ನಾನು ವಿಭಿನ್ನ ಲಿಂಗಿಯಾಗಿದ್ದೇನೆ. ನನಗೆ ಸರಿಯಾದ ಚಿಕಿತ್ಸಕರನ್ನು ಸೂಚಿಸುವಿರಾ?

ವಿಭಿನ್ನ ಲಿಂಗಿಗಳು ಸೂಕ್ತ ವೈದ್ಯರನ್ನು / ಚಿಕಿತ್ಸಕರನ್ನು ಹುಡುಕುವುದು ಒಂದು ದೊಡ್ಡ ಸವಾಲು. ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸೂಕ್ತ ಚಿಕಿತ್ಸೆ ನೀಡುವುದು ಕೂಡಾ.

ವರ್ಷದ ಹಿಂದೆ ನಾನು “ಜೆ” ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದೆ. ಅವರಲ್ಲಿ ನಾನು ಉಭಯಲಿಂಗಿಯೆಂದು ಹೇಳಿಕೊಂಡಿದ್ದೆ. ತೀವ್ರ ಮಾನಸಿಕ ಒತ್ತಡ, ದುಃಖ, ಭಯ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದ ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು. ಆ ಕಾರಣಕ್ಕಾಗಿ ನಾನು ಅವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ನಾನು ಉಭಯಲಿಂಗಿ ಎಂಬ ವಿಷಯವು ನನ್ನನ್ನು ಅಂತರ್ಮುಖಿಯಾಗಿಸಿತ್ತು.  ಯಾರಲ್ಲಿಯೂ ಏನನ್ನೂ ಹೇಳಿಕೊಳ್ಳಲಾರದಂತಹ ಪರಿಸ್ಥಿತಿಗೆ ನನ್ನನ್ನು ತಳ್ಳಿತ್ತು. ಚಿಕಿತ್ಸಕರು ಏನು ಹೇಳುತ್ತಾರೆ? ನನ್ನ ಸಮಸ್ಯೆಗಳನ್ನು ಮುಕ್ತವಾಗಿ ಕೇಳಿಸಿಕೊಂಡು ಅದಕ್ಕೆ ಸೂಕ್ತ ಪರಿಹಾರವನ್ನು ತಿಳಿಸುತ್ತಾರಾ? ನನ್ನಲ್ಲಿರುವ ಭಯವನ್ನು ನಿವಾರಿಸಿಕೊಳ್ಳಲು ನೆರವಾಗುತ್ತಾರಾ? ಇತ್ಯಾದಿ ಪ್ರಶ್ನೆಗಳಿದ್ದರೂ ನಾನು ಅವರನ್ನು ನಂಬಿದ್ದೆ. ಮತ್ತು ಈ ಪರಿಸ್ಥಿತಿಯಲ್ಲಿ ಅವರೇನಾದರೂ ಚಿಕಿತ್ಸೆ ನಿರಾಕರಿಸಿದ್ದರೆ ನನಗೆ ತುಂಬಾ ನೋವಾಗುತ್ತಿತ್ತು. ಜೊತೆಗೆ ಬೇರೆ ವೈದ್ಯರನ್ನು ಹುಡುಕುವುದೂ ಕಷ್ಟವಾಗಿಬಿಡುತ್ತಿತ್ತು.

