ಆತಂಕ ದೂರ ಮಾಡಿ

ಕ್ರಮಬದ್ದತೆಯಿಂದ ಪರೀಕ್ಷೆಗೆ ಸಿದ್ದಾರಾದರೆ ಯಾವ ಆತಂಕವೂ ಇರುವುದಿಲ್ಲ

ಕೆಲವು ಮಕ್ಕಳು ಪರೀಕ್ಷಾ ಸಮಯದಲ್ಲಿ ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಾರೆ. ಸಹಜ ಎನಿಸುವಷ್ಟು ಒತ್ತಡವು ನಿಮ್ಮ ಕೆಲಸ ಚುರುಕಾಗಿ ಮಾಡಲು ಸಹಾಯ ಮಾಡುತ್ತದೆ. ಆತಂಕ ಜಾಸ್ತಿಯಾದರೆ, ನಿಮ್ಮ ಕೆಲಸಗಳ ಮೇಲೆ ಪರಿಣಾಮ ಬೀರಬಹುದು. ಆತಂಕದ ಲಕ್ಷಣಗಳನ್ನು ಗುರುತಿಸಿ ನಿಭಾಯಿಸಬಹುದು.

ಆತಂಕದ ಲಕ್ಷಣಗಳು ಹೀಗಿರುತ್ತವೆ:

 • ರಾತ್ರಿ ನಿದ್ರೆ ಬರದಿರುವುದು ಅಥವಾ ಹಲವು ಬಾರಿ ಎಚ್ಚರವಾಗುವುದು
 • ಕಿರಿಕಿರಿ ಮತ್ತು ಕೋಪ
 • ತಲೆನೋವು, ಮೈ ಕೈ ನೋವು, ಹೊಟ್ಟೆಯ ಸಮಸ್ಯೆ
 • ಜಾಸ್ತಿ ಹಸಿವಾಗುವುದು, ಅತಿಯಾಗಿ ತಿನ್ನುವುದು, ಅಥವಾ ಹಸಿವಾಗದಿರುವುದು
 • ಗಮನವಿಟ್ಟು ಓದಲು ಕಷ್ಟ ಪಡುವುದು

ಈ ಸಮಸ್ಯೆಗಳು ಕಂಡುಬಂದರೆ, ಕೆಳಗಿನ ಸಲಹೆಗಳನ್ನು ಪಾಲಿಸಬಹುದು-

ಪರೀಕ್ಷೆಗೂ ಮುನ್ನ:

 • ಒಂದು ವಾರಕ್ಕೆ ಟೈಮ್ ಟೇಬಲ್ ತಯಾರಿಸಿ. ಇದರಿಂದ ನೀವು ಕೊನೇ ಘಳಿಗೆಯಲ್ಲಿ ಓದುವುದು ತಪ್ಪುತ್ತದೆ. ಪರೀಕ್ಷೆಯ ಮುಂಚೆ ನಿರಾತಂಕವಾಗಿ ಇರಬಹುದು.
 • ರೆಡಿಮೇಡ್ ನೋಟ್ಸ್ ಓದುವ ಬದಲು ನಿಮ್ಮದೇ ನೋಟ್ಸ್ ಮಾಡಿಕೊಳ್ಳಿ. ಇದರಿಂದ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.
 • ಮ್ಯಾಪ್, ಡಯಾಗ್ರಾಮ್ ಮತ್ತು ಫ್ಲೋ ಚಾರ್ಟ್ ಬಳಸಿ ವಿಷಯಗಳನ್ನು ಅರ್ಥಮಾಡಿಕೊಳ್ಳಿ.
 • ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ. ಓದದೆ ಇರುವ ವಿಷಯಗಳನ್ನು ಗುರುತಿಸಲು ಇದು ಸಹಾಯಕ.
 • ಶಿಕ್ಷಕರೊಂದಿಗೆ, ಸ್ನೇಹಿತರೊಂದಿಗೆ ನಿಮ್ಮ ಸಂದೇಹಗಳ ಬಗ್ಗೆ ಚರ್ಚಿಸಿ.
 • ಆಗಾಗ ಸಣ್ಣ ವಿರಾಮ ತೆಗೆದುಕೊಳ್ಳಿ. ವಿರಾಮದ ನಂತರ, ಓದಿದ ವಿಷಯವನ್ನು ನೆನಪಿಸಿಕೊಂಡು ನಂತರ ಹೊಸ ಪಾಠ ಓದಿ.
 • ಶಾಂತವಾಗಿರುವ ಜಾಗದಲ್ಲಿ ಓದುವುದರಿಂದ ಏಕಾಗ್ರತೆ ಹೆಚ್ಚುತ್ತದೆ.
 • ಆರೋಗ್ಯಕರ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ.
 • ಬಹು-ಇಂದ್ರಿಯ ವಿಧಾನ ಬಳಸಿ- ಬರೆಯಿರಿ, ಹೇಳಿ, ನೋಡಿ, ಮತ್ತು ಕೇಳಿಸಿಕೊಳ್ಳಿ. ಉದಾಹರಣೆಗೆ, ನೋಟ್ಸ್ ಬರೆಯುವುದು, ಚಾರ್ಟ್ ನೋಡುವುದು, ಪದ್ಯಗಳನ್ನು ರೆಕಾರ್ಡ್ ಮಾಡಿ ಕೇಳುವುದು, ಜೋರಾಗಿ ಉತ್ತರಗಳನ್ನು ಹೇಳುವುದು ಇತ್ಯಾದಿ.
 • ಓದುವಾಗ ಯೋಚಿಸಿ, ಪ್ರಶ್ನಿಸಿ, ಮತ್ತು ಅರ್ಥಮಾಡಿಕೊಳ್ಳಿ.

ಪರೀಕ್ಷೆಯ ಸಮಯದಲ್ಲಿ:

ಪರೀಕ್ಷೆ ಬರೆಯುವ ಮೊದಲು 10 ನಿಮಿಷಗಳ ಕಾಲ ಓದಲು ಬಿಡುತ್ತಾರೆ. ಈ ಸಮಯವನ್ನು ಹೀಗೆ ಬಳಸಿಕೊಳ್ಳಿ:

 • ಪ್ರಶ್ನೆ ಪತ್ರಿಕೆಯಲ್ಲಿರುವ ಸೂಚನೆಗಳನ್ನು ಗಮನವಿಟ್ಟು ಓದಿ. ಹೀಗೆ ಮಾಡಿದರೆ ಕಡ್ಡಾಯ ಪ್ರಶ್ನೆಗಳು ಯಾವುದು, ಪ್ರತಿ ವಿಭಾಗದಲ್ಲಿ ಎಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ತಿಳಿಯುತ್ತದೆ. (ಆತಂಕದಲ್ಲಿದ್ದಾಗ ಸೂಚನೆಗಳನ್ನು ಸರಿಯಾಗಿ ಓದದೇ ಇರಬಹುದು)
 • ಪ್ರಶ್ನೆ ಪತ್ರಿಕೆಯನ್ನು ಪೂರ್ತಿ ಓದಿದ ಮೇಲೆ ನೀವು ಉತ್ತರಿಸದ ಪ್ರಶ್ನೆಗಳನ್ನು ಗುರುತು ಮಾಡಿ.
 • ಪ್ರತಿಯೊಂದು ಪ್ರಶ್ನೆಯನ್ನು ಉತ್ತರಿಸಲು ಬೇಕಾದ ಸಮಯ ಎಷ್ಟು, ಯಾವ ಕ್ರಮದಲ್ಲಿ ಉತ್ತರಿಸಬೇಕು ಎಂದು ನಿರ್ಧರಿಸಿಕೊಳ್ಳಿ.

ಬರೆಯಲು ಆರಂಭಿಸಿದ ಮೇಲೆ ಆತಂಕಗೊಳ್ಳದೇ ಗಮನವಿಟ್ಟು ಓದಿರುವುದನ್ನು ಜ್ಞಾಪಿಸಿಕೊಳ್ಳುತ್ತಾ ಉತ್ತರಿಸಿ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org