ಮಹಿಳೆಯರಲ್ಲಿ ದೇಹ ಸೌಂದರ್ಯದ ಬಗೆಗಿನ ಅತೃಪ್ತಿ ಮತ್ತು ಪರಿಹಾರಗಳು

ಮಹಿಳೆಯ ದೇಹಸೌಂದರ್ಯವೇ ಆಕೆಗೆ ಮನ್ನಣೆ ಒದಗಿಸುವುದು ಅನ್ನುವ ಮಾಧ್ಯಮಗಳ ಕಟ್ಟುಕಥೆಯನ್ನು ನಾವು ಒಪ್ಪಿಕೊಳ್ಳಬೇಕಿಲ್ಲ

ವ್ಯಕ್ತಿಯು ತನ್ನನ್ನು ತಾನು ನೋಡುವ ಬಗೆಯನ್ನು ಸ್ವಾಭಿಮಾನ ಅಥವಾ ಆತ್ಮವಿಶ್ವಾಸ ಎಂದು ಕರೆಯಬಹುದು. ಇಲ್ಲಿ ನಮ್ಮನ್ನು ನಾವು ನೋಡುವುದು ಅಂದರೆ, ಕೇವಲ ನಮ್ಮ ವ್ಯಕ್ತಿತ್ವದ ಬಗೆಗಿನ ಅಭಿಪ್ರಾಯವಷ್ಟೇ ಆಗಿರುವುದಿಲ್ಲ – ಉದಾಹರಣೆಗೆ ನಮ್ಮನ್ನು ನಾವು ಒಳ್ಳೆಯ ವ್ಯಕ್ತಿ ಎಂದು ಅಥವಾ ಕೆಟ್ಟ ವ್ಯಕ್ತಿ ಎಂದು ಅಂದುಕೊಳ್ಳುವುದಕ್ಕೆ ಸೀಮಿತವಲ್ಲ. ಅದರಲ್ಲಿ ನಮ್ಮ ದೇಹವನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆ, ನಮ್ಮನ್ನು ನಾವು ಸುಂದರಿಯೆಂದು ಅಥವಾ ಕುರೂಪಿ ಎಂದುಕೊಳ್ಳುತ್ತೀವಾ ಅನ್ನುವ ಅಂಶಗಳೂ ಒಳಗೊಳ್ಳುತ್ತವೆ. ಇದನ್ನು ‘ಬಾಡಿ ಇಮೇಜ್’ ಅಥವಾ ‘ದೇಹ ಪ್ರಜ್ಞೆ’ ಎಂದು ಕರೆಯಲಾಗುತ್ತದೆ. ಆತ್ಮವಿಶ್ವಾಸವು ವ್ಯಕ್ತಿಯ ದೈಹಿಕ ನೋಟದ ಮೇಲೆ ವಿಪರೀತ ಅವಲಂಬಿತವಾಗಿರುತ್ತದೆ. ರೂಪದ ಕುರಿತಾದ ಕೀಳರಿಮೆಯಿಂದಾಗಿ ತಮ್ಮ ಬದುಕನ್ನು ತಾವೇ ನಾಶ ಮಾಡಿಕೊಂಡವರ ಉದಾಹರಣೆಗಳು ಇತಿಹಾಸದುದ್ದಕ್ಕೂ ಸಿಗುತ್ತವೆ.

ದೇಹ ಸೌಂದರ್ಯದ ವಿಷಯಕ್ಕೆ ಬಂದರೆ, ಪುರುಷರಿಗಿಂತ ಮಹಿಳೆಯರೇ ಆ ಕುರಿತು ಹೆಚ್ಚು ಸೂಕ್ಷ್ಮವಾಗಿರುತ್ತಾರೆ ಮತ್ತು ಕೀಳರಿಮೆ ಅನುಭವಿಸುತ್ತಾರೆ. ಏಕೆಂದರೆ ಸಮಾಜದಲ್ಲಿ ಪುರುಷರು ಸ್ಥಾನಮಾನ ಪಡೆಯಲು ಅವರ ಗಳಿಕೆ, ಅಧಿಕಾರ, ಅಂತಸ್ತು ಮೊದಲಾದ ಸಂಗತಿಗಳು ಮುಖ್ಯವಾಗಿರುತ್ತದೆ. ಆದರೆ ಬಹುತೇಕವಾಗಿ ಮಹಿಳೆಯರಿಗೆ ಮನ್ನಣೆ ದೊರಕುವುದು ಅವರ ಸೌಂದರ್ಯದ ಆಧಾರದ ಮೇಲೆ.

