ನೆಲೆ ಬದಲಾಯಿಸುವ ಕಷ್ಟಸುಖ: ವಲಸೆ ಉಂಟುಮಾಡುವ ಭಾವನಾತ್ಮಕ ಪರಿಣಾಮಗಳನ್ನು ನಾವು ಒಪ್ಪಿಕೊಳ್ಳಬೇಕು

ದೇಶದ ಒಳಗೆ ಒಂದು ಸ್ಥಳದಿಂದ ಮತ್ತೊಂದಕ್ಕೆ ವಲಸೆ ಹೋದರೂ ಅದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಅದಕ್ಕೆ ನೀವು ಮುಂಚಿತ ತಯಾರಿ ಮಾಡಿಕೊಂಡರೆ ನಿಭಾಯಿಸುವುದು ಕಷ್ಟವೇನಲ್ಲ.

ಹೊಸ ನಗರಕ್ಕೆ ಹೋಗಿ ನೆಲೆಸುವುದು ರೋಮಾಂಚಕಾರಿಯೇನೋ ಹೌದು. ಹೊಸ ಉದ್ಯೋಗ, ಹೊಸ ಬದುಕು, ಹೊಸ ಮನೆ ಎಲ್ಲವೂ ವಲಸೆಗೆ ಉತ್ತೇಜನವನ್ನೇ ನೀಡುತ್ತವೆ. ಆದರೆ ಹೀಗೆ ಸ್ಥಳಾಂತರಗೊಳ್ಳುವುದು ಒತ್ತಡವನ್ನೂ ಹೇರುತ್ತದೆ. ನಿಮಗೆ ಪರಿಚಿತವಿರುವ, ಆರಾಮದಾಯಕವಾಗಿರುವ ಎಲ್ಲವನ್ನೂ ಬಿಟ್ಟು ಹೊರಡುವುದು ಸುಲಭದ ಸಂಗತಿಯೇನಲ್ಲ. ಹೊಸ ನಗರದಲ್ಲಿ ಎಲ್ಲವನ್ನೂ ಹೊಸತಾಗಿಯೇ ಕಟ್ಟಿಕೊಳ್ಳಬೇಕು. ಈ ಒತ್ತಡ ನಿಮ್ಮ ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಅಲ್ಲವೆ?

ಈ ಕುರಿತಂತೆ ಬೆಂಗಳೂರಿನ ಸಕ್ರ ವರ್ಲ್ಡ್ ಹಾಸ್ಪಿಟಲ್’ನಲ್ಲಿರುವ ಸೈಕಿಯಾಟ್ರಿಸ್ಟ್ ಡಾ.ಸಬೀನಾ ರಾವ್ ಅವರು ವೈಟ್ ಸ್ವಾನ್ ಫೌಂಡೇಶನ್’ನ ಶ್ರೀರಂಜಿತಾ ಜೆಯೂರ್ಕರ್ ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರಗಳನ್ನು ಇಲ್ಲಿ ಹೇಳಲಾಗಿದೆ. ದೇಶದ ಒಳಗಿನ ಸ್ಥಳಾಂತರ ಕೂಡಾ ಒತ್ತಡ ಉಂಟುಮಾಡುತ್ತದೆ ಎಂದು ಹೇಳುವ ಡಾ.ಸಬೀನಾ ರಾವ್, ಅದನ್ನು ನಿಭಾಯಿಸಲು ಬೇಕಾದ ಮಾನಸಿಕ ಸಿದ್ಧತೆಯ ಬಗ್ಗೆ ಸೂಚನೆಗಳನ್ನೂ ನೀಡಿದ್ದಾರೆ.

ವಲಸೆ ಹೋಗುವುದನ್ನು ಒತ್ತಡದಾಯಕವೆಂದು ಅಥವಾ ಭಾವನಾತ್ಮಕವಾಗಿ ಪರಿಣಾಮ ಬೀರುತ್ತವೆ ಎಂದು ನಾವು ಯೋಚಿಸುವುದಿಲ್ಲ ಯಾಕೆ?

ಬಹುತೇಕವಾಗಿ ಜನರು ಸ್ಥಳ ಬದಲಾವಣೆಯನ್ನು ಅವರು ಅನಿವಾರ್ಯವೆಂದುಕೊಳ್ಳುತ್ತಾರೆ.. ತಮ್ಮ ಜೀವನವನ್ನು ಸರಾಗ ಮಾಡಿಕೊಳ್ಳಲು ತಮ್ಮ ಸುತ್ತಲಿನ ಜನರ ಮೇಲೆ ತಾವೆಷ್ಟು ಅವಲಂಬಿತರಾಗಿದ್ದೇವೆ ಅನ್ನುವುದನ್ನು ಕೂಡ ಚಿಂತಿಸುವುದಿಲ್ಲ. ಬಹಳಷ್ಟು ಜನರು ವಲಸೆಯನ್ನು ಅಭಿವೃದ್ಧಿಗೆ ಸಹಾಯಕ ಎಂದು ತಿಳಿಯುತ್ತಾರೆ.

