ಸ್ಕಿಜ಼ೋಫ್ರೇನಿಯಾದೊಂದಿಗೆ ಜೀವನ

ಸ್ಕಿಜ಼ೋಫ್ರೇನಿಯಾ ನಿಮ್ಮಲ್ಲಿ ಪತ್ತೆಯಾಗಿರುವುದು ನಿಮ್ಮ ಜೀವನವನ್ನು ಆಳಬಾರದು.

ಸ್ಕಿಜ಼ೋಫ್ರೇನಿಯ ಅಪರೂಪದ ಖಾಯಿಲೆ. ವ್ಯಕ್ತಿಯಲ್ಲಿ ಸ್ಕಿಜ಼ೋಫ್ರೇನಿಯ ಇದೆ ಎಂಬುದು ಖಚಿತಪಟ್ಟಾಗ ಅದನ್ನು ಒಪ್ಪಿಕೊಂಡು ಸ್ವೀಕರಿಸಲು ರೋಗಿಗೆ ಮತ್ತು ಆತನ ಕುಟುಂಬಕ್ಕೆ ಕಷ್ಟವಾಗಬಹುದು. ಹೆಚ್ಚಿನವರಿಗೆ ಔಷಧ ತೆಗೆದುಕೊಳ್ಳಲು ಆರಂಭಿಸಿದಾಗ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಕೆಲವು ಸಂದರ್ಭಗಳಲ್ಲಿ ಔಷಧ ತೆಗೆದುಕೊಂಡರೂ ಖಾಯಿಲೆ ಪೂರ್ತಿಯಾಗಿ ವಾಸಿಯಾಗುವುದಿಲ್ಲ. ಇದು ವ್ಯಕ್ತಿಯ ದೈನಂದಿನ ಕೆಲಸಗಳಲ್ಲಿ ತೊಂದರೆ ಉಂಟುಮಾಡುತ್ತದೆ. ಆ ಸಮಯದಲ್ಲಿ ಕುಟುಂಬದವರು, ವ್ಯಕ್ತಿಯು ತಾವು ಈ ಹಿಂದೆ ತಿಳಿದಿರುವ ವ್ಯಕ್ತಿಯಾಗಿ ಉಳಿದಿಲ್ಲ ಎಂದು ಭಾವಿಸುತ್ತಾರೆ.

ಸ್ಕಿಜ಼ೋಫ್ರೇನಿಯ ಹೊಂದಿರುವ ವ್ಯಕ್ತಿ ಮತ್ತು ಕುಟುಂಬಕ್ಕೆ ಈ ಸ್ಥಿತಿ ಒಂದು ಸವಾಲು. ಸಮಾಜದ ಅಪಹಾಸ್ಯದಿಂದ ಅವರು ಕುಗ್ಗಿಹೋಗಬಹುದು.’ಸ್ಕಿಜ಼ೋಫ್ರೇನಿಯ ಹೊಂದಿರುವವರು’ ಎಂಬ ಹಣೆಪಟ್ಟಿ ವ್ಯಕ್ತಿಯ ಅಸ್ತಿತ್ವವನ್ನೇ ಕಸಿದುಕೊಳ್ಳಬಹುದು.

ವ್ಯಕ್ತಿಯ ಮನಸ್ಸು ಅಂದುಕೊಂಡಷ್ಟು ವೇಗವಾಗಿ ಕೆಲಸ ಮಾಡುವುದಿಲ್ಲ. ಔಷಧ ಸೇವನೆ ಆರಂಭಿಸಿದಾಗ, ಮುಂಚಿನ ಸ್ಥಿತಿಯಂತೆ ದೇಹ ಸ್ಪಂದಿಸುವುದಿಲ್ಲ. ಈ ಎಲ್ಲ ಬದಲಾವಣೆಗಳಿಂದ ವ್ಯಕ್ತಿ ಸ್ಫೂರ್ತಿ ಕಳೆದುಕೊಳ್ಳಬಹುದು.

ಒಳ್ಳೆಯ ವಿಷಯವೆಂದರೆ ಸ್ಕಿಜ಼ೋಫ್ರೇನಿಯಗೆ ಮೊದಲಿಗಿಂತ ಒಳ್ಳೆಯ ಚಿಕಿತ್ಸೆ ಲಭ್ಯವಿದೆ ಮತ್ತು ಇದಕ್ಕೆ ವ್ಯಕ್ತಿಯ ಸ್ಪಂದನೆ ಕೂಡ ಉತ್ತಮವಾಗಿದೆ. ಪ್ರತಿನಿತ್ಯದ ಔಷಧ ಸೇವನೆ ಎಲ್ಲವೂ ಹಿಂದಿನಂತಿಲ್ಲ ಎಂದು ನೆನಪಿಸುತ್ತದೆ. ಕಾರಣವಿಲ್ಲದೆ ‘ಸ್ಕಿಜ಼ೋಫ್ರೇನಿಯ ಹೊಂದಿದವರು’ ಎಂದು ವ್ಯಕ್ತಿಯೊಬ್ಬನಿಗೆ ಹಣೆಪಟ್ಟಿ ಹಚ್ಚುವುದು ಸರಿಯಲ್ಲ.

