ಪರೀಕ್ಷೆಯ ಪಯಣ- ಅತಿಯಾದ ನಿರೀಕ್ಷೆ

ಪರೀಕ್ಷೆಯ ಕಾಲ ಆರಂಭವಾಗಿದೆ. ಪ್ರತಿ ವರ್ಷವೂ ಈ ಸಮಯದಲ್ಲಿ ಪರೀಕ್ಷೆಗಳು ಬರುವುದು ಸಹಜ. ಇದರಲ್ಲಿ ಯೋಚಿಸುವಂತದ್ದು ಏನೂ ಇಲ್ಲ. ಆದರೆ ಪರೀಕ್ಷೆಯು ಕೇವಲ ವಿದ್ಯಾರ್ಥಿಗಳನ್ನು ಮಾತ್ರವಲ್ಲದೇ ಅವರ ಪೋಷಕರು, ಶಿಕ್ಷಕರು ಮತ್ತು ಹತ್ತಿರದ ಎಲ್ಲಾ ಸಂಬಂಧಿಕರಲ್ಲೂ ಒತ್ತಡ ಉಂಟು ಮಾಡುತ್ತದೆ. ಇದು ಯೋಚಿಸಬೇಕಾದ ವಿಚಾರ.

ಯಾಕೆ ಪ್ರತಿಯೊಬ್ಬರೂ ಪರೀಕ್ಷೆಯ ಬಗ್ಗೆ ಇಷ್ಟೊಂದು ಚಿಂತಿಸುತ್ತಾರೆ?

ಏಕೆಂದರೆ, ಸಮಾಜ, ಕುಟುಂಬ ಮತ್ತು ಸ್ವತಃ ವಿದ್ಯಾರ್ಥಿಗಳೇ, ಪರೀಕ್ಷೆಯು ತಮ್ಮ ಬೆಲೆಯನ್ನು ಅಳೆಯುತ್ತದೆ ಎಂದು ಭಾವಿಸುತ್ತಾರೆ.

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರುವ ಅಂಕಗಳು ತಮ್ಮ ಯಶಸ್ಸನ್ನು ನಿರ್ಧರಿಸುತ್ತದೆ ಎಂದು ತಿಳಿದಿದ್ದಾರೆ. ಹೆಚ್ಚು ಅಂಕ ಗಳಿಸಿದವರು ಜೀವನದಲ್ಲಿ ಹೆಚ್ಚು ಬೆಳೆಯುತ್ತಾರೆ. ಪರೀಕ್ಷೆಯಲ್ಲಿ ಸೋತವರು ನಿಜ ಜೀವನದಲ್ಲಿಯೂ ಸೋಲುತ್ತಾರೆ ಎಂಬ ಕಲ್ಪನೆ ಬೆಳೆಸಿಕೊಂಡಿದ್ದಾರೆ.

ಆದರೆ, ಅಂಕಗಳು ಒಬ್ಬ ವ್ಯಕ್ತಿಯ ಯಶಸ್ಸು ಅಥವಾ ಸೋಲನ್ನು ನಿರ್ಧರಿಸುವುದಿಲ್ಲ. ಯಶಸ್ಸು ಎಂಬ ಪದಕ್ಕೆ ಎಲ್ಲರಿಗೂ ಒಪ್ಪುವಂತಹ ವಿವರವಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಮಟ್ಟಿಗೆ ಯಾವುದು ಸೋಲು, ಯಾವುದು ಗೆಲುವು ಎಂಬ ಭಿನ್ನ ಅಭಿಪ್ರಾಯವಿರುತ್ತದೆ. ಒಬ್ಬರಿಗೆ ಹೆಚ್ಚು ಹಣ ಗಳಿಸುವುದೇ ಯಶಸ್ಸಾದರೆ, ಇನ್ನೊಬ್ಬರಿಗೆ ಹೆಚ್ಚು ಜನರ ಮನ ಮುಟ್ಟುವುದು, ಮತ್ತೊಬ್ಬರಿಗೆ ತಮ್ಮ ಕುಟುಂಬಕ್ಕಾಗಿ ದುಡಿಯುವುದು ಯಶಸ್ಸಾಗಿರಬಹುದು. ಇನ್ನೊಬ್ಬರು ‘ಯಶಸ್ಸು’ ಎಂದು ನಂಬಿರುವುದನ್ನು ನಮ್ಮ ಮೇಲೆ ಹೇರಲು ಬಿಡಬಾರದು.

