ಡಿಮೆನ್ಷಿಯಾ ಆರೈಕೆದಾರರ ಆರೈಕೆ

ಎಲ್ಲಾ ಆರೈಕೆದಾರರು ಎದುರಿಸುತ್ತಿರುವ ಹಲವು ರೀತಿಯ ಸಮಸ್ಯೆಗಳ ಬಗ್ಗೆ ನನ್ನ ಹಿಂದಿನ ಲೇಖನಗಳಲ್ಲಿ ಚರ್ಚಿಸಿದ್ದೇನೆ. ಪ್ರಸ್ತುತ ಲೇಖನದಲ್ಲಿ ಡಿಮೆನ್ಷಿಯಾ ತೊಂದರೆಯಿರುವವರ ಪಾಲನೆ ಮಾಡುವ ಆರೈಕೆದಾರರ ಕುರಿತು ಗಮನ ಹರಿಸುತ್ತಿದ್ದೇನೆ.

ಡಿಮೆನ್ಷಿಯಾ ಮತ್ತು ಇತರೆ ಸಹಸಂಬಂಧಿತ ಸಮಸ್ಯೆಗಳು ನೇರವಾಗಿ ಹಾಗೂ ಪರೋಕ್ಷವಾಗಿ ಕುಟುಂಬಗಳ ಮೇಲೆ ತುಂಬಾ ಪರಿಣಾಮ ಬೀರುತ್ತವೆ. ಡಿಮೆನ್ಷಿಯಾ ಹೊಂದಿದ ವ್ಯಕ್ತಿಯಲ್ಲದೇ ಆತನ ಇಡೀ ಕುಟುಂಬ ತೊಂದರೆ ಅನುಭವಿಸುತ್ತದೆ. ವಿಶೇಷವಾಗಿ, ಭಾರತದಲ್ಲಿ ಆರೈಕೆ ಮಾಡುವ ಜವಾಬ್ದಾರಿಯು ವ್ಯಕ್ತಿಯ ಕುಟುಂಬದ ಮೇಲೆ ಬೀಳುತ್ತದೆ. 
‘ಏಷಿಯಾದಲ್ಲಿ ಡಿಮೆನ್ಷಿಯಾ  ತೀವ್ರವಾಗಿ  ಹೆಚ್ಚುತ್ತಿದ್ದು, ಇದರಿಂದಾಗಿ ಹೆಚ್ಚುತ್ತಿರುವ ಆರೈಕೆದಾರರಿಗೂ  (ಬಹುತೇಕ ಕುಟುಂಬ ಸದಸ್ಯರು) ದೊಡ್ಡ ಹೊರೆಯಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಘೋಷಿಸಿದೆ. ಆದ್ದರಿಂದಲೇ ಡಿಮೆನ್ಷಿಯಾ ಹೊಂದಿರುವವರ ಪಾಲನೆ ಮಾಡುವ ಆರೈಕೆದಾರರ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.   
ಡಿಮೆನ್ಷಿಯಾ ಭಾದಿತರ ಸಂಖ್ಯೆ ಭಾರತದಲ್ಲಿ ಸುಮಾರು 3.7 ಮಿಲಿಯನ್ ಎಂದು ಅಂದಾಜಿಸಲಾಗಿದ್ದು 2030ರ ವೇಳೆಗೆ ಇದು ಸುಮಾರು 700 ಮಿಲಿಯನ್ ಮೀರಬಹುದೆಂಬ ನಿರೀಕ್ಷೆಯಿದೆ. ಪರಿಸ್ಥಿತಿಯು ಇಷ್ಟು ಗಂಭೀರವಾಗಿದ್ದರೂ ಯಾವುದೇ ಪರಿಹಾರವನ್ನು ಯೋಚಿಸಿಲ್ಲ. ಇಂತಹ ಕುಟುಂಬಗಳಿಗೆ ಹಣಕಾಸು ಅಥವಾ ಭಾವನಾತ್ಮಕ ಬೆಂಬಲ ಸಿಗುತ್ತಿಲ್ಲ ಮತ್ತು ಬಹಳ ಜನರು ದಿನಪೂರ್ತಿ ಆರೈಕೆ ಮಾಡಬೇಕಾದ ಪರಿಸ್ಥಿತಿ ಬಂದಾಗ ತಮ್ಮ ಉದ್ಯೋಗ ಬಿಡುತ್ತಾರೆ.   

