ಆರೈಕೆದಾರರ ಮೇಲಿನ ಹೊರೆಯನ್ನು ಗುರುತಿಸುವುದು
ಕಳೆದ ಲೇಖನದಲ್ಲಿ, ಆರೈಕೆ ಮಾಡುವುದರಿಂದ ಆರೈಕೆದಾರರ ದೈಹಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ನಾವು ಚರ್ಚಿಸಿದ್ದೆವು. ಈಗ ಅವರ ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆ ನೋಡೋಣ. ಕೆಲವೊಮ್ಮೆ ನಾವು ನಮ್ಮ ಸುತ್ತಲಿನ ವ್ಯಕ್ತಿಗಳು ಹಠಾತ್ತಾಗಿ ಅಥವಾ ದೀರ್ಘಕಾಲೀನವಾಗಿ ಇನ್ನೊಬ್ಬರ ಆರೈಕೆಯಲ್ಲಿ ತೊಡಗುವುದರಿಂದ ಖಿನ್ನರಾಗುವುದನ್ನು, ಆತಂಕ ಅಥವಾ ಹಿಂಜರಿಕೆಗೆ ಒಳಗಾಗುವುದು ಅಥವಾ ಮಾನಸಿಕ ಸಮಸ್ಯೆಯನ್ನು ಎದುರಿಸುವುದನ್ನು ನೋಡುತ್ತೇವೆ.
ಇನ್ನೊಬ್ಬರನ್ನು ಆರೈಕೆ ಮಾಡುವುದು ಜವಾಬ್ಧಾರಿಯುತ ಕೆಲಸ. ಎಲ್ಲಾ ಆರೈಕೆದಾರರು ಒಂದಲ್ಲಾ ಒಂದು ಸಮಯದಲ್ಲಿ ಇದರ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರೆ ಆರೈಕೆದಾರರು ಈ ಭಾವನೆಗಳಿಂದ ನಾಚಿಕೆ ಪಡುವಂತೆ ಮಾಡಬಾರದು. ಅರ್ಥಪೂರ್ಣವೆಂದೆನಿಸುವ ಮಾತುಕತೆಗಳಾದ “ಈ ರೀತಿ ಕಾಳಜಿ ಮಾಡುವ ನೀವು ದೇವತೆಯೇ ಸರಿ,” “ನೀನು ಹೇಗೆ ಮಾಡುತ್ತಿಯೋ ತಿಳಿಯದು” ಅಥವಾ “ವಿಶೇಷ ಅಗತ್ಯವುಳ್ಳ ಮಕ್ಕಳನ್ನು ದೇವರು ವಿಶೇಷ ಪಾಲಕರಿಗೆ ನೀಡುತ್ತಾನೆ- ಆ ಮಗುವು ನಿಮಗಾಗಿಯೇ ಬಂದಿದೆ,” ಎಂಬಂತಹ ಹೇಳಿಕೆಗಳು ಆರೈಕೆದಾರರನ್ನು ಹುರಿದುಂಬಿಸಿದರೂ ಕೂಡಾ ಕೆಲವೊಮ್ಮೆ ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟದ್ದನ್ನು ಮಾಡುತ್ತವೆ. ಇದರಿಂದ ಆರೈಕೆದಾರರಿಗೆ ತಮ್ಮ ಪರಿಸ್ಥಿತಿಯ ಬಗ್ಗೆ ಇನ್ನೊಬ್ಬರಲ್ಲಿ ತೋಡಿಕೊಳ್ಳುವುದು, ದೂರುವುದು ಸರಿಯಲ್ಲ ಅಥವಾ ಇನ್ನೊಬ್ಬರನ್ನು ಕಾಳಜಿ ಮಾಡುವಂತಹ ಕಷ್ಟದ ಕೆಲಸಕ್ಕೆ ತಾವು ಸಮರ್ಥರಲ್ಲ ಎಂದೆನಿಸಬಹುದು.
