ಖಿನ್ನತೆ - ಆರೈಕೆದಾರರ ಒಳಬೇನೆ

ಆರೈಕೆದಾರಳಾಗಿ ತನ್ನ ಆತಂಕ ಮತ್ತು ಖಿನ್ನತೆಗಳನ್ನು ಹೇಗೆ ನಿಭಾಯಿಸಿಕೊಂಡೆ ಎನ್ನುವುದರ ಕುರಿತು ಓರ್ವ ಮಹಿಳೆ ಹೇಳುತ್ತಾಳೆ.

ಇತರ ಉದ್ಯೋಗಸ್ಥ ಮಹಿಳೆಯರಂತೆಯೇ ನಾನೂ ಸಹ ಓರ್ವ ವೃತ್ತಿಪರ ಅಧ್ಯಾಪಕಿಯಾಗಿ, ಯುವ ಮನಸ್ಸುಗಳ ಆಂತರಿಕ ಶಕ್ತಿಯನ್ನು ಹೆಚ್ಚಿಸುವ  ಹಾಗೂ ತಿದ್ದಿ-ತೀಡಿ ತರಬೇತಿಗೊಳಿಸುತ್ತ, ಬಹುಮುಖ ಸಾಮಾಜಿಕ ಪಾತ್ರಗಳನ್ನು ನಿರ್ವಹಿಸುತ್ತಿರುವ ವ್ಯಕ್ತಿ. ಪ್ರವಾಸಗಳ ಕುರಿತು ಓದಿ, ನೋಡಿ ತಿಳಿದುಕೊಳ್ಳುವ ಹವ್ಯಾಸಿಯಾದ ನಾನು ಇತ್ತೀಚೆಗೆ ಹೆಚ್ಚು ಪ್ರಯಾಣ ಮಾಡತೊಡಗಿದ್ದೇನೆ. ಮುಕ್ತ ಮನಸ್ಸನಿಂದ ವ್ಯವಹರಿಸುವುದು ನನಗೆ ಇಷ್ಟವಾಗುವುದಿಲ್ಲ. ಜೊತೆಗೆ ಹಲವು ಬಾರಿ ನನ್ನ ಬದುಕಿನುದ್ದಕ್ಕೂ ನನ್ನನ್ನು  ನಿತ್ರಾಣಗೊಳಿಸುವ ಖಿನ್ನತೆ ಮತ್ತು ಆತಂಕ ನನ್ನನ್ನು ದುರ್ಬಲಗೊಳಿಸಿವೆ.

ಅವುಗಳನ್ನೆಲ್ಲ ನಿವಾರಿಸಿಕೊಳ್ಳುವ ಅವಕಾಶಗಳೇ ನನಗೆ ಎಂದೂ ಒದಗಿಬರಲಿಲ್ಲ. ಪ್ರತಿಸಲ ಈ ರೀತಿಯ ತೊಂದರೆಗೊಳಗಾದಾಗಲೂ ತಾಳ್ಮೆಯಿಂದ ಕುಳಿತು ಯೋಚಿಸುವ ಅಥವಾ ಸಹಾಯ ಪಡೆಯುವುದನ್ನು ಬಿಟ್ಟು “ಆ ಕ್ಷಣವನ್ನು ದಾಟುವ” ಅರ್ಥಾತ್ ಬೀಸುವ ದೊಣ್ಣೆಯನ್ನು ತಪ್ಪಿಸಿಕೊಳ್ಳುವ ಅನಿವಾರ್ಯತೆಗಳೇ ಎದುರಾಗುತ್ತಿದ್ದವು.

