ನೀವು ನೀಡುತ್ತಿರುವುದು ಸಹಾಯವೋ ಒತ್ತಡವೋ?

ವಿದ್ಯಾರ್ಥಿಗಳ ಜೊತೆಗೆ ಪೋಷಕರು ಮತ್ತು ಶಿಕ್ಷಕರು ಕೂಡ ಪರೀಕ್ಷೆಯ ಸಮಯದಲ್ಲಿ ಆತಂಕದಲ್ಲಿರುತ್ತಾರೆ. ಪರೀಕ್ಷೆಯ ಅಂಕಗಳು ವಿದ್ಯಾರ್ಥಿಯ ಬೆಲೆ ಅಳೆಯುತ್ತದೆ ಎಂಬ ಕಲ್ಪನೆ ಇದೆ. ತಾವು ಒಳ್ಳೆಯ ಪೋಷಕರೇ, ಒಳ್ಳೆಯ ಶಿಕ್ಷಕರೇ ಎಂದು ತಮ್ಮನ್ನು ತಾವು ಮಕ್ಕಳ ಪರೀಕ್ಷೆಯ ಫಲಿತಾಂಶದಿಂದ ಅಳೆದುಕೊಳ್ಳುವರು.

ಮಕ್ಕಳು ತಮ್ಮ ಪೋಷಕರ ಮತ್ತು ಶಿಕ್ಷಕರ ನಿರೀಕ್ಷೆಗಳನ್ನು ಮುಟ್ಟಲು ಅಥವಾ ಅದಕ್ಕಿಂತ ಹೆಚ್ಚು ಸಾಧಿಸಲು ಬಯಸುತ್ತಾರೆ. ಆದರೆ ತಮ್ಮ ನಿರೀಕ್ಷೆಗಳನ್ನು ಮಕ್ಕಳಿಗೆ ತಿಳಿಸುವಾಗ ಅದು ಒತ್ತಡವಾಗದಂತೆ ನೋಡಿಕೊಳ್ಳುವುದು ಶಿಕ್ಷಕರ ಮತ್ತು ಪೋಷಕರ ಜವಾಬ್ದಾರಿ.

ನಿಮ್ಮ ಮಕ್ಕಳು ಅಥವಾ ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿ ನಡೆಸುತ್ತಿರುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ಮೊದಲನೆಯದಾಗಿ, ಇದು ನಿಮಗೆ ಸಂಬಂಧಿಸಿದ ವಿಷಯವಲ್ಲ. ನೀವು ಮಕ್ಕಳನ್ನು ಬೆಳೆಸಿರುವ ರೀತಿ ಅಥವಾ ನೀವು ಪಾಠ ಮಾಡಿದ ರೀತಿಗೆ ಪರೀಕ್ಷೆಯ ಫಲಿತಾಂಶ ಸರ್ಟಿಫಿಕೇಟ್ ಅಲ್ಲ. ಒಂದು ವೇಳೆ ಹಾಗೆ ಅಂದುಕೊಂಡರೂ ಮಕ್ಕಳು ಆ ಕಾರಣಕ್ಕಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕಿಲ್ಲ. ನಿಮಗೆ ಮಕ್ಕಳ ಪರೀಕ್ಷೆಯ ಬಗ್ಗೆ ಆತಂಕವಿದ್ದರೆ ಅದನ್ನು ಸ್ನೇಹಿತರೊಂದಿಗೆ ಅಥವಾ ಆಪ್ತಸಮಾಲೋಚಕರೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳಿ. ನಿಮ್ಮ ಆತಂಕವನ್ನು ಮಕ್ಕಳ ಮೇಲೆ ಹೇರಬೇಡಿ.