ಆದರೆ ಹೆಂಡತಿ ತನ್ನ ಗಂಡನೊಡನೆ ಅಥವಾ ಪೋಷಕರು ಮಕ್ಕಳೊಡನೆ ಇರಲು ತಮ್ಮ ತುಂಬ ವರ್ಷದಿಂದ ವಾಸಿಸಿದ ಸ್ಥಳವನ್ನು ಬಿಡುವಂತ ಪರಿಸ್ಥಿತಿಯಲ್ಲಿ ಹೆಚ್ಚು ಒತ್ತಡ ಉಂಟಾಗುತ್ತದೆ. ದೀರ್ಘಕಾಲದ ಸಂಬಂಧಗಳನ್ನು ಬಿಟ್ಟು ಬೇರೆ ಸ್ಥಳಕ್ಕೆ ಬಂದಾಗ ಅವರಿಗೆ ತಾವು ಏಕಾಂಗಿ ಅನ್ನಿಸಿಬಿಡುತ್ತದೆ.

ವಲಸೆಯಲ್ಲಿ ಆಘಾತವನ್ನು ಉಂಟುಮಾಡುವ ಅಂಶ ಯಾವುದು? ಇಷ್ಟಕ್ಕೂ ಅವರು ದೇಶದ ಒಳಗೇ ಸ್ಥಳಾಂತರಗೊಂಡಿರುತ್ತಾರೆ.

ಜನರು ತಾವು ಎದುರುಗೊಳ್ಳಲಿರುವ ಬದಲಾವಣೆಯ ಪರಿಣಾಮವನ್ನು ನಿರೀಕ್ಷಿಸಿರುವುದಿಲ್ಲ. ತಾವು ಒಂದೇ ದೇಶದ ಮತ್ತೊಂದು ಭಾಗಕ್ಕೆ ಹೋಗುತ್ತಿರುವುದರಿಂದ ಅಂಥಾ ವ್ಯತ್ಯಾಸವೇನೂ ಇರುವುದಿಲ್ಲ ಎಂದೇ ಭಾವಿಸಿರುತ್ತಾರೆ. ಸಾಮಾನ್ಯವಾಗಿ ಜನರು ವಿದೇಶಗಳಿಗೆ ತೆರಳುವಾಗ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುತ್ತಾರೆ. ಹಾಗೆ ವಿದೇಶಕ್ಕೆ ಹೋಗಿ ನೆಲೆಸಿದ ಅನೇಕರನ್ನು ನಾನು ನೋಡಿದ್ದೇನೆ. ಅಲ್ಲಿ ವಿಪರೀತ ಚಳಿ ಇರುತ್ತದೆ, ಅಲ್ಲಿ ನನಗೆ ಯಾರೂ ಪರಿಚಯ ಇರೋದಿಲ್ಲ, ಅವರ ಭಾಷೆ ನನಗೆ ಅರ್ಥ ಆಗೋದಿಲ್ಲ – ಇವೇ ಮೊದಲಾದ ಊಹೆಗಳು ಇರುತ್ತವೆ. ಆದರೆ ಒಂದು ನಗರದಿಂದ ಮತ್ತೊಂದಕ್ಕೆ ಸ್ಥಳಾಂತರಗೊಳ್ಳುವಾಗ ಅಲ್ಲಿಯ ಪರಿಸ್ಥಿತಿ ಇಲ್ಲಿಯಂತೆಯೇ ಇರುವುದಿಲ್ಲ ಎಂದು ಜನರು ಯೋಚಿಸುವುದಿಲ್ಲ. ಆದ್ದರಿಂದ ಅವರು ಯಾವ ಸಿದ್ಧತೆಯನ್ನೂ  ಮಾಡಿಕೊಳ್ಳುವುದಿಲ್ಲ. ಈ ಕಾರಣದಿಂದಲೇ ಅವರು ಅನಿರೀಕ್ಷಿತ ಬದಲಾವಣೆಗಳನ್ನು ಎದುರಿಸಲಾಗದೆ ಒದ್ದಾಡುತ್ತಾರೆ.

ತಮ್ಮ ಮೊದಲ ಉದ್ಯೋಗಕ್ಕಾಗಿ ಹೊಸ ಊರಿಗೆ ತೆರಳಿ ನೆಲೆಸುವ ಯುವ ಜನರು ವಲಸೆಯನ್ನು ಹೇಗೆ ನಿಭಾಯಿಸುತ್ತಾರೆ? ಅವರ ಅನುಭವ ಹೇಗಿರುತ್ತದೆ?

