ಲೈಂಗಿಕತೆಯನ್ನು ಕುರಿತ ತಪ್ಪು ತಿಳುವಳಿಕೆ  ಗೊಂದಲ ಉಂಟುಮಾಡುತ್ತದೆಯೇ ?

ಲೈಂಗಿಕತೆಯನ್ನು ಕುರಿತ ತಪ್ಪು ತಿಳುವಳಿಕೆ ಗೊಂದಲ ಉಂಟುಮಾಡುತ್ತದೆಯೇ ?

ಇತ್ತೀಚೆಗೆ, 2017ರಲ್ಲಿ ಹಿಂದಿ ಭಾಷೆಯ ಹಾಸ್ಯ ನಾಟಕ-ಚಲನಚಿತ್ರ ಶುಭ ಮಂಗಲ್ ಸಾವಧಾನ್ ಬಿಡುಗಡೆಯಾಗಿತ್ತು. ಯುವ ದಂಪತಿಗಳ ಅನ್ಯೋನ್ಯತೆಯ ಬದುಕಿನ ಸುತ್ತ ಹೆಣೆದ ಚಿತ್ರದ ಕಥಾನಕದಲ್ಲಿ ಆಯುಷ್ಮಾನ್ ಖುರಾನ  ಮುಂಡಿತ್ ಶರ್ಮ ಪಾತ್ರದಲ್ಲಿ ಮತ್ತು ಭೂಮಿ ಪೆಡ್ನೇಕರ್ ಸುಗಂಧಳ ಪಾತ್ರದಲ್ಲಿ ನಟಿಸಿದ್ದಾರೆ.  ಈ ಚಿತ್ರದಲ್ಲಿ ಮುಂಡಿತ್ ಶಿಶ್ನದ ನಿಗುರುವಿಕೆಯನ್ನು ತಾಳಿಕೊಳ್ಳುವ ಶಕ್ತಿ ಇಲ್ಲದೆ ವಿವಾಹಾನಂತರದ ದಾಂಪತ್ಯವನ್ನು ಸಾಕಾರಗೊಳಿಸಲು ವಿಫಲನಾಗುತ್ತಾನೆ. ತಮಾಷೆ ಎಂದರೆ, ಓರ್ವ ಪಶುವೈದ್ಯ ಮುಂಡಿತ್ ಬಳಿ ಮಾತನಾಡಿ ಅವನಲ್ಲಿ ಒತ್ತಡ ಹೆಚ್ಚಾಗಿರುವುದರಿಂದ ಹೀಗಾಗುತ್ತಿದೆ ಎಂದು ಮನದಟ್ಟು ಮಾಡುತ್ತಾನೆ.

ಈ ಒತ್ತಡದ ಪರಿಣಾಮವಾಗಿಯೇ ಯಾವುದೇ ಕೆಲಸ ಮಾಡುವ ಸಂದರ್ಭದಲ್ಲಿ ಆತಂಕ ಉಂಟುಮಾಡುತ್ತದೆ ಎಂದು ಹೇಳುತ್ತಾನೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಇಂತಹ ಕಳಂಕ ಅಂಟಿದ ವಿಚಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಮಾಡುವುದೇ ಮುನ್ನಡೆಯ ಸಂಕೇತ ಎಂದು ಹೇಳಬಹುದು. ಶಾಲೆಗಳಲ್ಲಿ ಲೈಂಗಿಕತೆ ಮತ್ತು ಮನುಜ ಸಂಬಂಧಗಳನ್ನು ಕುರಿತ ಯಾವುದೇ ಪಠ್ಯಕ್ರಮ ಇರುವುದಿಲ್ಲ. ಲೈಂಗಿಕ ಆರೋಗ್ಯ ಕಾಳಜಿ ಇತ್ತೀಚೆಗಷ್ಟೇ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು ಇದರಲ್ಲಿ ಅರ್ಹ ತಜ್ಞರ ಕೊರತೆ ತೀವ್ರವಾಗಿದೆ.