ಎರಡನೆಯದಾಗಿ, ಇದು ಮಗುವಿನ ಜೀವನ ನಿರ್ಧರಿಸುವ ಅಂತಿಮ ತೀರ್ಮಾನವಲ್ಲಮಕ್ಕಳು ತಮ್ಮ ಜೀವನದಲ್ಲಿ ದಾಟಬೇಕಾಗಿರುವ ಹಲವು ಹಂತಗಳಲ್ಲಿ ಇದೂ ಒಂದು ಅಷ್ಟೆ. ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಗೆಲ್ಲುವುದೇ ಗುರಿ, ಆಚೀಚೆ ನೊಡಲು ಅಥವಾ ವಾತಾವರಣ ಸವಿಯಲು ಸಮಯ ಇರುವುದಿಲ್ಲ. ಆದರೆ ಜೀವನವು ಹಾಗಲ್ಲ. ಜೀವನ ಒಂದು ಮ್ಯಾರಥಾನ್ ಇದ್ದಂತೆ. ಅದನ್ನು ಯಶಸ್ವಿಯಾಗಿ ಪೂರ್ತಿಗೊಳಿಸುವುದು ಮುಖ್ಯವೇ ಹೊರತು ಗೆಲ್ಲುವುದಲ್ಲ. ನಾವು ದಾಟುವ ಪ್ರತಿಯೊಂದು ಮೈಲಿಗಲ್ಲನ್ನು ಸವಿಯುತ್ತಾ, ಎಲ್ಲ ಅನುಭವಗಳನ್ನು ಆನಂದಿಸುತ್ತಾ, ಉತ್ಸಾಹವನ್ನು ಉಳಿಸಿಕೊಂಡು ಕೊನೆಯವರೆಗೆ ಸಾಗುವುದು ಉದ್ದೇಶವಾಗಿರಬೇಕು. ಪೋಷಕರು ಮತ್ತು ಶಿಕ್ಷಕರು ಮೊದಲು ಇದನ್ನು ಅರ್ಥಮಾಡಿಕೊಂಡು, ನಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಜೀವನದ ಮ್ಯಾರಥಾನ್ ನಲ್ಲಿ ಮಗುವು ಎಡವಿದರೂ, ನಾವು ಅವರನ್ನು ಪ್ರೋತ್ಸಾಹಿಸಿದರೆ ಮತ್ತೆ ಚೇತರಿಸಿಕೊಂಡು ಓಡಲು ಸಾಧ್ಯವಿದೆ. ಈ ಅಡೆತಡೆಗಳು ಜೀವನದಲ್ಲಿ ಸಹಜ.

ಮೂರನೆಯದಾಗಿ, ಅವರ ಪ್ರಯತ್ನವನ್ನು ಉತ್ತೇಜಿಸಿ. ಪರೀಕ್ಷೆಯಲ್ಲಿ ಯಾವ ಪ್ರಶ್ನೆಗಳು ಬರಬಹುದು, ಅವರ ಉತ್ತರ ಪತ್ರಿಕೆಯನ್ನು ಯಾರು ಕರೆಕ್ಟ್ ಮಾಡಬಹುದು, ಅವರ ದಿನ ಚೆನ್ನಾಗಿದೆಯೇ ಇಲ್ಲವೇ, ಉಳಿದ ಮಕ್ಕಳು ಯಾವ ರೀತಿ ಉತ್ತರಿಸಿರಬಹುದು, ಪ್ರಶ್ನೆ ಪತ್ರಿಕೆ ಲೀಕ್ ಆಗಬಹುದೇ ಅಥವಾ ಟೈಮ್ ಟೇಬಲ್ ಬದಲಾಗಬಹುದೇ ಎಂಬ ವಿಚಾರಗಳು ನಮ್ಮ ಕೈಯಲ್ಲಿರುವುದಿಲ್ಲ. ಮಕ್ಕಳು ತಮ್ಮ ಕೈಲಾದ ಉತ್ತಮ ಪ್ರಯತ್ನವನ್ನು ಮಾಡುವಂತೆ ನೋಡಿಕೊಳ್ಳಿ.

ಪರೀಕ್ಷೆಯನ್ನು ಎದುರಿಸುತ್ತಿರುವ ಮಕ್ಕಳಿಗೆ ಏನು ಹೇಳಬೇಕು? ಏನು ಹೇಳಬಾರದು?