ನಾನಿದಕ್ಕೆ ನನ್ನ ಹತ್ತಿರದವರನ್ನು ದೂರುವುದಿಲ್ಲ. ನಾನು 80ರ ದಶಕದ ಆರಂಭ ಹಾಗೂ 90ರ ದಶಕಗಳಲ್ಲಿ ಹುಟ್ಟಿ ಬೆಳೆದವಳು. (ನನ್ನ ಹದಿಹರೆಯ ಹಾಗೂ 20ರ ವಯಸ್ಸುಗಳಲ್ಲಿ). ಆ ಕಾಲದಲ್ಲಿ  ಖಿನ್ನತೆ ಮತ್ತು ಆತಂಕಗಳಂತಹ ತೊಂದರೆಗಳನ್ನು ಹುಚ್ಚು ಎಂದೇ ಭಾವಿಸಲಾಗುತ್ತಿತ್ತು. ಪರಿಹಾರಕ್ಕೆ ಸಹಾಯ ಪಡೆಯಲು ಕೂಡ ಅತ್ಯಂತ ಕಡಿಮೆ ಪ್ರಮಾಣದ ಸೌಲಭ್ಯಗಳು ಲಭ್ಯವಿದ್ದ ಕಾಲವದು. ಆದಾಗ್ಯೂ, ಸುಮಾರು ಎರಡು ವರ್ಷಗಳ ಹಿಂದೆ, ನನ್ನ ಜೀವನವನ್ನೇ ಬದಲಾಯಿಸುವಂತಹ ಒಂದು ಪ್ರಸಂಗ ಘಟಿಸಿತು.  ನನ್ನ ಬದುಕಿನಲ್ಲಿ ತುಂಬ ಹತ್ತಿರದ ವ್ಯಕ್ತಿಗಳು ಜೀವಕ್ಕೆ ಎರವಾಗುವ ತೀವ್ರ  ಅಸ್ವಸ್ಥತೆಗೆ ಒಳಗಾಗಿದ್ದು ವೈದ್ಯರಿಂದ ಖಾತರಿಯಾಯಿತು . ಅದರ ಹಿಂದೆಯೇ ಬಲವಂತವಾಗಿ ಪ್ರಾಥಮಿಕ ಆರೈಕೆದಾರಳಾಗಿ ನಾನು ನಿಯೋಜಿಸಲ್ಪಟ್ಟೆ. ದಿನವಿಡೀ  ಬಿಲ್ ತುಂಬುವುದು, ಇತರ ಕೆಲಸಗಳು, ವೈದ್ಯರ ಭೇಟಿ ಮುಂತಾದ ಪ್ರಾಪಂಚಿಕ ಕೆಲಸಗಳು ನನ್ನನ್ನು ಆವರಿಸಿಕೊಳ್ಳುತ್ತಿದ್ದವು. ರಾತ್ರಿಯಾದರೆ ಬಿಟ್ಟೂ ಬಿಡಲಾರದ ಭಯದ ಸುರುಳಿಯೇ ನನ್ನನ್ನು ಆವರಿಸಿಕೊಳ್ಳುತ್ತಲಿತ್ತು. ನನ್ನವೇ ಆದ ಆತಂಕಗಳು, ಅದರೊಂದಿಗೇ ಮತ್ತಷ್ಟು ಬಲಶಾಲಿಯಾಗಿ ತಲೆಯೆತ್ತಿ ನಿಲ್ಲುವ ಅನಿವಾರ್ಯತೆ, ಒಳಗಿನಿಂದ ಇಡಿಯಾಗಿ ನನ್ನನ್ನು ತಿನ್ನತೊಡಗಿದ್ದವು. ಈ ರೀತಿ ದ್ವಂದ್ವ ಯುದ್ಧಗಳನ್ನು ನಾನು ಎದುರಿಸಬೇಕಾಗಿತ್ತು. 

 ನಮ್ಮಲ್ಲಿ ಅನೇಕರು ಅನಿರೀಕ್ಷಿತವಾದ ಮತ್ತು ಹಠಾತ್ತಾಗಿ ಎದುರಾಗುವ ವಿಷಮ ಪರಿಸ್ಥಿತಿಗಳಿಂದಾಗಿ ಆರೈಕೆದಾರರ ಪಾತ್ರಕ್ಕೆ ನೂಕಲ್ಪಡುತ್ತೇವೆ. ಅದೇ ಕಾಲಕ್ಕೆ,ಕುಟುಂಬದವರು ಹಾಗು ಸ್ನೇಹಿತರ ಗಮನವೆಲ್ಲಾ  ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಅಪಘಾತಕ್ಕೆ ಒಳಗಾದ ವ್ಯಕ್ತಿಯ ಮೇಲೆ  ಕೇಂದ್ರಿಕೃತವಾಗಿರುತ್ತದೆ. ಆರೈಕೆದಾರ ತನ್ನೆಲ್ಲಾ ಚಿಂತೆ, ಆಂತರಿಕ ಸಂಘರ್ಷ ಹಾಗೂ ಸಂಕೀರ್ಣ ಭಾವನೆಗಳೊಂದಿಗೆ ಸೆಣಸಾಟ ನೆಡೆಸುತ್ತ ನೆರಳಿನಲ್ಲಿಯೇ ಬಚ್ಚಿಟ್ಟುಕೊಳ್ಳುವಂತಾಗುತ್ತದೆ.

