ಹೆಂಗಸರನ್ನು ಸಂಸಾರ ಸಲಹುವ ಹೊರೆಯಿಂದ ಏಕೆ ಬಿಡುಗಡೆ ಮಾಡಬೇಕು?

ಹೆಂಗಸರನ್ನು ಸಂಸಾರ ಸಲಹುವ ಹೊರೆಯಿಂದ ಏಕೆ ಬಿಡುಗಡೆ ಮಾಡಬೇಕು?

ಗಂಡಸರು ಸಂಪಾದನೆ ಮಾಡುವವರು ಮತ್ತು ಹೆಂಗಸರು ಮನೆಯನ್ನು ನೋಡಿಕೊಳ್ಳಲು ಮತ್ತು ಮನೆಯವರನ್ನು ಸಲಹಲು ಇರುವವರು ಎನ್ನುವುದು ವಾಡಿಕೆಯಂತೆ ನಂಬಿಕೊಂಡುಬರಲಾಗಿದೆ. ಒಇಸಿಡಿ ಸಂಸ್ಥೆಯ ಅನುಸಾರ ಈ ರೀತಿಯಾದ ಒಂದೇ ರೀತಿಯ ಅಭಿಪ್ರಾಯಗಳು ಇಂದಿಗೂ ಕೇಳಿಬರುತ್ತಿದ್ದು ಇವತ್ತಿನ ವಾಸ್ತವ ಎನಿಸುತ್ತದೆ. ವಿಶ್ವದಾದ್ಯಂತ ಹೆಂಗಸರು ಯಾವುದೇ ಕೂಲಿ ವೇತನ ಇಲ್ಲದೆಯೇ ಗಂಡಸರಿಗಿಂತಲೂ ಹತ್ತು ಪಟ್ಟು ಹೆಚ್ಚು ಸಮಯ ಸಂಸಾರ ಸಲಹುವ ಕೆಲಸ ಮಾಡುತ್ತಿದ್ದಾರೆ. 

ಕುಟುಂಬದ ಯಾವುದೇ ಸದಸ್ಯರು ಅನಾರೋಗ್ಯಕ್ಕೆ ತುತ್ತಾದರೆ ಅಥವಾ ಏನಾದರೂ ದೌರ್ಬಲ್ಯ ಹೊಂದಿದ್ದರೆ ಸಾಮಾನ್ಯವಾಗಿ ಕುಟುಂಬದಲ್ಲಿನ ಹೆಂಗಸರೇ ಅವರನ್ನು ಸಲಹುವುದು ಸಾಮಾನ್ಯವಾಗಿ ಕಂಡುಬರುವ ವರ್ತನೆ. ನಮ್ಮ ಸಂಶೋಧನೆಗಳಲ್ಲಿ ತಿಳಿದುಬಂದಂತೆ ಭಾರತ ಮತ್ತು ನೇಪಾಲದಲ್ಲಿ ಕುಟುಂಬದಲ್ಲಿ ಇತರರನ್ನು ಸಲಹುವ ಹೊರೆಯನ್ನು ಹೊರುವ ಶೇ 84ರಷ್ಟು ಹೆಂಗಸರೇ ಆಗಿರುತ್ತಾರೆ.  ನಮ್ಮ ಚಟುವಟಿಕೆ ವಿಸ್ತಾರವಾಗುತ್ತಿರುವಂತೆ ಈ ಪ್ರಮಾಣ ಶೇ 90ರಷ್ಟಾಗುವ ನಿರೀಕ್ಷೆ ಇದೆ.

