ನೆಲೆ ಬದಲಾಯಿಸುವ ಕಷ್ಟಸುಖ: ನಾನು ಹೋದಲ್ಲೆಲ್ಲ ಮನೆಯ ವಾತಾವರಣ ನಿರ್ಮಿಸಿಕೊಳ್ಳಲು ಯತ್ನಿಸುತ್ತಿದ್ದೆ

ವಿವಿಧ ದೇಶಗಳಲ್ಲಿ ತಮ್ಮ ವಾಸ್ತವ್ಯದ ಅನುಭವವನ್ನು, ಅವು ಕಲಿಸಿದ ಪಾಠಗಳನ್ನು ನಂದಿನಿ ದತ್ತಾ ನೆನಪಿಸಿಕೊಂಡಿದ್ದಾರೆ.

ನಾನು ನನ್ನ ಜೀವನದ ಉದ್ದಕ್ಕೂ ಒಂದರಿಂದ ಮತ್ತೊಂದು ನಗರಕ್ಕೆ ವಾಸ್ತವ್ಯ ಬದಲಿಸಿದ್ದೇನೆ. ಈ ಸ್ಥಳಾಂತರಗಳು ನನಗೆ ಸಾಕಷ್ಟು ಅನುಭವಗಳನ್ನು ಕಟ್ಟಿಕೊಟ್ಟಿವೆ, ಒಂದಲ್ಲ ಒಂದು ರೀತಿಯಲ್ಲಿ ಪಾಠ ಕಲಿಸಿವೆ. ನಾನು ಬೆಳೆದಿದ್ದು ಸೌತ್ ಆಫ್ರಿಕಾದ ಲೆಸೊತೋ ನಗರದಲ್ಲಿ. ನನಗೆ 10 ವರ್ಷಗಳಾದಾಗ ನನ್ನ ತಂದೆ ತಾಯಿ ಕೋಲ್ಕತ್ತಾಗೆ ಬಂದು ನೆಲೆಸಿದರು. ಪ್ರತಿ ಬೇಸಿಗೆಯಲ್ಲಿ ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದೆ ಕೋಲ್ಕತ್ತ ಹೊಸ ಊರು ಎಂದು ನನಗನಿಸುತ್ತಿರಲಿಲ್ಲ.

ಆದರೂ ನನಗೆ ಹೊಸ ಜಾಗಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಅಲ್ಲಿ ನಾನು ಅಂತಾರಾಷ್ಟ್ರೀಯ ಶಾಲೆಗೆ ಸೇರಿಕೊಂಡೆ. ಅಲ್ಲಿ ತನ್ನವರು ಯಾರೂ ಇಲ್ಲವೆಂಬ ಭಾವನೆ ಹೊಂದಿರುತ್ತಿದ್ದ ಸಹಪಾಠಿಗಳನ್ನೇ ಗೆಳೆಯರನ್ನಾಗಿ ಮಾಡಿಕೊಂಡೆ. ಕುಟುಂಬ, ಸಂಬಂಧಿಕರ ಮಕ್ಕಳು ಎಲ್ಲರೂ ನನ್ನ ಸುತ್ತ ಇರುತ್ತಿದ್ದರೂ ನನ್ನ ಗೆಳೆಯರ ಬಳಗವನ್ನು, ನನ್ನಿಷ್ಟದ ತಿನಿಸುಗಳನ್ನು, ಟೆಲಿವಿಜನ್ ಶೋಗಳನ್ನು ಬಹಳ ಮಿಸ್ ಮಾಡಿಕೊಳ್ತಿದ್ದೆ.

ಕೆಲವು ವರ್ಷಗಳ ನಂತರ ನಾವು ದೆಹಲಿಗೆ ಸ್ಥಳಾಂತರಗೊಂಡೆವು. 11 ಹಾಗೂ 12ನೇ ತರಗತಿಯನ್ನು ನಾನು ಪೂರೈಸಿದ್ದು ದೆಹಲಿಯ ಅಂತಾರಾಷ್ಟ್ರೀಯ ಶಾಲೆಯಲ್ಲಿ. ಅಲ್ಲಿಯೂ ಒಂದಷ್ಟು ಹೊಸಬರು ಗೆಳೆಯರಾದರು. ಆದರೆ ಅಲ್ಲಿಯೂ ಆರಂಭದ ಕೆಲವು ದಿನಗಳು ಬಹಳ ಕಷ್ಟಕರವಾಗಿದ್ದವು. ಶಾಲೆಯಲ್ಲಿ ಸಹಪಾಠಿಗಳು ತಮ್ಮತಮ್ಮದೇ ಗುಂಪುಗಳನ್ನು ಮಾಡಿಕೊಂಡಿದ್ದರು. ನಾನು ಅವರಲ್ಲಿ ಯಾರ ಜೊತೆ ಹೊಂದಿಕೊಳ್ಳಬಲ್ಲೆ ಎಂದು ನಿರ್ಧರಿಸುವುದು ಸವಾಲಾಗಿತ್ತು.