ಸ್ವತಃ ಮಹಿಳೆಯರೂ ತಮ್ಮ ಬಗ್ಗೆ ತಾವು ಹೀಗೆ ಯೋಚಿಸುತ್ತಾರೆ; ಇತರರೂ ಹಾಗೆಯೇ ಮೌಲ್ಯಮಾಪನ ಮಾಡುತ್ತಾರೆ. ದೇಹ ಪ್ರಜ್ಞೆ ಮತ್ತು ಆತ್ಮವಿಶ್ವಾಸವನ್ನು ಮಾಧ್ಯಮಗಳು, ಕಿರುತೆರೆ, ಸಿನೆಮಾ, ಜಾಹೀರಾತು ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಹೆಚ್ಚು ಸಮಸ್ಯೆಯಾಗಿ ಪರಿಣಮಿಸುತ್ತವೆ. ಈ ಕ್ಷೇತ್ರಗಳಲ್ಲಿ ಹೆಣ್ಣಿನ ಕೌಶಲ್ಯವನ್ನು ಆಕೆಯ ಸೌಂದರ್ಯದ ಮೇಲೆ ಅಳೆಯಲಾಗುತ್ತದೆ. ಅಷ್ಟೇ ಅಲ್ಲ, ಈ ಕ್ಷೇತ್ರಗಳು ಹೆಣ್ಣಿನ ಸೌಂದರ್ಯವೇ ಆಕೆಯ ಹೆಚ್ಚುಗಾರಿಕೆ ಎಂಬ ಸುಳ್ಳನ್ನೂ ಹರಡುವ ಕೆಲಸ ಮಾಡುತ್ತವೆ. ಸಾಂಸ್ಕೃತಿಕವಾಗಿ ಅದೇ ಸತ್ಯವೆಂದು ಸಾಭೀತುಪಡಿಸುವ ಕಾರ್ಯವನ್ನೂ ಮಾಡುತ್ತವೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಹದಿಹರೆಯದ 60 – 75%ರಷ್ಟು ಹೆಣ್ಣುಮಕ್ಕಳು ತಮ್ಮ ದೇಹದ ಆಕಾರ ಮತ್ತು ಸೌಂದರ್ಯದ ಬಗ್ಗೆ ನಕಾರಾತ್ಮಕ ಚಿಂತನೆ ಹೊಂದಿರುತ್ತಾರೆ. 44%ರಷ್ಟು ಮಹಿಳೆಯರಿಗೆ “ನಾನು ಹೇಗೆ ಕಾಣುತ್ತೇನೆ” ಅನ್ನುವುದು ಬಹಳ ಮಹತ್ವದ ಸಂಗತಿಯಾಗಿರುತ್ತದೆ.

ದೇಹ ಪ್ರಜ್ಞೆಯಿಂದ ಉಂಟಾಗುವ ಕೀಳರಿಮೆಯು ಮಹಿಳೆಯರಲ್ಲಿ ಉದ್ವೇಗ, ಆತಂಕ, ಖಿನ್ನತೆ ಮೊದಲಾದ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಸಂಶೋಧನೆಗಳ ಪ್ರಕಾರ ತಮ್ಮ ದೇಹದ ಬಗ್ಗೆ ವಿಪರೀತ ಅತೃಪ್ತಿ ಹೊಂದಿರುವ ಕೆಲವು ಮಹಿಳೆಯರು ಮಿತಿಮೀರಿದ ವ್ಯಾಯಾಮ ಹಾಗೂ ಡಯೆಟಿಂಗ್ ನಡೆಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕರ ಮಾತ್ರವಲ್ಲ, ಕೆಲವೊಮ್ಮೆ ಜೀವಕ್ಕೂ ಅಪಾಯಕಾರಿ. ಕೆಲವೊಮ್ಮೆ ಈ ಅಭ್ಯಾಸಗಳು ಅನೊರೆಕ್ಸಿಯಾ, ಬುಲಿಮಿಯ ಅಥವಾ ಹೊಟ್ಟೆಬಾಕತನ ಮೊದಲಾದ ಕಾಯಿಲೆ’ಗಳಿಗೆ ದಾರಿ ಮಾಡಿಕೊಡುತ್ತದೆ.