“ಜೆ” ಅವರು ನನ್ನ ಪ್ರಥಮ ಚಿಕಿತ್ಸಕರೇನಲ್ಲ. ಈ ಹಿಂದೆ ನಾನು ಹಿರಿಯ ಹಾಗೂ ಅನುಭವಿ ಸೈಕಾಲಜಿಸ್ಟ್ ಗಳ ಸಲಹೆ ಪಡೆದಿದ್ದೆ. ಈ ಚಿಕಿತ್ಸೆಯ ಪರ್ವ ಕೊನೆಯಾಗಿದ್ದು ಮಾತ್ರ ‘ಜೆ’ ಅವರಿಂದಲೇ.  ಹೀಗೆ ನಾನು ಹಲವು ವೈದ್ಯರನ್ನು ಬದಲಾಯಿಸಲು ಕಾರಣಗಳಿದ್ದವು. ನಾನು ಆ ಮೊದಲು ಯಾರ ಬಳಿ ಚಿಕಿತ್ಸೆ ಪಡೆಯುತ್ತಿದ್ದೆನೋ ಆ ವೈದ್ಯರು ಮಾನಸಿಕ ಆರೋಗ್ಯಕ್ಕಾಗಿಯೇ ಇರುವ ಸಮುದಾಯ ವೈದ್ಯರಾಗಿದ್ದು, “ಎಲ್ ಜಿ ಬಿ ಟಿ” ಕಾರ್ಯಕರ್ತರು ಕೂಡಾ ಆಗಿದ್ದರು. ಆದರೆ ಅವರು ತಮ್ಮ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರಲಿಲ್ಲ. .80 - 90ರ ದಶಕದಲ್ಲಿ, ಸರಿಯಾಗಿ ವಿಷಯಗಳನ್ನು ಗ್ರಹಿಸುವ ಮೊದಲೇ ಅವರು ಸಲಿಂಗ ಲೈಂಗಿಕತೆಯನ್ನು ‘ಗುಣಪಡಿಸಲು’ ಚಿಕಿತ್ಸೆಗಳನ್ನು ಸೂಚಿಸಿದ್ದರು. ನಾನು ಅವರ ಕಾರ್ಯವಿಧಾನವನ್ನು ಟೀಕಿಸುತ್ತಿಲ್ಲ; ಅವರು ಈ ದಿನಗಳಲ್ಲಿ ಮಾಡುತ್ತಿರುವ ಕೆಲಸಗಳ ಬಗ್ಗೆ ನನಗೆ ನಿಜಕ್ಕೂ ಸಂತಸವಿದೆ. ಆದರೆ ನನಗೆ ಸೂಕ್ತ ಚಿಕಿತ್ಸಕರಾಗಿ ‘ಜೆ’ ಅವರು ದೊರೆತ ಬಗ್ಗೆ ಇನ್ನೂ ಹೆಚ್ಚು ಸಂತಸವಿದೆ. ಮೊದಲೆಲ್ಲ ನನ್ನ ಸೂಕ್ಷ್ಮ ಮನಸ್ಥಿತಿಯಿಂದಾಗಿಯೇ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲವೇನೋ. ಆ ನನ್ನ ವೈಫಲ್ಯಗಳು ಈಗ ಮನದಟ್ಟಾಗುತ್ತಿವೆ.

‘ಎಲ್ ಜಿ ಬಿ ಟಿ ಸ್ನೇಹಿ’ಯಾಗಿರುವುದು ಅವಶ್ಯ

ಏಳು ವರ್ಷಗಳ ಪ್ರಯತ್ನದ ನಂತರ, ನಾನು ಹಿಂಜರಿಕೆಯಿಂದ ಮುಕ್ತಿ ಪಡೆದೆ. ನನಗೀಗ ಎಲ್ ಜಿ ಬಿ ಟಿ ಸಮುದಾಯದಲ್ಲಿ ಎಲ್ಲರೂ ನನ್ನಂತೆಯೇ ವಿಭಿನ್ನಲಿಂಗಿಗಳು. ಅಲ್ಲಿ ನನಗೀಗ ಹಲವಾರು ಸಮಾನ ಮನಸ್ಕರು, ಮಿತ್ರರು, ಆಪ್ತಗೆಳೆಯರಿದ್ದಾರೆ, ನಂಬಿಕಸ್ಥರಿದ್ದಾರೆ. ನಾನು ಅವರ ಮೇಲೆ ವಿಶ್ವಾಸವಿರಿಸಿ ಯಾವ ಭಾವನೆಯನ್ನಾದರೂ ಹಂಚಿಕೊಳ್ಳಬಲ್ಲೆ. ಇದು ನನ್ನ ಅದೃಷ್ಟ. ಈ ಅದೃಷ್ಟ ಎಲ್ಲಾ ಸಲಿಂಗಕಾಮಿಗಳಿಗೆ ಅಥವಾ ಉಭಯ ಲಿಂಗಿಗಳಿಗೆ ಇರುವುದಿಲ್ಲ. ಸಮಾಜದ ಯಾವ ವಲಯವೂ ನಮ್ಮನ್ನು ಒಳಗೊಳಿಸಿಕೊಳ್ಳುವುದಿಲ್ಲ. (ತೃತೀಯ ಲಿಂಗಿಗಳು ತಮ್ಮ ಲೈಂಗಿಕ ಗುರುತನ್ನು ಮುಂದಿಟ್ಟುಕೊಂಡು ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡನ್ನು ಪಡೆಯುವುದು ಕೂಡಾ ಸುಲಭವಲ್ಲ.)