ಈ ಸಮಸ್ಯೆಗಳು ಭಾರತದಲ್ಲಿ ಎಷ್ಟು ವ್ಯಾಪಕವಾಗಿವೆ ?

ಭಾರತದಲ್ಲಿ ಈ ಕುರಿತು ನಂಬಲರ್ಹವಾದ ಅಂಕಿಅಂಶಗಳು ಇಲ್ಲ. ಯುನೈಟೆಡ್ ಕಿಂಗ್ ಡಮ್ ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಆರು ಜನರಲ್ಲಿ ಒಬ್ಬರು ಮಾತ್ರ ತಮಗೆ ಲೈಂಗಿಕ ಸಮಸ್ಯೆ ಇದೆ ಎಂದು ವರದಿಮಾಡುತ್ತಾರೆ ( ಲೈಂಗಿಕ ವರ್ತನೆ ಮತ್ತು ಜೀವನ ಶೈಲಿಯ ರಾಷ್ಟ್ರೀಯ ಸಮೀಕ್ಷೆ ಬ್ರಿಟನ್ 2012). ಬೆಂಗಳೂರಿನ ಲೈಂಗಿಕ ಮತ್ತು ಮನುಜ ಸಂಬಂಧಗಳ ಚಿಕಿತ್ಸಕರಾದ ಐಯ್ಯಪ್ಪ ಮತ್ತಿತರರು, ಹ್ಯಾಪಿ ರಿಲೇಷನ್ ಷಿಪ್ ಗುಂಪು 2017, ವತಿಯಿಂದ ಆನ್ ಲೈನ್ ನಲ್ಲಿ ಅವರಿಗೆ ಬಂದಿದ್ದ  500 ಪ್ರಶ್ನೆಗಳ ವಿಶ್ಲೇಷಣೆ ನಡೆಸಲಾಗಿತ್ತು. ಶೇ 97ರಷ್ಟು ಪ್ರಶ್ನೆಗಳು ಗಂಡಸರಿಂದಲೇ ಕೇಳಲಾಗಿತ್ತು. ಇವರ ಪೈಕಿ ಬಹುಪಾಲು ಪ್ರಶ್ನೆಗಳನ್ನು ಕೇಳಿದವರು  20 ರಿಂದ 35ರ ವಯೋಮಾನದವರಾಗಿದ್ದರು. ಬಹಳಷ್ಟು ಪ್ರಶ್ನೆಗಳು ಗಂಡಸರ ಶಿಶ್ನದ ಗಾತ್ರದ ಬಗ್ಗೆ, ಸಣ್ಣದಾದ ಶಿಶ್ನದ ಬಗ್ಗೆ ಕಾಳಜಿ, ಶೀಘ್ರವಾಗಿ ಸ್ಕಲನವಾಗುವುದು (ಬಹುಪಾಲು ಜನರಲ್ಲಿ ಶಿಶ್ನ ನಿಗುರುವ ಅವಧಿ ಸರಾಸರಿ ಸಮಯಕ್ಕೆ ತಕ್ಕಂತೆಯೇ ಇತ್ತು) ಮತ್ತು ಶಿಶ್ನ ನಿಗುರುವುದರ ಬಗ್ಗೆ ಆತಂಕ ಇಂತಹ ವಿಷಯಗಳನ್ನೇ ಕುರಿತದ್ದಾಗಿದ್ದವು.

ಭಾರತದಲ್ಲಿ ಯುವ ಪೀಳಿಗೆ ಏಕೆ ಲೈಂಗಿಕ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ?