ನನ್ನದು ಎಲ್ಲರ ಜೊತೆಗೂ ಸ್ನೇಹ ಬೆಳೆಸುವ ಸ್ವಭಾವ. ಆದರೆ ಆ ದಿನಗಳಲ್ಲಿ ನಾನು ವಿಪರೀತ ಒಂಟಿತನ ಅನುಭವಿಸಿದೆ. ಕ್ರಮೇಣ ಅದರಿಂದ ಹೊರ ಬಂದು ಗೆಳೆಯರನ್ನು ಮಾಡಿಕೊಳ್ಳುವುದು ಸಾಧ್ಯವಾಯಿತು. ಆ ಶಾಲೆ ಬಹಳವೇ ಚೆನ್ನಾಗಿತ್ತು. ಆದರೆ ಮನೆಯಲ್ಲಿ ಕೋಲ್ಕತ್ತಾದಲ್ಲಿ ಇದ್ದಂಥ ವಾತಾವರಣ ಇರಲಿಲ್ಲ. ಮನೆಯ ಆಸುಪಾಸಿನಲ್ಲಿ ಗೆಳೆಯರಿರಲಿಲ್ಲ, ನೆರೆಹೊರೆಯಲ್ಲಿ ಸಂಬಂಧಿಕರಿರಲಿಲ್ಲ… ಇದು ನನಗೆ ಅತ್ಯಂತ ಬೇಸರದ ಸಂಗತಿಯಾಗಿತ್ತು. ಶಾಲೆಯಿಂದ ಮಧ್ಯಾಹ್ನ 2 ಗಂಟೆಗೆಲ್ಲ ಬಂದುಬಿಡುತ್ತಿದ್ದ ನಾನು ಏನೂ ತೋಚದೆ ಸುಮ್ಮನೆ ಕುಳಿತುಬಿಡುತ್ತಿದ್ದೆ. ಓದುವುದನ್ನು ಬಿಟ್ಟು ಬೇರೆ ಆಯ್ಕೆಯೇ ಇರಲಿಲ್ಲ.

ನನ್ನನ್ನು ನಾನು ಕಂಡುಕೊಳ್ಳತೊಡಗಿದ್ದು ಇದೇ ಅವಧಿಯಲ್ಲಿ. ಈ ಸಮಯದಲ್ಲಿ ನಾನು ನನ್ನ ದೌರ್ಬಲ್ಯಗಳನ್ನೂ ಕಂಡುಕೊಂಡೆ. ಕೆಲವೊಂದು ಸಮಯವನ್ನು ನನಗೆ ಎದುರಿಸಲು ಸಾಧ್ಯವಾಗುತ್ತಿರಲಿಲ್ಲ.

ಕಾಲೇಜ್ ಶಿಕ್ಷಣ ಪಡೆಯಲು ನಾನು ಕೆನಡಾಕ್ಕೆ ಹೋಗಲು ತೀರ್ಮಾನಿಸಿದೆ. ಹೊಸ ಪರಿಸರ, ಹೊಸ ಅವಕಾಶಗಳನ್ನು ಕಂಡುಕೊಳ್ಳಬೇಕೆಂದು ನಾನು ನಿರ್ಧರಿಸಿದ್ದೆ. ನನ್ನ ಮನೆಯಲ್ಲಿ ಯಾವಾಗಲೂ ನನ್ನ ಕಾಳಜಿ ವಹಿಸಲು ಯಾರಾದರೂ ಇರುತ್ತಿದ್ದರು. ನಾನು ನನಗಾಗಿ ಒಂದು ಕಪ್ ಚಹಾ ಕೂಡ ಮಾಡಿಕೊಂಡವಳಲ್ಲ.

