ಪುರುಷರ ಮನೋಸ್ವಾಸ್ಥ್ಯ : ನಂಬಿಕೆಗಳು ಮತ್ತು ವಾಸ್ತವಾಂಶ

ಪುರುಷರ ಮನೋಸ್ವಾಸ್ಥ್ಯ : ನಂಬಿಕೆಗಳು ಮತ್ತು ವಾಸ್ತವಾಂಶ

ಪುರುಷರ ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತೆ ಇರುವ ಕೆಲವು ನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳ ಬಗ್ಗೆ ಗಮನ ಹರಿಸೋಣ.

ನಂಬಿಕೆ: ಪುರುಷರಿಗೆ ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳಿರುವುದಿಲ್ಲ. ಅವರು ಮಾನಸಿಕವಾಗಿ ಸದೃಢರಾಗಿರುತ್ತಾರೆ.

ವಾಸ್ತವ: ಪುರುಷರು ಮಾನಸಿಕವಾಗಿ ಸಬಲರಾಗಿರುತ್ತಾರೆ ಎಂಬ ಅಭಿಪ್ರಾಯವಿದೆ, ಏಕೆಂದರೆ ಕೌಟುಂಬಿಕ ವ್ಯವಸ್ಥೆಯಲ್ಲಿ ಮನೆಯ ಯಜಮಾನನಾದ ಪುರುಷನಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶವಿರುವುದಿಲ್ಲ. ಹಾಗೇನಾದರೂ ವ್ಯಕ್ತಪಡಿಸಿದ್ದೇ ಆದರೆ, ಅಂಥವರನ್ನು ಅಪಹಾಸ್ಯ ಮಾಡಲಾಗುತ್ತದೆ. ಭಾವುಕತೆ ಹೊಂದಿರುವ ಪುರುಷರನ್ನು ದುರ್ಬಲ ಮನಸ್ಥಿತಿಯವರೆಂದೂ ಹೆಂಗಸಿನ ಮನೋಭಾವದವರೆಂದೂ ಹಂಗಿಸಲಾಗುತ್ತದೆ. ಆದ್ದರಿಂದ ತಮ್ಮ ಭಾವನೆಗಳನ್ನು ಹುದುಗಿಸಿಟ್ಟುಕೊಳ್ಳುವುದೇ ಹೆಚ್ಚು. ಇದು ಕಾಲಕ್ರಮೇಣ ಅವರ ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ನಂಬಿಕೆ: ಮಹಿಳೆಯರಿಗಿಂತ ಪುರುಷರು ಭಾವನೆಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ.

ವಾಸ್ತವ: “ಗಂಡಸರು ಅಳಬಾರದು” ಎಂಬುದೊಂದು ಸಾರ್ವಜನಿಕ ಅಪೇಕ್ಷೆ. ಯಾವುದಾದರೂ ತೀವ್ರ ಸಂಕಷ್ಟದ ಪರಿಸ್ಥಿತಿಗಳಲ್ಲಿ, ಅಥವಾ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಸಂದರ್ಭ ಹೊರತುಪಡಿಸಿದರೆ ಪುರುಷರು ಅಳುವುದಿಲ್ಲ; ತೀವ್ರತರ ಸಂದರ್ಭಗಳನ್ನು ಹೊರೆತು ಪಡಿಸಿ ಇನ್ಯಾವ ಸಂದರ್ಭದಲ್ಲೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ ಎಂಬ ಅಭಿಪ್ರಾಯ ಎಲ್ಲರಲ್ಲಿದೆ. ಆದ್ದರಿಂದ ಬಹಳಷ್ಟು ಪುರುಷರು ತಮ್ಮ ನೋವನ್ನು ಮರೆಮಾಚಲು ಕುಡಿತ, ಡ್ರಗ್ಸ್ ಮುಂತಾದ ದುಶ್ಚಟಗಳನ್ನು ಆಶ್ರಯಿಸಿರುತ್ತಾರೆ. ಆಕ್ರಮಣಶೀಲ ನಡತೆಯು ಅವರ ಪುರುಷತ್ವವನ್ನು, ಸ್ವಾವಲಂಬನೆಯನ್ನು ಮತ್ತು ನಿರಾಕರಣೆಯ ಮನೋಭಾವವನ್ನು ಉತ್ತೇಜಿಸುತ್ತದೆ.