ಅವರ  ಲೈಂಗಿಕತೆಯ ಬಗ್ಗೆ ಸಾಕಷ್ಟು ತಪ್ಪು ತಿಳುವಳಿಕೆಗಳನ್ನು ಹೊಂದಿರುವ, ತಪ್ಪು ಭಾವನೆಯನ್ನು ಹೊಂದಿರುವ ಹಲವಾರು ಗಂಡಸರನ್ನು ನಾನು ಸಂಪರ್ಕಿಸಿದ್ದೇನೆ. ಸಾಹಿಲ್ ಎಂಬ ಇಂಜಿನಿಯರ್ ಯುವ ಕಳೆದ ವರ್ಷವಷ್ಟೇ ವಿವಾಹವಾಗಿದ್ದ. ಈ ಒಂದು ವರ್ಷದಲ್ಲಿ ಸಾಹಿಲ್ ಆರು ಸಲ ಮಾತ್ರ ಸಂಭೋಗ ಮಾಡಲು ಸಾಧ್ಯವಾಗಿದೆ.  ಏಕೆಂದರೆ ಶಿಶ್ನ ಸ್ಖಲನದ ನಂತರ ಎರಡು ದಿನಗಳ ಕಾಲ ಸಾಹಿಲ್ ನಿತ್ರಾಣನಾಗುತ್ತಾನೆ. ಶಕ್ತಿ ಕಳೆದುಕೊಂಡಂತಾಗುತ್ತಾನೆ. ಬಹುಶಃ ಭಾರತೀಯ ಉಪಖಂಡದಲ್ಲಿ ವ್ಯಾಪಕವಾಗಿರುವ  ಮಾನಸಿಕ ಆತಂಕಕ್ಕೆ ಸಂಬಂಧಿಸಿದ ಧಾತ್  ರೋಗಲಕ್ಷಣ ಸಾಹಿಲ್ ನನ್ನೂ ಬಾಧಿಸುತ್ತಿತ್ತು ಎನಿಸುತ್ತದೆ. ಇಲ್ಲಿ ಗಂಡಸರು ಸಾಮಾನ್ಯವಾಗಿ ವೀರ್ಯ ನಾಶವಾಗುವುದರಿಂದ ತಾವು ಶಕ್ತಿಹೀನರಾಗುತ್ತೇವೆ ಎಂದು ಭಾವಿಸುವುದನ್ನು ಗಮನಿಸಬಹುದು.

35 ವರ್ಷದ ರಜತ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು ವಿವಾಹಿತನಾಗಿ ಎರಡು ಮಕ್ಕಳ ತಂದೆಯಾಗಿದ್ದಾರೆ.  ಈತ  ಪ್ಲಾಸ್ಟಿಕ್ ಸರ್ಜನ್ ಒಬ್ಬರನ್ನು ಸಂಪರ್ಕಿಸಿದ್ದು ತನ್ನ ಶಿಶ್ನದ ಗಾತ್ರ ಹೆಚ್ಚಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡುವಂತೆ ಕೋರಿದ್ದಾರೆ.  ರಜತ್ ನನ್ನು ಪ್ಲಾಸ್ಟಿಕ್ ಸರ್ಜನ್ ಮನಶ್ಶಾಸ್ತ್ರೀಯ ಲೈಂಗಿಕ ಸಲಹೆಗಾಗಿ ನನ್ನ ಬಳಿ ಕಳುಹಿಸಿದ್ದರು. ಮದುವೆಯಾಗಿ ಒಂಬತ್ತು ವರ್ಷಗಳನ್ನು ಕಳೆದಿರುವ ರಜತ್ ತನ್ನ ಪತ್ನಿಯೊಡನೆ ಉತ್ತಮ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ.  ಆದರೆ ಕೆಲವು ವಾರಗಳ ಹಿಂದೆ  ಒಮ್ಮೆ ತನ್ನ ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ  ಸ್ನಾನದ ಕೊಳದಲ್ಲಿದ್ದಾಗ ಆತನ  ಶಿಶ್ನದ ಗಾತ್ರವನ್ನುಕುರಿತು ಗೆಳೆಯರು ಲೇವಡಿ ಮಾಡಿ ಅವಹೇಳನ ಮಾಡಿದ್ದಾರೆ. ಅಂದಿನಿಂದಲೂ ರಜತ್ ಚಿಂತೆಗೀಡಾಗಿದ್ದು ತನ್ನ ಶಿಶ್ನದ ಗಾತ್ರದ ಬಗ್ಗೆಯೇ ಯೋಚಿಸತೊಡಗಿದ್ದಾರೆ.  ಇದೇ ವಿಷಯವನ್ನು ಯೋಚಿಸುತ್ತಾ ತನ್ನ ಹೆಂಡತಿಯೊಡನೆ ಅನ್ಯೋನ್ಯತೆಯಿಂದಿರಲೂ ಹಿಂಜರಿಯುತ್ತಾ ದಿನ ಕಳೆಯುತ್ತಿದ್ದಾರೆ.

