ಡಿಪ್ರೆಷನ್ (ಖಿನ್ನತೆ) ಸಮಸ್ಯೆ ಹೊಂದಿರುವ ಸಂಗಾತಿಯ ಆರೈಕೆ
ಖಿನ್ನತೆಗೊಳಗಾಗಿರುವ ಸಂಗಾತಿಯನ್ನು ಹೊಂದಿರುವವರು ತುಂಬಾ ಒತ್ತಡದಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಖಿನ್ನತೆ ಸರ್ವೆಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ. ಆದರೂ, ಇದರಿಂದ ಸಂಬಂಧಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿಲ್ಲ. ಇದರಿಂದ ಮೂಡುವ ಕೀಳರಿಮೆ, ಹಿಂಜರಿತ ಮತ್ತು ನಿರಾಸಕ್ತಿ ಮುಂತಾದ ಕೆಲವು ಸಮಸ್ಯೆಗಳು ಸಂಬಂಧಗಳಲ್ಲಿ ವೈಮನಸ್ಸು ಮೂಡಿಸುತ್ತದೆ.
ಇದರಿಂದಾಗಿ, ಖಿನ್ನತೆಗೆ ಒಳಗಾಗಿರುವವರ ಜೊತೆಯಲ್ಲಿ ನೀವೂ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಏಕೆಂದರೆ ನಿಮ್ಮ ಪ್ರೀತಿಪಾತ್ರರೊಬ್ಬರನ್ನು ನೀವು ನೋಡಿಕೊಳ್ಳುತ್ತಿರುವಾಗ, ನಿಮ್ಮ ಗಮನವೆಲ್ಲಾ ಅವರ ಸುಖ-ಸಂತೋಷಗಳ ಕಡೆಗೆ ಇರುತ್ತದೆ ಮತ್ತು ನಿಮಗೆ ತಿಳಿಯದೆಯೇ ನೀವು ನಿಮ್ಮ ಸಂತೋಷ ಮತ್ತು ಅಗತ್ಯತೆಗಳನ್ನು ಮರೆತು ಬಿಡುತ್ತೀರಿ. ಆದ್ದರಿಂದ ಮಾನಸಿಕ ಅಸ್ವಸ್ಥರ ಆರೈಕೆ ಮಾಡುವುದು ತುಂಬಾ ಕ್ಲಿಷ್ಟಕರವಾದದ್ದು.
ಸಂಗಾತಿಯು ಖಿನ್ನತೆಗೊಳಗಾದ ಸಂದರ್ಭದಲ್ಲಿ, ಅವರ ಆರೈಕೆಯಜೊತೆಗೆ ನಿಮ್ಮ ಆರೋಗ್ಯದ ಕಾಳಜಿಯೂ ಅತ್ಯಗತ್ಯ. ಇದರಿಂದ ನಿಮಗೂ ಹಾಗೂ ನಿಮ್ಮ ಸಂಗಾತಿಗೂ ಸಹಾಯವಾಗುತ್ತದೆ.
ಖಿನ್ನತೆ ಸಮಸ್ಯೆ ಹೊಂದಿರುವ ಸಂಗಾತಿಯ ಆರೈಕೆಯಲ್ಲಿ ತೊಡಗಿರುವವರು ಈ ಅಂಶಗಳನ್ನು ಗಮನದಲ್ಲಿಡಿ:
ಸಮಸ್ಯೆಯನ್ನು ಕಡೆಗಣಿಸಬೇಡಿ: ಇಂಥಾ ಸಂದರ್ಭಗಲ್ಲಿ ಬಹುತೇಕರು ಮಾಡುವ ಮೊದಲ ಕೆಲಸ; ಸಮಸ್ಯೆಯನ್ನು ಕಡೆಗಣಿಸುವುದು ಮತ್ತು ನಿರಾಕರಿಸುವುದು. ಅದು ಸರಿಯಲ್ಲ. ಆರಂಭದಲ್ಲಿ ಸಮಸ್ಯೆಯನ್ನು ಒಪ್ಪಿಕೊಳ್ಳಲುವುದು ಕಷ್ಟ. ಆದರೂ ಪ್ರಯತ್ನಪೂರ್ವಕವಾಗಿ ನೀವು ಇದನ್ನು ಒಪ್ಪಿಕೊಳ್ಳಬೇಕು ಮತ್ತು ನಿಮ್ಮಸಂಗಾತಿಗೆ ನೆರವಾಗಬೇಕು. ಆಗ ಆರೈಕೆಯ ಫಲಿತಾಂಶ ಉತ್ತಮವಾಗುತ್ತದೆ.
