ನೀವು ನಿಮ್ಮ ಭಾವನೆಗಳನ್ನು, ಅನುಭವಗಳನ್ನು ಸುಲಭವಾಗಿ ಹಂಚಿಕೊಳ್ಳುತ್ತೀರಾ? ಅಥವಾ ಉಳಿದವರನ್ನು ನಿಮ್ಮ ಭಾವನೆಗಳಿಂದ ದೂರವೇ ಇಡುತ್ತೀರಾ? ನಿಮ್ಮ ಅಂತರಂಗದ ಸಂತೋಷ, ಗುರಿ ಮತ್ತು ಹತಾಶೆಯನ್ನು ಹಂಚಿಕೊಳ್ಳುವುದು ನಿಮಗೆ ಎಷ್ಟು ಕಷ್ಟದ ಕೆಲಸ? ಈ ಪ್ರಶ್ನೆಗಳಿಗೆ ನೀವು ಕೊಡುವ ನಿಮ್ಮ ತೀವ್ರ ಸ್ವರೂಪದ ಉತ್ತರವು ನಿಮ್ಮ ಸಂತೋಷದ ಮೇಲೆ ಪ್ರಬಾವ ಬೀರಬಲ್ಲದು ಎಂಬುದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತಾಗಿದೆ. ಈ ವಿಷಯದಲ್ಲಿ ಕೆನಡಾ ಮೂಲದ ಮನಃಶಾಸ್ತ್ರಜ್ಞ ಡಾ. ಸಿಡ್ನಿ ಜೊರಾರ್ಡ್ ರವರ ಕಾರ್ಯವು ಶ್ಲಾಘನೀಯವಾಗಿದೆ. ಸುಮಾರು 50 ವರ್ಷಗಳ ಹಿಂದೆಯೆ ಅವರು ಸ್ವ-ಅಭಿವ್ಯಕ್ತಿಯ ಪರಿಕಲ್ಪನೆಯನ್ನು ರೂಪಿಸಿದ್ದರು.
1974ರಲ್ಲಿ ಅವರು ಹಠಾತ್ ಸಾವಿಗೀಡಾಗಿದ್ದರೂ, ಅವರ ಈ ಪರಿಕಲ್ಪನೆಯು ಅಂತರಾಷ್ಟ್ರೀಯ ಮಟ್ಟದ ಮನಃಶಾಸ್ತ್ರ ಅಧ್ಯನವನ್ನಲ್ಲದೇ, ನಾಗರೀಕತೆಯ ಮೇಲೂ ಗಾಢ ಪರಿಣಾಮ ಬೀರಿತು. ಜೊರಾರ್ಡ್ ರವರು ಊಹಿಸಿದಂತೆ ನಮ್ಮನ್ನು ನಾವು ಇನ್ನೊಬ್ಬರಿಗೆ ಎಷ್ಟು ತೆರೆದುಕೊಳ್ಳುತ್ತೇವೆ ಎಂಬುದು ನಮ್ಮ ಸಾಮಾಜಿಕ ಸಂಬಂಧ ಮತ್ತು ಸಂತೋಷದ ಮೇಲಲ್ಲದೇ ಬಹುಶಃ ನಮ್ಮ ದೈಹಿಕ ಆರೋಗ್ಯದ ಮೇಲೆಯೂ ಪ್ರಭಾವ ಬೀರಬಲ್ಲದು.