ಸಲಹುವವರ ಪಾತ್ರವನ್ನು ಪ್ರಧಾನವಾಗಿ ಮಹಿಳೆಯರೇ ವಹಿಸಿಕೊಳ್ಳುವುದರಿಂದ ಪುರುಷ ಮತ್ತು ಮಹಿಳೆಯರ ನಡುವಿನ ಅಸಮಾನತೆ ಹೆಚ್ಚಾಗುತ್ತಲೇ ಹೋಗುತ್ತದೆ. ಗಂಡಸರಿಗೆ ಹೋಲಿಸಿದರೆ ಹೆಂಗಸರು ತಮ್ಮ ಮೂಲ ಭೂತ ಹಕ್ಕುಗಳನ್ನು ಪಡೆಯುವ ಅವಕಾಶಗಳನ್ನೂ ಕಳೆದುಕೊಳ್ಳುತ್ತಲೇ ಇರುತ್ತಾರೆ. ಅಭಿವೃದ್ಧಿ ಹೊಂದಿದ ಪ್ರದೇಶಗಳಿಗಿಂತಲೂ ಬಡತನದಲ್ಲಿ ಬಳಲುತ್ತಿರುವ ಸಮಾಜದಲ್ಲಿ ಹೆಂಗಸರು ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಈ ಹೆಂಗಸರು ಕೂಲಿ ಇಲ್ಲದೆ ದುಡಿಯವ ಸಮಯ ಹೆಚ್ಚಾಗಿರುತ್ತದೆ. ಸಂಸಾರವನ್ನು ತೂಗಿಸುವುದರಿಂದ ಮತ್ತು ಸಲಹುವುದರಲ್ಲಿ ತೊಡಗುವುದರಿಂದ ಹೆಂಗಸರ ಹಕ್ಕುಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎನ್ನುವುದನ್ನು ಈ ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.

ವಿದ್ಯಾಭ್ಯಾಸ - ಶಿಕ್ಷಣ

ಸಂಸಾರದಲ್ಲಿ ಸಾಕಷ್ಟು ಜವಾಬ್ದಾರಿಯನ್ನು ವಹಿಸಿಕೊಂಡಿರುವ ಹೆಣ್ಣುಮಕ್ಕಳು ಸಂಸಾರವನ್ನು ಸಲಹುವ ಹೊಣೆಯನ್ನೂ ಹೊತ್ತಿರುತ್ತಾರೆ.  ಇದರಿಂದ ಹೆಣ್ಣುಮಕ್ಕಳಿಗೆ ಓದಲು ಕಡಿಮೆ ಸಮಯ ದೊರೆಯುತ್ತದೆ.  ತಮ್ಮ ಯೌವ್ವನದಲ್ಲಿ ಹೆಚ್ಚಿನ ಸ್ನೇಹಿತರನ್ನು ಹೊಂದಿರಲು ಆಗುವುದಿಲ್ಲ, ಸಮಾಜದಲ್ಲಿ ಬೆರೆಯಲು ಸಾಧ್ಯವಾಗುವುದಿಲ್ಲ. ಅದೇ ವಯಸ್ಸಿನ  ಗಂಡುಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಮಯ ಖರ್ಚು ಮಾಡಲು ಅವಕಾಶ ಹೊಂದಿರುತ್ತಾರೆ.  ತಮ್ಮ ವಿದ್ಯಾಭ್ಯಾಸದೊಂದಿಗೇ ಮನೆ ಕೆಲಸವನ್ನೂ ಮಾಡುತ್ತಾ ಸರಿದೂಗಿಸಬೇಕಾಗುವುದರಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಯುವತಿಯರು ದಿನವಿಡೀ ಮನೆಕೆಲಸ ಮತ್ತು ಸಂಸಾರ ಸಲಹುವುದರಲ್ಲೇ ಕಳೆಯಬೇಕಾಗುವುದರಿಂದ ವಿದ್ಯಾಭ್ಯಾಸವನ್ನೇ ತೊರೆಯುವುದು ಅನಿವಾರ್ಯವಾಗಿಬಿಡುತ್ತದೆ.