ಭಾರತದಲ್ಲಿ, ಫೇಸ್ ಬುಕ್ ಕ್ಲೋಸ್ಡ್ ಗ್ರೂಪ್’ಗಳಲ್ಲಿ ವಿಭಿನ್ನ ಲಿಂಗಿ ಸ್ತ್ರೀ – ಪುರುಷರು “ನಮಗೆ ಒಳ್ಳೆಯ ಸೈಕಿಯಾಟ್ರಿಸ್ಟ್ / ಕೌನ್ಸೆಲರ್ / ಥೆರಪಿಸ್ಟ್ ಅನ್ನು ಸೂಚಿಸುತ್ತೀರಾ? ಅವರು ಎಲ್ ಜಿ ಬಿ ಟಿ ಸ್ನೇಹಿಯಾಗಿರಬೇಕು” ಎಂದು ವಿಚಾರಿಸುತ್ತಾ ಇರುತ್ತಾರೆ. ನಾವು ‘ಎಲ್ ಜಿ ಬಿ ಟಿ ಸ್ನೇಹಿಯಾಗಿರಬೇಕು’ ಎಂದು ಕೆಳುವ ಮೂಲಕ ಸಹಾನುಭೂತಿ ಪಡೆಯಲು ಯತ್ನಿಸುತ್ತಿಲ್ಲ. ನಾವು ಸಲಿಂಗಕಾಮಿಗಳಾಗಿದ್ದರೆ, ನಮಗೆ ಎಲೆಕ್ಟ್ರಿಕ್ ಚಿಕಿತ್ಸೆ ನೀಡಿ ನಮ್ಮ ‘ಕಾಯಿಲೆ’ಯನ್ನು ‘ಗುಣ’ಪಡಿಸಲು ಯತ್ನಿಸುವವರಿಗೇನೂ ಕಡಿಮೆ ಇಲ್ಲ. ನಮ್ಮ ಕುಟುಂಬಗಳು ನಾವು ‘ಸಹಜ’ವಾಗಿ ವರ್ತಿಸುವಂತೆ ಪೂಜೆ ಪುನಸ್ಕಾರಗಳನ್ನು ನಡೆಸುತ್ತಾರೆ. ಯಾರೊಬ್ಬರಿಗೂ ನಮ್ಮ ಸಮಸ್ಯೆಗೆ ಸರಿಯಾದ ಪರಿಹಾರ ನೀಡುವುದು ಬೇಕಿಲ್ಲ.

ವರ್ಷಗಟ್ಟಲೆಯಿಂದ ಭಾರತದಲ್ಲಿ ವಿಭಿನ್ನ ಲಿಂಗಿಗಳು ತಮ್ಮ ದೈಹಿಕ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಚಿಕಿತ್ಸೆ ನೀಡಬಲ್ಲ ಉತ್ತಮ  ವೈದ್ಯರ ಹುಡುಕಾಟ ನಡೆಸಿ, ಒಂದು ಪಟ್ಟಿಯನ್ನು ತಯಾರಿಸಿದ್ದಾರೆ. ಈ ಪಟ್ಟಿಯಲ್ಲಿ ಎಲ್ ಜಿ ಬಿ ಟಿ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ನಮ್ಮನ್ನು ಕೀಳಾಗಿ ಕಾಣದೆ ಚಿಕಿತ್ಸೆ ನೀಡುವ ವೈದ್ಯರ ಮಾಹಿತಿ ಇದೆ. ಇದು ಎಲ್ ಜಿ ಬಿ ಟಿ ಸಮುದಾಯದ ಸದಸ್ಯರು ತಾವೇ ಚಿಕಿತ್ಸೆ ಪಡೆದು, ವೈದ್ಯರ ಆಸ್ಪತ್ರೆ ಬಾಗಿಲುಗಳಿಗೆ ಅಲೆದು, ತಮಗೆ ಉತ್ತಮ ಎನ್ನಿಸಿದವರನ್ನು ಮಾತ್ರ ಆಯ್ದು ತಯಾರಿಸಿದ ಪಟ್ಟಿಯಾಗಿದೆ.