ವೈದ್ಯರು, ಕುಟುಂಬದವರು ಹಾಗೂ ಸಂಬಂಧಿಕರು, ಆತ್ಮೀಯ ಸ್ನೇಹಿತರು ಹಾಗೂ ಆರ್ಥಿಕ ಘಟಕಗಳು (ಇನ್ಶುರೆನ್ಸ್ ಕಂಪನಿಗಳನ್ನೂ ಒಳಗೊಂಡು) ಹೀಗೆ ಎಲ್ಲ ಕಡೆಗೂ ಸಂವಹನ ಮಾಡುವ ಪ್ರಾಥಮಿಕ ಮಧ್ಯಸ್ಥಿಕೆ ಆರೈಕೆದಾರನಾಗಿರುತ್ತಾನೆ.  ಹೀಗಿದ್ದಾಗ್ಯೂ, ಆರೈಕೆದಾರನು ಸಮಚಿತ್ತದಿಂದ, ತನ್ನ ಆರೋಗ್ಯ, ಅನಿಶ್ಚಿತತೆ ಮುಂತಾಗಿ ಕೇವಲ ತನ್ನ ಬಗ್ಗೆ ಯೋಚಿಸದೇ ಪರಿಸ್ಥಿತಿಯನ್ನು ನಿಭಾಯಿಸಬೇಕು. ನನ್ನ ವಿಷಯಕ್ಕೆ ಹೇಳುವುದಾದರೆ, ಎಲ್ಲ ಸಂಗತಿಗಳನ್ನೂ ನಿಭಾಯಿಸುವಲ್ಲಿನ ನನ್ನ ಅಸಾಮರ್ಥ್ಯದ ಜೊತೆಗೆ ಸೇರಿಕೊಂಡ ನನ್ನವೇ ಭಾವನಾತ್ಮಕ ತೊಡಕುಗಳು ಕೆಲವೊಮ್ಮೆ ಇನ್ನೊಬ್ಬರ ದೃಷ್ಟಿಯಲ್ಲಿ, ಮತ್ತೆ ಕೆಲವೊಮ್ಮೆ ನನ್ನದೇ ಮನಸ್ಸಿನಲ್ಲಿ ನಾನು ಬೇರೆಯವರಿಗಿಂತ  ಕಡಿಮೆ ಎಂಬ ಭಾವನೆಯನ್ನು ಮೂಡಿಸುತ್ತಿದ್ದವು.

ಹೀಗಿದ್ದರೂ, ನಾನು ನಿಧಾನವಾಗಿ ಕಷ್ಟಪಟ್ಟು ನನ್ನ ಹಿಂದಿನ ದಿನಗಳಿಗೆ ಮರಳಿದೆ.  ಪ್ರಾಮಾಣಿಕವಾಗಿ ಅಳೆದು ತೂಗಿ, ವ್ಯಕ್ತಿಯಾಗಿ ನಾನು ಯಾರು ಎಂಬುದನ್ನು ಗುರುತಿಸಿ,   ಪ್ರತಿದಿನವೂ  ನನ್ನನ್ನು ಗೌರವಿಸಿ , ನಾನು ಸಂತೋಷವಾಗಿರುವಂತೆ ಆತ್ಮವಿಶ್ವಾಸ ತುಂಬಿದ ನನ್ನ ಆತ್ಮೀಯ ಬಳಗಕ್ಕೆ ಕೃತಜ್ಞತೆ ಹೇಳಲೇಬೇಕು. ಈ ನಿಟ್ಟಿನಲ್ಲಿ ನನಗೆ ಸಹಾಯ ಮಾಡಿದ ಕೆಲವು ಸಂಗತಿಗಳನ್ನು ಹೇಳುತ್ತೇನೆ:

  • ವೈದ್ಯಕೀಯ ಆರೈಕೆ ಒದಗಿಸುವವರೊಂದಿಗಿನ ಸಮಾಧಾನ: ವೈದ್ಯರೆಂದರೆ  ಸೇವೆಯನ್ನು ಒದಗಿಸುವವರು ಮತ್ತು ಒಬ್ಬ ವ್ಯಕ್ತಿಯಾಗಿ ಸೇವೆಯನ್ನು ನಿರೀಕ್ಷಿಸುವವರಷ್ಟೇ ಸಮಾನರು ಎಂದು ತಿಳಿದುಕೊಳ್ಳಲು ನನಗೆ ಬಹು ಸಮಯ ಹಿಡಿಯಿತು. ವೈದ್ಯರುಗಳಲ್ಲಿಯೂ ವಿವಿಧ ಸ್ವಭಾವದವರಿರುತ್ತಾರೆ. ತುಂಬ ಶಾಂತ ಸ್ವಭಾವದ, ಹೆಚ್ಚು ಮಾತನಾಡದ ವೈದ್ಯರನ್ನು ನಾನು ತುಂಬ ಗೌರವಿಸುತ್ತೇನೆ. ಇವರ ಕೈಯಲ್ಲಿ ನನ್ನ ಅಥವಾ ನನ್ನ ಪ್ರೀತಿಯ ಜನರ ಬದುಕನ್ನು ಒತ್ತೆಯಿಡಬಹುದು ಎಂಬ ನಂಬಿಕೆಯಿಡುತ್ತೇನೆ.  ಬಹುತೇಕವಾಗಿ ಅಲ್ಲದಿದ್ದರೂ, ಕೆಲವೊಮ್ಮೆ, ಅತ್ಯಂತ ಸಮರ್ಥರಾದ, ಆದರೆ ಒರಟೊರಟಾಗಿ ವರ್ತಿಸುವ ವೈದ್ಯಕೀಯ ವೃತ್ತಿನಿರತರನ್ನು ನಾನು ಎದುರಿಸಿದ್ದೇನೆ. ಒಬ್ಬ ಆರೈಕೆದಾರಳಾಗಿ, ನನ್ನೊಡನೆ ಅನಾರೋಗ್ಯಕರ ಚರ್ಚೆ ಮಾಡಿದ ವೈದ್ಯರೊಬ್ಬರನ್ನು ಬದಲಿಸುವಂತೆಯೂ ಮೇಲಧಿಕಾರಿಗಳಿಗೆ ಸೂಚಿಸಿದ್ದೆ. ಆದಾಗ್ಯೂ,  ನಾನು ಆರೈಕೆ ಮಾಡುತ್ತಿದ್ದ ವ್ಯಕ್ತಿಯು ಆ ವೈದ್ಯರೊಂದಿಗೆ ಸಹಜವಾಗಿದ್ದರು.   ಆ ವ್ಯಕ್ತಿಯು ಸರಿಯಾದ ಆರೈಕೆಗೆ ಒಳಗಾಗುತ್ತಿದ್ದಾರೆ ಎಂದು ಒಮ್ಮೆ  ನನಗೆ ಖಾತರಿಯಾದ ನಂತರ, ಆ ವೈದ್ಯರನ್ನು ಭೇಟಿ ಮಾಡುವಾಗ  ಅವರ ಜೊತೆಯಲ್ಲಿ  ನಾನು ಹೋಗುವುದನ್ನು ನಿಲ್ಲಿಸಿದೆ.

  • ಒಣ ಮಾತುಗಳನ್ನು ನಿಭಾಯಿಸುವುದು: ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವವರನ್ನು ಮತ್ತು ಆರೈಕೆದಾರರನ್ನು ಜನರು ಭೇಟಿಮಾಡಲು ಬರುವುದು ಸಾಮಾನ್ಯವಾದ ಸಂಗತಿ. ಅವರಲ್ಲಿ ನಿಜವಾಗಿಯೂ ಕಾಳಜಿಯನ್ನು ತೋರಿಸುವವರು ಕೆಲವರಿರುತ್ತಾರೆ. ಹಾಗೆಯೇ ಭರವಸೆ ತುಂಬುವ ನೆಪದಲ್ಲಿ ಮನಬಂದಂತೆ ಮಾತನಾಡುವ  ಜನರೂ ಇರುತ್ತಾರೆ . ಉದಾಹರಣೆಗೆ ನಿಮಗಿಂತ ಹೆಚ್ಚು ಅಸ್ವಸ್ಥವುಳ್ಳವರಿದ್ದಾರೆ , ನೀವೆ ಪರವಾಗಿಲ್ಲ ಎಂದು ಒಣಮಾತುಗಳನ್ನಾಡುವುದು;   ನನ್ನ ಒಬ್ಬ ಒಳ್ಳೆಯ ಗೆಳತಿಯು ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಹೊಸ ಉಪಾಯವನ್ನು ಕಂಡುಕೊಂಡಿದ್ದಳು.  ಇಂತಹ ಸಂದರ್ಭಗಳಲ್ಲಿ ಈ ರೀತಿಯ ಬೂಟಾಟಿಕೆ ಮಾತುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ  ಅಲಂಕಾರಕ್ಕೆ ತನ್ನ ಇಷ್ಟದ ಹಾಡನ್ನು ಗುನುಗಾಡುತ್ತಿದ್ದಳು.

