ಮಾದಕ ವಸ್ತುವಿನಿಂದ ಮುಕ್ತಿ (ಡಿಅಡಿಕ್ಷನ್‌)

ವ್ಯಸನದಿಂದ ಮುಕ್ತಿ ಪಡೆಯಬೇಕೆಂದರೆ ವ್ಯಕ್ತಿ ಸ್ವಯಂಪ್ರೇರಿತರಾಗಿ ಚಿಕಿತ್ಸೆ ಪಡೆಯಲು ತಾವೇ ಮುಂದೆ ಬರಬೇಕು

ನಡವಳಿಕೆ ಅಥವಾ ಕ್ರಿಯೆಯಲ್ಲಿನ ಬದಲಾವಣೆಗೆ ಪ್ರೇರಣೆ ಮುಖ್ಯವಾದ ಮೊದಲ ಹೆಜ್ಜೆ. "ಕುದುರೆಯನ್ನು ನೀರಿನ ವರೆಗೆ ಕೊಂಡೊಯ್ಯಬಹುದು; ಆದರೆ ನೀರು ಕುಡಿಸಲು ಸಾಧ್ಯವಿಲ್ಲ" ಎಂಬ ಹೇಳಿಕೆಯನ್ನು ನಾವೆಲ್ಲರೂ ಕೇಳಿದ್ದೇವೆ. ಇದರ ಅರ್ಥವೆಂದರೆ ಜನರು ಸಾಮಾನ್ಯವಾಗಿ ಸ್ವಯಂಪ್ರೇರಣೆ ಪಡೆಯದೇ, ಅಪೇಕ್ಷಿತ ನಡವಳಿಕೆಯನ್ನು ಪ್ರದರ್ಶಿಸುವುದಿಲ್ಲ. ಅದರಲ್ಲೂ ನಿರ್ದಿಷ್ಟವಾಗಿ ಮಾದಕ ವ್ಯಸನ ಅಥವಾ ವಸ್ತುಗಳ ಮೇಲಿನ ಅವಲಂಬನೆ ವಿಚಾರದಲ್ಲಿ ಇದು ಹೆಚ್ಚು ನಿಜ.

ಮಾದಕ ವಸ್ತುವಿನ ವ್ಯಸನಕ್ಕೆ ಈಡಾದ ವ್ಯಕ್ತಿ ಚಿಕಿತ್ಸೆ ಪಡೆಯಲು ಅಥವಾ ಸಹಾಯ ಕೇಳಲು ಬಹಳ ಕಾಲ ತೆಗೆದುಕೊಳ್ಳಬಹುದು. ಹಾಗೆಯೇ ಚಿಕಿತ್ಸೆ ಶುರುವಾದ ನಂತರ ಅವರ ಮನಸು ಬದಲಾಗಬಹುದು.

ಮುಖ್ಯವಾಗಿ ವ್ಯಸನದಿಂದ ಮುಕ್ತಿ ಪಡೆಯಬೇಕೆಂದರೆ ವ್ಯಕ್ತಿ ಸ್ವಯಂಪ್ರೇರಿತರಾಗಿ ಚಿಕಿತ್ಸೆ ಪಡೆಯಲು ತಾವೇ ಮುಂದೆ ಬರಬೇಕು. ಇದರಿಂದ ವ್ಯಕ್ತಿಯು ತಜ್ಞರು ನೀಡುವ ಚಿಕಿತ್ಸೆಯನ್ನು ಆಸಕ್ತಿಯಿಂದ ಪರಿಪಾಲಿಸುತ್ತಾರೆ, ಕುಟುಂಬದವರು ನೀಡುವ ಸಲಹೆ ಅಥವಾ ಸಹಾಯವನ್ನು ತಿರಸ್ಕರಿಸುವುದಿಲ್ಲ ಮತ್ತು ಬೇಗ ಚೇತರಿಸಿಕೊಳ್ಳುತ್ತಾರೆ.

ಇಂಥ ಮಾದಕ ವಸ್ತುಗಳನ್ನು ಬಳಸುವವರು ತಮ್ಮ ಆಯ್ಕೆಯಲ್ಲಿ ಮುಕ್ತವಾಗಿದ್ದರೆ, ಅವರಿಗೆ ಅದನ್ನು ಪ್ರತಿರೋಧಿಸುವ ಅಗತ್ಯ ಕಾಣುವುದಿಲ್ಲ. ಅಥವಾ ಚಿಕಿತ್ಸಕ ನೀಡಿದ ಇಲ್ಲವೇ ಕುಟುಂಬದವರು ನೀಡಿದ ಸಲಹೆಯನ್ನು ತಿರಸ್ಕರಿಸುವ ಪ್ರಮೇಯ ಉದ್ಭವಿಸುವುದಿಲ್ಲ. ಒಮ್ಮೆ ಇಂಥ ವ್ಯಸನಿಗಳಿಗೆ ಬದಲಾವಣೆ ಪ್ರಕ್ರಿಯೆಯ ಹಿಂದಿನ ಕಾಳಜಿ ಮನವರಿಕೆಯಾದರೆ, ಅವರಿಗೆ ಸಬಲವಾದ ಮನೋಭಾವನೆ ಮೂಡುತ್ತದೆ ಹಾಗೂ ಹೆಚ್ಚು ಅವರು ಅದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಚಿಕಿತ್ಸೆಯ ಫಲಿತಾಂಶ ಉತ್ತಮವಾಗುತ್ತದೆ.

