ಸ್ಮಾರ್ಟ್ ಫೋನ್ ಸಂದೇಶಗಳು ನಿಮ್ಮನ್ನು ಚಂಚಲರನ್ನಾಗಿಯೂ ಮಿತಿಮೀರಿ ಸಕ್ರಿಯರನ್ನಾಗಿಯೂ ಮಾಡಬಲ್ಲದು
ನೀವು ಯಾವಾಗಲೂ ನಿಮ್ಮ ಸ್ಮಾರ್ಟ್ ಫೋನ್’ನಲ್ಲಿ ಬರುವ ಸಂದೇಶಗಳನ್ನು (ಅಲರ್ಟ್ಸ್) ಪರೀಕ್ಷಿಸುತ್ತಾ, ಅವಕ್ಕೆ ತತ್ ಕ್ಷಣ ಪ್ರತಿಕ್ರಿಯಿಸುವಲ್ಲಿ ವ್ಯಸ್ತರಾಗಿರುತ್ತೀರಾ? ಸಾಮಾಜಿಕ ಜಾಲತಾಣಗಳು ತೋರುವ ನೋಟಿಫಿಕೇಶನ್’ಗಳನ್ನು ಕಡ್ಡಾಯವೆಂಬಂತೆ ಆ ಕೂಡಲೇ ತೆರೆದು ನೋಡುತ್ತೀರಾ? ಹಾಗಾದರೆ ನೀವು ಏಕಾಗ್ರತೆ ವಿಚಲಿತಗೊಳ್ಳುವ ಅಟೆನ್ಶನ್ ಡಿಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ADHD) ನಿಂದ ಬಳಲುತ್ತೀದ್ದೀರಿ ಎನ್ನುತ್ತದೆ ವರ್ಜೀನಿಯಾ ವಿಶ್ವವಿದ್ಯಾಲಯದ ಒಂದು ಅಧ್ಯಯನ. ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿ ನಡೆದ ಹ್ಯೂಮನ್ – ಕಂಪ್ಯೂಟರ್ ಇಂಟರಾಕ್ಷನ್ ಕಾನ್ಫರೆನ್ಸ್ ಆಫ್ ದ ಅಸೋಸಿಯೇಶನ್ ಫಾರ್ ಕಂಪ್ಯೂಟಿಂಗ್ ಮೆಶಿನರಿಯಲ್ಲಿ ಈ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಲಾಯಿತು.
ಕೊಲಂಬಿಯಾ ಬ್ರಿಟಿಶ್ ವಿಶ್ವವಿದ್ಯಾಲಯದ 221 ವಿದ್ಯಾರ್ಥಿಗಳ ಮೇಲೆ ಎರಡು ವಾರಗಳ ಕಾಲ ನಡೆಸಿದ ಪ್ರಾಯೋಗಿಕ ಸಂಶೋಧನೆಯ ಫಲಶ್ರುತಿ ಇದಾಗಿದ್ದು; ವರದಿಯ ಸಾರಾಂಶ ಈ ಮೇಲಿನಂತಿದೆ.
ಮೊದಲ ವಾರದಲ್ಲಿ ವಿದ್ಯಾರ್ಥಿಗಳಿಗೆ ತಮ್ಮೆಲ್ಲ ನೋಟಿಫಿಕೇಶನ್’ಗಳನ್ನೂ ಆನ್ ಮಾಡಿಕೊಂಡು ತಮ್ಮ ಪಕ್ಕದಲ್ಲೆ ಫೋನ್ ಇಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು. ಎರಡನೆ ವಾರದಲ್ಲಿ, ನೋಟಿಫಿಕೇಶನ್’ಗಳನ್ನು ಆಫ್ ಮಾಡಿ ತಮ್ಮಿಂದ ಫೋನ್ ಅನ್ನು ದೂರವಿಟ್ಟುಕೊಳ್ಳುವಂತೆ ಸೂಚಿಲಾಯಿತು. ಅನಂತರದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿ ಉತ್ತರಿಸಲು ಹೇಳಲಾಯಿತು. ಈ ಪತ್ರಿಕೆಯಲ್ಲಿ ವಿದ್ಯಾರ್ಥಿಗಳ ಚಟುವಟಿಕೆ ತೀವ್ರತೆ ಮತ್ತು ಏಕಾಗ್ರತೆಯನ್ನು ಅಳೆಯುವಂಥ ಪ್ರಶ್ನೆಗಳನ್ನು ನೀಡಲಾಗಿತ್ತು. ಅಲರ್ಟ್’ಗಳನ್ನು ಆನ್ ಇಟ್ಟಾಗ ವಿದ್ಯಾರ್ಥಿಗಳು ಹೆಚ್ಚು ಚಂಚಲರೂ ಏಕಾಗ್ರತೆ ಇಲ್ಲದವರೂ ಆಗಿದ್ದುದನ್ನು ಪ್ರಶ್ನೆಪತ್ರಿಕೆಯಲ್ಲಿ ದೊರೆತ ಉತ್ತರಗಳು ಸಾಬೀತುಪಡಿಸಿದವು.
ಈ ವಿದ್ಯಾರ್ಥಿಗಳಲ್ಲಿ ADHD ಲಕ್ಷಣಗಳು ಇಲ್ಲದೆ ಇದ್ದರೂ; ಅವರು ಚಂಚಲತೆ, ಗಮನ ಕೇಂದ್ರೀಕರಿಸಲು ಕಷ್ಟಪಡುವುದು, ಗಮನವಿಡಲು ಯತ್ನಿಸಿದರೆ ಬೋರ್ ಆಗುವುದು, ಚಡಪಡಿಕೆಯೇ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿರಬಹುದು ಎಂಬುದು ಅಧ್ಯಯನ ವರದಿಯ ಅಭಿಪ್ರಾಯ.
ಹೆಚ್ಚಿನ ವರದಿಗಾಗಿ ಇಲ್ಲಿ ನೋಡಿ : https://news.virginia.edu/content/study-smartphone-alerts-increase-inattention-and-hyperactivity