ಇದರಿಂದಾಗಿ ಆರೈಕೆದಾರರ ಮೇಲೆ ಉಂಟಾಗುವ ಭಾವನಾತ್ಮಕ ಹೊರೆ, ಹಣಕಾಸಿನ ಸಮಸ್ಯೆ, ನಿರಂತರ ಆರೈಕೆ ಮಾಡುತ್ತಾ ತಮ್ಮ ಚಟುವಟಿಕೆಗೆ ಸಮಯವಿಲ್ಲದೆ ತುಂಬಾ ಕಷ್ಟಪಡುತ್ತಾರೆ. ಇದು ಹೆಚ್ಚು ಸಂದರ್ಭಗಳಲ್ಲಿ ಆರೈಕೆದಾರರಲ್ಲಿ  ಖಿನ್ನತೆ, ಆತಂಕ ಮತ್ತು ಇತರೆ ಮಾನಸಿಕ ತೊಂದರೆಗಳಿಗೆ ಎಡೆಮಾಡಿಕೊಡುತ್ತದೆ.

ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ ಜನರು ಕುಟುಂಬದ ಮತ್ತು ಹಿರಿಯರ ಆರೈಕೆ ಸುಯೋಗವೆಂದು  ಮತ್ತು ಅದರಿಂದಾಗುವ ಸಂಕಟಗಳು ಏನೇ ಇದ್ದರೂ ಅದೊಂದು ಪುಣ್ಯದ ಕಾರ್ಯವೆಂದು ಭಾವಿಸುತ್ತಾರೆ. ಈ ಕಾರಣದಿಂದ ನಾವು ಕುಟುಂಬ ಆರೈಕೆದಾರರನ್ನು ಬೆಂಬಲಿಸಬೇಕು ಮತ್ತು ಅವರ ಪಾತ್ರವನ್ನು ಸಮರ್ಥಿಸಬೇಕು.
ಡಿಮೆನ್ಷಿಯಾ ಹೊಂದಿರುವ ನಿಮ್ಮ ಬಂಧು/ ಸ್ನೇಹಿತರೊಬ್ಬರ ಬಗ್ಗೆ ನಿಮಗೆ ಕಾಳಜಿಯಿರುವುದರಿಂದ ನೀವು ಈ ಲೇಖನವನ್ನು ಓದುತ್ತಿದ್ದರೆ  ನಿಮ್ಮ ಕೆಲಸಕ್ಕೆ  ಕೆಲವು ಸಲಹೆಗಳನ್ನು ನೀಡಲು ಇಷ್ಟಪಡುತ್ತೇನೆ.  

ನಿಮ್ಮ ಪ್ರೀತಿಪಾತ್ರರ ಬಗ್ಗೆ ನಿಮಗೆ ಕಾಳಜಿಯಿರುವುದು ಸಹಜ. ಆದರೆ ನಿಮ್ಮ  ಯೋಗಕ್ಷೇಮದ ಬಗ್ಗೆಯೂ ಅರಿಯಬೇಕಾಗಿರುವುದು ಬಹಳ ಮುಖ್ಯವಾಗಿರುತ್ತದೆ. 

ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ: ಸಾಧ್ಯವಾದಷ್ಟು ಆರೋಗ್ಯಕರ ಆಹಾರ ಸೇವಿಸಿ, ಕ್ರಿಯಾಶೀಲರಾಗಿರಿ ಮತ್ತು ಸಾಕಷ್ಟು ನಿದ್ದೆ ಮಾಡಿ. ಇಲ್ಲದಿದ್ದರೆ ದೇಹವು ಬೇಗನೇ ದಣಿಯುತ್ತದೆ ಮತ್ತು  ಆರೈಕೆ ಮಾಡುವ ಕೆಲಸವು ಹೆಚ್ಚು ಶ್ರಮದಾಯಕವೆನ್ನಿಸುತ್ತದೆ.