ಯಶಸ್ಸು ಅಥವಾ ಸೋಲು ಜೀವನದ ಕೆಲವು ಘಟನೆಗಳನ್ನು ವಿವರಿಸುತ್ತವೆಯೇ ಹೊರತು ವ್ಯಕ್ತಿಯನ್ನಲ್ಲ. ವ್ಯಕ್ತಿಯು ಯಶಸ್ವಿ ಅಥವಾ ಅಲ್ಲ ಎಂದು ಹೇಳಲಾಗುವುದಿಲ್ಲ. ಬದಲಿಗೆ ವ್ಯಕ್ತಿಯು ಒಂದು ಕಾರ್ಯದಲ್ಲಿ ಯಶಸ್ವಿಯಾದನೇ ಇಲ್ಲವೇ ಎಂದು ಹೇಳಬಹುದು. ಯಶಸ್ಸು ಒಂದು ಸಂದರ್ಭವನ್ನು ಮಾತ್ರ ವಿವರಿಸುತ್ತದೆ ಹೊರತು ನಿಮ್ಮ ಇಡೀ ಜೀವನವನ್ನಲ್ಲ. ಹಾಗಾಗಿ ನಿಮ್ಮ ಪರೀಕ್ಷೆಯ ಗೆಲುವು/ಸೋಲು ಜೀವನದ ಗೆಲುವು/ಸೋಲಲ್ಲ. ಪರೀಕ್ಷೆಯ ಫಲಿತಾಂಶ ಜೀವನಪೂರ್ತಿ ನಿಮಗೆ ಅಂಟಿಕೊಳ್ಳುವ ಲೇಬಲ್ ಅಲ್ಲ.

ನಿಮ್ಮ ಇಡೀ ಜೀವನವನ್ನು ಗಮನದಲ್ಲಿಟ್ಟುಕೊಂಡು ಸೋಲು ಮತ್ತು ಗೆಲುವನ್ನು ನೋಡಬೇಕು. ಈಗ ನಿಮಗೆ ಒಂದು ಪರೀಕ್ಷೆಯೇ ಬಹುಮುಖ್ಯ ವಿಷಯ ಆಗಿರಬಹುದು. ಸ್ವಲ್ಪ ದಿನಗಳ ನಂತರ ಈ ಪರೀಕ್ಷೆ ನಿಮಗೆ ಅಷ್ಟು ಮುಖ್ಯವಾಗಿರುವುದಿಲ್ಲ. ನೀವು ಬೋರ್ಡ್ ಎಕ್ಸಾಮ್ ಬರೆಯುತ್ತಿದ್ದರೆ, ಅದರ ಫಲಿತಾಂಶದಿಂದ ಮುಂದಿನ ವರ್ಷ ಏನೂ ಪ್ರಯೋಜನವಿಲ್ಲ. ನಿಮಗೆ ಹೊಸ ಕಾಲೇಜಿನಲ್ಲಿ, ಕಂಪನಿಯಲ್ಲಿ ಇದರಿಂದ ಪ್ರವೇಶ ಸಿಗಬಹುದು. ಅದರಿಂದಾಚೆಗೆ ನಿಮ್ಮ ಪ್ರಯತ್ನ ಒಂದೇ ಮುಖ್ಯ. ಈ ಅಂಕಗಳಲ್ಲ.

ಕೊನೆಯದಾಗಿ, ಜೀವನದ ಯಶಸ್ಸು ಬೇರೆಯದೇ ವಿಷಯಗಳ ಮೇಲೆ ಅವಲಂಬಿತವಾಗಿದೆ. ನೀವು 100% ಅಂಕವನ್ನು ಪಡೆದರೂ ಉದ್ಯೋಗದಲ್ಲಿ ಅಥವಾ ಜೀವನದಲ್ಲಿ ಯಶಸ್ಸು ಸಿಗದಿರಬಹುದು. ಉದ್ಯೋಗದಲ್ಲಿ ಯಶಸ್ಸು ನಿಮ್ಮ ಆತ್ಮವಿಶ್ವಾಸ, ಆತ್ಮಗೌರವ, ಮಾತನಾಡುವ ರೀತಿ, ಹೊಸ ವಿಷಯಗಳನ್ನು ಕಲಿಯುವುದು, ಟೀಮ್ ಪ್ಲೇಯರ್ ಆಗಿರುವುದು, ನಾಯಕತ್ವದ ಗುಣ, ಸಮಸ್ಯೆಗಳನ್ನು ಪರಿಹರಿಸುವುದು, ಇಂತಹ ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಸಮಾಜದಲ್ಲಿ ಜನರ ಜೊತೆ ನೀವು ಬೆರೆಯುವ ರೀತಿ, ಅವರ ಅಗತ್ಯಗಳನ್ನು ನಿಮ್ಮ ಆದ್ಯತೆ ಮಾಡಿಕೊಳ್ಳುವುದು ನಿಮ್ಮ ಗೆಲುವಾಗುತ್ತದೆ. ಇವೆಲ್ಲವೂ ನಿಮಗಿರುವ ನಂಬಿಕೆ ಮತ್ತು ಮೌಲ್ಯಗಳಿಂದ ಸಾಧ್ಯ, ಅಂಕಗಳಿಂದಲ್ಲ.

