ಮಾನಸಿಕ ಸಮಸ್ಯೆಗಳಿಗೆ ಪುರುಷರು ವೈದ್ಯಕೀಯ ನೆರವು ಪಡೆಯುವುದು ವಿರಳ

ಮಾನಸಿಕ ಸಮಸ್ಯೆಗಳಿಗೆ ಪುರುಷರು ವೈದ್ಯಕೀಯ ನೆರವು ಪಡೆಯುವುದು ವಿರಳ

ಪುರುಷರು ತಮ್ಮ ಮಾನಸಿಕ ಸಮಸ್ಯೆಗಳಿಗೆ ವೈದ್ಯಕೀಯ ನೆರವು ಪಡೆಯದಂತೆ ತಡೆಯುವ ಪ್ರಮುಖ ಅಂಶಗಳಾವುವು? ಇದಕ್ಕೆ ಲಿಂಗಸಂವೇದನೆ ಅಡ್ಡಿಯಾಗುತ್ತದೆಯೇ? ಸೂಕ್ತ ನೆರವು ಪಡೆಯುವಂತಾಗಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?

ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ 28% ಪುರುಷರು ಹಾಗು 19% ಮಹಿಳೆಯರು ಸೂಕ್ತ ನೆರವು / ಚಿಕಿತ್ಸೆ ಪಡೆಯುವುದಿಲ್ಲ ಎಂದು ವರದಿಯೊಂದು ಹೇಳಿದೆ. ಯುನೈಟೆಡ್ ಕಿಂಗ್ಡಮ್ ನ ಮೆಂಟಲ್ ಹೆಲ್ತ್ ಫೌಂಡೇಷನ್ ಕಳೆದ ತಿಂಗಳು ಈ ಕುರಿತು ಸಮೀಕ್ಷೆ ನಡೆಸಿತ್ತು. ಕಳೆದ ಕೆಲವು ದಶಕಗಳಲ್ಲಿ ನಡೆಸಲಾಗಿರುವ ಸಮೀಕ್ಷಾ ವರದಿಗಳ ಪ್ರಕಾರ ಮಹಿಳೆಯರಿಗೆ ಹೋಲಿಸಿದರೆ ಸೂಕ್ತ ವೈದ್ಯಕೀಯ ನೆರವು ಪಡೆದಿರುವ ಪುರುಷರ ಸಂಖ್ಯೆ ಬಹಳ ಕಡಿಮೆ. ನಾವು ಈ ವಿಷಯವಾಗಿ ವಿವಿಧ ತಜ್ಞರೊಡನೆ ಮಾತನಾಡಿದಾಗ, ಭಾರತದಲ್ಲಿ ಲಿಂಗಸಂವೇದನೆ ಮತ್ತು ಮಾನಸಿಕ ಸಮಸ್ಯೆಗಳಿಗೆ ವೈದ್ಯಕೀಯ ನೆರವು ಪಡೆಯುವುದರ ಬಗ್ಗೆ ಅಧ್ಯಯನದ ಕೊರತೆಯಿದೆ ಎಂದು ತಿಳಿದು ಬಂದಿದೆ.

ಮಹಿಳೆ ಮತ್ತು ಪುರುಷರಲ್ಲಿ ಮಾನಸಿಕ ಸಮಸ್ಯೆಗಳು ವಿಭಿನ್ನವಾಗಿರುತ್ತವೆಯೇ ?

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅ್ಯಂಡ್ ನ್ಯೂರೋಸೈನ್ಸಸ್ (ನಿಮ್ಹಾನ್ಸ್) 2015ರಲ್ಲಿ ನಡೆಸಿದ ನ್ಯಾಷನಲ್ ಮೆಂಟಲ್ ಹೆಲ್ತ್ ಸರ್ವೆ ನೀಡಿದ ಕೆಲವು ಅಂಕಿ ಅಂಶಗಳನ್ನು ಇಲ್ಲಿ ನೀಡಲಾಗಿದೆ :