ಇಲ್ಲೀಗ ನಾನು ಅಡುಗೆಮನೆಯಲ್ಲಿ ನನಗಾಗಿ ಅಡುಗೆ ಮಾಡಿಕೊಳ್ಳಲು ಹೆಣಗುತ್ತಿದ್ದೆ. ಅದು ಪಾಸ್ತಾವೇ ಇರಬಹುದು, ಅಥವಾ ಸ್ಯಾಂಡ್’ವಿಚ್… ನನಗಾಗಿ ನಾನೇ ತಯಾರಿಸಿಕೊಳ್ಳಬೇಕಿತ್ತು. ಅಲ್ಲಿ ಐದಾರು ತಿಂಗಳ ಕಾಲ ಹಿಮದ ಸುರಿಮಳೆಯ ನಡುವೆ ನಾನು ನನ್ನ ಓದು ಮುಂದುವರೆಸಿದ್ದೆ. ಅದೊಂದು ಉಲ್ಲಾಸದಾಯಕ, ಹೊಸ ಅನುಭವವಾಗಿತ್ತು. ಈ ಅವಧಿಯಲ್ಲಿ ನಾನು ಏನೆಲ್ಲ ಮಾಡಬಲ್ಲೆ ಎಂದು ಕಂಡುಕೊಳ್ಳುವ ಪ್ರಯೋಗಗಳನ್ನು ಮಾಡಿದೆ. ದಿನದಿಂದ ದಿನಕ್ಕೆ ನಾನು ಹೆಚ್ಚು ಸ್ವಾವಲಂಬಿಯೂ ಸ್ವತಂತ್ರಳಾಗಿ ಬದುಕುತ್ತಾ ಹೋದೆ.

ಕಾಲೇಜ್ ಶಿಕ್ಷಣ ಮುಗಿದ ನಂತರ ನಾನು ದೆಹಲಿಗೆ ಮರಳಿ ಕೆಲಸಕ್ಕಾಗಿ ಹುಡುಕಾಟ ಆರಂಭಿಸಿದೆ. ನಾನು ಇಲ್ಲಿ ಕೆಲ ಕಾಲ ವಾಸವಿದ್ದರೂ ಈ ನಗರ ನನ್ನದಾಗಿರಲಿಲ್ಲ. ಇಲ್ಲಿ ನನ್ನ ಗೆಳೆಯರು ಇರಲಿಲ್ಲ. ನಾನು ಒಂಟಿಯಾಗುತ್ತಾ ಹೋದೆ. ಆದರೆ ಕಂಪನಿಯೊಂದರಲ್ಲಿ ಇಂಟರ್ನ್’ಶಿಪ್ ದೊರೆತ ಕಾರಣ ಮತ್ತೆ ಹುಮ್ಮಸ್ಸು ತುಂಬಿಕೊಂಡೆ.

ಕೆಲಸದಲ್ಲೂ ಆಸಕ್ತಿ ಮೂಡಿತು. ನನ್ನ ಟೀಮ್ ಮೇಟ್’ಗಳ ಜೊತೆ ಉತ್ತಮ ಗೆಳೆತನ ಬೆಳೆಸಿಕೊಂಡೆ. ಅಲ್ಲಿದ್ದವರಲ್ಲಿ ನಾನೇ ಚಿಕ್ಕವಳಾಗಿದ್ದರಿಂದ ಎಲ್ಲರೂ ನನ್ನನ್ನು ಪ್ರೀತಿಸುತ್ತಿದ್ದರು. ಆದರೂ ನಾನು ಇದ್ದ ದಿನಗಳಿಗಿಂತ ದೆಹಲಿ ಸಾಕಷ್ಟು ಬದಲಾವಣೆ ಕಂಡಿತ್ತು. ರಸ್ತೆ ತುಂಬಾ ಶಾಪಿಂಗ್ ಸೆಂಟರ್’ಗಳು, ಮೆಕ್ ಡೊನಾಲ್ಡ್… ನನ್ನ ನೆರೆಹೊರೆಯ ವಾತಾವರಣವೂ ಬದಲಾಗಿಹೋಗಿತ್ತು. ನಾನು ಇದಕ್ಕೆ ಹೊಂದಿಕೊಳ್ಳುತ್ತೀನೋ ಇಲ್ಲವೋ ಎಂಬ ಆತಂಕ ಮೂಡತೊಡಗಿತ್ತು.