ಭಾರತದಲ್ಲಿ ನಮ್ಮ ಜನರಿಗೆ ಪರ್ಯಾಯ ಲೈಂಗಿಕತೆ ಕುರಿತು ಸ್ಪಷ್ಟವಾದ ತಿಳಿವಳಿಕೆ ಇಲ್ಲ. ಭಿನ್ನ ಲಿಂಗಿಗಳ ಕುರಿತು ಸರಿಯಾದ ಮಾಹಿತಿಯೂ ಇಲ್ಲ. ಅವರ ಗಮನಕ್ಕೆ ಬರುವ ಭಿನ್ನ ಲಿಂಗಿಗಳು ಅಥವಾ ಪರ್ಯಾಯ ಲೈಂಗಿಕತೆಯನ್ನು ಆಯ್ಕೆ ಮಾಡಿಕೊಂಡವರು ಒತ್ತಡಕ್ಕೆ ಒಳಗಾಗಿರುತ್ತಾರೆ, ಇಲ್ಲವೇ  ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾರೆ. ಅದಕ್ಕಿಂತ ಹೆಚ್ಚಿನದೇನೂ ಅವರಿಗೆ ತಿಳಿದಿರುವುದಿಲ್ಲ. ಆದರೆ ನಮ್ಮ ಪಾಲಿಗೆ ಈ ಯಾತನೆ ಹಾಗೂ ಸಾವನ್ನು ಕುರಿತ ದತ್ತಾಂಶಗಳು ಕೇವಲ ದತ್ತಾಂಶವಾಗಿರದೆ ಕಟು ಅನುಭವವೂ ಆಗಿದೆ. ನಮ್ಮ ಸಮುದಾಯದ ಸದಸ್ಯರು ತೀರಿಕೊಂಡರೆ ನಾವು ಅವರಿಗೆ ಶ್ರದ್ಧಾಂಜಲಿ ಸೂಚಿಸುತ್ತೇವೆ. ನಾವೆಲ್ಲರೂ ಪರಸ್ಪರ ಒಂದಲ್ಲ ಒಂದು ಬಗೆಯಲ್ಲಿ ಸಂಪರ್ಕ ಹೊಂದಿರುತ್ತೇವೆ. ನಾನು ಒಮ್ಮೆ ಬೆಂಗಳೂರಿನಲ್ಲಿ ಭಿನ್ನ ಲಿಂಗಿಗಳ ಸಮಾವೇಶವೊಂದರಲ್ಲಿ ಭಾಗವಹಿಸಿದ್ದೆ. ಅಲ್ಲೊಬ್ಬರು ಲಿಂಗಾಂತರಿ ಮಹಿಳೆಯನ್ನು ಭೇಟಿಯಾದೆ. ಸುಂದರಿಯೂ ಉತ್ಸಾಹಿಯೂ ಆಗಿದ್ದ ಅವರು ತಮ್ಮ ಸಮುದಾಯದಲ್ಲಿ ಎಲ್ಲರ ಪ್ರೀತಿಯನ್ನು ಗಳಿಸಿದ್ದರು. ಸ್ವಾವಲಂಬಿಯೂ ಸಬಲೆಯೂ ಆಗಿದ್ದ ಅವರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಭಿನ್ನ ಲಿಂಗಿಗಳು ಎಷ್ಟೇ ಸುಂದರವಾಗಿದ್ದರೂ ಸ್ವಾವಲಂಬಿಯಾಗಿದ್ದರೂ ಅವರ ಜೀವನ ಕಠಿಣವೇ. ಸದಾ ಕಾಲವೂ ಬದುಕನ್ನು ಮುಗಿಸಿಕೊಂಡುಬಿಡಬೇಕು ಅನ್ನುವ ದುಗುಡ ಅವರನ್ನು ಕಾಡುತ್ತಲೇ ಇರುತ್ತದೆ.

ನಾನು ಕೂಡಾ ಬಹಳ ಸಮಯದವರೆಗೆ ಇಂತಹ ಪರಿಸ್ಥಿತಿಯಲ್ಲಿ ಜೀವನ ಸಾಗಿಸಿದ್ದೇನೆ. ಜನರು ತಮ್ಮ ಲೈಂಗಿಕ ಗುರುತಿಗೆ ತಕ್ಕಂತೆ ವರ್ತಿಸುವುದನ್ನು ನಿರೀಕ್ಷಿಸಲಾಗುತ್ತದೆ. ತಮ್ಮ ಲೈಂಗಿಕ ಗುರುತಿನ ಬಗ್ಗೆ ಖಾತ್ರಿ ಇಲ್ಲದ ಮಕ್ಕಳು ಹೆಚ್ಚಿನದಾಗಿ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಯೌವನದಲ್ಲಿ ತಮ್ಮ ಕುಟುಂಬದ ಒತ್ತಡಕ್ಕೆ ಮಣಿದು ಮದುವೆಯಾಗುತ್ತಾರೆ, ಮಕ್ಕಳನ್ನೂ ಪಡೆಯುತ್ತಾರೆ. ಅವರ ಜೀವನವಿಡೀ ಕುಟುಂಬ, ಗೆಳೆಯರು ಮತ್ತು ಸಮಾಜದ ಒತ್ತಡದಲ್ಲಿಯೇ ಸಾಗುತ್ತಾ ಇರುತ್ತದೆ. ಲಿಂಗಾಂತರ ಮಾಡಿಕೊಂಡ ವ್ಯಕ್ತಿಗಳ ಕಷ್ಟವಂತೂ ಹೇಳತೀರದು. ಲೈಂಗಿಕ ಪೊಲೀಸ್’ಗಿರಿ ಮಾಡುವವರ ದೌರ್ಜನ್ಯವನ್ನು ಅವರು ಪ್ರತಿದಿನವೂ ಎದುರಿಸುತ್ತಾ ಇರುತ್ತಾರೆ.