  • ಸರಿಸುಮಾರು 16.75% ಪುರುಷರು ಹಾಗೂ 10.80%ರಷ್ಟು ಮಹಿಳೆಯರು ತಮ್ಮಜೀವಿತಾವಧಿಯಲ್ಲಿ ಹಲವು ರೀತಿಯ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾರೆ.
  • ಪ್ರಸ್ತುತ ಪುರುಷರಲ್ಲಿ 13.9% ಹಾಗೂ ಮಹಿಳೆಯರಲ್ಲಿ 7.47%ರಷ್ಟು ಮಾನಸಿಕ ಆರೋಗ್ಯದ ಸಮಸ್ಯೆಗಳು ದಾಖಲಾಗಿವೆ.
  • ಸುಮಾರು 2.15%ರಷ್ಟು ಪುರುಷರು ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್ ಮತ್ತು ಸೈಕೋಟಿಕ್ ಡಿಸಾರ್ಡರ್ ನಂತಹ ತೀವ್ರತರವಾದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇದು ಮಹಿಳೆಯರಲ್ಲಿ 1.73%ರಷ್ಟು ಪ್ರಮಾಣದಲ್ಲಿದೆ.
  • 35.67%ರಷ್ಟು ಪುರುಷರು ಹಾಗೂ 10.05%ರಷ್ಟು ಮಹಿಳೆಯರು ತಪಾಸಣೆಗೆ ಒಳಪಟ್ಟಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುರುಷರ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಬೇಕು ಹಾಗೂ ಅವರ ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಈ ಅಂಕಿಅಂಶಗಳು ಸೂಚಿಸುತ್ತವೆ.

ವೈದ್ಯಕೀಯ ನೆರವು ಪಡೆಯಲು ಪುರುಷರು ಹಿಂಜರಿಯುವುದಕ್ಕೆ ಕಾರಣಗಳು :

ಪುರುಷರಲ್ಲಿ ಮಾನಸಿಕ ಸಮಸ್ಯೆಗಳ ಪ್ರಮಾಣ ಹೆಚ್ಚಿದ್ದರೂ, ಸೂಕ್ತ ನೆರವು ಪಡೆದುಕೊಳ್ಳುವುದರಲ್ಲಿ ಅವರು ಹಿಂದುಳಿದಿದ್ದಾರೆ. ಈ ನಿಟ್ಟಿನಲ್ಲಿ ಮಾನಸಿಕ ತಜ್ಞರು ಕಂಡುಕೊಂಡ ಕಾರಣಗಳು ಹೀಗಿವೆ :

ಸಾಂಪ್ರದಾಯಿಕವಾಗಿ ನಡೆದುಬಂದಿರುವ ಪುರುಷಪ್ರಾಧಾನ್ಯತೆಯನ್ನು ಪುಷ್ಟೀಕರಿಸುವುದು - “ನಾವು ಚಿಕ್ಕವರಿದ್ದಾಗಲೇ ನಮ್ಮ ಸಮಾಜವು ಲಿಂಗಕ್ಕನುಗುಣವಾಗಿ ನಮ್ಮ ವರ್ತನೆಗಳು ಹೇಗಿರಬೇಕೆಂಬುದನ್ನು ತಲೆಗೆ ತುಂಬಿರುತ್ತದೆ. ಪಾರಂಪರಿಕ ನಡೆಯಂತೆ ಪುರುಷ ಯಾವಾಗಲೂ ಸಂರಕ್ಷಕ / ಪೋಷಕನಾಗಿರುತ್ತಾನೆ. ಆದ್ದರಿಂದ ಅವನು ತನ್ನ ನೋವನ್ನು, ಅಸಹಾಯಕತೆಯನ್ನು ತೋರ್ಪಡಿಸಲಾಗದೇ ಒತ್ತಡಕ್ಕೆ ಒಳಗಾಗಿರುತ್ತಾನೆ. ಇದು ಅವನ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ”, ಎಂದು ಕೌನ್ಸಲಿಂಗ್ ಸೈಕೊಲಜಿಸ್ಟ್ ಆಗಿರುವ ಪಾರಸ್ ಶರ್ಮ ವಿವರಿಸುತ್ತಾರೆ. ಪುರುಷರು ತಮ್ಮ ಭಾವನೆಗಳನ್ನು ತಡೆದಿಟ್ಟುಕೊಳ್ಳಬೇಕು, ಧೈರ್ಯಶಾಲಿಗಳಾಗಿರಬೇಕು ಮತ್ತು ತಮ್ಮ ಯಶಸ್ಸಿನ ಬಗ್ಗೆ ಚಿಂತಿಸಬೇಕು ಎಂದು ನಮ್ಮ ಸಮಾಜ ಹೇಳಿಕೊಟ್ಟಿದೆ. ಆದ್ದರಿಂದ ನೆರವು ಪಡೆಯುವುದು ದೌರ್ಬಲ್ಯದ ಸಂಕೇತ ಎಂಬ ಅನಿಸಿಕೆ ನಮ್ಮಲ್ಲಿದೆ.