ಆನ್ ಲೈನ್ ಮೂಲಕ ಅಶ್ಲೀಲ ಚಿತ್ರಗಳನ್ನು ಸುಲಭವಾಗಿ ನೋಡುವ ಸೌಲಭ್ಯಗಳನ್ನು ಹೊಂದಿರುವ ರಜತ್ ಅವರಂತಹ ಯುವಕರು ಲೈಂಗಿಕ ಕ್ರಿಯೆ ಎಂದರೆ ಕೇವಲ ಸಂಭೋಗಕ್ಕೆ ಸಂಬಂಧಿಸಿದ್ದು ಅಥವಾ ಶಿಶ್ನಕ್ಕೆ ಸಂಬಂಧಿಸಿದ್ದು ಎಂಬ ಸಂಕುಚಿತ ತಿಳುವಳಿಕೆ ಹೊಂದಿರುತ್ತಾರೆ.  ಹ್ಯಾಪಿ ರಿಲೇಷನ್ ಷಿಪ್ ಎಂಬ ಸಾಮಾಜಿಕ ಸಂಸ್ಥೆ ಲೈಂಗಿಕ ಆರೋಗ್ಯ ಶಿಕ್ಷಣದ ಕ್ಷೇತ್ರದಲ್ಲಿ ತೊಡಗಿದ್ದು, ಈ ಸಂಸ್ಥೆ ನಡೆಸಿರುವ ಸಮೀಕ್ಷೆಯೊಂದರಲ್ಲಿ ಒಬ್ಬ ಯುವಕ “ ಡಾಕ್ಟರ್ ನನ್ನ ಶಿಶ್ನ ಚಿಕ್ಕದಾಗಿದೆ, ಕೇವಲ ಆರು ಇಂಚು ಮಾತ್ರ ಇದೆ, ಶಿಶ್ನದ ಗಾತ್ರ ಹೆಚ್ಚಿಸಿಕೊಳ್ಳಲು ನನಗೆ ಚಿಕಿತ್ಸೆ ಬೇಕಿದೆ ” ಎಂಬ ಕೋರಿಕೆ ಸಲ್ಲಿಸಿದ್ದ. ದುರದೃಷ್ಟವಶಾತ್ ಅನ್ ಲೈನ್ ನಲ್ಲಿ ಅಕ್ರಮ ಮಾರುಕಟ್ಟೆ ಚಾಲ್ತಿಯಲ್ಲಿದ್ದು ಇಲ್ಲಿ ಶಿಶ್ನವನ್ನು ಉದ್ದ ಮಾಡಬಹುದು ಎಂಬ ತಪ್ಪುಕಲ್ಪನೆಯನ್ನು ಜನರಲ್ಲಿ ಬಿತ್ತಲಾಗುತ್ತದೆ. ಅಷ್ಟೇ ಅಲ್ಲದೆ ಇದನ್ನು ಸಾಧಿಸಲು ಹಲವು ರೀತಿಯ ನಕಲಿ ಔಷಧಿಗಳು, ಎಣ್ಣೆ,  ದ್ರವ , ವಿಷದ ಔಷಧಿಗಳನ್ನು ಮಾರಾಟ ಮಾಡಲಾಗುತ್ತದೆ.