ನನ್ನ ಪ್ರಕಾರ ಇಂತಹ ಸಂದರ್ಭಗಳಲ್ಲಿ ಯುವಜನರು ಎರಡು ವಿಭಿನ್ನ ಬಗೆಯ ಅನುಭವಗಳನ್ನು ಪಡೆಯುತ್ತಾರೆ. ಮೊದಲನೆಯದಾಗಿ, ಅವರು ತಮ್ಮ ಹೊಸ ಉದ್ಯೋಗದ ಕಾರಣದಿಂದಾಗಿ ಉತ್ಸುಕರಾಗಿರುತ್ತಾರೆ. ಕೆಲವರಿಗೆ ದೊಡ್ಡ ಮೊತ್ತದ ಸಂಬಳ ನಿಗದಿಯಾಗಿರುತ್ತದೆ, ಕೆಲವರು ಚಿಕ್ಕ ಪಟ್ಟಣದಿಂದ ದೊಡ್ಡ ನಗರಕ್ಕೆ ಬರುವುದೇ ಅತೀ ಉತ್ಸಾಹ ಆದರೆ ಅವರು ನಗರದ ಜನ ಜೀವನಕ್ಕೆ ಹೊಂದಿಕೊಳ್ಳುವ ತಯಾರಿ ನಡೆಸಿರುವುದಿಲ್ಲ. ಅಂಥವರಲ್ಲಿ ಹೆಚ್ಚಾಗಿ ಇಪ್ಪತ್ತರ ಹರೆಯದಲ್ಲಿರುವವರೇ ಇರುತ್ತಾರೆ. ಇಂಥಾ ಯುವಜನರ ದುಡಿಮೆ ಬಹುತೇಕವಾಗಿ ಕುಡಿತ, ಡ್ರಗ್ಸ್ ವ್ಯಸನಗಳಿಗೆ ಪೋಲಾಗುವ ಅಪಾಯವಿರುತ್ತದೆ. ಒಂಟಿತನ, ಹೊಂದಾಣಿಕೆಯ ಆತಂಕ, ಕುಡಿತ ಮತ್ತು ಸಿಗರೇಟ್ ಚಟಗಳಿಗೆ ಅಂಟಿಕೊಳ್ಳುವಂತೆ ಮಾಡುತ್ತವೆ.

ಬೆಂಗಳೂರಿಗೆ ಬಂದು ನೆಲೆಸುವ ಮುನ್ನ ದೊಡ್ಡ ಕುಟುಂಬಗಳಲ್ಲಿ ವಾಸಿಸುತ್ತಿದ್ದ ಸಾಕಷ್ಟು ಜನರನ್ನು ನಾನು ನೋಡಿದ್ದೇನೆ. ಅವರು ನನ್ನ ಬಳಿ ಚಿಕಿತ್ಸೆಗಾಗಿ ಬರುತ್ತಾರೆ. ಇಲ್ಲಿ ಹೊಂದಾಣಿಕೆಯಾಗುತ್ತಿಲ್ಲ, ಒಂಟಿತನ ಅನುಭವಿಸ್ತಿದ್ದೇನೆ ಅನ್ನುವ ಒಂದೇ ಕಾರಣಕ್ಕೆ ನೀವು ನಿಮ್ಮ ಊರಿಗೆ ವಾಪಸಾಗಲು ಸಾಧ್ಯವಿಲ್ಲ. ಅದು ಅಷ್ಟು ಸುಲಭವೂ ಅಲ್ಲ. ಮನೆ, ಕುಟುಂಬದ ಬೆಂಬಲ, ಭಾವನಾತ್ಮಕ ಬಾಂಧವ್ಯಗಳೆಲ್ಲವನ್ನೂ ಬಿಟ್ಟು ದುಡಿಮೆಗೆಂದು ಮಹಾನಗರಕ್ಕೆ ಬಂದಿರುತ್ತೀರಿ. ಈ ಐಟಿ ಜಗತ್ತಿನಲ್ಲಿ, ನಿಮ್ಮ ನೆಲೆಯನ್ನು ನೀವೇ ಕಂಡುಕೊಳ್ಳಬೇಕಾಗುತ್ತದೆ.

ಬಹುತೇಕರು ನೇರವಾಗಿ ಕಾಲೇಜ್ ಮುಗಿಸಿ ಕೆಲಸಕ್ಕೆ ಸೇರಿರುತ್ತಾರೆ. ಉದ್ಯೋಗ ಸ್ಥಳದಲ್ಲಿ ಹೊಸ ಗೆಳೆಯರನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಾ ಇರುತ್ತಾರೆ. ತಮ್ಮ ಇತರ ಸಹೋದ್ಯೋಗಿಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಅದು ಅಷ್ಟು ಸುಲಭವಲ್ಲ..

ಆದರೆ, ಯುವಜನರಿಗೆ ಅದನ್ನು ನಿಭಾಯಿಸಲು ಬರುವುದಿಲ್ಲ. ಅದು ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ನನ್ನ ಬಳಿ ಇಂಥಾ ಸಮಸ್ಯೆಯನ್ನು ಹೊತ್ತು ಬಂದವರು, ಉದ್ಯೋಗ ಸ್ಥಳದಲ್ಲಿ ಸಂಬಂಧ ಹದಗೆಟ್ಟಿತೆಂಬ ಕಾರಣಕ್ಕೆ ಕೆಲಸ ಬದಲಿಸುವ ಆಲೋಚನೆ ಮಾಡಿದ್ದನ್ನೂ ನಾನು ನೋಡಿದ್ದೇನೆ.