ಕುತೂಹಲಕಾರಿ ವಿಷಯವೆಂದರೆ, ವ್ಯಕ್ತಿತ್ವ ಮತ್ತು ನಡವಳಿಕೆ ಕುರಿತ ಅಧ್ಯಯನದ ಪ್ರಮುಖ ಸ್ಥಾಪಕರು ಕೂಡಾ ಈ ವಿಷಯದ ಬಗ್ಗೆ ಹೆಚ್ಚೇನೂ ತಿಳಿಸಿಲ್ಲ. ಸಿಗ್ಮಂಡ್ ಫ್ರಾಯ್ಡ್ ಅವರಿಗೆ ಲೈಂಗಿಕ ವಾಂಛೆಯ ದಮನವೇ ಯಾವಾಗಲೂ ಪ್ರಮುಖ ಕಾರಣವಾಗಿ ತೋರುತ್ತಿತ್ತು. ಅವರ ಸಹೋದ್ಯೋಗಿಯಾದ ಆಲ್ಫ್ರೇಡ್ ಆಡ್ಲರ್ ಗೆ ನಮಗೆ ಜನ್ಮಜಾತವಾಗಿ ಬಂದ ಯಜಮಾನಿಕೆ ಮತ್ತು ಅಧಿಕಾರದ ಆಕಾಂಕ್ಷೆಯೇ ಮುಖ್ಯ ವಿಷಯ. 20ನೆಯ ಶತಮಾನದ ಇನ್ನೊಬ್ಬ ಪ್ರಮುಖ ವ್ಯಕ್ತಿ ಕಾರ್ಲ್ ಯೂಂಗ್ ಅವರಿಗಂತೂ ನಮ್ಮನ್ನು ನಾವು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಅರಿಯುವ ಆಸಕ್ತಿಯೇ ಇರಲಿಲ್ಲ.
ಅಮೇರಿಕನ್ ಸೈಕಾಲಜಿಯ ಸಂಸ್ಥಾಪಕನಾದ ವಿಲಿಯಮ್ ಜೇಮ್ಸ್ ಇದೇ ಶೀರ್ಷಿಕೆಯ ಜನಪ್ರಿಯ ಪುಸ್ತಕದಲ್ಲಿ ವಿವಿಧ ತೆರನಾದ ಧಾರ್ಮಿಕ ಅನುಭವಗಳ ಬಗ್ಗೆ ಬರೆದರೂ ಆತ್ಮೀಯ ಸಂಬಂಧಗಳಿಗೆ ಹೆಚ್ಚೇನೂ ಗಮನ ನೀಡಿಲ್ಲ. ಅಮೇರಿಕಾದ ಖ್ಯಾತ ನಡವಳಿಕೆ ತಜ್ಞರಾದ ಜಾನ್ ಬಿ ವ್ಯಾಟ್ಸನ್ ಮತ್ತು ನಂತರ ಬಿ ಎಫ್ ಸ್ಕಿನ್ನರ್ ರವರು ಪ್ರಯೋಗಾಲಯದಲ್ಲಿ ಇಲಿ ಮತ್ತು ಪಾರಿವಾಳಗಳನ್ನು ಬಳಸಿ ಪ್ರಯೋಗಗಳನ್ನು ನಡೆಸಿದರು. ಅಲ್ಲಿಯೂ ಭಾವನಾತ್ಮಕ ಅನ್ಯೋನ್ಯತೆಯ ಬಗ್ಗೆ ತಿಳಿಯಲು ಅವಕಾಶವಿರಲಿಲ್ಲ.