ಆರೈಕೆದಾರರಿಗೆ ಇನ್ನೊಬ್ಬರನ್ನು ಕಾಳಜಿಯಿಂದ ನೋಡಿಕೊಳ್ಳುವ ಕೆಲಸದ ಕೆಲವು ಸ್ಥಿತಿ ಕಷ್ಟಕರ ಎಂದೆನಿಸಬಹುದು. ಉದಾಹರಣೆಗೆ ಮಕ್ಕಳ ಕೆಟ್ಟ ನಡವಳಿಕೆಗಳನ್ನು ಸಂಭಾಳಿಸುವುದು ಅಥವಾ ಅನುದಿನವೂ ನಿದ್ರಾಹೀನತೆಯಿಂದ ಬಳಲುವುದು. ವ್ಯಕ್ತಿಯು ದೀರ್ಘವಾಗಿ ಆರೈಕೆಯಲ್ಲಿ ತೊಡಗಿದಂತೆ ಒತ್ತಡಕ್ಕೆ ಒಳಗಾಗುವುದು ಹೆಚ್ಚುತ್ತದೆ. ಕೆಲವು ನಿರ್ದಿಷ್ಟ ಸಮಯದಲ್ಲಿ ಹೆಚ್ಚಿನ ಒತ್ತಡವುಂಟಾಗುತ್ತದೆ. ಉದಾಹರಣೆಗೆ ಸಂಗಾತಿಯ ಆರೈಕೆ ಮಾಡುವುದು ವಯಸ್ಸಾದವರನ್ನು ನೋಡಿಕೊಳ್ಳುವುದಕ್ಕಿಂತ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ.
ಆರೈಕೆದಾರರಿಗೆ ಈ ಒತ್ತಡವನ್ನು ಯಾರಲ್ಲಿಯೂ ಹಂಚಿಕೊಳ್ಳಲು ಸಾಧ್ಯವಾಗದಿದ್ದರೆ ಇನ್ನೂ ಹೆಚ್ಚಿನ ಒತ್ತಡ, ಆತಂಕ ಮತ್ತು ಒಂಟಿತನದ ಭಾವನೆ ಕಾಡುತ್ತದೆ. ಆದ್ದರಿಂದ ಅವರ ಮೇಲಿರುವ ಜವಾಬ್ಧಾರಿ ಅಥವಾ ಹೊರೆಯನ್ನು ಹಂಚಿಕೊಳ್ಳಲು ಸಾಧ್ಯವಾಗುವ ಪರಿಸರ ಬಹಳ ಮುಖ್ಯವಾಗುತ್ತದೆ. ಉದಾಹರಣೆಗೆ ಆರೈಕೆ ಮಾಡುವುದರಿಂದ ಸ್ವಲ್ಪ ವಿರಾಮ ಅಥವಾ ಮನೆಕೆಲಸದಲ್ಲಿ ಯಾರಾದರೂ ಸಹಾಯಕ್ಕೆ ದೊರೆತರೆ ಉತ್ತಮ. ಎಲ್ಲಕ್ಕಿಂತ ಮುಖ್ಯವಾದದ್ದೆಂದರೆ, ಭಾವನಾತ್ಮಕವಾದ ನೆರವಿನ ಅವಶ್ಯಕತೆ. ಉದಾಹರಣೆಗೆ, ಯಾವುದೇ ಪೂರ್ವಾಗ್ರಹವಿಲ್ಲದೇ ಅವರ ಸಮಸ್ಯೆಗಳನ್ನು ಆಲಿಸುವ ನೆರೆಹೊರೆಯವರು ಅಥವಾ ಸ್ನೇಹಿತರು, ಸಹ ಆರೈಕೆದಾರರ ಜೊತೆಗಿನ ಸ್ವ- ಸಹಾಯ ಗುಂಪುಗಳ ಅಥವಾ ಅನುಭವಿ ಆಪ್ತಸಮಾಲೋಚಕರ ಸಹಾಯ ಪಡೆಯುವುದು ಇತ್ಯಾದಿ.