ಒಬ್ಬ ವ್ಯಕ್ತಿಯ ಪ್ರವೃತ್ತಿ ಬದಲಾಗಬೇಕಾದರೆ ಅದು ವಿವಿಧ ಹಂತಗಳಲ್ಲಿ ಉಂಟಾಗುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ. ಈ ಹಂತಗಳು ಮಾದಕ ವ್ಯಸನದ ಚಟದಿಂದ ಹೊರಬರಲು ಇಚ್ಛಿಸುವ ವ್ಯಕ್ತಿಗೂ ಅನ್ವಯಿಸುತ್ತದೆ.

ಪೂರ್ವಚಿಂತನೆ: ವ್ಯಕ್ತಿ ತನ್ನ ಚಟದಿಂದ ಆಗಿರುವ ಅಡ್ಡ ಪರಿಣಾಮದ ಬಗ್ಗೆ ಅರಿತಿರುತ್ತಾರೆ. ಆದರೆ ಇನ್ನೂ ವ್ಯಸನಮುಕ್ತರಾಗಲು ಬಯಸುವುದಿಲ್ಲ. ಆದ್ದರಿಂದ ಆರಂಭಿಕ ಸೆಷನ್‌ನಲ್ಲಿ, ಚಿಕಿತ್ಸಕ ಮತ್ತು ವ್ಯಕ್ತಿಯ ನಡುವೆ ಸಾಮರಸ್ಯ ಬೆಳೆಸಿಕೊಂಡರೆ ಉತ್ತಮ. ವ್ಯಕ್ತಿ ಚಿಕಿತ್ಸೆ ಪಡೆಯುವ ನಿರ್ಧಾರವನ್ನು ಚಿಕಿತ್ಸಕರು ಪ್ರಶಂಸಿಸಬೇಕು.

ವ್ಯಕ್ತಿ ಬದಲಾವಣೆಗೆ ಎಷ್ಟು ಸಜ್ಜಾಗಿದ್ದಾನೆ ಎನ್ನುವುದನ್ನು ಮೌಲ್ಯಮಾಪನ ಮಾಡುತ್ತಾರೆ. ಇಲ್ಲಿ ಅವರಿಗೆ ಮಾದಕ ವ್ಯಸನದ ಅಡ್ಡ ಪರಿಣಾಮದ ಬಗ್ಗೆ ವಿವರಿಸುತ್ತಾರೆ. ಉದಾಹರಣೆಗೆ, ಮದ್ಯಪಾನದಿಂದ ಖಿನ್ನತೆ ಉಂಟಾಗಬಹುದು ಎಂದು ತಿಳಿಸಬೇಕು. ಚಿಕಿತ್ಸಕ ವ್ಯಕ್ತಿಯ ಕುಟುಂಬದವರಿಂದ ವ್ಯಕ್ತಿಯ ದೈನಂದಿನ ಜೀವನದ ಇತರ ಸಮಸ್ಯೆ ಹಾಗೂ ಕುಟುಂಬದ ಇತಿಹಾಸದ ಬಗ್ಗೆ ಅರಿತುಕೊಳ್ಳುತ್ತಾರೆ.

ಚಿಂತನೆ: ಈ ಹಂತದಲ್ಲಿ, ತಾನು ಬಳಸುವ ಮಾದಕ ವಸ್ತುವಿನಿಂದಾಗುವ ತೊಂದರೆಯ ಬಗ್ಗೆ ತಿಳಿದಿರುತ್ತಾನೆ. ಚಿಕಿತ್ಸೆ ಪಡೆಯಬೇಕೋ ಬೇಡವೋ ಎಂಬ ಗೊಂದಲವೂ ಇರುತ್ತದೆ. ಇಂಥ ಸಮಯದಲ್ಲಿ ಚಿಕಿತ್ಸಕರು ವ್ಯಕ್ತಿಗೆ ವ್ಯಸನದಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳನ್ನು ಬರೆಯಲು ಹೇಳುತ್ತಾರೆ. ಮುಂದಿನ ಸೆಷನ್‌ನಲ್ಲಿ ಆದರ ಬಗ್ಗೆ ಚರ್ಚಿಸುತ್ತಾರೆ ಮತ್ತು ವ್ಯಕ್ತಿಗೆ ಚಿಕಿತ್ಸೆ ಪಡೆದು ಗುಣ ಹೊಂದಲು ಪ್ರೇರಣೆ ನೀಡುತ್ತಾರೆ. ಅಂತೆಯೇ ಮಾದಕವಸ್ತು ಚಟವನ್ನು ಮುಂದುವರಿಸಿದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆತನಿಗೆ ತಿಳಿಸುತ್ತಾರೆ.