ಭಾವನೆಗಳತ್ತ ಗಮನ ಹರಿಸಿ: ದೈಹಿಕ ಆರೋಗ್ಯದಂತೆಯೇ ಭಾವನಾತ್ಮಕ ಯೋಗಕ್ಷೇಮದ ಬಗ್ಗೆ ಕೂಡ ಗಮನ ಹರಿಸಿ. ಈ ಸಮಯದಲ್ಲಿ ದುಃಖ, ಒತ್ತಡ, ಕೋಪ, ಹತಾಶೆ, ಒಂಟಿತನ, ಆತಂಕ ಅಥವಾ ಪಶ್ಚಾತಾಪದ ಮನೋಭಾವ ಸಾಮಾನ್ಯ. ಈ ಭಾವನೆಗಳನ್ನು ಗುರುತಿಸಿ, ಕುಟುಂಬದವರು, ಸ್ನೇಹಿತರು ಅಥವಾ  ವೈದ್ಯರೊಂದಿಗೆ ಮಾತನಾಡಿ. ಅವರು ನಿಮಗೆ ಸಹಾಯ ಮಾಡಬಹುದು.   

ವಿಶ್ರಾಂತಿಗೆ ಸಮಯ ಮೀಸಲಾಗಿಡಿ: ಆರೈಕೆಯ ಕೆಲಸದಿಂದ ಬಿಡುವು ಪಡೆಯುವುದು ಬಹಳ ಮುಖ್ಯ. ಡಿಮೆನ್ಷಿಯಾದಿಂದ ಬಳಲುವ ವ್ಯಕ್ತಿಯನ್ನು ನೋಡಿಕೊಳ್ಳುವುದು ಬಹಳ ಶ್ರಮದಾಯಕ ಮತ್ತು ದಣಿವಿನ ಕೆಲಸ. ಆದ್ದರಿಂದ ಕೆಲವು ಗಂಟೆಗಳ ಕಾಲ ವಿಶ್ರಮಿಸಿ. ವಿರಾಮವು ನಿಮ್ಮ ಪುನಶ್ಚೇತನಕ್ಕೆ ಸಹಾಯಕಾರಿ.

ಹಣಕಾಸು ಹೊರೆಯನ್ನು ನಿಭಾಯಿಸುವುದು: ಆರೈಕೆಗಾಗಿ ಬೇಕಿರುವ ಹಣಕಾಸಿನ ಹೊರೆಯು ಆರೈಕೆದಾರರ ಆತಂಕದ ವಿಷಯಗಳಲ್ಲಿ ಒಂದು. ಇದು ಗಮನಾರ್ಹ ಒತ್ತಡಕ್ಕೆ ಎಡೆಮಾಡಿಕೊಡಬಹುದು. ಇಂತಹ ಸಮಯದಲ್ಲಿ ಕುಟುಂಬ ಮತ್ತು ಸ್ನೇಹಿತರ ಸಹಾಯ ಕೇಳಲು ಹಿಂಜರಿಯಬೇಡಿ. ಕೊನೆಯದಾಗಿ, ನಿಮಗೆ ಸಾಧ್ಯವಾದಷ್ಟು ಅತ್ಯುತ್ತಮವಾಗಿ ಆರೈಕೆ ನೀಡುತ್ತಿದ್ದೀರಿ ಎಂಬ ನಂಬಿಕೆಯಿರಲಿ.  

ಈ ಪ್ರಾಯೋಗಿಕ ಸಲಹೆಯು ಆರೈಕೆದಾರರು ತಮ್ಮ ಆರೈಕೆಯೂ ಮುಖ್ಯ ಎಂದು ಅರಿಯಲು ಮತ್ತು ಆರೈಕೆಯ ಕೆಲಸವನ್ನು ಚೆನ್ನಾಗಿ ಮಾಡಲು ಸಹಾಯವಾಗುತ್ತದೆ ಎಂಬ ಆಶಾಭಾವನೆಯಿದೆ.  

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org