ವಿಷಯವನ್ನು ಮರೆಮಾಚುವ ಬದಲು, ಸವಾಲುಗಳನ್ನು - ಸಮಸ್ಯೆಗಳನ್ನು ಎದುರಿಸಬೇಕು. ಇದರಿಂದ ಮತ್ತು ಮುಕ್ತವಾಗಿ ಪರಸ್ಪರ ಚರ್ಚಿಸುವುದರಿಂದ ನಂಬಿಕೆ ಹಾಗು ಆತ್ಮೀಯತೆ ಬಲಗೊಳ್ಳುತ್ತದೆ. “ನಾನು ನಿನ್ನ ನಡತೆಯಲ್ಲಿ ಮತ್ತು ಭಾವನೆಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಗಮನಿಸಿದ್ದೇನೆ, ನಿನ್ನನ್ನು ಯಾವುದೋ ವಿಷಯ ಕಾಡುತ್ತಿರಬೇಕು, ಅದರ ಬಗ್ಗೆ ಏನನ್ನಾದರೂ ಹೇಳಬಯಸುತ್ತೀಯಾ?” ಈರೀತಿಯ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಲು ಪ್ರಯತ್ನಿಸಿ. ಇದರಿಂದ ನಿಮ್ಮಸಂಗಾತಿಗೆ ಸಮಸ್ಯೆಯನ್ನು ಮುಕ್ತವಾಗಿಹೇಳಿಕೊಳ್ಳಲು ನೆರವಾಗುತ್ತದೆ ಹಾಗು ಅವರ ಮೇಲೆ ನಿಮಗಿರಬಹುದಾದ ಕಾಳಜಿಯ ಅರಿವಾಗುತ್ತದೆ.
ಸಮಸ್ಯೆಯನ್ನು ಅವಲೋಕಿಸಿ, ಅರಿಯಿರಿ :ನಿಮ್ಮಸಂಗಾತಿಗೆ ಇರುವ ಮಾನಸಿಕ ಅಸ್ವಸ್ಥತೆಯ ಬಗ್ಗೆ ತಿಳಿದುಕೊಳ್ಳಿ. ಯಾವ ರೀತಿಯ ಖಿನ್ನತೆ ಅವರನ್ನು ಕಾಡುತ್ತಿದೆಯೆಂಬುದನ್ನು ಅರಿತು ಸದಾ ಜಾಗೃತರಾಗಿರಿ. ಸಮಸ್ಯೆಯನ್ನು ನಿರ್ವಹಿಸಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಿ. ಮಾನಸಿಕ ಅಸ್ವಸ್ಥತೆಯಿಂದಾಗಿ ನಿಮ್ಮ ಬಾಂಧವ್ಯದ ಮೇಲೆ ಬೀರಬಹುದಾದ ಪರಿಣಾಮವನ್ನು ಕಡಿಮೆಮಾಡಿಕೊಳ್ಳುವುದು ಹೇಗೆಂದು ಸಹ ಕಲಿಯಿರಿ.
ಸಾಧಾರಣವಾಗಿ ಎಲ್ಲಾರೀತಿಯ ಮಾನಸಿಕ ಖಿನ್ನತೆಯೂ ಒಂದೇ ರೀತಿಯ ಗುಣಲಕ್ಷಣಗಳನ್ನುಹೊಂದಿರುತ್ತದೆ. ಆದರೆ ಬೇರೆಬೇರೆ ವ್ಯಕ್ತಿಗಳಲ್ಲಿ ಅವು ವಿಭಿನ್ನವಾಗಿ ವ್ಯಕ್ತವಾಗುತ್ತವೆ. ನಿಮ್ಮ ಸಂಗಾತಿಯು ವ್ಯಕ್ತಪಡಿಸುವಂತಹ ನಿರ್ದಿಷ್ಟ ಲಕ್ಷಣಗಳನ್ನು ಎಚ್ಚರಿಕೆಯಿಂದ ಗಮನಿಸಿ. ನಿಮ್ಮ ಸಂಗಾತಿಯೊಡಗೂಡಿ ಸೂಕ್ತ ತಜ್ಞವೈದ್ಯರ/ಚಿಕಿತ್ಸಕರ ಬಳಿ ಹೋಗಿ, ಸಮಾಲೋಚನೆ ನಡೆಸಿ.
ನಿಮ್ಮ ಸಂತೋಷದ ಕಾಳಜಿಯೂ ಇರಲಿ: ನಿಮಗೆ ಖುಷಿ ನೀಡುವಂತಹ ಕೆಲಸಗಳನ್ನುಮಾಡಿ. ಒಂದು ದಿನ ರಜೆ ತೆಗೆದುಕೊಳ್ಳಿ. ಗೆಳೆಯರೊಡನೆ ಸುತ್ತಾಡಿ ಬನ್ನಿ. ಸಿನೆಮಾ ವೀಕ್ಷಿಸಿ. ಈಮೂಲಕ ನಿಮ್ಮಸಂಗಾತಿಗೂ ಒಂದಿಷ್ಟು ಸಮಯಾವಕಾಶ ನೀಡಿದಂತಾಗುತ್ತದೆ.