ಸಿದ್ಧತೆ:  ಈ ಸಮಯದಲ್ಲಿ ವ್ಯಕ್ತಿ ತಮ್ಮ ಬದಲಾವಣೆಯ ಅಪೇಕ್ಷೆಯನ್ನು, ಚಿಕಿತ್ಸಕರ ಹೊರತಾಗಿ ಮತ್ತೊಬ್ಬರ ಜೊತೆ ಹಂಚಿಕೊಳ್ಳಲು ಚಿಕಿತ್ಸಕ ಉತ್ತೇಜಿಸುತ್ತಾರೆ. ಈ ಕ್ರಮವು ಆ ವ್ಯಕ್ತಿಯನ್ನು ಹೊಣೆಗಾರನನ್ನಾಗಿ ಮಾಡುತ್ತದೆ. ಅಗತ್ಯವಿದ್ದಾಗ ಮಧ್ಯಪ್ರವೇಶಿಸಿ ವ್ಯಕ್ತಿಗೆ ಚಿಕಿತ್ಸೆಯ ಸಾಧ್ಯತೆಗಳನ್ನು ತಿಳಿಸಿ, ಅದರ ಆಯ್ಕೆಯನ್ನು ಅವರಿಗೇ ನೀಡಲಾಗುತ್ತದೆ. ಆ ವ್ಯಕ್ತಿ ಚಿಕಿತ್ಸೆಯನ್ನು ಮುಂದುವರಿಸುವಂತೆ ಯೋಜನೆ ಸಿದ್ಧ ಮಾಡುತ್ತಾರೆ.

ಈ ಹಂತದಲ್ಲಿ ಚಿಕಿತ್ಸೆಗೆ ಮುಂದಾಗಿರುವ ವ್ಯಕ್ತಿಯ ನಿರ್ಧಾರವನ್ನು ಉತ್ತೇಜಿಸಿ , ಅವರಿಗೆ ಬೇಕಾದ ರೀತಿಯಲ್ಲಿ ಸಹಾಯ ಮಾಡಿ. ಒಂದು ವೇಳೆ ಮತ್ತೆ ಚಟಕ್ಕೆ ಬಿದ್ದರೂ, ಇದರಿಂದ ಆ ವ್ಯಕ್ತಿ ಹಾಗೂ ಚಿಕಿತ್ಸಕನ ನಡುವಿನ ಸಂಬಂಧಕ್ಕೆ ಯಾವ ಧಕ್ಕೆಯೂ ಇಲ್ಲ ಎನ್ನುವ ಧೈರ್ಯವನ್ನು ಆತನಿಗೆ ನೀಡಿ. 

ಕ್ರಿಯೆ: ಇಲ್ಲಿ ವ್ಯಕ್ತಿ ತನ್ನ ಚಟದಿಂದ ಹೊರಬಂದು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಾರೆ . ಇದು ಬದಲಾವಣೆ ನಿಟ್ಟಿನಲ್ಲಿ ಮೊದಲ ಸಕ್ರಿಯ ಹೆಜ್ಜೆ. ಅದನ್ನು ಮುಂದುವರಿಸಲು ಆ ವ್ಯಕ್ತಿಗೆ ಸಹಾಯ ಬೇಕಾಗುತ್ತದೆ . ಈ ಹಂತದಲ್ಲಿ ಚಿಕಿತ್ಸಕ ಹಾಗೂ ಕುಟುಂಬದ ಸದಸ್ಯರ ಪಾತ್ರವೆಂದರೆ, ಆ ವ್ಯಕ್ತಿಯ ಭಾವನೆಗಳನ್ನು ಹಾಗೂ ಅನುಭವಗಳನ್ನು ಗೌರವಿಸಿ ಅದನ್ನು ಪುನಶ್ಚೇತನದ ಭಾಗ ಎಂದು ತಿಳಿದುಕೊಳ್ಳಬೇಕು. ಆತನಿಗೆ ಪ್ರೋತ್ಸಾಹ ಹಾಗೂ ಬೆಂಬಲ ನೀಡಿ ಪುನಶ್ಚೇತನದ ಲಾಭವನ್ನು  ಮನದಟ್ಟು ಮಾಡಬೇಕು.