  • ಯಾವುದೇ ವ್ಯಕ್ತಿಯ ದೈಹಿಕ ರೂಪವನ್ನು ಬದಲಾಯಿಸುವುದು ಕಷ್ಟ. ಆದರೆ, ದೇಹದ ಕುರಿತಾದ ತನ್ನ ಅಭಿಪ್ರಾಯವನ್ನು ಬದಲಾಯಿಸುವುದು ಅಷ್ಟು ಕಷ್ಟವಲ್ಲ. ನಾವು ನಮ್ಮ ದೇಹವನ್ನು ನೋಡುವ ಬಗೆ, ಅದನ್ನು ಅನುಭವಿಸುವ, ಪರಿಭಾವಿಸುವ ಬಗೆಗಳನ್ನು ಬದಲಾಯಿಸಿಕೊಳ್ಳುವ ಶಕ್ತಿ ನಮಗೆ ಇದ್ದೇ ಇರುತ್ತದೆ.

ಈ ನಿಟ್ಟಿನಲ್ಲಿ ಕೆಲವು ಸಲಹೆಗಳು ಹೀಗಿವೆ:

  • ವ್ಯಕ್ತಿ ಎಂದರೆ ಕೇವಲ ದೇಹವಲ್ಲ, ಅದಕ್ಕೂ ಹೆಚ್ಚಿನ ಶಕ್ತಿ ಅನ್ನುವುದನ್ನು ಅರಿಯಿರಿ. ನಿಮ್ಮ ಒಳ್ಳೆಯ ಗುಣಗಳು, ಕೌಶಲ್ಯಗಳತ್ತ ಹೆಚ್ಚು ಗಮನ ಕೊಡಿ. ಇದರಿಂದ ನಿಮ್ಮನ್ನು ನೀವು ಸಂಪೂರ್ಣವಾಗಿ  ಮೆಚ್ಚಿಕೊಳ್ಳಲು ಸಾಧ್ಯವಾಗುತ್ತದೆ.

  • ಪ್ರತಿ ದಿನವೂ ನಿಮ್ಮೊಂದಿಗೆ ನೀವು ಮಾತಾಡಿಕೊಳ್ಳಿ. ನಿಮ್ಮ ಒಳ್ಳೆಯ ಗುಣಗಳನ್ನು ಮುಂದೆ ಮಾಡಿ ಮನದಟ್ಟುಮಾಡಿಕೊಳ್ಳಿ. ಕೆಟ್ಟ ಚಿಂತನೆಗಳನ್ನು ಹೊರದಬ್ಬಿ. ಯಾವುದೇ ಸಂಗತಿಯನ್ನು ಮತ್ತೆಮತ್ತೆ ಹೇಳುತ್ತಿದ್ದರೆ, ಅದರಲ್ಲಿ ನಂಬಿಕೆ ಉಂಟಾಗುತ್ತದೆ. ಇದನ್ನು ಬಳಸಿಕೊಂಡು ಸದಾ ಕಾಲ ನಿಮ್ಮ ಬಗ್ಗೆ ಒಳ್ಳೆಯದನ್ನೆ ಆಲೋಚಿಸಿ. ನೀವು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಯೋಚಿಸಿ. “ನಾನು ಇಂದು ಚೆನ್ನಾಗಿ ಕೆಲಸ ಮಾಡಿದೆ” ಎಂದೋ “ಎಲಿವೇಟರ್ ಬದಲು ಮೆಟ್ಟಿಲೇರಿ ಬಂದೆ” ಎಂದೋ ನೀವು ಮಾಡಿದ್ದನ್ನು ನೆನಪಿಸಿಕೊಳ್ಳಿ. ಹಾಗೆಯೇ, ನಿಮ್ಮಲ್ಲಿ ಮೂಡುವ ನಕಾರಾತ್ಮಕ ಭಾವನೆಗಳನ್ನು ಸಕಾರಾತ್ಮಕ ಭಾವನೆಗಳಿಂದ ಬದಲಾಯಿಸಿ. ಉದಾಹರಣೆಗೆ: “ಜಂಕ್ ಫುಡ್ ತಿನ್ನುವುದನ್ನು ನಾನು ಹೇಟ್ ಮಾಡುತ್ತೇನೆ” ಅನ್ನುವ ಬದಲು, “ನಾನು ಆರೋಗ್ಯಕರವಾದ ತಿನಿಸನ್ನೇ ಆಯ್ದುಕೊಳ್ಳಲು ಇಷ್ಟಪಡುತ್ತೇನೆ” ಎಂದು ಹೇಳಿ.  