ನಂಬಿಕೆ: ಪುರುಷರು ಯಾವುದೇ ರೀತಿಯ ನೆರವನ್ನು ಬಯಸುವುದಿಲ್ಲ. ಸ್ವತಃ ತಾವೇ ಎಲ್ಲವನ್ನೂ ನಿಭಾಯಿಸಬಲ್ಲರು.

ವಾಸ್ತವ: ನಮ್ಮ ಪುರುಷಪ್ರಧಾನ ಸಮಾಜದಲ್ಲಿ, ತಲತಲಾಂತರಗಳಿಂದ ಕುಟುಂಬದ ಮುಖ್ಯಸ್ಥರ ಸ್ಥಾನವನ್ನು ಪುರುಷರೇ ವಹಿಸುತ್ತಾ ಬಂದಿದ್ದಾರೆ. ಅವರ ಮೇಲೆ ಕುಟುಂಬದ ಸಂಫೂರ್ಣ ಜವಾಬ್ದಾರಿ ಇರುತ್ತದೆ. ಅವರು ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲು ಸಮರ್ಥರಾಗಿರುತ್ತಾರೆ ಎಂಬ ನಂಬಿಕೆ ಸಾಮಾನ್ಯವಾಗಿದೆ. ಇದರಿಂದಾಗಿ ಪುರುಷರು ಯಾರೊಡನೆಯೂ ಸಮಾಲೋಚಿಸುವುದಿಲ್ಲ ಮತ್ತು ತಮ್ಮ ಸಮಸ್ಯೆಗಳ ಕುರಿತಾಗಿ ಯಾರ ಸಲಹೆ-ಸೂಚನೆಗಳನ್ನೂ ಪಡೆದುಕೊಳ್ಳುವುದಿಲ್ಲ. ಹಾಗೇನಾದರೂ ಒಂದುವೇಳೆ ಸಹಾಯ ಪಡೆದರೆ, ಅದು ಅವರ ಸಾಮರ್ಥ್ಯದ ಕೊರತೆಯನ್ನು ಸೂಚಿಸುತ್ತದೆ ಎಂಬ ನಂಬಿಕೆ ಸಾಮಾನ್ಯವಾಗಿದೆ.

ನಂಬಿಕೆ: ವಿವಾಹದಿಂದ ಪುರುಷನ ಮಾನಸಿಕ ಅಸ್ವಸ್ಥತೆಯು ಪರಿಹಾರವಾಗುತ್ತದೆ

ವಾಸ್ತವ: ಮಾನಸಿಕ ಅಸ್ವಸ್ಥತೆಗೆ ಸೂಕ್ತ ವೈದ್ಯಕೀಯ ನೆರವಿನ ಹಾಗೂ ಕೆಲವು ಚಿಕಿತ್ಸೆ (ಥೆರಪಿ)ಗಳ ಅವಶ್ಯಕತೆ ಇರುತ್ತದೆ. ಪುರುಷರಿಗೆ, ಮದುವೆಯ ಮೊದಲೇ ಅವರ ಸಮಸ್ಯೆಗಳನ್ನು ಅರಿತು ಸೂಕ್ತ ಚಿಕಿತ್ಸೆ ನೀಡಬೇಕು. ಮದುವೆಯು ಮಾನಸಿಕ ಕಾಯಿಲೆಗಳಿಗೆ ಪರಿಹಾರವಲ್ಲ. ಈ ತಪ್ಪು ನಂಬಿಕೆಯಿಂದಾಗಿ ಮಾನಸಿಕ ಅಸ್ವಸ್ಥ ಪುರುಷನನ್ನು ಮದುವೆಯಾಗುವ ಹೆಣ್ಣಿನ ಜೀವನ ಹಾಳಾಗುತ್ತದೆ.

ಆಧಾರ Masculinity and men's mental health, Gary R Brooks, Journal Of American College Health

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org