ಕ್ರೀಡೆ: ಭರವಸೆಯ ಹಾದಿ

ಕ್ರೀಡೆಯಲ್ಲಿ ಜೀವನದ ಹೊಸ ಅರ್ಥವನ್ನು ಕಂಡುಕೊಳ್ಳುತ್ತಿರುವ ವಿಶೇಷಚೇತನ ಆರ್ ಶ್ರೀರಾಮ್ ಶ್ರೀನಿವಾಸ್
ಪ್ರಸ್ತುತ ತಾವು  ಮಾಡುತ್ತಿರುವ ಗೌರವಾನ್ವಿತ ಕೆಲಸದ ಕುರಿತು ಈ ಮಾಜಿ ಎಂಜನಿಯರ್ಗಿರುವ ಪ್ರೀತಿ ಮತ್ತು ಬದ್ಧತೆಯನ್ನು ಅರಿತುಕೊಳ್ಳಲು  ಅವರೊಂದಿಗೆ ಒಂದು ಮುಖಾಮುಖಿ ಭೇಟಿ ಸಾಕು. ಈ ಲೇಖನದ ಮೂಲಕ  ತಮಿಳುನಾಡು ರಾಜ್ಯದ ಸ್ಪೆಷಲ್ ಒಲಂಪಿಕ್ಸ್ ಭಾರತ್ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಡಾ.ಜೆ. ಪಾಲ್ ದೇವಸಗಾಯಮ್,ಇವರನ್ನು  ಪರಿಚಯಿಸಿಕೊಳ್ಳೋಣ.
ಬೌದ್ಧಿಕ  ನ್ಯೂನತೆಯನ್ನು ಹೊಂದಿರುವ ವಿಶೇಷಚೇತನ ಮಕ್ಕಳನ್ನು ಸಾಮಾಜಿಕವಾಗಿ ಸಹಜವಾಗಿ ಪರಿಗಣಿಸಬೇಕು ಎನ್ನುವ ನಿಟ್ಟಿನಲ್ಲಿ ಒಂದು ಗಟ್ಟಿದನಿಯಾಗಿ ಕೇಳಿಬರುತ್ತಿರುವ ಇವರು ಏಕಾಂಗಿಯಾಗಿ ಕೆಲಸಮಾಡುತ್ತ ತಮಿಳುನಾಡಿನ ವಿಕಲಚೇತನ ಕ್ರೀಡಾಕ್ಷೇತ್ರದ ನಕ್ಷೆಯನ್ನೇ ಬದಲಿಸುವಲ್ಲಿ ಒಂದು ಕ್ರಾಂತಿಯನ್ನೇ  ಸೃಷ್ಟಿಸಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಸ್ಪೆಷಲ್ ಒಲಂಪಿಕ್ಸ್ ಭಾರತ್ ಸಂಸ್ಥೆಯಲ್ಲಿ ಎರಡು ದಶಕಗಳಿಗಿಂತ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ  ಈ ಪ್ರಯತ್ನಗಳು ,ರಾಜ್ಯದ ಮೂಲೆಮೂಲೆಯಲ್ಲಿರುವ ಬೌದ್ಧಿಕ  ನ್ಯೂನತೆ ಹೊಂದಿರುವ  ವಿಶೇಷ ಚೇತನರು ಕ್ರೀಡೆಗಳತ್ತ ಆಕರ್ಷಿತರಾಗುವುದರಲ್ಲಿ ನಿರ್ಣಾಯಕ ಪಾತ್ರವಹಿಸಿವೆ. ಈ ಮೂಲಕ  ಅನೇಕರಿಗೆ ಹೊಸ ಭರವಸೆಯ ಬೆಳಕು ಸಿಕ್ಕಿದೆ. 