ನಿರ್ವಹಣೆ: ವ್ಯಕ್ತಿ ಈ ಹಂತಕ್ಕೆ ಬಂದಾಗ, ಅಂದರೆ ಅವರು ಹೊಸ ಅಭ್ಯಾಸಗಳನ್ನು  ಖಚಿತವಾಗಿ ಅಳವಡಿಸಿಕೊಂಡಾಗ, ಧೀರ್ಘಾವಧಿಯಲ್ಲಿ ಅದನ್ನು ಮುಂದುವರಿಸಲು ಮತ್ತೆ ಸಹಕಾರ ಅನಿವಾರ್ಯವಾಗುತ್ತದೆ.  

ಮರುಕಳಿಸುವುದು: ಈ ಹಂತದಲ್ಲಿ ವ್ಯಕ್ತಿ ಹಳೆಯ ಚಟ ಮರುಕಳಿಸುವುದನ್ನು ಅನುಭವಿಸುತ್ತಾರೆ. ಇಲ್ಲಿ ಅವರು ಪರಿಸ್ಥಿತಿ ಅರಿತು ಹೇಗೆ ನಿಭಾಯಿಸಬೇಕು ಎಂದು ಆಲೋಚಿಸಬೇಕು. ಈ ಹಂತದಲ್ಲಿ ಕುಟುಂಬದ ಸದಸ್ಯರು ಆತನಿಗೆ ಸಹಾಯ ಮಾಡಬೇಕು. ಹಾಗೂ ಪರ್ಯಾಯವಾಗಿ ಪರಿಸ್ಥಿತಿಗೆ ಹೊಂದಿಕೊಳ್ಳುವ ವಿಧಾನದ ಬಗ್ಗೆ ಮನವರಿಕೆ ಮಾಡಬೇಕು.

ಈ ಹಂತದಲ್ಲಿ ಚಿಕಿತ್ಸಕರು ಸಾಮಾನ್ಯವಾಗಿ, ವ್ಯಕ್ತಿಗೆ  ಬದಲಾವಣೆಯ ಸಾಧ್ಯತೆ ಮತ್ತು ಈ ಸಮಸ್ಯೆ ಮರುಕಳಿಸಿರುವುದು ಹೊಸ ಕಲಿಕೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಬೇಕು. ಸಂಶೋಧಕರು ಈ ವಿಚಾರದಲ್ಲಿ ಕಂಡುಕೊಂಡಿರುವ ಸತ್ಯವೆಂದರೆ, ವ್ಯಸನ ಮುಕ್ತಗೊಳಿಸುವ ಚಟುವಟಿಕೆಗಳಲ್ಲಿ ವ್ಯಕ್ತಿಯ ಪತ್ನಿ, ಕುಟುಂಬದ ಸದಸ್ಯರು ಅಥವಾ ಆ ವ್ಯಕ್ತಿಗೆ ಹತ್ತಿರವಾಗಿರುವವರು ಸಕ್ರಿಯವಾಗಿ ತೊಡಗಿಸಿಕೊಂಡರೆ, ಫಲಿತಾಂಶ ಮತ್ತಷ್ಟು ಉತ್ತಮವಾಗುತ್ತದೆ.  ಇನ್ನೊಂದು ಪ್ರಮುಖವಾದ ಅಂಶವೆಂದರೆ, ವ್ಯಕ್ತಿ ತಮ್ಮ ಬದಲಾವಣೆಗೆ ಪರಿಹಾರವನ್ನು ಅವರೇ ಕಂಡುಕೊಳ್ಳುವಂತೆ ಪ್ರೇರೇಪಿಸುತ್ತದೆ . ಇಷ್ಟೆಲ್ಲದರ ನಡುವೆಯೂ ಅಂತಿಮವಾಗಿ ಬದಲಾವಣೆಯ ಜವಾಬ್ದಾರಿ ಆ ವ್ಯಕ್ತಿಗೆ ಬಿಟ್ಟದ್ದು.

ಪ್ರೇರಣೆ ಸಲಹೆಯಲ್ಲಿ ಮತ್ತೊಬ್ಬ ಸುಸ್ಥಿರವಾದ ವ್ಯಕ್ತಿ ಮೌಲ್ಯಯುತ ಜೀವನ ಸಾಗಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಆರೋಗ್ಯಕರ ಜೀವನಶೈಲಿ ಆರಂಭಿಸಲು ಬೆಂಬಲ ನೀಡಬೇಕು. 

ಡಾ.ಗರಿಮಾ ಶ್ರೀವಾಸ್ತವ ಅವರು ದೆಹಲಿ ಮೂಲದ ಮನಃಶಾಸ್ತ್ರಜ್ಞೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org