ಲೈಂಗಿಕತೆಯ ಕುರಿತು ನಿಮ್ಮ ಆಯ್ಕೆಯು ಬಹಿರಂಗಗೊಂಡರೆ ಏನಾಗಬಹುದು? ನಿಮಗೆ ದಂಡವಿಧಿಸಬಹುದೇ? ಸಮಾಜ ನಿಮ್ಮನ್ನು ತಿರಸ್ಕರಿಸಬಹುದೇ? ನಿಮ್ಮ ಮೇಲಧಿಕಾರಿಗಳು, ಮಾಲೀಕರು ನಿಮ್ಮನ್ನು ನೆಮ್ಮದಿಯಿಂದ ಇರಲು ಬಿಡುವರೇ? ನಿಮ್ಮ ಮಿತ್ರರು, ಕುಟುಂಬದವರು ಹೇಗೆ ನಡೆದುಕೊಳ್ಳಬಹುದು? ಅವರು ಈ ಪರ್ಯಾಯ ಲೈಂಗಿಕತೆಯನ್ನು ಅರ್ಥ ಮಾಡಿಕೊಳ್ಳಬಲ್ಲರೇ? ನಿಮ್ಮ ಕುಟುಂಬ ನಿಮ್ಮನ್ನು ಮನೆಯಿಂದ ಹೊರಗೆ ಹಾಕಬಹುದು. ಉದ್ಯೋಗಸ್ಥಳದಲ್ಲಿ ನಿಮ್ಮ ಕೊಡುಗೆಗಳನ್ನು ಅವಗಣಿಸಿ, ನಿಮಗೆ ಹಿಂಬಡ್ತಿ ನೀಡಲು ದಾರಿಗಳನ್ನು ಹುಡುಕಬಹುದು. ಇನ್ನೂ ಕೆಟ್ಟ ಸನ್ನಿವೇಶವೆಂದರೆ, ನೀವು ದೈಹಿಕ ದೌರ್ಜನ್ಯಕ್ಕೂ ಒಳಗಾಗಬಹುದು.

ಇವೆಲ್ಲಕ್ಕಿಂತ ವಿಷಾದಕರವೆಂದರೆ, ನಾವು ಕೂಡಾ ಸಿದ್ಧಮಾದರಿಯ ಗ್ರಹಿಕೆಗೆ ಒಳಗಾಗಿಬಿಡುವುದು. ನಮ್ಮ ಲೈಂಗಿಕ ಆಯ್ಕೆಗಳ ಕುರಿತು ನಾವೇ ಅಪರಾಧೀಭಾವ ತಾಳುವುದು. ಹೀಗೇಕಾಗುತ್ತದೆ? ಇದಕ್ಕೆ ಯಾರು ಕಾರಣ? ನಮ್ಮ ನೀತಿ ನಿಯಮಗಳು, ಸಂಪ್ರದಾಯಗಳು ನಮಗೆ ಇದನ್ನು ಬೋಧಿಸಿರುತ್ತವೆ. ನಮ್ಮ ಪೋಷಕರು. ಧಾರ್ಮಿಕ ಮುಖಂಡರು, ಟೀವಿ ಶೋ ನಡೆಸುವವರು ಭಿನ್ನಲೈಂಗಿಕತೆ ಕುರಿತು ನಕಾರಾತ್ಮಕತೆಯನ್ನು ಬಿತ್ತಿರುತ್ತಾರೆ. ಇವರೆಲ್ಲರೂ ಭಿನ್ನ ಲೈಂಗಿಕತೆಯ ಬಗ್ಗೆ ಕೆಟ್ಟದನ್ನೆ ಹೇಳುತ್ತಾ ಇದ್ದರೆ, ನಾವು ಆ ಕುರಿತು, ಅದು ಸಹಜವೆಂಬ ನಿಲುವನ್ನು ಬೆಳೆಸಿಕೊಳ್ಳುವುದಾದರೂ ಹೇಗೆ?