ಚೆನ್ನೈನ ಡಿಸೆಂಬರ್ ತಿಂಗಳ ಪ್ರಶಾಂತ ಮುಂಜಾನೆ , ಬೆಳಿಗ್ಗೆ 7 ಗಂಟೆಗೆ ಒಂದು ತಾಸಿನ ಯೋಗಾಭ್ಯಾಸದ ಮೂಲಕ 22 ವರ್ಷದ ಆರ್ ಶ್ರೀರಾಮ್ ಶ್ರೀನಿವಾಸ್ ಅವರ ದಿನಚರಿ ಆರಂಭವಾಗುತ್ತದೆ. ನಂತರ 10 ಗಂಟೆಗೆ ಶಾಲೆಗೆ ತೆರಳುವ ಮೊದಲು ಮನೆಯ ಸುತ್ತಮುತ್ತ ಸೈಕಲ್ ತುಳಿಯುತ್ತಾರೆ. ಶಾಲೆಯ ನಂತರ ಸಂಜೆಯ ವೇಳೆಯಲ್ಲಿ ಅವರ  ಕಟ್ಟುನಿಟ್ಟಿನ ವ್ಯಾಯಾಮವು ಮತ್ತೆ ಆರಂಭವಾಗುತ್ತದೆ. 1 ಗಂಟೆ ಈಜಾಡುವುದರೊಂದಿಗೆ ಹೆಚ್ಚಿನ ಕ್ರೀಡಾ ತರಬೇತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆಮೇಲೆ ಅವರ ಕುಟುಂಬವು ನಡೆಸುತ್ತಿರುವ  ದಿನಸಿ ಅಂಗಡಿಯಲ್ಲಿ ಕುಳಿತು ಊಟದ ಸಮಯದವರೆಗೂ ವಿಶ್ರಾಂತಿ ಪಡೆಯುತ್ತಾರೆ.
ಪ್ರತಿದಿನವೂ ಹೆಚ್ಚು ಕಡಿಮೆ ಇದೇ ರೀತಿ ಸಾಗುವ ಶ್ರೀರಾಮ್ ಅವರ ದಿನಚರಿಯು ನಮಗೆ ಬಹಳ ಕಷ್ಟಕರವೆಂದು ತೋರುತ್ತದೆ. ಆದರೆ 3 ವರ್ಷದ ಹಿಂದೆ ಇದೇ ವ್ಯಕ್ತಿಗೆ ಆಸರೆಯಿಲ್ಲದೆ ನಿಂತುಕೊಳ್ಳುವುದು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಗಮನಿಸಿದಾಗ  ಅವರ ಕತೆಯು ಬಹಳ ಸ್ಫೂರ್ತಿದಾಯಕವಾಗಿ ತೋರುತ್ತದೆ.
ಶ್ರೀರಾಮ್ ಅವರು ಹುಟ್ಟಿನಿಂದಲೇ ಬುದ್ಧಿಮಾಂದ್ಯತೆ ಮತ್ತು ಸ್ಪಾಸ್ಟಿಕ್ ಡೈಪ್ಲೆಜಿಯಾ ಎಂದು ಕರೆಯಲಾಗುವ ಹಲವು ರೀತಿಯ ವೈಕಲ್ಯತೆಗಳನ್ನು ಹೊಂದಿದ್ದರು.
ತನ್ನ ಓರಗೆಯ ಸ್ನೇಹಿತರೊಂದಿಗೆ  ಶ್ರೀರಾಮ್ ಆಕ್ರಮಣಕಾರಿ ಮನೋಭಾವವನ್ನು ಹೊಂದಿದ್ದರು ಮತ್ತು ಯಾವಾಗಲೂ ಅವಿಶ್ರಾಂತರಾಗಿರುತ್ತಿದ್ದರು. ಆದರೆ ಕ್ರೀಡೆಯು ಅವರ ಜೀವನದ ಅವಿಭಾಜ್ಯ ಅಂಗವಾದಂದಿನಿಂದ  ಅವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾದವು. “ಕ್ರೀಡೆಯಿಂದ ಎರಡು ರೀತಿಯ ಪ್ರಯೋಜನಗಳಿವೆ,” ಎನ್ನುತ್ತಾರೆ ಡಾ. ದೇವಸಗಾಯಮ್. “ಮೊದಲನೆಯದಾಗಿ - ಇದು ಮಕ್ಕಳನ್ನು ದೈಹಿಕವಾಗಿ ಸದೃಢವಾಗಿರಿಸುತ್ತದೆ ಮತ್ತು ನಡವಳಿಕೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಎರಡನೆಯದಾಗಿ - ಮಕ್ಕಳಿಗೆ ಗುಂಪು ಆಟಗಳ ಮೂಲಕ ತಮ್ಮ ವಯಸ್ಸಿನ ಇತರ ಮಕ್ಕಳೊಂದಿಗೆ ಸಾಮಾಜಿಕ ಸಂವಹನವು ಸಾಧ್ಯವಾಗುವಂತೆ ಮಾಡುತ್ತದೆ.”