ಉದ್ಯೋಗ ಮತ್ತು ಹಣಕಾಸು ಭದ್ರತೆ

ಮನೆಯ ಸದಸ್ಯರನ್ನು ಸಲಹುವುದು ಕೂಲಿಯಿಲ್ಲದ ಕೆಲಸ. ಈ ರೀತಿ ಸಂಸಾರವನ್ನು ಸಲಹುವುದರಲ್ಲೇ ತೊಡಗಿರುವ ಹೆಂಗಸರು ಹೊರಗೆ ಯಾವುದೇ ನೌಕರಿ ಮಾಡಲಾಗದೆ ಹಣಕಾಸು ಬಿಕ್ಕಟ್ಟಿನಿಂದ ಪರದಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಕುಟುಂಬದ ಗಂಡಸರನ್ನು ಅವಲಂಬಿಸುತ್ತಾರೆ. ಮನೆಯ ಖರ್ಚನ್ನು ನಿಭಾಯಿಸಲು ಗಂಡಸರ ಸಂಪಾದನೆಯನ್ನೇ ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ.  ಈ ಪರಿಸ್ಥಿತಿಯಿಂದಲೇ ಹೆಂಗಸರು ಎರಡನೆ ದರ್ಜೆಯ ಪ್ರಜೆಗಳು ಎನ್ನುವ ಅಭಿಪ್ರಾಯ ಸಾರ್ವಜನಿಕರಲ್ಲಿ ದಟ್ಟವಾಗಿರುತ್ತದೆ.  ಇದರಿಂದ ಲಿಂಗ ಅಸಮಾನತೆ ಹೆಚ್ಚಾಗುವುದೇ ಅಲ್ಲದೆ  ಹೆಂಗಸರು ಸ್ವತಂತ್ರರಾಗಿ ಬದುಕಲು ಸಾಧ್ಯವಾಗುವುದಿಲ್ಲ.  ತಮ್ಮ ಸಂಸಾರ ಸಲಹುವ ಕರ್ತವ್ಯಗಳೊಂದಿಗೇ ಹೊರಗೆ ದುಡಿದು ಹಣ ಸಂಪಾದಿಸುವ ಅವಕಾಶಗಳನ್ನು ಪಡೆಯುವ ಹೆಂಗಸರು ಸಾಮಾನ್ಯವಾಗಿ ಕಡಿಮೆ ವೇತನ ಪಡೆಯುವುದೇ ಅಲ್ಲದೆ ಭದ್ರತೆ ಇಲ್ಲದ ನೌಕರಿಯನ್ನು ಮಾಡುತ್ತಾರೆ, ಅಪಾಯಕರವಾದ, ಅನಾರೋಗ್ಯಕರ ವಾತಾವರಣದಲ್ಲಿ, ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಾರೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಶಾಸನಸಭೆ ಹೇಳುತ್ತದೆ.

ಸಾಮಾಜಿಕ ವಲಯದಲ್ಲಿ ಭಾಗವಹಿಸುವಿಕೆ

ಅತಿ ಹೆಚ್ಚಿನ ಕುಟುಂಬದ ಜವಾಬ್ದಾರಿ ಮತ್ತು ಸಂಸಾರ ಸಲಹುವ ಕರ್ತವ್ಯದಿಂದ ಹೆಂಗಸರು ಗಂಡಸರಂತೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಭಾಗವಹಿಸಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಹೆಂಗಸರ ಪ್ರಾತಿನಿಧ್ಯ ಕಡಿಮೆ ಇರುವುದರಿಂದ ಯಾವುದೇ ನಿರ್ಣಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಹೆಂಗಸರ ಅವಶ್ಯಕತೆಯನ್ನು  ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ವಿಶ್ವಸಂಸ್ಥೆಯ ಸಾಮಾನ್ಯ ಶಾಸನಸಭೆಯ ಅನುಸಾರ ಕಡಿಮೆ ಗುಣಮಟ್ಟದ ಸಾರ್ವಜನಿಕ ಸೇವೆಗಳು ಲಭ್ಯವಿರುವ ಮತ್ತು ಸೀಮಿತವಾದ ಸೇವೆಗಳು ಲಭ್ಯವಿರುವ ಸಮುದಾಯಗಳಲ್ಲಿ ಕೂಲಿ ಇಲ್ಲದ ಕೆಲಸ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.  ಈ ರೀತಿ ಕೂಲಿ ಇಲ್ಲದ ಕೆಲಸಗಳಲ್ಲಿ ಹೆಂಗಸರು ಹೆಚ್ಚಾಗಿ ಭಾಗವಹಿಸುವುದರಿಂದ ಅವರು ಸಾಮಾಜಿಕ ವಲಯದಲ್ಲಿ ಹೆಚ್ಚಾಗಿ ಭಾಗವಹಿಸಲು ಸಾಧ್ಯವಾಗುವುದಿಲ್ಲ , ಹಾಗಾಗಿ ಸಾರ್ವಜನಿಕ ಸೇವೆಗಳಲ್ಲಿ ಹೆಚ್ಚಿನ ಖರ್ಚು ಮಾಡುವ ಅವಶ್ಯಕತೆಯೂ ಎದುರಾಗುವುದಿಲ್ಲ. ಇದರ ಪರಿಣಾಮ ಹೆಂಗಸರು ತಮ್ಮ ಅವಶ್ಯಕತೆಗಳು ಕಡೆಗಣಿಸಲ್ಪಟ್ಟರೂ ತಮ್ಮ ಕರ್ತವ್ಯವನ್ನು ಮಾಡುತ್ತಲೇ ತಮ್ಮ ಪಾತ್ರ ನಿರ್ವಹಿಸುತ್ತಿರುತ್ತಾರೆ.