ಕೆಲಸ ಮಾಡುವಾಗ ನನ್ನ ಟೀಮ್ ನನ್ನ ಬೆನ್ನಿಗಿರುತ್ತಿತ್ತು. ಆದರೂ ಎಲ್ಲರ ಜೊತೆ ಬೆರೆಯುವುದು ನನಗೆ ಸುಲಭದ್ದಾಗಿರಲಿಲ್ಲ. ಕೆಲವೊಮ್ಮೆ ಅವರ ಜೊತೆ ಸಿನೆಮಾಕ್ಕೆ ಹೋಗಬೇಕಾಗಿ ಬರುತ್ತಿತ್ತು, ಆದರೆ ಅದು ನನಗೆ ಖುಷಿ ಕೊಡುತ್ತಿರಲಿಲ್ಲ. ನಾನು ರಾಜಿಯಾಗಬೇಕಾಗುತ್ತಿತ್ತು. ಮುಂದಿನ ದಿನಗಳಲ್ಲಿ ಆಹಾರದ ವಿಷಯದಲ್ಲಿಯೂ ಇದನ್ನೇ ಅನುಸರಿಸಿದೆ. ಕ್ರಮೇಣ ಟೀಮ್ ಜೊತೆ ಊಟಕ್ಕೆ ಹೋಗುವುದನ್ನು, ಹೊಸಹೊಸ ಹೋಟೆಲ್ ಹುಡುಕುವುದನ್ನು ರೂಢಿ ಮಾಡಿಕೊಂಡೆ. ಅವರಲ್ಲೊಬ್ಬರು ನನ್ನ ಹಾಗೇ ಬೆಂಗಾಳಿಯಾಗಿದ್ದು, ನಾವಿಬ್ಬರೂ ಆಪ್ತರಾದೆವು. ನಾನು ಹೋದಲ್ಲೆಲ್ಲ ಮನೆಯಂಥದೇ ವಾತಾವರಣ ನಿರ್ಮಿಸಿಕೊಳ್ಳಲು ಯತ್ನಿಸುತ್ತಿದ್ದೆ. ಅದು ಸಾಧ್ಯವಾಗದೆ ಹೋದಾಗ ಹತಾಶಳಾಗುತ್ತಿದ್ದೆ.

ನಂತರ ನಾನು ಉನ್ನತ ಶಿಕ್ಷಣ ಪಡೆಯಲು ಯುನೈಟೆಡ್ ಕಿಂಗ್’ಡಂ ಗೆ ತೆರಳಲು ನಿರ್ಧರಿಸಿದೆ. ಅದಕ್ಕೆ ಮುನ್ನ ನಾನು ಕಂಡನ್’ಗೆ ಹೋಗಿದ್ದೆನಾದರೂ ನಾನೀಗ ಹೋಗಬೇಕಿದ್ದುದು ಲೀಸೆಸ್ಟರ್’ಗೆ. ಈ ನಗರದಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಆದರೆ ಅದೇನೂ ನನಗೆ ಖುಷಿಯ ಸಂಗತಿಯಾಗಿರಲಿಲ್ಲ. ಅವರಲ್ಲಿ ಬಹುತೇಕರು ಭಾರತೀಯರಿದ್ದರೂ ಅಲ್ಲಿಯೇ ಹುಟ್ಟಿ ಬೆಳೆದು, ಅಲ್ಲಿಯ ಸಂಸ್ಕೃತಿಯನ್ನೇ ರೂಢಿಸಿಕೊಂಡವರಾಗಿದ್ದರು. ನನಗೆ ಅವರ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ.. ಇದ್ದುದರಲ್ಲಿ, ಕೆಲವೇ ಸಂಖ್ಯೆಯ ಇಂಡಿಯನ್ ಹಾಗೂ ಏಶಿಯನ್ ವಿದ್ಯಾರ್ಥಿಗಳಿದ್ದ ಸೋಶಿಯಾಲಜಿ ತರಗತಿಗಳು ನನಗೆ ಇಷ್ಟವಾಗುತ್ತಿದ್ದವು.