ಬೌದ್ಧಿಕ ನ್ಯೂನ್ಯತೆಯಿರುವ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರ ಆತ್ಮಗೌರವವು ಹೆಚ್ಚುತ್ತದೆಯೆಂಬದು ಸಂಶೋಧನೆಗಳಿಂದ ತಿಳಿದುಬಂದಿದೆ. ಇಂತಹ ಧನಾತ್ಮಕ ಅಂಶಗಳ ಹೊರತಾಗಿಯೂ ಡಾ. ದೇವಸಗಾಯಮ್ ಅವರು ಹೇಳುವಂತೆ ಬೌದ್ಧಿಕ ನ್ಯೂನ್ಯತೆಯಿರುವ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಲು ಹಿಂದೇಟು ಹಾಕುತ್ತಾರೆ. ಅವರು ತಮ್ಮ ಮಗುವು ಯಾವುದೇ ರೀತಿಯ ದೈಹಿಕ ಪರಿಶ್ರಮವನ್ನು ತಡೆದುಕೊಳ್ಳುವುದಿಲ್ಲ ಎಂದು ಭಾವಿಸುತ್ತಾರೆ.
ಈ ಅರಿವಿನ ಕೊರತೆಯಿಂದಾಗಿಯೇ ಭಾರತದಲ್ಲಿ ಅಡಾಪ್ಟಿವ್ ಸ್ಪೋರ್ಟ್ಸ್ (ಜisಚಿbiಟiಣಥಿ sಠಿoಡಿಣs) ಅನ್ನು ಮುಂಚೂಣಿಗೆ ತರುವುದು ಸಾಧ್ಯವಾಗುತ್ತಿಲ್ಲ. ಅದೃಷ್ಟವಶಾತ್ ಹೆಚ್ಚಿನ ಜನರಲ್ಲಿ ಈ ಭಾವನೆಯು ನಿಧಾನವಾಗಿ ಕಡಿಮೆಯಾಗುತ್ತಿದೆ. 2008 ರಲ್ಲಿ ತಮಿಳುನಾಡಿನಲ್ಲಿ ಕೇವಲ 2000 ವಿಶೇಷ ಒಲಂಪಿಕ್ಸ್ ಅಥ್ಲಿಟ್ ಗಳು ನೋಂದಣಿ ಮಾಡಿಸಿಕೊಂಡಿದ್ದರೆ,ಈಗ ಅವರ ಸಂಖ್ಯೆಯು 1.65 ಲಕ್ಷವನ್ನು ದಾಟಿದೆ.
ಈ ನೋಂದಾಯಿತ ಅಥ್ಲಿಟ್ ಗಳು ರಾಜ್ಯದ ಎಲ್ಲಾ 32 ಜಿಲ್ಲೆಗಳಿಂದ ಮತ್ತು ಎಲ್ಲಾ ಸಾಮಾಜಿಕ ಸ್ಥರದಿಂದ ಬಂದವರಾಗಿರುತ್ತಾರೆ. “ಇದೀಗ ಪಾಲಕರು ವೃತ್ತಿಪರ ತರಬೇತಿಗಿಂತಲೂ ಕ್ರೀಡಾ ತರಬೇತಿಯು ಹೆಚ್ಚು ಸೂಕ್ತವಾದ ಆಯ್ಕೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ" ಎಂದು ಡಾ ದೇವಸಗಾಯಮ್ ಹೇಳುತ್ತಾರೆ.