ಸಲಹುವಿಕೆಯಿಂದ ಮತ್ತು ಕೌಟುಂಬಿಕ ಜವಾಬ್ದಾರಿಗಳಿಂದ ಉಂಟಾಗುವ ಲಿಂಗ ಅಸಮಾನತೆಯನ್ನು ಕಡಿಮೆ ಮಾಡಲು ಸರ್ಕಾರಗಳು, ಸಲಹುವಿಕೆ ಎನ್ನುವುದು ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯವಾದ ವೃತ್ತಿ ಎಂದು ಗುರುತಿಸಬೇಕು.  ಸಲಹುವಿಕೆಯಲ್ಲಿ ತೊಡಗಿರುವವರು ಆರ್ಥಿಕವಾಗಿ ಸ್ವತಂತ್ರರಾಗಿರುವಂತೆ  ಮತ್ತು ಸಾರ್ವಜನಿಕ ವಲಯದಲ್ಲಿ ಹೆಚ್ಚು ಭಾಗವಹಿಸುವಂತೆ ನೆರವಾಗಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಈ ಕ್ರಮಗಳನ್ನು ಹೊರತುಪಡಿಸಿ ಸಲಹುವಿಕೆಯ ಜವಾಬ್ದಾರಿಯಿಂದ ಹೆಂಗಸರನ್ನು ಬಿಡುಗಡೆ ಮಾಡಬೇಕು. 

ಸಂಸಾರದಲ್ಲಿ ಸಲಹುವ ಕರ್ತವ್ಯಗಳನ್ನು ಗಂಡಸರು ಮತ್ತು ಹೆಂಗಸರು ಸಮನಾಗಿ ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಇದರಿಂದ ಗಂಡು ಹೆಣ್ಣಿನ ನಡುವೆ ಏರ್ಪಟ್ಟಿರುವ ಅಸಮಾನತೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಲೇಖಕರಾದ ಡಾ ಅನಿಲ್ ಪಾಟೀಲ್ ಕೇರರ್ಸ್ ವರ್ಲ್ಡ್ ವೈಡ್ ಸಂಸ್ಥೆಯ ಕಾರ್ಯವಾಹಕ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆಯು ವಿಶ್ವದಾದ್ಯಂತ ವ್ಯಾಪಿಸಿದ್ದು ಕುಟುಂಬದಲ್ಲಿ ಕೂಲಿ ಇಲ್ಲದೆಯೇ ಸಲಹುವಿಕೆಯ ಕೆಲಸ ಮಾಡುವವರು ಎದುರಿಸುವ ಸಮಸ್ಯೆಗಳನ್ನು ನಿವಾರಿಸಲು ಯತ್ನಿಸುತ್ತದೆ. 2012ರಲ್ಲಿ ಆರಂಭವಾಗಿ ಯುನೈಟೆಡ್ ಕಿಂಗ್ಡಮ್ ನಲ್ಲಿ ನೋಂದಣಿಯಾಗಿರುವ ಈ ಸಂಸ್ಥೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕುಟುಂಬ ಸಲಹುವುದರಲ್ಲಿ ತೊಡಗಿರುವವರ ನಡುವೆ ಕೆಲಸ ಮಾಡುತ್ತದೆ. ಡಾ ಪಾಟೀಲ್ ಈ ಲೇಖನವನ್ನು ರುತ್ ಪಾಟೀಲ್ ಅವರೊಡನೆ ಸೇರಿ ಬರೆದಿದ್ದಾರೆ. ರುತ್ ಪಾಟೀಲ್ ಅವರು ಕೇರರ್ಸ್ ವರ್ಲ್ಡ್ ವೈಡ್ ಸಂಸ್ಥೆಯಲ್ಲಿ ಸ್ವಯಂ ಸೇವಕರಾಗಿ ದುಡಿಯುತ್ತಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಕೇರರ್ಸ್ ವರ್ಲ್ಡ್ ವೈಡ್ ಜಾಲತಾಣಕ್ಕೆ ಭೇಟಿ ನೀಡಬಹುದು. ಲೇಖಕರನ್ನು ಸಂಪರ್ಕಿಸಲು ಈ ವಿಳಾಸಕ್ಕೆ ಮೇಲ್ ಮಾಡಬಹುದು. columns@whiteswanfoundation.org

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org