  • ಬಿಡುಗಡೆ: ರೋಗಿಯೊಬ್ಬನನ್ನು ಆರೈಕೆ ಮಾಡುವುದು ಆರೈಕೆದಾರರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬರಿದಾಗುವಂತೆ ಮಾಡುತ್ತದೆ. ಅಲ್ಲಿ ನಿಮ್ಮೊಳಗೆ ಯಾವಾಗಲೂ ಒಂದು ರೀತಿಯ ಪಶ್ಚಾತ್ತಾಪ ಆವರಿಸಿರುತ್ತದೆ. ಆರೈಕೆ ಮಾಡುವುದನ್ನು ಬಿಟ್ಟು ಅನಿವಾರ್ಯವಾಗಿ ಶಾಪಿಂಗ್ ಮಾಡುತ್ತಿರಬೇಕಾದರೆ ನನ್ನ ಕೈಗಳು ನಡುಗುತ್ತಿದ್ದ ನೆನಪು ನನಗಿನ್ನೂ ಹಸಿಯಾಗಿದೆ. “ಇದು ನನಗೆ ಸೂಕ್ತವೇ” ಎಂದು ನನ್ನನ್ನೇ ನಾನು ಕೇಳಿಕೊಳ್ಳುತ್ತಿದ್ದ ದಿನಗಳವು. ಆದಾಗ್ಯೂ, ನನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುವುದರಿಂದ, ಪುನಃ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತಿದ್ದೇನೆ  ಎಂಬ ಅಂಶ ಬಹು ಬೇಗ ಅರ್ಥವಾಗತೊಡಗಿತು. ಸಾಧ್ಯವಿರುವ ಕಡೆಯಲ್ಲೆಲ್ಲಾ ನನ್ನನ್ನು ನಾನು ಬಿಡುವು ಮಾಡಿಕೊಳ್ಳುವುದನ್ನು, ಕಣ್ಣಲ್ಲಿ ನೀರೂರಿಸುವ ಅಥವಾ ಸಿಟ್ಟು ತರಿಸುವ ಎಲ್ಲಸಂಗತಿಗಳಿಂದ ದೂರ ಉಳಿಯುವುದನ್ನುಅಳವಡಿಸಿಕೊಳ್ಳಬೇಕೆಂದು  ನನಗೆ ಅರ್ಥವಾಗತೊಡಗಿತು. ಈ ಬದುಕು ನನಗೆ ತುಂಬ ಅನ್ಯಾಯ ಮಾಡುತ್ತಿದೆ ಎಂದು ನಾನೊಮ್ಮೆ ತುಂಬಾ ಯೋಚಸಿದ್ದರಿಂದ ಕುಸಿದು ಬಿದ್ದಿದ್ದೆ. ಉರಿಯುವ ಬೆಂಕಿಗೆ ತುಪ್ಪ ಹೊಯ್ದಂತ ಪರಿಸ್ಥಿತಿ ಅದಾಗಿತ್ತು. ಆದರೆ, ಹಲವು ತಿಂಗಳುಗಳ ಕಾಲದಿಂದಲೂ ಬಾಧಿಸುತ್ತ ಕುತ್ತಿಗೆಯವರೆಗೆ  ನಿಲುಕಿದ್ದ ಪರಿಸ್ಥಿತಿಯಿಂದ ನನಗೆ ಬಿಡುಗಡೆಯ ಅವಶ್ಯಕವಿತ್ತು.

  • ಸ್ವಯಂ-ಪ್ರೇಮ - ಆರೈಕೆದಾರರು ಸಾಮಾನ್ಯವಾಗಿ ಯಾವಾಗಲೂ ತಮ್ಮ ಅಗತ್ಯಗಳನ್ನು ಕಡೆಗಣಿಸುತ್ತಾರೆ. (ಅಥವಾ ಹಾಗೆ ಇರಬೇಕೆಂದು ಅವರಿಂದ ನಿರೀಕ್ಷಿಸಲಾಗುತ್ತದೆ.) ಆದಾಗ್ಯೂ, ಇಲ್ಲಿ ಹುತಾತ್ಮರಾದರೆ ಯಾವುದೇ ಪ್ರಶಸ್ತಿಗಳಿರುವುದಿಲ್ಲ. ಈ ಕುರಿತು ನನ್ನ ಕೆಲವು ಅನುಭವಗಳು:

  • ಜೀವಕ್ಕೆ ಎರಗುವಷ್ಟು ಅನಾರೋಗ್ಯವನ್ನು ಹೊಂದಿರುವ ಆತ್ಮೀಯರಿರುವ ಪರಿಸರದಲ್ಲಿ ನಾನಿದ್ದಿದ್ದರಿಂದ, ನನ್ನ ಪ್ರಾಣಕ್ಕೆ ಒದಗುವ ಆಪತ್ತುಗಳ ಕುರಿತು ನಿಜವಾಗಿಯೂ ಅರ್ಥ ಮಾಡಿಕೊಂಡೆ. ಖಿನ್ನತೆಗೆ ಒಳಗಾಗುವ ಪ್ರವೃತ್ತಿಯುಳ್ಳವರಾದ್ದರಿಂದ, ನನ್ನ ಭಯವು ಇನ್ನೂ ಅಧಿಕವಾಗಿತ್ತು. ನನ್ನ ಹೆದರಿಕೆಗಳು ನನಗೆ ಅನಪೇಕ್ಷಿತ ಸಾಂಗತ್ಯವನ್ನು ನೀಡುತ್ತಿದ್ದವು. ನಾನು ಗೆಳೆಯರನ್ನು, ಗೆಳೆತನಗಳನ್ನು ಕಳೆದುಕೊಂಡೆ. ಅದಾಗ್ಯೂ ನನ್ನ ಭಯಗಳು ಸ್ವಾಭಾವಿಕವಾದವುಗಳು ಎಂದು ಭರವಸೆ ತುಂಬಲು ನನ್ನೊಳಗಿನ  ಧೈರ್ಯ ಎಚ್ಚೆತ್ತುಕೊಂಡಿತ್ತು.   ನಾನು ನಿಧಾನವಾಗಿ ನನ್ನ ಭಯಗಳನ್ನು ಎದುರಿಸುವ ಹಾಗೂ ಅವುಗಳಿಗೆ ತಿರುಗಿ “ಏನೀವಾಗ?” ಎಂದು ಪ್ರಶ್ನಿಸುವ ಹಂತಕ್ಕೆ ಹೆಜ್ಜೆ ಇಡಲಾರಂಬಿಸಿದೆ. ಈ ಆತ್ಮಸ್ಥೈರ್ಯ ನನ್ನನ್ನು  ಕತ್ತಲೆಯಿಂದ ಹೊರಗೆ ಕೊಂಡೊಯ್ದಿತು.

  • ಆರೈಕೆ ಮಾಡುವುದೆಂದರೆ ಒಂದು ರೀತಿಯ ಪರಕೀಯ ಭಾವನೆ. ಯಾವಾಗಲೂ, ಯಾರಾದರೊಬ್ಬರ ಪಕ್ಕದಲ್ಲಿ ನಾನು ಇರದೇ ಇದ್ದರೆ,ಅವರಿಗೆ ಏನಾದರೂ ಅನರ್ಥಕಾರಿ ಘಟನೆ ಸಂಭವಿಸುತ್ತದೆ ಎಂಬ ಭಯವನ್ನು ಹೊಂದಿದ್ದೆ.ನಿನ್ನ ಎದುರಿಗೇ, ಅಥವಾ ನಿನ್ನ ಅನುಪಸ್ಥಿತಿಯಲ್ಲಿ ಕೂಡ ಸಂಗತಿಗಳು ಘಟಿಸಬಹುದು (ಅಥವಾ ಘಟಿಸದೇ ಇರಬಹುದು.) ಎಂದು ನನ್ನ ನಿಜವಾದ ಸಂಬಂಧಿಯೊಬ್ಬರು ನನಗೆ ವಿವರಿಸಿದ ಕ್ಷಣದಲ್ಲಿ ಇದಕ್ಕೊಂದು ಪರಿಹಾರ ಕಂಡಿತ್ತು. ಕೆಲವೇ ಸಮಯಗಳಲ್ಲಿ ನಾನು ಇತರರ ಸಹಾಯ ಪಡೆಯುವುದನ್ನು ಹಾಗೂ ನನಗಾಗಿ, ಬಿಡುವು ಮಾಡಿಕೊಳ್ಳುವುದನ್ನು ಕಲಿತುಕೊಂಡೆ. ನಾನು ಕೆಲವೊಮ್ಮೆ ಒಂಟಿಯಾಗಿ (ಅಥವಾ ಸ್ನೇಹಿತರೊಂದಿಗೆ) ಸಿನಿಮಾ ನೋಡಲು ಹೋಗತೊಡಗಿದೆ. ಅವಕಾಶ ಸಿಕ್ಕಾಗಲೆಲ್ಲ ನನ್ನ ಆತ್ಮೀಯ ಸ್ನೇಹಿತರನ್ನು ಭೇಟಿಯಾದೆ. ಸ್ಪಾಗೆ ಹೋಗಲು ಸಮಯ ಕಾದಿರಿಸಿದೆ. ಹೊರಗಡೆಗೆ ಓಡಾಡಲು ನಿರ್ಧರಿಸಿದೆ. ಹೀಗೆ ಈ ರೀತಿಯ ಚಟುವಟಿಕೆಗಳು ನನ್ನ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನನ್ನೊಂದಿಗೇ ನಾನು ಬದ್ಧವಾಗಿರುವಂತೆ ಮಾಡಿದವು. 