ಶ್ರೀರಾಮನಿಗೆ 12 ವರ್ಷವಿರುವಾಗ ಅವನ ಪಾಲಕರು ಸೀರಿಯಲ್ ಕಾಸ್ಟಿಂಗ್ ಚಿಕಿತ್ಸೆ ಕೊಡಿಸಲು ನಿರ್ಧರಿಸಿದರು. ಈ ಚಿಕಿತ್ಸೆಯಲ್ಲಿ ಒಂದು ಸ್ಥಿತಿಯಲ್ಲಿ ನಿಲ್ಲಲು ಅನುಕೂಲವಾಗುವಂತೆ ಕಾಲಿನ ಮಾಂಸಖಂಡಗಳನ್ನು ಹಿಗ್ಗಿಸಲು ಶ್ರೀರಾಮನ ಕಾಲಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ಮಾಡಲಾದ ಉಡುಪನ್ನು ಹಾಕಲಾಗಿತ್ತು. ಇದರಿಂದ ಶ್ರೀರಾಮನು ಇನ್ನೊಬ್ಬರ ಸಹಾಯದಿಂದ ಸ್ವಲ್ಪ ಮಟ್ಟಿಗೆ ಓಡಾಡುವುದು ಸಾಧ್ಯವಾಯಿತು. ಆದರೆ ಅವನು ಮೂರು ತಿಂಗಳುಗಳ ಕಾಲ ಭಾರವಾದ ಕಾಸ್ಟ್ ಗಳನ್ನು ಹಾಕಿಕೊಂಡು ಇರುವಂತಾಯಿತು. ಈ ಕಾಸ್ಟುಗಳನ್ನು (12 ಕಿಲೊಗ್ರಾಮ್ ತೂಕದ) ಪ್ರತಿ ಹತ್ತು ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಮತ್ತು ಈ ಪ್ರಕ್ರಿಯೆಯು ಶ್ರೀರಾಮನಿಗೆ ತೀವ್ರವಾದ ನೋವನ್ನುಂಟು ಮಾಡುತ್ತಿತ್ತು.
ಬೇರೊಬ್ಬರ ಸಹಾಯದಿಂದ ಸ್ವಲ್ಪಹೊತ್ತು ನಡೆಯುವ ದಿನಚರಿಯನ್ನು ಹೊರತುಪಡಿಸಿ ಉಳಿದ ಸಮಯ ಶ್ರೀರಾಮನು ಹಾಸಿಗೆಯಲ್ಲಿಯೇ ಇರಬೇಕಾಗುತ್ತಿತ್ತು. “ನಾನು ಶ್ರೀರಾಮನನ್ನು ಅತ್ಯಂತ ಒತ್ತಡಕ್ಕೆ ಒಳಪಡಿಸುತ್ತಿದ್ದೆ ಎಂದು ನನಗೆ ಅರಿವಾಗುವಷ್ಟರಲ್ಲಿ ಅವನು 15 ವರ್ಷದವನಾಗಿದ್ದ,” ಎನ್ನುತ್ತಾರೆ ಅವನ ತಾಯಿ ಆರ್ ವನಿತಾ. ಶ್ರೀರಾಮನು 6 ತಿಂಗಳ ಮಗುವಾಗಿದ್ದಾಗ ಆರಂಭವಾದ  ಈ ರೀತಿಯ ಪ್ರಯತ್ನಗಳು ದೈಹಿಕ ಮತ್ತು ವೃತ್ತಿಪರ ಥೆರಪಿಗಳಲ್ಲದೇ ಅಸಂಪ್ರದಾಯಿಕ ವಿಧಾನಗಳಾದ ಆಯುರ್ವೇದ, ಬಟೊಕ್ಸ್, ಆಕ್ಯುಪಂಕ್ಚರ್, ಎಲೆಕ್ಟ್ರಿಕಲ್ ಮಸಲ್ ಸ್ಟಿಮ್ಯುಲೇಶನ್ ಮುಂತಾದ ಚಿಕಿತ್ಸೆಗಳ ಮೂಲಕ ಮುಕ್ತಾಯಗೊಂಡು , ಅವನ ಕುಟುಂಬದವರು ಪರ್ಯಾಯ ಮಾರ್ಗಗಳನ್ನು ಹುಡುಕಲು ಆರಂಭಿಸಿದರು.