ನಗರದ ಜೀವನ ಶೈಲಿ  ನೀವು ಮನೆಯಲ್ಲಿ ಮಾಡದೆ ಇರುವಂಥದ್ದೆಲ್ಲ ಮಾಡುವುದಕ್ಕೆ ಪ್ರೇರೇಪಣೆ ಕೊಡುತ್ತದೆಯೇ?

ಖಂಡಿತಾ. ಎಷ್ಟೊಂದು ಜನ ಇಲ್ಲಿ ಲಿವ್ ಇನ್ ಸಂಬಂಧಗಳನ್ನು ಹೊಂದಿದ್ದಾರೆ. ನಮ್ಮ ಸಂಸ್ಕ್ರತಿಯ ಪ್ರಕಾರ ನಮ್ಮ ಸಮಾಜದಲ್ಲಿ ಲಿವ್ ಇನ್ ಸಂಬಂಧಗಳು ಸರಿಯಲ್ಲ.

ನಗರದಲ್ಲಿ ಲಿವ್ ಇನ್ ಸಂಬಂಧ ಹೊಂದಿದ್ದು, ಮನೆಗೆ ಹೋದಾಗ ಅಲ್ಲಿ ಬೇರೆಯೇ ಬಗೆಯ ಸಂಬಂಧವನ್ನು ನಿಭಾಯಿಸಬೇಕಾಗುತ್ತದೆ. ಕುಟುಂಬದವರು ಲಿವ್ ಇನ್ ಥರದ ಸಂಬಂಧವನ್ನು ಒಪ್ಪುವುದಿಲ್ಲ. ಇದು ಸಂಪೂರ್ಣವಾಗಿ ಎರಡು ಬಗೆಯ ಬದುಕನ್ನು ಬಾಳಿದಂತೆ ಆಗುತ್ತದೆ ಅಲ್ಲವೆ?

ಹೌದು. ಸಾಕಷ್ಟು ಸಂಖ್ಯೆಯ ಯುವಜನರು ಇಂಥದ್ದನ್ನು ಮಾಡುತ್ತಾರೆ. ಅವರದನ್ನು ಚೆನ್ನಾಗಿ ಯೋಚನೆ ಮಾಡಿ ಆಯ್ದುಕೊಂಡಿರುತ್ತಾರೆಂದು ನನಗೆ ಅನ್ನಿಸುವುದಿಲ್ಲ. ಹೊಸತಾಗಿ ನಗರದಲ್ಲಿ ನೆಲೆಸಿ, ಅಲ್ಲಿಯ ಜೀವನಕ್ಕೆ ಒಗ್ಗಿಕೊಳ್ಳಲು ಯತ್ನಿಸುತ್ತಿರುವಾಗ ಇಂಥ ಸಂಬಂಧಗಳು ತೊಂದರೆಯನ್ನು ಉಂಟುಮಾಡುವ ಸಂಭವ ಹೆಚ್ಚು. ಕೆಲವರಿಗೆ ಅದೇ ಮೊದಲ ಅನುಭವ ಆಗಿರುತ್ತದೆ. ಕೆಲವರು ತಾವು ಪ್ರೀತಿಯಲ್ಲಿ ಬಿದ್ದಿದ್ದೇವೆಂದು ಭಾವಿಸಿಕೊಂಡಿರುತ್ತಾರೆ, ವಾಸ್ತವದಲ್ಲಿ ಹಾಗಿರದೆ ಹೋಗಿರುತ್ತದೆ. ಮತ್ತೆ ಕೆಲವರು ಸಂಗಾತಿಯ ಜೊತೆ ಸರಿಯಾಗಿ ಮಾತಾಡಿ ತೀರ್ಮಾನಕ್ಕೆ ಬರದೇ ಲಿವ್ ಇನ್ ಸಂಬಂಧವನ್ನು ಆಯ್ದುಕೊಂಡಿರುತ್ತಾರೆ.

ಸಂಗಾತಿಗೆ ಮದುವೆ ಆಗುವ ಬಯಕೆ ಇದ್ದು, ಇವರಿಗೆ ಇಲ್ಲದೆ ಹೋದರೆ ಅಲ್ಲಿ ದೊಡ್ಡ ಸಂಘರ್ಷವೇ ಏರ್ಪಡುತ್ತದೆ. ಇನ್ನು ಕೆಲವು ಬಾರಿ ಇಂಥ ಸಂಬಂಧಗಳು ತಮ್ಮ ನಿರ್ಧಾರದ ಕೊರತೆಯಿಂದ ನಲುಗಿ ಕೊನೆಗೆ ಬೇರ್ಪಡುವ ಹಂತಕ್ಕೆ ಬರುತ್ತವೆ. ಆಗ ಮನಸ್ಸಿಗೆ ನೋವಾಗಿ ಕೆಲವರು ಆತ್ಮಹತ್ಯೆಯ ಯೋಚನೆಯನ್ನೂ ಮಾಡುವುದುಂಟು.  