ಸ್ಕಿಜ಼ೋಫ್ರೇನಿಯ ಎನ್ನುವುದು ನಿಮ್ಮಲ್ಲಿರುವ ಖಾಯಿಲೆ ಅಷ್ಟೆ. ಅದೇ ನಿಮ್ಮ ಗುರುತಲ್ಲ.

ಖಾಯಿಲೆಯೊಂದಿಗೆ ಜೀವಿಸುವುದು ಎಂದರೆ, ರೋಗಪತ್ತೆಗೆ ಮೊದಲು ನೀವು ಹೇಗಿದ್ದಿರೋ ಹಾಗೇ ಇರಲು ಸಾಧ್ಯವಾದಷ್ಟು ಪ್ರಯತ್ನಿಸುವುದು. ಒಂದು ವೇಳೆ ಯೋಚಿಸುವುದೇ ಕಷ್ಟವಾಗಿದ್ದರೆ, ಔಷಧಗಳು ಅದನ್ನು ಸರಿ ಮಾಡುವವರೆಗೆ ತಾಳ್ಮೆಯಿಂದಿರಿ. ಔಷಧಿಗಳು ನಿಮ್ಮ ಗೊಂದಲ ಪರಿಹರಿಸುವುದು. ಮೊದಲಿನಂತೆ ಬದುಕನ್ನು ಯಥಾಸ್ಥಿತಿಗೆ ತಂದುಕೊಳ್ಳುವುದು ನಿಮ್ಮ ಗುರಿಯಾಗಿರಬೇಕು.

ಔಷಧಿಗಳಿಂದ ದೇಹದ ತೂಕದಲ್ಲಿ ಹೆಚ್ಚಳ ಅಥವಾ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ನೀವು ಈ ಹಿಂದೆ ವ್ಯಾಯಾಮ ಮಾಡಿರದಿದ್ದರೂ, ಈಗ ವ್ಯಾಯಾಮ ಮಾಡುವ ಮತ್ತು ಆರೋಗ್ಯಯುತ ಆಹಾರ ಸೇವಸುವುದನ್ನು ರೂಢಿಸಿಕೊಳ್ಳುವ ಸಮಯವಿದು. ಆರೋಗ್ಯವಾಗಿರುವುದು ನಿಮ್ಮ ಚೈತನ್ಯವನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯ ಬೇಗ ಏಳುವುದು ಮತ್ತು ನಿಮ್ಮ ಖಾಯಿಲೆಯೇ ನೀವಲ್ಲ ಎಂಬುದನ್ನು ನೆನಪಿಸಿಕೊಳ್ಳುವುದರಿಂದ ವೀಗದ ಚೇತರಿಕೆ ಸಾಧ್ಯವಾಗುತ್ತದೆ. ಇದರಿಂದ ಮನಸ್ಸಿನಲ್ಲಿ ಬೇರು ಬಿಟ್ಟಿರುವ ರೋಗ ಮಾಯವಾಗುತ್ತದೆ.

ಈ ನಿಟ್ಟಿನಲ್ಲಿ ಒಂದು ವ್ಯವಸ್ಥಿತ ದಿನಚರಿ ಸಹಾಯಕ್ಕೆ ಬರುತ್ತದೆ. ಪ್ರತಿದಿನ ಸರಿಯಾದ ಸಮಯಕ್ಕೆ ಏಳುವುದು, ಪೌಷ್ಟಿಕ ಆಹಾರ ಸೇವನೆ, ಸೂಚಿತ ಸಮಯಕ್ಕೆ ಔಷಧ ತೆಗೆದುಕೊಳ್ಳುವುದು, ನಿಯಮಿತ ವ್ಯಾಯಾಮ ಮತ್ತು ಮನೆಯ ಕೆಲಸಗಳಲ್ಲಿ ಸಹಾಯ ಮಾಡುವುದು, ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವುದು ಖಾಯಿಲೆಯ ಪ್ರಾರಂಭಿಕ ಹಂತದಲ್ಲಿ ನಿಮ್ಮ ದಿನಚರಿಯ ಭಾಗವಾಗಲಿ. ಒಂಟಿಯಾಗಿ ಹೆಚ್ಚು ಸಮಯ ಕಳೆಯಬೇಡಿ. ಕೆಲವು ಸಲ ನಿಮ್ಮ ಖಾಯಿಲೆಯಿಂದಾಗಿ ಶುಚಿತ್ವ ಮತ್ತು ಸ್ವಚ್ಛತೆಯತ್ತ ನಿಮ್ಮ ಗಮನಹರಿಯದೇ ಇರಬಹುದು. ನಿತ್ಯ ಸ್ನಾನ ಮಾಡುವುದು ಮತ್ತು ಶುಭ್ರವಾಗಿರುವುದನ್ನು ನಿಮ್ಮ ದಿನಚರಯಲ್ಲಿ ರೂಢಿಸಿಕೊಳ್ಳಿ.