  • ನಿಮ್ಮ ದೇಹ ಏನೆಲ್ಲವನ್ನೂ ಸಾಧ್ಯವಾಗಿಸಿದೆ ಅನ್ನುವ ಬಗ್ಗೆ ಹೆಚ್ಚು ಗಮನವಿಟ್ಟು ಆಲೋಚಿಸಿ. ಈ ದೇಹವೊಂದು ಅದ್ಭುತ ಪರಿಕರ. ಅದರ ಪ್ರಶಂಸೆ ಮಾಡುವುದು ಮತ್ತು ಅದರ ಕಾರ್ಯಸಾಧ್ಯತೆಗಳನ್ನು ಗೌರವಿಸುವುದು ನಿಮ್ಮಲ್ಲಿ ಹೆಚ್ಚು ಸಕಾರಾತ್ಮಕತೆಯನ್ನು ತುಂಬುತ್ತದೆ. ಹೆಣ್ಣಿನ ದೇಹ ಮಗುವನ್ನು ಹೆರಲು ಹೇಗೆ ರೂಪುಗೊಂಡಿದೆ ಎಂದು, ಕ್ರೀಡೆ ಅಥವಾ ಮತ್ತಿತರ ಸಂದರ್ಭಗಳಲ್ಲಿ ಹೇಗೆ ಸಹಕರಿಸುತ್ತದೆ ಎಂದು ಚಿಂತಿಸುವಾಗ ನಿಮ್ಮ ದೇಹದ ಬಗ್ಗೆ ನಿಮಗೆ ಅಭಿಮಾನ ಮೂಡದೇ ಇರದು.

  • ತೂಕ ಕಳೆದುಕೊಳ್ಳುವುದೇ ಮೊದಲಾದ ಗುರಿಗಳು ಹಾನಿಯನ್ನು ಉಂಟುಮಾಡುವುದೇ ಹೆಚ್ಚು. ನಿರ್ದಿಷ್ಟ ರೂಪ ಅಥವಾ ಆಕಾರವನ್ನು ಹೊಂದಬೇಕು ಎಂದು ವ್ಯಾಯಾಮ ಮತ್ತು ಡಯೆಟ್ ಮಾಡುವುದಕ್ಕಿಂತ, ಆರೋಗ್ಯಕರ ಡಯೆಟ್ ಹಾಗೂ ವ್ಯಾಯಾಮದ ಮೂಲಕ ನಿಮ್ಮ ಬಯಕೆ ಈಡೇರಿಸಿಕೊಳ್ಳಬಹುದೇ ಎಂದು ಯೋಚಿಸಿ. ಮತ್ತು ಅದನ್ನು ಅನುಸರಿಸಿ.

  • ಮತ್ತೊಬ್ಬರ ದೇಹ ಅಥವಾ ಸೌಂದರ್ಯದೊಡನೆ ನಿಮ್ಮ ಹೋಲಿಕೆ ಮಾಡಿಕೊಳ್ಳುವುದನ್ನು ಬಿಟ್ಟುಬಿಡಿ. ಪ್ರತಿಯೊಬ್ಬ ವ್ಯಕ್ತಿಯ ದೇಹ ಮತ್ತು ರೂಪಗಳ ಭಿನ್ನತೆಯೇ ಪ್ರತಿ ವ್ಯಕ್ತಿಯ ವೈಶಿಷ್ಟ್ಯತೆಯೂ ಆಗಿದೆ ಅನ್ನುವುದನ್ನು ಮನದಟ್ಟು ಮಾಡಿಕೊಳ್ಳಿ. ವ್ಯಕ್ತಿಯು ತನ್ನನ್ನು ತಾನು ಇರುವ ಹಾಗೆಯೇ ಸ್ವೀಕರಿಸಿಕೊಳ್ಳಬೇಕು. ಇದು ವ್ಯಕ್ತಿಯಲ್ಲಿ ಆತ್ಮವಿಶ್ವಾಸ ತುಂಬಿ ಕೀಳರಿಮೆಯನ್ನು ದೂರ ಮಾಡುತ್ತದೆ.