1950ರ ದಶಕದ ಅಂತ್ಯದಲ್ಲಿ ಸೈಕಾಲಜಿ ಕ್ಷೇತ್ರದಲ್ಲಿ ಆರೋಗ್ಯಕರ ಆತ್ಮೀಯ ಸಂಬಂಧಗಳ ಬಗ್ಗೆ ಸರಿಯಾದ ಪರಿಕಲ್ಪನೆಯಿಲ್ಲದಿರುವುದು ತಿಳಿಯಿತು. ಮತ್ತು ಸಿಡ್ನಿ ಜೋರಾರ್ಡ್ ಈ ಅಂತರವನ್ನು ತುಂಬಲು ಸಹಾಯ ಮಾಡಿದರು. ಆದರೆ ಅವರು ಯಾವುದೇ ಆತ್ಮಚರಿತ್ರೆಯನ್ನು ಬಿಟ್ಟುಹೋಗಿರಲಿಲ್ಲ. ಆದ್ದರಿಂದ ಅವರ ಈ ಕಾರ್ಯಕ್ಕೆ ಆಧಾರವಾದ ವಿಷಯ ಯಾವುದೆಂದು ತಿಳಿಯುವುದು ಕಷ್ಟವಾಗಿದೆ. ಅವರ ಮಗನು ಆನ್ ಲೈನ್ ನಲ್ಲಿ ನೀಡಿದ ಮಾಹಿತಿಯ ಪ್ರಕಾರ, ಜೋರಾರ್ಡ್ ರವರು ರಷಿಯನ್/ಜ್ಯುವಿಷ್ ವಲಸಿಗರಿಗೆ ಕೆನಡಾದಲ್ಲಿ ಜನಿಸಿದ್ದರು ಮತ್ತು ಗ್ರೇಟ್ ಡಿಪ್ರೆಶನ್ ಅವಧಿಯಲ್ಲಿ ದೊಡ್ಡ ಕುಟುಂಬದಲ್ಲಿ ಬೆಳೆದರು. ಅವರ ಕುಟುಂಬವು 5 ಒಡಹುಟ್ಟಿದವರು, ಒಬ್ಬ ಆಂಟಿಯನ್ನು ಒಳಗೊಂಡಿತ್ತು. ಅಲ್ಲದೇ ಸ್ಥಿತಿವಂತರಾದ ಅವರ ಪಾಲಕರ ಬಳಿಗೆ ಆಗಾಗ ಹಲವು ಸಂಬಂಧಿಕರು ಬರುತ್ತಿದ್ದರು. ಅವರ ಪಾಲಕರು ಟೊರೆಂಟೊದಲ್ಲಿ ಬಟ್ಟೆ ಅಂಗಡಿಯನ್ನು ಹೊಂದಿದ್ದರು. ಅವರ ಬಾಲ್ಯವು ಖುಷಿಯಿಂದ ಕೂಡಿತ್ತು. ಅವರಿಗೆ ಹಲವು ಸ್ನೇಹಿತರಿದ್ದರು ಮತ್ತು ಜೀವಿತದುದ್ದಕ್ಕೂ ತಮ್ಮ ತಾಯಿಗೆ ಹತ್ತಿರವಾಗಿದ್ದರು.
ಸೈಕಾಲಜಿಯಲ್ಲಿ ತಮ್ಮ ಡಾಕ್ಟರೇಟ್ ಪದವಿ ಪಡೆದ 5 ವರ್ಷಗಳ ನಂತರ ಜೋರಾರ್ಡ್ ರವರು ಸ್ವ-ಅಭಿವ್ಯಕ್ತಿಯ ಬಗ್ಗೆ ತಮ್ಮ ಮೊದಲ ವೃತ್ತಿಪರ ಪ್ರಬಂಧವನ್ನು ಬರೆದರು. ಈ ಅಧ್ಯಯನದಲ್ಲಿ ಜೊರಾರ್ಡ್ ಮತ್ತು ಅವರ ಸಹದ್ಯೋಗಿಯಾದ ಡಾ. ಪಾಲ್ ಲಾಸಾಕೊವ್ ಅವರು ಈ ವಿಷಯದ ಮೊದಲ ಪ್ರಶ್ನಾವಳಿಗಳನ್ನು ತಯಾರಿಸಿದರು ಮತ್ತು ಅಂದಿನಿಂದ ಇಲ್ಲಿಯವರೆಗೂ ಈ ವಿಷಯದ ಸಂಶೋಧಕರಿಗೆ ಇದು ಮಾದರಿಯಾಗಿದೆ.