2013 ರಲ್ಲಿ ಅವರು ಶ್ರೀರಾಮನ ಶಿಕ್ಷಕರಾದ ಜಿ ವಿ ಆರ್ಮುಗಮ್ರವರ ಮೂಲಕ ಡಾ ದೇವಸಗಾಯಮ್ ಅವರನ್ನು ಭೇಟಿ ಮಾಡಿದರು. ಈ ಭೇಟಿಯು ಅವನ ಜೀವನದ ದಿಕ್ಕನ್ನೇ ಬದಲಾಯಿಸಿತು. ಅಲ್ಲಿಯವರೆಗೂ ಸ್ಪೆಶಲ್ ಒಲಂಪಿಕ್ ಭಾರತ್ ಹೆಸರನ್ನೇ ಕೇಳಿರದ ಮತ್ತು ಕ್ರೀಡೆಯ ಚಿಕಿತ್ಸಕ ಲಾಭಗಳನ್ನು ಬಗ್ಗೆ ಅರಿವಿರದ ಅವನ ಪಾಲಕರು ಶ್ರೀರಾಮನನ್ನು ಡಾ. ದೇವಸಗಾಯಮ್ ಅವರ ಬಳಿ ತರಬೇತಿಗಾಗಿ ನೋಂದಾಯಿಸಿದರು.
ಕೇವಲ ಒಂದು ವರ್ಷದ ಒಳಗೆ ಡಾ. ದೇವಸಗಾಯಮ್ ಅವರು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪೆಶಲ್ ಒಲಂಪಿಕ್ಸ್ ನಲ್ಲಿ 100 ಮೀಟರ್ ನೆರವಿನ ನಡಿಗೆಗೆ ಶ್ರೀರಾಮನ ಹೆಸರನ್ನು ದಾಖಲಿಸಿದರು. ವನಿತಾ ಅವರು ಶ್ರೀರಾಮನು ಇದರಲ್ಲಿ ಭಾಗವಹಿಸುವ ಬಗ್ಗೆ ಆತಂಕಗೊಂಡಿದ್ದರು. ಆದರೆ,  ಡಾ ದೇವಸಗಾಯಮ್ ಅವರು ಆಕೆಯಲ್ಲಿ ಸಾಕಷ್ಟು ಭರವಸೆಯನ್ನು ತುಂಬಿದರು. ಶ್ರೀರಾಮನು ಮೊದಲ ಮೂವರಲ್ಲಿ ಒಬ್ಬನಾಗಿ ಓಟವನ್ನು ಯಶಸ್ವಿಯಾಗಿ ಪೂರೈಸಿದ್ದ. “ಶ್ರೀರಾಮನು ಓಟವನ್ನು ಪೂರೈಸುತ್ತಾನೆ ಎಂದೇ ಅಂದುಕೊಂಡಿರಲಿಲ್ಲ, ಆದರೆ ಅವನು ಯಾವುದೇ ಅಡೆತಡೆಯಿಲ್ಲದೆ ಅಂತಿಮ ಗೆರೆಯನ್ನು ತಲುಪಿದಾಗ ನಾನು ಬಹಳ ಆಶ್ವರ್ಯ ಚಕಿತಳಾಗಿದ್ದೆ,” ಎಂದು ವನಿತಾ ನೆನಪಿಸಿಕೊಳ್ಳುತ್ತಾರೆ.
ಶ್ರೀರಾಮನ ತಂದೆ ಆರ್. ರಾಜಶೇಖರನ್ ರವರು ಆರಂಭದಲ್ಲಿ ಶ್ರೀರಾಮನ ಪರಿಸ್ಥಿತಿಗೆ ಕ್ರೀಡೆಯನ್ನು ಚಿಕಿತ್ಸೆಯಾಗಿ ಬಳಸುವ ಬಗ್ಗೆ ಅನುಮಾನವನ್ನು ಹೊಂದಿದ್ದರೂ ಸಹ ಈಗ ಪೂರ್ಣಮನಸ್ಸಿನಿಂದ ಅದನ್ನು ಒಪ್ಪಿಕೊಂಡಿದ್ದಾರೆ.