ಇತರರನ್ನೂ ನಿಮ್ಮೊಡನೆ ಸೇರಿಸಿಕೊಳ್ಳಿ; ಶುಶ್ರೂಷೆಯ ಹೊಣೆಗಾರಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳಿ : ಈಮೂಲಕ ನಿಮ್ಮಹೆಗಲ ಮೇಲಿರುವ ಹೊರೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು ಹಾಗು ನಿಮಗಾಗಿ ನೀವು ಹೆಚ್ಚಿನ ಸಮಯವನ್ನು ಮೀಸಲಿಡಬಹುದು. ಇದರಿಂದ ನಿಮ್ಮ ಸಂಗಾತಿಯಲ್ಲಿ, ಇತರರಿಗೂ ನನ್ನಮೇಲೆ ಕಾಳಜಿಯಿದೆ ಎಂಬ ಭಾವನೆ ಮೂಡುತ್ತದೆ.
ಅವರ ದುಃಖಕ್ಕೆ ನೀವು ಹೊಣೆಗಾರರಾಗಬೇಡಿ: ನೆನಪಿಡಿ, ಅವರು ಮಾನಸಿಕ ಅಸ್ವಸ್ಥರಾಗಿರುತ್ತಾರೆ. ಅವರಿಗೆ ಖಿನ್ನತೆಯಿಂದ ಹೊರಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಅವರು ದುಃಖದಿಂದಿದ್ದರೆ ಅಥವಾ ಖಿನ್ನತೆಗೊಳಗಾದಂತೆ ಕಂಡುಬಂದರೆ ನಿಮ್ಮನ್ನು ನೀವು ದೂಷಿಸಿಕೊಳ್ಳಬೇಡಿ. ಅವರಿಗೆ ನೆರವು ನೀಡಿ, ಅವರನ್ನು ಸೂಕ್ತ ಚಿಕಿತ್ಸಕರ ಬಳಿ ಕರೆದುಕೊಂಡು ಹೋಗಿ. ಅವರಿಗಿಷ್ಟವಾದ ಚಟುವಟಿಕೆಗಳನ್ನು ನಡೆಸಲು ಪ್ರೋತ್ಸಾಹಿಸಿ. ಆದರೆ ಅವರನ್ನು ಸಂತೋಷವಾಗಿರಿಸಲು ಹೆಚ್ಚಿನ ಹೊರೆಯನ್ನು ನಿಮ್ಮಮೇಲೆ ಹಾಕಿಕೊಳ್ಳಬೇಡಿ.
ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ: ಖಿನ್ನತೆಯು ಭಾವನೆಗಳನ್ನು ಬದಲಾಯಿಸುತ್ತದೆ. ಅವರು ದುಃಖದಿಂದಿದ್ದರೆ ಅದು ನಿಮ್ಮಿಂದಲ್ಲ, ಅವರಿಗಿರುವ ಅನಾರೋಗ್ಯದಿಂದ ಎಂಬುದನ್ನು ಅರಿತುಕೊಳ್ಳಿ. ಅಂತಹ ಸಂದರ್ಭದಲ್ಲಿ ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಬೇಡಿ. ಇದರಿಂದ ನಿಮ್ಮಿಂದ ನಿಮ್ಮ ಜೊತೆಗೇ ಅವರಿಗೂ ನೆರವಾದಂತಾಗುತ್ತದೆ. ತಮ್ಮ ಅಸಹಜ ವರ್ತನೆಗಳು ಅವರಿಗೆ ಸಹಜವಾಗಿಯೇ ಕಾಣಿಸುತ್ತವೆ. ಅದು ನಿಮ್ಮ ತಪ್ಪಲ್ಲ.
ನೀವೂ ಚಿಕಿತ್ಸಕರ ನೆರವು ಪಡೆಯಿರಿ: ಮತ್ತೊಬ್ಬರ ಆರೈಕೆ ಅಥವಾ ನಿರಂತರ ಶುಶ್ರೂಷೆಯ ಪರಿಣಾಮವಾಗಿ, ಒಬ್ಬ ವ್ಯಕ್ತಿಯ ಮನೋಸ್ಥೈರ್ಯ ಕುಗ್ಗಬಹುದು. ನಿಮಗೇನಾದರೂ ನೀವು ಒತ್ತಡಕ್ಕೊಳಗಾಗಿದ್ದೇನೆ ಎನಿಸಿದರೆ, ತಜ್ಞ ವೈದ್ಯರ / ಚಿಕಿತ್ಸಕರ ನೆರವು ಪಡೆಯಲು ಹಿಂಜರಿಯಬೇಡಿ.
ಡಾ.ರತ್ನಾ ಐಸಾಕ್, ಕ್ಲಿನಿಕಲ್ ಸೈಕಾಲಜಿಸ್ಟ್ – ಇವರು ನೀಡಿದ ಒಳನೋಟಗಳನ್ನು ಆಧರಿಸಿ ಈ ಲೇಖನ ರಚಿಸಲಾಗಿದೆ.