ ಇರುತ್ತದೆ” ಅನ್ನುತ್ತಾರೆ ಶುಭಾ.

“ಕೃತಜ್ಞತೆ ಸಲ್ಲಿಸುವುದು ಮತ್ತು ಸ್ವೀಕರಿಸುವ ಪ್ರಕ್ರಿಯೆಯು ನಮ್ಮ ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಅಂಶ ವೈಜ್ಞಾನಿಕವಾಗಿ ಸಾಬೀತಾಗಿರುವ ಬಗ್ಗೆ ಒಮ್ಮೆ ಓದಿದ್ದೆ. ಅಂದಿನಿಂದ ನಾನು ಅದನ್ನು ಪಾಲಿಸುತ್ತಾ ಬಂದಿದ್ದೇನೆ” ಎನ್ನುತ್ತಾರೆ ರೇವತಿ ರಮಣನ್. ತಾವು ಪ್ರತಿದಿನವೂ ಟ್ವೀಟ್ ಮಾಡುವ ಮೂಲಕ ತಮ್ಮ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಅವರು ಹೇಳಿಕೊಳ್ಳುತ್ತಾರೆ. “ನಾನು ನನ್ನ ಸುತ್ತಲಿನ ನಕಾರಾತ್ಮಕ ಪ್ರತಿಕ್ರಿಯೆಗಳಿಂದ ಕುಗ್ಗಿಹೋಗಿದ್ದೆ.

ಅವಳಿ ಮಕ್ಕಳನ್ನು ಸಂಭಾಳಿಸುವುದರ ಜೊತೆಗೆ ಹೊರಗೆ ಹೋಗಿ ಕೆಲಸವನ್ನು ಮಾಡುವ ಒತ್ತಡವೂ ಇರುತ್ತಿತ್ತು. ಆದರೆ, ನನ್ನ ಮನಸ್ಥಿತಿಯಲ್ಲಿ ಬದಲಾವಣೆ ಮಾಡಿಕೊಂಡ ನಂತರ ನನಗೆ ರಾತ್ರಿಯ ವೇಳೆ ನೆಮ್ಮದಿಯಿಂದ ನಿದ್ರಿಸುವುದು ಸಾಧ್ಯವಾಗುತ್ತಿದೆ” ಅನ್ನುವ ರೇವತಿ, “ಇದು ಕೃತಜ್ಞತೆ ಸಲ್ಲಿಸುವುದಕ್ಕಿಂತ, ಯಾವುದಕ್ಕೆ ಕೃತಜ್ಞರಾಗಿರಬೇಕು ಅನ್ನುವ ಅರಿವನ್ನು ನಮ್ಮಲ್ಲಿ ಮೂಡಿಸುತ್ತದೆ. ನನ್ನೊಳಗೆ ಕೃತಜ್ಞತಾ ಭಾವನೆ ಮೂಡಿದಾಗ ನನ್ನ ಪರಿಸರವೂ ಬದಲಾಗುತ್ತದೆ. ಹಾಗಂತ ನನ್ನ ಸುತ್ತಲಿನ ಯಾವುದೂ ಬದಲಾಗುವುದಿಲ್ಲ, ನಾನು ಬದಲಾಗಿರುತ್ತೇನೆ!” ಅನ್ನುತ್ತಾರೆ.

ನನ್ನ ಪ್ರಕಾರ ಕೃತಜ್ಞತಾ ಮನೋಭಾವವನ್ನು ರೂಢಿಸಿಕೊಳ್ಳುವುದು ಅಂದರೆ; ನಮ್ಮೊಳಗಿರುವ ಅನುಕಂಪ, ವಾಸ್ತವ ಪ್ರಜ್ಞೆ, ಸೂಕ್ಷ್ಮತೆ ಮತ್ತು ಜೀವನವನ್ನು ಅದು ಬಂದ ಹಾಗೆ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು. ಆಯಾ ಸಂದರ್ಭದಲ್ಲಿ ಬದುಕು ನಮಗೆ ಏನನ್ನು ನೀಡುತ್ತದೆಯೋ ಅದಕ್ಕೆ ಸ್ಪಂದಿಸುವುದು ಮತ್ತು ಸಮರ್ಪಕವಾಗಿ ನಿಭಾಯಿಸುವುದು. ಹೀಗೆ ನಮಗೇನು ದೊರೆಯುತ್ತದೆಯೋ ಅದಕ್ಕೆ ಕೃತಜ್ಞರಾಗಿರುವುದನ್ನು ರೂಢಿಸಿಕೊಂಡರೆ ನಾವು ಸಂತೃಪ್ತಿಯಿಂದ ಜೀವಿಸುವುದೂ ಸಾಧ್ಯವಾಗುತ್ತದೆ. ಕೃತಜ್ಞತಾ ಮನೋಭಾವ ಕೋಣೆಯನ್ನು ಬೆಳಗುವ ಬಲ್ಬ್ ಅನ್ನು ಹೊತ್ತಿಸುವ ಸ್ವಿಚ್ ಇದ್ದಹಾಗೆ.

ಅದನ್ನು ಒತ್ತಿದೊಡನೆಯೇ ಕೋಣೆಯು ಬೆಳಗಿ, ಎಲ್ಲೆಲ್ಲಿ ಏನೇನಿದೆ ಎನ್ನುವುದು ಗೋಚರಿಸುತ್ತವೆ. ಹಾಗೆಯೇ ಕೃತಜ್ಞತೆ ಕೂಡಾ ನಾವು ಪಡೆದಿರುವ ಅವಕಾಶಗಳು, ಸಹಕಾರ, ಕೊಡುಗೆ, ಸಹಾನುಭೂತಿ ಇತ್ಯಾದಿ ಎಲ್ಲವೂ ಸ್ಪಷ್ಟವಾಗಿ ತೋರುವಂತೆ ಮಾಡುತ್ತದೆ.   ಹೀಗೆ ಕೃತಜ್ಞತಾ ಮನೋಭಾವವು ತೋರಿಸಿಕೊಡುವ ಕೋಣೆಯ ದೂಳು ಹೊಡೆದು, ಕಸ ತೆಗೆದು, ಓರಣ ಮಾಡಿ, ವಾಸಯೋಗ್ಯವನ್ನಾಗಿ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಪ್ರತಿನಿತ್ಯವೂ ಕೃತಜ್ಞತಾ ಮನೋಭಾವವನ್ನು ತೋರ್ಪಡಿಸುವ ರೂಢಿ ಮಾಡಿಕೊಂಡರೆ, ಈ ಕೆಲಸವೂ ನಮಗೆ  ಸುಲಭವಾಗಿಬಿಡುತ್ತದೆ.