ಈಗಲೂ ಕೆಲವೊಮ್ಮೆ ಹಳೆಯ ಆಕ್ರಮಣಕಾರಿ ಶ್ರೀರಾಮನು ಕಂಡುಬರುತ್ತಿರುತ್ತಾನೆ. ಅವನ ನಡವಳಿಕೆಯ ಸಮಸ್ಯೆಯನ್ನು ನಿರ್ವಹಿಸಲು ಇನ್ನು ಬಹಳ ಪರಿಶ್ರಮದ ಅಗತ್ಯವಿದೆ. ಆದರೆ ಅವನಲ್ಲಿ ಕಂಡುಬಂದಿರುವ ಸುಧಾರಣೆಯು ಕುಟುಂಬದವರಲ್ಲಿ ಭರವಸೆಯನ್ನು ಮೂಡಿಸಿದೆ. “ಶ್ರೀರಾಮನು ಈಗ ಯಾವುದೇ ನೆರವಿಲ್ಲದೆ ನಿಂತುಕೊಳ್ಳಬಲ್ಲ.
ಆತನ ಹೃದಯನಾಳಗಳ ವ್ಯವಸ್ಥೆಯು ಸಶಕ್ತವಾಗಿದೆ ಮತ್ತು ಆತನ ಕ್ರೀಡಾ ಚಟುವಟಿಕೆಗಳಿಂದಾಗಿ ತನ್ನ ದಿನನಿತ್ಯದ ಕೆಲಸಗಳಿಗೆ ಇನ್ನೊಬ್ಬರನ್ನು ಆಶ್ರಯಿಸುವುದು ಕೂಡ ಬಹಳಷ್ಟು ಕಡಿಮೆಯಾಗಿದೆ.” ಡಾ. ದೇವಸಗಾಯಮ್ ರವರು, “2019 ರಲ್ಲಿ ಇವನು ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ ಎಂದು ನನಗೆ ಭರವಸೆಯಿದೆ,” ಎನ್ನುತ್ತಾರೆ. ಅವನ ಸುತ್ತಲೂ ಇರುವ ಆರೋಗ್ಯಕರ ನೆರವಿನ ಸಹಾಯದಿಂದ ಬಹುಶಃ ಶ್ರೀರಾಮನು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವ ದಿನ ದೂರವಿಲ್ಲವೆಂದು ಆತ್ಮವಿಶ್ವಾಸವನ್ನು ವ್ಯಕ್ತ ಪಡಿಸುತ್ತಾರೆ.
ವಿಶಿಷ್ಟ ಚೇತನರಿಗೆ  ಇದು ಬಹಳ ಕಷ್ಟದ ವಿಷಯ. ಅದರಲ್ಲಿಯೂ ಒಂದಕ್ಕಿಂತ ಹೆಚ್ಚು ವೈಕಲ್ಯತೆಗಳಿಂದ ಬಳಲುತ್ತಿರುವ  ವ್ಯಕ್ತಿಗಳಿಗೆ  ಮತ್ತಷ್ಟು ಕ್ಲಿಷ್ಟಕರ ವಿಷಯ.  ದೇಶದಲ್ಲಿ ಬೌದ್ಧಿಕ ನ್ಯೂನತೆ ಮತ್ತು ವಿಕಲ ಚೇತನವುಳ್ಳ ವ್ಯಕ್ತಿಗಳ ಅಗತ್ಯಗಳನ್ನು ಪೂರೈಸಲು ಬೇಕಾದ ಮೂಲಭೂತ ಸೌಲಭ್ಯದ ಕೊರತೆಯ ಬಗ್ಗೆ ಡಾ. ದೇವಸಗಾಯಮ್ ರವರು ಖೇದವನ್ನು ವ್ಯಕ್ತಪಡಿಸುತ್ತಾರೆ. ಭಾರತವು ಪ್ರಪಂಚದಲ್ಲಿಯೇ ಅತಿಹೆಚ್ಚು ನ್ಯೂನ್ಯತೆಯುಳ್ಳ 70 ಮಿಲಿಯನ್ – ಜನಸಂಖ್ಯೆಯನ್ನು ಹೊಂದಿದೆ. ಆದರೂ ವಿಕಲಚೇತನ ಸ್ನೇಹಿ ವ್ಯವಸ್ಥೆ, ಮುಖ್ಯವಾಗಿ ಕ್ರೀಡಾಸ್ಥಳಗಳು ಇಲ್ಲಿ ಬಹಳ ಅಪರೂಪ. “ಇದು ಈ ಮಕ್ಕಳನ್ನು ತರಬೇತಿಗೊಳಿಸಲು ದೊಡ್ಡ ಅಡಚಣೆಯಾಗಿದೆ.