ಯಾರೂ ವಿಚಾರಿಸದೇ, ನೆರವಿಗೆ ಬಾರದೇ ಹೋದಲ್ಲಿ ಆರೈಕೆದಾರರ ಭಾವನಾತ್ಮಕ ಒತ್ತಡವು ಗಂಭೀರವಾದ ಮಾನಸಿಕ ಸಮಸ್ಯೆಯಾಗಿ ಉಲ್ಬಣಗೊಳ್ಳಬಹುದು. ಇದರಿಂದ ಅವರ ಸ್ವಂತ ಜೀವನದ ಜೊತೆಗೆ ಅವರು ಆರೈಕೆ ಮಾಡುತ್ತಿರುವವರ ಜೀವನವೂ ಕೂಡಾ ಹಾಳಾಗಬಹುದು.
ಆದ್ದರಿಂದ ಈ ಕೆಲಸದ ಕೆಲವು ಮುಖ್ಯ ಸವಾಲಿನ ವಿಷಯಗಳನ್ನು ನೋಡೋಣ. ಪ್ರಾಯಶಃ ನೀವು ಕೂಡಾ ನಿಮಗೆ ತಿಳಿದಿರುವ ಆರೈಕೆದಾರರಿಗೆ ನಿಮ್ಮಿಂದಾದ ಸಹಾಯವನ್ನು ಮಾಡಬಹುದು. ಅವರ ಜೀವನದ ಹೆಚ್ಚಿನ ಅವಧಿಯನ್ನು ಅವರ ಪ್ರೀತಿಪಾತ್ರರ ಅನಾರೋಗ್ಯದ ಕುರಿತು ಯೋಚನೆ ಮತ್ತು ಅವರ ಆರೈಕೆಯ ಕಾರ್ಯದಲ್ಲಿಯೇ ಕಳೆಯುತ್ತಾರೆ. ಇದರಿಂದ ಆರೈಕೆ ಮಾಡುತ್ತಿರುವವರಿಗೆ ನಿದ್ದೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಅವರು ಅತಿ ಹೆಚ್ಚು ಅಥವಾ ಅತಿ ಕಡಿಮೆ ಆಹಾರವನ್ನು ಸೇವಿಸುತ್ತಿರಬಹುದು ಅಥವಾ ಅವರಲ್ಲಿ ಭಾವನೆಗಳ ಏರಿಳಿತವುಂಟಾಗಬಹುದು. ಈ ರೀತಿ ಸಮಸ್ಯೆಯಲ್ಲಿ ದೀರ್ಘ ಕಾಲ ಕಳೆಯುವುದರಿಂದ ಅವರ ಮಾನಸಿಕ ಆರೋಗ್ಯವು ಹದಗೆಡುತ್ತದೆ.