  • ಸಹಾಯ ಪಡೆದುಕೊಳ್ಳುವುದು- “ ಅನಾರೋಗ್ಯ ಪೀಡಿತ ವ್ಯಕ್ತಿಯ ಅನಿಶ್ಚಿತ ಮಾನಸಿಕ ಸ್ಥಿತಿಯನ್ನು ಅರಿತುಕೊಳ್ಳುವುದು ಬಲು ಕಷ್ಟದ ಕೆಲಸವಾದ್ದರಿಂದ ಆರೈಕೆದಾರರಾಗಿ ಕೆಲಸ ಮಾಡುವುದು ತುಂಬ ಕಠಿಣ"ಎಂದು ನನ್ನ ಆತ್ಮೀಯರೊಬ್ಬರು ಒಮ್ಮೆ ಹೇಳಿದ್ದರು. ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವ್ಯಕ್ತಿಗೆ ಚೇತರಿಸಿಕೊಳ್ಳುಲು ಯಾವುದಾದರೂ ದಾರಿ ತೆರೆದುಕೊಂಡಿರುತ್ತದೆ”.ಆದರೆ ಆರೈಕೆದಾರಳಾದ ನಾನು ಖಿನ್ನತೆಯಿಂದ ನರಳುತ್ತಿದ್ದು , ನನ್ನ ಚೇತರಿಕೆಯ ದಾರಿ ಆರಂಭಗೊಂಡಿದ್ದು ನನ್ನ ಆತ್ಮೀಯ ಸ್ನೇಹಿತರ ಸಂಪರ್ಕದ ಮೂಲಕ. ಅವರೆಲ್ಲ ಯಾವುದೇ ಪೂರ್ವಗ್ರಹಗಳಿಲ್ಲದೆ ನನ್ನ ಮಾತುಗಳನ್ನು ಆಲಿಸಿದರು. ಯಾವತ್ತೂ ಬದುಕು ಇಷ್ಟೇ ಎಂದು ಕೈಚೆಲ್ಲದಿರು ಎಂದು ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ನನ್ನೊಳಗಿನ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಮಾನಸಿಕ ಆರೋಗ್ಯ ವೃತ್ತಿಪರರು ಸಹಾಯ ಮಾಡಿದರು. ಆ ಸಮಯದಲ್ಲಿ ನನ್ನನ್ನು ಕಟುವಾಗಿ ಟೀಕಿಸಿದವರೂ ಇದ್ದಾರೆ! ಅವರಿಂದ ನಾನು ದೂರವಾದೆ. ಈಗಲೂ ಆಗೀಗ ಅವರನ್ನೆಲ್ಲ ಭೇಟಿಮಾಡುತ್ತಿರುತ್ತೇನೆ. (ಅವರಿಗೂ ನಾನು ಕೃತಜ್ಞಳಾಗಿದ್ದೇನೆ!).