ತಮ್ಮ ನಿಯಂತ್ರಣ ತಪ್ಪಬಹುದೆಂಬ ಗ್ರಹಿಕೆ : ಪುರುಷರು ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳಲು ಬಯಸುತ್ತಾರೆ ಮತ್ತು ತಾವೇ ಸರಿಪಡಿಸಿಕೊಳ್ಳುತ್ತಾರೆ. ಏಕೆಂದರೆ ಸಮಸ್ಯೆಗಳು ತಮ್ಮಿಂದಲೇ ಸೃಷ್ಟಿಯಾಗುತ್ತವೆ ಮತ್ತು ತಾವು ಅದನ್ನು ನಿಯಂತ್ರಿಸಬಹುದೆಂಬ ವಿಶ್ವಾಸ ಅವರಿಗೆ ಇರುತ್ತದೆ. ಇತರರ ಬಳಿ ಸಲಹೆ/ಸಹಾಯವನ್ನು ಕೇಳಿದರೆ ಅವರ ಮೇಲಿನ ತಮ್ಮ ನಿಯಂತ್ರಣ ತಪ್ಪಬಹುದು ಮತ್ತು ಇನ್ನೊಬ್ಬರ ಮೇಲೆ ಅಧಿಕಾರ ಚಲಾಯಿಸಲಾಗದು ಎಂಬ ಭಾವನೆ ಮೂಡುತ್ತದೆ.

ಪರಸ್ಪರ ಸಹಕಾರ : ತಾವು ಒಂದೊಮ್ಮೆ ನೆರವು ಪಡೆದರೆ, ಅದಕ್ಕೆ ಬದಲಾಗಿ ಅವರಿಗೇನಾದರೂ ನೀಡಬೇಕಾಗುತ್ತದೆಂಬ; ಮತ್ತು ನೀಡಲು ತನಗೆ ಸಾಮರ್ಥ್ಯವಿಲ್ಲವೆಂಬ ಅಭಿಪ್ರಾಯ ಕೂಡಾ ನೆರವು ಕೇಳದಂತೆ ಮಾಡುತ್ತವೆ. ಆದ್ದರಿಂದ ಕೆಲವು ಪುರುಷರು ಈಗ ಸಹಾಯ ಪಡೆದರೆ ಮುಂದೊಂದು ದಿನ ಅವನಿಗೆ ಸಹಾಯ ಮಾಡಬೇಕಾಗುತ್ತದೆ ಎಂದು ಸುಮ್ಮನಾಗಿಬಿಡುತ್ತಾರೆ. ಸಂಶೋಧನೆಗಳು ಇಂತಹ ಮನಸ್ಥಿತಿಯನ್ನು “ಅಂತಸ್ತು - ಸ್ಥಾನಮಾನದ ನಿರ್ವಹಣೆ ಮತ್ತು ತಾನು ಬಲಶಾಲಿಯೆಂದು ತೋರ್ಪಡಿಸುವಿಕೆ”ಯ ಮನಸ್ಥಿತಿ ಎಂದು ವಿವರಿಸುತ್ತವೆ.

ಸಾಮಾಜಿಕ ಬೆಂಬಲ : ಸಮಸ್ಯೆಗೊಳಗಾದ ವ್ಯಕ್ತಿಗೆ ಸಾಮಾಜಿಕ ಬೆಂಬಲ ಮುಖ್ಯವಾಗಿ ಬೇಕಾಗುತ್ತದೆ. ಆದರೆ ಪುರುಷರು ನೆರವು ಪಡೆಯಲು ಹಿಂಜರಿಯುತ್ತಾರೆ. ಏಕೆಂದರೆ ಬಹುತೇಕವಾಗಿ ಅವರು ಸಮಾಜದಲ್ಲಿ ಭಾವುಕವಾಗಿ ವರ್ತಿಸುವುದಕ್ಕಿಂತ ಪ್ರಾಯೋಗಿಕವಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಾರೆ. ಮತ್ತು ಯಾವಾಗಲೂ ತಾನು ಸಹಾಯ ನೀಡುವ ಸ್ಥಾನದಲ್ಲಿರಬೇಕೆಂದು ಬಯಸುತ್ತಾರೆ. ಆದ್ದರಿಂದ ಹೆಚ್ಚಿನ ಪುರುಷರು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಲು ಯತ್ನಿಸುತ್ತಾರೆ.