ಸಾಮಾಜಿಕವಾಗಿ ಬೆರೆಯದೇ ಒಬ್ಬಂಟಿತನವನ್ನು ಅನುಭವಿಸುವುದು: ರೋಗಿಗಳ ಆರೈಕೆ ನಿರತ ಹಲವರಿಗೆ ಸಾಮಾಜಿಕವಾಗಿ ಬೆರೆಯುವುದು ಮತ್ತು ಅವರ ಹವ್ಯಾಸ ಅಥವಾ ಆಸಕ್ತಿಗಳಿಗೆ ಸಮಯ ನೀಡುವುದು ಕೂಡಾ ಸಾಧ್ಯವಾಗುವುದಿಲ್ಲ. ಅವರಿಗೆ ತಮ್ಮ ಸ್ವಂತದ ಕಾರ್ಯಕ್ಕಾಗಿ ಸಮಯ ನೀಡಲು ಸಾಧ್ಯವಾಗದಿರುವುದಕ್ಕೆ ಪಶ್ಚಾತ್ತಾಪವಾಗಬಹುದು. ನಮ್ಮ ಪ್ರಾಜೆಕ್ಟಿನ ಪ್ರಕಾರ 88 ಪ್ರತಿಶತ ಆರೈಕೆದಾರರಿಗೆ ತಮ್ಮ ಸ್ವಂತಕ್ಕೆ ಮೀಸಲಿಡಲು ಸಮಯವೇ ಸಿಗುವುದಿಲ್ಲ. ಅವರ ಮತ್ತು ಅವರು ಆರೈಕೆ ಮಾಡುತ್ತಿರುವವರ ಕುರಿತ ತಪ್ಪು ಗ್ರಹಿಕೆಗಳಿಂದ ಅವರು ತಮ್ಮ ಜವಾಬ್ಧಾರಿಗಳ ಕುರಿತು ಯಾರ ಬಳಿಯೂ ಮಾತನಾಡುವುದಿಲ್ಲ. ನಾವು ಆರೈಕೆದಾರರ ಕುರಿತು ನಡೆಸಿದ 77 ಪ್ರತಿಶತ ಜನರಲ್ಲಿ ಇಂತಹ ಸಮಸ್ಯೆಯಿಂದಾಗಿ ಒಬ್ಬಂಟಿತನ ಮತ್ತು ಕೊನೆಯಲ್ಲಿ ಆತಂಕ ಮತ್ತು ಖಿನ್ನತೆಯ ಸಮಸ್ಯೆಯುಂಟಾಗುತ್ತದೆ ಎಂಬ ಸಂಗತಿ ತಿಳಿದುಬಂದಿದೆ.
ಹತಾಶೆ ಮತ್ತು ಕೋಪ: ತಮ್ಮ ಜೀವನದ ಪ್ರಮುಖ ಭಾಗಗಳನ್ನು ಉದಾಹರಣೆಗೆ, ವೃತ್ತಿಜೀವನವನ್ನು ಕಳೆದುಕೊಳ್ಳಬೇಕಾಗಿರುವುದರಿಂದ ಅವರಲ್ಲಿ ಹತಾಶೆ ಮತ್ತು ಕೋಪವುಂಟಾಗಬಹುದು. ಇದರಿಂದ ಆರೈಕೆದಾರರಲ್ಲಿ ಪಶ್ಚಾತ್ತಾಪ ಮತ್ತು ನಕಾರಾತ್ಮಕ ಭಾವನೆಗಳು ಉಂಟಾಗಬಹುದು.
ಕುಸಿದ ಆತ್ಮಗೌರವ: ಆರೈಕೆದಾರರಾಗುವದರಿಂದ ಅವರ ಆತ್ಮಗೌರವದ ಮೇಲೂ ಪರಿಣಾಮವಾಗಬಹುದು. ಅವರಿಗೆ ತಮ್ಮನ್ನು ಯಾರೂ ಕಾಳಜಿ ಮಾಡುತ್ತಿಲ್ಲ ಅಥವಾ ಗಮನ ನೀಡುತ್ತಿಲ್ಲ ಎಂದೋ ಇಲ್ಲವೇ ತಮ್ಮ ಸಮಯ ಪೂರ್ತಿ ಆರೈಕೆ ಮಾಡುವುದರಲ್ಲೇ ಕಳೆಯುತ್ತಿದೆ ಎಂದೆನಿಸಬಹುದು. ಇದರಿಂದ ಸಹಜವಾಗಿ ಆರೈಕೆದಾರರು ತಮ್ಮ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ ಹಾಗೂ ತಮಗೆ ಆರೈಕೆ ಮಾಡುವ ಜವಾಬ್ಧಾರಿಯ ಹೊರತಾಗಿ ಬೇರೇನಾದರೂ ಮಾಡುವ ಸಾಮರ್ಥ್ಯವಿರುವ ಕುರಿತು ಶಂಕೆಗೆ ಒಳಗಾಗುತ್ತಾರೆ.