ವಿಶೇಷ ಸಾಮರ್ಥ್ಯವಿರುವ ಮಕ್ಕಳಿಗೆ ತರಬೇತಿ ನೀಡುವುದು, ಸಾಮಾನ್ಯ ಮಕ್ಕಳಿಗೆ ತರಬೇತಿ ನೀಡುವುದಕ್ಕಿಂತ ವಿಭಿನ್ನವೇನಲ್ಲ. ಸರ್ಕಾರವು ಅವರ ಅಗತ್ಯಗಳನ್ನು ಗುರುತಿಸಿ ಪೂರೈಸಲು ಇದು ಸರಿಯಾದ ಸಮಯ” ಎಂದು ಅವರು ಹೇಳುತ್ತಾರೆ. ಅವರು ವಿಶೇಷ ಅಗತ್ಯತೆಯುಳ್ಳ ಮಕ್ಕಳ ಕುರಿತು ಸಮಾಜದಲ್ಲಿರುವ ಪೂರ್ವಗ್ರಹವನ್ನು ಹೋಗಲಾಡಿಸುವ ಉದ್ದೇಶದಿಂದ, ವೈಕಲ್ಯತೆಯಿರುವ ಮಕ್ಕಳನ್ನು ಮತ್ತು ಸಾಮಾನ್ಯ ಮಕ್ಕಳನ್ನು ಒಂದೆಡೆಗೆ ಸೇರಿಸುವ ಯುನಿಫೈಡ್ ಸ್ಪೋರ್ಟ್ಸ್ ಗಳಂತಹ ಯೋಜನೆಗಳನ್ನು ಬೆಂಬಲಿಸುತ್ತಾರೆ. “ಶೈಕ್ಷಣಿಕ ಇಲ್ಲವೇ ಕ್ರೀಡಾ ಪರಿಸರದಲ್ಲಿ ಈ ಮಕ್ಕಳು ಒಂದಾಗಿ ಸಾಗಿದಾಗ ಮಾತ್ರವೇ ಮುಖ್ಯವಾಹಿನಿಯೊಂದಿಗೆ ಬೆರೆಯಲು  ಸಾಧ್ಯವಾಗುತ್ತದೆ.” ಎನ್ನುವ ಅವರು ಸಮಾಜದ ಪ್ರತಿಯೊಬ್ಬರಿಗೂ ಸಹನೆ, ದೃಢತೆ ಮತ್ತು ಸಾಧನೆಯ ಸಂದೇಶವನ್ನು ತಮಿಳಿನ ಈ ಜನಪ್ರಿಯ ಗಾದೆಯ ಮೂಲಕ ತಲುಪಿಸಲು ಬಯಸುತ್ತಾರೆ. "ನಂಬಿಕ್ಕೈ ಎಂಡ್ರು ಒಂಡ್ರು  ಇರುಂದಾಲ್ ಮಾಟ್ರಮ್ ಪೋಧುಂ, ಇರುಟಿಲ್ ನಾಡಂಥಾಲುಮ್ ಹಿಮಾಯಂ ವಾರಿ ಚೆಲ್ಲಂ " ಅಂದರೆ, ವಿಶ್ವಾಸ ಮತ್ತು ಭರವಸೆಯಿಂದ ಜೀವನದಲ್ಲಿ ಎಂತಹ ಸಂದರ್ಭವನ್ನಾದರೂ ಎದುರಿಸಿ ಜಯಗಳಿಸಬಹುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org