ದಂಪತಿಗಳ ನಡುವಿನ ಅನ್ಯೋನ್ಯತೆಗೆ, ಅವರಿಬ್ಬರು ಡ್ಯಾನ್ಸ್ ಮಾಡುವಾಗ ಬೇಕಾಗುವಂತೆಯೇ, ಪರಸ್ಪರ ಅರಿತು ನಡೆಯುವುದು ಮುಖ್ಯವಾಗುತ್ತದೆ ಎಂಬ ಅಂಶವನ್ನು ಭಾರತೀಯ ಯುವ ಜನತೆ ಅರ್ಥಮಾಡಿಕೊಳ್ಳುತ್ತಿಲ್ಲ. ಬದಲಾಗಿ, ಲೈಂಗಿಕ ಕ್ರಿಯೆಯನ್ನು ಆರಂಭಿಸುವುದು ತಮ್ಮೊಬ್ಬರದೇ ಹೊಣೆಗಾರಿಕೆ ಎನ್ನುವ ಭಾವನೆ ಭಾರತದ ಗಂಡಸರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.  ಹಾಗೆಯೇ ಶಿಶ್ನ ಹೆಚ್ಚಾಗಿ ನಿಗುರುವುದು, ಉತ್ಕಟತೆಯಿಂದ ಸಂಭೋಗಿಸುವುದು, ದೀರ್ಘ ಕಾಲ ಸಂಭೋಗಿಸುವುದು ತಮ್ಮ ಹೊಣೆ ಎಂದು ಭಾವಿಸಿರುತ್ತಾರೆ.  ಈ ಎಲ್ಲ ಕ್ರಿಯೆಗಳಲ್ಲಿ ತಮ್ಮ ಸಂಗಾತಿ ಮಹಿಳೆಯ ಪಾತ್ರವನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಹೀಗೆ ಮಾಡುವುದರ ಮೂಲಕ ಎಲ್ಲೋ ಒಂದು ಕಡೆ ತಪ್ಪು ನಡೆದರೆ ಗಂಡಸರು ತಮ್ಮನ್ನು ತಾವೇ ಶಪಿಸಿಕೊಳ್ಳುತ್ತಾ ತಮ್ಮಲ್ಲೇ ಏನೋ ದೋಷವಿದೆ ಎಂದು ಭಾವಿಸುತ್ತಾರೆ.  ಕೆಲವೊಮ್ಮೆ ಈ ಎಲ್ಲ ಒತ್ತಡಗಳಿಂದ ಮಾನಸಿಕ ಸಮಸ್ಯೆಗಳೂ ಉಂಟಾಗುತ್ತವೆ. ಆತಂಕ ಮತ್ತು ಖಿನ್ನತೆಯ ಸಮಸ್ಯೆಗಳು ಎದುರಾಗುತ್ತವೆ.  ಇನ್ನೂ ಆಳವಾಗಿ ನೋಡಿದಾಗ ಅನೇಕ ಗಂಡಸರು ತಮ್ಮ ಗಂಡಸುತನವೇ ಹೊರಟುಹೋಗಿದೆ ಎಂದು ಭಾವಿಸುತ್ತಾರೆ. ಇಂತಹ ಭಾವನೆಗಳಿಂದ ಕೆಲವು ಸಂದರ್ಭಗಳಲ್ಲಿ ಗಂಡಸರು ಆತ್ಮಹತ್ಯೆ ಮಾಡಿಕೊಳ್ಳುವುದೂ ಉಂಟು.