ಒಮ್ಮೆ ನೀವು ಗುಣಮುಖವಾಗುತ್ತಿದ್ದೀರಿ ಎಂದು ಅನಿಸತೊಡಗಿದರೆ, ನಿಮ್ಮ ಮನೋವೈದ್ಯರು ನೀವು ಕೆಲಸಕ್ಕೆ ಮರಳಬಹುದು ಎಂದು ಅಭಿಪ್ರಾಯಪಟ್ಟರೆ, ನಿತ್ಯದ ಈ ದಿನಚರಿಯನ್ನು ಬಿಡದೇ ಅನುಸರಿಸಿ. ಇಲ್ಲಿ ಹೇಳಲಾದ ಯಾವ ಚಟುವಟಿಕೆಗಳೂ ಖಾಯಿಲೆ ಇಲ್ಲದ, ಔಷಧರಹಿತವಾಗಿರುವ ಯಾವುದೇ ಒಬ್ಬ ವ್ಯಕ್ತಿಯ ನಿತ್ಯದ ದಿನಚರಿಗಿಂತ ಭಿನ್ನವಾಗಿಲ್ಲ!

ನೀವು ಯಾವುದು ನಿಜ, ಯಾವುದು ಕಲ್ಪನೆ ಎಂದು ಗೊಂದಲಕ್ಕೊಳಗಾದಾಗ, ನೀವು ನಂಬುವ ನಿಮ್ಮ ಕುಟುಂಬದ ಸದಸ್ಯರು ಸಹಾಯ ಪಡೆಯಿರಿ. ಔಷಧ ತೆಗೆದುಕೊಳ್ಳುವುದು ನಿಮ್ಮ ದಿನಚರಿಯ ಭಾಗವಾಗುವವರೆಗೆ ಅದನ್ನು ನಿಯಮಿತವಾಗಿ ನೆನಪಿಸುವಂತೆ ಕುಟುಂಬದವರಿಗೆ ಹೇಳಿ.

ಕೆಲವು ಸಲ, ಖಾಯಿಲೆಗೂ ಮುನ್ನ ನೀವು ಮಾಡುತ್ತಿದ್ದ ಕೆಲಸ ಈಗ ಒತ್ತಡದಾಯಕ ಎನಿಸಬಹುದು. ನಿಮ್ಮನ್ನು ಕೆಲಸ ಬದಲಿಸಲು, ಕಡಿಮೆ ಒತ್ತಡದ ಕೆಲಸವನ್ನು ಹುಡುಕಲು ಸೂಚಿಸಿದರೆ ಎದೆಗುಂದಬೇಡಿ. ಈ ಬದಲಾವಣೆ ನೀವು ಅಧಿಕ ಒತ್ತಡವನ್ನು ನಿಭಾಯಿಸಬಲ್ಲರಿ ಎಂಬ ಆತ್ಮವಿಶ್ವಾಸವನ್ನು ಹೊಂದುವವರೆಗೆ ಮಾತ್ರ ಇರಬಹುದು. ರಾತ್ರಿ ಶಿಫ್ಟ್ ನಲ್ಲಿ ಕೆಲಸಮಾಡಬೇಕಾದ ಉದ್ಯೋಗಗಳನ್ನು ಪರಿಗಣಿಸದೇ ಇರುವುದು ಒಳಿತು. ಉತ್ತಮ ಪ್ರಮಾಣದ ನಿದ್ದೆ ನಿಮ್ಮ ಆರೋಗ್ಯದ ಚೇತರಿಕೆ ಮತ್ತು ಸ್ಥಿರತೆಗೆ ಅತ್ಯಗತ್ಯ.