ಮುಂದಿನ ವರ್ಷ ಜೋರಾರ್ಡ್ ರವರು ಸ್ವ-ಅಭಿವ್ಯಕ್ತಿಯ ಕುರಿತು ವಿವರವಾದ ಸೈದ್ಧಾಂತಿಕ ಪತ್ರಿಕೆಯನ್ನು ಹೊರಡಿಸಿದರು. ಇದು ಬಹಳ ಪ್ರಭಾವವನ್ನು ಬೀರಿತು. ನಂತರ ಅವರ 30ರ ದಶಕದಲ್ಲಿ, “ಪ್ರೀತಿಸುವುದು, ಸೈಕೋಥೆರಪಿ, ಆಪ್ತಸಮಾಲೋಚನೆ, ಶಿಕ್ಷಣ ಮತ್ತು ಆರೈಕೆಯು ಫಲಾನುಭವಿಗಳು ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳದಿದ್ದರೆ ಯಶಸ್ವಿಯಾಗುವುದಿಲ್ಲ. ಸ್ವ-ಅಭಿವ್ಯಕ್ತಿಯ ಮೂಲಕ ವ್ಯಕ್ತಿಗಳು ತಾವು ಯಾರು, ಏನು, ಎಲ್ಲಿಯವರು ಎಂದು ಹೇಳಿಕೊಳ್ಳುತ್ತಾನೆ. ಉಷ್ಣತಾ ಮಾಪಕ, ಸ್ಪೈಗ್ಮೋಮ್ಯಾನೋಮೀಟರ್ ಮುಂತಾದವುಗಳು ದೇಹದ ಪರಿಸ್ಥಿತಿಯ ನೈಜ ಮಾಹಿತಿಯನ್ನು ನೀಡುವಂತೆ ಸ್ವ-ಅಭಿವ್ಯಕ್ತಿಯಿಂದ ವ್ಯಕ್ತಿಯ ನೈಜ ರೂಪವು ತಿಳಿಯುತ್ತದೆ. ನಿಮ್ಮ ಸಂಗಾತಿ, ಮಗು ಅಥವಾ ಸ್ನೇಹಿತರು ತಮ್ಮ ಬಗ್ಗೆ ತಿಳಿಯಲು ನಿಮಗೆ ಅವಕಾಶ ನೀಡದಿದ್ದರೆ ನೀವು ಅವರನ್ನು ಪ್ರೀತಿಸಲು ಸಾಧ್ಯವಾಗುವುದಿಲ್ಲ,” ಎನ್ನುತ್ತಾರೆ ಜೊರಾರ್ಡ್.
ಜೊರಾರ್ಡ್ ರವರು ದೈನಂದಿನ ಜೀವನದಲ್ಲಿ ಸ್ವ-ಅಭಿವ್ಯಕ್ತಿಯ ಪಾತ್ರದ ಕುರಿತು ಹಲವಾರು ಪುಸ್ತಕಗಳನ್ನು ತಂದರು. ಇವುಗಳೆಂದರೆ: Transparent Self (ಇದು ಅವರ ಅತಿ ಜನಪ್ರಿಯ ಪುಸ್ತಕ), Disclosing Man to Himself, Self-Disclosure: ಅಲ್ಲಿಂದ ಹಲವಾರು ಮನಃಶಾಸ್ತ್ರೀಯ ಅಧ್ಯಯನಗಳು ಇವರ ಅಭಿಪ್ರಾಯವನ್ನು ಮನ್ನಿಸಿದವು. ಮುಖ್ಯವಾಗಿ ಆತ್ಮೀಯ ಪ್ರಣಯ ಭರಿತ ಸಂಬಂಧಗಳಲ್ಲಿ - ಉದಾಹರಣೆಗೆ, ಮದುವೆ - ಪುರುಷ ಮತ್ತು ಮಹಿಳೆಯರಿಬ್ಬರೂ ಹೆಚ್ಚಿನ ಸ್ವ-ಅಭಿವ್ಯಕ್ತಿಯಿಂದ ಮುಕ್ತವಾಗಿ ಇನ್ನೊಬ್ಬರೊಂದಿಗೆ ಎಲ್ಲವನ್ನೂ ಹಂಚಿಕೊಂಡಾಗ ಸಂತೃಪ್ತಿಯಿಂದ ಇರಬಲ್ಲರು. ಅಲ್ಲದೇ ತಮ್ಮ ಸಂಗಾತಿಯು ತನ್ನಲ್ಲಿ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುವರು ಎಂಬ ಭಾವನೆಯಿರಬೇಕು.
ಪತಿ-ಪತ್ನಿಯರು ಎಷ್ಟೆಷ್ಟು ಒಬ್ಬರಿಗೊಬ್ಬರು ಭಾವನಾತ್ಮಕವಾಗಿ ತೆರೆದುಕೊಳ್ಳುತ್ತ ಹೋಗುತ್ತಾರೆಯೋ ಅಷ್ಟಷ್ಟು ಹತ್ತಿರವಾಗುತ್ತ ಹೋಗಿ ಹೊಂದಿಕೊಳ್ಳತೊಡಗುತ್ತಾರೆ. ಸಂಸ್ಕೃತಿಯ ಬಲವಾದ ಬೇರುಗಳು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಪಾತ್ರವಹಿಸುತ್ತವೆ ಎಂದು ಸಂಶೋಧನೆಗಳು ನಿರಂತರವಾಗಿ ತೋರಿಸುತ್ತಲೇ ಬಂದಿವೆ. ಉದಾಹರಣೆಗೆ, ಲ್ಯಾಟಿನ್ ಅಮೇರಿಕನ್ನರು ಉತ್ತರ ಅಮೇರಿಕನ್ ಜನರಿಗಿಂತ ಹೆಚ್ಚು ಹಂಚಿಕೊಳ್ಳಬಲ್ಲರು, ಎಂಬುದನ್ನು ಅಧ್ಯಯನಗಳು ತೋರಿಸಿವೆ.