ಪುರುಷರು ಮತ್ತು ಮಹಿಳೆಯರು ವಿಭಿನ್ನವಾಗಿ ಸ್ಪಂದಿಸುತ್ತಾರೆ : ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಒತ್ತಡವನ್ನು ನಿರ್ವಹಿಸುವ ರೀತಿ. ಇದು ಪುರುಷರು ಹಾಗೂ ಮಹಿಳೆಯರಲ್ಲಿ ವಿಭಿನ್ನವಾಗಿರುತ್ತದೆ. ”ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಇಬ್ಬರಲ್ಲೂ ಭಿನ್ನವಾಗಿರುವುದನ್ನು ನಾನು ಗಮನಿಸಿದ್ದೇನೆ, ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಮಹಿಳೆಯರು ಮುಕ್ತವಾಗಿ ಹೇಳಿಕೊಳ್ಳುತ್ತಾರೆ ಮತ್ತು ನೆರವು ಪಡೆಯುತ್ತಾರೆ ಆದರೆ ಪುರುಷರು ಪರಿಸ್ಥಿತಿ ಕೈಮೀರಿಹೋಗುತ್ತಿದೆ ಎಂದಾಗ ಮಾತ್ರ ಸಹಾಯ ಬಯಸುತ್ತಾರೆ” ಎಂದು ಸ್ಪಂದನ ಹೆಲ್ತ್ ಕೇರ್ ನ ನಿರ್ದೇಶಕರು ಹಾಗೂ ಸೈಕಿಯಾಟ್ರಿಸ್ಟ್ ಆಗಿರುವ ಡಾ.ಮಹೇಶ್ ಗೌಡ ಹೇಳುತ್ತಾರೆ.

ಒಂದು ಅಧ್ಯಯನದ ಪ್ರಕಾರ, ಪುರುಷರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವಿಭಿನ್ನ ರೀತಿಯ ಕೌಶಲ್ಯಗಳನ್ನು ಬಳಸುತ್ತಾರೆ. ಮತ್ತೊಂದೆಡೆ ಮಹಿಳೆಯರು ಭಾವನಾತ್ಮಕ ಮಾರ್ಗಗಳನ್ನು ಅನುಸರಿಸುತ್ತಾರೆ.

“ಬಹಳಷ್ಟು ಪುರುಷರು ಪರಿಹಾರ ಸೂಚಿಸುವ ಸ್ಥಾನದಲ್ಲಿರುತ್ತಾರೆ. ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸೂಕ್ತ ಶಬ್ದಗಳು ಸಿಗದೆ, ಹೇಳಿಕೊಳ್ಳಲಾಗದೇ ಕಷ್ಟಪಡುತ್ತಾರೆ” ಎಂದು ಸ್ಯೂಸೈಡ್ ಪ್ರಿವೆನ್ಶನ್ ಇಂಡಿಯಾ ಫೌಂಡೇಶನ್ ಸಂಸ್ಥಾಪಕರಾದ ನೆಲ್ಸನ್ ವಿನೋದ್ ಮೋಸನ್ ಹೇಳುತ್ತಾರೆ. ಅದೇ ವೇಳೆಗೆ, ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹಾಗೂ ನೋವನ್ನು ವ್ಯಕ್ತಪಡಿಸಲು ಉದ್ವೇಗ, ದುಃಖ ಮುಂತಾದ ಭಾವನಾತ್ಮಕ ಮಾರ್ಗಗಳನ್ನು ಕಂಡುಕೊಂಡಿರುತ್ತಾರೆ. 

ಅಗತ್ಯ ನೆರವು ಪಡೆಯುವಂತೆ ಪ್ರೋತ್ಸಾಹಿಸುವುದು :

ಗ್ಲಾಸ್ ಗೌ ನ, ಯೂತ್ ಜಸ್ಟಿಸ್ ಡಿಪಾರ್ಟ್ ಮೆಂಟಿನ ವರದಿಯು, ಮಿತ್ರರು ಹಾಗೂ ಕುಟುಂಬ ವರ್ಗದವರು ಮಾನಸಿಕ ಸಮಸ್ಯೆ ಹೊಂದಿರುವ ಪುರುಷರಿಗೆ ಯಾವ ರೀತಿ ನೆರವು ನೀಡಬಹುದೆಂದು ಕೆಲವು ಸೂಚನೆಗಳನ್ನು ನೀಡುತ್ತದೆ.

ಅದರ ಪ್ರಕಾರ :

  • ವ್ಯಕ್ತಿಯ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವುದು ಮತ್ತು ಹಂಚಿಕೊಳ್ಳುವುದು.
  • ಆರೋಗ್ಯಕ್ಕೆ ಸಂಬಂಧಿಸಿದ, ಜಾಗೃತಿ ಮೂಡಿಸುವಂತಹ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು.
  • ಸಕಾರಾತ್ಮಕ ಸಲಹೆಗಳನ್ನು ನೀಡಬಲ್ಲ ನಂಬಿಕಸ್ಥ ಆಪ್ತಸಮಾಲೋಚಕರನ್ನು / ಚಿಕಿತ್ಸಕರನ್ನು ಸೂಚಿಸುವುದು.
  • ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳುವಾಗ, ಚಿಕಿತ್ಸೆ ಪಡೆಯುತ್ತಿರುವಾಗ, ನಿಯಂತ್ರಣ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org