  • "ನೀನು ಚೆನ್ನಾಗಿಯೇ ಬರೆಯುತ್ತೀಯ. ನೀನು 100% ಪಡೆಯಬೇಕು, ನಿನ್ನಿಂದ ಅದು ಸಾಧ್ಯವಿದೆ” ಎಂದು ಹೇಳಿದರೆ ಮಕ್ಕಳು ಸದಾ ಉತ್ತಮ ಪ್ರದರ್ಶನ ನೀಡಬೇಕೆಂಬ ಹೊರೆ ಹಾಕಿದಂತೆ. ಸಾಧ್ಯವಾದಷ್ಟು ಪ್ರಯತ್ನ ಮಾಡು, ಅದೇ ಮುಖ್ಯ ಎಂದು ಹೇಳಿ.
  • ಇದು ಮುಖ್ಯವಾದ ಪರೀಕ್ಷೆ. ನಿನ್ನ ಜೀವನವೇ ಇದರ ಮೇಲೆ ನಿಂತಿದೆ. ನಿನಗಿರುವುದು ಇದೊಂದೇ ಅವಕಾಶ. ಪರೀಕ್ಷೆಯಲ್ಲಿ ಚೆನ್ನಾಗಿ ಮಾಡದಿದ್ದರೆ ನೀನು ಏನನ್ನೂ ಸಾಧಿಸುವುದಿಲ್ಲ. ಹೀಗೆ ಹೇಳುವುದು ತಪ್ಪು. ಸೋಲನ್ನು ಎದುರಿಸುವುದರಿಂದ ಮಕ್ಕಳು ಬೆಳೆಯುತ್ತಾರೆ. ನಿನ್ನ ಪ್ರಯತ್ನವನ್ನು ಮಾಡು. ಒಂದೇ ದಾರಿ ಸರಿ ಎಂದು ಹೇಳಲು ಸಾಧ್ಯವಿಲ್ಲ. ನೀನು ಬಯಸಿದ ದಾರಿಯಲ್ಲಿ ಹೋಗಲು ಕಷ್ಟವಾದರೆ ಬೇರೆ ದಾರಿಯಲ್ಲಿ ಹೋಗಲು ಈ ಫಲಿತಾಂಶ ಸಹಾಯ ಮಾಡುತ್ತದೆ. ಜನರು ತಮ್ಮ ಎರಡನೆಯ ಅಥವಾ ಮೂರನೆಯ ಆಯ್ಕೆಗಳಲ್ಲೂ ಯಶಸ್ಸು ಕಾಣುತ್ತಾರೆ. ನಿನ್ನ ಆಯ್ಕೆಯ ಉಪಯೋಗ ಹೇಗೆ ಮಾಡುವೆ ಎಂಬುದು ಮುಖ್ಯಎಂದು ಹೇಳಿ.
  • ನೀನು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡದಿದ್ದರೆ ನಿನ್ನ ಅಜ್ಜ ಅಜ್ಜಿ ಏನೆಂದುಕೊಳ್ಳುತ್ತಾರೆ? ನಿನ್ನ ಪ್ರಿನ್ಸಿಪಲ್ ಗೆ ಬೇಜಾರಾಗಬಹುದುಎಂಬ ಮಾತುಗಳು ತಪ್ಪು.  ಮೊದಲೇ ಹೇಳಿದಂತೆ ಇದು ನಿಮ್ಮ ಅಥವಾ ಸಮಾಜದ ವಿಷಯವಲ್ಲ. ನಿಮ್ಮ ಮಕ್ಕಳಿಗೆ ತಾವು ಮಾಡಿರುವ ಪ್ರಯತ್ನದ ಬಗ್ಗೆ ಸಮಾಧಾನ ಇರಬೇಕು.

ಪೋಷಕರು ಮತ್ತು ಶಿಕ್ಷಕರಾಗಿ ನಾವು ಮಕ್ಕಳ ಪ್ರಯತ್ನವನ್ನು ಗುರುತಿಸಬೇಕು, ಫಲಿತಾಂಶವನ್ನಲ್ಲ. ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಅವಕಾಶಗಳಿವೆ, ಯಶಸ್ಸಿಗೆ ಹಲವಾರು ಮಾರ್ಗಗಳಿವೆ ಎಂದು ತಿಳಿಯಬೇಕು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org