ನಮಗೆ ನೆರವಿನ ಅಗತ್ಯವಿದೆ ಎಂದು ಅನ್ನಿಸಿದಾಗ, ವಿಶ್ವಾಸಾರ್ಹ ಚಿಕಿತ್ಸಕರನ್ನು ಭೇಟಿಯಾಗಬೇಕು. ಕೆಲವು ತಾರ್ಕಿಕ ಕಾರಣಗಳಿಂದಾಗಿ ನಾನೀಗ ‘ಜೆ’ಯವರ ಬಳಿ ಹೋಗುತ್ತಿಲ್ಲ. ನನ್ನ ಹೊಸ ಚಿಕಿತ್ಸಕರನ್ನು ಒಮ್ಮೆ ಮಾತ್ರ ಭೇಟಿಯಾಗಿದ್ದೆ. ಆಕೆ ಉತ್ತಮವಾಗಿ ಸಹಕರಿಸುತ್ತಾರೆ ಮತ್ತು ಎಲ್ ಜಿ ಬಿ ಟಿ ಸ್ನೇಹಿಯಾಗಿದ್ದಾರೆ. ಆದರೆ ಅವರ ಈ ನಿಲುವಿನ ಕುರಿತು ನನಗೆ ಮೊದಲು ಗೊತ್ತಿರಲಿಲ್ಲ. ಆದರೂ ಅವರಿಂದ ಚಿಕಿತ್ಸೆ ಪಡೆಯುವ ರಿಸ್ಕ್ ನಾನು ತೆಗೆದುಕೊಂಡಿದ್ದೆ. ನಾನೀಗ ಸ್ವಸ್ಥವಾಗಿದ್ದರೂ ಅದೊಂದು ರಿಸ್ಕ್ ಆಗಿದೆ. ಬಹಳ ದೊಡ್ಡ ರಿಸ್ಕ್. ಏಕೆಂದರೆ ನನಗೀಗ ಏನು ಬೇಕು, ನಾನು ಹೇಗೆ ಸ್ವೀಕರಿಸಲ್ಪಡಬೇಕು ಅನ್ನುವ ಬಗ್ಗೆ ಸ್ಪಷ್ಟ ಕಲ್ಪನೆಗಳಿವೆ.

ಪರಿಸ್ಥಿತಿ ಉತ್ತಮಗೊಳ್ಳುವತ್ತ…

ನಾನು ಗುಣಮುಖವಾಗಬಹುದು, ಅಥವಾ ಜೀವನದ ಉದ್ದಕ್ಕೂ ಮಾನಸಿಕ ಖಿನ್ನತೆಯನ್ನು ಹೊಂದಿರಬಹುದು. ನಿರಂತರವಾಗಿ ಚಿಕಿತ್ಸೆಗೆ ಒಳಪಡುವುದರಿಂದ, ಔಷಧಗಳ  ಸೇವನೆಯಿಂದ, ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನಿರಂತರವಾಗಿ ಶ್ರಮಿಸುವುದರಿಂದ ನಿತ್ರಾಣಗೊಳ್ಳಲೂಬಹುದು. ಅಥವಾ ಸಂಗಾತಿಯೊಡನೆ ಬದುಕು ಸಾಗಿಸುವುದು, ವಿಮರ್ಶಾತ್ಮಕ ದೃಷ್ಟಿಕೋನ ತೋರುವುದು; ಸಮಾಜದ ವಿವಿಧ ವಲಯಗಳಲ್ಲಿ, ವಿವಿಧ ಸ್ತರದ ಜನರಿಂದ ನಮಗಾಗುವ ತಾರತಮ್ಯದ ವಿರುದ್ಧ ಹೋರಾಡುವುದನ್ನು ಕೂಡಾ ಮುಂದುವರೆಸಬಹುದು.