  • ಮನಬಿಚ್ಚಿ ಮಾತನಾಡಿ ಹಗುರಾಗುವುದು: ನಿಸ್ಸಂಕೋಚವಾಗಿ ಮಾತನಾಡುವುದಕ್ಕೆ ನನಗೆ ತುಂಬ ಸಮಯ ಬೇಕಾಯಿತು. ಯಾಕೆಂದರೆ, “ನಾನು ಒಬ್ಬ ರೋಗಿಗಿಂತಲೂ  ಹೆಚ್ಚಿನ ಯಾತನೆಯನ್ನು ಅನುಭವಿಸಲು  ಹೇಗೆ ಸಾಧ್ಯ? ” ಎಂದು  ನನ್ನಷ್ಟಕ್ಕೆ ಪ್ರಶ್ನಿಸಿಕೊಳ್ಳುತ್ತಿದ್ದೆ. ಒಂದು ಹಂತದಲ್ಲಿ, ನಾನೂ  ಅವಕಾಶಕ್ಕಾಗಿ  ತೆರೆದುಕೊಳ್ಳಲು ನಿರ್ಧರಿಸಿದೆ ಮತ್ತು ನನ್ನನ್ನು ಕಾಡುತ್ತಿದ್ದ ಆಳವಾದ ಭಯಗಳನ್ನು ನನ್ನ ಆತ್ಮೀಯರಲ್ಲಿ ತೋಡಿಕೊಂಡೆ. ಅದು ನನ್ನಲ್ಲಿ ಆತ್ಮಸ್ಥೈರ್ಯವನ್ನು ತುಂಬಲು ಸಹಕರಿಸಿತು. ನನ್ನಲ್ಲಿ ಚೇತರಿಕೆ ಕಂಡುಬರತೊಡಗಿದಂತೆ, ನಾನು ನನ್ನ ಖಿನ್ನತೆ, ಆತಂಕಗಳ ಕುರಿತು ತಾರ್ಕಿಕವಾಗಿ ನಿರ್ಭಿಡೆಯಿಂದ, ಅವು ನನ್ನದೇ ಭಾಗಗಳು ಎಂಬಂತೆ ಮಾತನಾಡತೊಡಗಿದೆ. ಮೊದಮೊದಲು, ಈ ಕುರಿತಾದ ಪ್ರತಿ ಸಂಭಾಷಣೆಯ ನಂತರದಲ್ಲಿಯೂ “ಜನ ಏನು ತಿಳಿದುಕೊಂಡಾರು?” ಎಂಬ ಸಂಕೋಚ ಆವರಿಸುತ್ತಿತ್ತು. ನಾನೇ ನನ್ನ ಬಗ್ಗೆ ಮಾಡಿಕೊಳ್ಳುವ ವಿಮರ್ಶೆಯಿಂದಾಗಿ ನಾನು ಭಯಗೊಳ್ಳುತ್ತಿದ್ದೇನೆ ಎಂಬುದು ನಿಧಾನವಾಗಿ ಅರಿವಾಗತೊಡಗಿತು. ಜನ ನನ್ನ ಸಮಸ್ಯೆಗಳನ್ನು ತಿರಸ್ಕರಿಸುತ್ತಿರಲಿಲ್ಲ. ಬದಲಾಗಿ ಕೆಲವರು ತಮ್ಮದೇ ವೈಯಕ್ತಿಕ ನೋವು ಮತ್ತು ಯಾತನೆಯ ಅನುಭವಗಳನ್ನು ಕೂಡ ಹಂಚಿಕೊಂಡರು. ನನಗೆ ದೀರ್ಘಕಾಲ ಗಟ್ಟಿಯಾಗಿ ಉಳಿಯುವ ಗೆಳೆತನ ಲಭ್ಯವಾಗತೊಡಗಿತು.

ನನ್ನ ಪಯಣ ಇಲ್ಲಿಗೇ ಮುಕ್ತಾಯವಾಗಿಲ್ಲ. ನಾನು ಆರೈಕೆ ಮಾಡಿದ ವ್ಯಕ್ತಿಗಳು ಈಗ ಚೆನ್ನಾಗಿದ್ದಾರೆ.  ಖಿನ್ನತೆ ಮತ್ತು ಆತಂಕಗಳೊಂದಿಗಿನ  ಹೋರಾಟ ನನಗೆ ಜೀವನ ಪರ್ಯಂತವಾದುದು ಎಂಬುದು ನನಗೆ ಗೊತ್ತಿದೆ. ಆದರೂ, ನನ್ನ ಧ್ವನಿಯಲ್ಲಿ ಮತ್ತು ಮನಸ್ಸಿನಲ್ಲಿ ಶಕ್ತಿಯಿರುವುದನ್ನು ದಿನಕ್ಕೊಮ್ಮೆಯಾದರೂ ನಾನು ಕಂಡುಕೊಳ್ಳುತ್ತಿದ್ದೇನೆ.

ಅರುಣಾ ರಾಮನ್ ಅವರು ಸಾಮಾಜಿಕ ನಾವೀನ್ಯತೆ ವಿಷಯದ ವೃತ್ತಿಪರರು. ಸಧ್ಯ ಅವರು ಅಮೇರಿಕ ವಿಶ್ವವಿದ್ಯಾಲಯವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ದೈನಂದಿನ ಬದುಕನ್ನು ಉತ್ಸಾಹದಿಂದ ಕಳೆಯುತ್ತ ಆತಂಕ ಮತ್ತು ಖಿನ್ನತೆನ್ನು ಮೆಟ್ಟಿನಿಲ್ಲುವ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org