ನಾನು ಎಲ್ಲೇ ಹೋದರೂ, ಎಲ್ಲೇ ಇದ್ದರು, ನನಗೆ ಅರಾಮ ಅನ್ನಿಸುವ ಚಿಕ್ಕ ಅವಕಾಶ ಸಿಕ್ಕರೂ ಸಾಕು, ಅದನ್ನೇ ಬಲವಾಗಿ ಹಿಡಿದುಕೊಳ್ಳುತ್ತಿದ್ದೆ. ದೆಹಲಿಯಲ್ಲಿ ಮೊದಲು ಶಾಲಾ ದಿನಗಳಲ್ಲೂ ನಂತರ ಕೆಲಸದಲ್ಲೂ ನಾನು ಮಾಡಿದ್ದು ಇದನ್ನೇ. ಕೆನಡಾ ಮತ್ತು ಯುಕೆಗಳಲ್ಲೂ ಅಷ್ಟೇ. ಇಲ್ಲಿ ಕಾಲೇಜ್ ನನಗೆ ಆರಾಮ ನೀಡುತ್ತಿದ್ದ ಜಾಗವಾಗಿತ್ತು. ಇಲ್ಲಿ ನಾನು ನೆಮ್ಮದಿಯಾಗಿದ್ದೆ. ನನ್ನ ಪಾಡಿಗೆ ನಾನು, ನನ್ನ ನಿಯಂತ್ರಣದಲ್ಲಿ ಇರುತ್ತಿದ್ದೆ.

ನಾನು ಮತ್ತೆ ದೆಹಲಿಗೆ ಮರಳಿದಾಗ ಪರಿಸ್ಥಿತಿ ಸಾಕಷ್ಟು ಉತ್ತಮಗೊಂಡಿತ್ತು. ನನ್ನ ಸುತ್ತಲಿನ ಬದಲಾವಣೆಗಳು ಅಷ್ಟೇನೂ ತೀವ್ರವಾಗಿರಲಿಲ್ಲ. ನನ್ನ ತಾಯಿ ಒಂದು ಸೋಶಿಯಲ್ ವೆಲ್’ಫೇರ್ ಗ್ರೂಪ್ ನಡೆಸುತ್ತಿದ್ದು, ನಾನೂ ಅದರಲ್ಲಿ ಒಳಗೊಂಡಿದ್ದೆ. ನಾನು ಮೊದಲು ಕೆಲಸ ಮಾಡುತ್ತಿದ್ದಲ್ಲಿಗೇ ಮರಳಿ ಅವರೊಡನೆ ಸೇರಿಕೊಂಡೆ. ಈಗ ನನ್ನಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಿತ್ತು.  

ಆ ದಿನಗಳಲ್ಲಿ ಸೌತ್ ಆಫ್ರಿಕಾದಲ್ಲಿ ಸಿವಿಲ್ ವಾರ್ ಆರಂಭವಾಗಿತ್ತು. ನಾವು ಭಾರತಕ್ಕೆ ನೆಲೆ ಬದಲಾಯಿಸಿದ್ದು ಒಳ್ಳೆಯದೇ ಆಯಿತೆಂದು ನಂತರವಷ್ಟೇ ನನಗೆ ಅರ್ಥವಾಗಿದ್ದು. ಅಲ್ಲದೆ, ಕೋಲ್ಕೊತಾದಲ್ಲಿ ನೆಲೆಸಿದ್ದು ನನಗೆ ಸಂತಸವನ್ನೂ ತಂದಿತು. ಕುಟುಂಬ, ಸಂಬಂಧಿಕರು, ನನ್ನ ಗೆಳೆಯರು ಮತ್ತು ಕಸಿನ್’ಗಳು – ಇವರೆಲ್ಲರ ಒಡನಾಟದಲ್ಲಿ ನಾನು ಬೆಳೆಯುವಂತಾಯಿತು. ಆಫ್ರಿಕಾದಲ್ಲೇ ಇದ್ದಿದ್ದರೆ ನನಗೆ ಈ ಅನುಭವಗಳು ಕೈತಪ್ಪಿಹೋಗುತ್ತಿದ್ದವು.