ಹಣಕಾಸಿನ ಸಮಸ್ಯೆ: ಆರೈಕೆದಾರರಿಗೆ ಚಿಕಿತ್ಸೆ, ಔಷಧಗಳು, ಉಪಕರಣ, ಓಡಾಟ ಹಾಗೂ ಹೆಚ್ಚಿನ ಆರೈಕೆಗಾಗಿ ಅಧಿಕ ಹಣದ ಅವಶ್ಯಕತೆಯಿರುತ್ತದೆ. ಇದರಿಂದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮವುಂಟಾಗುವುದಲ್ಲದೇ ಇತರ ಖರ್ಚುಗಳನ್ನು ಕಡಿಮೆ ಮಾಡಬೇಕಾಗುವದರಿಂದಲೂ ಹೆಚ್ಚಿನ ಒತ್ತಡವುಂಟಾಗುತ್ತದೆ. ಹಲವು ಆರೈಕೆದಾರರು ಹೆಚ್ಚಿದ ಖರ್ಚುವೆಚ್ಚಗಳನ್ನು ನಿಭಾಯಿಸಲಾಗದೇ ಸಾಲಕ್ಕೆ ಬೀಳುತ್ತಾರೆ. ನಾವು ಮಾತನಾಡಿಸುವ ಹತ್ತರಲ್ಲಿ ಒಂಬತ್ತು ಜನ ಹಣದ ಸಮಸ್ಯೆಯ ಬಗ್ಗೆ ವರದಿ ಮಾಡುತ್ತಾರೆ.
ಆರೈಕೆದಾರರ ಮಾನಸಿಕ ಆರೋಗ್ಯವನ್ನು ಕಾಪಾಡಲು ಬೆಂಬಲದ ಅವಶ್ಯಕತೆಯಿರುತ್ತದೆ. ಒಂದು ಸಮಾಜವಾಗಿ ನಾವು ಆರೈಕೆಯ ಕಾರ್ಯದ ಕುರಿತು ಮತ್ತು ನಮ್ಮ ಸಮುದಾಯದಲ್ಲಿ ಇದು ಯಾವ ಮಟ್ಟಿಗೆ ಜಾರಿಯಲ್ಲಿದೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದಾಗ ಮಾತ್ರ ಆರೈಕೆದಾರರಿಗೆ ಬೆಂಬಲ ದೊರೆಯುತ್ತದೆ.
ಅದೂ ಅಲ್ಲದೇ ನಾವೂ ಕೂಡಾ ಜೀವನದಲ್ಲಿ ಒಮ್ಮೆಯಾದರೂ ಆರೈಕೆ ಮಾಡಬೇಕಾಗುತ್ತದೆ ಅಥವಾ ಆರೈಕೆಗೆ ಒಳಗಾಗಬೇಕಾಗುತ್ತದೆ. ನನ್ನ ಮುಂದಿನ ಲೇಖನದಲ್ಲಿ ನಾನು ಆರೈಕೆದಾರರಿಗೆ ಅಗತ್ಯವಾಗಿರುವ ವಾಸ್ತವಿಕ ಮತ್ತು ಭಾವನಾತ್ಮಕ ಬೆಂಬಲ ನೀಡುವ ಕುರಿತು ಮತ್ತು ಆರೈಕೆದಾರರು ತಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಏನನ್ನು ಬಯಸುತ್ತಾರೆ ಎಂಬುದರ ಕುರಿತು ಚರ್ಚಿಸುತ್ತೇನೆ.
ಈ ಲೇಖನ ಮೂಲತಃ ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಮತ್ತು ಕನ್ನಡಕ್ಕೆ ಭಾಷಾಂತರಿಸಲಾಗಿದೆ.