We use cookies to help you find the right information on mental health on our website. If you continue to use this site, you consent to our use of cookies.

ನಿಮ್ಮ ಮನಸ್ಸಿನ ಯೋಗಕ್ಷೇಮ ಹೇಗಿದೆ?

ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಂಡು ಅದಕ್ಕೆ ಪ್ರಾಮುಖ್ಯತೆ ನೀಡುವುದು ಅಗತ್ಯ

ಡಾ.ಎಸ್.ಕಲ್ಯಾಣಸುಂದರಂ

ಸಕಾರಾತ್ಮಕ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮ ಎಂಬ ಪದಗಳನ್ನು ಸಾಮಾನ್ಯವಾಗಿ ಬಳಸುತ್ತಿರುತ್ತೇವೆ. ಆರೋಗ್ಯ ಎಂಬುದು ಸಂತೋಷಕ್ಕಿಂತ ಮಿಗಿಲಾಗಿದ್ದು. ಮಾನಸಿಕ ಆರೋಗ್ಯ ಒಂದು ಯೋಗಕ್ಷೇಮದ ಸ್ಥಿತಿಯಾಗಿದ್ದು ಪ್ರತಿಯೊಬ್ಬರು ವೈಯಕ್ತಿಕವಾಗಿ ಅವನ/ಅವಳ ಶಕ್ತಿಯನ್ನು ಅರಿತುಕೊಳ್ಳುವುದು, ಬದುಕಿನ ಒತ್ತಡಕ್ಕೆ ಸಾಮಾನ್ಯವಾಗಿ ಸ್ಪಂದಿಸುವುದು, ಶಾಂತವಾಗಿ ಕೆಲಸ ಮಾಡುವುದು, ತನ್ನ ಸಮುದಾಯಕ್ಕೆ ಕೊಡುಗೆ ನೀಡುವುದು ಎಂದು  ವಿಶ್ವ  ಆರೋಗ್ಯ ಸಂಸ್ಥೆ ವಿವರಿಸುತ್ತದೆ.

ನಾವು ಮಾನಸಿಕವಾಗಿ ಆರೋಗ್ಯಯುತವಾಗಿದ್ದೇವೆ ಎಂದು ಹೇಗೆ ತಿಳಿಯುವುದು? ಇದು ನಾವಾಗಿಯೇ ನಮ್ಮನ್ನು ಅರ್ಥೈಸಿಕೊಳ್ಳುವುದರಿಂದ ಆರಂಭವಾಗುತ್ತದೆ. ನಮ್ಮ ಸಾಮರ್ಥ್ಯವೇನು ಮತ್ತು ಯಾವುದೇ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡಬಹುದು ಎಂಬ ತಿಳುವಳಿಕೆ ಇರಬೇಕು.

ಮಾನಸಿಕ ಯೋಗಕ್ಷೇಮ ಕೇವಲ ಯಾವಾಗಲೂ ಸಂತಸದಿಂದಿರುವುದಲ್ಲ. ಜೀವನದ ಪಯಣದಲ್ಲಿ ಯಾವುದೇ ಘಟನೆ ಸಂಭವಿಸಿದರೂ, ಎಲ್ಲವನ್ನು ನಿರ್ಭಯವಾಗಿ ಎದುರಿಸಬಲ್ಲ ಸಾಮರ್ಥ್ಯವಿರಬೇಕು. ಕಷ್ಟ ಸಂಕಟ ಬಂದಾಗ ಪ್ರತಿ ಸಲ ಚೇತರಿಸಿಕೊಂಡು ಜೀವನವನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವುದೇ ಮಾನಸಿಕ ಸ್ವಾಸ್ಥತೆಯ ಗುಣಲಕ್ಷಣಗಳು.

ಮಾನಸಿಕ ಯೋಗಕ್ಷೇಮವನ್ನು ಪ್ರತ್ಯೇಕವಾಗಿ ಹೊಂದಲು ಸಾಧ್ಯವಿಲ್ಲ. ನಮ್ಮ ಮಾನಸಿಕ ಸ್ವಾಸ್ತ್ಯವು ಇತರರೊಂದಿಗಿರುವ ನಮ್ಮ ಸಂಬಂಧ ಹಾಗೂ ನಮ್ಮ ಸ್ವಂತ ಭಾವನೆಯ ಮೇಲೆ ಆಧಾರಿತವಾಗಿದೆ. ನಮ್ಮ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯಕ್ಕೆ ನಮ್ಮ ಪ್ರೀತಿ ಪಾತ್ರರ ನೆರವು ಮುಖ್ಯ ಮತ್ತು ಈ ಸತ್ಯಾಂಶವನ್ನು ನಾವು ಅಂಗೀಕರಿಸಬೇಕು. ಮಾನಸಿಕ ಸ್ವಾಸ್ತ್ಯವು
ನಮ್ಮ ಘನತೆ ಮತ್ತು ನಾವು ಇತರರಿಗೆ ಗೌರವ ಸಲ್ಲಿಸುವುದರ ಮೇಲೆಯೂ ಸಹ ನಿರ್ಧರಿಸಿದೆ.

