34ರ ಅನಿಲ್ ಕಳೆದ ಒಂದೆರಡು ವರ್ಷದಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾರೆ. ಹಿಂಸೆ ತೀವ್ರವಾದಾಗ ಈ ಹಿಂದೆ ಎಷ್ಟೋ ಬಾರಿ ತಜ್ಞರ ಬಳಿ ಹೋಗಲೇಬೇಕೆಂದು ತೀರ್ಮಾನಿಸಿದ್ದರಾದರೂ ಪೂರ್ವಾಗ್ರಹ, ದ್ವಂದ್ವಗಳು ತೆರಳದಂತೆ ತಡೆಹಿಡಿದುಬಿಟ್ಟಿದ್ದವು. ಇತ್ತೀಚೆಗಷ್ಟೇ ಪತ್ನಿಯ ಒತ್ತಾಯದ ಮೇರೆಗೆ ತಜ್ಞ ಸಹಾಯಕ್ಕೆ ಮೊರೆ ಹೋಗಿರುವ ಅನಿಲ್ ಹಿಂಜರಿಕೆ, ಸಂಕೋಚದಿಂದಲೇ ಹೀಗೆ ಹೇಳುತ್ತಾರೆ “ ಒತ್ತಡದ ಜೀವನದಲ್ಲಿ ಮಾನಸಿಕ ತೊಂದರೆಗಳೆಲ್ಲಾ ಸಾಮಾನ್ಯ ಎಂದೇ ತಿಳಿದಿದ್ದೆ. ಪತ್ನಿ ಸಲಹೆ ನೀಡಿದಾಗಲೆಲ್ಲಾ ಅವಳು ನನ್ನನ್ನು ಅಸಮರ್ಥ ಎಂದು ಭಾವಿಸಿದ್ದಾಳೆ ಎಂದು ಕೋಪ ಬರುತ್ತಿತ್ತು. ಬಹಳಷ್ಟು ಬಾರಿ ಅಸಾಧ್ಯ ಎನ್ನುವಷ್ಟು ಆತಂಕ, ವ್ಯಾಕುಲತೆ ಕಾಡುತ್ತಿತ್ತಾದರೂ ಅದಕ್ಕೆಲ್ಲಾ ಚಿಕಿತ್ಸೆಗೆ ಎಂದು ಹೋದರೆ ಸಂಬಂಧಿಕರು, ಸಹೋದ್ಯೋಗಿಗಳು ಏನೆಂದುಕೊಂಡಾರು ಎಂಬ ಅಳುಕು. ಸಾಧ್ಯವಾದಷ್ಟೂ ನಾನೇ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಆದರೆ ಮನಸ್ಸಿನ ಹಿಂಸೆ ಕೈ ಮೀರಿ ಬಿಟ್ಟಿತು. ಕಡೆಗೆ ಸಂಸಾರ, ವೃತ್ತಿಯ ಮೇಲೆ ಪ್ರತಿಕೂಲ ಪರಿಣಾಮ ವಿಪರೀತವಾಗಲಾರಂಭಿಸಿದಾಗ ಪತ್ನಿಯ ಒತ್ತಾಯಕ್ಕೆ ಮಣ ದು ಬರಲೇಬೇಕಾಯ್ತು. ನಿಜವಾಗಲೂ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುವಷ್ಟು ವೀಕ್ ಆಗುತ್ತೇನೆ ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ.”