ಉದಾಹರಣೆಗೆ ಇದನ್ನೇ ತೆಗೆದುಕೊಳ್ಳಿ. ಮದುವೆಯಾಗಿ ಒಂದು ವರ್ಷವಷ್ಟೇ ಕಳೆದಿರುವ ಗೀತ ಮತ್ತು ಶರತ್ ದಂಪತಿಗೆ ತಮ್ಮ ಕುಟುಂಬದವರಿಂದ “ ಶುಭ ಸಮಾಚಾರ ” ಬೇಗ ಕೊಡುವಂತೆ ಒತ್ತಡ ಹೆಚ್ಚಾಗುತ್ತಲೇ ಇದೆ. ಗೀತಾ ಅವರಿಗೆ ತಮ್ಮ ಬಳಿ ಇರುವ ಆ್ಯಪ್ ಮೂಲಕ ತಮ್ಮ ಅಂಡಾಣುಗಳು ಯಾವಾಗ ಬಿಡುಗಡೆಯಾಗುತ್ತವೆ ಎಂಬ ಮಾಹಿತಿ ದೊರೆಯುತ್ತದೆ. ವೀರ್ಯ ಧಾರಣೆಯಾಗುವ ರೀತಿಯಲ್ಲಿ ಸಂಭೋಗ ಮಾಡಲು ಯಾವ ಯಾವ ದಿನ ಸೂಕ್ತ ಎಂಬ ಮಾಹಿತಿ ಈ ಆ್ಯಪ್ ಮೂಲಕ ಗೀತ ಅವರಿಗೆ ತಿಳಿಯುತ್ತದೆ.  ಶರತ್ ಅವರಿಗೆ ಸಂಭೋಗ ಬೇಕು ಎನಿಸಿದಾಗ ಕೆಲವೊಮ್ಮೆ ಗೀತ ತಾಳ್ಮೆ ಕಳೆದುಕೊಂಡು ಹಸ್ತಮೈಥುನ ಮಾಡಿಕೊಳ್ಳುವಂತೆ ಹೇಳುತ್ತಾಳೆ.

ಈ ರೀತಿ ಸಂಭೋಗ ಕ್ರಿಯೆ ನಡೆಸಲು ಒತ್ತಡ ಹೆಚ್ಚಾದ ಕಾರಣ ಶರತ್ ತನ್ನ ಶಿಶ್ನದ ನಿಮಿರುವಿಕೆ ಮತ್ತು ಸ್ಖಲನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ . ಕೊನೆಗೆ ಇಬ್ಬರೂ ಅಸಮಧಾನದಿಂದ ಬಳಲುತ್ತಾರೆ.  ಇದರಿಂದ ಇಬ್ಬರ ನಡುವಿನ ಸಂಬಂಧವೂ ಹದಗೆಡುತ್ತದೆ. ಈ ಪ್ರಹಸನವನ್ನು ನಾನು ಬೇಡಿಕೆಗೆ ಅನುಗುಣವಾಗಿ ಲೈಂಗಿಕತೆ ಎಂದು ಬಣ್ಣಿಸುತ್ತೇನೆ. ಇಲ್ಲಿ ಲೈಂಗಿಕ ಕ್ರಿಯೆ ಎಂದರೆ ಕೇವಲ ಗರ್ಭಧಾರಣೆ ಮತ್ತು ಮಗುವಿನ ಜನನ ಇಷ್ಟಕ್ಕೇ ಸೀಮಿತವಾಗುತ್ತದೆ.

ಲೈಂಗಿಕತೆಗೆ ಸಂಬಂಧಿಸಿದ ವಿಚಾರಗಳೂ ಮತ್ತು ಮಾನಸಿಕ ಆರೋಗ್ಯ ಇವೆರಡೂ ಪರಸ್ಪರ ಸಂಬಂಧ ಹೊಂದಿರುತ್ತವೆ. ಹಾಗಾಗಿಯೇ ಲೈಂಗಿಕ ಕ್ರಿಯೆಯನ್ನು  ಮತ್ತು ಅದರ ದೈಹಿಕ ಮತ್ತು ಭಾವನಾತ್ಮಕ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯವಾಗಿರುತ್ತದೆ. ಲೈಂಗಿಕ ರೋಗ ತಜ್ಞೆಯಾಗಿ ನಾನು ಅನೇಕ ಸಂದರ್ಭಗಳಲ್ಲಿ ಈ ಕೆಲವು ಮಾತುಗಳನ್ನು ನನ್ನ ಕ್ಲಿನಿಕ್ ನಲ್ಲಿ ಹೇಳುತ್ತಿರುತ್ತೇನೆ :