ಸ್ಕಿಜ಼ೋಫ್ರೇನಿಯದೊಂದಿಗೆ ಬದುಕುವುದೆಂದರೆ ನೀವು ಮುಂಚೆಗಿಂತ ಹೆಚ್ಚು ಸಂಯೋಜಿತರಾಗಿರುವುದನ್ನು ಕಲಿವುದು ಎಂದರ್ಥ. ಮೊದಲು ನಿಮಗೆ ಯಾರ ಸಹಾಯದ ಅವಶ್ಯಕತೆಯೂ ಇದ್ದಿರಲಿಕ್ಕಿಲ್ಲ. ಆದರೆ ಈಗ ಇನ್ನೊಬ್ಬರ ಸಹಾಯ ಕೇಳುವುದು ಅನಿವಾರ್ಯ. ರೋಗಸ್ಥಿತಿಯನ್ನು ಒಪ್ಪಿಕೊಳ್ಳುವುದರಿಂದ ಅದನ್ನು ಮೀರಿ ಬೆಳೆಯಲು ನಿಮಗೆ ಸಹಾಯವಾಗುತ್ತದೆ. ನೆನಪಿಡಿ, ಇಲ್ಲಿ ರೋಗವನ್ನು ಒಪ್ಪಿಕೊಳ್ಳುವುದು ಎಂದರೆ ರೋಗ ನಿಮ್ಮನ್ನು ನಿಯಂತ್ರಿಸುತ್ತದೆ ಎಂದರ್ಥವಲ್ಲ,

ನೀವು ನೀವಾಗಿ ಇರದ ಸಮಯದಲ್ಲಿ ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಬೇಕೆಂದು ನಿಮ್ಮ ಸುತ್ತಮುತ್ತಲಿನ ಜನ ಸೂಚಿಸಬಹುದು. ಏನಾಗಿದೆ ಎಂದು ತಿಳಿಯಲು ಅವರು ಬಯಸಬಹುದು.  ಆದರೆ ಇದು ಅವರಿಗೆ ಸಂಬಂಧಿಸಿದ ವಿಷಯವೇ ಅಲ್ಲ! ನಿಮಗೆ ಏನಾಗಿದೆ ಎಂಬುದನ್ನು ಯಾರು ತಿಳಿದುಕೊಳ್ಳಬೇಕು ಮತ್ತು ಯಾರಿಗೆ ಅದರ ಅವಶ್ಯಕತೆ ಇಲ್ಲ ಎಂಬುದನ್ನು ನೀವೇ ನಿರ್ಧರಿಸಿ. ನಿಮ್ಮ ಕುರಿತು ನಿಜವಾದ ಕಾಳಜಿ ಹೊಂದಿರುವ ಮತ್ತು ನಿಮಗೆ ಸಹಾಯ ಮಾಡುವ ಕೆಲ ವ್ಯಕ್ತಿಗಳಿಗೆ ನಿಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ನಿಮ್ಮ ಕುಟುಂಬದ ಆಪ್ತರನ್ನು ಹೊರತುಪಡಿಸಿ ಬೇರೆ ಯಾರಿಗೂ ಇದನ್ನು ಹೇಳದೇ ಇರುವುದು ನಿಮ್ಮ ಆಯ್ಕೆ.

ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇರುವವರು ಅವರ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಯಾವ ರೀತಿ ಎಲ್ಲವನ್ನೂ ಹೇಳಿಕೊಳ್ಳುತ್ತಾರೋ, ಹಾಗೆ ನಿಮ್ಮ ಖಾಯಿಲೆಯ ಕುರಿತು ನಿಮಗೆ ಅನಿಸುವುದನ್ನು ಮನೋವೈದ್ಯರೊಂದಿಗೆ ಮನಬಿಚ್ಚಿ ಮಾತನಾಡುತ್ತಿರಿ. ಎಲ್ಲವೂ ಸರಿ ಇದ್ದರೂ ನಿಮಗೆ ನೆಮ್ಮದಿ ಇಲ್ಲವಾದರೆ, ಅಂತಹ ವಿಷಯಗಳನ್ನು ವೈದ್ಯರಿಗೆ ಹೇಳಿ.

ನಿಮ್ಮಲ್ಲಿ ಸ್ಕಿಜ಼ೋಫ್ರೇನಿಯ ಇರುವುದು ಗೊತ್ತಾದರೆ, ಅದು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಬಹುದಾದ ಅಥವಾ ಕಡೆಗಣಿಸುವ ಸಂಗತಿಯಲ್ಲ. ನಿಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ಸಹಾಯದೊಂದಿಗೆ ಪ್ರತಿದಿನ ನೀವು ಇಡುವ ಒಂದು ಸಣ್ಣ ಹೆಜ್ಜೆ, ನಿಮ್ಮ ಊಹೆಗಿಂತಲೂ ಮಿಗಿಲಾಗಿಯೇ ನಿಮ್ಮನ್ನು ಮುನ್ನಡೆಸಬಹುದು.

ಡಾ.ಸಬೀನಾ ರಾವ್‌, ನಿಮ್ಹಾನ್ಸ್‌ ನ ಮನೋರೋಗ ವಿಭಾಗದಲ್ಲಿ ವಿಶೇಷ ದರ್ಜೆಯ ಮನೋವೈದ್ಯರು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org