ಇತ್ತೀಚಿನ ದಿನಗಳಲ್ಲಿ ವಲಸಿಗರು ಹೆಚ್ಚಾಗುತ್ತಿದ್ದಾರೆ. ಯಾವುದೇ ಉದ್ಯೋಗ ಸ್ಥಳಕ್ಕೆ ಹೋದರೂ ಅಲ್ಲಿ ಬೇರೆ ಕಡೆಗಳಿಂದ ಬಂದ ಉದ್ಯೋಗಿಗಳು ಕಾಣ ಸಿಗುತ್ತಾರೆ. ಈ ಜಾಗಕ್ಕೆ,ಇಲ್ಲಿನ ಜನ ಜೀವನಕ್ಕೆ ತಾವೊಬ್ಬರೇ ಹೊಸಬರಲ್ಲ  ಅನ್ನುವ ಆತ್ಮವಿಶ್ವಾಸ ವಲಸಿಗರಲ್ಲಿ ಹೆಚ್ಚಾಗುತ್ತದೆಯೇ?

ಈಗಿನ ಜನರು ಅವಕಾಶಗಳನ್ನು ಹುಡುಕಿಕೊಂಡು ಹೋಗುವುದನ್ನೂ, ಹೊಂದಾಣಿಕೆ ಮಾಡಿಕೊಳ್ಳುವುದನ್ನೂ ರೂಢಿಸಿಕೊಂಡಿದ್ದಾರೆ. ಆದರೆ ಕೆಲವರು ತಮ್ಮದೇ ಸಂಸ್ಕೃತಿಯ, ಆಚಾರ ವಿಚಾರಗಳ ಜನರ ನಡುವೆಯೂ ತಮ್ಮ ಮನೆ, ಆಹಾರ ಮೊದಲಾದವನ್ನೇ ದೊಡ್ಡ ವಿಷಯವನ್ನಾಗಿ ಮಾಡಿಕೊಂಡು ಸಮಸ್ಯೆಗೆ ಸಿಲುಕುತ್ತಾರೆ.

ಸ್ಥಳ ಬದಲಾವಣೆಯು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ವಲಸಿಗರು ಸಾಮಾನ್ಯವಾಗಿ ಅನುಭವಿಸುವ ಮಾನಸಿಕ ಸಮಸ್ಯೆಗಳೆಂದರೆ, ಖಿನ್ನತೆ ಮತ್ತು ಉದ್ವೇಗ. ಮಾದಕ ವಸ್ತು ಸೇವನೆಗೆ ಒಳಗಾಗುವುದು ಇನ್ನೊಂದು ಸಮಸ್ಯೆ. ಮತ್ತಿದು 20ರಿಂದ 30 ವಯೋಮಾನದ ಯುವಜನರಲ್ಲಿ ಹೆಚ್ಚಾಗಿ ಉಂಟಾಗುತ್ತದೆ. ಈ ವಯಸ್ಸಿನಲ್ಲಿ ವಿಪರೀತ ಗೊಂದಲವಿರುತ್ತದೆ. ಜೊತೆಗೆ ಕೆಲಸದಲ್ಲೇ ದಿನದ 10 – 12 ಗಂಟೆಗಳನ್ನು ಅವರು ಕಳೆಯಬೇಕಾಗುತ್ತದೆ. ಮನಸ್ಸನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಲು ಸಾಧ್ಯವೇ ಆಗುವುದಿಲ್ಲ.

ವಿಹಾರ, ಸುತ್ತಾಟ, ವ್ಯಾಯಾಮ – ಇಂಥಾ ಸೀಮಿತ ಚಟುವಟಿಕೆಗಳಿಗೂ ಅವರಲ್ಲಿ ನಿಜಕ್ಕೂ ಸಮಯ ಇರುವುದಿಲ್ಲ. ದಿನದ ಕೊನೆಯಲ್ಲಿ ಒಂದು ಕಪ್ ಚಹಾ ಕುಡಿದು ಮಲಗುವುದನ್ನಷ್ಟೆ ಅವರು ಬಯಸುತ್ತ ಇರುತ್ತಾರೆ. ಆಫೀಸಿಂದ ಮನೆಗೆ ಓಡುವುದು, ಟೀವಿ ಅಥವಾ ಯೂಟ್ಯೂಬಿನಲ್ಲಿ ಸಿನೆಮಾ ನೋಡುವುದು; ಇಲ್ಲವೇ ಜಿಮ್ ಗೆ ಹೋಗುವುದು. ಇವಿಷ್ಟರ ಹೊರತಾಗಿ ಮತ್ತೇನು ಎದುರಿಸಬೇಕಾಗಿ ಬಂದರೂ ಅವರು ವಿಚಲಿತರಾಗುತ್ತಾರೆ. ಅದನ್ನು ನಿವಾರಿಸಿಕೊಳ್ಳುವ ಬಗೆ ಅವರಿಗೆ ತಿಳಿದಿರುವುದಿಲ್ಲ.