  • ಯಾವುದೇ ಒಂದು ಸಂಬಂಧ ಹೊಂದಿರುವುದು ಅಥವಾ ಮದುವೆಯಾಗಿರುವುದು ಕೇವಲ ಲೈಂಗಿಕ ಅನ್ಯೋನ್ಯತೆಗಾಗಿಯೇ ಅಲ್ಲ. ಭಾವನಾತ್ಮಕವಾಗಿರುವುದು, ಮನರಂಜನೆಯಲ್ಲಿ ತೊಡಗುವುದು, ದಂಪತಿಗಳು ಪ್ರತ್ಯೇಕವಾಗಿ ಕಾಲ ಕಳೆಯುವುದು ಹೀಗೆ ಇತರ  ರೀತಿಯ ಅನ್ಯೋನ್ಯತೆಯ ಬಗ್ಗೆಯೂ ಜನರು ಯೋಚಿಸಬೇಕು.

  • ಲೈಂಗಿಕತೆ ಎಂದರೆ ಕೇವಲ ಸಂಭೋಗ ಅಲ್ಲ. ಅನ್ಯೋನ್ಯತೆಯ ವಿಚಾರದಲ್ಲಿ ಸಂಭೋಗದ ಮೂಲಕ ಲೈಂಗಿಕ ತೃಷೆ ಅರಗಿಸಿಕೊಳ್ಳುವುದು ಒಂದು ಭಾಗ ಅಷ್ಟೇ.

  • ಶಿಶ್ನದ ನಿಮಿರುವಿಕೆ ಒಂದು ಉಪಕರಣದಂತೆ ಕೆಲಸ ಮಾಡುವುದಿಲ್ಲ. ಆನ್ ಮಾಡುವ ಮತ್ತು ಆಫ್ ಮಾಡುವ ಬಟನ್ ಮೂಲಕ ಅದನ್ನು ನಿಯಂತ್ರಿಸಲಾಗುವುದಿಲ್ಲ. ಗಂಡಸರಲ್ಲಿ ಶಿಶ್ನದ ನಿಮಿರುವಿಕೆ ಮತ್ತು ಹೆಂಗಸರಲ್ಲಿ ಸೋರುವಿಕೆಯ ಮೂಲಕ ನಡೆಯುವ ಲೈಂಗಿಕ ಉತ್ಕಟತೆಯ ಮೂಲ ಇರುವುದು ಮನಸ್ಸಿನಲ್ಲಿ, ಇದು ಕಾರ್ಯ ರೂಪಕ್ಕೆ ಬರುವುದು ದೇಹದ ಮೂಲಕ. ಹಾಗಾಗಿ ಜನರು ಲೈಂಗಿಕ ತೃಪ್ತಿ ಸಿಗಲಿಲ್ಲ, ಶಿಶ್ನ ನಿಮಿರುವುದಿಲ್ಲ, ಶೀಘ್ರ ಸ್ಖಲನವಾಗಿದೆ ಎಂದು ಆತಂಕಕ್ಕೊಳಗಾಗುವುದು ಬೇಕಿಲ್ಲ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಆರಂಭದ ದಿನಗಳಲ್ಲಿ ಹೀಗೆ ಸಂಭವಿಸುವುದು ಸ್ವಾಭಾವಿಕ. ಲೈಂಗಿಕ ತೃಪ್ತಿಯ ಕೊರತೆ ಅನೇಕ ವ್ಯಕ್ತಿಗಳ ಮತ್ತು ದಂಪತಿಗಳ ಮನಸುಗಳನ್ನು ಹಾಳು ಮಾಡಿದೆ. ಹಾಗೆಯೇ ಅವರ  ಸಂಬಂಧಗಳನ್ನೂ ಹಾಳುಗೆಡಹಿದೆ.