ಆದರೆ ಎರಡೂ ಸಂಸ್ಕೃತಿಯ ಜನರು ಕೌಟುಂಬಿಕ ಸಂಘರ್ಷ ಮತ್ತು ಲೈಂಗಿಕತೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಲ್ಯಾಟಿನ್ ಅಮೇರಿಕನ್ನರು ತಮ್ಮ ವೈಯಕ್ತಿಕ ಸಂಗೀತದ ಅಭಿರುಚಿ, ಸಿನಿಮಾ ಮತ್ತು ಹವ್ಯಾಸ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಭಾರತದಲ್ಲಿ ಸ್ವ-ಅಭಿವ್ಯಕ್ತಿಯ ಬಗ್ಗೆ ಬಹಳ ಕಡಿಮೆ ಸಂಶೋಧನೆಗಳು ನಡೆದಿವೆ. ಆದರೆ ಪುರಾವೆಗಳ ಪ್ರಕಾರ ವಿಶ್ವಾಸ ಪಾತ್ರ ವ್ಯಕ್ತಿಗಳಲ್ಲಿ ಭಾವನೆಗಳನ್ನು ಹಂಚಿಕೊಳ್ಳುವುದನ್ನು ಧನಾತ್ಮಕವಾಗಿ ಪರಿಗಣಿಸಲಾಗುತ್ತದೆ.
ಮನಃಶಾಸ್ತ್ರಜ್ಞರು ಸ್ವ-ಅಭಿವ್ಯಕ್ತಿಗೆ ಪರಸ್ಪರ ಪ್ರತಿಸ್ಪಂದಕ ಗುಣವಿರುವುದನ್ನು ಗಮನಿಸಿದ್ದಾರೆ. ಆದ್ದರಿಂದಲೇ “ವಿವಾಹದಲ್ಲಿನ ಸಂತೋಷವು ಸಂಪೂರ್ಣವಾಗಿ ಸಂಭವನೀಯ ಸಾಧ್ಯತೆಯಾಗಿರುತ್ತದೆ”, ಎಂದು 19ನೆಯ ಶತಮಾನದ ಬ್ರಿಟಿಷ್ ಕಾದಂಬರಿಕಾರ್ತಿ ಜೇನ್ ಆಸ್ಟಿನ್ ಹೇಳಿರುವುದನ್ನು ಕೇವಲ ಹಳಹಳಿಕೆಯೆಂದು ಅಪಾರ್ಥಮಾಡಿಕೊಂಡಂತಿದೆ.
ಅಂದರೆ ಯಾರಾದರೂ ತಮ್ಮ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಾಗ ನಾವೂ ಕೂಡ ಹೆಚ್ಚಾಗಿ ಪ್ರತಿಸ್ಪಂದಿಸುತ್ತೇವೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಅದು ಇನ್ನೊಬ್ಬ ವ್ಯಕ್ತಿಯು ಇನ್ನಷ್ಟು ಆಳವಾಗಿ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಇತ್ತೀಚಿನ ಸಂಶೋಧನೆಗಳು ಸೋಷಿಯಲ್ ಮೀಡಿಯಾ ಮತ್ತು ಡೇಟಿಂಗ್ ವೆಬ್ ಸೈಟುಗಳಲ್ಲಿ ನಡೆಯುವ ಆನ್ ಲೈನ್ ಸಂವಹನದಲ್ಲಿಯೂ ಈ ಪ್ರಕ್ರಿಯೆ ನಡೆಯುವುದನ್ನು ಗುರುತಿಸಿದೆ.