ನೆಲೆ ಬದಲಿಸುವಾಗ, ವಲಸೆ ಪ್ರಕ್ರಿಯೆ ಒಂದು ಒತ್ತಡದ ಸಂಗತಿಯಾಗದೆ ಇರುವಂತೆ ನಿಭಾಯಿಸುವುದು ಹೇಗೆ?

ಹೊರದೇಶಕ್ಕೆ ವಲಸೆ ಹೋಗಬೇಕಾದ ಸಂದರ್ಭದಲ್ಲಿ ನೀವು ಏನೆಲ್ಲ ಅಂಶಗಳನ್ನು ಯೋಚಿಸುತ್ತೀರಿ? ಅಲ್ಲಿಯ ಜನ ಯಾವ ಭಾಷೆ ಮಾತಾಡುತ್ತಾರೆ? ಹೇಗೆ ಮಾತಾಡುತ್ತಾರೆ? ಅಲ್ಲಿಯ ಆಹಾರ ಪದ್ಧತಿ ಏನು? ಅಲ್ಲಿಯ ಸಂಸ್ಕೃತಿ ಏನು? ಜೀವನ ನಿರ್ವಹಣೆ ಹೇಗೆ? ದುಬಾರಿಯೋ ತುಟ್ಟಿಯೋ? ವಾತಾವರಣ ಹೇಗಿರುತ್ತದೆ? ನಮ್ಮ ದೇಶದ ಜನರು, ನಮ್ಮ ಸಮುದಾಯದವರು ಎಲ್ಲಿರುತ್ತಾರೆ? ಅವರನ್ನು ಭೇಟಿ ಮಾಡುವುದು ಹೇಗೆ? ಇತ್ಯಾದಿ.

ಇದರ ಜೊತೆಗೇ ನಾವು ಮತ್ತೊಂದು ಅಂಶ ಗಮನದಲ್ಲಿ ಇಟ್ಟುಕೊಳ್ಳಬೇಕು. ವಲಸೆ ಹೋಗುವುದು ಎಂದರೆ ಅದೇನೂ ಸಾಹಸದ ಸಂಗತಿಯಲ್ಲ ಎಂದು ಅರಿತಿರಬೇಕು. ನಾವು ಎದುರಿಸುವ ಪ್ರತಿಯೊಂದು ಹೊಸತೂ ಒತ್ತಡದಾಯಕವೇ. ಮದುವೆ, ಮಗುವನ್ನು ಹೆರುವುದು, ಮನೆ ಕಟ್ಟುವುದು – ಈ ಎಲ್ಲದರ ಹಾಗೆಯೇ ವಲಸೆ ಹೋಗುವುದು ಕೂಡಾ.  ಅಷ್ಟೇ. ಈ ಪ್ರಕ್ರಿಯೆಯಲ್ಲಿ ನಾವು ಅಲ್ಪಸ್ವಲ್ಪ ಒತ್ತಡವನ್ನು ಅನುಭವಿಸಬೇಕಾಗುತ್ತದೆ, ಅದನ್ನು ಒಪ್ಪಿಕೊಳ್ಳೋಣ. ನೀವು ಇರುವ ಜಾಗಕ್ಕಿಂತ ಸಂಪೂರ್ಣ ಭಿನ್ನವಾಗಿರುವ ಜಾಗಕ್ಕೆ ಹೋಗಿ ನೆಲೆಸುವುದು ಸುಲಭದ ವಿಷಯವೇನೂ ಅಲ್ಲ.

ನೀವು ಉನ್ನತ ಶಿಕ್ಷಣ ಪಡೆಯಲು ಅಮೆರಿಕಾಕ್ಕೆ ಹೊರಡುತ್ತೀರಿ ಎಂದಿಟ್ಟುಕೊಳ್ಳಿ. ನಿಮ್ಮ ಸೀನಿಯರ್’ಗಳು ತಾವಾಗಿಯೇ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. ತರಬೇಕಾದ ಸಾಮಾನುಗಳ ಪಟ್ಟಿ, ಹೋಗಬೇಕಾದ ಸ್ಥಳ, ಮಾಡಬೇಕಾದ – ಮಾಡಬಾರದ ಸಂಗತಿಗಳು, ಈ ಎಲ್ಲದರ ಮಾಹಿತಿ ನೀಡುತ್ತಾರೆ. ಆದರೆ ನೀವು ದೇಶದ ಒಳಗೇ ಸ್ಥಳಾಂತರಗೊಳ್ಳುವಾಗ ಈ ಸವಲತ್ತುಗಳು ಸಿಗುವುದಿಲ್ಲ. ಅದಕ್ಕಾಗಿ ನೀವೇ ನಿಮ್ಮ ಪರಿಚಿತರನ್ನು ಹುಡುಕಿ, ಸಂಪರ್ಕಿಸಿ, ಮಾರ್ಗದರ್ಶನ ಪಡೆಯಬೇಕಾಗುತ್ತದೆ. ಇಲ್ಲಿ ನಾವೇ ನಮ್ಮ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

ನಿಮಗೆ ಸಹಾಯ ಬೇಕೆಂದು ತಿಳಿದುಕೊಳ್ಳುವುದು ಹೇಗೆ?