ಹಾಗೆಂದು ನೀವು ಪರೀಕ್ಷೆಯ ಬಗ್ಗೆ ಯೋಚಿಸದೇ, ಸಂಪೂರ್ಣವಾಗಿ ಪ್ರಯತ್ನಿಸದೇ ಇರಬೇಕೆಂದಲ್ಲ. ನೀವು ಸಂಪೂರ್ಣ ಪ್ರಯತ್ನ ಮಾಡದಿದ್ದರೆ ನಿಮಗೆ ನಿರಾಶೆಯಾಗುತ್ತದೆ. ನಿಮ್ಮ ಪ್ರಯತ್ನ ನೀವು ಮಾಡಿ. ಆದರೆ ಅದರ ಫಲಿತಾಂಶವೇ ನಿಮ್ಮ ಜೀವನ ನಿರ್ಧರಿಸುವುದಿಲ್ಲ ಎಂದು ನೆನಪಿಡಿ.

ಹಾಗಾದರೆ ನೀವು ನಿರೀಕ್ಷೆಯನ್ನು ಹೇಗೆ ನಿಭಾಯಿಸಬೇಕು- ನಿಮಗೆ ನಿಮ್ಮ ಮೇಲಿರುವ ನಿರೀಕ್ಷೆ, ನಿಮ್ಮ ಪೋಷಕರ ನಿರೀಕ್ಷೆ, ಶಿಕ್ಷಕರ ನಿರೀಕ್ಷೆ, ಸಮಾಜದ ನಿರೀಕ್ಷೆ ಇವೆಲ್ಲವನ್ನೂ ನಿಭಾಯಿಸಲು ಇರುವ ಒಂದೇ ದಾರಿ, ನಿಮ್ಮ ಮೇಲೆ ನೀವು ನಂಬಿಕೆ ಇಡುವುದು. ಫಲಿತಾಂಶದ ಹೊರತಾಗಿಯೂ ನಿಮಗೊಂದು ಬೆಲೆ ಇದೆ ಎಂಬುದನ್ನು ಮರೆಯಬೇಡಿ. ಒಳ್ಳೆಯ ಫಲಿತಾಂಶ ನಿಮಗೆ ಸಿಗುವ ಬೋನಸ್ ಅಷ್ಟೆ.

ನಮ್ಮನ್ನು ನಾವು ದೂಷಿಸಿಕೊಳ್ಳುವುದೇ ಹೆಚ್ಚು- ನಾನು ಅಪ್ರಯೋಜಕ, ಸಮಾಜ ನನ್ನ ಹೇಗೆ ಕಾಣುವುದೋ ಏನೋ, ಪೋಷಕರಿಗೆ, ಶಿಕ್ಷಕರಿಗೆ ನನ್ನಿಂದ ಬರೀ ನಿರಾಸೆ ಇತ್ಯಾದಿ. ಜಗತ್ತಿಗೆ ನಮ್ಮಿಂದ ನಿರಾಸೆಯಾದರೆ ಅದು ಅವರ ಆಯ್ಕೆ. ಅವರ ಪ್ರಕಾರ ನಿಮ್ಮ ಯಶಸ್ಸು ಕಾಲಕಾಲಕ್ಕೆ ಬದಲಾಗುವ ವಿಷಯ. ನೀವು ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ನೀವು ನಿಮ್ಮ ಬಗ್ಗೆ ನಿರಾಸೆಗೊಳ್ಳದೆ ಇರುವುದೇ ಮುಖ್ಯ. ನಿಮ್ಮ ಶಿಕ್ಷಕರು ಮತ್ತು ಪೋಷಕರು ನಿಮ್ಮ ಸಂತೋಷವನ್ನೇ ಬಯಸುತ್ತಾರೆ. ನಿಮ್ಮ ಆಯ್ಕೆ ನಿಮಗೆ ಸಂತೋಷ ನೀಡುತ್ತಿದರೆ ಅವರೂ ಅದನ್ನು ಸ್ವೀಕರಿಸುತ್ತಾರೆ. ನೀವು ನಿಮ್ಮ ಸಂತೋಷಕ್ಕಾಗಿ ಪರಿಶ್ರಮ ಪಡಬೇಕು.

ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ತೆರೆದುಕೊಳ್ಳುತ್ತದೆ. ಆದರೆ ಅದನ್ನು ಗುರುತಿಸುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಜೀವನದಲ್ಲಿ ನೀವು ವಹಿಸಬೇಕಾದ ಪಾತ್ರ ಮುಖ್ಯ. 

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org