ತೀವ್ರವಾದ ಮಾನಸಿಕ ಖಾಯಿಲೆ ಒಬ್ಬರ ಜೀವನಶೈಲಿಯ ಮೇಲೆ ಒಂದಷ್ಟು ಮಿತಿಗಳನ್ನು ವಿಧಿಸುತ್ತದೆ. ಮಾನಸಿಕವಾಗಿ ಆರೋಗ್ಯವಂತರಾಗಿರುವುದೆಂದರೆ ಒಂದು ಘನತೆಯುತ ಜೀವನ ನಡೆಸುವುದು. ಸವಾಲುಗಳನ್ನು ಸ್ವೀಕರಿಸಲು ಮತ್ತು ಕಷ್ಟಗಳನ್ನು ಎದುರಿಸಲು ಸಿದ್ಧರಾಗಿರುವುದು. ಕೆಳಕಂಡ ಪ್ರಕರಣ ಅದನ್ನು ವಿವರಿಸುತ್ತದೆ.

೫೨ ವರ್ಷದ ಶ್ರೀರಾಮ್ ಕಳೆದ ೨೫ ವರ್ಷಗಳಿಂದ ಮನೋವ್ಯಾದಿಯಿಂದ ಬಳಲುತ್ತಿದ್ದಾರೆ. ಅವರು ಅಮೆರಿಕದಲ್ಲಿ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟ್‌ರೇಟ್ ಮಾಡುವಾಗ ಈ ಖಾಯಿಲೆಯ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡವು. ಅವರ ಚಲನವಲನಗಳು ಬದಲಾದವು. ಇದನ್ನು ತಾಳಲಾರದೆ ಅವರು ಭಾರತಕ್ಕೆ ಹಿಂದಿರುಗಿದರು. 

ಅವರಿಗೆ ಸೈಕ್ಯಾಟ್ರಿಕ್ ಚಿಕಿತ್ಸೆ ಆರಂಭಿಸಿದ ಬಳಿಕ ಮತ್ತು ಚಿಕಿತ್ಸೆ ಮುಂದುವರಿದಾಗ ಅವರು ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಾರಂಭಿಸಿದರು. ಸಹಜ ಬದುಕಿಗೆ ಮರಳಲು ಆರಂಭಿಸಿದರು. ಸೂಕ್ತ ಉದ್ಯೋಗ ಪಡೆಯಲು ವಿಫಲರಾದರು. ಆದರೆ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಪ್ರಾಧ್ಯಾಪಕರಾಗುವ ಅವಕಾಶ ದೊರೆಯಿತು. ಮದುವೆಯಾದರು. ಈಗ ಬೆಳೆದು ನಿಂತ ಮಗನನ್ನು ಹೊಂದಿದ್ದಾರೆ.

ಅವರು ನಿಧಾನವಾಗಿ ಆತ್ಮವಿಶ್ವಾಸ ಗಳಿಸಲು ಆರಂಭಿಸಿದರು. ಅವರ ಘನತೆ ವಾಪಸ್ ಬಂತು. ಅವರ ಪತ್ನಿ ಮತ್ತು ಕುಟುಂಬದವರು ನಿರಂತರವಾಗಿ  ಬೆಂಬಲ ನೀಡಿದರು. ಅವರು ಈಗಲೂ ಔಷಧ ತೆಗೆದುಕೊಳ್ಳುತ್ತಾರೆ ಮತ್ತು ಯಾವಾಗಲಾದರೂ ಖಾಯಿಲೆಯ ಲಕ್ಷಣ ಕಾಣಿಸುತ್ತದೆ. ಆದರೆ ಇಂದು ಅವರು ತಮ್ಮ ಜೀವನವನ್ನು ನಿಭಾಯಿಸಲು ಶಕ್ತರಾಗಿದ್ದಾರೆ.

ಮಾನಸಿಕ ಖಾಯಿಲೆಗೆ ಚಿಕಿತ್ಸೆ ನೀಡಿದ ಬಳಿಕ ಶ್ರೀರಾಮ್ ವೃತ್ತಿಪರರ ಸಹಾಯದಿಂದ ತಮ್ಮ ಸಮಸ್ಯೆ ಗುರುತಿಸಿದ್ದಾರೆ. ತೀವ್ರ ಸಮಸ್ಯೆಗಳು ಇಲ್ಲದಿದ್ದರೂ ನಾವು ನಮ್ಮ ಮಾನಸಿಕ ಆರೋಗ್ಯದ ಕುರಿತು ಕಾಳಜಿಯಿಂದ ಇರುವುದು ಮುಖ್ಯ.