ನೀವು ನಿಜಕ್ಕೂ ಏಕಾಂಗಿಯಾಗಿದ್ದರೆ, ಯಾರದ್ದಾದರು ಗೆಳೆತನವನ್ನು ಖುಷಿಯಿಂದ ಒಪ್ಪಿಕೊಳ್ಳುತ್ತೀರಿ. ಕೆಲಸ ಮಾಡುವ ಉತ್ಸಾಹದಿಂದ ಮಾಡುತ್ತೀರಿ. ಯಾವಾಗ ನೀವು ಈ ಉತ್ಸಾಹಗಳನ್ನು ಕಳೆದುಕೊಳ್ಳತೊಡಗುತ್ತೀರೋ, ನೀವು ಇದ್ದಕ್ಕಿದ್ದಂತೆ ಗೆಳೆಯರ ಜೊತೆ ಹೊರಗೆ ಹೋಗುವದನ್ನು ತಪ್ಪಿಸಿಕೊಳ್ಳತೊಡಗಿದ್ದೀರಿ, ಒಂಟಿಯಾಗಿರಲು ಬಯಸುತ್ತೀರಿ ಎಂದಾದರೆ ಆ ಬಗ್ಗೆ ಸರಿಯಾಗಿ ಯೋಚಿಸಿ. ಇದನ್ನು ನೀವೇ ಸರಿಪಡಿಸಿಕೊಳ್ಳಲು ಯತ್ನಿಸಿ. ಜಿಮ್, ಡಾನ್ಸ್ ಕ್ಲಾಸ್ ಅಥವಾ ಮತ್ತಿತರ ನಿಮ್ಮ ಆಸಕ್ತಿಯ ತರಗತಿಗಳಿಗೆ ಸೇರಿ ಮನಸ್ಸನ್ನು ಬೇರೆಡೆ ಹರಿಸಿ.

ಬಹುತೇಕವಾಗಿ ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಜೊತೆ ಹೊಸ ಸ್ಥಳಕ್ಕೆ ಬಂದು ನೆಲೆಸುತ್ತಾರೆ. ತಮ್ಮ ಗಂಡನ ಹೊರತಾಗಿ ಅವರಿಗೆ ಬೇರೆ ಯಾರ ಪರಿಚಯವೂ ಇರುವುದಿಲ್ಲ. ಅವರು ಅಕ್ಷರಶಃ ಏಕಾಂಗಿಯಾಗಿ ಮನೆಯಲ್ಲಿ ಇರಬೇಕಾಗುತ್ತದೆ ಆಗ ಹೆಂಡತಿಯರ ಜೀವನ ಹೇಗೆ?

ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ಮಹಿಳೆಯರು ಒಂದು ಅಥವಾ ಎರಡು ಮಕ್ಕಳ ತಾಯಂದಿರಾಗಿರುತ್ತಾರೆ. ಮಕ್ಕಳ ಕಾಳಜಿ ವಹಿಸಬೇಕಿರುವುದರಿಂದ ಅವರು ಹೊರಗೆಲ್ಲೂ ಓಡಾಡದ ಸ್ಥಿತಿಯಲ್ಲಿ ಇರುತ್ತಾರೆ. ತಮ್ಮದೇ ಊರಿನಲ್ಲಾದರೆ ತಂದೆ ತಾಯಿ ಅಥವಾ ಅತ್ತೆ ಮಾವಂದಿರು ಮಕ್ಕಳ ಪಾಲನೆಯಲ್ಲಿ ಜೊತೆಯಾಗುತ್ತಾರೆ. ಪರಸ್ಥಳದಲ್ಲಿ ಸಹಾಯಕ್ಕೆ ಸಿಗುವವರ ಸಂಖ್ಯೆ ಕಡಿಮೆ. ಇದರಿಂದ ಮನೆಯಲ್ಲೇ ಇರುವ ಗೃಹಿಣಿಯರಿಗೆ ಒಂಟಿತನ ಕಾಡಬಹುದು. ಇಂಥ ಸಂದರ್ಭದಲ್ಲಿ ಅವರು ತಮ್ಮ ಸುತ್ತಲಿನ ಜನರೊಡನೆ ಒಡನಾಟ ಬೆಳೆಸಿಕೊಂಡು, ಆ ಮೂಲಕ ಸಾಮಾಜಿಕ ಜೀವನಕ್ಕೆ ಪ್ರವೇಶ ಪಡೆಯುವುದು ಒಳ್ಳೆಯದು.