  • ನಿಮ್ಮ ಸಂಗಾತಿಗೆ ಖುಷಿ ನೀಡುವುದು ಮತ್ತು ಅವರಿಂದ ಖುಷಿ ಪಡೆಯುವುದು ಇವೆರಡರ ನಡುವೆ ಸೂಕ್ಷ್ಮ ಸಮತೆ ಇರುವುದನ್ನು ಅರ್ಥಮಾಡಿಕೊಳ್ಳಿ. ಯಾವುದೇ ವ್ಯಕ್ತಿ ಲೈಂಗಿಕ ಕ್ರಿಯೆಗೆ ಮುಂದಾಗುವಾಗ ಪರಸ್ಪರ ವಿನಿಮಯ ಕ್ರಿಯೆ ಎಂದೇ ಭಾವಿಸಬೇಕೇ ಹೊರತು ತನ್ನ ಕೆಲಸ ಮಾತ್ರ ಎಂದು ಭಾವಿಸಬಾರದು.

  • ನಿಮ್ಮಲ್ಲಿ ಅನಿಶ್ಚಿತತೆ ಇದ್ದರೆ ದಯಮಾಡಿ ದಂಪತಿಗಳು ಒಬ್ಬ ಲೈಂಗಿಕ ತಜ್ಞರನ್ನು ಸಂಪರ್ಕಿಸಿ. ನಿಮ್ಮ ವೈವಾಹಿಕ ಸಂಬಂಧದ ಯಾವುದೇ ಹಂತದಲ್ಲಾದರೂ ಇದನ್ನು ಮಾಡಬಹುದು. ಮದುವೆಗೆ ಮುನ್ನ ಸಲಹೆ ಪಡೆಯುವಾಗಲೂ ಇದು ಸಾಧ್ಯ.

ಈ ಸಮಸ್ಯೆಯನ್ನು ಕುರಿತು ಪ್ರತಿಯೊಬ್ಬರೂ ಮುಕ್ತವಾಗಿ ಮಾತನಾಡಬೇಕಾದ ಅವಶ್ಯಕತೆ ಇದೆ. ಪೋಷಕರು ತಮ್ಮ ಮಕ್ಕಳಿಗೆ ತಿಳಿಸಿ ಹೇಳಬೇಕು, ಶಿಕ್ಷಕರು ಸರಿಯಾದ ಮಾಹಿತಿ ನೀಡುವ ಮೂಲಕ ಶಿಕ್ಷಣ ನೀಡಬೇಕು ಮತ್ತು ಸಮಾಜ ಲೈಂಗಿಕತೆಗೆ ಅಂಟಿರುವ ಕಳಂಕವನ್ನು ನಿವಾರಿಸಲು, ತಪ್ಪು ತಿಳುವಳಿಕೆಗಳನ್ನು, ಮಿಥ್ಯೆಗಳನ್ನು ಹೋಗಲಾಡಿಸಲು ಯತ್ನಿಸಬೇಕು.

ವ್ಯಕ್ತಿಗತ ಮಾಹಿತಿಗಳನ್ನು (ಹೆಸರು ಮತ್ತು ಗುರುತಿಸಬಹುದಾದ ಮಾಹಿತಿ) ಬದಲಾಯಿಸಲಾಗಿದ್ದು ವಿವರಗಳನ್ನು ಸೂಕ್ತರೀತಿಯಲ್ಲಿ ರಹಸ್ಯವಾಗಿರಿಸಲಾಗಿದೆ.

ಡಾ ಸಂದೀಪ್ ದೇಶಪಾಂಡೆ ಬೆಂಗಳೂರಿನಲ್ಲಿ ನೆಲೆಸಿರುವ ಮನಶ್ಶಾಸ್ತ್ರಜ್ಞರಾಗಿದ್ದು ಲೈಂಗಿಕ ಆರೋಗ್ಯ ಮತ್ತು ಮನುಜ ಸಂಬಂಧಗಳ ತಜ್ಞರಾಗಿದ್ದಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org