ಇದು ನನ್ನ ಅದೃಷ್ಟ. ಸೌಂದರ್ಯ, ವಿದ್ಯೆ ಎಲ್ಲವನ್ನೂ ಪಡೆದಿದ್ದೇನೆ. ನೋಡಲಿಕ್ಕೂ ಎಲ್ಲರಂತೆ ‘ಸಹಜ’ವಾಗಿ ಕಾಣಿಸುತ್ತೇನೆ. ನಾನು ಬಯಸಿದಲ್ಲಿ, ಭಿನ್ನಲಿಂಗರತಿಯಲ್ಲೂ ತೊಡಗಬಹುದು. ಆದರೂ ನಾನು ದಣಿದಿದ್ದೇನೆ. ಎಲ್ಲ ಭಿನ್ನಲಿಂಗಿಗಳೂ ನನ್ನಂತೆ ಅದೃಷ್ಟ ಪಡೆದು ಬಂದಿಲ್ಲ ಎಂಬ ಸತ್ಯವು ನನ್ನನ್ನು ಕಾಡುತ್ತದೆ.

ನನ್ನ ಲೈಂಗಿಕ ಗುರುತು ನನ್ನ ಬದುಕನ್ನು ಹಾಳು ಮಾಡಿದೆ ಅನ್ನುವ ಭಾವನೆ ಮೂಡಿಸಲು ನಾನು ಬಯಸುವುದಿಲ್ಲ. ಪರಿಸ್ಥಿತಿಗಳು ಖಂಡಿತವಾಗಿಯೂ ಬದಲಾಗುತ್ತವೆ. ನನ್ನ ಲೈಂಗಿಕ ಗುರುತಿನಿಂದಾಗಿ ನಾನು ಯೌವನದಲ್ಲಿ ಅನುಭವಿಸಿದ ಏಕಾಂಗಿತನ ಮತ್ತಿತರ ಸಮಸ್ಯೆಗಳು ಈಗ ಇಲ್ಲ. ಬೆಂಗಳೂರಿನ ಎಲ್ ಜಿ ಬಿ ಟಿ ಸಮುದಾಯವು ನನಗೆ ಹಲವು ಗೆಳೆಯರನ್ನೂ ಸಾಕಷ್ಟು ಚಟುವಟಿಕೆಗಳನ್ನು ನಡೆಸುವ ಅವಕಾಶವನ್ನೂ ನೀಡಿದೆ. ನನ್ನ ಮುಂದಿನ ಪೀಳಿಗೆಯ ಮಕ್ಕಳು ಯಾವ ತಾರತಮ್ಯವಾಗಲೀ ಕೀಳರಿಮೆಯಾಗಲೀ ಇಲ್ಲದೆ ತಮ್ಮ ಲೈಂಗಿಕ ಗುರುತಿನೊಂದಿಗೆ ಸಹಜವಾಗಿ ಬದುಕುವ ಅವಕಾಶ ಪಡೆಯುವಂತೆ ಆಗುತ್ತದೆ ಎಂದು ನಾನು ಭಾವಿಸಿದ್ದೇನೆ.