ತಮ್ಮ ಮನೆಯ ಹತ್ತಿರದ ಸಂಘ ಸಂಶ್ಥೆಗಳಲ್ಲಿ, ದೇವಸ್ಥಾನ ಮತ್ತಿತರ ಧಾರ್ಮಿಕ ಸ್ಥಳಗಳಲ್ಲಿ ಗೆಳೆಯರನ್ನು ಸಂಪಾದಿಸಿಕೊಳ್ಳುವುದು; ತಾವೂ ಅವರಿಗೆ ಕೈಲಾದ ಸಹಾಯ ಮಾಡುವುದು – ಇವೆಲ್ಲವೂ ಈ ನಿಟ್ಟಿನಲ್ಲಿ ಪ್ರಯೋಜನಕಾರಿ. ಹಾಗಿಲ್ಲದೆ ಮನೆಯಲ್ಲೇ ಕುಳಿತರೆ, ಖಿನ್ನತೆ, ಆತಂಕ ಅಥವಾ ಉದ್ವೇಗಗಳು ಉಂಟಾಗಿ ಮಾನಸಿಕ ಸ್ವಾಸ್ಥ್ಯ ಹಾಳು ಮಾಡುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ನಿಮ್ಮ ಸಾಮಾಜಿಕ ಅವಕಾಶಗಳನ್ನು ನೀವೇ ಸೃಷ್ಟಿಸಿಕೊಂಡು ಮುನ್ನಡೆಯುವುದು ಅತ್ಯಗತ್ಯ.

ಇಳಿ ವಯಸ್ಸಿನ ಜನರೇನು ಮಾಡಬೇಕು? ಇಂಥ ಚಟುವಟಿಕೆಗಳನ್ನು ನಡೆಸುವುದು ಅವರಿಗೆ ಕಷ್ಟವಾಗುತ್ತದೆಯಲ್ಲ?

ಹೌದು. ವಯಸ್ಸಾದವರಿಗೆ ಇದೊಂದು ದೊಡ್ಡ ಸವಾಲು. ಜೀವಿತದ ಸುಮಾರು 50 – 60 ವರ್ಷಗಳಷ್ಟು ಸುದೀರ್ಘ ಅವಧಿಯನ್ನು ಅವರು ಒಂದು ಬಗೆಯ ಜನರೊಂದಿಗೆ ಕಳೆದಿರುತ್ತಾರೆ. ಸ್ಥಳಾಂತರ ಅವರನ್ನು ಏಕಾಂಗಿಯಾಗಿಸುತ್ತದೆ. ತೀರ ದೂರದ ಜಾಗಗಳಿಗೆ ಪ್ರಯಾಣಿಸುವುದು ಅವರಿಂದ ಸಾಧ್ಯವಾಗುವುದಿಲ್ಲ. ಇಲ್ಲಿ ಹಣದ ಸಮಸ್ಯೆಯೂ ಅಡ್ಡ ಬರಬಹುದು. ಸಮೀಪದ ಪಾರ್ಕ್, ದೇವಸ್ಥಾನ ಅಥವಾ ಪರಿಚಿತರ ಮನೆಗೆ ಹೋಗಲು ಸಾಧ್ಯವಿದ್ದರೆ ಅವರು ಅದನ್ನು ಮಾಡಬಹುದು.

ಮನೆಯಲ್ಲೇ ಕೂರುವುದಕ್ಕಿಂತ, ಸಾಧ್ಯವಾದಷ್ಟೂ ಹೊರಗಿನ ಜನರ ಸಂಪರ್ಕ ಬೆಳೆಸಿಕೊಳ್ಳಲು ಪ್ರಯತ್ನಿಸುವುದು ಮುಖ್ಯ. ಅಪಾರ್ಟ್’ಮೆಂಟ್ ಗಳಲ್ಲಿ ವಾಸಿಸುವವರು ಕೊನೆಪಕ್ಷ ಮೆಟ್ಟಿಲಿಳಿದು ಕೆಳಗೆ ಬಂದು ಕೂರಬಹುದು. ತಮ್ಮ ಮಕ್ಕಳು, ಅಳಿಯ ಅಥವಾ ಸೊಸೆಯ ಮೇಲೆ ಸಂಪೂರ್ಣ ಅವಲಂಬಿತರಾಗದೆ, ತಮ್ಮನ್ನು ನಿಭಾಯಿಸಿಕೊಳ್ಳುವ ನಿಟ್ಟಿನಲ್ಲಿ ಬೇರೆ ಆಧಾರಗಳನ್ನೂ ಅವರು ಹುಡುಕಿಕೊಳ್ಳಬೇಕಾಗುತ್ತದೆ.

ಈ ಕಥನವನ್ನು ‘ಬಿಯಾಂಡ್ ರಿಲೊಕೇಶನ್’ ಸರಣಿಯಿಂದ ಆಯ್ದುಕೊಳ್ಳಲಾಗಿದೆ. ವಾಸ್ತವ್ಯ ಬದಲಾವಣೆಯು ಹೇಗೆ ಭಾವನಾತ್ಮಕ ಹಾಗೂ ಮಾನಸಿಕ ಪರಿಣಾಮಗಳನ್ನು ಬೀರುತ್ತದೆ ಅನ್ನುವುದನ್ನು ಈ ಸರಣಿಯು ಹೇಳುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org