ಸ್ವ-ಅಭಿವ್ಯಕ್ತಿಯು ಕೇವಲ ರೊಮ್ಯಾಂಟಿಕ್ ಸಂಬಂಧದಲ್ಲಿ ಮಾತ್ರವಲ್ಲದೇ ಪಾಲಕರು ಮತ್ತು ಮಕ್ಕಳ ನಡುವೆ ಭಾವನಾತ್ಮಕ ಸಂಬಂಧವೇರ್ಪಡುವುದಕ್ಕೂ ಅಗತ್ಯವಾಗಿದೆ. ನಾನು ಮತ್ತು ನನ್ನ ಸಹದ್ಯೋಗಿಗಳು ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ ಕಾಲೇಜು ವಿದ್ಯಾರ್ಥಿಗಳು ಪ್ರತ್ಯೇಕವಾಗಿರುವ ಪಾಲಕರಿಗೆ ಹೋಲಿಸಿದರೆ ತಮ್ಮ ಬಾಲ್ಯ, ಹದಿಹರೆಯದ ಬಗ್ಗೆ ನೆನಪಿಸಿಕೊಳ್ಳುವ ತಾಯಿ ತಂದೆಯರಿಗೆ ಹೆಚ್ಚು ಹತ್ತಿರವಾಗಿರುತ್ತಾರೆ. ಸ್ವ-ಅಭಿವ್ಯಕ್ತಿಯುಳ್ಳ ಪಾಲಕರ ಮಕ್ಕಳು ತಮ್ಮ ಸಮಸ್ಯೆಯ ಪರಿಹಾರಕ್ಕೆ ಅಥವಾ ಸಲಹೆಗೆ ಪಾಲಕರ ಬಳಿ ಬರಲು ಹಿಂಜರಿಯುವುದಿಲ್ಲ.
ನಿಮ್ಮ ಮಕ್ಕಳು ನಿಮಗೆ ಆತ್ಮೀಯರಾಗಿರಬೇಕೆಂದರೆ ಮತ್ತು ನಿಮ್ಮ ಮಾರ್ಗದರ್ಶನವನ್ನು ಪಡೆಯಬೇಕೆಂದರೆ ಅವರ ಬಳಿ ನಿಮ್ಮ ಜೀವನದ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಇದರರ್ಥ ಎಲ್ಲವನ್ನೂ ಹೇಳಬೆಂಕೆಂದೇ? ಖಂಡಿತ ಅಲ್ಲ. ಜೊರಾರ್ಡ್ ಹೇಳಿದಂತೆ ಬೇರೆಯವರಿಗೆ- ಪಾಲಕರಾಗಿ ಸಂಗಾತಿ, ಸ್ನೇಹಿತ ಅಥವಾ ಸಹದ್ಯೋಗಿ- ಎಷ್ಟನ್ನು ಹೇಳಬೇಕೆಂಬ ಬಗ್ಗೆ ಸ್ಪಷ್ಟ ನಿರ್ಧಾರವಿರಬೇಕು. ಮುಖ್ಯವಾಗಿ ಕೆಲಸದ ಜಾಗದಲ್ಲಿ ಏನನ್ನು ಹಂಚಿಕೊಳ್ಳಬಹುದು ಎಂಬ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮನಃಶಾಸ್ತ್ರಜ್ಞರು ಸೂಚಿಸುತ್ತಾರೆ.
ಅಂತರಂಗದಲ್ಲಿರುವುದನ್ನು ಹೊರಹಾಕುವುದರಿಂದ ನಮಗೆ ಲಾಭವಿದೆ. ಇದನ್ನು ಹೇಗೆ ಸಾಧಿಸುವುದು? ಸಣ್ಣ ವಿಷಯದಿಂದ ಆರಂಭಿಸಿ. ಉದಾಹರಣೆಗೆ ನಿಮ್ಮ ಮೇಲೆ ಪರಿಣಾಮ ಬೀರಿದ ಇತ್ತೀಚಿನ ಟಿವಿ ಕಾರ್ಯಕ್ರಮ, ಸಿನಿಮಾ ಅಥವಾ ಪುಸ್ತಕ. ನೆನಪಿಡಿ: ಬೌದ್ಧಿಕರಣಗೊಳಿಸಬೇಡಿ ಬದಲಿಗೆ ಭಾವನೆಗಳಿಗೆ ಗಮನ ಕೊಡಿ.