ಕ್ರಮೇಣವಾಗಿ ಬದಲಾವಣೆ ಸಾಧ್ಯವಾಗುತ್ತದೆ. ನಾವು ಎಲ್ಲರಿಗೂ ಕಾಣುವಂತೆ ಜೀವನ ನಡೆಸುವುದರಿಂದ ಇದು ಸಾಧ್ಯವಾಗುತ್ತದೆ. ಈಗ ನಾವು ಹಲವು ಬಗೆಯ ತಾರತಮ್ಯವನ್ನು ಅನುಭವಿಸುತ್ತಿದ್ದೇವೆ. ಕೆಲವೊಮ್ಮೆ ನಾವೇ ನಮ್ಮೊಳಗೆ ತಾರತಮ್ಯ ತೋರುತ್ತೇವೆ. ನಾವು ಮುಕ್ತವಾಗಿ ತೆರೆದುಕೊಂಡರೆ ನಾವೆಷ್ಟು ಸುರಕ್ಷಿತ ಅಥವಾ ಯಾವ ರೀತಿಯ ಅಪಾಯ ಎದುರಿಸಬೇಕಾಗುತ್ತದೆ ಅನ್ನುವ ಅರಿವು ನಮಗಿಲ್ಲ. ಆದರೆ ನಾವು ಅಡಗಿಕೊಂಡೇ ಜೀವನ ಸಾಗಿಸಿದರೆ ಯಾವತ್ತೂ ಸಮಾಜ ನಮ್ಮನ್ನು ತಮ್ಮಲ್ಲಿ ಒಂದಾಗಿ ಭಾವಿಸಲು ಸಾಧ್ಯವೇ ಆಗುವುದಿಲ್ಲ. ನಾವು ನಮ್ಮ ಪ್ರತಿ ನಡೆ, ನುಡಿಗಳನ್ನು ಎಚ್ಚರದಿಂದ ಗಮನಿಸಿಕೊಳ್ಳುತ್ತಾ, ನಮ್ಮನ್ನು ನಾವು ಮರೆಮಾಚಿಕೊಂಡಿದ್ದರೆ, ಯಾವಾಗಲೋ ಆಘಾತದಂತೆ ನಮ್ಮ ನಿಜಸ್ಥಿತಿ ಬಹಿರಂಗಗೊಳ್ಳುತ್ತದೆ. ಆಗ ನಾವು ಅದನ್ನು ಎದುರಿಸುವುದು ಮತ್ತಷ್ಟು ಕಷ್ಟವಾಗುತ್ತದೆ. ಮನೆಯಿಂದ ಹೊರಹಾಕಲ್ಪಟ್ಟವರ ಕಷ್ಟ ಇನ್ನೂ ಹೆಚ್ಚಿನದಾಗಿದ್ದು, ತಮ್ಮ ದುಡಿಮೆ ತಾವೇ ಮಾಡಿಕೊಳ್ಳುವ ಹೆಚ್ಚುವರಿ ಒತ್ತಡ ಅವರ ಮೇಲಿರುತ್ತದೆ. ಸುರಕ್ಷಿತ ಮನೆಯ ಅಗತ್ಯವೂ ಅವರಿಗೆ ಬಹಳವಾಗಿ ಇರುತ್ತದೆ.

ಈ ಎಲ್ಲ ಕಾರಣಗಳಿಂದ ನಾವು ಇತರರಿಗಿಂತ ಹೆಚ್ಚು ಒತ್ತಡದಲ್ಲಿರುತ್ತೇವೆ. ಈ ಸಂಘರ್ಷದಲ್ಲಿ ಅದೆಷ್ಟೋ ಗೆಳೆಯರನ್ನು ಕಳೆದುಕೊಂಡಿದ್ದೇವೆ. (ವಿಶೇಷವಾಗಿ ಲಿಂಗಾಂತರಿ ಸಮುದಾಯದ ಗೆಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಾರೆ). ಆತ್ಮಹತ್ಯೆ ಅಥವಾ ಕೊಲೆಯಿಂದ ಸತ್ತುಹೋದವರ ಪಟ್ಟಿಯಲ್ಲಿ ಭಿನ್ನಲಿಂಗಿ ಸಮುದಾಯದ ಮತ್ತೊಬ್ಬರ ಹೆಸರು ಸೇರುವುದನ್ನು ನಾವು ಬಯಸುವುದಿಲ್ಲ. ಬದುಕುತ್ತಿರುವವರ, ಬದುಕಲು ಅವಕಾಶ ನೀಡಲ್ಪಟ್ಟವರ ಪಟ್ಟಿಯಲ್ಲಿ ನಮ್ಮ ಸಮುದಾಯದವರ ಸಂಖ್ಯೆ ಹೆಚ್ಚಲೆಂದು ನಾವು ಬಯಸುತ್ತೇವೆ.

ಪ್ರತಿದಿನ ನಾನು ಮನೆಯಿಂದ ಹೊರಗೆ ಹೊರಡುವಾಗ ನನ್ನ ಭಿನ್ನಲೈಂಗಿಕತೆಯ ಗುರುತನ್ನು ಹೊತ್ತುಕೊಂಡೇ ಹೊರಡುತ್ತೇನೆ. ನಾನು ಇಲ್ಲಿದ್ದೇನೆ, ಮತ್ತು ಚೆನ್ನಾಗಿಯೇ ಇದ್ದೇನೆ ಎಂದು ಹೇಳಲು ಬಯಸುತ್ತೇನೆ. ಮತ್ತು, ನಾನು ಇಲ್ಲಿರಲು, ಮತ್ತು ಚೆನ್ನಾಗಿಯೇ ಇರಲು ಬಯಸುತ್ತೇನೆ ಕೂಡಾ; ಇಂದಿಗೂ, ಎಂದೆಂದಿಗೂ…

ರೋಹಿಣಿ ಮಾಲೂರ್ ಒಬ್ಬ LGBTQIA ಹಾಗೂ ಬರಹಗಾರ್ತಿ. ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Related Stories

No stories found.
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org