  • ನಾವು ಏನನ್ನು ನೋಡಬೇಕು ಮತ್ತು ಎಂಥದ್ದನ್ನು ಓದಬೇಕು ಅನ್ನುವ ಸ್ಪಷ್ಟತೆ ತಂದುಕೊಳ್ಳಬೇಕು. ಏಕೆಂದರೆ, ಕೆಲವು ಮಾಧ್ಯಮಗಳು ಹೆಣ್ಣಿಗೆ ಸೌಂದರ್ಯವೇ ಸರ್ವಸ್ವ ಎಂದು ಪ್ರತಿಪಾದಿಸುತ್ತವೆ. ಅದನ್ನೇ ನೋಡುಗರ / ಓದುಗರ ಮೇಲೆ ಹೇರುತ್ತವೆ. ಮಾಧ್ಯಮಗಳಲ್ಲಿ ತೋರಿಸಲಾಗುವ ಚಿತ್ರಣಗಳಲ್ಲಿ ಬಹುತೇಕ ವಾಸ್ತವಕ್ಕೆ ದೂರವಿರುತ್ತವೆ. ಹಾಗೂ ಜನಸಂಖ್ಯೆಯ ಅತ್ಯಂತ ಕಡಿಮೆ ಪ್ರಮಾಣದ ವರ್ಗವನ್ನು ಪ್ರತಿನಿಧಿಸುತ್ತವೆ. ಕೆಲವು ಮ್ಯಾಗಜಿನ್’ಗಳಲ್ಲಿ ಪ್ರಕಟಗೊಳ್ಳುವ ಚಿತ್ರಗಳನ್ನು ಎಡಿಟ್ ಮಾಡಲಾಗಿರುತ್ತದೆ. ಅವು ವಾಸ್ತವದಲ್ಲಿ ಹಾಗಿರುವುದಿಲ್ಲ. ಅದರ ರೂಪದರ್ಶಿಗಳು ನೇರವಾಗಿ ನೋಡಲು ಚಿತ್ರದಲ್ಲಿರುವಂತೆ ತೋರುವುದಿಲ್ಲ.

ನೀವು ಅಥವಾ ನಿಮ್ಮ ಪ್ರೀತಿ ಪಾತ್ರರು ನಿಮ್ಮ ದೇಹದ ಬಗ್ಗೆ ಅತೃಪ್ತಿ ಹೊಂದಿದ್ದಲ್ಲಿ, ಅಥವಾ ನೀವು ಅನಾರೋಗ್ಯಕರ ವ್ಯಾಯಾಮ ಅಥವಾ ತಿನ್ನುವ ಕ್ರಮವನ್ನು ರೂಢಿಸಿಕೊಳ್ಳುತ್ತಿದ್ದೀರಿ ಎಂದಾದಲ್ಲಿ, ವೃತ್ತಿಪರ ಸಮಾಲೋಚಕರನ್ನು ಸಂಪರ್ಕಿಸುವುದು ಉತ್ತಮ ಆಯ್ಕೆಯಾಗುತ್ತದೆ. ಈ ಕುರಿತು ಜ್ಞಾನ ಇರುವ ಕೌನ್ಸೆಲರ್’ಗಳು ಹಾಗೂ ಸೈಕಾಲಜಿಸ್ಟ್’ಗಳು ನಿಮಗೆ ಉತ್ತಮ ಮಾರ್ಗದರ್ಶನ ತೋರಬಲ್ಲರು. ಇದರಿಂದ ನಿಮ್ಮ ದೇಹಪ್ರಜ್ಞೆ ಮತ್ತು ಅದರ ಬಗೆಗಿನ ನಕಾರಾತ್ಮಕ ಚಿಂತನೆಗಳನ್ನು ಹೊರದಬ್ಬಿ, ಸಕಾರಾತ್ಮಕವಾಗಿ ಚಿಂತಿಸಲು ಸಹಾಯವಾಗುವುದು.

ಡಾ.ಗರಿಮಾ ಶ್ರೀವಾಸ್ತವ ದೆಹಲಿ ಮೂಲದ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿದ್ದು, ಆಲ್ ಇಂಡಿಯಾ ಇನ್ಸ್’ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಇಂದ ಪಿ ಎಚ್ ಡಿ ಪದವಿಯನ್ನು ಪಡೆದಿದ್ದಾರೆ.

Related Stories

No stories found.
logo
ವೈಟ್ ಸ್ವಾನ್ ಫೌಂಡೇಶನ್
kannada.whiteswanfoundation.org