ನನ್ನ ಇತರ ನೆಲೆ ಬದಲಾವಣೆಗಳು ನನ್ನದೇ ನಿರ್ಧಾರವಾಗಿದ್ದವು. ಕೆನಡಾಕ್ಕೆ ಹೋಗಲು ನಾನೇ ಬಯಸಿದ್ದರೂ ಸಹ, ಅಲ್ಲಿಗೆ ಹೋದ ಮೇಲೆ ಹೊಂದಿಕೊಳ್ಳಲು, ಗೆಳೆತನ ಬೆಳೆಸಲು ಸಾಕಷ್ಟು ಒದ್ದಾಡಿದೆ. ನಾನು ಚಿಕ್ಕವಳಿದ್ದಾಗ ನನ್ನ ತಂದೆತಾಯಿಯರು ಮೇಲಿಂದ ಮೇಲೆ ಸ್ಥಳ ಬದಲಾವಣೆ ಮಾಡಿದ ಕಾರಣ ನಾನು ಒಂದು ನಿರ್ದಿಷ್ಟ ಸ್ಥಳಕ್ಕೆ ಸೇರದೇ ಹೋದೆ. ನೋಡಲು ಭಾರತೀಯಳಂತೆ ಕಾಣುತ್ತಿದ್ದರೂ, ಭಾರತದಲ್ಲಿ ನಾನು ಹೊರಗಿನವಳಂತೆ ಕಾಣಲ್ಪಡುತ್ತಿದ್ದೆ. ಸಾಮಾಜಿಕ ಕ್ಷೇತ್ರದಲ್ಲಿ, ಜನರ ನಡುವೆ ಕೆಲಸ ಮಾಡುವಾಗ ಇದೊಂದು ತೊಡಕಾಗುತ್ತಿತ್ತು.

ಪ್ರತಿ ಬಾರಿ ಒಂದು ಹೊಸ ಸ್ಥಳಕ್ಕೆ ಹೋಗಿ ನೆಲೆಸಿದಾಗಲೂ ನಾನು ಹಲವು ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು. ಅವುಗಳಲ್ಲಿ ಬಹುತೇಕ ಆಂತರಿಕ ಬದಲಾವಣೆಗಳು. ಹೊಸ ಆಹಾರ, ಹೊಸ ಸಂಸ್ಕೃತಿ ಮತ್ತು ಹೊಸ ಜನರ ಒಡನಾಟ ನನ್ನನ್ನು ಬಾಧಿಸುವ ಸಂಗತಿಗಳಾಗಿರಲಿಲ್ಲ. ಆದರೆ ಆಂತರಿಕವಾಗಿ ನಾನು ನನ್ನನ್ನು ಕಂಡುಕೊಳ್ಳಲು ಸೋಲುತ್ತಿದ್ದೆ. ಇದನ್ನು ಹೇಗೆ ಸಂಭಾಳಿಸಬೇಕು ಅನ್ನುವುದನ್ನು ಇದೀಗ ಅನುಭವಗಳಿಂದ ಕಲಿತುಕೊಂಡಿದ್ದೇನೆ. ನಮ್ಮ ಅನುಭವಗಳ ಮೂಲಕ ಅರಿವು ಪಡೆಯುವುದು ನಮ್ಮದೇ ಜವಾಬ್ದಾರಿಯಾಗಿರುತ್ತದೆ. ಅದು ಉಪಯುಕ್ತ ಅನ್ನಿಸದೆ ಹೋದರೆ ನಮ್ಮ ಆಲೋಚನೆಯನ್ನು ಎಲ್ಲಿ ಬದಲಾಯಿಸಿಕೊಳ್ಳಬೇಕು ಎಂದು ತೀರ್ಮಾನಿಸುವವರೂ ನಾವೇ ಆಗಿರುತ್ತೇವೆ.

ಆದ್ದರಿಂದ, ನಾನು ನನ್ನ ಸುತ್ತಲಿನ ಪರಿಸರ ನನಗೆ ಪೂರಕವಾಗಿರಬೇಕು ಎಂದು ಬಯಸುವುದಕ್ಕಿಂತ, ನಾನು ಅದಕ್ಕೆ ಹೊಂದಿಕೊಳ್ಳಲು ಹೇಗೆ ಪ್ರಯತ್ನಿಸಬೇಕು ಅನ್ನುವುದಕ್ಕೆ ಒತ್ತು ನೀಡಲು ಆರಂಭಿಸಿದ್ದೇನೆ.

ಈ ಕಥನವನ್ನು ‘ಬಿಯಾಂಡ್ ರಿಲೊಕೇಶನ್’ ಸರಣಿಯಿಂದ ಆಯ್ದುಕೊಳ್ಳಲಾಗಿದೆ. ವಾಸ್ತವ್ಯ ಬದಲಾವಣೆಯು ಹೇಗೆ ಭಾವನಾತ್ಮಕ ಹಾಗೂ ಮಾನಸಿಕ ಪರಿಣಾಮಗಳನ್ನು ಬೀರುತ್ತದೆ ಅನ್ನುವುದನ್ನು ಈ ಸರಣಿಯು ಹೇಳುತ್ತದೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org