ನಾವು ಪ್ರತಿನಿತ್ಯದ ಜಂಜಾಟಗಳಲ್ಲಿ ಸಿಲುಕಿದ್ದರೂ ನಮ್ಮ ಆಂತರಿಕ ವಿಶ್ವಾಸ ಕಳೆದುಕೊಂಡಿದ್ದರೂ ನಮ್ಮ ಬಗ್ಗೆ ಆಲೋಚಿಸುವುದನ್ನು ಬಿಡಬಾರದು. ನಮಗೆ ಯಾವ ವಿಷಯದಿಂದ ಸಂತೋಷವಾಗುತ್ತದೆ, ದುಖವಾಗುತ್ತದೆ ಅಥವಾ ಸಿಟ್ಟಾಗುತ್ತದೆ ಎಂದು ನಾವು ತಿಳಿದಿರಬೇಕು. ಇಲ್ಲದಿದ್ದರೆ ಜೀವನದಲ್ಲಿ ನಡೆಯುವ ಪ್ರಕರಣಗಳಿಂದ ನಮ್ಮ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಮಾನಸಿಕ ಸ್ವಾಸ್ಥ್ಯವೂ ಕೆಡುತ್ತದೆ ಹಾಗೂ ನಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ದುರಾದೃಷ್ಟವಶಾತ್ ಇದೆಲ್ಲ ನಮ್ಮ ದೈಹಿಕ ಆರೋಗ್ಯ ಹದಗೆಟ್ಟಾಗ ಗಮನಕ್ಕೆ ಬರುತ್ತದೆ ಯಾಕೆಂದರೆ  ಅದರ ಲಕ್ಷಣಗಳನ್ನು ನಾವು ಕಡೆಗಣಿಸುತ್ತ ಬಂದಿರುತ್ತೇವೆ.

ಕೆಲ ಲಕ್ಷಣಗಳನ್ನು ನಾವು ಗುರುತಿಸಲೇಬೇಕು. ಅತೀ ದುಃಖ, ಅತೃಪ್ತರಾಗಿರುವುದು, ಋಣಾತ್ಮಕವಾಗಿ ಚಿಂತಿಸುವುದು, ಸಂತೋಷದ ಸವಿಯನ್ನು ಅನುಭವಿಸದೇ ಇರುವುದು, ಜನರಿಂದ ದೂರವಿರಲು ಬಯಸುವುದು, ಸಿಟ್ಟಾಗಿರುವುದು, ಆತಂಕಗೊಳ್ಳುವುದು ಅಥವಾ ಭಯಪಡುವುದು ಇತ್ಯಾದಿ.

ನಾವು ಮಾನಸಿಕವಾಗಿ ಆರೋಗ್ಯವಾಗಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

  • ಚಟುವಟಿಕೆಯಿಂದ ತುಂಬಿದ ಜೀವನಶೈಲಿ ನಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಒಳ್ಳೆಯದು.

  • ನಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನ ಹೊಂದಿರುವುದು.

  • ಖುಷಿ ನೀಡುವ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದು (ಕ್ರೀಡೆ ಅಥವಾ ಹವ್ಯಾಸ).

  • ನಮ್ಮನ್ನು ಗೌರವಿಸುವ ಜನರ ಜೊತೆ ಬೆರೆಯುವುದು.

  • ಹಂಚಿಕೊಳ್ಳುವುದು ಮತ್ತು ಕೊಡುವುದನ್ನು ರೂಢಿಸಿಕೊಳ್ಳುವುದು-ಅಸಹಾಯಕರಿಗೆ ಸಹಾಯ ಮಾಡುವುದು.

  • ಸ್ವಯಂ ತಿಳುವಳಿಕೆ ಹೊಂದಿರುವುದು ನಮ್ಮ ಆಲೋಚನೆ, ಭಾವನೆ ಮಾತು ಮತ್ತು ನಡವಳಿಕೆ ಬಗ್ಗೆ ಅರಿತಿರುವುದು.

ಡಾ.ಎಸ್.ಕಲ್ಯಾಣಸುಂದರಂ ಬೆಂಗಳೂರು ಮೂಲದ ಸೈಕ್ಯಾಟ್ರಿಸ್ಟ್ ಮತ್ತು ದಿ ರಿಚ್‌ಮಂಡ್ ಫೆಲೋಶಿಪ್ ಸೊಸೈಟಿ ಇಂಡಿಯಾದ ಸಿಇಒ (Richmond Fellowship Society India)